ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಕನ್ನಡ ಚಿತ್ರರಂಗ ಮೆಲ್ಲನೆ ರಂಗೇರುತ್ತಿದೆ. ಮತ್ತದೇ ವೈಭವಕ್ಕೆ ಮರಳುತ್ತಿದೆ. ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ “ತ್ರಿಕೋನ” ಸಿನಿಮಾ ಕೂಡ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಅಂದಹಾಗೆ, ಏಪ್ರಿಲ್ 1ರಂದು ಚಿತ್ರ ಬಿಡುಗಡೆಯಾಗಲಿದೆ.
ಈ ಚಿತ್ರಕ್ಕೆ ಚಂದ್ರಕಾಂತ್ ನಿರ್ದೇಶಕರು. ಈ ಹಿಂದೆ ಇವರು 143 ಎಂಬ ವಿಭಿನ್ನ ಎನಿಸುವ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆ ಸಿನಿಮಾ ನಂತರ ನಿರ್ದೇಶಿಸುತ್ತಿರುವ ಚಿತ್ರವಿದು. ಇನ್ನು, ರಾಜಶೇಖರ್ ಈ ಚಿತ್ರದ ನಿರ್ಮಾಪಕರು. ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ತಮ್ಮ ಸಿನಿಮಾ ಕುರಿತು ಹೇಳುವ ನಿರ್ದೇಶಕರು, “ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. ಆ ಮನಸ್ಸನ್ನು ನಾವು ಕ್ರೀಡಾ ಮೈದಾನ ಎನ್ನಬಹುದು. ಏಕೆಂದರೆ ಮನಸ್ಸಿನಲ್ಲಿ ಮೋಸ, ದ್ವೇಷ, ಅಸೂಯೆ, ಸೇಡು, ದುರಾಸೆ ಎಂಬ ಕ್ರೀಡೆಗಳು ನಡೆಯುತ್ತಲೇ ಇರುತ್ತದೆ. ಇದರಲ್ಲಿ ಅಹಂ, ಶಕ್ತಿ ಹಾಗೂ ತಾಳ್ಮೆ ಎಂಬ ಸ್ಪರ್ಧಿಗಳು ಕೂಡ ಇದ್ದಾರೆ. ಈ ಮೂವರಲ್ಲಿ ಗೆಲವು ಯಾರಿಗೆ? ಅನ್ನೋದೇ ಸಿನಿಮಾ ಎಂದು ವಿವರಿಸುತ್ತಾರೆ ನಿರ್ದೇಶಕರು.
ನಿರ್ಮಾಪಕ ರಾಜಶೇಖರ್ ಮಾತನಾಡಿ, “ನಾನು ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಕಥೆ ನಾನೇ ಬರೆದಿದ್ದೇನೆ. ಬೇರೆ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು, ಬೇರೆ ನಿರ್ದೇಶಕರೆ ಚಿತ್ರ ನಿರ್ದೇಶಿಸಲಿದ್ದಾರೆ. ಏಕೆಂದರೆ ಚಂದ್ರಕಾಂತ್ ಸೇರಿದಂತೆ ಬೇರೆ ನಿರ್ದೇಶಕರಿಂದ ನಾನು ಸಾಕಷ್ಟು ತಿಳಿಯುವುದಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಪ್ರಚಾರ ರಾಯಭಾರಿಯಾಗಿ ಖ್ಯಾತ ನಟ ಸುಚೀಂದ್ರ ಪ್ರಸಾದ್ ಅವರು ಇರುವುದು ವಿಶೇಷ. ಭಾಷಾ ಅವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ವಿವರ ಕೊಟ್ಟರು ನಿರ್ಮಾಪಕ ರಾಜಶೇಖರ್.
ಇನ್ನು, ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್ ಹೈಲೈಟ್. ಅವರು ತಮ್ಮ ಪಾತ್ರ ಕುರಿತು ಹೇಳಿಕೊಂಡರು. ವಿತರಕ ಭಾಷಾ ಸಿನಿಮಾ ವಿತರಣೆ ಬಗ್ಗೆ ಮಾತಾಡಿದರು. ನಾನು ಹಾಗೂ ನಿರ್ಮಾಪಕ ರಾಜಶೇಖರ್ ಸಹಪಾಠಿಗಳು. ತ್ರಿಕೋನ ಚಿತ್ರದ ರಾಯಭಾರಿಯಾಗಲು ಕೇಳಿದರು.
ಚಿತ್ರ ನೋಡಿದೆ. ಚೆನ್ನಾಗಿದೆ. ರಾಯಭಾರಿಯಾಗಲು ಒಪ್ಪಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಸುಚೀಂದ್ರ ಪ್ರಸಾದ್.
ಚಿತ್ರದಲ್ಲಿ ನಟಿಸಿರುವ ರಾಜವೀರ್ ಹಾಗೂ ಮಾರುತೇಶ್ ಪಾತ್ರ ಪರಿಚಯ ಮಾಡಿಕೊಟ್ಟರು. ಪೊಲೀಸ್ ಪ್ರಕಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತವಿದೆ. ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ.
ಚಿತ್ರದಲ್ಲಿ ಲಕ್ಷ್ಮೀ, ಅಚ್ಯುತಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್ ಇತರರು ಇದ್ದಾರೆ.