ಬಿ.ಎಲ್. ವೇಣು ಕಾದಂಬರಿ ಚಿತ್ರಕ್ಕೆ ಪ್ರಶಸ್ತಿ; ‌ದನಗಳು ಸಿನಿಮಾಗೆ ಫಿಲ್ಮಾಹಾಲಿಕ್‌ ಚಿತ್ರೋತ್ಸವದಲ್ಲಿ ಜ್ಯೂರಿ ಅವಾರ್ಡ್…

ಕೆಲವು ಸಿನಿಮಾಗಳು ಬಿಡುಗಡೆ ನಂತರ ಸುದ್ದಿಯಾಗುತ್ತವೆ. ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಗೂ ಮೊದಲೇ ಜೋರು ಸುದ್ದಿಯಾಗುತ್ತವೆ. ಆ ಸಾಲಿಗೆ “ದನಗಳು” ಸಿನಿಮಾ ಇದೀಗ ಬಂದಿರುವ ಸುದ್ದಿಯಲ್ಲಿದೆ. ಹೌದು, ಈ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದಕ್ಕೂ ಮೊದಲು ಒಂದು ಸಂಭ್ರಮದ ಸುದ್ದಿಯೆಂದರೆ, ಈ ಚಿತ್ರಕ್ಕೆ ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆ ನಡೆಸಿದ ಎರಡನೇ ವರ್ಷದ ಸಿನಿಮಾಂತರಂಗ ಚಿತ್ರೋತ್ಸವದಲ್ಲಿ ಜ್ಯೂರಿ ಅವಾರ್ಡ್‌ ಪಡೆದುಕೊಂಡಿದೆ. ಸಹಜವಾಗಿಯೇ ಚಿತ್ರತಂಡದಲ್ಲಿ ಸಂಭ್ರಮ ಮನೆಮಾಡಿದೆ

ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆ ಚಿತ್ರೋತ್ಸವದ ಜೊತೆಯಲ್ಲಿ ಪಬ್ಲಿಕ್‌ ಐ ಸೋಶಿಯಲ್‌ ಇಂಪ್ಯಾಕ್ಟ್‌ ಅವಾರ್ಡ್ಸ್‌ ಕೂಡ ನೀಡಿದ್ದು ವಿಶೇಷ. ಸುಮಾರು 60ಕ್ಕೂ ಹೆಚ್ಚು ಚಿತ್ರಗಳು ಈ ಚಿತ್ರೋತ್ಸವದಲ್ಲಿ ಭಾಗವಹಿಸಿ, ಪ್ರದರ್ಶನಗೊಂಡಿದ್ದವು. ಆ ಪೈಕಿ “ದನಗಳು” ಸಿನಿಮಾ ಕೂಡ ಪಾಲ್ಗೊಂಡಿತ್ತು. ವಿಶೇಷವಾಗಿ ಈ ಚಿತ್ರಕ್ಕೆ ಜ್ಯೂರಿ ಅವಾರ್ಡ್‌ ಸಿಕ್ಕಿದ್ದು, ಚಿತ್ರೋತ್ಸವದಲ್ಲಿ ನೋಡುಗರ ಪ್ರಶಂಸೆಯನ್ನೂ ಪಡೆದುಕೊಂಡಿದೆ.
ಅಂದಹಾಗೆ, ಇದು ಕಾದಂಬರಿ ಆಧಾರಿತ ಸಿನಿಮಾ. ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ.

“ದನಗಳು” ಕಥೆಗಾರ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್‌ ನಿರ್ದೇಶನ ಮಾಡಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅದಕ್ಕೂ ಮುನ್ನ, ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆ ನಡೆಸುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಜ್ಯೂರಿ ಅವಾರ್ಡ್‌ ಪಡೆದುಕೊಂಡಿದೆ. ಇನ್ನು, ಈ ಚಿತ್ರದ ಮೂಲಕ ಮಧು ಮಂದಗೆರೆ ಹೀರೋ ಆಗಿದ್ದಾರೆ. ಮಧು ಮಂದಗೆರೆ ಈಗಾಗಲೇ ಕಳೆದ ಒಂದುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗದಲ್ಲಿದ್ದಾರೆ. ಕನ್ನಡದ ಬಹುತೇಕ ಸ್ಟಾರ್‌ ನಟರ ಜೊತೆ ನಟಿಸಿದ್ದಾರೆ. ಈಗಿನ ಯುವ ನಟರೊಂದಿಗೂ ನಟಿಸುತ್ತಿದ್ದಾರೆ. ಇದುವರೆಗೆ ಸುಮಾರು ೮೦ಕ್ಕೂ ಚಿತ್ರಗಳಲ್ಲಿ ನಟಿಸಿರುವ ಮಧು ಅವರಿಗೆ “ಧನಗಳು” ಸಿನಿಮಾ ತುಂಬಾನೇ ವಿಶೇಷವಾದದ್ದು. ಇಂಥದ್ದೊಂದು ಯಶಸ್ಸು ಸಿಕ್ಕ ಸಿನಿಮಾದಲ್ಲಿ ಮಧು ನಟಿಸಿದ್ದಾರೆ ಅನ್ನುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಅವರು.

ಈ ಚಿತ್ರದಲ್ಲಿ ಮಧು ಮಂದಗೆರೆ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರು ಈವರೆಗೆ ನಟಿಸಿರುವ 75 ಸಿನಿಮಾಗಳ ಪೈಕಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟು ಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರ ಹುಡುಕಿ ಬರುವಂತಾಗಿದೆ.”ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಆ ಚಿತ್ರ ನನಗೊಂದು ಹೊಸ ಬದುಕು ಕಟ್ಟಿಕೊಡುತ್ತದೆ ಎಂಬ ವಿಶ್ವಾಸ ಮಧು ಮಂದಗೆರೆ ಅವರದು.


ಇನ್ನು, “ದನಗಳು” ಚಿತ್ರದ ಶೀರ್ಷಿಕೆ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆ ಹೈಲೈಟ್‌. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್‌ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್‌.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.

ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ, ನೋಡುಗರಿಗೆ ಇಷ್ಟವಾಗಲಿದೆ ಎನ್ನುತ್ತದೆ. ಚಿತ್ರದಲ್ಲಿ ಮಧು ಮಂದಗೆರೆ ಅವರಿಗೆ ನಟಿ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್‌ ಕೃಷ್ಣ, ಅಶೋಕ್‌ ಜಂಬೆ, ಸಂಪತ್‌, ಪ್ರಿಯಾ, ಚಂದ್ರು, ಹರಿಚರಣ ತಿಲಕ್‌, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್‌ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್‌ ರಿಶಿಕ್‌ ಸಂಗೀತವಿದೆ.

ಇತ್ತೀಚೆಗೆ ನಡೆದ ಚಿತ್ರೋತ್ಸವದಲ್ಲಿ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಹಾಗೂ ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸಹಭಾಗಿತ್ವ ಹೊಂದಿದ್ದವು.

ಅಂದಿನ ಚಿತ್ರೋತ್ಸವದಲ್ಲಿ ಡಾ.ದೊಡ್ಡ ರಂಗೆ ಗೌಡ, ಸಂಗೀತ ನಿರ್ದೇಶಕ ವಿ.ಮನೋಹರ್‌, ಹೆಚ್.ಆರ್. ದಿಲೀಪ್ ಹಾಗು ಫಿಲ್ಮಾಹಾಲಿಕ್‌ ಫೌಂಡೇಶನ್‌ ಸಂಸ್ಥೆಯ ಪದಾಧಿಕಾರಿಗಳು ಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Related Posts

error: Content is protected !!