ಯತಿರಾಜ್ ನಿರ್ದೇಶನದ ಮತ್ತೊಂದು ಸಿನಿಮಾ ಫಿಕ್ಸ್‌; ಸೆಟ್ಟೇರಲಿದೆ ಮಾಯಾಮೃಗ ಎಂಬ ಕ್ರೈಮ್‌ ಥ್ರಿಲ್ಲರ್‌ ಚಿತ್ರ !

ಪತ್ರಕರ್ತ ಕಮ್‌ ನಟ ಯತಿರಾಜ್‌ ಈವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕಲಾವಿದ ಮಾತ್ರವಲ್ಲ, ನಿರ್ದೇಶಕರೂ ಹೌದು. ಕಥೆಗಾರರು ಕೂಡ. ಈಗಾಗಲೇ ಪೂರ್ಣ ಸತ್ಯ ಎಂಬ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ, ಆ ಸಿನಿಮಾ ಬಳಿಕ ಅವರು ಹಲವು ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದೂ ಉಂಟು. ತಮ್ಮ ನಿರ್ದೇಶನದ ಎರಡನೇ ಸಿನಿಮಾ ಸೀತಮ್ಮನ ಮಗ ಕೂಡ ಇತ್ತೀಚೆಗೆ ಯಶಸ್ವಿಯಾಗಿ ಮುಗಿಸಿದ್ದಾರೆ. ಅದರ ಬೆನ್ನಲ್ಲೇ ಯತಿರಾಜ್‌ ಈಗ ತಮ್ಮ ನಿರ್ದೇಶನದ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಚಿತ್ರಕ್ಕೆ ಮಾಯಾಮೃಗ ಎಂದು ನಾಮಕರಣ ಮಾಡಿದ್ದಾರೆ. ‌

ಈ ಚಿತ್ರ ಎಸ್.ಜೆ.ಆರ್. ಪ್ರೊಡಕ್ಷನ್ಸ್‌ನಡಿ ತಯಾರಾಗುತ್ತಿದೆ. ಚಿತ್ರದುರ್ಗದ ಜಯಲಕ್ಷ್ಮೀ ರಘು ಈ ಚಿತ್ರದ ನಿರ್ಮಾಪಕರು. ಇದು ಇವರ ಮೊದಲ ನಿರ್ಮಾಣದ ಸಿನಿಮಾ. “ಮಾಯಾಮೃಗ” ಅಂದಾಕ್ಷಣ ನೆನಪಾಗೋದೆ ‘ಟಿ ಎನ್ ಸೀತಾರಾಂ. ಮಾಯಾಮೃಗ ಅವರ ಅವರ ಜನಪ್ರಿಯ ಧಾರಾವಾಹಿಯ ಹೆಸರು. ಆ ಹೆಸರನ್ನೇ ನಿರ್ದೇಶಕರು ಅವರ ಕಥೆಗೆ ಇಟ್ಟಿದ್ದಾರೆ. ಅಂದಹಾಗೆ, ಇದೊಂದು ಕಿಡ್ನಾಪ್‌ ಕುರಿತಾದ ಕಥೆ. ಕ್ರೈಮ್‌ ಥ್ರಿಲ್ಲರ್‌ ಅಂಶಗಳು ಇಲ್ಲಿ ಹೇರಳವಾಗಿವೆ. ಸದ್ಯ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಅದಕ್ಕಾಗಿ ಇದೇ ತಿಂಗಳ 13 ರ ಭಾನುವಾರದಂದು ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ಆಡಿಷನ್ ನಡೆಯಲಿದೆ.

ನಿರ್ಮಾಪಕರು ಚಿತ್ರದುರ್ಗದವರೇ ಆಗಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಅವರ ಆಶಯ ಎಂಬುದು ನಿರ್ದೇಶಕ ಯತಿರಾಜ್ ಅವರ ಮಾತು. ಅಪರೂಪದ ಕಥಾವಸ್ತು ಹೊಂದಿರುವ ಮಾಯಾಮೃಗದಲ್ಲಿ ಯತಿರಾಜ್ ಅವರೇ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. ಬಹುತೇಕ ಶ್ರೀರಂಗಪಟ್ಟಣ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Related Posts

error: Content is protected !!