Categories
ಸಿನಿ ಸುದ್ದಿ

ತ್ರಿಕೋನ ಎಂಬ ವಿಶೇಷ ಸಿನಿಮಾ: ಏಪ್ರಿಲ್‌ 1ಕ್ಕೆ ರಿಲೀಸ್- ಸುಚೇಂದ್ರ ಪ್ರಸಾದ್‌ ಚಿತ್ರದ ರಾಯಭಾರಿ !

ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಕನ್ನಡ ಚಿತ್ರರಂಗ ಮೆಲ್ಲನೆ ರಂಗೇರುತ್ತಿದೆ. ಮತ್ತದೇ ವೈಭವಕ್ಕೆ ಮರಳುತ್ತಿದೆ. ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ “ತ್ರಿಕೋನ” ಸಿನಿಮಾ ಕೂಡ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಅಂದಹಾಗೆ, ಏಪ್ರಿಲ್ 1ರಂದು ಚಿತ್ರ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕೆ ಚಂದ್ರಕಾಂತ್‌ ನಿರ್ದೇಶಕರು. ಈ ಹಿಂದೆ ಇವರು 143 ಎಂಬ ವಿಭಿನ್ನ ಎನಿಸುವ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆ ಸಿನಿಮಾ ನಂತರ ನಿರ್ದೇಶಿಸುತ್ತಿರುವ ಚಿತ್ರವಿದು. ಇನ್ನು, ರಾಜಶೇಖರ್ ಈ ಚಿತ್ರದ ನಿರ್ಮಾಪಕರು. ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕರು, “ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. ಆ ಮನಸ್ಸನ್ನು ನಾವು ಕ್ರೀಡಾ ಮೈದಾನ ಎನ್ನಬಹುದು. ಏಕೆಂದರೆ ಮನಸ್ಸಿನಲ್ಲಿ ಮೋಸ, ದ್ವೇಷ, ಅಸೂಯೆ, ಸೇಡು, ದುರಾಸೆ ಎಂಬ ಕ್ರೀಡೆಗಳು ನಡೆಯುತ್ತಲೇ ಇರುತ್ತದೆ. ಇದರಲ್ಲಿ ಅಹಂ, ಶಕ್ತಿ ಹಾಗೂ ತಾಳ್ಮೆ ಎಂಬ ಸ್ಪರ್ಧಿಗಳು ಕೂಡ ಇದ್ದಾರೆ. ಈ ಮೂವರಲ್ಲಿ ಗೆಲವು ಯಾರಿಗೆ? ಅನ್ನೋದೇ ಸಿನಿಮಾ ಎಂದು ವಿವರಿಸುತ್ತಾರೆ ನಿರ್ದೇಶಕರು.

ನಿರ್ಮಾಪಕ ರಾಜಶೇಖರ್‌ ಮಾತನಾಡಿ, “ನಾನು ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಕಥೆ ನಾನೇ ಬರೆದಿದ್ದೇನೆ. ಬೇರೆ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು, ಬೇರೆ ನಿರ್ದೇಶಕರೆ ಚಿತ್ರ ನಿರ್ದೇಶಿಸಲಿದ್ದಾರೆ. ಏಕೆಂದರೆ ಚಂದ್ರಕಾಂತ್ ಸೇರಿದಂತೆ ಬೇರೆ ನಿರ್ದೇಶಕರಿಂದ ನಾನು ಸಾಕಷ್ಟು ತಿಳಿಯುವುದಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಪ್ರಚಾರ ರಾಯಭಾರಿಯಾಗಿ ಖ್ಯಾತ ನಟ ಸುಚೀಂದ್ರ ಪ್ರಸಾದ್ ಅವರು ಇರುವುದು ವಿಶೇಷ. ಭಾಷಾ ಅವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ವಿವರ ಕೊಟ್ಟರು ನಿರ್ಮಾಪಕ ರಾಜಶೇಖರ್.

ಇನ್ನು, ಚಿತ್ರದಲ್ಲಿ ಸುರೇಶ್‌ ಹೆಬ್ಳೀಕರ್‌ ಹೈಲೈಟ್.‌ ಅವರು ತಮ್ಮ ಪಾತ್ರ ಕುರಿತು ಹೇಳಿಕೊಂಡರು. ವಿತರಕ ಭಾಷಾ ಸಿನಿಮಾ ವಿತರಣೆ ಬಗ್ಗೆ ಮಾತಾಡಿದರು. ನಾನು ಹಾಗೂ ನಿರ್ಮಾಪಕ ರಾಜಶೇಖರ್ ಸಹಪಾಠಿಗಳು. ತ್ರಿಕೋನ ಚಿತ್ರದ ರಾಯಭಾರಿಯಾಗಲು ಕೇಳಿದರು.
ಚಿತ್ರ ನೋಡಿದೆ. ಚೆನ್ನಾಗಿದೆ. ರಾಯಭಾರಿಯಾಗಲು ಒಪ್ಪಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಸುಚೀಂದ್ರ ಪ್ರಸಾದ್.

ಚಿತ್ರದಲ್ಲಿ ನಟಿಸಿರುವ ರಾಜವೀರ್ ಹಾಗೂ ಮಾರುತೇಶ್ ಪಾತ್ರ ಪರಿಚಯ ಮಾಡಿಕೊಟ್ಟರು. ಪೊಲೀಸ್ ಪ್ರಕಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತವಿದೆ. ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ.

ಚಿತ್ರದಲ್ಲಿ ಲಕ್ಷ್ಮೀ, ಅಚ್ಯುತಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್‌ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಫಸ್ಟ್ ಸಿನಿಮಾ; ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಸಾರಥ್ಯದಲ್ಲಿ ವರ್ಣಪಟಲ…

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್‌ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ನೈಜ‌ ಘಟನೆ ಆಧರಿತ ವರ್ಣಪಟಲ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಎಲ್ಲರ ಅಮ್ಮಂದಿರ ಥರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ .. ಎಂಬ ಡೈಲಾಗ್ ನಿಂದ ಶುರುವಾಗುವ ಟ್ರೇಲರ್ ನಲ್ಲಿ ಪ್ರೀತಿ, ಮಮತೆ, ನೋವು ಎಲ್ಲವನ್ನು ಒಳಗೊಂಡಿದೆ.


ನಿತ್ಯ ತಾನು ಪ್ರೀತಿಸಿದ ಹುಡುಗ ಮೈಕಲ್ ನನ್ನು ಮದುವೆ ಆಗ್ತಾಳೆ . ಮದುವೆ ಬಳಿಕ ಹೆಣ್ಣು ಮಗುವಿಗೆ ನಿತ್ಯ ತಾಯಿ ಆಗ್ತಾಳೆ. ಆ ಮಗುವೇ ಮೈನಾ. ಆದ್ರೆ ಎಲ್ಲಾ ಸರಿಯಿದ್ದ ನಿತ್ಯಾಳ ಬದುಕಲ್ಲಿ ಮೈನಾ ಅನ್ನೋ ಮಗಳಿಂದ ಜೀವನವೇ ಬದಲಾಗಿ ಹೋಗುತ್ತೆ.. ಮೈನಾ ಆಟಿಸಂ ಅನ್ನೋ ಖಾಯಿಲೆಯಿಂದ ಬಳಲುತ್ತಿರುತ್ತಾಳೆ. ಇದರಿಂದ ನಿತ್ಯಾ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಆ ಖಾಯಿಲೆಯಿಂದ ಮೈನಾಳನ್ನು ನಿತ್ಯಾ ಹೇಗೆ ಹೊರ ತರುತ್ತಾರೆ ಅನ್ನೋದು ಚಿತ್ರಕಥೆ.

ಮಕ್ಕಳನ್ನು ಹೆಚ್ಚಾಗಿ ಕಾಡುವ ಆಟಿಸಂ ಸಮಸ್ಯೆ ಕುರಿತು ನಿರ್ದೇಶಕರು ಬೆಳಕು ಚೆಲ್ಲಿದ್ದಾರೆ. ಜೊತೆಗೆ ತಾಯಿ ಮಗುವಿನ ಬಾಂಧವ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿತ್ಯಾ ಪಾತ್ರಕ್ಕೆ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ನಾಯಕಿಯಾಗಿ ನಟಿಸಿದ್ದು, ತುಳು ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ಅನೂಪ್ ಸಾಗರ್ ನಾಯಕನಾಗಿ ನಟಿಸಿದ್ದಾರೆ. ಖ್ಯಾತ ಬಹುಭಾಷಾ ನಟಿ ಸುಹಾಸಿನಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಧನಿಕ ಹೆಗ್ಡೆ, ಚೇತನ್ ರೈ ಮಾಣಿ, ಇಳಾ ವಿಟ್ಲಾ, ಅರವಿಂದ್ ರಾವ್‌ ಹಾಗೂ ಶ್ರೀಕಾಂತ್ ಹೆಬ್ಳಿಕರ್ ಮೊದಲಾದವರು ನಟಿಸಿದ್ದಾರೆ.

ವರ್ಣಪಟಲ ಸಿನಿಮಾದ ಚಿತ್ರಕಥೆ ಹಾಗೂ ನಿರ್ಮಾಣವನ್ನು ಡಾ. ಸರಸ್ವತಿ ಹೊಸದುರ್ಗ, ಕವಿತಾ ಸಂತೋಷ್ ಹೊತ್ತಿದ್ದು. ಈ ಚಿತ್ರಕ್ಕೆ ಕಾರ್ತಿಕ್ ಸರ್ಗೂರು ಸಾಹಿತ್ಯವಿದೆ. ಕಿರುತೆರೆ ನಿರ್ದೇಶಕ ವಿನು ಬಳಂಜ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ದಕ್ಷಿಣ ಕನ್ನಡದ ಮಡಂತ್ಯಾರು, ಮಂಗಳೂರು, ಮಡಿಕೇರಿ, ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

ಕನ್ನಡದಲ್ಲಿ ಆಟಿಸಂ ಕುರಿತು ತಯಾರಾಗಿರುವ ಮೊದಲ ಸಿನಿಮಾ ವರ್ಣಪಟಲ. ಕಮರ್ಷಿಯಲ್ ಸಿನಿಮಾಗಳ ನಡುವೆ ಕಥೆಯನ್ನೇ ನಾಯಕರನ್ನಾಗಿಸಿ, ಬೇರೆ ಭಾಷೆಗಳ ಕಥೆಗಳ ಜೊತೆಗೆ ಪೈಪೋಟಿ ಕೊಂಡಂತೆ ಇರುವ, ಅಟಿಸಂ ಮಕ್ಕಳ ತಂದೆತಾಯಿಗಳಿಗೆ ಒಂದು ಬಾಹ್ಯ ಬೆಂಬಲವನ್ನು ಕೊಡುವ ಉದ್ದೇಶ ಈ ವರ್ಣಪಟಲ ಸಿನಿಮಾದ ಉದ್ದೇಶವಾಗಿದ್ದು , ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಅನ್ನುವುದು ವಿಶೇಷ.

Categories
ಸಿನಿ ಸುದ್ದಿ

ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ಗೆ ಧಾರ್ಮಿಕ ರಂಗು; ಸುತ್ತೂರು ಶ್ರೀಮಠ ಗುರು ಪರಂಪರೆ ಅನಿಮೇಷನ್‌ ಚಿತ್ರ ಪ್ರದರ್ಶನ


ಅಂತಾರಾಷ್ಟ್ರೀಯ ಪಿಯಾಫೆ ಮಾನ್ಯತೆ ಪಡೆದ ಹಿರಿಮೆಯ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಇದೀಗ ಧರ್ಮಗುರುಗಳ ಸಮಕ್ಷಮದ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂತಾರಾಷ್ಟ್ರೀಯ ಚಿತ್ರೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಮುಖ ಧರ್ಮಪೀಠದ ಜಗದ್ಗುರುಗಳು ಸಿನಿಮೋತ್ಸವದಲ್ಲಿ ಭಾಗಿಯಾಗುವ ಮೂಲಕ ಹೊಸಯುಗವೊಂದಕ್ಕೆ ನಾಂದಿ ಹಾಡಿದೆ.
ಮೈಸೂರಿನ ಪ್ರತಿಷ್ಠಿತ ಸುತ್ತೂರು ಶ್ರೀಮಠದ ಸಾವಿರ ವರ್ಷಗಳ ಇತಿಹಾಸವನ್ನು ಕಟ್ಟಿಕೊಟ್ಟಿರುವ `ಸುತ್ತೂರು ಶ್ರೀಮಠ ಗುರು ಪರಂಪರೆ’ ಆನಿಮೇಷನ್‌ ಚಿತ್ರ ಪ್ರದರ್ಶನಕ್ಕೆ ಮಂಗಳವಾರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಕಣ್ಣಾಯಿತು.


ಅಮೆರಿಕ, ಜಪಾನ್‌, ಇಟಲಿಯಲ್ಲಿ ಪ್ರದರ್ಶನಗೊಂಡು ಬಹುಮಾನಗಳಿಗೆ ಸತ್ಪಾತ್ರವಾಗಿರುವ ಈ ವಿಶಿಷ್ಟ ಆನಿಮೇಷನ್‌ ಚಿತ್ರ ಪ್ರದರ್ಶನದಲ್ಲಿ ಸುತ್ತೂರು ಶ್ರೀಮಠದ ಜಗದ್ಗುರು ಶಿವಮೂರ್ತಿ ದೇಶಿಕೇಂದ್ರ ಸಾಮೀಜಿಗಳು, ತುಮಕೂರಿನ ಸಿದ್ಧ ಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಹಾಗೂ ಬೆಂಗಳೂರಿನ ಹಲವು ಮಠಗಳ ಧಾರ್ಮಿಕ ಗುರುಗಳು ಪಾಲ್ಗೊಂಡು ಚಿತ್ರವೀಕ್ಷಿಸುವ ಮೂಲಕ ಹೊಸ ದಾರಿಗೆ ಮುನ್ನುಡಿ ಬರೆದರು.
ಈ ಸಂದರ್ಭದಲ್ಲಿ ಸುತ್ತೂರಿನ ಶಿವಮೂರ್ತಿ ದೇಶೀಕೇಂದ್ರ ಸಾಮೀಜಿಗಳು ಮಾತನಾಡಿ, ʼಶ್ರೀಮಠದ ಧಾರ್ಮಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ತೋರ್ಪಡಿಸುವುದು ಸುಲಭದ ಕೆಲಸವಲ್ಲ. ಅದನ್ನು ನಿರ್ದೇಶಕರಾದಿಯಾಗಿ ಚಿತ್ರತಂಡ ನಾಲ್ಕು ವರ್ಷಗಳ ಸತತ ಪರಿಶ್ರಮದ ಫಲವಾಗಿ ಮಾಡಿಕೊಟ್ಟಿದೆ. ವಿದೇಶಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳಿಗೆ ಪಾತ್ರವಾದ ಈ ಚಿತ್ರ ಭಾರತದಲ್ಲೇ ಇದೇ ಮೊದಲ ಬಾರಿಗೆ ಅದರಲ್ಲೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿರುವುದು ಸಂತಸದ ಸಂಗತಿ. ಅದಕ್ಕಾಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ತುಮಕೂರು ಸಿದ್ಧಗಂಗಾ ಮಠದ ಶ್ರೀಗಳು ಮಾತನಾಡಿ, ಈ ಆನಿಮೇಷನ್‌ ಚಿತ್ರವು ಕೇವಲ ಸುತ್ತೂರು ಮಠದ ಪರಂಪರೆಯ ಚಿತ್ರಣ ಮಾತ್ರವಾಗಿರದೆ ಕನ್ನಡ ನಾಡಿನ ಶರಣ ಸಂಸ್ಕೃತಿ, ದಾಸೋಹ ಸಂಸ್ಕೃತಿ, ಸಹಬಾಳೆ ಸಂಸ್ಕೃತಿಯ ದರ್ಶನವಾಗಿದೆ. ಯುದ್ಧದ ಕರಿನೆರಳು ಎಲ್ಲರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಶಾಂತಿ, ಸೌಹಾರ್ದತೆ ಸಾರುವ ಇಂತಹ ಚಿತ್ರಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ಸುನೀಲ್‌ ಪುರಾಣಿಕ್‌ ಅಂತಹ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಅಂತಾರಾಷ್ಟ್ರೀಯ ಚಿತ್ರೋತ್ಸವ ವೇದಿಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.


ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಮಾತನಾಡಿ, ಚಿತ್ರೋತ್ಸವಕ್ಕೆ ಹೊಸದೊಂದು ಆಯಾಮ ಸಿಕ್ಕಂತಾಗಿದ್ದು ಇದು ಇತಿಹಾಸದಲ್ಲೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಚಿತ್ರ ಪ್ರದರ್ಶನದಲ್ಲಿ ಜಾನಪದ ತಜ್ಞ ಗೊ.ರು.ಚನ್ನಬಸಪ್ಪ, ಹಿರಿಯ ನಿರ್ಮಾಪಕ ಎಸ್‌.ಎ.ಚೆನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜಯರಾಜ್‌, ಆನಿಮೇಷನ್‌ ಚಿತ್ರದ ನಿರ್ದೇಶಕ ಅಬ್ದುಲ್‌ ಕರೀಂ, ಹಲವು ಹಿರಿಯ ಐಎಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳು ಸೇರಿದಂತೆ ಅಪಾರ ಜನಸ್ತೋಮ ಪಾಲ್ಗೊಂಡು ಧಾರ್ಮಿಕ ಸಂಭ್ರಮದಲ್ಲಿ ಮಿಂದೆದ್ದಿದ್ದು ವಿಶೇಷವಾಗಿತ್ತು.

Categories
ಸಿನಿ ಸುದ್ದಿ

ಈ ಬಾರಿ ಜನ್ಮದಿನ ಆಚರಿಸಲ್ಲ; ಅದಕ್ಕೆ ಮನಸ್ಸೂ ಇಲ್ಲ! ಜಗ್ಗೇಶ್‌ ಭಾವುಕ ಟ್ವೀಟ್…

ಮಾರ್ಚ್‌ 17 ಕನ್ನಡ ಚಿತ್ರರಂಗದ ಇಬ್ಬರು ನಟರ ಜನ್ಮದಿನ. ಹೌದು ಅಂದು ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್‌ ಹಾಗು‌ ನವರಸ ನಾಯಕ ಜಗ್ಗೇಶ್‌ ಅವರ ಹುಟ್ಟುಹಬ್ಬ. ಕಳೆದ ಎರಡು ವರ್ಷಗಳಿಂದಲೂ ಈ ಇಬ್ಬರು ನಟರು ತಮ್ಮ ಹುಟ್ಟುಹಬ್ಬನ್ನು ಗ್ರ್ಯಾಂಡ್‌ ಆಗಿ ಆಚರಿಸಿಕೊಂಡಿಲ್ಲ. ಅದಕ್ಕೆ ಕಾರಣ, ಕೊರೊನಾ. ಈ ವರ್ಷ ಭರ್ಜರಿಯಾಗಿಯೇ ತಮ್ಮ ಹೀರೋಗಳ ಹುಟ್ಟುಹಬ್ಬವನ್ನು ಆಚರಿಸಬೇಕು ಅಂತ ಫ್ಯಾನ್ಸ್‌ ಕೂಡ ತಯಾರಿ ನಡೆಸಿದ್ದರು. ಆದರೆ, ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯ ನೋವು ಇನ್ನೂ ಹೋಗಿಲ್ಲ. ಆದರೂ ಅಪ್ಪು ಫ್ಯಾನ್ಸ್‌ ಅವರ ಹುಟ್ಟುಹಬ್ಬವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಆದರೆ, ಅಂದು ತಮ್ಮ ಜನ್ಮದಿನವನ್ನು ಆಚರಿಸದಿರಲು ಸ್ವತಃ ಜಗ್ಗೇಶ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಹೌದು, ಮಾರ್ಚ್‌ 17 ರಂದು ಜಗ್ಗೇಶ್‌ ಅವರ ಜನ್ಮದಿನ. ಅಂದು ಅವರಿಗೆ 59 ನೇ ಹುಟ್ಟುಹಬ್ಬ. ಆದರೆ, ಜಗ್ಗೇಶ್‌ ಅವರು ಈ ಬಾರಿ ಆಚರಿಸದಿರಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ, ಕುರಿತು ಅವರೇ ಟ್ವೀಟ್‌ ಕೂಡ ಮಾಡಿದ್ದಾರೆ.‌


“ಈ ಬಾರಿ ನನ್ನ 59 ನೇ ಹುಟ್ಟುಹಬ್ಬವನ್ನುಆಚರಿಸುವುದಿಲ್ಲ! ಹಾಗು ಮನಸ್ಸು ಇಲ್ಲ! ಕಾರಣ, ಪ್ರತಿ ಮಾರ್ಚ್‌ 17ಕ್ಕೆ ತಪ್ಪದೆ ಬರುತ್ತಿದ್ದ ಪುನೀತ ಕರೆ ಅಣ್ಣ ಹ್ಯಾಪಿ ಬರ್ತಡೇ ಎಂದು ಮತ್ತೆ ಎಂದು ಬರದಂತಾಯಿತು. ಪುನೀತನ ಜೊತೆ ಕೊನೆಯ ಚಿತ್ರ..” ಎಂದು ಜಗ್ಗೇಶ್‌ ಟ್ವೀಟ್‌ ಮಾಡುವ ಮೂಲಕ ಈ ಬಾರಿ ಜನ್ಮದಿನ ಆಚರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Categories
ಸಿನಿ ಸುದ್ದಿ

ಯತಿರಾಜ್ ನಿರ್ದೇಶನದ ಮತ್ತೊಂದು ಸಿನಿಮಾ ಫಿಕ್ಸ್‌; ಸೆಟ್ಟೇರಲಿದೆ ಮಾಯಾಮೃಗ ಎಂಬ ಕ್ರೈಮ್‌ ಥ್ರಿಲ್ಲರ್‌ ಚಿತ್ರ !

ಪತ್ರಕರ್ತ ಕಮ್‌ ನಟ ಯತಿರಾಜ್‌ ಈವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕಲಾವಿದ ಮಾತ್ರವಲ್ಲ, ನಿರ್ದೇಶಕರೂ ಹೌದು. ಕಥೆಗಾರರು ಕೂಡ. ಈಗಾಗಲೇ ಪೂರ್ಣ ಸತ್ಯ ಎಂಬ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ, ಆ ಸಿನಿಮಾ ಬಳಿಕ ಅವರು ಹಲವು ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದೂ ಉಂಟು. ತಮ್ಮ ನಿರ್ದೇಶನದ ಎರಡನೇ ಸಿನಿಮಾ ಸೀತಮ್ಮನ ಮಗ ಕೂಡ ಇತ್ತೀಚೆಗೆ ಯಶಸ್ವಿಯಾಗಿ ಮುಗಿಸಿದ್ದಾರೆ. ಅದರ ಬೆನ್ನಲ್ಲೇ ಯತಿರಾಜ್‌ ಈಗ ತಮ್ಮ ನಿರ್ದೇಶನದ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಚಿತ್ರಕ್ಕೆ ಮಾಯಾಮೃಗ ಎಂದು ನಾಮಕರಣ ಮಾಡಿದ್ದಾರೆ. ‌

ಈ ಚಿತ್ರ ಎಸ್.ಜೆ.ಆರ್. ಪ್ರೊಡಕ್ಷನ್ಸ್‌ನಡಿ ತಯಾರಾಗುತ್ತಿದೆ. ಚಿತ್ರದುರ್ಗದ ಜಯಲಕ್ಷ್ಮೀ ರಘು ಈ ಚಿತ್ರದ ನಿರ್ಮಾಪಕರು. ಇದು ಇವರ ಮೊದಲ ನಿರ್ಮಾಣದ ಸಿನಿಮಾ. “ಮಾಯಾಮೃಗ” ಅಂದಾಕ್ಷಣ ನೆನಪಾಗೋದೆ ‘ಟಿ ಎನ್ ಸೀತಾರಾಂ. ಮಾಯಾಮೃಗ ಅವರ ಅವರ ಜನಪ್ರಿಯ ಧಾರಾವಾಹಿಯ ಹೆಸರು. ಆ ಹೆಸರನ್ನೇ ನಿರ್ದೇಶಕರು ಅವರ ಕಥೆಗೆ ಇಟ್ಟಿದ್ದಾರೆ. ಅಂದಹಾಗೆ, ಇದೊಂದು ಕಿಡ್ನಾಪ್‌ ಕುರಿತಾದ ಕಥೆ. ಕ್ರೈಮ್‌ ಥ್ರಿಲ್ಲರ್‌ ಅಂಶಗಳು ಇಲ್ಲಿ ಹೇರಳವಾಗಿವೆ. ಸದ್ಯ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಅದಕ್ಕಾಗಿ ಇದೇ ತಿಂಗಳ 13 ರ ಭಾನುವಾರದಂದು ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ಆಡಿಷನ್ ನಡೆಯಲಿದೆ.

ನಿರ್ಮಾಪಕರು ಚಿತ್ರದುರ್ಗದವರೇ ಆಗಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಅವರ ಆಶಯ ಎಂಬುದು ನಿರ್ದೇಶಕ ಯತಿರಾಜ್ ಅವರ ಮಾತು. ಅಪರೂಪದ ಕಥಾವಸ್ತು ಹೊಂದಿರುವ ಮಾಯಾಮೃಗದಲ್ಲಿ ಯತಿರಾಜ್ ಅವರೇ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. ಬಹುತೇಕ ಶ್ರೀರಂಗಪಟ್ಟಣ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ಮತ್ತೆ ಮಂಜುನಾಥನ ಜಪ ಮಾಡಿದ ಗುರುಪ್ರಸಾದ್!‌ ಏಪ್ರಿಲ್‌ನಲ್ಲಿ ಎದ್ದೇಳು ಮಂಜುನಾಥ 2…

‘ಎದ್ದೇಳು ಮಂಜುನಾಥ’ ಅಂದಾಕ್ಷಣ, ನೆನಪಾಗೋದೇ ನವರಸ ನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ನಿರ್ದೇಶನ. ಈಗ “ಎದ್ದೇಳು ಮಂಜುನಾಥಾ 2” ಎಂಬ ಚಿತ್ರ ಬರುತ್ತಿದ್ದು, ಸದ್ದಿಲ್ಲದೆಯೇ ಚಿತ್ರೀಕರಣ ಮುಗಿದಿದೆ. ಈ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸಿಲ್ಲ. ಬದಲಾಗಿ ಗುರು ಪ್ರಸಾದ್ ಅವರೇ ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ರಚಿತಾ ಮಹಾಲಕ್ಷ್ಮಿ ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಶಶಿಧರ್, ರವಿ ದೀಕ್ಷಿತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

“ಎದ್ದೇಳು ಮಂಜುನಾಥ” ಚಿತ್ರದ ಸಮಯದಲ್ಲೇ ಸಿದ್ದವಾದ ಕಥೆಯಿದು. ಚಿತ್ರ ನಿರ್ಮಾಣವಾಗಲು ಹತ್ತು ವರ್ಷ ಬೇಕಾಯಿತು.
ಇದು ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣವಾದ ಚಿತ್ರ. ನಾವು ಒಂದಿಷ್ಟು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ರವಿ ದೀಕ್ಷಿತ್, ಮೈಸೂರು ರಮೇಶ್ ಸೇರಿ ಐವತ್ತಕ್ಕೂ ಅಧಿಕ ಜನ ಶೇರ್ ಹೋಲ್ಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಶಶಿಧರ್ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ . ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಕಾಮಿಡಿ ಕ್ರೈಂ ಆಧಾರಿತ ಚಿತ್ರವಿದು. ಕ್ರೈಂ ಎಂದರೆ ಬರೀ ರಕ್ತದೋಕುಳಿ ಅಲ್ಲ. ಬೇರೊಂದು ರೀತಿಯಲ್ಲಿ ಹೇಳಬಹುದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ.

ಮುಂದೆ ನಾನು ಸಿನಿಮಾ ಮುಹೂರ್ತ ಮಾಡಬಾರದೆಂದು ನಿರ್ಧರಿಸಿದ್ದೇನೆ. ಏಕೆಂದರೆ ಕೆಲವು ನಿರ್ಮಾಪಕರು ಅದ್ದೂರಿ ಮುಹೂರ್ತ ಮಾಡಿ, ನಂತರ ಹಣ ಹೊಂದಿಸುವುದಿಲ್ಲ. ಆದರೆ ಗುರುಪ್ರಸಾದ್ ನಿಂದ ಸಿನಿಮಾ ಲೇಟ್ ಆಯ್ತು ಎನ್ನುತ್ತಾರೆ.
ಇದೆಲ್ಲಾ ನೋಡಿ ನಾನು, ಸ್ನೇಹಿತರ ತಂಡದ ಬಳಿ ನಾವೇ ಹಣ ಹಾಕಿ ಒಂದು ಚಿತ್ರ ಮಾಡೋಣ ಅಂದೆ.

ಅದರ ಮೊದಲ ಪ್ರಯತ್ನವೇ ಈ ಚಿತ್ರ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ, ಸಿನಿಟಿಕ್ ಸೂರಿ, ವೇಲ್ ಮುರುಗನ್, ಅಶೋಕ್ ಸೇರಿ ನಾಲ್ಕು ಜನ ಛಾಯಾಗ್ರಾಹಕರು. ಸದ್ಯದಲ್ಲೇ ಟ್ರೇಲರ್ ಬರಲಿದೆ. ಏಪ್ರಿಲ್ ಅಂತ್ಯದಲ್ಲಿ ಓಟಿಟಿ ಅಥವಾ ಥಿಯೇಟರ್ ನಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು ಗುರುಪ್ರಸಾದ್.

ನಾನು ಹತ್ತುವರ್ಷಗಳಿಂದ ಕಿರುತೆರೆಯಲ್ಲಿದ್ದೀನಿ. ತಮಿಳಿನಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದೀನಿ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ʼಎದ್ದೇಳು ಮಂಜುನಾಥʼ ನನ್ನ ಇಷ್ಟದ ಚಿತ್ರ. ಎಷ್ಟು ಸಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಈಗ ಅದೇ ಚಿತ್ರದ ಎರಡನೇ ಭಾಗದಲ್ಲಿ ನಾನೇ ನಾಯಕಿಯಾಗಿರುವುದು ನನ್ನ ಪುಣ್ಯ ಎಂದರು ನಾಯಕಿ ರಚಿತಾ ಮಹಾಲಕ್ಷ್ಮಿ. ಚಿತ್ರಕ್ಕೆ ಹಣ ಹೂಡಿರುವ ರವಿ ದೀಕ್ಷಿತ್ ಸಿನಿಮಾ ಸಾಗಿ ಬಂದ ಬಗ್ಗೆ ಮಾತನಾಡಿದರು. ಶಶಿಧರ್ ಪ್ರಚಾರದ ಬಗ್ಗೆ, ತಮ್ಮ ನಟನೆಯ ಕುರಿತು ಮಾಹಿತಿ ನೀಡಿದರು. ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನೈನಾ ಎಂಬ ಮಹಿಳಾ ಪ್ರಧಾನ ಸಿನಿಮಾ; ಮಹಿಳಾ ದಿನಕ್ಕೊಂದು ಸ್ಪೆಷಲ್‌ ಚಿತ್ರ

ಕನ್ನಡದಲ್ಲಿ ಈಗಾಗಲೇ ಹಲವು ಮಹಿಳಾ ಪ್ರಧಾನ ಸಿನಿಮಾಗಳು ಬಂದಿವೆ. ಅದರಲ್ಲೂ ಸಾಕಷ್ಟು ಸಂದೇಶ ಸಾರುವ ಚಿತ್ರಗಳೇ ಇವೆ. ಆ ಸಾಲಿಗೆ ಮತ್ತೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಹೌದು, ಅದರ ಹೆಸರು ನೈನಾ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರಕ್ಕೆ ಶ್ರೀಧರ್‌ ಸಿಯ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ನಿರ್ದೇಶನದ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯೂ ಇವರದೇ. ಅಂದಹಾಗೆ, ಈ ಚಿತ್ರಕ್ಕೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಮೂವತ್ತು ಜನ ಹಣ ಹಾಕಿದ್ದಾರೆ. ಅಲ್ಲಿಗೆ ಇದೊಂದು ಕ್ರೌಡ್‌ ಫಂಡಿಂಗ್‌ ಸಿನಿಮಾ ಅಂದುಕೊಳ್ಳಲ್ಲಡ್ಡಿಯಿಲ್ಲ ಬಿಡಿ.

ನಿರ್ದೇಶಕ ಶ್ರೀಧರ್‌ ಸಿಯಾ ಅವರು ಮೂಲತಃ ಎಂಜಿನಿಯರ್.‌ ಅವರಿಗೆ ಸಿನಿಮಾ ಮೇಲೆ ಹೆಚ್ಚು ಒಲವು. ದೊಡ್ಡ ಕನಸು ಕಟ್ಟಿಕೊಂಡು ಗಾಂಧಿನಗರವನ್ನು ಸ್ಪರ್ಶಿಸಿದ್ದಾರೆ. ಚೊಚ್ಚಲ ಪ್ರಯತ್ನ ವಿಭಿನ್ನವಾಗಿರಬೇಕು ಎಂಬ ನಿಟ್ಟಿನಲ್ಲಿ ಅವರು ಒಂದು ಮಧ್ಯಮ ವರ್ಗದ ಹೆಣ್ಣು ಮಗಳ ಮನಸ್ಥಿತಿಯ ಕಥೆ ಇರುವ ಸಿನಿಮಾ ಹಿಂದೆ ಬಂದಿದ್ದಾರೆ. ಇನ್ನು, ಈ ಚಿತ್ರಕ್ಕೆ ಗೌರಿ ನಾಯರ್‌ ನಾಯಕಿ. ಈ ಚಿತ್ರ ಮಾಡುವ ಕನಸು ಕಂಡಿದ್ದ ನಿರ್ದೇಶಕ ಶ್ರೀಧರ್‌ ಅವರು, ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಿಸ್ಬುಟ್ಟ ಚಿತ್ರದಲ್ಲಿ ಕೆಲಸ ಮಾಡುವಾಗ, ತಾನು ನಿರ್ದೇಶನ ಮಾಡುವ ಕನಸಿನ ಬಗ್ಗೆ ನಾಯಕಿ ಬಳಿ ಹೇಳಿಕೊಂಡಿದ್ದರಂತೆ. ಆ ಸಿನಿಮಾ ಸೆಟ್ಟೇರಿದರೆ, ಅದಕ್ಕೆ ನೀವೇ ನಾಯಕಿ ಅಂತ ಗೌರಿ ನಾಯರ್‌ಗೆ ಹೇಳಿದ್ದರಂತೆ. ಅದರಂತೆ ಗೌರಿ ನಾಯರ್‌ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಇನ್ನು, ನಾಯಕಿ ಗೌರಿ ನಾಯರ್‌ ಅವರಿಗೆ ನೈನಾ ಸಿನಿಮಾ ಕಥೆ ಹೇಳಿದಾಗ, ಮೊದ ಮೊದಲು ಬೇಡ ಅಂದಿದ್ದರಂತೆ. ನಿರ್ದೇಶಕರು ಹೊಸಬರು. ಜೊತೆಗೆ ಎಂಜಿನಿಯರ್‌ ಬೇರೆ. ಅವರು ಹೇಗೆ ಸಿನಿಮಾ ಮಾಡುತ್ತಾರೋ ಏನೋ ಎಂದು ತಿರಸ್ಕರಿಸಿದ್ದರಂತೆ. ನಂತರ ನಿರ್ದೇಶಕರು ಕಥೆ ಹೇಳಿದ ರೀತಿ, ಅವರು ಪಾತ್ರವನ್ನು ಕಟ್ಟಿಕೊಟ್ಟ ರೀತಿ ಕೇಳಿದ ಮೇಲೆ ನಂಬಿಕೆ ಬಂದು ನಟಿಸೋಕೆ ಒಪ್ಪಿದರಂತೆ. ಇನ್ನು, ಇಲ್ಲಿ ನಾಯಕನಿದ್ದರೂ, ಇಲ್ಲದಂತಿದ್ದಾರೆ. ಅಂದರೆ, ನಾಯಕನ ಪಾತ್ರ ಬಿಳಿ ಪರದೆ ಮೇಲೆ ಕಾಣಿಸುವುದಿಲ್ಲ. ಆದರೆ, ಅವರ ಧ್ವನಿ ಇಲ್ಲಿ ಕೇಳಿಸುತ್ತೆ. ಆ ಧ್ವನಿಗೆ ಆರ್.ಜೆ.ಸುನೀಲ್‌ ಜೀವ ತುಂಬಿದ್ದಾರೆ.

ಚಿತ್ರಕ್ಕೆ ಪ್ರದೀಪ್‌ ಪಿ.ಬಂಗಾರಪೇಟೆ ಛಾಯಾಗ್ರಹಣ ಮಾಡಿದ್ದಾರೆ. ಸುಮಂತ್‌ ರೈ ಸಂಕಲನವಿದೆ. ಕಲ್ಕಿ ಅಭಿಷೇಕ್‌ ಅವರು ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ನೇಹಾ ಐತಾಳ್, ಪಲ್ಟಿ ಗೋವಿಂದ, ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಇತರ ಕಲಾವಿದರು ನಟಿಸಿದ್ದಾರೆ.
ವಿಶೇಷವೆಂದರೆ, ಈ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ಇದೆ. ಅದರ ಅಂಗವಾಗಿ “ನೈನಾ” ಚಿತ್ರ ಕಲಾವಿದರ ಸಂಘದಲ್ಲಿ ಪ್ರದರ್ಶನವಾಗುತ್ತಿದೆ.

Categories
ಸಿನಿ ಸುದ್ದಿ

ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾಗೆ ಆರ್‌ ಆರ್‌ ಆರ್‌ ಬೆಡಗಿ ಎಂಟ್ರಿ!

ಎಲ್ಲಾ ಭಾಷೆಗಳಲ್ಲೂ ಕಬ್ಜ ಸಿನಿಮಾ ಸಖತ್‌ ಸೌಂಡು ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಕೆ ಜಿ ಎಫ್‌ ಸಿನಿಮಾ ಬಳಿಕ ಅದ್ದೂರಿಯಾಗಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ಎಂಬ ಮಾತು ಈಗ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಆರ್‌.ಚಂದ್ರು ನಿರ್ಮಾಣ ಮತ್ತು ನಿರ್ದೇಶನವಿರುವ ಈ ಸಿನಿಮಾದ ನಾಯಕಿ ಯಾರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅವರು ಬರ್ತಾರೆ, ಇವರು ಬರ್ತಾರೆ...' ಎಂಬ ಗಾಸಿಪ್‌ ಆಗಾಗ ಹರಿದಾಡುತ್ತಲೇ ಇತ್ತು. ಅದಕ್ಕೀಗ ಚಂದ್ರು ಫುಲ್‌ಸ್ಟಾಪ್‌ ಇಟ್ಟಿದ್ದಾರೆ.ದಕ್ಷಿಣ ಭಾರತದ ಪ್ರಮುಖ ನಾಯಕಿಯರನ್ನೇ ಕರೆತರುತ್ತೇನೆ’ ಎಂದು ಮುಹೂರ್ತದ ಸಂದರ್ಭದಲ್ಲಿ ಹೇಳಿದ್ದರು. ಆರ್‌.ಚಂದ್ರು. ಆ ಮಾತನ್ನೀಗ ಉಳಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲೀಗ ಮತ್ತಷ್ಟು ಸಂಚಲನ ಮೂಡಿಸಲು ಶ್ರೀಯಾ ಶರಣ್‌ ಆಗಮನವಾಗಿದೆ.

ಕಬ್ಜ ಸಿನಿಮಾದಲ್ಲಿ ಎರಡು ಪ್ರಮುಖ ನಾಯಕಿಯ ಪಾತ್ರವಿದ್ದು, ಆ ಪೈಕಿ ಒಬ್ಬರನ್ನು ರಿವೀಲ್‌ ಮಾಡಿದ್ದಾರೆ ಆರ್‌.ಚಂದ್ರು. ರಾಜಮೌಳಿಯವರ `ಆರ್‌ ಆರ್‌ ಆರ್‌’ ಹಾಗೂ ಅಜಯ್‌ ದೇವಗನ್‌ ಜತೆ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಶ್ರೀಯಾ ಸದ್ಯ ಬಹು ಬೇಡಿಕೆಯ ನಟಿಯರಲ್ಲೊಬ್ಬರು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿರುವ ಅವರು, ಕಬ್ಜ ಸಿನಿಮಾದ ಕಥೆ ಕೇಳಿ ಸಂತೋಷದಿಂದ ಈ ಪ್ರಾಜೆಕ್ಟ್ ಗೆ ಸೈನ್‌ ಮಾಡಿದ್ದಾರೆ. ಅವರ ಫಸ್‌್ಟಲುಕ್‌ ಇದೀಗ ರಿವೀಲ್‌ ಆಗಿದ್ದು, ಉಪ್ಪಿಗೆ ಶ್ರೀಯಾ ತಕ್ಕ ಜೋಡಿ ಎಂಬುದು ಪ್ರೇಕ್ಷಕರ ಅನಿಸಿಕೆ.

ಕೆಜಿಎಫ್‌ ಸಿನಿಮಾದ ಬಳಿಕ ಕಬ್ಜ ಬೇರೆ ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್‌ ಕ್ರಿಯೇಟ್‌ ಆಗಿದೆ. ಮುಂಬೈನಲ್ಲಿ ಬಹುಬೇಡಿಕೆಯಿರುವ ಈ ಚಿತ್ರ ಕನ್ನಡದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಗ್ಗಳಿಕೆ. ಮತ್ತಷ್ಟು ಕನ್ನಡದ ತಂಡ ಇದೇ ರೀತಿ ಮಿಂಚಲಿ ಎಂಬುದು ಸಿನಿಪಂಡಿತರ ಅನಿಸಿಕೆ.

ಪ್ಯಾನ್‌ ಇಂಡಿಯಾ ಸಿನಿಮಾ ಎಂದಮೇಲೆ ಸಾಕಷ್ಟು ಸಮಯ ತೆಗೆದುಕೊಳ್ಳೋದು ಸಾಮಾನ್ಯ. ಇದೀಗ ಬಿಡುಗಡೆಗೆ ಸಿದ್ಧವಿರುವ ಆರ್‌ ಆರ್‌ ಆರ್‌ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತೆಗೆದುಕೊಂಡಿದೆ. ಹಾಗೆಯೇ ಕೆಜಿಎಫ್‌ ಮೂರು ವರ್ಷಗಳ ಸಮಯ ತೆಗೆದುಕೊಂಡಿದೆ. ಕಬ್ಜ ಕೂಡ ಸತತ ಎರಡು ವರ್ಷಗಳಿಂದ ಶೂಟಿಂಗ್‌ ನಡೆಸುತ್ತಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇತ್ತೀಚೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಸಹ ಸಿನಿಮಾ ಬೇಗ ರಿಲೀಸ್‌ ಮಾಡುವಂತೆ ಒತ್ತಾಯಿಸಿದ್ದರು.

ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ‘ಕಬ್ಜ’ ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗ ಹಾಗೂ ಬೃಹತ್‌ ಸೆಟ್‌ಗಳಲ್ಲಿ ಈ ಚಿತ್ರವನ್ನು ಚಿತಿ್ರೕಕರಿಸಲಾಗುತ್ತಿದೆ. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಸೇರಿದಂತೆ ಬಹುತೇಕ ‘ಕೆ ಜಿ ಎಫ್‌’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ ಎಂಬುದು ‘ಕಬ್ಜ’ ಹೆಚ್ವುಗಾರಿಕೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ‘ಕಬ್ಜ’ ಕೊನೆಯ ಹಂತದ ಚಿತಿ್ರೕಕರಣ ನಡೆಸುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‌ ಮೊದಲಾದೆಡೆ ಶೂಟಿಂಗ್‌ ನಡೆಯಲಿದ್ದು, ಇದೇ ವರ್ಷ ಅದ್ದೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಅಣಿಯಾಗಿದೆ ಆರ್.ಚಂದ್ರು ಬಳಗ.

Categories
ಸಿನಿ ಸುದ್ದಿ

ತ್ರಿಕೋನ ಎಂಬ ವಿಭಿನ್ನ ಸಿನಿಮಾ; ಮೂರು ಭಾಷೆಯಲ್ಲಿ ಬಿಡುಗಡೆಗೆ ರೆಡಿ…

ಸಾಮಾನ್ಯವಾಗಿ ಒಂದು ಸಿನಿಮಾದ ಸಕ್ಸಸ್‌ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟರೆ, ಮೊದಲ ಸಿನಿಮಾಗಿಂತಲೂ ಒಂದು ವಿಭಿನ್ನ ಸಿನಿಮಾ ಕಟ್ಟಿಕೊಡಬೇಕೆಂಬ ಚಾಲೆಂಜ್‌ ಆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಇರುತ್ತೆ. ಅಂಥದ್ದೊಂದು ಚಾಲೆಂಜ್‌ನಲ್ಲೇ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ ಚಂದ್ರಕಾಂತ್…

ಚಂದ್ರಕಾಂತ್‌ ಅಂದಾಕ್ಷಣ ಯಾರಿವರು ಎಂಬ ಸಣ್ಣ ಗೊಂದಲ ಸಹಜ. ಅವರು ಬೇರಾರು ಅಲ್ಲ, ಈ ಹಿಂದೆ ʼ‌143′ ಎಂಬ ಸಿನಿಮಾ ನಿರ್ದೇಶಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ಪ್ರತಿಭಾವಂತ ನಿರ್ದೇಶಕರಿವರು. ಅವರೀಗ ಸದ್ದಿಲ್ಲದೆಯೇ ʼತ್ರಿಕೋನʼ ಎಂಬ ಮತ್ತೊಂದು ಅರ್ಥಪೂರ್ಣ ಎನಿಸುವ ಹಾಗು ವಿಭಿನ್ನವಾದ ಸಿನಿಮಾ ಮಾಡಿ ಮುಗಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಹಿಂದೆಯೇ ಈ ಚಿತ್ರ ರಿಲೀಸ್‌ ಆಗಬೇಕಿತ್ತು. ಆದರೆ, ಕೊರೊನಾ ಹೆಮ್ಮಾರಿಯಿಂದ ಲಾಕ್‌ಡೌನ್‌ ಆಗಿದ್ದರಿಂದ ಸಿನಿಮಾ ಬಿಡುಗಡೆ ತಡವಾಯ್ತು. ಈಗ ಸಿನಿಮಾ ರಿಲೀಸ್‌ ಆಗಲು ತಯಾರಾಗುತ್ತಿದೆ.

ಅಂದಹಾಗೆ, ಈ ಚಿತ್ರ ಬಿಡುಗಡೆಗೂ ಮುನ್ನವೇ ಯುಟ್ಯೂಬ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದೆ. ಅದು ಸಾಕಷ್ಟು ಕುತೂಹಲವನ್ನೂ ಕೆರಳಿಸಿದೆ. ಸದ್ಯ ಆ ಕುತೂಹಲ ʼತ್ರಿಕೋನʼ ಸಿನಿಮಾ ನೋಡಲೇಬೇಕೆನಿಸುತ್ತಿದೆ. ಇನ್ನು, ಈ ಚಿತ್ರಕ್ಕೆ ರಾಜಶೇಖರ್‌ ನಿರ್ಮಾಪಕರು. ಸಿನಿಮಾ ಇವರಿಗೆ ಹೊಸದೇನಲ್ಲ. ಈ ಹಿಂದೆ ಕೂಡ ರಾಜಶೇಖರ್‌ ಅವರು ಗಮನಸೆಳೆಯುವಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ʼಪೆರೋಲ್‌ʼ, ʼಬರ್ಫಿʼ ಮತ್ತು ಅಮೃತವಾಣಿ ಚಿತ್ರಗಳ ಮೂಲಕ ಗಮನಸೆಳೆದಿದ್ದ ರಾಜಶೇಖರ್‌, ʼತ್ರಿಕೋನʼ ಸಿನಿಮಾದ ಕಥೆ ಅವರೇ ಬರೆದಿದ್ದಾರೆ. ಇನ್ನು, ಈ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗಿದೆ. ಕಥೆ ಒಂದೇ ಆದರೆ, ಭಾಷೆಗಳ ನೇಟಿವಿಟಿ ಮತ್ತು ನೋಡುಗರ ಅಭಿರುಚಿಗೆ ತಕ್ಕಂತೆಯೇ ಮೂರು ರೀತಿಯ ವಿಭಿನ್ನ ಚಿತ್ರಕಥೆ ಮಾಡಲಾಗಿದೆ.

ಈ ಚಿತ್ರದ ಬಗ್ಗೆ ನಿರ್ದೇಶಕ ಚಂದ್ರಕಾಂತ್‌ ಹೇಳುವುದಿಷ್ಟು. ಮೂರು ವಿಭಿನ್ನ ತಲೆಮಾರು ಮತ್ತು ವಯೋಮಾನದ ಜನರ ಮೂಲಕ ಈ ಕಥೆ ಹೇಳಲಾಗುತ್ತಿದೆ. ಒಂದು ಘಟನೆಯನ್ನು ಈ ಮೂರು ತಲೆಮಾರಿನವರು ಹೇಗೆಲ್ಲಾ ಎದುರಿಸುತ್ತಾರೆ ಮತ್ತು ಒಂದು ಸಮಸ್ಯೆಯನ್ನು ತಾಳ್ಮೆಯಿಂದ ಹಾಗು ಶಕ್ತಿಯಿಂದ ಧೈರ್ಯವಾಗಿ ಎದುರಿಸಿದಾಗ ಏನೆಲ್ಲಾ ಆಗುತ್ತೆ ಎಂಬುದು ಚಿತ್ರದ ಕಥೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಸುರೇಶ್‌ ಹೆಬ್ಳಿಕರ್‌, ಲಕ್ಷ್ಮಿ, ಅಚ್ಯುತಕುಮಾರ್‌, ಸುಧಾರಾಣಿ, ರಾಜವೀರ್‌, ಮಾರುತೇಶ್‌ ಸೇರಿದಂತೆ ಇತರೆ ಪ್ರತಿಭಾವಂತ ನಟರು ನಟಿಸಿದ್ದಾರೆ. ಸಾಧುಕೋಕಿಲ ಕೂಡ ಇಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುರೇಂದ್ರನಾತ್‌ ಸಂಗೀತ ನೀಡಿದ್ದಾರೆ. ಶ್ರೀನಿವಾಸ್‌ ವಿನ್ನಕೋಟ ಅವರು ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಮೂರು ಭಾಷೆಗಳಲ್ಲಿ ಚಿತ್ರ ರೆಡಿಯಾಗಿದ್ದು, ಬಿಡುಗಡೆಗೆ ತಯಾರಾಗುತ್ತಿದೆ.

Categories
ಸಿನಿ ಸುದ್ದಿ

ರಾಜವರ್ಧನ್ ಜೊತೆ ಬಿಗ್ ಬಾಸ್ ಚೆಲುವೆ! ಹಿರಣ್ಯ ಸಿನಿಮಾಗೆ ದಿವ್ಯಾ ಸುರೇಶ್ ಸ್ಪೆಷಲ್ ರೋಲ್…

ರೌಡಿ ಬೇಬಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಬಿಗ್ ಬಾಸ್ ಬ್ಯೂಟಿ ದಿವ್ಯಾ ಸುರೇಶ್ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟಿಸುತ್ತಿರುವ ಬಹುನಿರೀಕ್ಷಿತ ಹಿರಣ್ಯ ಸಿನಿಮಾದಲ್ಲಿ ದಿವ್ಯಾ ಸುರೇಶ್ ಬಣ್ಣ ಹಚ್ಚಲಿದ್ದಾರೆ.

ವಿಶೇಷ ಪಾತ್ರದಲ್ಲಿ ದಿವ್ಯಾ ಸುರೇಶ್

ಪ್ರವೀಣ್ ಅವ್ಯಕ್ತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹಿರಣ್ಯ ಸಿನಿಮಾದಲ್ಲಿ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ರಾಜವರ್ಧನ್ ಹಾಗೂ ದಿವ್ಯಾ ಸುರೇಶ್ ಇಬ್ಬರು ಆತ್ಮೀಯ ಸ್ನೇಹಿತರು. ಇಬ್ಬರು ಒಟ್ಟಿಗೆ ನಟಿಸುವ ಅವಕಾಶ ಹಿರಣ್ಯ ಸಿನಿಮಾ ಮೂಲಕ ನನಸಾಗುತ್ತಿದೆ ಅನ್ನೋದು ಬಿಗ್ ಬಾಸ್ ಬ್ಯೂಟಿ ದಿವ್ಯಾ ಮಾತು. ಇದೇ 9 ರಿಂದ ದಿವ್ಯಾ ಸುರೇಶ್ ಭಾಗದ ಶೂಟಿಂಗ್ ಶುರುವಾಗಲಿದೆ.

ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಗೆ ನಾಯಕಿಯಾಗಿ ಮಾಡೆಲ್ ರಿಹಾನಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಹಿರಣ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.

error: Content is protected !!