ಬೈರಾಗಿಯಲ್ಲಿ ಟಗರು ಡಾಲಿ ಜತೆ ಚಿಟ್ಟೆ ಬೈರಾಗಿ ಟಗರು ಪಾರ್ಟ್ 2…? ಟಗರು ಡಾಲಿ ಚಿಟ್ಟೆ ಕಾಂಬೋ ಬೈರಾಗಿಯಲ್ಲಿ ಮತ್ತೆ ಆರ್ಭಟ ಬೈರಾಗಿ ಹಾಡಿಗೆ ವಸಿಷ್ಠ ಸಿಂಹ ಗಾಯನ ಟಗರು,ಡಾಲಿಗೆ ಮತ್ತೆ ಚಿಟ್ಟೆ ಸಾಥ್
ಶಿವಣ್ಣನ ಟಗರಿನೇಟಿಗೆ ತರಗೆಲೆ ಥರಾ ಉದುರೋಗ್ತಾರೆ ಡಾಲಿ-ಚಿಟ್ಟೆ ಜೋಡಿ. ಆದ್ರೂ ಶಿವಣ್ಣ-ಡಾಲಿ-ಚಿಟ್ಟೆ ಕಾಂಬಿನೇಷನ್ ಗೆ ಭಯಂಕರ ಫ್ಯಾನ್ ಫಾಲೋಯಿಂಗ್ ಇದೆ. ಈ ತ್ರಿವಳಿ ಜೋಡಿ ಮತ್ತೆ ಒಂದಾಗ್ತಾ ಇದೆ.
ಹೌದು, ಶಿವಣ್ಣ ಜೊತೆ ಡಾಲಿ ಧನಂಜಯ ಹಾಗೂ ಚಿಟ್ಟೆ ವಸಿಷ್ಠ ಸಿಂಹ ಮತ್ತೆ ಜೋಡಿಯಾಗ್ತಾ ಇದ್ದಾರೆ. ಆದ್ರೆ ಇಲ್ಲಿ ವಸಿಷ್ಠ ತೆರೆ ಮೇಲೆ ಜೋಡಿಯಾಗೋ ಬದಲು ಹಾಡು ಹಾಡಿ, ಧ್ವನಿಯಲ್ಲಿ ಒಂದಾಗ್ತಾ ಇದ್ದಾರೆ. ಇದೇ ಜು.1ಕ್ಕೆ ತೆರೆಗೆ ಬರ್ತಿರೋ ಡಾಲಿ ಧನಂಜಯ-ಶಿವಣ್ಣ ಒಟ್ಟಾಗಿ ನಟಿಸಿರುವ ಬೈರಾಗಿ ಸಿನಿಮಾದ ಒಂದು ಪವರ್ ಫುಲ್ ಹಾಡಿಗೆ ಚಿಟ್ಟೆ ವಸಿಷ್ಠ ದನಿಯಾಗಿದ್ದಾರೆ.
ಈಗಾಗ್ಲೆ ಹಾಡೊಂದಕ್ಕೆ ಶಿವಣ್ಣ ಜೊತೆ ಶರಣ್ ದನಿಯಾಗಿದ್ದು. ಈಗ ಮತ್ತೊಂದು ಹಾಡಿನಲ್ಲಿ ವಸಿಷ್ಠ ಹಾಡುವ ಮೂಲಕ ಶಿವಣ್ಣ ಡಾಲಿಯ ಸಿನಿಮಾದಲ್ಲಿ ಮತ್ತೆ ಒಂದಾಗ್ತಾ ಇದ್ದಾರೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿನಲ್ಲಿ ವರಿಷ್ಠ ರಿಗೆ ಕೆ.ಜಿ.ಎಫ್ ಅನನ್ಯ ಭಟ್ ಸಾಥ್ ಕೊಟ್ಟಿದ್ದಾರೆ.
ಕವಿ ಗೋಪಾಲಕೃಷ್ಣ ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಹಾಡನ್ನು ಕೇಳದ ಕಿವಿಗಳೇ ಇಲ್ಲ ಅನಿಸುತ್ತದೆ. ಈಗಲೂ ಈ ಹಾಡು ಎಲ್ಲೋ ಕೇಳಿ ಬಂದರೂ, ಅದರೊಟ್ಟಿಗೆ ಗುನಗುವ ಗೀತೆ ಅದು. ಈಗ ಆ ಹಾಡಿನ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ.ನಗರದ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ನೆರವೇರಿದೆ…
ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶುಭ ಕೋರಿದರೆ, ನಾಗೇಂದ್ರ ರೆಡ್ಡಿ ಹಾಗೂ ಲಕ್ಕಿ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಪ್ರಕೃತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶರಣಪ್ಪ ಗೌರಮ್ಮ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಶ್ವಾಸ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ವಿಶ್ವಾಸ್ ಕೃಷ್ಣ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಜೋಗದ ಬಳಿಯ ಕಾರ್ಗಲ್ ಹಾಗೂ ಭಟ್ಕಳದಲ್ಲಿ ಚಿತ್ರೀಕರಣ ನಡೆಯಲಿದೆ.
ಕೌಟುಂಬಿಕ ಕಥಾಹಂದರದ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಲಿದ್ದಾರೆ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಮಾಧವ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ. ಸ್ವಪ್ನ ಶೆಟ್ಟಿಗಾರ್. ಬೇಬಿ ಪ್ರಕೃತಿ, ಪಟೇಲ್ ವರುಣ್ ರಾಜು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಾಯಿ ರಾಕಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
ದಕ್ಷಿಣ ಕನ್ನಡದ ಅಚ್ಚುಮೆಚ್ಚಿನ ಕಂಬಳದ ಕುರಿತಾಗಿ ಬರುತ್ತಿರುವ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ” ವೀರ ಕಂಬಳ” ಚಿತ್ರದಲ್ಲಿ ಕಂಬಳದ ಪರ ವಕೀಲರಾಗಿ ಪ್ರಕಾಶ್ ರೈ ನಟಿಸಿದ್ದಾರೆ. ಪ್ರತಿವಾದಿಯಾಗಿ ರವಿಶಂಕರ್ ಅಭಿನಯಿಸಿದ್ದಾರೆ. ಈ ಕೋರ್ಟ್ ಸನ್ನಿವೇಶವನ್ನು ಕಂಠೀರವ ಸ್ಟುಡಿಯೋದಲ್ಲಿ ಸೆರೆ ಹಿಡಿಯಲಾಯಿತು. ಈ ವೇಳೆ ಪ್ರಕಾಶ್ ರೈ, ರವಿಶಂಕರ್, ರಾಜೇಂದ್ರ ಸಿಂಗ್ ಬಾಬು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಆದಿತ್ಯ, ವೀಣಾ ಪೊನ್ನಪ್ಪ ಮುಂತಾದವರು ಕಾಣಿಸಿದ್ದು ವಿಶೇಷ.
ಎರಡು ವರ್ಷ ಸ್ಕ್ರಿಪ್ಟ್ ಮಾಡಿದ್ದೇವೆ. 16 ಸಾವಿರ ಪುಟಗಳ ಚರ್ಚೆಯಾಗಿದೆ. ಕೋರ್ಟಿನಿಂದ ತರಿಸಿ, ಈ ವಾದಗಳನ್ನು ಯಾವ ರೀತಿ ತರಬೇಕು ಎಂಬುದು ಮುಖ್ಯ. ಏಕೆಂದರೆ, ಕಾಮೆಂಟರಿ ಅಥವಾ ಸಾಕ್ಷ್ಯಚಿತ್ರ ಆಗಬಾರದು. ದೊಡ್ಡ ಸವಾಲಿತ್ತು. ತುಂಬಾ ಜನರ ಸಲಹೆ ಪಡೆದೆ. ಟಿ.ಎನ್.ಸೀತಾರಾಮ್ ಅವರಿಂದ ಬೇಕಾದಷ್ಟು ವಿಷಯ ಕಲೆ ಹಾಕಿದೆವು. ಒಂಬತ್ತು ತಿಂಗಳಿನಿಂದ ಇದೊಂದು ಸೀನ್ ಮೇಲೆ ನಾನು ಮತ್ತು ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಕೆಲಸ ಮಾಡುತ್ತಿದ್ದೇವೆ. ಅದೇ ಕಾರಣಕ್ಕೆ ಚಿತ್ರೀಕರಣ ಕೊನೆಯಲ್ಲಿಟ್ಟುಕೊಂಡೆವು. ಇದನ್ನು ಹೇಗೆ ಹೇಳಬೇಕು ಎಂದು ಯೋಚಿಸಿ, ಇವತ್ತು ಚಿತ್ರೀಕರಣ ಮಾಡುತ್ತಿದ್ದೇವೆ. ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್ ರೈ ಮತ್ತು ರವಿ ಶಂಕರ್ ಅವರ ಅಭಿನಯ, ದೃಶ್ಯದ ಮೌಲ್ಯ ಹೆಚ್ಚಿಸಿದೆ. ಇಬ್ಬರೂ ಅಪ್ಪಟ ಪ್ರತಿಭಾವಂತರು ಎಂಬುದು ಸಿಂಗ್ ಬಾಬು ಮಾತು.
ಪ್ರಕಾಶ್ ರೈ ಈ ಹಿಂದೆ “ಮುತ್ತಿನ ಹಾರ” ಚಿತ್ರದಲ್ಲಿ ನಟಿಸಿದ್ದರು. ಒಳ್ಳೆಯ ಕ್ಷಣ ಕಳೆದಿದ್ದೇವೆ. ಅದನ್ನು ನೆನಪಿಟ್ಟುಕೊಂಡು ಅವರು ಬಂದು ನಟಿಸುತ್ತಿದ್ದಾರೆ. ಎರಡು ಫೋನ್ ಮಾಡಿದೆ. ಅವರು ಒಪ್ಪಿ ನಟಿಸಿದರು. ಹೈದರಾಬಾದ್ನಿಂದ ನೇರವಾಗಿ ಚಿತ್ರೀಕರಣಕ್ಕೆ ಬಂದರು. ಭಾರತ ಅಲ್ಲ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ನಟಿಸಲಿ. ಎಲ್ಲಿ ಹೋದರು ಗೆದ್ದು ಬರುತ್ತಾರೆ. ಅವರಿಗೆ ಆ ಪ್ರತಿಭೆ ಇದೆ. ಕನ್ನಡಿಗರ ಆಶೀರ್ವಾದವಿದೆ. ರವಿಶಂಕರ್ ಬಹಳ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇಲ್ಲೂ ಒಂದೊಳ್ಳೆಯ ಪಾತ್ರವಿದೆ.
ಎರಡು ವರ್ಷ ಸ್ಕ್ರಿಪ್ಟ್ ಮಾಡಿದ್ದೇವೆ 10-15 ಕಂಬಳಗಳಿಗೆ ಹೋಗಿ, ನೋಡಿ, ಅಲ್ಲಿಯ ತಜ್ಞರು, ಮಾಲೀಕರು ಮತ್ತು ಜಾಕಿಗಳನ್ನು ಮಾತಾಡಿಸಿದ್ದೇವೆ. ಯಾರು ಹೀರೋ? ಹೀರೋ ಹಾಕಿದರೆ, ಕಂಬಳ ಓಡಿಸುವವರ ಡ್ಯೂಪ್ಲಿಕೇಟ್ ಹಾಕುವುದಕ್ಕೆ ಇಷ್ಟ ಇರಲಿಲ್ಲ. ನನಗೆ ಒರಿಜಿನಲ್ ಬೇಕಿತ್ತು. ಶ್ರೀನಿವಾಸ್ ಗೌಡ ಅವರನ್ನು ಹೀರೋ ತರಹ ಹಾಕಿ, ಸ್ವರಾಜ್ ಅವರಿಗೆ ಟೆನ್ ಮಾಡಿ, ನೇಟಿವಿಟಿ ಮಿಸ್ ಆಗಬಾರದು ಎಂಬ ಕಾರಣಕ್ಕೆ. 800 ವರ್ಷಗಳ ಕ್ರೀಡೆ. ಪ್ರತಿಯೊಂದನ್ನೂ ಗಮನಿಸಿ, ಯಾವುದೇ ಚ್ಯುತಿ ಬರದಂತೆ ಮಾಡಿದ್ದೇವೆ. ಎಲ್ಲ ನೈಜ. ಯಾವುದು ಕೃತಕವಲ್ಲ. ಅದನ್ನು ನಮ್ಮ ಕಥೆಗೆ ಪೂರಕವಾಗಿ ಬಳಸಿಕೊಂಡಿದ್ದೇವೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ಇದುವರೆಗೂ ಹಲವು ಕೋರ್ಟ್ ದೃಶ್ಯಗಳಲ್ಲಿ ಭಾಗವಹಿಸಿದ್ದರೂ ಇದು ಬೇರೆ. ಇದು ನನ್ನ ಮಣ್ಣಿನ ಒಂದು ವಿಷಯ. ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ವಿಷಯ. ಇಲ್ಲಿ ಸಂಭಾಷಣೆಯ ಮಾತುಗಳಿಗಿಂತ ನನ್ನ ಭಾವನೆಯೂ ಮುಖ್ಯವಾಗುತ್ತದೆ. ಇದು ನನಗೆ ಬಹಳ ಪರ್ಸನಲ್ ಆದಂತಹ ಚಿತ್ರ. ಹಲವು ಚಿತ್ರಗಳು ನನಗೆ ಯಾವುದೇ ಸಂಬಂಧವಿರುವುದಿಲ್ಲ. ಅಲ್ಲಿ ನಾನು ಒಬ್ಬ ನಟನಾಗಿ ನನ್ನ ಪಾತ್ರ ಮಾಡುತ್ತೇನೆ ಅಷ್ಟೇ. ಅದನ್ನು ಹೊರತುಪಡಿಸಿ, ಒಬ್ಬ ಕನ್ನಡಿಗನಾಗಿ ಒಂದು ಜವಾಬ್ದಾರಿ ಇರುತ್ತದೆ. ಒಬ್ಬ ತುಳುವನಾಗಿ, ಆ ಮಣ್ಣಿನ ವಿಷಯದ ಚಿತ್ರ ಮಾಡಿದಾಗ, ಅದರ ಪರವಾಗಿ ವಾದಿಸುವಂತಹ, ಅದರ ಕುರಿತಾಗಿ ಇರುವ ಊಹಾಪೋಹಗಳನ್ನ ಮತ್ತು ಅಪಪ್ರಚಾರಗಳನ್ನು ನೀಗಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರೋ ಒಬ್ಬರು ಕಂಬಳದ ನೀರು ಕೆಸರು ಎಂದಾಗ, ಇಲ್ಲ ಅದು ಕೆಸರಲ್ಲ, ಅದು ತೀರ್ಥ ಅಂತ ಹೇಳುವ ದೃಶ್ಯಗಳಿವೆ ಎಂದರು ಪ್ರಕಾಶ್ ರೈ.
ನಾನು ಈ ಚಿತ್ರದಲ್ಲಿ ನಟಿಸಲು ಮೂರು ಕಾರಣಗಳಿವೆ. ಮೊದಲು ನನಗೆ ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಆಸೆಯಿತ್ತು. ನಂತರ ನಾನು ರಾಜೇಂದ್ರ ಸಿಂಗ್ ಬಾಬು ಅವರ ಅಭಿಮಾನಿ. “ಬಂಧನ”, ” ಮುತ್ತಿನ ಹಾರ” ಚಿತ್ರಗಳನ್ನು ಸಾಕಷ್ಟು ಸಲ ನೋಡಿದ್ದೀನಿ ಮತ್ತು ಭಾರತದ ಶ್ರೇಷ್ಠ ನಟ ಪ್ರಕಾಶ್ ರೈ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಈ ಎಲ್ಲಾ ಕಾರಣಕ್ಕೆ “ವೀರ ಕಂಬಳ” ನನಗೆ ವಿಶೇಷವೆಂದರು ರವಿಶಂಕರ್.
ಉತ್ಸಾಹಿ ಯುವ ನಿರ್ದೇಶಕ ಭರತ್ ಜಿ ನಿರ್ದೇಶಿಸಿರುವ “ಸ್ಪೂಕಿ ಕಾಲೇಜ್” ಚಿತ್ರದ ಟೀಸರ್ ಶ್ರೀದೇವಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿ.ಜಿ.ಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪರಮಪೂಜ್ಯ ಶ್ರೀ ಡಾ.ಪ್ರಕಾಶನಾಥಸ್ವಾಮೀಜಿ ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ.
ಚಿತ್ರ ಆರಂಭದ ದಿನದಿಂದಲೂ ಪೋಸ್ಟರ್, ಫಸ್ಟ್ ಲುಕ್ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಈಗ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಕುರಿತಾದ ಕುತೂಹಲ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಅಧಿಕ ಸಂಖ್ಯೆಯಲ್ಲಿ ಟೀಸರ್ ವೀಕ್ಷಣೆಯಾಗುತ್ತಿದೆ. ನಟ ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. “ಸ್ಪೂಕಿ” ಎಂದರೆ ಭಯ. ಟೀಸರ್ ನೋಡಿದವರಿಗೆ “ಸ್ಪೂಕಿ” ಪದದ ವಿಶ್ಲೇಷಣೆಯನ್ನು ನಿರ್ದೇಶಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಹಿಂದೆ ಕನ್ನಡ ಚಿತ್ರರಂಗದ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳಾದ “ನಾ ನಿನ್ನ ಬಿಡಲಾರೆ”, ” ಆಪ್ತಮಿತ್ರ ” ಸಿನಿಮಾಗಳ ರೀತಿ ಈ ಚಿತ್ರಕೂಡ ಪ್ರೇಕ್ಷಕರ ಮನಗೆಲುವುದರಲ್ಲಿ ಯಾವ ಸಂದೇಹವಿಲ್ಲ ಎಂಬ ಮಾತುಗಳು ಟೀಸರ್ ನೋಡಿದವರಿಂದ ಕೇಳಿ ಬರುತ್ತಿದೆ. ಕಾಲೇಜ್ ನಲ್ಲಿ ದೆವ್ವ ಇದೆ ಎನ್ನುವುದು ಈ ಚಿತ್ರದ ಹೈಲೆಟ್.
ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ನಿಮ್ಮ ಮುಂದೆ “ಸ್ಪೂಕಿ ಕಾಲೇಜ್” ಬರಲಿದೆ.
“ರಂಗಿತರಂಗ” , “ಅವನೇ ಶ್ರೀಮನ್ನಾರಾಯಣ” ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೆ ಬರೆದಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ (ಕೆ ಜಿ ಎಫ್) ಅವರ ಸಂಕಲನ ಈ ಚಿತ್ರಕ್ಕಿದೆ.
“ಪ್ರೀಮಿಯರ್ ಪದ್ಮಿನಿ” ಖ್ಯಾತಿಯ ವಿವೇಕ್ ಸಿಂಹ “ಸ್ಪೂಕಿ ಕಾಲೇಜ್” ನ ನಾಯಕ. “ದಿಯಾ” ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ “ಕಾಮಿಡಿ ಕಿಲಾಡಿಗಳು” ಶೋನ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳಿದೆ. ಅದರಲ್ಲಿ ವಿಡಿಯೋ ಸಾಂಗ್ ಕೂಡ ಒಂದು. ಎಷ್ಟೊಂದು ವಿಡಿಯೋ ಸಾಂಗ್ಸ್ ಚಿತ್ರಗೀತೆಗಳನ್ನು ಮೀರಿಸುವಷ್ಟು ಅದ್ದೂರಿಯಾಗಿರುತ್ತದೆ.
ಯು.ಎಸ್ ನಿವಾಸಿ ಆದರ್ಶ್ ಅಯ್ಯಂಗಾರ್ ಅವರು “ಫಾರೆವರ್” ಎಂಬ ಅದ್ದೂರಿ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ತ್ರಿಕೋನ ಪ್ರೇಮಕಥೆಯ ಈ ಸುಂದರ ಪ್ರೇಮಕಾವ್ಯವನ್ನು ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಆದರ್ಶ್ ಅಯ್ಯಂಗಾರ್, ಸಿರಿ ಪ್ರಹ್ಲಾದ್, ಸುಮನ್, ರಾಜ್, ದರ್ಶನ್ ಕುಮಾರ್ ಇದರಲ್ಲಿ ನಟಿಸಿದ್ದಾರೆ.
ಕಾಲೇಜು ಜೀವನದಲ್ಲಿ ಪ್ರೀತಿ, ಪ್ರೇಮ ಸಾಮಾನ್ಯ. “ಫಾರೆವರ್” ಸಹ ಕಾಲೇಜ್ ವೊಂದರಲ್ಲಿ ನಡೆಯುವ ತ್ರಿಕೋನ ಪ್ರೇಮಕಥೆಯನ್ನಾಧರಿಸಿದೆ. ಕೆಲವು ಪ್ರೇಮ ಪ್ರಕರಣಗಳು ಮನೆಯವರಿಂದ ದೂರವಾಗುತ್ತದೆ. ಆದರೆ “ಫಾರೆವರ್” ನಲ್ಲಿ ಇದು ಯಾವುದೇ ಅಡೆತಡೆಗಳು ಇಲ್ಲದಿದ್ದರೂ, ವಿಧಿಯಿಂದ ಪ್ರೇಮಕಥೆ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ “ಫಾರೆವರ್” ಗೆ “ಪ್ರೀತಿಯಂಬ ರಹದಾರಿಯಲ್ಲಿ ವಿಧಿಯೆಂಬ ಅನಿರೀಕ್ಷಿತ ನಿಲ್ದಾಣ” ಎಂಬ ಅಡಿಬರಹವಿದೆ. ಪ್ರೇಮಿಗಳ ಭಾವನೆ ಮತ್ತು ಹಾಡಿನ ಅಂತ್ಯ ಪ್ರೀತಿಯ ನಿರೀಕ್ಷೆಯನ್ನು ಪ್ರೇಮಿಗಳಲ್ಲಿ ಸದಾ ಇರುವಂತೆ ಮಾಡುವುದು ಈ ಹಾಡಿನ ವಿಶೇಷ.
ಮೂಲತಃ ಇಲ್ಲಿಯವರಾಗಿದ್ದರೂ ಯು.ಎಸ್ ನಲ್ಲಿ ನೆಲೆಸಿರುವ ಆದರ್ಶ್ ಅಯ್ಯಂಗಾರ್ ಈ ಹಿಂದೆ ಕೂಡ ಕೆಲವು ವಿಡಿಯೋ ಸಾಂಗ್ ಗಳನ್ನು ನಿರ್ಮಿಸಿ, ನಟಿಸಿದ್ದಾರೆ. “ಫಾರೆವರ್” ಇತ್ತೀಚೆಗೆ ಬಿಡುಗಡೆಯಾಗಿದ್ದು, ನೋಡುಗರ ಹಾಗೂ ಕೇಳುಗರ ಮನ ಗೆದ್ದಿದೆ.
ಹಿಂದೆ “ಹೊಂಬಣ್ಣ” ಎಂಬ ಚಿತ್ರ ನಿರ್ದೇಶಿಸಿದ್ದ ರಕ್ಷಿತ್ ತೀರ್ಥಹಳ್ಳಿ ಈ ಹಾಡನ್ನು ನಿರ್ದೇಶಿಸಿದ್ದಾರೆ. ದರ್ಶನ್ ಕುಮಾರ್ ಸಂಗೀತ ಹಾಗೂ ಗೀತರಚನೆ, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಹಾಗೂ ಸುಧೀರ್ ಎಸ್ ಜೆ ಅವರ ಸಂಕಲನ “ಫಾರೆವರ್” ಗಿದೆ.
ಈ ವಿಡಿಯೋ ಸಾಂಗ್ ವೀಕ್ಷಿಸಿರುವ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆದರ್ಶ್ ಅಯ್ಯಂಗಾರ್ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ನೂತನ ಪ್ರತಿಭೆಗಳಿಗೆ ಅವಕಾಶ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ 777 ಚಾರ್ಲಿ ಸಿನಿಮಾ ವರ್ಲ್ಡ್ ವೈಡ್ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಇದೇ ತಿಂಗಳ 10ರಂದು ರಿಲೀಸ್ ಆಗಿದ್ದ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸಿನಿಮಾ ನೋಡಿ ಕಣ್ಣೀರಾಗಿದ್ದರು. ಮನುಷ್ಯ ಹಾಗೂ ಶ್ವಾನದ ಭಾವುಕ ಜರ್ನಿಗೆ ನಾಡದೊರೆ ಬಿಕ್ಕಿಬಿಕ್ಕಿ ಅತ್ತಿದ್ದರು. ಇದೀಗ ಈ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ರಕ್ಷಿತ್ ಶೆಟ್ಟಿ ತಮ್ಮದೇ ಪರಃವಃ ಸ್ಟುಡಿಯೋದಡಿ ನಿರ್ಮಾಣ ಮಾಡಿದ್ದ 777 ಚಾರ್ಲಿ ಸಿನಿಮಾದಲ್ಲಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಜೊತೆಗೆ ಪ್ರಾಣಿಗಳ ಸೂಕ್ಷ್ಮತೆಗಳನ್ನು ಎತ್ತಿಹಿಡಿಯುವ ಕಥಾವಸ್ತುವಿದೆ ಎಂಬ ಕಾರಣಕ್ಕಾಗಿ ತೆರೆಗೆ ವಿನಾಯಿತಿಗೆ ಸಾಕಷ್ಟು ಬೇಡಿಕೆ ಹೆಚ್ಚಿತ್ತು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆಯಿಂದ ಆರು ತಿಂಗಳ ಕಾಲ ಜಿಎಸ್ ಟಿ ವಿಧಿಸದೇ ಸಿನಿಮಾಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.
ಅಂದಹಾಗೇ ರಾಜ್ಯ ಸರ್ಕಾರ ಕಾಶ್ಮೀರಿ ಫೈಲ್ಸ್ ಬಳಿಕ ತೆರೆಗೆ ವಿನಾಯಿತಿ ನೀಡಿರುವ ಎರಡನೇ ಹಾಗೂ ಮೊದಲ ಕನ್ನಡ ಸಿನಿಮಾ 777 ಚಾರ್ಲಿ ಎಂಬ ಹೆಗ್ಗಳಿಕೆ ಇದೆ. ಕಿರಣ್ ರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ಬೇಬಿ ಶರ್ವರಿ ಸೇರಿದಂತೆ ಹಲವರು ನಟಿಸಿದ್ದಾರೆ.
“ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಸಂಪೂರ್ಣ ಮನೋರಂಜನೆಯ “ಅಬ್ಬಬ್ಬ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
“ಫ್ಯಾಮಿಲಿ ಪ್ಯಾಕ್” ಖ್ಯಾತಿಯ ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಜೋಡಿಯ ಈ ಚಿತ್ರವನ್ನು ಮೀರಾಮಾರ್ ಸಂಸ್ಥೆ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿದ್ದಾರೆ.
ಆನ್ ಆಗಸ್ಟೇನ್ ಅವರು ಈ ಕಥೆ ತಂದಾಗ, ನಾನು ಒಪ್ಪಿಕೊಳ್ಳಲು ಕಾರಣವಿದೆ. ನನಗೆ ಹದಿನೈದು ವರ್ಷದ ಮಗಳಿದ್ದಾಳೆ. ಕೊರೋನದಿಂದಾಗಿ ಅವಳ ಜೀವನದ ಪ್ರಮುಖ ಘಟ್ಟವಾದ ಎಸ್ ಎಸ್ ಎಲ್ ಸಿ ಯನ್ನು ಶಾಲೆಗೆ ಹೋಗದೆ ಮನೆಯಲ್ಲೇ ಕಲಿತಳು. ಆನಂತರ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಂಡಳು. ನನ್ನ ಮಗಳು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಎರಡು ವರ್ಷ ಶಾಲೆ ಹಾಗೂ ಕಾಲೇಜು ಜೀವನದಿಂದ ದೂರಾಗಿದ್ದರು. ಇದೆಲ್ಲಾ ನನ್ನನ್ನು ಕಾಡುತ್ತಿತ್ತು. ಆ ಸಮಯಕ್ಕೆ ಈ ಕಥೆ ಸೂಕ್ತವೆನಿಸಿ, ಚಿತ್ರ ಆರಂಭ ಮಾಡಿದ್ದೆವು. ಇದೊಂದು ಪಕ್ಕಾ ಎಂಟರ್ ಟೈನ್ ಮೆಂಟ್ ಚಿತ್ರ. ಕೊರೋನ ಮುಗಿದ ನಂತರದ ವೃತ್ತಿ ಜೀವನವನ್ನು ನಗುವಿನೊಂದಿಗೆ ಆರಂಭಿಸೋಣ ಎಂದು ಈ ಚಿತ್ರ ನಿರ್ದೇಶಿಸಿದ್ದೇನೆ. ಇದು ನೂರು ವರ್ಷ ತುಂಬಲಿರುವ ಬಾಲಕರ ಹಾಸ್ಟೆಲ್ ನಲ್ಲಿ ನಡೆಯುವ ಕಥೆ.
ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇತ್ತೀಚೆಗೆ ಟ್ರೇಲರ್ ಬುಡುಗಡೆ ಮಾಡಿದ್ದೇವೆ. ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಇಂದು ದೀಪಕ್ ಅಲೆಕ್ಸಾಂಡರ್ ಸಂಗೀತ ನೀಡಿ, ALL OK ಹಾಡಿರುವ ಟೈಟಲ್ ಸಾಂಗ್ ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿದೆ. ಡಾಲಿ ಧನಂಜಯ, ಯೋಗರಾಜ್ ಭಟ್ ಹಾಗೂ ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ಡಾಲಿ ಬರೆದಿರುವ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ಜುಲೈ ಒಂದರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಕೆ.ಎಂ .ಚೈತನ್ಯ.
ಉತ್ತಮ ಕಥೆಯುಳ್ಳ ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವುದಕ್ಕೆ ನಿರ್ಮಾಪಕರಾದ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಸಂತಸಪಟ್ಟರು.
ನಾನು ಕೆ.ಎಂ.ಚೈತನ್ಯ ಅವರು ಕಥೆ ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಏಕೆಂದರೆ ನನಗೆ ಚೈತನ್ಯ ಅವರ ನಿರ್ದೇಶನದಲ್ಲಿ ನಟಿಸಲು ಆಸೆಯಿತ್ತು. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರೊಂದಿಗೆ ಕಳೆದ ಚಿತ್ರೀಕರಣದ ಸಮಯವನ್ನು ಮರೆಯಲಾಗುತ್ತಿಲ್ಲ. ಸಂಪೂರ್ಣ ಮನೋರಂಜನೆಯ ಚಿತ್ರ ನಮ್ಮದು ಎನ್ನುತ್ತಾರೆ ನಾಯಕ ಲಿಖಿತ್ ಶೆಟ್ಟಿ.
ಬೇರೆ ಭಾಷೆಯವರಾಗಿದ್ದರೂ, ಕನ್ನಡದಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಧನ್ಯವಾದ. ನಾನು ಯಾವತ್ತೂ ಹಾಸ್ಟೆಲ್ ನಲ್ಲಿ ವಾಸ್ತವ್ಯ ಮಾಡಿಲ್ಲ. ಆದರೆ ನನ್ನನ್ನು ಬಾಯ್ಸ್ ಹಾಸ್ಟೆಲ್ ಗೆ ಕಳುಹಿಸಬಿಟ್ಟರು ಕೆ.ಎಂ.ಚೈತನ್ಯ. ಅನಿವಾರ್ಯ ಕಾರಣದಿಂದ ಆ ಹಾಸ್ಟೆಲ್ ನಲ್ಲಿ ಸಿಕ್ಕಿಹಾಕಿಕೊಂಡ ನಾನು ಹೇಗೆ ಆಚೆ ಬರುತ್ತೇನೆ ಎನ್ನವುದೇ ಕಥೆ ಎನ್ನುತ್ತಾರೆ ನಾಯಕಿ ಅಮೃತ ಅಯ್ಯಂಗಾರ್.
ನಾನು ಹಾಸ್ಟೆಲ್ ವಾರ್ಡನ್. ಫಾದರ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಹುಡಗರ ಜೊತೆ ಹುಡುಗನಾಗಿಬಿಟ್ಟಿದೆ. ವಿಭಿನ್ನ ಕಾಮಿಡಿ ಜಾನರ್ ನ ಈ ಚಿತ್ರವನ್ನು ನೋಡಿ ಆನಂದಿಸಿ ಎಂದರು ಹಿರಿಯ ನಟ ಶರತ್ ಲೋಹಿತಾಶ್ವ.
ಸಂಗೀತದ ಬಗ್ಗೆ ದೀಪಕ್ ಅಲೆಕ್ಸಾಂಡರ್ ಹಾಗೂ ಛಾಯಾಗ್ರಹಣದ ಕುರಿತು ಮನೋಹರ ಜೋಶಿ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ಅಜಯ್ ರಾಜ್, ಧನರಾಜ್ ಹಾಗೂ ತಾಂಡವರಾಮ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹರಿದಾಸ್ ಕೆ ಜಿ ಎಫ್ ಅವರ ಸಂಕಲನವಿರುವ ಈ ಚಿತ ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ಜುಲೈ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ. ವೀರೇಶ್ ಅವರಿಗೆ ಇದು ಮೊದಲ ಚಿತ್ರ.
ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ “ಕದಿಯಲೇನು” ಎಂಬ ಹಾಡನ್ನು ಕನ್ನಡ ಚಿತ್ರರಂಗದ ತಾರಾ ಜೋಡಿ, “ಲವ್ ಬರ್ಡ್ಸ್” ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಎ2 ಮ್ಯೂಸಿಕ್ ಮೂಲಕ ಹಾಡು ಬಿಡುಗಡೆಯಾಗಿದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಹಾಡಿದ್ದಾರೆ. ವಿಲೋಕ್ ರಾಜ್ ಹಾಗೂ ದಿವ್ಯ ಉರುಡುಗಅಭಿನಯಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.
ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದೆ. ವೀರ್ ಸಮರ್ಥ್ ಅವರ ಸುಮಧುರ ಸಂಗೀತ ಕೇಳುಗರ ಮನಗೆದ್ದಿದೆ.
ಈ ಹಿಂದೆ ಯೋಗರಾಜ್ ಭಟ್ ಅವರು ಬರೆದಿರುವ ಎಣ್ಣೆ ಸಾಂಗ್ ಕೂಡ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಚಿತ್ರದ ಲವ್ ಸಾಂಗ್ ಬಿಡುಗಡೆಯಾಗಿದ್ದು, ಜುಲೈ 8 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ಭುವನ್ ಅವರ ಸಹ ನಿರ್ಮಾಣವಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ.
ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.
ಈ ಚಿತ್ರದ ಮೂಲಕ ವಿಲೋಕ್ ರಾಜ್ ನಾಯಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ತುಣುಕನ್ನು ವೀಕ್ಷಿಸಿರುವ ಸಿನಿರಸಿಕರು ವಿಲೋಕ್ ರಾಜ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಭಕ್ತಿಗೀತೆಗಳು, ಜನಪದ ಗೀತೆಗಳು ಸಾಕಷ್ಟು ಬಂದಿವೆ. ಈಗ ಹೊಸತನ ಹಾಗೂ ವಿಶೇಷಗಳಿಂದ ಕೂಡಿರುವ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತಿ ಪೂರ್ಣ ಗೀತೆ ಮೈಲಾರ ಆಲ್ಬಂ ಹಾಡು ಹೊರಹೊಮ್ಮಿದ್ದು, ನೋಡಿದವರೆಲ್ಲರೂ ನಿಂತಲ್ಲೇ ಉಘೇ ಉಘೇ ಮೈಲಾರ ಸ್ವಾಮಿ ಎನ್ನುತ್ತಿದ್ದಾರೆ.
ಜನಪದ ಹಿನ್ನಲೆ ಹಾಡುಗಳನ್ನು ಮಾಡಬೇಕೆಂಬ ಆತೀವ ಆಸಕ್ತಿ, ಶ್ರದ್ಧೆಯಿಂದ ಗಾಯಕ, ಸಂಗೀತ ನಿರ್ದೇಶಕ ಪ್ರದೀಪ್ ಚಂದ್ರ ಮೈಲಾರ ಆಲ್ಬಂ ಹಾಡು ತಯಾರಿಸಿದ್ದಾರೆ. ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಎಷ್ಟು ಪ್ರಸಿದ್ಧಿಯೂ ಅದೇ ರೀತಿ ಹಾವೇರಿ ಭಾಗದಲ್ಲಿ ಮೈಲಾರ ಲಿಂಗೇಶ್ವರ ಖ್ಯಾತಿ ಪಡೆದಿದೆ. ಹೀಗಾಗಿ ಮೈಲಾರ ಸ್ವಾಮಿಯ ಜಾತ್ರೆ ಸೊಬಗನ್ನು, ಅಲ್ಲಿ ಸಂಪ್ರದಾಯ, ಭವಿಷ್ಯ ನುಡಿಯುವ ಕಾರ್ಣಿಕ, ಅಲ್ಲಿನ ಪವಾಡಗಳನ್ನು ಮುಖ್ಯವಸ್ತುವನ್ನಾಗಿರಿಸಿಕೊಂಡು ಚೆಂದದ ಆಲ್ಬಂ ಸಾಂಗ್ ರೂಪಿಸಿದ್ದಾರೆ. ಇತ್ತೀಚೆಗೆ ನಟ ರಮೇಶ್ ಅರವಿಂದ್ ಸಾಂಗ್ ವೀಕ್ಷಿಸಿ ಮೆಚ್ಚುಗೆ ಪಟ್ಟು ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಷ್ಟಪಟ್ಟು ನಟಿಸಿರುವ ಮೈಲಾರ ಹಾಡಿಗೆ ಸಂಜಯ್ ಕುಲಕರ್ಣಿ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿ ಕುಣಿಸಿರುವ, ಪ್ರದೀಪ್ ಚಂದ್ರ ಮ್ಯೂಸಿಕ್ ಹಾಗೂ ಸಾಹಿತ್ಯದ ಇಂಪು, ಚಂದ್ರು ಹಾಗೂ ರಾಜಶೇಖರ್ ಛಾಯಾಗ್ರಹಣ ತಂಪು ಹಾಡಿನ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.
ಕಮರ್ಷಿಯಲ್ ಹಾಡುಗಳಿಗಿಂತ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಆಲ್ಬಂ ಗೀತೆ ಸೃಷ್ಟಿಯ ಹಿಂದೆ ನೂರಾರು ಜನರ ಪರಿಶ್ರಮವಿದೆ. ಸರ್ಕಾರದಿಂದ ಅನುಮತಿ ಪಡೆದು ಇಡೀ ಹಾಡನ್ನು ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಅತ್ಯಂತ ವೈಭವದಿಂದ ನಡೆಯುವ ಜಾತ್ರೆಯನ್ನು ಇಡೀ ನಾಡಿಗೆ ಪರಿಚಯಿಸಲು ರೂಪಗೊಂಡಿರುವ ಮೈಲಾರ ಹಾಡಿನ ಹಿಂದಿನ ಸಾರಥಿ ನಿರ್ಮಾಪಕ ರಾಜಶೇಖರ್ ಮೇತ್ರಿ. ವೃತ್ತಿಯಲ್ಲಿ ವೈದ್ಯರಾಗಿರುವ ರಾಜಶೇಖರ್ ಹೊಸ ಪ್ರತಿಭೆ ಪ್ರದೀಪ್ ಚಂದ್ರ ಅವರನ್ನು ಪ್ರೋತ್ಸಾಹಿಸಿ ಕನ್ನಡ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ.
ಸಾಕಷ್ಟು ಲೈವ್ ವಾದ್ಯಗಳಿಂದ, ಲಕ್ಷಾಂತರ ಜನರ ನಡುವೆ ಚಿತ್ರೀಕರಣವಾಗಿರುವ ಹಾಡಿನಲ್ಲಿ ಸಂಚಾರಿ ವಿಜಯ್ ಜೊತೆಗೆ ಪ್ರದೀಪ್ ಚಂದ್ರ ಹಾಗೂ ಯಶಸ್ವಿನಿ ನಟಿಸಿದ್ದಾರೆ. ಇಂತಹ ಅದ್ಬುತ ಆಲ್ಬಂ ಹಾಡು ನಿರ್ಮಾಣ ಮಾಡಲು ಸಾಹಸ ಮಾಡಿದ ನಿರ್ಮಾಪಕ ರಾಜಶೇಖರ್ ಹಾಗೂ ಇಡೀ ತಂಡಕ್ಕೊಂದು ಸಲಾಂ ಎಂಬುದು ನಿರ್ದೇಶಕ ಹಾಗು ಸಂಗೀತ ನಿರ್ದೇಶಕರ ಮಾತು.
ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಅದ್ಧೂರಿ ಯಶಸ್ಸು ಕಂಡ ” ಅಧ್ಯಕ್ಷ ” ಚಿತ್ರದಲ್ಲಿ “ಉಪಾಧ್ಯಕ್ಷ” ನಾಗಿ ಜನಮನಸೂರೆಗೊಂಡಿದ್ದವರು ಚಿಕ್ಕಣ್ಣ. ಈಗ “ಉಪಾಧ್ಯಕ್ಷ” ಎಂಬ ಹೆಸರಿನಿಂದಲೇ ಸಿನಿಮಾ ಆರಂಭವಾಗಿದ್ದು, ಚಿಕ್ಕಣ್ಣ ನಾಯಕರಾಗಿ ನಟಿಸುತ್ತಿದ್ದಾರೆ. ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಪ್ರಸಿದ್ದ ಬನಶಂಕರಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭ ಫಲಕ ತೋರಿದರು. ಸಾಧುಕೋಕಿಲ ಕ್ಯಾಮರಾ ಚಾಲನೆ ಮಾಡಿದರು. ಚಿತ್ರರಂಗದ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಒಳ್ಳೆಯ ದಿನ ಬೆಳಗ್ಗಿನ ಸುಮುಹೂರ್ತದಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಚಿತ್ರ ಆರಂಭಿಸಿದ್ದೇವೆ. “ಉಪಾಧ್ಯಕ್ಷ”, “ಅಧ್ಯಕ್ಷ” ಚಿತ್ರದ ಮುಂದುವರಿದ ಭಾಗ ಎನ್ನಬಹುದು. ಆ ಚಿತ್ರದಲ್ಲಿ ಎಲ್ಲಿ ಕಥೆ ನಿಂತಿತ್ತೋ, ಅಲ್ಲಿಂದ ಈ ಚಿತ್ರದ ಕಥೆ ಆರಂಭವಾಗುತ್ತದೆ. ಮೊದಲ ಸನ್ನಿವೇಶದಿಂದ ಕ್ಲೈಮ್ಯಾಕ್ಸ್ ತನಕ ಜನರನ್ನು ನಕ್ಕುನಲಿಸುವ ಸಿನಿಮಾ ಇದು. ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. ಚಿಕ್ಕಣ್ಣ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಮಲೈಕ ಈ ಚಿತ್ರದ ನಾಯಕಿ. ನಾಳೆಯಿಂದ ಮೈಸೂರಿನಲ್ಲಿ ನಿರ್ಮಿಸಲಾಗಿರುವ ಮನೆಯ ಸೆಟ್ ನಲ್ಲಿ ಮೂವತ್ತೆರಡು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
ಆನಂತರ ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ. ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. “ಅಧ್ಯಕ್ಷ” ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ಸಾಧುಕೋಕಿಲ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರು ನಿರ್ದೇಶಕ ಅನಿಲ್ ಕುಮಾರ್.
ನಾನು “ಹೆಬ್ಬುಲಿ”, ” ರಾಬರ್ಟ್ ” ಹಾಗೂ “ಮದಗಜ” ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಆದರೆ ನನ್ನ ಹೆಂಡತಿ ಹೆಸರಿನಲ್ಲಿ “ಒಂದಲ್ಲಾ ಎರಡಲ್ಲಾ” ಚಿತ್ರ ನಿರ್ಮಾಣ ಮಾಡಿದೆ. ಆ ಚಿತ್ರಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂತು. “ಉಪಾಧ್ಯಕ್ಷ” ಚಿತ್ರಕ್ಕೂ ನನ್ನ ಹೆಂಡತಿ ಸ್ಮಿತ ಅವರೆ ನಿರ್ಮಾಪಕರು. “ಉಪಾಧ್ಯಕ್ಷ” ಚಿತ್ರದ ಕಥೆ ಚೆನ್ನಾಗಿದೆ. ಗೆಲುತ್ತದೆ ಎಂಬ ವಿಶ್ವಾಸವಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.
ನನಗೆ “ರಾಜಹುಲಿ”, ” ಅಧ್ಯಕ್ಷ ” ಚಿತ್ರಗಳ ನಂತರ ಹೀರೋ ಆಗಲು ಸಾಕಷ್ಟು ಅವಕಾಶಗಳು ಬಂತು. ಆದರೆ ನಾನು ಒಪ್ಪಿರಲಿಲ್ಲ. ಈ ಚಿತ್ರದ ಕೇಳಿ ಒಪ್ಪಿಕೊಂಡೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಚಿಕ್ಕ ಬಜೆಟ್ ನಲ್ಲಿ ಮುಗಿಸುತ್ತಾರೆ. ಆದರೆ ನಮ್ಮ ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರಿಗೆ ಧನ್ಯವಾದ. ಅನಿಲ್ ಕುಮಾರ್ ಬಹಳ ದಿನಗಳ ಪರಿಚಯ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲುವುದು ಖಂಡಿತಾ. ಇಷ್ಟು ದಿನ ಬೇಕಾದಷ್ಟು ಪ್ರೋತ್ಸಾಹ ನೀಡಿದ್ದೀರಿ. ಮುಂದೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದರು ಚಿಕ್ಜಣ್ಣ.
ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನನಗೆ ಇದು ಮೊದಲ ಚಿತ್ರ. ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಮಲೈಕ ತಿಳಿಸಿದರು.
ನಟ ಧರ್ಮಣ್ಣ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ “ಉಪಾಧ್ಯಕ್ಷ” ಚಿತ್ರದ ಬಗ್ಗೆ ಮಾತನಾಡಿದರು.