ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ನೈಜ ಘಟನೆ ಆಧರಿತ ವರ್ಣಪಟಲ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಎಲ್ಲರ ಅಮ್ಮಂದಿರ ಥರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ .. ಎಂಬ ಡೈಲಾಗ್ ನಿಂದ ಶುರುವಾಗುವ ಟ್ರೇಲರ್ ನಲ್ಲಿ ಪ್ರೀತಿ, ಮಮತೆ, ನೋವು ಎಲ್ಲವನ್ನು ಒಳಗೊಂಡಿದೆ.
ನಿತ್ಯ ತಾನು ಪ್ರೀತಿಸಿದ ಹುಡುಗ ಮೈಕಲ್ ನನ್ನು ಮದುವೆ ಆಗ್ತಾಳೆ . ಮದುವೆ ಬಳಿಕ ಹೆಣ್ಣು ಮಗುವಿಗೆ ನಿತ್ಯ ತಾಯಿ ಆಗ್ತಾಳೆ. ಆ ಮಗುವೇ ಮೈನಾ. ಆದ್ರೆ ಎಲ್ಲಾ ಸರಿಯಿದ್ದ ನಿತ್ಯಾಳ ಬದುಕಲ್ಲಿ ಮೈನಾ ಅನ್ನೋ ಮಗಳಿಂದ ಜೀವನವೇ ಬದಲಾಗಿ ಹೋಗುತ್ತೆ.. ಮೈನಾ ಆಟಿಸಂ ಅನ್ನೋ ಖಾಯಿಲೆಯಿಂದ ಬಳಲುತ್ತಿರುತ್ತಾಳೆ. ಇದರಿಂದ ನಿತ್ಯಾ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಆ ಖಾಯಿಲೆಯಿಂದ ಮೈನಾಳನ್ನು ನಿತ್ಯಾ ಹೇಗೆ ಹೊರ ತರುತ್ತಾರೆ ಅನ್ನೋದು ಚಿತ್ರಕಥೆ.
ಮಕ್ಕಳನ್ನು ಹೆಚ್ಚಾಗಿ ಕಾಡುವ ಆಟಿಸಂ ಸಮಸ್ಯೆ ಕುರಿತು ನಿರ್ದೇಶಕರು ಬೆಳಕು ಚೆಲ್ಲಿದ್ದಾರೆ. ಜೊತೆಗೆ ತಾಯಿ ಮಗುವಿನ ಬಾಂಧವ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿತ್ಯಾ ಪಾತ್ರಕ್ಕೆ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ನಾಯಕಿಯಾಗಿ ನಟಿಸಿದ್ದು, ತುಳು ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ಅನೂಪ್ ಸಾಗರ್ ನಾಯಕನಾಗಿ ನಟಿಸಿದ್ದಾರೆ. ಖ್ಯಾತ ಬಹುಭಾಷಾ ನಟಿ ಸುಹಾಸಿನಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಧನಿಕ ಹೆಗ್ಡೆ, ಚೇತನ್ ರೈ ಮಾಣಿ, ಇಳಾ ವಿಟ್ಲಾ, ಅರವಿಂದ್ ರಾವ್ ಹಾಗೂ ಶ್ರೀಕಾಂತ್ ಹೆಬ್ಳಿಕರ್ ಮೊದಲಾದವರು ನಟಿಸಿದ್ದಾರೆ.
ವರ್ಣಪಟಲ ಸಿನಿಮಾದ ಚಿತ್ರಕಥೆ ಹಾಗೂ ನಿರ್ಮಾಣವನ್ನು ಡಾ. ಸರಸ್ವತಿ ಹೊಸದುರ್ಗ, ಕವಿತಾ ಸಂತೋಷ್ ಹೊತ್ತಿದ್ದು. ಈ ಚಿತ್ರಕ್ಕೆ ಕಾರ್ತಿಕ್ ಸರ್ಗೂರು ಸಾಹಿತ್ಯವಿದೆ. ಕಿರುತೆರೆ ನಿರ್ದೇಶಕ ವಿನು ಬಳಂಜ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ದಕ್ಷಿಣ ಕನ್ನಡದ ಮಡಂತ್ಯಾರು, ಮಂಗಳೂರು, ಮಡಿಕೇರಿ, ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.
ಕನ್ನಡದಲ್ಲಿ ಆಟಿಸಂ ಕುರಿತು ತಯಾರಾಗಿರುವ ಮೊದಲ ಸಿನಿಮಾ ವರ್ಣಪಟಲ. ಕಮರ್ಷಿಯಲ್ ಸಿನಿಮಾಗಳ ನಡುವೆ ಕಥೆಯನ್ನೇ ನಾಯಕರನ್ನಾಗಿಸಿ, ಬೇರೆ ಭಾಷೆಗಳ ಕಥೆಗಳ ಜೊತೆಗೆ ಪೈಪೋಟಿ ಕೊಂಡಂತೆ ಇರುವ, ಅಟಿಸಂ ಮಕ್ಕಳ ತಂದೆತಾಯಿಗಳಿಗೆ ಒಂದು ಬಾಹ್ಯ ಬೆಂಬಲವನ್ನು ಕೊಡುವ ಉದ್ದೇಶ ಈ ವರ್ಣಪಟಲ ಸಿನಿಮಾದ ಉದ್ದೇಶವಾಗಿದ್ದು , ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಅನ್ನುವುದು ವಿಶೇಷ.






