ಜುಗಲ್ ಬಂದಿ..ಕನ್ನಡದಲ್ಲಿ ಹೀಗೊಂದು ಹೊಸ ಸಿನಿಮಾ ಸದ್ದು ಮಾಡುತ್ತಿದೆ. ಹೊಸಬರೇ ಸೇರಿ ಮಾಡ್ತಿರುವ ಜುಗಲ್ ಬಂದಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.
ಡಿಂಡಿಮ ಪ್ರೊಡಕ್ಷನ್ ನಡಿ ರೆಡಿಯಾಗ್ತಿರುವ ಜುಗಲ್ ಬಂದಿ ಸಿನಿಮಾಕ್ಕೆ ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶನದ ಜೊತೆಗೆ ಡಿಂಡಿಮ ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಥ್ರಿಲ್ಲರ್ ಕಥಾಹಂದರ ಹೊಂದಿರುವ ಜುಗಲ್ ಬಂದಿ ಸಿನಿಮಾಕ್ಕೆ ಪ್ರದ್ಯೋತನ್ ಸಂಗೀತ ನಿರ್ದೇಶನ ನೀಡಿದ್ದಾರೆ, ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ಜುಗಲ್ ಬಂದಿ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ.
ಡಿಂಡಿಮ ದಿವಾಕರ್, ನಿರ್ದೇಶಕ
ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್,ಕೆಲಸ ನಿರ್ವಹಿಸಲಿದ್ದಾರೆ.
ಸಂತೋಷ್ ಆಶ್ರಯ್
ಫಸ್ಟ್ ಲುಕ್ ಮೂಲಕ ಹೊಸ ನಿರೀಕ್ಷೆ ಹುಟ್ಟಿಸಿರುವ ಜುಗಲ್ ಬಂದಿ ಸಿನಿಮಾ ಇದೇ 20 ರಂದು ಮುಹೂರ್ತ ಮೂಲಕ ಕಿಕ್ ಸ್ಟಾರ್ಟ್ ಆಗಲಿದೆ.
ವೆಡ್ಡಿಂಗ್ ಗಿಫ್ಟ್…. ಇದು ಹೊಸಬರ ಸಿನಿಮಾ. ಇದೇ ಮೊದಲ ಸಲ ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಮೊದಲ ಸನ್ನಿವೇಶಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿದರೆ, ನಟಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು
ಇದೇ ಮೊದಲ ಸಲ ನಿರ್ದೇಶನದ ಪಟ್ಟ ಅಲಂಕರಿಸಿರುವ ವಿಕ್ರಂ ಪ್ರಭು, “ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನೇ ಕಥೆ ಬರೆದು, ನಿರ್ಮಾಣ ಮಾಡುತ್ತಿದ್ದೇನೆ. ನಿಶಾನ್ ನಾಣಯ್ಯ ಈ ಚಿತ್ರದ ನಾಯಕ. ನಾಯಕಿಯಾಗಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಪ್ರೇಮ ನಾಲ್ಕುವರ್ಷಗಳ ನಂತರ ಅವರಿಲ್ಲಿ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವಿತ್ರ ಲೋಕೇಶ್, ಯಮುನ ಶ್ರೀನಿಧಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು ಆದರೆ, ಇದು ಡಾರ್ಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ವಿಕ್ರಂಪ್ರಭು.
ಹೀರೋ ನಿಶಾನ್ ಮಾತನಾಡಿ, “ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು . ವಿಲಾಸ್ ಎಂಬ ಪಾತ್ರ ನಿರ್ವಹಿಸಿಸುತ್ತಿದ್ದೇನೆ ಎಂದರು ನಾಯಕ ನಿಶಾನ್ ನಾಣಯ್ಯ.
ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ. ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು.. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದರು ನಾಯಕಿ ಸೋನು ಗೌಡ.
ಉಳಿದಂತೆ ನಟಿ ಯಮುನ ಶ್ರೀನಿಧಿ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಮಾತನಾಡಿದರು.
ವಿಭಿನ್ನ ಕಥಾಹಂದರದ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶೈಲೇಂದ್ರ ಪ್ರೊಡಕ್ಷನ್ಸ್ , ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಸಿನಿಮಾಗೆ ತಿಲಕ್ ನಿರ್ದೇಶಕರು. ಅವರು ಈ ಚಿತ್ರದ ಕುರಿತು ಹೇಳುವುದಿಷ್ಟು. “ರಂಗಭೂಮಿಯಲ್ಲಿ ಅನುಭವವಿರುವ ನನಗೆ, ಹಿರಿತರೆಯಲ್ಲಿ ಮೊದಲ ಚಿತ್ರ. ರವಿ ಆರ್ ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಾರೆ. ಅವರಿಗೂ ಹಾಗೂ ಇತರ ನಿರ್ಮಾಪಕರಿಗೆ ಧನ್ಯವಾದ. ಇದು ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿದೆ ಎಂದರು ನಿರ್ದೇಶಕ ತಿಲಕ್.
ನಾನು, ಕಿಶೋರ್ ಹಾಗೂ ಶೈಲೇಂದ್ರ ಬಾಬು ಮೂವರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಉತ್ತಮ ಚಿತ್ರಗಳಿಗೆ ಮಾಧ್ಯಮದ ಸಹಕಾರ ಇದೆ ಇರುತ್ತದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಸ್ವಲ್ಪ ಹೆಚ್ಚಿರಲಿ ಎಂದರು ನಿರ್ಮಾಪಕ ರವಿ ಆರ್ ಗರಣಿ.
ನಮ್ಮ ಶೈಲೇಂದ್ರ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಾಣವಾಗಿರುವ ಎಲ್ಲಾ ಚಿತ್ರಗಳಿಗೂ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ, ಬೇರೆ ಸಂಸ್ಥೆಗಳ ಜೊತೆ ಸೇರಿ ನಿರ್ಮಾಣ ಮಾಡಿದೆ. ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನದಲ್ಲಿ ಉತ್ತಮ ಚಿತ್ರ ಮೂಡಿ ಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶೈಲೇಂದ್ರ ಬಾಬು. . ಮತ್ತೊಬ್ಬ ನಿರ್ಮಾಪಕ ಕಿಶೋರ್ ಎಂ ಕೆ ಮಧುಗಿರಿ ಅವರು ಉತ್ತಮ ಚಿತ್ರ ನಿರ್ಮಾಣ ಮಾಡಿದ್ದೇವೆ ನೋಡಿ ಹಾರೈಸಿ ಎಂದರು.
ನಾಯಕ ಸುಮಂತ್ ಶೈಲೇಂದ್ರ, ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಕಾಮಿಡಿ ತುಂಬಾ ಇರುತ್ತದೆ. ಇಡೀ ಸಿನಿಮಾ ನನ್ನೊಬ್ಬನಿಂದಲೇ ನಗಿಸುವುದು ಕಷ್ಟ.. ನನ್ನ ಸ್ನೇಹಿತರ ಪಾತ್ರದಲ್ಲಿ ಪವನ್ ಕುಮಾರ್ ಹಾಗೂ ವಿಜಯ್ ಚೆಂಡೂರ್ ನಟಿಸಿದ್ದು, ಮೂವರು ಸೇರಿ ಉತ್ತಮ ಮನೋರಂಜನೆ ನೀಡುತ್ತೇವೆ. ನನ್ನ ಹಿಂದಿನ ಚಿತ್ರಗಳಿಗೆ ನೀವು ನೀಡಿರುವ ಪ್ರೋತ್ಸಾಹಕ್ಕೆ ನಾನು ಆಭಾರಿ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ ಎಂದರು.
ಚಿತ್ರದಲ್ಲಿ ಅಭಿನಯಿಸಿರುವ ರೂಪೇಶ್ ಶೆಟ್ಟಿ, ಕವಿತಾ ಗೌಡ, ಪವನ್ ಕುಮಾರ್, ವಿಜಯ್ ಚಂಡೂರ್, ಸಂಗೀತ ನಿರ್ದೇಶಕ ಹಿತನ್ ಹಾಸನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ಮಾತನಾಡಿದರು.
ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಕವಿತಾ ಗೌಡ, ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನ ಶ್ರೀನಿಧಿ ಇತರರಿದ್ದಾರೆ.
ಕನ್ನಡ ಚಿತ್ರರಂಗದ ಧ್ರುವ ತಾರೆ, ದೊಡ್ಮನೆ ನಂದಾದೀಪ, ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಅಗಲಿ ಇವತ್ತಿಗೆ ಹತ್ತೊಂಭತ್ತು ದಿನಗಳು ಕಳೆದಿವೆ. ಆದರೆ, ಅಪ್ಪು ಇನ್ನಿಲ್ಲದ ನೋವು ಮಾತ್ರ ಎಲ್ಲರಿಗೂ ದೊಡ್ಡ ಆಘಾತ ನೀಡಿದೆ. ಅಗಲಿದ ಅಪ್ಪುಗೆ ಕನ್ನಡ ಚಿತ್ರರಂಗದ ವತಿಯಿಂದ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ ವುಡ್ ಕಲಾವಿದರು ಸೇರಿದಂತೆ ಪರಭಾಷೆಯವರು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಹಿತ್ಯದ ಮೂಲಕ ಗಂಧದಗುಡಿಯ ಅರಸುನಾ ನೆನೆದರು.
ಕಾಣದ ಕೈಯಲಿ ಗೊಂಬೆಯು ನೀನು ಕಾಲದ ಎದುರಲಿ, ಕುರುಡನು ನೀನು, ಅರ್ಥವೇ ಆಗದ ಜಗದಲ್ಲಿ, ಅರ್ಥವ ಹುಡುಕಿದೆ ನೀನಿಲ್ಲಿ ಗೀಚಿದ ಬ್ರಹ್ಮ ಗೀಚುವ ಮುಂಚೆ, ಯೋಚಿಸಲೇ ಇಲ್ಲ ಹಣೆಯ ಮೇಲೆ ಕೆತ್ತಿದ ಮೇಲೆ ತಿದ್ದುವರು ಯಾರಿಲ್ಲ…
ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಬರೆದಂತಹ ಸಾಲುಗಳಿವು. ಅಪ್ಪು ಇಲ್ಲದ ಈ ಕ್ಷಣಕ್ಕೆ ಈ ಸಾಹಿತ್ಯದ ಸಾಲುಗಳು ಹೊಂದಿಕೆಯಾಗುತ್ತವೆ. ಅಂದ್ಹಾಗೇ, ಗೇಟ್ ಇಂದ ಆಚೆ ಹೋದವರು ಮತ್ತೆ ಬರ್ತೀವಿ ಎನ್ನುವ ನಂಬಿಕೆ ಇಲ್ಲ. ಎಷ್ಟು ನಿಮಿತ್ತ ಆಗೋದ್ವಿ ನಾವು. ನಾವು ಈಕ್ಷಣ ಇದೀವೋ ಇಲ್ಲವೋ ಎನ್ನುವುದನ್ನು ಯೋಚನೆ ಮಾಡೋದಕ್ಕೆ ಆಗುತ್ತಿಲ್ಲ.ಆ ಬ್ರಹ್ಮ 47 ಅಂತ ಬರೆದ . ಆದರೆ ಅವನ ಕೈಯ್ಯಲ್ಲಿ ತಿದ್ದೋಕೆ ಆಗಲಿಲ್ಲವೇನೋ ಅಪ್ಪು ಆಯಸ್ಸನ್ನು. ಯಾಕಂದ್ರೆ ಇನ್ನೂ ಜೀವನ ಇತ್ತು.
ಚಿತ್ರರಂಗದಲ್ಲಾಗಲಿ, ಪ್ರತಿಯೊಂದರಲ್ಲಿ ಸಾಧನೆ ಮಾಡುವುದು ಬಹಳಷ್ಟಿತ್ತು. ಅವರ ಮಕ್ಕಳನ್ನು ನೋಡಿದಾಗ ಅನ್ಸುತ್ತೆ ಅಪ್ಪು ಇನ್ನೂ ಮಾಡಬೇಕಾಗಿದ್ದು ಬಹಳ ಇತ್ತು ಅಂತ. ಆದರೆ ಏನ್ ಮಾಡೋದು ವಿಧಿ ಕ್ರೂರಿಯಾಗಿ ಪವರ್ ಸ್ಟಾರ್ ನ ಕಿತ್ಕೊಂಡು ಬಿಟ್ಟ. ಇನ್ಮೇಲೆ ನಾವು ಅವರ ನೆನಪಲ್ಲಿ, ಅವರು ನಡೆದ ಹಾದಿಯಲ್ಲಿ ಸಾಗುತ್ತಾ, ಅಪ್ಪು ,ಕಾರ್ಯವೈಖರಿ ಕಲೆ ಸೇವೆ ಮುಂದುವರೆಸಿಕೊಂಡು ಹೋಗೋಣ…
ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಜಗ್ಗೇಶ್, ಪುನೀತ್ ಅವರ ಕುರಿತು ಭಾವುಕರಾಗಿ ಮಾತಾಡಿದರು. “ಅವರು ನಮ್ಮನ್ನು ಕಳಿಸಿಕೊಡಬೇಕಿತ್ತು. ನಾವು ಅವರನ್ನು ಕಳಿಸಿಕೊಡುವಂತಹ ಸ್ಥಿತಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಗಟ್ಟಿಯಾದ ನಟ ಅವರು. ಗಟ್ಟಿ ಕಲಾವಿದರಲ್ಲಿ ಈತನೂ ಒಬ್ಬ. ಸಮಾಧಾನ ನಮಗೇ ನಾವು ಮಾಡಿಕೊಳ್ಳಬೇಕು. ನಾವು ನಾಲ್ಕೈದು ವರ್ಷಗಳಿಂದ ಬೇರೆ ಆಯಾಮದಲ್ಲಿ ಹೊರಟು ಹೋದ್ವಿ. ಈತನ ಸಾವು ಆದಮೇಲೆ, ಶೇ.30ರಷ್ಟು ಆಶಾಭಾವ ಇತ್ತು. ಅದೂ ಹೊರಟು ಹೋಯ್ತು. ಪುನೀತ್ ನಮ್ಮನ್ನು ಬಿಟ್ಟು ಹೋಗಿಲ್ಲ. ಆತ ಮತ್ತೆ ಬಂದೇ ಬರ್ತಾನೆ ಎಂದು ನನ್ನ ಆತ್ಮ ಹೇಳ್ತಾ ಇದೆ ವಾಪಾಸ್ ಬರ್ತಾನೆ. ಬಹಳ ವಿಶೇಷವಾಗಿ ಬರ್ತಾನೆ ಎಂದರು.
ಇನ್ನೂ ಮಾಡಬೇಕು ಎಂಬ ಭಾವಗಳು, ಭಾವನೆಗಳಿದ್ದವು. ಬರ್ತಾನೆ ಎಂಬ ನಂಬಿಕೆ ಇದೆ. ಪುನೀತ್ ಎಲ್ಲೂ ಹೋಗಿಲ್ಲ. ನಮ್ಮೊಳಗಿದ್ದಾನೆ. ಕಲಾವಿದ ಎಷ್ಟು ಅದೃಷ್ಟವಂತ ಅನ್ನುವುದಕ್ಕೆ ಇದೊಂದೆ ನಿದರ್ಶನ ಸಾಕು. ಭಾರವಾದ ಹೃದಯವಿದೆ. ಶ್ರದ್ಧಾಂಜಲಿ ಹೇಳೋಕೆ ನಂಬಿಕೆ ಇಲ್ಲ. ಆತ ಒಂದು ಸಂದೇಶ ಬಿಟ್ಟು ಹೋದ.
ಎಂಥ ಒಂದು ಮೆಸೇಜ್ ಅಂದರೆ, ಎಲ್ಲರ ಮನಸ್ಸಲ್ಲೂ ಒಂದು ಭಾವ ಬಂತು. ಯಾವುದೂ ಶಾಶ್ವತವಲ್ಲ. ಎಲ್ಲವೂ ನಶ್ವರ. ದೇವರು ಕರೆದಾಗ ಹೋಗಬೇಕು ಎಂಬ ಮೆಸೇಜ್ ಕೊಟ್ಟು ಹೋದ. ನಾವು ಎರಡು ಹೆಜ್ಜೆ ಕೆಳಗಿಳಿದು, ಇದೇ ರೀತಿ ಕಲಾವಿದರು ಒಂದೇ ರೀತಿ ಬದುಕೋಣ…
ಅಗಲಿದ ಗಂಧದಗುಡಿಯ ಅರಸುಗೆ ಕನ್ನಡ ಚಿತ್ರರಂಗದ ವತಿಯಿಂದ ಅರಮನೆ ಮೈದಾನದಲ್ಲಿ ಮಂಗಳವಾರ ಪುನೀತ್ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಪ್ಪು ಬೆಳೆದು ನಿಂತ ಹಾದಿಯ ಬಗ್ಗೆ ಬೆಳಕು ಚೆಲ್ಲುವ ಕಿರುಚಿತ್ರ ಪ್ರದರ್ಶನ ಮಾಡಲಾಯ್ತು. ವಿಶೇಷ ಅಂದರೆ ಬಾಲ್ಯದ ಗೆಳೆಯ ಅಪ್ಪು ಜೀವನ ಚರಿತ್ರ್ಯೆಗೆ ಕಿಚ್ಚ ಸುದೀಪ್ ಕಂಠದಾನ ಮಾಡಿದ್ದರು. ಅಭಿನಯ ಚಕ್ರವರ್ತಿ ಅಪ್ಪು ಸಾಧನೆ ಬಗ್ಗೆ ಹೇಳುತ್ತಾ ಹೋಗಿದ್ದು ಹೀಗೆ….
ಓವರ್ ಟು ಸುದೀಪ್ ವಾಯ್ಸ್…
ಚೆನ್ನೈನ ಆಸ್ಪತ್ರೆಯೊಂದರಲ್ಲಿ 1975ನೇ ಇಸವಿ ಸೋಮವಾರ ಮಾರ್ಚ್ 17ರಂದು ನಕ್ಷತ್ರ ಹುಟ್ಟಿತು. ಚೆನ್ನೆನ ಆಸ್ಪತ್ರೆಯೊಂದರಲ್ಲಿ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಗರ್ಭದಲ್ಲಿ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಸಹೋದರಿಯರಾದ ಪೂರ್ಣಿಮಾ- ಲಕ್ಷಿಯವರು ಮುದ್ದಿನ ಅಪ್ಪು. ಎಲ್ಲರ ಪಾಲಿನ ಪ್ರೀತಿಯ ಅಪ್ಪು. ಅಭಿಮಾನಿಗಳ ಪಾಲಿಗೆ ಪವರ್‌ಸ್ಟಾರ್.
ಹುಟ್ಟಿದ ಆರೇ ತಿಂಗಳಿಗೆ ಪ್ರೇಮದ ಕಾಣಿಕೆ ಮೂಲಕ ತೆರೆ ಏರಿದ ಅದೃಷ್ಟವಂತ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ. 1980ರಲ್ಲಿ ವಸಂತ ಗೀತೆ, 1981ರಲ್ಲಿ ಭಾಗ್ಯವಂತ, 1982 ರಲ್ಲಿ ಚಲಿಸುವ ಮೋಡಗಳು, ೧೯೮೩ ರಲ್ಲಿ ಎರಡು ನಕ್ಷತ್ರಗಳು, 1985ರಲ್ಲಿ ಭಕ್ತ ಪ್ರಹ್ಲಾದ ಮತ್ತು ಬೆಟ್ಟದ ಹೂ. ಹೀಗೆ ಸಾಲು ಸಾಲಾಗಿ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ಅಪ್ಪು. ಬೆಟ್ಟದ ಹೂ ಚಿತ್ರಕ್ಕೆ ಬಾಲ ಕಲಾವಿದ ರಾಷ್ಟ್ರ ಪ್ರಶಸ್ತಿ ಪಡೆದರೆ, ಎರಡು ನಕ್ಷತ್ರಗಳು ಹಾಗೂ ಚಲಿಸುವ ಮೋಡಗಳು ಚಿತ್ರಕ್ಕೆ ಶ್ರೇಷ್ಟ ಬಾಲ ಕಲಾವಿದ ರಾಜ್ಯಪ್ರಶಸ್ತಿ ಪಡೆದರು. ಡಾ.ರಾಜ್ ಎನ್ನುವ ಮಹಾನ್ ನಟರ ಎದುರು ನಟಿಸಿ ಸೈ ಎನಿಸಿಕೊಂಡವರು. ಕನ್ನಡಿಗರ ಮನೆಮಾತಾಗಿ ಮಾಸ್ಟರ್ ಲೋಹಿತ್ ನಂತರ ಮಾಸ್ಟರ್ ಪುನೀತ್. ಬಾಲ ಕಲಾವಿದನಾಗಿ ಪ್ರೇಕ್ಷಕರು ಹುಬ್ಬೇರುವಂತೆ ನಟಿಸಿದ ಅಮೋಘ ದೃಶ್ಯಗಳು ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿ. ಕನ್ನಡದ ನಟಸಾರ್ವಭೌಮನಾದ ಅಪ್ಪನೆದುರು ನಟಿಸಿ ಅಪ್ಪು ತಂದೆಗೆ ತಕ್ಕ ಮಗ ಹೀಗೆನಿಸಿಕೊಂಡಿದ್ದು ಈಗ ಇತಿಹಾಸ.
ಚಿಕ್ಕಂದಿನಲ್ಲೇ ನಟನೆಯಲ್ಲಿ ಮಾತ್ರವಲ್ಲ ಗಾಯನದಲ್ಲೂ ಮನೆಮಾತಾದ ಅಪ್ಪು, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ನಾಡುನುಡಿಗೆ ಉದಾಹರಣೆಯಾದರು. ಮಗ ದೊಡ್ಡ ಕಲಾವಿದನಾಗುತ್ತಾನೆಂದು ಅಪ್ಪ-ಅಮ್ಮನಿಗೆ ಆಗಲೇ ಭರವಸೆಯಿತ್ತು. ಡಿಪ್ಲೋಮೋ ಇನ್ ಸೈನ್ಸ್ ಓದಿ ಮುಗಿಸಿದ ಅಪ್ಪು, ೧೯೯೯ರ ಡಿಸೆಂಬರ್ ೦೧ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್‌ರನ್ನು ಕೈಹಿಡಿದರು. ಈಗ ಅವರಿಗೆ ಧೃತಿ ಮತ್ತು ವಂದಿತಾ ಇಬ್ಬರು ಪುತ್ರಿಯರು. ಬಾಲನಟನಿಂದ ನಾಯಕನಟನ ಸ್ಥಾನಕ್ಕೆ ಬರಲು ಅಪ್ಪು ಕಲಿತ ಪಾಠಗಳು ಒಂದೆರಡಲ್ಲ. ನೃತ್ಯ, ಸಾಹಸ, ಈಜು, ಇತರ ಅನೇಕ ಕಲೆಗಳನ್ನು ಕಲಿತರು. ಅಭಿನಯವಂತೂ ಅಜ್ಜ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರಿಂದ ತಂದೆ ಡಾ. ರಾಜ್‌ಕುಮಾರ್ ಅವರಿಂದ ಬಂದ ಬಳುವಳಿ. ೨೦೦೨ರಲ್ಲಿ ನಾಯಕನಟನಾಗಿ ಚಿತ್ರರಂಗಕ್ಕೆ ಮರು ಪದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್ ಅಲ್ಲಿಂದ ಇಲ್ಲಿಯತನಕ 27 ಚಿತ್ರಗಳಲ್ಲಿ ಅಭಿನಯಿಸಿದರು. 6 ರಾಜ್ಯಪ್ರಶಸ್ತಿ, 5 ಫಿಲ್ಮ್ಫೇರ್ ಪ್ರಶಸ್ತಿ, 4 ಸೈಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ನಾಡಿನಾದ್ಯಂತ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿವೆ ಗೌರವಿಸಿವೆ ಸನ್ಮಾಸಿವೆ. ಅಪ್ಪು-ಅಭಿ-ವೀರಕನ್ನಡಿಗ-ಮೌರ್ಯ-ಆಕಾಶ್-ನಮ್ಮ ಬಸವ-ಅಜಯ್-ಅರಸು-ಮಿಲನ-ಬಿಂದಾಸ್-ವಂಶಿ-ರಾಜ್ ದಿ ಶೋಮ್ಯಾನ್-ರಾಮ್-ಪೃಥ್ವಿ-ಜಾಕಿ-ಹುಡುಗರು- ಪರಮಾತ್ಮ-ಅಣ್ಣಾಬಾಂಡ್-ಯಾರೇ ಕೂಗಾಡಲಿ- ನಿನ್ನಿಂದಲೇ-ಪವರ್-ಮೈತ್ರಿ-ರಣವಿಕ್ರಮ-ಚಕ್ರವ್ಯೂಹ-ದೊಡ್ಮನೆ ಹುಡುಗ-ರಾಜಕುಮಾರ-ಅಂಜನಿಪುತ್ರ-ನಟಸಾರ್ವಭೌಮ-ಯುವರತ್ನ-ಇನ್ನೂ ತೆರಕಾಣಬೇಕಿದ್ದ ಜೇಮ್ಸ್. ಇಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ ನಮ್ಮೆಲ್ಲರ ನೆಚ್ಚಿನ ಪವರ್‌ಸ್ಟಾರ್ ದಿಢೀರನೆ ನಮ್ಮನ್ನೆಲ್ಲ ಅಗಲಿ ಹೋಗಿದ್ದು ಅವರ ಕುಟುಂಬಕ್ಕೆ, ಚಿತ್ರೋದ್ಯಮಕ್ಕೆ, ಕನ್ನಡ ಚಿತ್ರಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಇಡೀ ಕನ್ನಡಿಗರಿಗೆ ದೊಡ್ಡ ಆಘಾತ. ಅವರ ಮನೋಜ್ಞ ಅಭಿನಯವನ್ನು ಯಾರೂ ಮರೆಯೋ ಹಂಗಿಲ್ಲ.
ಡ್ಯೂಪ್‌ಗಳಿಲ್ಲದೇ ನಾನೇ ನಟಿಸುತ್ತೇನೆಂದು ನಟಿಸಿದ ಸಾಹಸ ದೃಶ್ಯಗಳು ಸದಾ ಜೀವಂತ. ಕನ್ನಡ ಚಲನಚಿತ್ರಗಳಲ್ಲಿ ನೃತ್ಯಕ್ಕೆ ಮಾಧರಿಯಾಗಿ ನಿಂತ ಅಪ್ಪು ಅವರ ನೃತ್ಯ ಎಂದರೆ ಹಸುಗೂಸುಗಳಿಗೂ ಅಚ್ಚುಮೆಚ್ಚು. ಮೇರುನಟನ ಮಗನೆಂಬ ದರ್ಪವಿಲ್ಲದೇ, ಅಪ್ಪನ ಆದರ್ಶಗಳನ್ನು-ಸರಳತೆಯನ್ನು-ಸೌಜನ್ಯವನ್ನು ತನ್ನದಾಗಿಸಿಕೊಂಡು ಕಿರಿಯರಲ್ಲಿ ಕಿರಿಯನಾಗಿ ನಡೆದುಬಂದ ಅಪ್ಪು, ತಲೆ ಎತ್ತಿ ನಿಲ್ಲಬೇಕಾದರೆ ತಲೆಬಾಗಿ ನಡೆಯಬೇಕೆಂಬ ಸೂಕ್ತಿಯನ್ನು ಅಕ್ಷರಶಃ ಪಾಲಿಸಿದವರು. ನಿರ್ಮಾಪಕರಿಗೆ-ನಿರ್ದೇಶಕರಿಗೆ-ಕಥೆಗಾರರಿಗೆ-ನೃತ್ಯ ನಿರ್ದೇಶಕರಿಗೆ-ನೃತ್ಯಗಾರರಿಗೆ-ಗೀತ ಸಾಹಿತಿಗಳಿಗೆ-ಸಂಗೀತ ನಿರ್ದೇಶಕರಿಗೆ-ಗಾಯಕರಿಗೆ-ಛಾಯಾಗ್ರಾಹಕರಿಗೆ-ಸಾಹಸ ಕಲಾವಿದರಿಗೆ-ಲೈಟ್‌ಮ್ಯಾನ್‌ನಿಂದ ಹಿಡಿದು ಗೋಡೆಗೆ ಪೋಸ್ಟರ್ ಅಂಟಿಸುವ ತನಕ ಎಲ್ಲರೊಂದಿಗೆ ನಗುನಗುತ್ತಾ, ಆತ್ಮೀಯವಾಗಿ ಸೌಜನ್ಯದಿಂದ ವರ್ತಿಸುತ್ತಿದ್ದ ಅಪ್ಪುಗೆ ಪ್ರೀತಿಯ ಅಪ್ಪು ಅಜರಾಮರ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೇ ಇತರೆ ಎಲ್ಲಾ ಸಂಘ-ಸಂಸ್ಥೆಗಳೊಟ್ಟಿಗಿನ ಅಪ್ಪು ಅವರ ನಂಟು ಮರೆಯಲು ಸಾಧ್ಯವಿಲ್ಲ. ಕಾವೇರಿ ವಿವಾದ, ಮಹದಾಯಿ, ಮುಂತಾದ ಕನ್ನಡ ಪರ ಹೋರಾಟಗಳಲ್ಲಿ ಮುಂದೆ ನಿಲ್ಲುತ್ತಿದ್ದುದ್ದನ್ನು ಕನ್ನಡಿಗರು ಮರೆಯಲು ಸಾಧ್ಯವೇ ? ಇಲ್ಲಿಯವರೆಗೂ ನಾವು ನೋಡಿದ ಅಪ್ಪು ಚಿತ್ರರಂಗದ ಪವರ್‌ಸ್ಟಾರ್. ಇದರಿಂದಾಚೆಗೆ ಇವತ್ತು ಜಗತ್ತೇ ತಿರುಗಿ ನೋಡುತ್ತಿರುವ ಅಪ್ಪು, ಬೇರೆ ಬೇರೆ ದೇಶದ ಜನರ ಕಣ್ಣಲ್ಲಿ ನೀರು ತರಿಸಿದ ಅಪ್ಪು, ಕೊಡುಗೈ ದಾನಿ ಅಪ್ಪು, ಯುವರತ್ನ ಮಾತ್ರವಲ್ಲ ಸೇವಾರತ್ನ ಅಪ್ಪು, ಸದ್ದಿಲ್ಲದೇ ಸಾವಿರಾರು ಬದುಕುಗಳಿಗೆ ಬೆಳಕಾದ ಅಪ್ಪು, ಸಾವಿನಲ್ಲೂ ಸಾರ್ಥಕತೆ ಮೆರೆದು ನೇತ್ರದಾನ ಮಾಡಿದ ಅಪ್ಪು, ಒಂದು ದೊಡ್ಡ ಸಂಸ್ಥೆ ಮಾಡಬಹುದಾದದ್ದನ್ನು ಒಬ್ಬ ವ್ಯಕ್ತಿಯಾಗಿ ಸಾಧಿಸಿದ ಅಪ್ಪು, ಅಬ್ಬಾ.. ಒಂದೇ.. ಎರಡೇ..
ಹಣ ಪಡೆಯದೇ ಸಮಾಜಮುಖಿಯಾಗಿ ಕರ್ನಾಟಕ ಸರ್ಕಾರದ ಹಾಲು-ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿದ್ದರು. ಎಲ್.ಇ.ಡಿ ಬಲ್ಬ್ ಯೋಜನೆಗಳ ರಾಯಭಾರಿಯಾಗಿದ್ದರು. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ತಂಡದ ಆರ್‌ಸಿಬಿಗೆ ರಾಯಭಾರಿಯಾಗಿದ್ದರು. ಬಿಎಂಟಿಸಿ ಬಸ್ ಹಾಗೂ ರಾಜ್ಯ ಚುನಾವಣಾ ಕಮಿಷನ್‌ಗೂ ಸಹ ರಾಯಭಾರಿಯಾಗಿ ಅವರ ಜನಪರ ಕಾಳಜಿ ತೋರಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ನೀಡಲು ಡಾ.ರಾಜ್‌ಕುಮಾರ್ ಅವರ ಹೆಸರಲ್ಲಿ ಐಎಎಸ್ ಮತ್ತು ಎಪಿಎಸ್ ತರಭೇತಿ ಸಂಸ್ಥೆ ತೆರೆದಿದ್ದರು. ಪಿ.ಆರ್.ಕೆ ಎಂಬ ಸಂಸ್ಥೆಯಡಿ ಹೊಸ ಹೊಸ ಬಗೆಯ ಚಿತ್ರಗಳನ್ನು ತಯ್ಯಾರಿಸುತ್ತಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದರು. ಪಿಆರ್‌ಕೆ ಆಡಿಯೋ ಸಂಸ್ಥೆಯನ್ನು ನಿರ್ಮಿಸಿ ಆಡಿಯೋ ಹಕ್ಕುಗಳನ್ನು ಪಡೆಯುತ್ತಿದ್ದರು. ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿಗೆ ನಿರೂಪಕರಾಗಿ ಮಾತ್ರವಲ್ಲದೇ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದರು. ಕನ್ನಡಕ್ಕೆ ಹೊಸ ತಂತ್ರಜ್ಞಾನ ಪರಿಚಯಿಸಬೇಕೆನ್ನುವ ಹಂಬಲವಿಟ್ಟುಕೊಂಡಿದ್ದ ಅಪ್ಪು ಎಲ್ಲವನ್ನೂ ಅರ್ಧದಲ್ಲಿ ಬಿಟ್ಟು ಹೋದದ್ದು ನಮ್ಮೆಲ್ಲರಿಗೂ ತುಂಬಲಾರದ ನಷ್ಟ.
ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸಂಭಾವನೆಯನ್ನು ಪರೋಪಕ್ಕಾರಕ್ಕೆ ನೀಡಿದ, ಆರೂವರೆ ಕೋಟಿ ಕನ್ನಡಿಗರ ಹೃದಯದ ಯುವರತ್ನ ಅನೇಕ ಗೀತೆಗಳನ್ನು ಹಾಡಿ ಅದರಿಂದ ಬಂದ ಸಂಭಾವನೆಯನ್ನು ಆಶ್ರಮಗಳಿಗೆ ನೀಡುತ್ತಿದ್ದರು. ಸಾವಿರಾರು ಜನರಿಗೆ ವಿದ್ಯಾರ್ಜನೆ, ಮಕ್ಕಳ ವಿದ್ಯಾಭ್ಯಾಸ, ಗೋಶಾಲೆಗಳಿಗೆ-ವೃದ್ಧಾಶ್ರಮಕ್ಕ- ತಮ್ಮದೇ ಕುಟುಂಬದ ಶಕ್ತಿಧಾಮ ಆಶ್ರಮಕ್ಕೆ ತಮ್ಮ ಸಂಭಾವನೆಯ ಬಹುಪಾಲು ಹಣವನ್ನು ನೀಡುತ್ತಿದ್ದರು. ಸಮಾಜಮುಖಿಯಾಗಿ ಬದುಕಿ-ಬಾಳಿದ ಪುಣ್ಯಾತ್ಮ ಪುನೀತ್ ರಾಜ್‌ಕುಮಾರ್ 29 ಅಕ್ಟೋಬರ್ 2021ರಂದು ಹೃದಯಾಘಾತಕ್ಕೆ ಒಳಗಾಗಿ ನಮ್ಮನ್ನು ಅಗಲಿದ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀದ ದರ್ಶನಕ್ಕೆ ಒಂದು ಲೆಕ್ಕದ ಪ್ರಕಾರ ಮಹಾತ್ಮ ಗಾಂಧೀಜೀಯವರ ಅಂತಿಮ ದರ್ಶನಕ್ಕೆ ಬಂದಿದ್ದಕ್ಕೆ ಹೆಚ್ಚಿನ ಜನರು ಬಂದಿದ್ದರು ಎನ್ನುವ ಮಾತಿದೆ. ಪುನೀತ್ ರಾಜ್‌ಕುಮಾರ್ ಅವರ ಕೀರ್ತಿ ದೊಡ್ಡದು.. ಬಹಳ ದೊಡ್ಡದು.
ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, “ನಾನು ಕುಟುಂಬದ ಅಭಿಮಾನಿ. ರಾಜಕಾರಣಿಯಾದರೂ ಸಹ, ರಾಜಕಾರಣದ ಜೊತೆಯಲ್ಲಿ ಫಿಲ್ಮ್ ಮಂಡಳಿಯಲ್ಲಿ ಕೆಲಸ ಮಾಡಿದವನು. ಪುನೀತ್ ಅವರ ಸಾವು ನಂಬಲು ಸಾಧ್ಯವಾಗಲೇ ಇಲ್ಲ. ಫೋನ್ ಬಂತು. ಹೋದೆ. ನಂಬಲು ಆಗಲೇ ಇಲ್ಲ. ಮನುಷ್ಯ ಹುಟ್ಟುಬೇಕಾದರೆ, ಉಸಿರು ಇರುತ್ತೆ ಹೆಸರು ಇರಲ್ಲ. ಸಾಯೋಬೇಕಾದರೆ, ಹೆಸರಿರುತ್ತೆ ಉಸಿರು ಇರಲ್ಲ. ಇದಕ್ಕೆ ಪುನೀತ್ ಅವರೇ ಸಾಕ್ಷಿ. ಹುಟ್ಟು ಸಾವು ಮಧ್ಯೆ ಏನು ಸಾಧನೆ ಮಾಡ್ತೀವಿ ಅನ್ನೋದು ಮುಖ್ಯ.
ಪುನೀತ್ ಅವರ ಸಾಧನೆ ದೊಡ್ಡದು. ಈ ಕುಟುಂಬದ ಸೇವೆ. ಚಿತ್ರರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೆ ಸೀಮಿತವಾಗಿದೆ. ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಮೈಸೂರಿನಿಂದ ಬಂದಿರುವ ಶಕ್ತಿಧಾಮ ಮಕ್ಕಳು ನೋವಲ್ಲಿ ಸಂತಾಪ ಸೂಚಿಸಿದ್ದಾರೆ. ಒಬ್ಬ ವ್ಯಕ್ತಿ ನಮ್ಮಿಂದ ದೂರ ಹೋಗಿಲ್ಲ. ಒಂದು ಶಕ್ತಿ ದೂರವಾಗಿದೆಯಷ್ಟೆ. ಸಿಎಂ. ಕರ್ನಾಟಕ ರತ್ನ ಘೋಷಣೆ ಖುಷಿಯಾಯ್ತು. ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಪುನೀತ್ ಅವರ ಆದರ್ಶ ಜೀವಂತ.
ಸಿಎಂ ಅವರಿಗೆ ಈ ವೇಳೆ ಮನವಿ ಮಾಡಿದ ಡಿ.ಕೆ.ಶಿವಕುಮಾರ್, ಪ್ರಶಸ್ತಿ ಘೋಷಣೆ ಮಾಡಿದ್ದೀರಿ, ನನ್ನ ಮನವಿ ಎಂದರೆ, ಪುನೀತ್ ಹೆಸರಲ್ಲಿ ಒಂದು ಯುವ ಕಲಾವಿದರನ್ನು ಸಂಸ್ಥೆ ಅಥವಾ ಸ್ಟುಡಿಯೋ ಅವರ ಹೆಸರಲ್ಲಿ ಮಾಡಿ. ಕಂಠೀರವ ಸ್ಟುಡಿಯೋ ಯಾವುದೋ ಕಾಲದಲ್ಲಿ ಆಗಿದೆ. ವಿಶೇಷ ನಟ, ಯಾವುದೇ ಕಾಂಟ್ರವರ್ಸಿ ಇಲ್ಲದೆ ಇರುವ ನಟ. ಮುಂದಿನ ದಿನಗಳಲ್ಲಿ ನೀವು ತೀರ್ಮಾನ ತೆಗೆದುಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್
ಪುನೀತ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಯಿತು. ಸಾಯಿ ಗೋಲ್ಡ್ ಪ್ಯಾಲೇಸ್ ನ ಶರವಣ ಅವರು ಅಪ್ಪು ನೆನಪಿಗಾಗಿ ಬೆಳ್ಳಿ ನಾಣ್ಯ ಬಿಡುಗಡೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಡಿಸಿದರು.
ಈ ವೇಳೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಸುಧಾಕರ್, ಆರಗ ಜಾನೇಂದ್ರ, ಅಶೋಕ್ ಇತರರು ಇದ್ದರು. ಈ ಕಾರ್ಯಕ್ರಮ ನಂತರ ಗಾಯಕರಾದ ವಿಜಯಪ್ರಕಾಶ್, ಮಂಜುಳ ಗುರುರಾಜ್, ಗುರುಕಿರಣ್, ಅನುರಾಧ ಭಟ್, ಹೇಮಂತ್ ಕುಮಾರ್, ಶಮಿತಾ ಮಲ್ನಾಡ್, ರಾಜೇಶ್ ಕೃಷ್ಣ, ಚೈತ್ರಾ, ಚೇತನ್ ಸೇರಿದಂತೆ ಇತರೆ ಗಾಯಕರೆಲ್ಲರೂ ಪುನೀತ ನಮನ ಕಾರ್ಯಕ್ರಮದಲ್ಲಿ ಗೀತನಮನ ಅರ್ಪಿಸಿದರು. ಕಾಣದಂತೆ ಮಾಯವಾದನು ಹಾಡನ್ನು ತರ್ಜುಮೆ ಮಾಡಿ ಎಲ್ಲರೂ ಮನದುಂಬಿ ದುಃಖಭರಿತವಾಗಿಯೇ ಹಾಡಿದರು.
ನನಗೆ ಗೊತ್ತಿರುವಂತೆ ಅಪ್ಪು ರೀತಿ ಯಾರೂ ಇಷ್ಟೊಂದು ಜನಪ್ರಿಯತೆ ಗಳಿಸಿರಲಿಲ್ಲ. ಅವರು ನಯ, ವಿನಯ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡಿದ್ದ ಅಪರೂಪದ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಅಪ್ಪು ನಮನ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿದ ಅವರು ಮಾತಾಡಿದ್ದು ಹೀಗೆ. “ನಾನು ಅಪ್ಪು ನಿಧನರಾದಾಗ ದೂರದಲ್ಲಿದ್ದೆ. ಆ ವಿಷಯ ನಂಬಲಿಲ್ಲ. ಚಿಕ್ಕವಯಸ್ಸಲ್ಲೇ ಸಾವು ಹೇಗೆ ಸಾಧ್ಯ? ದೇಹವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ನಿಧನಕ್ಕೂ ಅವರ ಸಾವು ಅಚ್ಚರಿ ಆಯ್ತು. ಅವರ ಸಾವಿನ ದುಃಖ ತಡೆಯೋಕೆ ಸಾಧ್ಯವಾಗಲಿಲ್ಲ. ನಮ್ಮ ಮನೆಯವರೇ ನಿಧನರಾದಷ್ಟು ನೋವಾಯಿತು. ಆ ದುಃಖ ನನ್ನನ್ನು ಆವರಿಸಿತ್ತು. ನನಗೂ ಡಾ.ರಾಜಕುಮಾರ್ ಅವರ ಕುಟುಂಬಕ್ಕೆ ಮೊದಲಿನಿಂದಲೂ ಆತ್ಮೀಯತೆ ಇದೆ. ರಾಜಕುಮಾರ್ ಅವರು ನಮ್ಮ ಜಿಲ್ಲೆಯವರು. ಈಗ ಚಾಮರಾಜನಗರಕ್ಕೆ ಸೇರಿದೆ. ನನ್ನನ್ನು ನೋಡಿದಾಗ ಅವರು ಬನ್ನಿ ಬನ್ನಿ ನಮ್ಮ ಕಾಡಿನವರು ಬಂದ್ರು ಅಂತ ಪ್ರೀತಿಯಿಂದ ಹೇಳುತ್ತಿದ್ದರು. ರಾಜಕುಮಾರ್ ಅವರಲ್ಲಿದ್ದ ಮಾನವೀಯ ಲಕ್ಷಣ, ನಯ, ವಿನಯ, ಸಜ್ಜನಿಕೆ ಮತ್ತು ಮನುಷ್ಯರನ್ನು ಪ್ರೀತಿಸುತ್ತಿದ್ದ ರೀತಿ, ಅಭಿಮಾನಿಗಳನ್ನು ಕಾಣುತ್ತಿದ್ದ ರೀತಿ ದೊಡ್ಡದು. ಪುನೀತ್ ಅವರ ನಗು, ವಿನಯತೆ, ಸರಳತೆ, ಮರೆಯೋಕೆ ಸಾಧ್ಯವಿಲ್ಲ. ಎಲ್ಲರನ್ನೂ ಬಹಳ ಗೌರವದಿಂದಲೇ ಕಾಣುತ್ತಿದ್ದರು ಎಂದರು ಸಿದ್ಧರಾಮಯ್ಯ.
ಒಮ್ಮೆ ಮೈಸೂರಿನಲ್ಲಿ ಪುನೀತ್ ಸಿಕ್ಕಿದ್ದರು. ಆಗ ರಾಜಕುಮಾರ ಸಿನಿಮಾ ಬಿಡುಗಡೆಯಾಗಿದೆ ನೋಡಿ ಮಾಮ ಅಂದಿದ್ದರು. ಅವರು ನನ್ನನ್ನು ಮಾಮ ಅನ್ನುತ್ತಿದ್ದರು. ನಾನು ಸಕ್ರಿಯ ರಾಜಕಾರಣಕ್ಕೆ ಬಂದ ಮೇಲೆ ಹೆಚ್ಚು ಸಿನಿಮಾ ನೋಡಿರಲಿಲ್ಲ. ಅದಕ್ಕೂ ಮೊದಲು ರಾಜಕುಮಾರ್ ಅವರ ಸಿನಿಮಾಗಳನ್ನು ವಿದ್ಯಾರ್ಥಿಯಾಗಿದ್ದ ವೇಳೆ ಸೈಕಲ್ ಮೇಲೆ ಹೋಗಿ ನೋಡುತ್ತಿದ್ದೆ. ಹಾಗಾಗಿ ನಾನು ಪುನೀತ್ ಅವರ ರಾಜಕುಮಾರ ಸಿನಿಮಾವನ್ನು ಮೈಸೂರಲ್ಲಿ ಸರಸ್ವತಿ ಥಿಯೇಟರ್ ನೋಡಿದ್ದೆ. ಅದೊಂದು ಅದ್ಭುತ ಸಿನಿಮಾ. ಒಳ್ಳೆಯ ನಟನೆ ಮಾಡಿದ್ದರು. ಅವರು ಕೇವಲ ಸಿನಿಮಾಗಾಗಿ ಸೀಮಿತವಾಗಿರಲಿಲ್ಲ. ಸಾಮಾಜಿಕ ರಂಗದಲ್ಲೂ ತೊಡಗಿಸಿಕೊಂಡಿದ್ದರು. ಸರಕಾರದ ಪ್ರತಿ ಕಾರ್ಯಕ್ರಮಗಳು ಜನರಿಗೆ ತಲುಪಬೇಕು ಎಂದು ಸರ್ಕಾರದ ಜೊತೆ ನಿಲ್ಲುತ್ತಿದ್ದರು. ಸದ್ದಿಲ್ಲದೆಯೇ ಸಮಾಜ ಸೇವೆ ಮಾಡಿದ್ದರು.
ಅವರ ತಾಯಿ ಪಾರ್ವತಮ್ಮ ಅವರು ಶಕ್ತಿಧಾಮ ಸ್ಥಾಪಿಸಿ, ಅಲ್ಲಿ ಸಾವಿರಾರು ಮಕ್ಕಳಿಗೆ, ಅಶಕ್ತಿ ಮಹಿಳೆಯರಿಗೆ ಸೂರು ಕಲ್ಪಿಸಿದ್ದರು. ರಾಜ್ ಕುಟುಂಬ ಅಂಥದ್ದೊಂದು ಜವಾಬ್ದಾರಿ ಹೊತ್ತುಕೊಂಡಿತ್ತು. ನಿಜಕ್ಕೂ ಅದು ಶ್ಲಾಘನೀಜಯ ಎಂದರು. ಒಬ್ಬ ನಟ ನಿಧನರಾದಾಗ ಕೋಟಿ ಜನರು ಕಣ್ಣೀರು ಹಾಕಿದ್ದನ್ನು ನಿಜಕ್ಕೂ ನಾನು ನೋಡಿರಲಿಲ್ಲ. ಅಷ್ಟರಮಟ್ಟಿಗೆ ಪುನೀತ್ ಅವರ ಜನಪ್ರಿಯತೆ ಹೊಂದಿದ್ದರು. ಜನಾನುರಾಗಿಯಾಗಿದ್ದರು. ಅವರು ಇನ್ನೂ ಇರಬೇಕಿತ್ತು. ಆದರೆ ವಿಧಿ ಆಟ. ದೊಡ್ಡ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಬದುಕಿನ ಆದರ್ಶ, ಯುವ ಜನರಿಗೆ ದಾರಿದೀಪ ಎಂದು ಭಾವಿಸಿದ್ದೇನೆ. ಅವರಿಗೆ ಗೌರವಿಸಬೇಕಾದರೆ, ಅವರ ಸರಳತೆ, ವಿನಯ, ಜನಸೇವೆ, ಅವರ ಬದುಕನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇನ್ನು, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಹಾಗಾಗಿ ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಪುನೀತ್ ನಿಧನರಾದ ಸಂದರ್ಭದಲ್ಲಿ ಮರಣೋತ್ತರ ಪದ್ಮಶ್ರೀ ಕೊಡಬೇಕು ಎಂದು ಹೇಳಿದ್ದೆ. ಸಿಎಂ ಇಲ್ಲೇ ಇದ್ದಾರೆ. ಸಂಪುಟದಲ್ಲಿ ತೀರ್ಮಾನಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಒತ್ತಾಯಿಸಬೇಕು ಎಂದರು.
ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮಿಯ. ಅವನನ್ನು ಬಾಲ್ಯದಿಂದ ನಾನು ಬಲ್ಲೆ. ಬಾಲ್ಯದಲ್ಲೇ ಪ್ರತಿಭೆಯ ಚಿಲುಮೆ ಹೊಂದಿದವರು. ಕರ್ನಾಟಕದ ಇತಿಹಾಸದಲ್ಲಿ ಬಾಲನಟರಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕಮಯ ನಟ ಪುನೀತ್ ರಾಜಕುಮಾರ್. ಅಪ್ಪು ಸಾಧನೆಯ ಶಿಖರ. ಅಂತಹ ಶಿಖರವನ್ನು ಕಳೆದುಕೊಂಡಿದ್ದೇವೆ. ನಾನು, ಸುಮ್ಮನೆ ಅವನ ಚಿತ್ರಗಳನ್ನು ನೋಡುತ್ತಿದ್ದೆ. ಅವನ ತಂದೆ, ಈ ಕನ್ನಡ ನಾಡು ಕಂಡಂತಹ ಶ್ರೇಷ್ಠ ಕಲಾವಿದರು ಡಾ.ರಾಜಕುಮಾರ್. ಅವರ ಜೊತೆ ನಟನೆ ಮಾಡುವಾಗ, ಪಾತ್ರದ ಅನುಗುಣವಾಗಿ, ತಮ್ಮ ಸಂಬಂಧ ಬಿಟ್ಟು ನಟನೆ ಮಾಡ್ತಾರೆ. ಚಿಕ್ಕವಯಸ್ಸಲ್ಲಿ ಅವರು ಜಾಗೃತಿ ಇರುವುದಂಥದ್ದು ಸುಲಭವಲ್ಲ.
ಮುಂದೆ ಅವನು, ಸ್ಟಾರ್ ಆಗುವಂಥದ್ದು ನಿಶ್ಚಿತ, ಪವರ್ ಸ್ಟಾರ್ ಆಗುವಂಥದ್ದು ನಿಶ್ಚಿತವಾಗಿತ್ತು. ಆ ನಟನೆ, ಯಶಸ್ಸಿನ ನಡುವೆ, ಸಿಲ್ವರ್ ಲೈನಿಂಗ್ ಅಂತ ಏನು ಕರೀತಿವೆ. ಅವನ ನುಡಿ ವಿನಯ ಯಾರಿಂದಲೂ ಸಾಧ್ಯವಿಲ್ಲ. ಅಣ್ಣ್ರಾವ್ರಿಗೆ ಇದ್ದಂತಹ ನಯ, ವಿನಯ ಯಾರಲ್ಲಿ ಇದ್ದರೆ ಅದು ಪುನೀತ್ ಅವರಲ್ಲಿ ಕಾಣಬೇಕು. ರಾಘಣ್ಣ ಜೊತೆ ಅದ್ಭುತ ಸಂಬಂಧ. ಆಸ್ಪತ್ರೆಯಲ್ಲಿರುವಾಗ, ಧೈರ್ಯವಾಗಿ ಹೇಳುತ್ತಿದ್ದರು. ತನ್ನ ಅಭಿಮಾನಿಗಳಿಗೆ ಸೂಜಿಗಲ್ಲಿನಂತೆ ಅವನು ಆಕರ್ಷಣೆ ಮಾಡಿರುವುದು ಸಹಜ. ಎಲ್ಲರು ಮಾಡ್ತಾರೆ. ಆದರೆ, ಆ ಆಕರ್ಷಣೆ ಹಿಡಿದಿಟ್ಟುಕೊಳ್ಳುವುದು ದೊಡ್ಡ ಕಲೆ. ಆದು ಅಪ್ಪುಗಿತ್ತು. ಇಷ್ಟೆಲ್ಲಾ ಇದ್ದು, ಮಾಡಿಯೂ ಮಾಡದಂತಿರುವ ಪರೋಪಕಾರಿಯಾಗಿರುವ ಕೆಲಸಗಳು ನಮ್ಮ ಕನ್ನಡ ನಾಡಿನ ಶರಣರು ಹೇಳ್ತಾರೆ,
ಶರಣರನ್ನು ಮರಣದಲ್ಲಿ ನೋಡಿ, ಮರಣದ ನಂತರ, ಜನ ಯಾವ ರೀತಿ ಭಾವನೆಗಳನ್ನು, ಅನುಭವಗಳನನು ವ್ಯಕ್ತಪಡಿಸ್ತಾರೆ, ಅದು ಮನುಷ್ಯನ ವ್ಯಕ್ತಿತ್ವ ಬಿಂಬಿಸುತ್ತದೆ. ಅಪ್ಪು ನಮ್ಮನ್ನು ಅಗಲಿದ ಮೇಲೆ ಪ್ರತಿಯೊಬ್ಬರು ಆಡಿರುವ ಮಾತುಗಳು, ಮುತ್ತುಗಳು ಅವನ ಪರಿಪೂರ್ಣ ವ್ಯಕ್ತಿತ್ವ ನಮ್ಮ ನಾಡಿಗೆ ಪರಿಚಯವಾಗಿದೆ. ನಾನು ಅವನ ಅಗಲಿಕೆಯ ಸುದ್ದಿ ಕೇಳಿದಾಗ, ನಂಬಲೇ ಇಲ್ಲ. ಅರ್ಧ ಗಂಟೆ ಬೇರೆ ಕಡೆ ಮಾಹಿತಿ ಪಡೆದೆ ಸಣ್ಣ ವಯಸ್ಸಲಿ ಆಗಲು ಸಾಧ್ಯವೇ ಅಂತ, ನಿಜವಾಯ್ತು. ಆ ಘಟನೆ ನಾವ್ಯಾರೂ ಮರೆಯೋಕೆ ಸಾಧ್ಯವೇ ಇಲ್ಲ. ಒಂದು ಮಾತನ್ನು ಹೇಳೋಕೆ ಇಷ್ಟಪಡ್ತೀನಿ.
ಆದ ಘಟನೆಯಿಂದ ಅಂತಿಮ ಕ್ರಿಯೆವರೆಗೆ ಡಾ.ರಾಜಕುಮಾರ್ ಅವರ ಕುಟುಂಬದ ಪ್ರತಿಯೊಬ್ಬ ಸದಸ್ಯರು ನಡೆದುಕೊಂಡಿರುವ ರೀತಿ ಇದೆಯಲ್ಲ. ಅತ್ಯಂತ ಆದರ್ಶಪ್ರಾಯವಾಗಿದೆ ಕನ್ನಡಿಗರ ಪರವಾಗಿ ನಾನು ಆ ಕುಟುಂಬಕ್ಕೆ ನಮನ ಸಲ್ಲಿಸ್ತೀನಿ. ಅವರ ಸಹಕಾರ ಒಂದು ಕಡೆ ಇನ್ನೊಂದು ಕಡೆ ಅಭಿಮಾನಿಗಳದ್ದು, ಅಪ್ಪು ಅವರ ವಿನಯಶೀಲತೆಗೆ ತಕ್ಕಂತೆ ಅವರ ಅಂತಿಮಯಾತ್ರೆಯನ್ನು ನಡೆಸಿಕೊಡಲು ಸಾಧ್ಯವಾಯ್ತು. ಕೋಟಿ ಕೋಟಿ ಅಭಿಮಾನಿಗಳಿಗೂ ನಮನ ಸಲ್ಲಿಸ್ತೀನಿ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳು ಹಗಲಿರುಳು ಕೆಲಸ ಮಾಡಿದ್ದಾರೆ. ಅವರಿಗೂ ವಿಶೇಷ ಧನ್ಯವಾದ ಹೇಳೋಕೆ ಇಷ್ಟಪಡ್ತೀನಿ ಎಂದರು ಸಿಎಂ ಬೊಮ್ಮಾಯಿ.