ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ 777 ಚಾರ್ಲಿ ಸಿನಿಮಾ ವರ್ಲ್ಡ್ ವೈಡ್ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಇದೇ ತಿಂಗಳ 10ರಂದು ರಿಲೀಸ್ ಆಗಿದ್ದ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ
ಸಿನಿಮಾ ನೋಡಿ ಕಣ್ಣೀರಾಗಿದ್ದರು. ಮನುಷ್ಯ ಹಾಗೂ ಶ್ವಾನದ ಭಾವುಕ ಜರ್ನಿಗೆ ನಾಡದೊರೆ ಬಿಕ್ಕಿಬಿಕ್ಕಿ ಅತ್ತಿದ್ದರು. ಇದೀಗ ಈ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ರಕ್ಷಿತ್ ಶೆಟ್ಟಿ ತಮ್ಮದೇ ಪರಃವಃ ಸ್ಟುಡಿಯೋದಡಿ ನಿರ್ಮಾಣ ಮಾಡಿದ್ದ 777 ಚಾರ್ಲಿ ಸಿನಿಮಾದಲ್ಲಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಜೊತೆಗೆ ಪ್ರಾಣಿಗಳ ಸೂಕ್ಷ್ಮತೆಗಳನ್ನು ಎತ್ತಿಹಿಡಿಯುವ ಕಥಾವಸ್ತುವಿದೆ ಎಂಬ ಕಾರಣಕ್ಕಾಗಿ ತೆರೆಗೆ ವಿನಾಯಿತಿಗೆ ಸಾಕಷ್ಟು ಬೇಡಿಕೆ ಹೆಚ್ಚಿತ್ತು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆಯಿಂದ ಆರು ತಿಂಗಳ ಕಾಲ ಜಿಎಸ್ ಟಿ ವಿಧಿಸದೇ ಸಿನಿಮಾಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.
ಅಂದಹಾಗೇ ರಾಜ್ಯ ಸರ್ಕಾರ ಕಾಶ್ಮೀರಿ ಫೈಲ್ಸ್ ಬಳಿಕ ತೆರೆಗೆ ವಿನಾಯಿತಿ ನೀಡಿರುವ ಎರಡನೇ ಹಾಗೂ ಮೊದಲ ಕನ್ನಡ ಸಿನಿಮಾ 777 ಚಾರ್ಲಿ ಎಂಬ ಹೆಗ್ಗಳಿಕೆ ಇದೆ. ಕಿರಣ್ ರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ಬೇಬಿ ಶರ್ವರಿ ಸೇರಿದಂತೆ ಹಲವರು ನಟಿಸಿದ್ದಾರೆ.