ಗಾಂಧಿನಗರದಲ್ಲಿ ದಿನ ಕಳೆದಂತೆ ಹೊಸಬರ ಹೊಸತನದ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ಡಿಸೆಂಬರ್ 24 ಕೂಡ ಸೇರಿದೆ. ಇದೊಂದು ಹಾರರ್, ಥ್ರಿಲ್ಲರ್, ಕಥಾನಕ ಹೊಂದಿರುವ ಚಿತ್ರ. ಇತ್ತೀಚೆಗೆ ಮೋಷನ್ ಪೋಸ್ಟರ್ ಹಾಗೂ ಆಡಿಯೋ ಬಿಡುಗಡೆಯಾಗಿದೆ
ಎಂಜಿ ಎನ್ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ಡಿಸೆಂಬರ್ 24 ಚಿತ್ರಕ್ಕೆ ದೇವು ಹಾಸನ್ ಮೊದಲ ಬಾರಿಗೆ ನಿರ್ಮಾಪಕರಾಗುತ್ತಿದ್ದಾರೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆ ಆಧರಿಸಿ ಅವರು ನಿರ್ಮಾಣ ಮಾಡಿರುವ ಚಿತ್ರವಿದು. ಇದು ಹಾರರ್, ಥ್ರಿಲ್ಲರ್, ಕಥಾನಕ ಹೊಂದಿದ್ದು, ಮೋಷನ್ ಪೋಸ್ಟರ್ ಹಾಗು ಹಾಡುಗಳನ್ನು ಹೊರತರಲಾಗಿದೆ. ಶ್ರೀನಗರ ಕಿಟ್ಟಿ ತಂಡಕ್ಕೆ ಶುಭಕೋರಿದ್ದಾರೆ.
ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ನೀಡಿದ್ದಾರೆ. ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಸಾಹಿತ್ಯ ಬರೆದಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಶ್ರೀನಗರ ಕಿಟ್ಟಿ, ‘ ಹೊಸಬರು ಚಿತ್ರ ಮಾಡಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದರು.
ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್, ಭೂಮಿಕಾ ರಮೇಶ್, ಮಿಲನಾ ರಮೇಶ್, ದಿವ್ಯ ಆಚಾರ್ ನಟಿಸಿದ್ದು, ಆನಂದ್ ಪಟೇಲ್ ಹುಲಿಕಟ್ಟೆ ಪಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿಲ್ ಗೌಡ ಖಳನಾಯಕನಾಗಿ ನಟಿಸಿದ್ದಾರೆ. ಎಂ.ಜಿ.ಎನ್. ಪ್ರೊಡಕ್ಷನ್ ಲಾಂಛನದಲ್ಲಿ ದೇವು ಹಾಸನ್, ಮಂಜು. ಡಿ. ಟಿ,ವಿ.ಬೆಟ್ಟೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಉಸಿರಾಟದ ತೊಂದರೆಯಿಂದ ಮರಣ ಹೊಂದುತ್ತಿರುವ ಮಕ್ಕಳನ್ನು ರಕ್ಷಿಸಲು ಮೆಡಿಕಲ್ ರೀಸರ್ಚ್ ಗೆಂದು ಕಾಡಿಗೆ ತೆರಳುವ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಲ್ಲಿ ಎದುರಾದ ಸಮಸ್ಯೆಗಳು, ತೊಂದರೆಗಳ ಹಿನ್ನೆಲೆ ಏನು. ಅದರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದೇ ಡಿಸೆಂಬರ್ 24 ಚಿತ್ರದ ಕಥೆ. 2015ರಿಂದ 2019ರೊಳಗೆ ನಡೆದ ಕೆಲ ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿಕೊಂಡಿರುವಂತಹ ಚಿತ್ರ ಇದಾಗಿದ್ದು, ಪಕ್ಕಾ ಫ್ಯಾಮಿಲಿ ಲವ್, ಫ್ರೆಂಡ್ಷಿಪ್, ಹಾರರ್, ಥ್ರಿಲ್ ಅಂಶಗಳಿವೆ. ಆರ್ಯಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮಿಗಳು ಹಾಗೂ
ಬಾಮಾ ಹರೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿಡಿಯೋಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.