Categories
ಸಿನಿ ಸುದ್ದಿ

ಉಪ್ಪಿ ಸಿನಿಮಾ ರೆಡಿ ಗುರು; ಏಪ್ರಿಲ್ 1ಕ್ಕೆ ಹೋಮ್ ಮಿನಿಸ್ಟರ್ ರಿಲೀಸ್

ಕನ್ನಡದಲ್ಲೀಗ ಸಿನಿಮಾ ಬಿಡುಗಡೆ ಪರ್ವ. ಹೌದು, ಸ್ಟಾರ್ ಚಿತ್ರಗಳು ಈಗ ಸಾಲಾಗಿ ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ “ಹೋಮ್ ಮಿನಿಸ್ಟರ್” ಚಿತ್ರ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈಗಾಗಲೇ ಜಿಬ್ರಾನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಆನಂದ್ ಆಡಿಯೋ ಮೂಲಕ ಈ ಹಾಡುಗಳು ಬಿಡುಗಡೆಯಾಗಿವೆ.

ಸಚಿವ ಮುನಿರತ್ನ, ಗೋಲ್ಡನ್‌ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ಪ್ರಿಯಾಂಕ ಉಪೇಂದ್ರ ಹಾಗೂ ಸಾಯಿ ಗೋಲ್ಡ್ ‌ಪ್ಯಾಲೆಸ್ ನ ಶರವಣ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.

ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಇಷ್ಟವಾಗುತ್ತಿದೆ. ಮತ್ತೊಂದು ಕಡೆಯಿಂದ ಭಯ. ಜನ ಈ ಕಥೆಯನ್ನು ಯಾವರೀತಿ ತೆಗೆದುಕೊಳ್ಳುತ್ತಾರೋ? ಎಂದು. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು, ಈ ಸಿನಿಮಾ ಮಾಡೋಣ ಸರ್. ಎಲ್ಲರಿಗೂ ಹಿಡಿಸುತ್ತದೆ ಎಂದು ಭರವಸೆ ನೀಡಿದರು. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ಜನ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ನನ್ನೊಂದಿಗೆ ನಟಿಸಿರುವ ವೇದಿಕ , ತಾನ್ಯ ಹೋಪ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಮ್ಮ ಕರೆಗೆ ಓಗೊಟ್ಟು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದರು ಉಪೇಂದ್ರ.

ಚಿತ್ರದಲ್ಲಿ ನಟಿಸಿರುವ ವೇದಿಕ, ತಾನ್ಯ ಹೋಪ್, ಚಾಂದಿನಿ, ವಿನಯ್ ಚಂಡೂರ್, ಸಂಭಾಷಣೆ ಬರೆದಿರುವ ಧರ್ಮೇಂದ್ರ, ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು , ಶ್ರೀಕಾಂತ್ ವೀರಮಾಚನೇನಿ ಹಾಗೂ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಬೆಂಗಳೂರು ಕುಮಾರ್ ಫಿಲಂಸ್ ನ ಕುಮಾರ್ “ಹೋಮ್ ಮಿನಿಸ್ಟರ್” ಕುರಿತು ಮಾತನಾಡಿದರು.

ಸುಜಯ್ ಕೆ ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ವೇದಿಕ, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೆಜಿಎಫ್‌ 2 ತೂಫಾನ್‌ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್! ತೊಡ್ಡೆ ತಟ್ಟಿ ನಿಂತ ಬಡಿ ಗಟ್ಟಿಗ ಇವನು!

ಸದ್ಯ ಕನ್ನಡದಲ್ಲಿ ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಕೆಜಿಎಫ್‌ ೨. ಹೌದು, ಯಶ್‌ ಅಭಿನಯದ ಈ ಸಿನಿಮಾ ಏಪ್ರಿಲ್‌ 14ರಂದು ವಿಶ್ವಾದ್ಯಂತ ರಿಲೀಸ್‌ ಆಗಲಿದೆ. ಅದಕ್ಕೂ ಮೊದಲೇ ಸಿನಿಮಾ ದೊಡ್ಡ ಮಟ್ಟದ ಕುತೂಹಲವನ್ನು ಮೂಡಿಸಿದೆ. ಈಗ ಹೊಸ ಸುದ್ದಿ ಅಂದರೆ, ಸೋಮವಾರ ಚಿತ್ರದ “ತೂಫಾನ್‌” ಎಂಬ ಹಾಡೊಂದು ಹೊರಹೊಮ್ಮಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಮೊದಲೇ “ತೂಫಾನ್‌” ಸಾಂಗ್‌ ರಿಲೀಸ್‌ ಆಗುತ್ತೆ ಅಂತ ಅನೌನ್ಸ್‌ ಮಾಡಿದ್ದರಿಂದ ಎಲ್ಲೆಡೆಯಿಂದಲೂ ಕುತೂಹಲ ಹೆಚ್ಚಾಗಿತ್ತು. ಆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಪಕ್ಕಾ ಮಾಸ್‌ ಎನಿಸಿರುವ ಹಾಡಿಗೆ ಯಶ್‌ ಫ್ಯಾನ್ಸ್‌ ಫಿದಾ ಆಗಿದ್ದಾರೆ. “ತೂಫಾನ್‌ ತೂಫಾನ್‌ ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ… ತೂಫಾನ್‌ ತೂಫಾನ್‌ ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ…” ಎಂದ ಸಾಗುವ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ.


ಹೌದು, ಈ ಹಾಡಿಗಾಗಿ ಯಶ್‌ ಫ್ಯಾನ್ಸ್‌ ಎದುರು ನೋಡುತ್ತಿದ್ದರು. ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆಯ ಸುರಿಮಳೆಯಾಗಿದೆ. ಇನ್ನು, ಲಹರಿ ಮ್ಯೂಸಿಕ್‌ ಮತ್ತು ಟೀ ಸೀರಿಸ್‌ ಆಡಿಯೋ ಯುಟ್ಯೂಬ್ ಚಾನೆಲ್‌ ನಲ್ಲಿ ಈ ಹಾಡು ರಿಲೀಸ್‌ ಆಗಿದೆ.

ರವಿಬಸ್ರೂರು ಅವರೇ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಅವರೊಂದಿಗೆ ದೊಡ್ಡ ಗಾಯಕರ ತಂಡವೇ ಇದೆ. ಈ ಹಾಡಿಗೆ ಸಂತೋಷ್‌ ವೆಂಕಿ, ಮೋಹನ್‌ ಕೃಷ್ಣ, ಸಚಿನ್‌ ಬಸ್ರೂರು, ಪುನೀತ್‌ ರುದ್ರರಂಗ, ರವಿಬಸ್ರೂರು, ವರ್ಷ ಆಚಾರ್ಯ ಸೇರಿದಂತೆ ಇತರೆ ಗಾಯಕರ ಧ್ವನಿಯೂ ಈ ಹಾಡಿಗೆ. ಅಂದಹಾಗೆ, ಈ ಲಿರಿಕಲ್‌ ವಿಡಿಯೋ ಹಾಡು ಸದ್ಯಕ್ಕೆ ಸಾಕಷ್ಟು ಸೌಂಡು ಮಾಡುತ್ತಿದೆ. ಕೆಜಿಎಫ್‌ ೨ ಸಿನಿಮಾ ಏಪ್ರಿಲ್‌ 14ಕ್ಕೆ ರಾಜ್ಯ, ದೇಶ ವಿದೇಶಗಳಲ್ಲೂ ತೆರೆಗೆ ಅಪ್ಪಳಿಸಲಿದೆ.

Categories
ಸಿನಿ ಸುದ್ದಿ

ಮತ್ತೊಂದು ಹೊಸ ಅವತಾರಕ್ಕೆ ನಟ ರಿಷಿ ರೆಡಿ : ರಾಮನ ಅವತಾರ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕವಲುದಾರಿ ಹುಡುಗ…

ನಟ ರಿಷಿ ಇದೀಗ ಖುಷಿಯ ಮೂಡ್ನಲ್ಲಿದ್ದಾರೆ. ಹೌದು, ಈಗಾಗಲೇ ಸದಭಿರುಚಿಯ ಸಿನಿಮಾಗಳ ಮೂಲಕ ತಮ್ಮದೇ ಆದ ಆಡಿಯನ್ಸ್ ಹೊಂದಿರುವ ಅದರಲ್ಲೂ, ಫ್ಯಾಮಿಲಿ ಪ್ರೇಕ್ಷಕ ವೃಂದವನ್ನು ಸಂಪಾದಿಸಿರುವ ರಿಷಿ ಸಿಂಪಲ್ ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ” ಹಾಗು ಹೇಮಂತ್ ನಿರ್ದೇಶನದ “ಕವಲುದಾರಿ” ಮೂಲಕ ತಾನೊಬ್ಬ ಫ್ಲೆಕ್ಸಿಬಲ್ ನಟ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಸದಾ ನಗುಮೊಗದಲ್ಲೇ ಇರುವ ರಿಷಿ, ಹೊಸ ಬಗೆಯ ಅದರಲ್ಲೂ ಕಂಟೆಂಟ್ ಬೇಸ್ಡ್ ಸಿನಿಮಾಗೆ ಒತ್ತುಕೊಟ್ಟವರು. ಕಥೆ ಮತ್ತು ಪಾತ್ರ ಇಷ್ಟವಾದರೆ, ಆ ಚಿತ್ರತಂಡದಲ್ಲಿ ತಾನೂ ಒಬ್ಬ ಅಂತ ಕೈ ಜೋಡಿಸುವ ನಟ ಅವರು. ಅ ಕಾರಣಕ್ಜೆ ಅವರೀಗ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಅದರ ಮಧ್ಯೆಯೇ ಅವರ ಅಭಿನಯದ “ರಾಮನ ಅವತಾರ” ಚಿತ್ರವನ್ನೂ ಯಶಸ್ವಿಯಾಗಿ ಮುಗಿಸಿದ್ದಾರೆ.

ಈ ಕುರಿತು ತಮ್ಮ ಮುಖಪುಟದಲ್ಲಿ ರಿಷಿ “ರಾಮನ ಅವತಾರ” ಚಿತ್ರ ಮುಕ್ತಾಯ ಬಗ್ಗೆ ಬರೆದುಕೊಂಡಿದ್ದಾರೆ.

‘ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತೇವೆ ಹಾಗು ಚಿತ್ರಮಂದಿರಗಳಲ್ಲಿ ಸಿಗೋಣ. ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ’ ಎಂದಿದ್ದಾರೆ.

ಅದೇನೆ ಇರಲಿ, ಹಿಂದಿನ ಎರಡು ಚಿತ್ರಗಳಲ್ಲೂ ಮೋಡಿ ಮಾಡಿ ಸೈ ಎನಿಸಿಕೊಂಡಿದ್ದ ರಿಷು, ಈಗ ‘ರಾಮನ ಅವತಾರ’ ಸಿನಿಮಾ ಎದುರು ನೋಡುತ್ತಿದ್ದಾರೆ. ಆ ಚಿತ್ರ ಮುಗಿಸಿದ ಖುಷಿಯಲ್ಲಿದ್ದಾರೆ. ಮುಂದೆಯೂ ಹೊಸ ಬಗೆಯ ಚಿತ್ರ ಕೊಡವ ಉತ್ಸಾಹದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹುಷಾರ್ ಸಿನಿಮಾಗೆ ಮಜವಾದ ಹಾಡು ಹೇಳಿದ ಉಪೇಂದ್ರ ; ಹೊಸಬರಿಗೆ ರಿಯಲ್ ಸ್ಟಾರ್ ಸಾಥ್

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿನಯದಷ್ಟೇ, ಗಾಯನದಿಂದಲೂ ಜನಪ್ರಿಯರಾದವರು.
ಪ್ರಸ್ತುತ ಉಪೇಂದ್ರ ಅವರು “ಹುಷಾರ್” ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸತೀಶ್ ರಾಜ್ ಬರೆದಿರುವ “ನೀ ನೋಡೊಕೆ ಸಿಕ್ಸ್ ಟೀನ್ ಸ್ವೀಟಿ. ಬಿಟ್ಕೊಳೆ ಒಂದ್ ನೈಂಟಿ” ಎಂಬ ಹಾಡನ್ನು ಇತ್ತೀಚಿಗೆ ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ ಉಪೇಂದ್ರ ಹಾಡಿದ್ದಾರೆ.

ಸತೀಶ್ ರಾಜ್ ಮೂವೀ ಮೇಕರ್ಸ್ ಲಾಂಛನದಲ್ಲಿ ಸತೀಶ್ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನ್ ಅರುಣ್ ಕೃಷ್ಣ ಈ ಚಿತ್ರದ ಸಹ ನಿರ್ಮಾಪಕರು.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಸತೀಶ್ ರಾಜ್ ನಿರ್ದೇಶನವನ್ನು ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯಲ್ಲಿ ಬಂದಿರುವ ಸತೀಶ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ನಮ್ಮ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಅದಕ್ಕೆ ಯಾರು ಹೊಣೆಗಾರರಲ್ಲ. ನಾವು ಎಚ್ಚರಿಕೆಯಿಂದ ಇರಬೇಕು ಎನ್ನುವುದು ಕಥೆಯ ಸಾರಾಂಶ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮೇಲಿನ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.

ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಹಾಗೂ ನಾಗು ಸಂಗೀತ ನೀಡಿದ್ದಾರೆ. ರೆಮೋ ಹಾಗೂ ಉಪೇಂದ್ರ ಒಂದೊಂದು ಹಾಡನ್ನು ಹಾಡಿದ್ದಾರೆ. ನವೀನ್ ಮತ್ತು ನಾಗರಾಜ್ ಛಾಯಾಗ್ರಹಣ, ಜೆ.ಜೆ.ಶರ್ಮ ಸಂಕಲನ, ಚಂದ್ರು ಬಂಡೆ, ಜಾಗ್ವರ್ ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ಸ್ಟಾರ್ ನಾಗಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಸಿದ್ದೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಪ್ರಿಯದರ್ಶಿನಿ. ವಿನೋದ್, ರಚನಾ ಮಲ್ನಾಡ್, ಲಯ ಕೋಕಿಲ, ಡಿಂಗ್ರಿ ನಾಗರಾಜ್, ಪುಷ್ಪಸ್ವಾಮಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸತೀಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ RRR ಅದ್ಧೂರಿ ಪ್ರಿ-ರಿಲೀಸ್ ಈವೆಂಟ್; ರಾಜಮೌಳಿಯ ರಂಗೀನ್‌ ಲೋಕದಲ್ಲಿ ಮಿಂದೆದ್ದ ಜನಸಾಗರ… ವೇದಿಕೆ ಮೇಲೆ ಸೌತ್ ಸ್ಟಾರ್ಸ್ ಸಮಾಗಮ

ಝಗಮಗಿಸುವ ಸ್ಟೇಜ್.. ಕಣ್ಣಾಯಿಸಿದ ಕಡೆಯಲ್ಲಾ ಅಭಿಮಾನಿಗಳು…ತಿಳಿ ಸಂಜೆಯಲ್ಲಿ‌ ಸಂಗೀತ-ನೃತ್ಯದ ವೈಭವ…ನೆಚ್ಚಿನ ಸ್ಟಾರ್ಸ್ ಕಣ್ತುಂಬಿಕೊಂಡು‌ ಪುಳಕಗೊಂಡ ಫ್ಯಾನ್ಸ್ … ಇದೆಲ್ಲಾ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ನಡೆದ RRR ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ಝಲಕ್..

ಮಾರ್ಚ್ 25ಕ್ಕೆ ಪಂಚ ಭಾಷೆಯಲ್ಲಿ ಅದ್ಧೂರಿಯಾಗಿ ತೆರೆಕಾಣ್ತಿರುವ ಮಲ್ಟಿಸ್ಟಾರ್ ಸಿನಿಮಾ RRR ಪ್ರಿ-ರಿಲೀಸ್ ಇವೆಂಟ್ ಧಾಮ್ ಧೂಮ್ ಅಂತಾ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಂಜೆಯಲ್ಲಿ ಅದ್ಧೂರಿಯಾಗಿ ನಡೆದ ಪ್ರಿ-ರಿಲೀಸ್ ಇವೆಂಟ್ ಗೆ ಜನಸಾಗರವೇ ಹರಿದು ಬಂದಿತ್ತು. ಸುಮಾರು ನೂರು ಎಕರೆ ಜಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇಡೀ ಆರ್ ಆರ್ ಆರ್ ಬಳಗ ಸಾಕ್ಷಿಯಾಯ್ತು.

ಯಂಗ್ ಟೈಗರ್ ಕನ್ನಡ ಪ್ರೀತಿಗೆ ಕನ್ನಡಿಗರ ಸಲಾಂ

ಕನ್ನಡ ಭಾಷೆ..ಕನ್ನಡಿಗರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರ ಗಮನಸೆಳೆದರು. ಅಪ್ಪು ಎಲ್ಲಿಯೂ ಹೋಗಿಲ್ಲ.. ಗಾಳಿ, ನೀರು ಎಲ್ಲೆಡೆ ಅಪ್ಪು ಇದ್ದಾರೆ ಅಂತಾ ನೆಚ್ಚಿನ ಗೆಳೆಯನನ್ನು ನೆನೆದ ತಾರಕ್, ಮಾರ್ಚ್ 25ಕ್ಕೆ ತ್ರಿಬಲ್ ಸಿನಿಮಾವನ್ನು ಫ್ಯಾಮಿಲಿ ಸಮೇತರಾಗಿ ನೋಡಿ‌ ಅಂತ ಮನವಿ‌ ಮಾಡಿಕೊಂಡರು.

ಅಪ್ಪು ನೆನೆದು ಭಾವುಕ

ತ್ರಿಬಲ್ ಸಿನಿಮಾ ಪ್ರಿ-ರಿಲೀಸ್ ಇವೆಂಟ್ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಬಂದು ನಾವು ನಿಮ್ಮ ತಮ್ಮ ಎಂದಾಗ ಖುಷಿ ಆಯ್ತು.

ಅಪ್ಪುನ ಇವರಲ್ಲಿ, ಅಭಿಮಾನಿಗಳಲ್ಲಿ ಕಾಣ್ತೀದ್ದೇನೆ. ನಾನು ರಾಜಮೌಳಿ ದೊಡ್ಡ ಫ್ಯಾನ್​. ಜ್ಯೂ. ಎನ್​ಟಿಆರ್​ ಅವರ ಎಲ್ಲಾ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್​ ಚರಣ್​, ಪವನ್​ ಕಲ್ಯಾಣ್​, ಚಿರಂಜೀವಿ, ಅಜಿತ್​, ವಿಜಯ್​ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್​ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್​ಗೆ ಹೋಗೆ ಸಿನಿಮಾ ನೋಡೋದು’ ಎಂದಿದ್ದಾರೆ ಶಿವರಾಜ್​ಕುಮಾರ್. ಆರ್ ಆರ್ ಆರ್ ಸಿನಿಮಾ ಯಶಸ್ಸು ಆಗಲಿ‌ ಎಂದು ಹಾರೈಸಿದರು.

ಇಡೀ RRR ಬಳಗಕ್ಕೆ ಧನ್ಯವಾದ ಹೇಳಿದ ಮೌಳಿ

ಚಿತ್ರಬ್ರಹ್ಮ ರಾಜಮೌಳಿ ಅದ್ಧೂರಿ ಪ್ರಿ-ರಿಲೀಸ್ ಇವೆಂಟ್ ನಲ್ಲಿ ಇಡೀ ಚಿತ್ರತಂಡಕ್ಕೆ‌ ಧನ್ಯವಾದ ತಿಳಿಸಿದರು. ಶಿವಣ್ಣ, ಮುಖ್ಯಮಂತ್ರಿ, ಆರೋಗ್ಯ ಸಚಿವರ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದ‌ ಮೌಳಿ, ಇಂತಹ ಅದ್ಧೂರಿ ಇವೆಂಟ್ ಆಯೋಜಿಸಿದ KVN ಸಂಸ್ಥೆಯ ಒಡೆಯ ವೆಂಕಟ್ ಅವರಿಗೆ ಧನ್ಯವಾದ ತಿಳಿಸಿದರು.‌ ನಟ ರಾಮ್ ಚರಣ್ ಸಿನಿಮಾ ನೋಡಲು ಕಾತುರನಾಗಿದ್ದೇನೆ. ಪ್ರತಿಯೊಬ್ಬರು ಥಿಯೇಟರ್ ಗೆ ಹೋಗಿ ಸಿನಿಮಾ‌ ನೋಡಿ ಪ್ರೋತ್ಸಾಹಿಸಿ‌ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ‌ ಬಗ್ಗೆ ತೋರಿಸಿರುವುದು‌ ಹೆಮ್ಮೆ

ಸ್ವಾತಂತ್ರ್ಯ ಹೋರಾಟದ ಸತ್ಯಗಳು ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ. ಸ್ವಾತಂತ್ರ್ಯ ಸೇನಾನಿ RRR ಸಿನಿಮಾ ನೋಡಿ‌ ಇಡೀ‌ ದೇಶ ಹೆಮ್ಮೆಪಡಲಿದೆ ಎಂದ ಮುಖ್ಯಮಂತ್ರಿ, ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ RRR ಸಿನಿಮಾದಲ್ಲಿ ತೋರಿಸಿರುವುದು ಹೆಮ್ಮೆ ಎಂದರು.

ಭಾರತದ ಅತಿ‌ದೊಡ್ಡ ಇವೆಂಟ್ ನ್ನು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಹೌಸ್ RRR ಸಿನಿಮಾ ಕರುನಾಡಿನಾದ್ಯಂತ ಆರ್ ಆರ್ ಆರ್ ಚಿತ್ರವನ್ನು ವಿತರಣೆ‌ ಮಾಡಲಿದೆ. ಸುಮಾರು 450 ಕೋಟಿ ಬಜೆಟ್ ನಲ್ಲಿ ದಾನಯ್ಯ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಜಮೌಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡತಾರಾಬಳಗ ಸಿನಿಮಾದಲ್ಲಿ ನಟಿಸಿದ್ದು, ಇದೇ 25ಕ್ಕೆ ವರ್ಲ್ಡ್ ವೈಡ್ ಆರ್ ಆರ್ ಆರ್ ಸಿನಿಮಾ ರಿಲೀಸ್ ಅಗ್ತಿದೆ.

Categories
ಸಿನಿ ಸುದ್ದಿ

ರಾಜಮೌಳಿ ಕನ್ನಡದ ಯಾವ ಹೀರೋಗೆ ನಿರ್ದೇಶನ ಮಾಡ್ತಾರೆ?

ಇಂಥದ್ದೊಂದು ಪ್ರಶ್ನೆ ಶನಿವಾರ ಮೀಡಿಯಾ ಮುಂದೆ ಕುಳಿತ ರಾಜಮೌಳಿ ಅವರಿಗೆ ಎದುರಾಯ್ತು. ಚಿಕ್ಕಬಳ್ಳಾಪುರದಲ್ಲಿ ಆಯೋಜನೆಗೊಂಡಿರುವ ತ್ರಿಬ್ಬಲ್‌ ಆರ್‌ ಸಿನಿಮಾದ ಪ್ರೀ ರಿಲೀಸ್‌ ಈವೆಂಟ್‌ಗೂ ಮುನ್ನ, ಬಂದ ಈ ಪ್ರಶ್ನೆಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ರಾಜಮೌಳಿ ಈಗಾಗಲೇ ಸಕ್ಸಸ್‌ಫುಲ್‌ ನಿರ್ದೇಶಕರು. ಅವರು ತ್ರಿಬ್ಬಲ್‌ ಆರ್‌ ಸಿನಿಮಾ ನಿರ್ದೇಶಿಸಿದ್ದು, ಮಾರ್ಚ್‌ 25ರಂದು ತೆರೆಗೆ ಅಪ್ಪಳಿಸಲಿದೆ. ಈ ವೇಳೆ ಪ್ರೀ ರಿಲೀಸ್‌ ಈವೆಂಟ್‌ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದ ರಾಜಮೌಳಿಗೆ ಕನ್ನಡದ ಯಾವ ಹೀರೋಗೆ ನಿರ್ದೇಶಿಸಲು ಇಷ್ಟಪಡ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜಮೌಳಿ ಉತ್ತರ ಹೀಗಿತ್ತು.

ಸರ್‌, ಈ ಪ್ರಶ್ನೆ ನನಗೆ ಅನೇಕ ಪತ್ರಿಕಾಗೋಷ್ಠಿಗಳಲ್ಲಿ ಎದುರಾಗಿದೆ. ಆಗಲೂ ನಾನು ಸಮಯ ಬಂದಾಗ ಹೇಳ್ತೀನಿ ಅಂತ ಉತ್ತರಿಸಿದ್ದೇನೆ. ಆದರೆ, ಈಗ ನಾವಿಲ್ಲಿ ಬಂದಿರೋದು ತ್ರಿಬ್ಬಲ್‌ ಆರ್‌ ಈವೆಂಟ್‌ ಕುರಿತು ಹೇಳಲು. ತ್ರಿಬ್ಬಲ್‌ ಆರ್‌ ಸಿನಿಮಾ ಕುರಿತು ಕೇಳಿ. ನಿಮ್ಮ ಪ್ರಶ್ನೆಗೆ ನಾನು ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಹೇಳ್ತೀನಿ. ಅಂತ ನಯವಾಗಿಯೇ ಪ್ರಶ್ನೆಗೆ ಉತ್ತರಿಸದೆ, ತ್ರಿಬ್ಬಲ್‌ ಆರ್‌ ಸಿನಿಮಾ ಕುರಿತು ಮಾತಾಡುತ್ತಾ ಹೋದರು ರಾಜಮೌಳಿ.

ಇದೇ ವೇಳೆ ಮಾಧ್ಯಮ ಕಡೆಯಿಂದ ತೂರಿ ಬಂದ ಇನ್ನೊಂದು ಪ್ರಶ್ನೆಗೆ ರಾಜಮೌಳಿ ಹೇಳಿದ್ದಿಷ್ಟು. ಪ್ರಶ್ನೆ ಇದು, “ಸರ್‌ ನಿಮ್ಮ ಟೀಮ್‌ನಲ್ಲಿ ಟೆಕ್ನೀಷಿಯನ್ಸ್‌ ಕೂಡ ಹೀರೋಗಳೇ. ನಿಮ್ಮ ಸ್ಕ್ರಿಪ್ಟ್‌ ಚರ್ಚೆಯಲ್ಲಿ ಟೆಕ್ನೀಷಿಯನ್ಸ್‌ ಇನ್ವಾಲ್‌ ಮಾಡ್ಕೋತೀರಾ? ಈ ಪ್ರಶ್ನೆಗೆ,‌ ಉತ್ತರಿಸಿದ ರಾಜಮೌಳಿ, ಯೆಸ್ ನಾನು ಎಲ್ಲರನ್ನೂ ಗಣನಗೆ ತೆಗೆದುಕೊಳ್ತೀನಿ. ಹೀರೋಗಳಿರುತ್ತಾರೆ, ತಾಂತ್ರಿಕ ವರ್ಗದವರೂ ಇರುತ್ತಾರೆ ಅಂದರು.

ಜೂ.ಎನ್‌ಟಿಆರ್‌ ರಾಜಮೌಳಿ ಕೆಲಸ ಬಗ್ಗೆ ಹೇಳಿದ್ದು ಹೀಗೆ

ಇದೇ ವೇಳೆ ಜೂನಿಯರ್‌ ಎನ್‌ಟಿಆರ್‌ ಅವರಿಗೊಂದು ಪ್ರಶ್ನೆಯೂ ತೂರಿ ಬಂತು. ಪ್ರಶ್ನೆ ಹೀಗಿತ್ತು. “ಸರ್‌, ಈಗಾಗಲೇ ನೀವು ರಾಜಮೌಳಿ ಅವರೊಂದಿಗೆ ಕೆಲಸ ಮಾಡಿದ್ದೀರಿ. ಆ ಹಿಂದಿನ ಸಿನಿಮಾಗಳಿಗೂ ಈಗಿನ ತ್ರಿಬ್ಬಲ್‌ ಆರ್‌ ಸಿನಿಮಾಗೂ ಏನು ಡಿಫರೆನ್ಸ್‌ ಇದೆ. ಈ ಪ್ರಶ್ನೆಗೆ ಉತ್ತರಿಸಿದ ಜೂನಿಯರ್‌ ಎನ್‌ಟಿಆರ್‌, “ನನಗೆ ಯಾವುದೇ ಚೇಂಜ್‌ ಕಾಣ್ತಾ ಇಲ್ಲ. ರಾಜಮೌಳಿ ಎಲ್ಲಾ ಸಿನಿಮಾಗೂ ಒಂದೇ ಎಫರ್ಟ್‌ ಹಾಕ್ತಾರೆ. ಅವರೊಂದಿಗೆ ಕೆಲಸ ಮಾಡೋದೇ ಖುಷಿ. ಅವರಲ್ಲಿ ಪವರ್‌ ಸ್ಟೋರಿಸ್‌ ಇರುತ್ತೆ. ಅದಕ್ಕೆ ತಕ್ಕಂತೆಯೇ ಕೆಲಸ ಮಾಡುತ್ತಾರೆ ಮತ್ತು ನಮ್ಮಿಂದಲೂ ಮಾಡಿಸುತ್ತಾರೆ ಅಂದರು ಜೂ.ಎನ್‌ಟಿಆರ್.

ರಾಮ್‌ ಚರಣ್‌ ಹೇಳಿದ್ರು ಕನ್ನಡ ನನ್ನ ಫೇವರೇಟ್…

ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ರಾಮ್‌ಚರಣ್‌ ಅವರಿಗೆ ಗ್ಯಾಲರಿಯಿಂದ ಪ್ರಶ್ನೆ ತೂರಿಬಂತು. “ನಿಮ್ಮ ತಂದೆ ಈಗಾಗಲೇ ಸಿಪಾಯಿ ಎಂಬ ಕನ್ನಡ ಸಿನಿಮಾ ಮಾಡಿದ್ದರು. ನೀವು ಕೂಡ ಹೀರೋ ಆಗಿದ್ದೀರಿ. ನೀವು ಯಾವಾಗ ಕನ್ನಡದಲ್ಲಿ ನಟಿಸ್ತೀರಿ? ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಾಮ್‌ಚರಣ್‌, ” ನಾನು ರೆಡಿ ಇದ್ದೇನೆ. ನಾನು ನಾಲ್ಕೈದು ಭಾಷೆಗಳಲ್ಲಿ ಡಬ್‌ ಮಾಡಿದ್ದೇನೆ. ಅದರಲ್ಲಿ ಕನ್ನಡ ಕೂಡ ನನ್ನ ನೆಚ್ಚಿನ ಭಾಷೆ. ಆದಷ್ಟು ಬೇಗ ನಾನು ಕನ್ನಡದಲ್ಲಿ ನಟಿಸ್ತೀನಿ. ನನ್ನ ಫೇವರೇಟ್‌ ಭಾಷೆಗಳಲ್ಲಿ ಇದೂ ಒಂದು ಎಂದರು ರಾಮ್‌ ಚರಣ್.‌

Categories
ಸಿನಿ ಸುದ್ದಿ

ಜೇಮ್ಸ್‌ ಎರಡನೇ ದಿನದ ಗಳಿಕೆ ಎಷ್ಟು ಗೊತ್ತಾ? ನಿರ್ಮಾಪಕ ಹೇಳಿರುವುದ್ದಿಷ್ಟು!

ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ “ಜೇಮ್ಸ್” ಅದ್ಧೂರಿಯಾಗಿ ಬಿಡುಗಡೆಯಾಗಿರುವುದು ಗೊತ್ತೇ ಇದೆ. ಬಿಡುಗಡೆಯ ಮೊದಲ ದಿನವೇ ದಾಖಲೆ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ದೊಡ್ಡ ಮಟ್ಟದಲ್ಲೇ ಓಪನಿಂಗ್‌ ಸಿಕ್ಕಿದ್ದು ಗೊತತು. ಇನ್ನು, ಅಪ್ಪು ಫ್ಯಾನ್ಸ್‌ ಅಂತೂ ಸಿನಿಮಾ ನೋಡೋಕೆ ಮುಗಿ ಬೀಳುತ್ತಲೇ ಇದ್ದಾರೆ. ಮೊದಲ ದಿನ ಮತ್ತು ಎರಡನೇ ದಿನ ಚಿತ್ರಮಂದಿರಗಳು ಹೌಸ್‌ಫುಲ್‌ ಪ್ರದರ್ಶನವನ್ನು ಕಂಡಿವೆ. ಮೊದಲ ದಿನವೇ ಕನ್ನಡ ಚಿತ್ರರಂಗದ ಆಲ್‌ ರೆಕಾರ್ಡ್‌ ಅನ್ನು ಜೇಮ್ಸ್‌ ಮುರಿದಿದೆ.

ಅಂದಹಾಗೆ, ಮೊದಲ ದಿನವೇ ಕರ್ನಾಟಕದಲ್ಲಿ ಸುಮಾರು 35 ಕೋಟಿಯಷ್ಟು ಗಳಿಕೆ ಮಾಡಿದ್ದು, ಎರಡನೇ ದಿನ ಕೂಡ ರಾಜ್ಯದಲ್ಲಿ ಸುಮಾರು 18 ಕೋಟಿಗೂ ಹೆಚ್ಚು ಗಳಿಕೆಯಾಗಿದೆ ಎನ್ನಲಾಗಿದೆ. ಇದು ನಿಜಕ್ಕೂ ಹೊಸ ದಾಖಲೆ. ಇನ್ನು, ಶನಿವಾರ ಮತ್ತು ಭಾನುವಾರದ ಗಳಿಕೆ ಕೂಡ ಇದೇ ವೇಗದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಗದಲ್ಲಿ ಗಳಿಕೆ ಕಂಡರೆ ಒಂದು ವಾರದಲ್ಲಿ ಚಿತ್ರ ನೂರು ಕೋಟಿ ಕ್ಲಬ್‌ ಸೇರಲಿದೆ ಎನ್ನಲಾಗುತ್ತಿದೆ.
ಜೇಮ್ಸ್‌ ಚಿತ್ರದ ಗಳಿಕೆ ಕುರಿತಂತೆ ಸ್ವತಃ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರು, “ಇಷ್ಟೆಲ್ಲಾ ಆಗಿರೋದು ಪುನೀತ್ ಅಣ್ಣನ ಪವರ್. ನನಗೆ ತಿಳಿದಿರುವಂತೆ ಈ ರೀತಿಯ ಓಪನಿಂಗ್‌ ಯಾವ ಸಿನಿಮಾಗೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿಯೂ ಸಿಗಲ್ಲ. ಕೇವಲ ಚಿತ್ರದ ಗಳಿಕೆ ಮಾತ್ರವಲ್ಲ ಇತರೆ ವಿಭಾಗದಲ್ಲೂ ಚಿತ್ರ ಹಳೆಯ ದಾಖಲೆಗಳನ್ನೆಲ್ಲ ಮುರಿದು ಹಾಕಿದೆ ಎಂದಿದ್ದಾರೆ.

ಸದ್ಯ ಚಿತ್ರ ಎರಡು ದಿನದಲ್ಲಿ 50 ಕೋಟಿ ಗಳಿಕೆ ದಾಟಿದ್ದು, ಒಂದು ವಾರದಲ್ಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಲಿದೆ ಎಂದಿದ್ದಾರೆ. ಈಗಾಗಲೇ ಚಿತ್ರದ ಡಿಜಿಟಲ್, ಸ್ಯಾಟಲೈಟ್, ಓಟಿಟಿ ಹೀಗೆ ಒಟ್ಟಾರೆ ಲೆಕ್ಕ ಹಾಕಿದರೆ ಚಿತ್ರ ಈಗಲೇ ನೂರು ಕೋಟಿಗೂ ಗಳಿಕೆಯಾಗಿದೆ ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ವಿಜಯ್ ಸೇತುಪತಿ ಮಾಡಬೇಕಾದ ಸಿನಿಮಾಗೆ ಮನೋಜ್ ಹೀರೋ…

ಡಾಲಿ ಸಿನಿಮಾ ನಂತರ ನಿರ್ದೇಶಕ ಪ್ರಭು ಶ್ರೀನಿವಾಸ ನಿರ್ದೇಶನ ಮಾಡಬೇಕಿದ್ದ ತಮಿಳು ಸಿನಿಮಾ ಈಗ ಕನ್ನಡದಲ್ಲಿ ತಯಾರಿಯಾಗಿದೆ. ವಿಜಯ್ ಸೇತುಪತಿ ನಟಿಸಬೇಕಾಗಿದ್ದ ಸಿನಿಮಾಗೆ ಮೊಗ್ಗಿನ ಮನಸು ಖ್ಯಾತಿಯ ಮನೋಜ್ ಬಣ್ಣ ಹಚ್ಚಿದ್ದಾರೆ.

ಡಾಲಿ ಸಿನಿಮಾ ಕೋವಿಡ್ ನಂತರ ಮತ್ತೆ ಆರಂಭ ಆಗಬೇಕಿದ್ದು, ಅದರ ಮಧ್ಯೆ ಪ್ರಭು ಶ್ರೀನಿವಾಸ ಅವರು ಬಾಡಿಗಾಡ್ ಚಿತ್ರವನ್ನು ನಿರ್ಮಾಣ ಕೂಡ ಮಾಡಿ ಪೂರ್ಣಗೊಳಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಗುರುಪ್ರಸಾದ್, ಪದ್ಮಜಾ ರಾವ್ ಹಾಗೂ ದೀಪಿಕಾ ನಟಿಸಿದ್ದಾರೆ. ಚಿತ್ರ ಏಪ್ರಿಲ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್!‌ ಮಾರ್ಚ್ 21ಕ್ಕೆ ತೂಫಾನ್‌ ಸಾಂಗ್‌ ರಿಲೀಸ್…

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಅಂದಾಕ್ಷಣ ಸದ್ಯ ನೆನಪಾಗೋದೇ ಯಶ್‌ ಅಭಿನಯದ, ಪ್ರಶಾಂತ್‌ ನೀಲ್‌ ನಿರ್ದೇಶನದ ಮತ್ತು ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರ ‘ಕೆಜಿಎಫ್ 2’. ಈ ಚಿತ್ರದ ಅಬ್ಬರ ಇನ್ನೇನು ಶುರುವಾಗಲಿದೆ. ಏಪ್ರಿಲ್ 14ಕ್ಕೆ ಬಹು ನಿರೀಕ್ಷಿತ “ಕೆಜಿಎಫ್‌ 2” ರಿಲೀಸ್ ಆಗಲಿದೆ. ಯಶ್‌ ಫ್ಯಾನ್ಸ್‌ ‌ ಚಿತ್ರ ಬಿಡುಗಡೆಯ ಎದುರು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ, ಸಿನಿಮಾದ ಪ್ರಚಾರ ಕೆಲಸ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಬಿಡುಗಡೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಅಣಿಯಾಗಿದೆ. ಈವರೆಗೆ ಚಿತ್ರದ ಟೀಸರ್ ನೋಡಿ ಖುಷಿಗೊಂಡಿದ್ದ ಫ್ಯಾನ್ಸ್‌, ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳಿಗೆ ಕಾಯುತ್ತಿದ್ದರು. ಅಂತಹ ಫ್ಯಾನ್ಸ್‌ಗೆ ಒಂದು ಗುಡ್‌ ನ್ಯೂಸ್‌ ಕೊಟ್ಟಿದೆ ಹೊಂಬಾಳೆ ಫಿಲಂಸ್.‌‌

ಹೌದು, ‘ಕೆಜಿಎಫ್ 2’ನ ಒಂದೊಂದೇ ಕಂಟೆಂಟ್ ಬಿಡಲು ತಂಡ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ತಂಡ ತಯಾರಿ ನಡೆಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಹೊಂಬಾಳೆ ಫಿಲಂಸ್‌, ಚಿತ್ರದ ಮೊದಲ ಹಾಡು ಮಾರ್ಚ್ 21ಕ್ಕೆ ರಿಲೀಸ್‌ ಆಗಲಿದೆ ಎಂದು ಹೇಳಿಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿವೆ. ಈ ಬಗ್ಗೆ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ‘ಸಿದ್ಧರಾಗಿ ತೂಫಾನ್ ಬರ್ತಿದೆ. ಮಾರ್ಚ್‌ 21, 11.07ಕ್ಕೆ ತೂಫಾನ್ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೆಜಿಎಫ್‌ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರದ ಮೊದಲ ಹಾಡು ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಡಿನ ಪೋಸ್ಟರ್ ಕೂಡ 5 ಭಾಷೆಯಲ್ಲಿ ರಿಲೀಸ್ ಮಾಡಲಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಹಾಡಿನ ಶೀರ್ಷಿಕೆ ತೂಫಾನ್, ಅಂದರೆ ಬಿರುಗಾಳಿ ಎಂದರ್ಥ. ಈ ಹಾಡು ನಾಯಕನ ಕುರಿತಾಗಿರಬಹುದೇ ಎಂಬ ಪ್ರಶ್ನೆಗಳಿವೆ. ಅದೇನೆ ಇರಲಿ, ಒಟ್ಟಲ್ಲಿ ಮೊದಲ ಹಾಡು ರಿಲೀಸ್‌ ಮಾಡುತ್ತಿದೆ. ಈ ಹಾಡಿನ ಬಿಡುಗಡೆ ಬಳಿಕ ಚಿತ್ರತಂಡ ಟ್ರೇಲರ್ ಕೂಡ ರಿಲೀಸ್ ಮಾಡಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದ್ದು, ಮಾರ್ಚ್ 27ಕ್ಕೆ ಟ್ರೇಲರ್ ರಿಲೀಸ್ ಆಗಲಿದೆ. ಸದ್ಯ ಈ ಚಿತ್ರದ ಮೇಲೆ ಸಾಕಷ್ಟು ಕುತೂಹಲವಿದೆ.

Categories
ಸಿನಿ ಸುದ್ದಿ

ರಾಯರ ಸನ್ನಿಧಿಯಲ್ಲಿ ಅಪ್ಪುಗೆ ಪೂಜೆ ಮಾಡಿಸಿದ ಪ್ರೀತಿಯ ಅಭಿಮಾನಿ…

ಡಾ.ಪುನೀತ್‌ ರಾಜಕುಮಾರ್‌ ಅಂದರೆ ಹಾಗೆ, ಅದೊಂದು ಗೌರವ, ಪ್ರೀತಿ ಮತ್ತು ಹೆಮ್ಮೆ. ಪುನೀತ್‌ ರಾಜಕುಮಾರ್‌ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಆದರ್ಶಗಳು ಜೀವಂತ. ಅವರು ನಮ್ಮೊಂದಿಗಿಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಅವರು ಜೀವಂತವಾಗಿಯೇ ಇದ್ದಾರೆ. ಅದೇ ಖುಷಿಯಲ್ಲಿ ಅಭಿಮಾನಿಗಳು ಅಪ್ಪು ಅವರನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ. ಪುನೀತ್‌ ರಾಜಕುಮಾರ್‌ ಅವರಿಗೆ ಅಭಿಮಾನಿಗಳ ಸಂಖ್ಯೆ ಲೆಕ್ಕವಿಲ್ಲ.

ಅದರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಯಾಕೆಂದರೆ, ಇಡೀ ಕರುನಾಡೇ ಪುನೀತ್‌ ಅವರನ್ನು ಪ್ರೀತಿಸುತ್ತಿದೆ. ಅವರ ಅಭಿಮಾನಿಗಳಂತೂ ಜೇಮ್ಸ್‌ ಬಿಡುಗಡೆ ಮುನ್ನ ದಿನ ಮಾಡದ ಪೂಜೆಗಳಿಲ್ಲ, ಹರಕೆಗಳಿಲ್ಲ. ಅವರ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದು ಗೊತ್ತೇ ಇದೆ. ಹಾಗೆಯೇ ಇಲ್ಲೊಬ್ಬ ಅಪ್ಪಟ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು, ಪುನೀತ್‌ ರಾಜಕುಮಾರ್‌ ಅವರ ಪುಸ್ತಕವೊಂದನ್ನು ರಾಯರ ಬೃಂದಾವನದಲ್ಲಿಟ್ಟು ಪೂಜಿಸಿದ್ದಾರೆ.

ಹೌದು, ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದಲೂ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೀರೋ ಕೂಡ ಆಗಿರುವ ಮಧು ಮಂದಗೆರೆ ಅವರು ಪುನೀತ್‌ ಅವರ ಮೇಲಿನ ಪ್ರೀತಿ, ಗೌರವದಿಂದಲೇ ಮಂತ್ರಾಲಯಕ್ಕೆ ಹೋಗಿ ರಾಯರ ಸನ್ನಿಧಿಯಲ್ಲಿ ಪುನೀತ್‌ ಅವರ ಜೇಮ್ಸ್‌ ಚಿತ್ರಕ್ಕೆ ಯಾವ ಅಡೆತಡೆ ಆಗಬಾರದು, ಪುನೀತ್‌ ಅವರು ಸದಾ ನಗುಮೊಗದಲ್ಲೇ ಅಭಿಮಾನಿಗಳ ಜೊತೆ ಇರಬೇಕು ಅಂದುಕೊಂಡು ಪೂಜಿಸಿದ್ದಾರೆ.

ಅಂದಹಾಗೆ, ಭದ್ರಾವತಿ ರಾಮಾಚಾರಿ ಬರೆದ “ಅಪ್ಪು ಅಮರ” ಒಂದು ಅವಲೋಕನ ಪುಸ್ತಕ ಬಿಡುಗಡೆಯಾಗಿದ್ದು, ಆ ಪುಸ್ತಕವನ್ನು ಮಂತ್ರಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಅಪ್ಪು ಅವರ ಜೇಮ್ಸ್‌ ಸಿನಿಮಾ ಕೂಡ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು, ಜೇಮ್ಸ್‌ ಬಿಡುಗಡೆ ದಿನ ಮಧು ಮಂದಗೆರೆ ಅವರು, ಯೋಧರ ಸಮವಸ್ತ್ರ ಧರಿಸಿಯೇ ಸಿನಿಮಾ ವೀಕ್ಷಿಸಿ ಪ್ರೀತಿ ಮೆರೆದಿದ್ದಾರೆ. ಎಲ್ಲರೂ ಜೇಮ್ಸ್‌ ಸಿನಿಮಾ ನೋಡಲೇಬೇಕು ಎಂದು ಹೇಳಿದ್ದಾರೆ.

error: Content is protected !!