ಅಬ್ಬಬ್ಬ ಟ್ರೇಲರ್ ಸಖತ್!

“ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಸಂಪೂರ್ಣ ಮನೋರಂಜನೆಯ “ಅಬ್ಬಬ್ಬ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

“ಫ್ಯಾಮಿಲಿ ಪ್ಯಾಕ್” ಖ್ಯಾತಿಯ ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಜೋಡಿಯ ಈ ಚಿತ್ರವನ್ನು ಮೀರಾಮಾರ್ ಸಂಸ್ಥೆ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿದ್ದಾರೆ.

ಆನ್ ಆಗಸ್ಟೇನ್ ಅವರು ಈ ಕಥೆ ತಂದಾಗ, ನಾನು ಒಪ್ಪಿಕೊಳ್ಳಲು‌ ಕಾರಣವಿದೆ. ನನಗೆ ಹದಿನೈದು ವರ್ಷದ ಮಗಳಿದ್ದಾಳೆ. ಕೊರೋನದಿಂದಾಗಿ ಅವಳ ಜೀವನದ ಪ್ರಮುಖ ಘಟ್ಟವಾದ ಎಸ್ ಎಸ್ ಎಲ್ ಸಿ ಯನ್ನು ಶಾಲೆಗೆ ಹೋಗದೆ ಮನೆಯಲ್ಲೇ ಕಲಿತಳು. ಆನಂತರ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಂಡಳು. ನನ್ನ ಮಗಳು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಎರಡು ವರ್ಷ ಶಾಲೆ ಹಾಗೂ‌ ಕಾಲೇಜು ಜೀವನದಿಂದ ದೂರಾಗಿದ್ದರು. ಇದೆಲ್ಲಾ ನನ್ನನ್ನು ಕಾಡುತ್ತಿತ್ತು. ಆ ಸಮಯಕ್ಕೆ ಈ ಕಥೆ ಸೂಕ್ತವೆನಿಸಿ, ಚಿತ್ರ ಆರಂಭ ಮಾಡಿದ್ದೆವು. ಇದೊಂದು ಪಕ್ಕಾ ಎಂಟರ್ ಟೈನ್ ಮೆಂಟ್ ಚಿತ್ರ. ಕೊರೋನ ಮುಗಿದ ನಂತರದ ವೃತ್ತಿ ಜೀವನವನ್ನು ನಗುವಿನೊಂದಿಗೆ ಆರಂಭಿಸೋಣ ಎಂದು ಈ ಚಿತ್ರ‌ ನಿರ್ದೇಶಿಸಿದ್ದೇನೆ. ಇದು ನೂರು ವರ್ಷ ತುಂಬಲಿರುವ ಬಾಲಕರ ಹಾಸ್ಟೆಲ್ ನಲ್ಲಿ ನಡೆಯುವ ಕಥೆ‌.

ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇತ್ತೀಚೆಗೆ ಟ್ರೇಲರ್ ಬುಡುಗಡೆ ಮಾಡಿದ್ದೇವೆ. ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಇಂದು ದೀಪಕ್ ಅಲೆಕ್ಸಾಂಡರ್ ಸಂಗೀತ ನೀಡಿ, ALL OK ಹಾಡಿರುವ ಟೈಟಲ್ ಸಾಂಗ್ ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿದೆ. ಡಾಲಿ ಧನಂಜಯ, ಯೋಗರಾಜ್ ಭಟ್ ಹಾಗೂ ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ಡಾಲಿ ಬರೆದಿರುವ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದಾರೆ. ಜುಲೈ ಒಂದರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಕೆ.ಎಂ .ಚೈತನ್ಯ.

ಉತ್ತಮ ಕಥೆಯುಳ್ಳ ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವುದಕ್ಕೆ ನಿರ್ಮಾಪಕರಾದ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಸಂತಸಪಟ್ಟರು.

ನಾನು ಕೆ.ಎಂ.ಚೈತನ್ಯ ಅವರು ಕಥೆ ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಏಕೆಂದರೆ ನನಗೆ ಚೈತನ್ಯ ಅವರ ನಿರ್ದೇಶನದಲ್ಲಿ ನಟಿಸಲು ಆಸೆಯಿತ್ತು. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರೊಂದಿಗೆ ಕಳೆದ ಚಿತ್ರೀಕರಣದ ಸಮಯವನ್ನು ಮರೆಯಲಾಗುತ್ತಿಲ್ಲ. ಸಂಪೂರ್ಣ ಮನೋರಂಜನೆಯ ಚಿತ್ರ ನಮ್ಮದು ಎನ್ನುತ್ತಾರೆ ನಾಯಕ ಲಿಖಿತ್ ಶೆಟ್ಟಿ.

ಬೇರೆ ಭಾಷೆಯವರಾಗಿದ್ದರೂ, ಕನ್ನಡದಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಧನ್ಯವಾದ. ನಾನು ಯಾವತ್ತೂ ಹಾಸ್ಟೆಲ್ ನಲ್ಲಿ ವಾಸ್ತವ್ಯ ಮಾಡಿಲ್ಲ. ಆದರೆ ನನ್ನನ್ನು ಬಾಯ್ಸ್ ಹಾಸ್ಟೆಲ್ ಗೆ ಕಳುಹಿಸಬಿಟ್ಟರು ಕೆ.ಎಂ.ಚೈತನ್ಯ. ಅನಿವಾರ್ಯ ಕಾರಣದಿಂದ ಆ ಹಾಸ್ಟೆಲ್ ನಲ್ಲಿ ಸಿಕ್ಕಿಹಾಕಿಕೊಂಡ ನಾನು ಹೇಗೆ ಆಚೆ ಬರುತ್ತೇನೆ ಎನ್ನವುದೇ ಕಥೆ ಎನ್ನುತ್ತಾರೆ ನಾಯಕಿ ಅಮೃತ ಅಯ್ಯಂಗಾರ್.

ನಾನು ಹಾಸ್ಟೆಲ್ ವಾರ್ಡನ್. ಫಾದರ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಹುಡಗರ ಜೊತೆ ಹುಡುಗನಾಗಿಬಿಟ್ಟಿದೆ. ವಿಭಿನ್ನ ಕಾಮಿಡಿ ಜಾನರ್ ನ ಈ ಚಿತ್ರವನ್ನು ನೋಡಿ ಆನಂದಿಸಿ ಎಂದರು ಹಿರಿಯ ನಟ ಶರತ್ ಲೋಹಿತಾಶ್ವ.

ಸಂಗೀತದ ಬಗ್ಗೆ ದೀಪಕ್ ಅಲೆಕ್ಸಾಂಡರ್ ಹಾಗೂ ಛಾಯಾಗ್ರಹಣದ ಕುರಿತು ಮನೋಹರ ಜೋಶಿ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ಅಜಯ್ ರಾಜ್, ಧನರಾಜ್ ಹಾಗೂ ತಾಂಡವರಾಮ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹರಿದಾಸ್ ಕೆ ಜಿ ಎಫ್ ಅವರ ಸಂಕಲನವಿರುವ ಈ ಚಿತ ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ಜುಲೈ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Related Posts

error: Content is protected !!