Categories
ಸಿನಿ ಸುದ್ದಿ

ಓ ಮೈ ಲವ್‌ ಅಂದವರಿಗೆ ಸಾಥ್‌ ಕೊಟ್ಟ ಸಚಿವ ಶ್ರೀರಾಮುಲು

ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಗೆ ಸ್ಮೈಲ್‌ ಶೀನು ಆ್ಯಕ್ಷನ್‌ ಕಟ್

ಸದಾ ಕ್ರಿಯಾಶೀಲವಾಗಿ ಯೋಚಿಸುವ ನಿರ್ದೇಶಕ ಸ್ಮೈಲ್‌ ಶೀನು ಅವರೀಗ ಮತ್ತೊಂದು ಬಿಗ್‌ ಬಜೆಟ್‌ ಯೋಜನೆ ಯೊಂದಿಗೆ ಸುದ್ದಿಯಲ್ಲಿದ್ದಾರೆ. ʼತೂಫಾನ್‌ʼ, ʼಬಳ್ಳಾರಿ ದರ್ಬಾರ್‌ʼ ಹಾಗೂʼ 18 ಟು 25ʼ ಚಿತ್ರಗಳ ನಂತರವೀಗ ʼಓ ಮೈ ಲವ್‌ʼ ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತವೂ ಮುಗಿದಿದೆ. ವಿಶೇಷ ಅಂದ್ರೆ, ಹಿರಿಯ ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿ ಕುಮಾರ್‌ ಈ ಚಿತ್ರದ ಹೀರೋ. ಹಾಗೆಯೇ ಹೊಸ ಪ್ರತಿಭೆಗಳಾದ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ಹಾಗೂ ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿಯರು. ಇನ್ನು ಬಳ್ಳಾರಿ ಮೂಲದ ಜಿ. ರಾಮಾಂಜನಿ ಈ ಚಿತ್ರದ ನಿರ್ಮಾಪಕರು.

ಮೊನ್ನೆಯಷ್ಟೇ ಚಿತ್ರಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಷಣ್ಮುಖ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆಯಿತು. ಸಚಿವ ಶ್ರೀರಾಮು ಚಿತ್ರದ ಫ್ರಥಮ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ಚಿತ್ರದ ನಿರ್ಮಾಪಕ ರಾಮಾಂಜಿನಿ ಅವರೇ ಚಿತ್ರಕ್ಕೆ ಕತೆ ಬರೆದಿದ್ದಾರಂತೆ. ಜೆಸಿಬಿ ಪ್ರೊಡಕ್ಷನ್ಸ್‌ ಮೂಲಕ ಈ ಚಿತ್ರವು ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಮಿಯಾಗಿದ್ದ ರಾಮಾಂಜಿನಿ ಅವರು, ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ಹೇಳಿಕೊಂಡರು.” ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರ. ಚಿಕ್ಕಂದಿನಿಂದಲೂ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಆಸೆ ಇತ್ತು. ಹಾಗೆಯೇ ತೆರೆ ಮೇಲೆ ಬರಬೇಕೆನ್ನುವ ತುಡಿತ ಇತ್ತು. ಅದೇ ನಾನಿಲ್ಲಿಗೆ ಬರಲು ಕಾರಣ. ಜತೆಗೆ ಕತೆ ಬರೆಯೂ ಹುಚ್ಚು ಕೂಡ ನನ್ನನ್ನು ಇಲ್ಲಿಗೆ ಸೆಳೆಯಿತು. ಚಿತ್ರದ ಶೀರ್ಷಿಕೆ ನೋಡಿದಾಗ ಇದೊಂದು ಬರೀ ಪ್ರೇಮಕತೆಯ ಚಿತ್ರ ಅತಂದುಕೊಂಡರೂ, ಇದು ಎಲ್ಲಾ ಅಂಶಗಳು ಇರುವಂತಹ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌, ರೋಮಾನ್ಸ್‌ ಜತೆಗೆ ಕಾಮಿಡಿ ಕೂಡ ಚಿತ್ರದಲ್ಲಿದೆʼ ಎನ್ನುತ್ತಾ ತಾವು ಇಲ್ಲಿಗೆ ಬಂದಿರುವುದರ ಕತೆ ಬಿಚ್ಚಿಟ್ಟರು.


ಚಿತ್ರಕತೆ ಜತೆಗೆ ಸಂಭಾಷಣೆ ಬರೆದಿರುವ ನಿರ್ದೇಶಕ ಸ್ಮೈನ್‌ ಶೀನು, ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಇದೊಂದು ಲವ್‌ ಸಬ್ಜೆಕ್ಟ್‌ ಸಿನಿಮಾ ಮಾತ್ರವಲ್ಲ, ಕತೆಯಲ್ಲೊಂದು ಒಳ್ಳೆಯ ಮೆಸೇಜ್‌ ಕೂಡ ಇದೆ. ಈ ಕಾಲದ ಹುಡುಗ-ಹುಡುಗಿಯರೆಲ್ಲ ವೈಫೈ ಪ್ರೀತಿಯ ಹಿಂದೆ ಬಿದ್ದಿದ್ದಾರೆ. ಮೊಬೈಲ್‌, ಇಂಟರ್ನೆಟ್‌ ಅಂತ ಮಾನವೀಯ ಸಂಬಂಧ ಮರೆಯುತ್ತಿದ್ದಾರೆ. ಅದೆಲ್ಲಕ್ಕಿಂತ ನಮ್ಮ ನಡುವಿವ ಸಂಬಂಧ , ಪ್ರೀತಿಯೇ ಮುಖ್ಯ ಎನ್ನುವುದನ್ನು ಕತೆ ಹೇಳುತ್ತದೆʼ ಎಂದರು ಸ್ಮೈಲ್‌ ಶೀನು.

ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯಕ್ಕೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಹಾಡುಗಳಿಗೆ ವಿದೇಶಕ್ಕೂ ಹೋಗುವ ಆಲೋಚನೆ ಚಿತ್ರ ತಂಡದಲ್ಲಿದೆ. ಟಾಲಿವುಡ್‌ ನ ಹೆಸರಾಂತ ನಟ ದೇವ್‌ ಗಿಲ್‌ ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಂತೆ. ಚಿತ್ರದ ಆರು ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದು, ಚರಣ್‌ ಅರ್ಜುನ್‌ ಸಂಗೀತ ನೀಡಿದ್ದಾರೆ. ಇಸ್ಮಾರ್ಟ್‌ ಶಂಕರ್‌, ಅಲಾ ವೈಕುಂಠಪುರಂಲೂ ಖ್ಯಾತಿಯ ರಿಯಲ್‌ ಸತೀಶ್‌ ಅ್ಯಕ್ಷನ್‌ ಡೈರೆಕ್ಷನ್‌ ಮಾಡುತ್ತಿರುವುದಾಗಿ ಚಿತ್ರ ತಂಡ ಹೇಳಿದೆ.

Categories
ಸಿನಿ ಸುದ್ದಿ

ಇದು ನಿಮ್ಮೂರು, ಹಳ್ಳಿ ಸೊಗಡಿನ ಬೆಳ್ಳಿತೆರೆಯ ಊರು !

ಹಠವಾದಿ ಕ್ರಿಯೇಷನ್ಸ್‌ ಮೂಲಕ ರಾಜಶೇಖರ್ ಚಂದ್ರಶೇಖರ್‌ ನಿರ್ಮಿಸಿದ ಸಿನಿಮಾ

ಇದು ನಿಮ್ಮೂರು ಅಂದ್ರೆ, ನಮ್ಮೂರು ಕೂಡ. ನಿಮ್ಮೂರು ಆಗಲಿ, ನಮ್ಮೂರು ಆಗಲಿ ಎರಡು ಹಳ್ಳಿ. ಆ ಹಳ್ಳಿಯೊಳಗೆ ಏನೀರಲ್ಲ ಹೇಳಿ? ಹಾಸ್ಯ, ರಾಜಕೀಯ, ವಿಡಂಬನೆ, ಗಲಾಟೆ, ಗೂಂಡಾಗಿರಿ, ತಮಾಷೆ ಎಲ್ಲವೂದರ ಮಿಕ್ಸರ್‌ ಹಳ್ಳಿ. ಆ ಹಳ್ಳಿಯೊಳಗಿನ ಹಾಸ್ಯ ಹೇಗಿರುತ್ತೆ ಅನ್ನೋದನ್ನೇ ಪ್ರಧಾನವಾಗಿಟ್ಟುಕೊಂಡು “ನಿಮ್ಮೂರು ʼ ಹೆಸರಲ್ಲೊಂದು ಸಿನಿಮಾ ರೆಡಿ ಆಗಿದೆ. ದಾವಣಗೆರೆ ಮೂಲದ ರಾಜಶೇಖರ್‌ ಚಂದ್ರಶೇಖರ್‌ ಇದರ ನಿರ್ಮಾಪಕರು. ಹಠವಾದಿ ಕ್ರಿಯೇಷನ್ಸ್‌ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.

ವಿಜಯ್‌.ಎಸ್‌ ಈ ಚಿತ್ರದ ನಿರ್ದೇಶಕ. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ತಲಕಾಡು, ಹಾಸನ, ಸಕಲೇಶಪುರ ಹಾಗೂ ರಾಣಿಬೆನ್ನೂರು ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿಜಯ್‌ ಎಸ್.‌ ಅವರ ಪ್ರಕಾರ ಇದೊಂದು ಹಳ್ಳಿ ಸೊಗಡಿನ ಕತೆ. ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕತೆಯ ಹೈಲೈಟ್ಸ್‌ ಅಂತೆ.
” ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯ ಪ್ರಜ್ನೆ ಹೇಗಿರುತ್ತೆ ಎನ್ನುವುದು ಚಿತ್ರದ ಪ್ರಮುಖ ಅಂಶ. ಜತೆಗೆ ಒಂದು ಉತ್ತಮ ಸಂದೇಶ ಚಿತ್ರದಲ್ಲಿದೆ. ಅಲ್ಲದೇ ಗ್ರಾಮೀಣ ಭಾಗದ ಜನರಿಗೆ ಇದು ತಿಳಿದುಕೊಳ್ಳಲೇಬೇಕಾದ ಸಂದೇಶʼ ಎನ್ನುತ್ತಾರೆ ನಿರ್ದೇಶಕ ವಿಜಯ್.‌ ಸದ್ಯಕ್ಕೀಗ ಚಿತ್ರಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿದಿದೆ. ಹಾಗೆಯೇ ಚಿತ್ರದ ಫಸ್ಟ್‌ ಕಾಪಿ ಹೊರ ಬಂದಿದೆ. ಹಾಗೆಯೇ ಚಿತ್ರವನ್ನು ಶೀಘ್ರವೇ ತೆರೆಗೆ ತರುವ ಯೋಚನೆ ಚಿತ್ರ ತಂಡಕ್ಕಿದೆ.

ಚಿತ್ರದ ತಾರಾಗಣದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇದ್ಧಾರೆ. ಲಕ್ಕಿರಾಮ್‌, ವೀಣಾ ಗಂಗಾರಾಮ್‌, ತ್ರಿವಿಕ್ರಮ್‌, ಸಿದ್ದು ಮಂಡ್ಯ, ಮಂಜುನಾಥ್‌, ಅಂಜಿನಪ್ಪ, ಸುಧಾ, ಶ್ರೀಕಾಂತ್‌ ಹೊನ್ನವಳ್ಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಹಾಗೆಯೇ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್‌ ಕಶ್ಯಪ್‌ ಮಧು ಸುದಂಡಿ ಸಂಗೀತ ಸಂಯೋಜನೆ, ಹನುರಾಜ್‌ ಮಧುಗಿರಿ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸವಿದೆ.

Categories
ಸಿನಿ ಸುದ್ದಿ

ಕೆಂಡ‌ ಸಂಪಿಗೆಯ ಹುಡುಗನ ‘ ಕಾಲಾ ಪತ್ಥರ್ ‘ ,’ಕಾಲೇಜ್ ಕುಮಾರ್’ ವಿಕ್ಕಿ ಈಗ ಪಕ್ಕಾ ಕಮರ್ಷಿಯಲ್ !

ಸದ್ಯಕ್ಕೆ ಫಸ್ಟ್ ಲುಕ್ ಮೂಲಕ ಸುದ್ದಿ ಮಾಡಿ ವಿಕ್ಕಿ ವರುಣ್ ಹೊಸ ಸಿನಿಮಾ

ಕೆಂಡ ಸಂಪಿಗೆಯ ಹುಡುಗ ವಿಕ್ಕಿ ವರುಣ್ ಮತ್ತೆ ಬಂದಿದ್ದಾರೆ. ‘ ಕಾಲೇಜ್ ಕುಮಾರ್ ‘ ಚಿತ್ರದ ಒಂದಷ್ಟು ಗ್ಯಾಪ್ ನಂತರವೀಗ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದೊಂದಿಗೆ ಹೊಸ ಅವತಾರ ತಾಳಿದ್ದಾರೆ‌ ‌‌. ಅಂದ ಹಾಗೆ ಆ ಹೊಸ ಅವತಾರದ ಚಿತ್ರ ಕಾಲಾ ಪತ್ಥರ್. ಇಂದು ಅದರ ಫಸ್ಟ್ ಲುಕ್ ಹೊರ ಬಂದಿದೆ. ವಿಕ್ಕಿಯ ಹೊಸ ಅವತಾರದ ದರ್ಶನವಾಗಿರುವುದು ವಿಶೇಷ.

ಇನ್ನು ‘ಕಾಲ ಪತ್ಥರ್’ ಅಂದಾಕ್ಷಣ ಎಲ್ಲೋ ಕೇಳಿದ ನೆನಪು ಅಂತ ನಿಮಗನಿಸಿದರೂ ಅಚ್ಚರಿ ಇಲ್ಲ. ಯಾಕಂದ್ರೆ ಹಿಂದಿಯಲ್ಲಿ ಇದೇ ಹೆಸರಲ್ಲೊಂದು ಸಿನಿಮಾ ಬಂದಿತ್ತು. ಅದು ಯಶ್ ಚೋಪ್ರಾ ನಿರ್ದೇಶನದ ಚಿತ್ರ. ಶಶಿ ಕಪೂರ್, ಅಮಿತಾಬ್ ಬಚ್ಚನ್, ರಾಖೀ ಗುಲ್ಜಾರ್, ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡ ತಾರಾಗಣ ಅಲ್ಲಿತ್ತು. ಸಹಜವಾಗಿ ಇದು ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗೆಲುವು ಕಂಡಿತು. ಅದೇ ಚಿತ್ರದ ಶೀರ್ಷಿಕೆ ಈಗ ಕನ್ನಡಕ್ಕೂ‌ಬಂದಿದೆ. ಹಾಗಂತ‌ ಇದು ಆ ಚಿತ್ರದ ಮುಂದುವರೆದ ಕತೆಯಲ್ಲ.‌ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅದು ಹಿಂದಿ ಕಾಲಾ ಪತ್ತರ್, ಇದು ಕನ್ನಡದ ಕಾಲಾ‌ಪತ್ಥರ್!

ವಿಕ್ಕಿಯ ಕಮರ್ಷಿಯಲ್ ಎಂಟ್ರಿಗೆ ಈ ಟೈಟಲ್ ಸಿಕ್ಕಿದ್ದೇ ವಿಶೇಷಾಗಿದೆ. ಯಾಕಂದ್ರೆ ‘ಕಾಲಾ ಪತ್ಥರ್’ ಎನ್ನುವ ಟೈಟಲ್ ನಲ್ಲೇ ಒಂದು ಪೋರ್ಸ್ ಇದೆ, ಗತ್ತು ಇದೆ.ಅದಕ್ಕೆ ತಕ್ಕಂತೆಯೇ ಅದರ ಫಸ್ಟ್ ಲುಕ್ ಕೂಡ ಹೊರ ಬಂದಿದೆ‌. ಲವರ್ ಬಾಯ್, ಕಾಲೇಜು ಹುಡುಗ ಎನ್ನುವ ಇದುವರೆಗಿನ ಅವರ ಕ್ಯಾರೆಕ್ಟರ್, ಔಟ್ ಲುಕ್ ಹಾಗೂ ಆ ಮ್ಯಾನರಿಸಂ ಆಚೆ, ಪಕ್ಕ ಮಾಸ್ ಹೀರೋ ಆಗಿ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಆ ದೃಷ್ಟಿಯಲ್ಲಿ ಯುವ ಕಲಾವಿದ ವಿಕ್ಕಿ ವರುಣ್ ಅವರಿಗೆ ಇದು ಬಹುದೊಡ್ಡ ನಿರೀಕ್ಷೆ ಯ ಚಿತ್ರ. ಉಳಿದಂತೆ ಎಸ್ ಅಂಡ್ ಎಸ್ ಎಂಟರ್ ಪ್ರೈಸ್ ಸ್ ಮೂಲಕ ನವೀನ್ ಎನ್ನುವವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದು, ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೇ ಚಿತ್ರದ ಸಾಹಿತ್ಯ ಕ್ಕೆ ಯೋಗರಾಜ್ ಭಟ್, ಹರಿ ಸಂತೋಷ್, ಜಯಂತ್ ಕಾಯ್ಕಿಣಿ ಸಾಥ್ ನೀಡಿದ್ದಾರೆ. ಕೆ.ಎಂ. ಪ್ರಕಾಶ್‌ ಸಂಕಲನ ಮಾಡುತ್ತಿದ್ದಾರೆ.‌ಸದ್ಯಕ್ಕೆ ಇಷ್ಟು ಮಾಹಿತಿ ರಿವೀಲ್ ಆಗಿದೆ.

Categories
ಸಿನಿ ಸುದ್ದಿ

ಗಾಜನೂರಿಗೆ ಮುಹೂರ್ತ-ಕಂಠೀರವದಲ್ಲಿ ರಂಗೇ ರಂಗು, ಹೊಸಬರ ಸಿನಿಮಾಕ್ಕೆ ಬಂದು ಹರಸಿದ ಅನುಭವಿಗಳ ದಂಡು !

ಅವತಾರ್‌, ಇದು  ನಟ ಅದ್ವೈತ ಅವರ ಹೊಸ ಅವತಾರ

ಬಹುದಿನಗಳ ನಂತರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮತ್ತೆ ಸಿನಿಮಾ ಕಳೆಯ ರಂಗು ತುಂಬಿಕೊಂಡಿತು. ʼಗಾಜನೂರುʼ ಹೆಸರಿನ ಚಿತ್ರದ ಮುಹೂರ್ತ ಕಾರ್ಯಕ್ರಮ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ರಂಗು ಕಳೆ ಗಟ್ಟುವಂತೆ ಮಾಡಿತು. ಚಿತ್ರೋದ್ಯಮದ ಹಲವು ಗಣ್ಯರು ಈ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಅಂದ ಹಾಗೆ , “ಗಾಜನೂರುʼ ಹೊಸಬರ ಸಿನಿಮಾ. ನಿರ್ದೇಶಕ ನಂದಕಿಶೋರ್‌ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಜಯ್‌ ಇದೇ ಮೊದಲು ಆಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ. ಹಾಗೆಯೇ ಕಲಬುರಗಿ ಮೂಲದ ಅವಿನಾಶ್‌ ಈ ಚಿತ್ರದ ನಿರ್ಮಾಪಕ. ಮೂಲತಃ ಉದ್ಯಮಿಯಾಗಿರುವ ಅವಿನಾಶ್‌ ಅವರಿಗೆ  ಇದು ಚೊಚ್ಚಲ ಸಿನಿಮಾ. ಅವತಾರ್‌ ಹಾಗೂ ಸೋನಲ್‌ ಮಾಂತೆರೋ ಈ ಚಿತ್ರದ ನಾಯಕ-ನಾಯಕಿ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದ್‌ ಕಿಶೋರ್‌ ಅತಿಥಿಗಳಾಗಿ ಬಂದಿದ್ದರು.

ಧ್ರುವ ಸರ್ಜಾ ಕ್ಲಾಪ್‌ ಮಾಡಿದರೆ, ನಂದ್‌ ಕಿಶೋರ್‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ʼಗಾಜನೂರುʼಚಿತ್ರದ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದರು. ಸದ್ಯಕ್ಕೆ ಮುಹೂರ್ತ ಮುಗಿಸಿಕೊಂಡಿರುವ ಚಿತ್ರ ತಂಡ ಫೆಬ್ರವರಿ ಎರಡನೇ ವಾರದಿಂದ ಚಿತ್ರೀಕರಣ ಶುರುಮಾಡಲಿದೆಯಂತೆ. ಮಂಗಳೂರು, ಬೆಂಗಳೂರು , ಸಕಲೇಶಪುರ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮಾತಿನ ಭಾಗದ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದೆ. ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲಾನ್‌ ಕೂಡ ಚಿತ್ರ ತಂಡದ್ದು. ಮುಹೂರ್ತದ ನಂತರ ಮಾಧ್ಯಮದ ಮುಂದೆ ಬಂದಿದ್ದ ಚಿತ್ರದ ನಿರ್ದೇಶಕ ವಿಜಯ್‌, ಚಿತ್ರ ತಂಡವನ್ನು ಪರಿಚಯಿಸುವ ಮೂಲಕ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.

” ಗಾಜನೂರು ಅಂದಾಕ್ಷಣ ಕನ್ನಡದ ಮೇರು ನಟ ರಾಜ್‌ ಕುಮಾರ್‌ ಅವರ ಊರು ನೆನಪಾಗುವುದು ಸಹಜ. ಆದರೆ ಅದಕ್ಕೂ ಈ ಚಿತ್ರಕ್ಕೂ ಸಂಬಂಧ ಇಲ್ಲ. ಬದಲಿಗೆ ಈ ಕತೆ ನಡೆಯುವುದು ಶಿವಮೊಗ್ಗ ಜಿಲ್ಲೆ ಗಾಜನೂರು ಎಂಬಲ್ಲಿ. ಹಾಗಾಗಿಯೇ ಚಿತ್ರಕ್ಕೆ ಗಾಜನೂರು ಅಂತ ಹೆಸರಿಟ್ಟಿದ್ದೇವೆʼ ಅಂತ ಚಿತ್ರದ ಶೀರ್ಷಿಕೆಯ ಬಗೆಗಿನ ಕುತೂಹಲಕ್ಕೆ ವಿವರ ನೀಡಿದರು ನಿರ್ದೇಶಕ ವಿಜಯ್.‌ ಇನ್ನು ಚಿತ್ರದ ಕತೆಯ ಬಗ್ಗೆಯೂ ಅವರು ವಿವರ ಕೊಟ್ಟರು.” ಇದೊಂದು ಥ್ರಿಲ್ಲರ್‌ ಕಥಾ ಹಂದರ ಕತೆ. ಸಾಮಾನ್ಯವಾಗಿ ಥ್ರಿಲ್ಲರ್‌ ಅಂದ್ರೆ ಅದೊಂದು ಮರ್ಡರ್‌ ಮಿಸ್ಟ್ರಿಯೇ ಆಗಿರಬೇಕು ಅಂತ ಅಂದುಕೊಳ್ಳುವುದು ಸಹಜ. ಆದರೆ ಇದು ಅದಕ್ಕೆ ಭಿನ್ನವಾದ ಸಿನಿಮಾ. ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ಒಂದು ಮಿಸ್ಸಿಂಗ್‌ ಕೇಸು ದಾಖಲಾಗುತ್ತದೆ. ಅದರ ಸುತ್ತಮುತ್ತ ಈ ಕಥೆ ಸಾಗುತ್ತದೆʼ ಎನ್ನುವುದು ನಿರ್ದೇಶಕ ವಿಜಯ್‌ ಮಾತು. ಚಿತ್ರದ ಕಥೆಗೆ ಬರಹಗಾರ ಕೀರ್ತಿ ಸಾಥ್‌ ನೀಡಿದ್ದಾರೆ.

ಚಿತ್ರದ ನಾಯಕ ನಟ ಅದ್ವೈತ ತಮ್ಮ ಹೆಸರನ್ನು ಈಗ ಅವತಾರ್‌ ಅಂತ ಬದಲಾಯಿಸಿಕೊಂಡಿದ್ದಾರೆ. ಅದ್ಯಾಕೆ ಎನ್ನುವ ಪ್ರಶ್ನೆಗೆ ಅವರು ಕೊಟ್ಟಿದ್ದು,  ಸುಮ್ನೆ ಅಂತ. ಆದರೆ ಚಿತ್ರದ ನಟ-ನಟಿಯರು ಹಾಗೆಲ್ಲ ಸುಮ್ನೆ ಹೆಸರು ಬದಲಾಯಿಸಿಕೊಳ್ಳುತ್ತಾರಾ? ಅವರಿಗೂ ಗೆಲುವು ಬೇಕು. ಹಾಗಾಗಿ ಇಂತಹ ಸರ್ಕಸ್‌ ನಡೆಯುತ್ತಲೇ ಇರುತ್ತವೆ. ಇನ್ನು ಅದ್ವೈತ ಚಿತ್ರರಂಗಕ್ಕೆ ಹೊಸಬರಲ್ಲ. ಈಗಾಗಲೇ ʼಹ್ಯಾಪಿ ಜರ್ನಿʼ, ʼಕುಮಾರಿ ೨೧ʼ ಸೇರದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಇದು ಅವರ ಎರಡನೇ ಚಿತ್ರ. ಹಾಗೆಯೇ ತೆಲುಗಿನಲ್ಲೂ ಒಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಕನ್ನಡದಲ್ಲೀಗ ಅದೃಷ್ಟ ಪರೀಕ್ಷಿಸಿಕೊಳ್ಳಲು ಅವತಾರ್‌ ಎಂಬುದಾಗಿ ಹೊಸ ಅವತಾರ ತಾಳಿದ್ದಾರೆ. ಇವರಿಗೆ ಇಲ್ಲಿ ಜೋಡಿಯಾಗಿ ʼಬನಾರಸ್‌ʼಚೆಲುವೆ ಸೋನಲ್‌ ಮಾಂತೆರೂ ಇದ್ದಾರೆ. ಇದೇ ಮೊದಲು ಚಿತ್ರ ತಂಡ ಅವರ ಹೆಸರು ರಿವೀಲ್‌ ಮಾಡಿತು. ಹಾಗೆಯೇ ಅವರು ಕೂಡ ಮುಹೂರ್ತಕ್ಕೆ ಹಾಜರಿದ್ದು, ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದ ಪೋಷಕ ಪಾತ್ರಗಳಲ್ಲಿ ರವಿಶಂಕರ್‌, ತಬಲ ನಾಣಿ, ಕುರಿ ಪ್ರತಾಪ್‌, ತರಂಗ ವಿಶ್ವ ದೊಡ್ಡ ತಾರಾಬಳಗವೇ ಇದೆ. ಶ್ರೀಧರ್‌ ವಿ. ಸಂಭ್ರಮ್‌, ಕ್ಯಾಮೆರಾ ತನ್ವಿಕ್‌ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಅನುಬಂಧ ಎನ್ನುವ ಕರುಳುಬಳ್ಳಿ ಸಂಬಂಧ, ಕನ್ನಡ ಕಿರುತೆರೆಗೆ ಇದೊಂದು ದಾಖಲೆಯ ಚಂದ !

ಕನ್ನಡ ಅಂದ್ರೆ ಬರೀ ಭಾಷೆ ಯಲ್ಲ, ಹೆಸರು !

ಕಲರ್ಸ್‌ ಕನ್ನಡದ “ಅನುಬಂಧ ಅವಾರ್ಡ್ಸ್‌ʼ 2020 ಕಾರ್ಯಕ್ರಮ ಕನ್ನಡ ಕಿರುತೆರೆಯ ಇತಿಹಾಸಕ್ಕೆ ಒಂದು ದಾಖಲೆ. ಕನ್ನಡದ ಅಷ್ಟು ಮನರಂಜನಾ ವಾಹಿನಿಗಳ ಅವಾರ್ಡ್ಸ್‌ ಕಾರ್ಯಕ್ರಮಗಳಲ್ಲಿ ಇದೊಂದು ವಿಭಿನ್ನ, ವಿಶೇಷ.
ಅದಕ್ಕೆ ಕಾರಣವಾಗಿದ್ದು ಕನ್ನಡತಿಯಲ್ಲಿ ಕಂಡ ಕಂದ. ಅದು ಕಿರುತೆರೆಗೆ ಮೂಡಿಸಿತು ಅಂದ .ಕಲರ್ಸ್‌ ಕನ್ನಡದಲ್ಲೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಕನ್ನಡತಿ ಧಾರಾವಾಹಿ. ಕತೆಯ ಆಚೆ, ಇದು ಕನ್ನಡದ ಭಾಷೆಯ ಜತೆಗೆ ಬೆಸೆದುಕೊಂಡ ಭಾವನಾತ್ಮಕ ಸಂಬಂಧವೇ ಅದರ ಯಶಸ್ಸಿನ ಗುಟ್ಟು.

ಶಾಲಾ ಉಪನ್ಯಾಸಕಿಯಾದ ಧಾರಾವಾಹಿಯ ಕಥಾ ನಾಯಕಿ, ತನ್ನ ಬದುಕಿನ ಕತೆ ಹೇಳುವುದರ ಜತೆಗೆ ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾ ಸಾಗುತ್ತಾಳೆ. ತನ್ನ ಪ್ರೀತಿ ವಿದ್ಯಾರ್ಥಿಗಳಿಗೆ ಕನ್ನಡದ ಹೊಸ ಹೊಸ ಪದಗಳನ್ನು ಪರಿಚಯಿಸುತ್ತಾಳೆ. ವೀಕ್ಷಕ ಸಮೂಹದಲ್ಲಿ ಇದು ಕನ್ನಡದ ಜತೆಗಿನ ಭಾವನಾತ್ಮಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರೇರಣೆ ನೀಡಿದೆ.ಗಡಿ ಭಾಗದಲ್ಲಂತೂ ಕನ್ನಡತಿ ಧಾರಾವಾಹಿ ಅಂದ್ರೆ ಜನರು ಕನ್ನಡವೇ ಎಂಬಂತೆ ಪ್ರೀತಿಸುತ್ತಾರಂತೆ. ಇದು ಅಲ್ಲಿನ ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಹುಟ್ಟುವಂತೆ ಮಾಡಿದೆ. ಅದರ ಪ್ರಭಾವ ಈಗ ಅಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಅಥವಾ ಕನ್ನಡತಿ ಎಂಬುದಾಗಿ ನಾಮಕರಣ ಮಾಡಲು ಸ್ಪೂರ್ತಿ ನೀಡಿದೆ ಎನ್ನುವುದನ್ನು ಅಚ್ಚರಿ ಎನಿಸಿದರೂ ನಂಬಲೇಬೇಕು. ಯಾಕಂದ್ರೆ ಸಾಕ್ಷಿ ಕಣ್ಣೆದುರೇ ಇದೆ. ಅದನ್ನೇ ವೇದಿಕೆಗೆ ತಂದು ತೋರಿಸಿದ್ದು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ.

ಕಲರ್ಸ್‌ ಕನ್ನಡದ “ಅನುಬಂಧ ಅವಾರ್ಡ್ಸ್‌ʼ ೨೦೨೦ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಎರಡು ದಿನ ಕಳೆದಿದೆ. ಭಾನುವಾರ(ಜ.17) ಕ್ಕೆ ಸಮಾರೋಪ ಸಮಾರಂಭ. ಕೊರೋನಾ ಕಾರಣಕ್ಕೆ ಅನೇಕ ನಿರ್ಬಂಧಗಳ ನಡುವೆ ನಡೆಯುತ್ತಿದ್ದರೂ, ಆದರ ತಾರಾ ಮೆರಗಿಗೇನು ಕಮ್ಮಿ ಆಗಿಲ್ಲ. ಕಲರ್ಸ್ ಕನ್ನಡದ ಅಷ್ಟು ಕುಟುಂಬವೇ ಜಮಾಯಿಸಿಕೊಂಡಿದ್ದನ್ನು ನೀವು ನೋಡಿದ್ದೀರಿ. ಎಂದಿನಂತೆ ಈ ವರ್ಷ ಕೂಡ ಅದು ಅನೇಕ ವಿಶೇಷತೆಗಳ ಮೂಲಕ ನಡೆಯುತ್ತಿದೆ. ಬಿಗ್ ಬಾಸ್ ನಿರೂಪಕರಾಗಿದ್ದರೂ , ಇದುವರೆಗೂ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಾರದೆ ಇದ್ದ ನಟ ಕಿಚ್ಚ ಸುದೀಪ್ ಇದೇ ಮೊದಲು ಈ ವೇದಿಕೆಗೆ ಬಂದಿದ್ದಾರೆ. ಹಾಗೆಯೇ ನಾದ ಬ್ರಹ್ಮ ಹಂಸಲೇಕ ಹಾಜಾರಾಗಿದ್ದಾರೆ. ಲವ್ ಮಾಕ್ಟೆಲ್ ಖ್ಯಾತಿಯ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಬಂದಿದ್ದಾರೆ. ಅವರೆಲ್ಲರ ಜತೆಗೆ ಕರ್ಲಸ್ ಕನ್ನಡದ ಬಳಗ ಇದೇ ಅಂದ್ರೆ ಮನರಂಜನೆ ಇರಲ್ವಾ? ಅದಕ್ಕೇನು ಇಲ್ಲಿಕೊರತೆ ಇಲ್ಲ. ಅದರೊಳಗಡೆಯೇ ನಡೆದಿದೆ ನಾಮಕರಣದ ವಿಶೇಷ.

ಶುಕ್ರವಾರ ಪ್ರಸಾರವಾದ ಎಪಿಸೋಡ್ ನಲ್ಲಿ ಇದೊಂದು ಅಚ್ಚರಿ ನಡೆದು ಹೋಯಿತು. ಗಡಿ ಜಿಲ್ಲೆ ಬೆಳಗಾವಿಯ ಅಥಣಿಯಿಂದ ಬಂದಿದ್ದ ಒಂದು ದಂಪತಿ ವೇದಿಕೆ ಮೇಲಿದ್ದರು. ಅವರು ಕನ್ನಡತಿ ಧಾರಾವಾಹಿಯ ಶುದ್ಧ ಅಭಿಮಾನಿಗಳು. ಅವರ ಡಿಮ್ಯಾಂಡ್ ಅಂದ್ರೆ, ತಮ್ಮ ಹಸುಗೂಸಿಗೆ ಇದೇ ವೇದಿಕೆಯಲ್ಲಿ ಕನ್ನಡ ಅಂತ ನಾಮಕರಣ ಮಾಡಬೇಕು ಎನ್ನುವುದು. ನಿಜಕ್ಕೂ ಇದೊಂದು ವಿಶೇಷ ಕಾರ್ಯಕ್ರಮ. ಕನ್ನಡದ ಭಾಷಾ ವಿಚಾರದಲ್ಲಿ ಚಿರಕಾಲ ನೆನಪಾಗಿ ಉಳಿಯುವಂತಹದು.ಆ ಪೋಷಕರ ಇಚ್ಚಾಶಕ್ತಿಯಂತೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲೇ ನಾಮಕರಣ ಕಾರ್ಯಕ್ರಮ ಆಯೋಜಿಸಿತ್ತು. ನಾಮಕರಣಕ್ಕೆ ನಾದಬ್ರಹ್ಮ ಹಂಸಲೇಖ ಮುಖ್ಯ ಅತಿಥಿ. ಅವರ ಜತೆಗೆ ಪಂಡಿತರಾದ ಹಿರೇಮಗಳೂರು ಕಣ್ಣನ್. ಪುಟ್ಟ ಮಗುವಿಗೆ ನಾದಬ್ರಹ್ಮ ಹಂಸಲೇಖ ಅವರು ಕನ್ನಡ ಅಂತ ನಾಮಕರಣ ಮಾಡಿದರು. ಭಾವುಕರಾಗಿ ಮಾತನಾಡುತ್ತಾ, ಇದು ನಮ್ಮನ್ನು ಆಳುವವರಿಗೆ ಇದು ಗೊತ್ತಾಗಬೇಕು. ಕನ್ನಡ ಅಂದ್ರೆ ಬರೀ ಮಾತು ಅಲ್ಲ ಬದುಕು ಅಂತ ಅವರಗೆ ತಿಳಿಯಬೇಕು ಅಂತ ಸೂಚ್ಯವಾಗಿ ಚುಚ್ಚಿದರು. ಇದು ಸಾಧ್ಯವಾಗಿದ್ದು ಒಂದು ಧಾರಾವಾಹಿ ಮೂಲಕ. ಕನ್ನಡ ಕಿರುತೆರೆಗೆ ಇದೊಂದು ದಾಖಲೆ. ಹಾಗೆಯೇ ಇದು ಕಲರ್ಸ್ ಕನ್ನಡದ ಹೆಗ್ಗಳಿಕೆ.

Categories
ಸಿನಿ ಸುದ್ದಿ

ಮಗಳು ಜಾನಕಿಗೆ ದೇವರೇ ಸೃಷ್ಟಿಸಿದ ಹೀರೋ ಈತ !!

ಅವಕಾಶಗಳಿಗೆ ಹುಡುಕಿಕೊಂಡು ಹೋಗುವ ಸಂದರ್ಭ ಬಂದಿಲ್ವಂತೆ ಈ ನಟಿಗೆ…..!

ಗಾನವಿ ಲಕ್ಷ್ಮಣ್‌, ಕನ್ನಡದ ಕಿರುತೆರೆ ಲೋಕದಲ್ಲಿ ಮನೆಮಾತಾದ ಹೆಸರು. ಟಿ.ಎನ್. ಸೀತಾರಾಂ ನಿರ್ದೇಶನದ “ಮಗಳು ಜಾನಕಿʼ ಧಾರಾವಾಹಿ ನೋಡಿದವರಿಗೆಲ್ಲ ಅಚ್ಚು ಮೆಚ್ಚಿನ ನಟಿ ಇವರು. ನಟಿ ಎನ್ನುವುದಕ್ಕಿಂತ ಮಗಳು ಜಾನಕಿ. ಅದೇ ಜನಪ್ರಿಯತೆಯ ಮೂಲಕ ಅವರೀಗ ಸಿನಿಮಾ ಜಗತ್ತಿಗೂ ಕಾಲಿಟ್ಟಿದ್ದಾರೆ. ರಿಷಬ್‌ ಶೆಟ್ಟಿ ನಿರ್ಮಾಣ ಹಾಗೂ ಅಭಿನಯದ ʼಹೀರೋʼ ಚಿತ್ರದ ನಾಯಕಿ ಇವರೇ. ಈ ಚಿತ್ರವೀಗ ಚಿತ್ರೀಕರಣ ಮುಗಿಸಿ, ರಿಲೀಸ್‌ ಗೆ ರೆಡಿ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸದ್ದು ಮಾಡಲು ಶುರು ಮಾಡಿದೆ. ಅದರ ಮೊದಲ ಹಂತದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟ್ರೈಲರ್‌ ಹೊರ ಬಂದಿದೆ. ಟ್ರೈಲರ್‌ ಲಾಂಚ್‌ ಗೂ ಮುನ್ನ ದಿನ ಚಿತ್ರ ತಂಡ ಮಾಧ್ಯಮ ಮುಂದೆ ಹಾಜಾರಾಗಿತ್ತು. ಅಲ್ಲಿ ಚಿತ್ರದ ನಾಯಕಿ, “ಮಗಳು ಜಾನಕಿʼ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್‌, ಬಣ್ಣದ ಜಗತ್ತಿನ ಬಗೆಗಿನ ತಮ್ಮ ಕಲ್ಪನೆ, ಆನಂತರ ಅಲ್ಲಿಗೆ ಬಂದ ನಂತರದ ಜರ್ನಿ, ಹೀರೋ ಜತೆಗಿನ ಒಡನಾಟ, ಮುಂದಿನ ಪಯಣವೂ ಸೇರಿ ಒಂದಷ್ಟು ಸ್ವಾರಸ್ಯಕರ ಸಂಗತಿ ಹೇಳಿಕೊಂಡರು. ಅವೆಲ್ಲ ಇಲ್ಲಿವೆ. ಒವರ್‌ ಟು ಗಾನವಿ ಲಕ್ಷ್ಮಣ್…

ದೇವರೇ ಸೃಷ್ಟಿಸಿದ ಹೀರೋ..

” ಕಲಾವಿದರು ಕಲೆಯನ್ನು ಒಂದೊಂದು ದೃಷ್ಟಿಯಲ್ಲಿ ನೋಡ್ತಾರೆ, ಅನುಭವಿಸುತ್ತಾರೆ. ನಾನು ಕೂಡ ಕಲೆಯನ್ನು ನನ್ನದೇ ದೃಷ್ಟಿಯಲ್ಲಿ ನೋಡಿದೆ, ಅನುಭವಿಸಿದೆ. ಅದೊಂದು ಅಧ್ಯಾತ್ಮದ ಬಗೆಯಲ್ಲಿ. ನಾನು ಯಾವಾಗ ಕಲಾ ಲೋಕಕ್ಕೆ ಶರಣಾದೆನೋ ಅವತ್ತಿನಿಂದ ದೇವರು ಒಂದೊಂದು ವೇದಿಕೆಯನ್ನು ನನಗಾಗಿಯೇ ಸೃಷ್ಟಿಸುತ್ತಾ ಬಂದ. ಪ್ರತಿಯೊಂದು ಹೆಜ್ಜೆಯಲ್ಲೂ ಪಾಠ ಕಲಿಯುತ್ತಾ ಬಂದೆ. ಕಲೆಯನ್ನು ಹೇಗೆ ಗೌರವಿಸಬೇಕು, ಇಲ್ಲಿ ಹೇಗಿರಬೇಕು, ಹೇಗಿರಬಾರದು ಅಂತೆಲ್ಲ ಅದು ನನಗೆ ಕಲಿಸಿಕೊಟ್ಟಿದೆ. ಅದೇ ಜರ್ನಿಯಲ್ಲಿ ಮುಂದೇನು ಅಂತ ಯೋಚಿಸುತ್ತಿದ್ದಾ ದೇವರು, ನಂಗೊಂದು ಅದ್ಭುತವಾದ ವೇದಿಕೆ ಸೃಷ್ಟಿ ಮಾಡಿಟ್ಟಿದ್ದ. ಅದೇ “ಹೀರೋʼ ಚಿತ್ರ”

ನನ್ನನ್ನು ನಾನು ಕಂಡುಕೊಂಡೆ…

ಹೀರೋ ಅನ್ನೋದು ಅದ್ಭುತ ಲೋಕ. ನಾನಲ್ಲಿಗೆ ಪ್ರವೇಶಿಸುವ ಹೊತ್ತಿಗೆ ದೇವರು ಅಲ್ಲಿ ೨೩ ಚಂದದ ಸೋಲೋಗಳನ್ನಿಟ್ಟಿದ್ದ. ಅವೆಲ್ಲವೂ ನನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಪರಿಶುದ್ದ ಮನಸುಗಳು. ನನ್ನದೇ ಮನೆ ಎನ್ನುವ ವಾತಾವರಣ. ಅದೆಲ್ಲ ನೋಡಿದಾಗ ಮನಸ್ಸು ತುಂಬಿ ಬಂತು. ಇಷ್ಟು ದಿನ ನನ್ನದೇ ಕೆಲಸ. ಇನ್ನವುದೋ ಒತ್ತಡ ಅಂತೆಲ್ಲ ಕಳೆದು ಹೋಗಿದ್ದವಳು, ಒಂದು ಕ್ಷಣ ನನ್ನನ್ನು ನಾನು ಕಂಡುಕೊಳ್ಳುವಂತೆ ಆ ದೇವರೇ ಮಾಡಿದ.ಮಗುವನ್ನು ಕಳೆದುಕೊಂಡ ಒಬ್ಬ ತಾಯಿ, ಮತ್ತೆ ವಾಪಾಸ್ ಮಗು ಸಿಕ್ಕಾಗ ಆಗುವ ಸಂತೋಷ ಇರುತ್ತಾಲ್ವಾ ಅಂತ ಸಂತೋಷ ಕಂಡ ಕ್ಷಣ ಅದು‌.

ಕಲ್ಪನೆ‌ ಅಲ್ಲ, ಅದು ವಾಸ್ತವ…

ಚಿಕ್ಕ ವಯಸ್ಸಿನಲ್ಲಿ ನಂಗೊಂದು ಅಚ್ಚರಿ ಇತ್ತು. ಟಿವಿ ನೋಡುವಾಗ ಈ ಕಲಾವಿದರೆಲ್ಲ ಹೇಗೆ ತಮ್ಮೆದುರಿನ ವೀಕ್ಷಕರ ಮನಸ್ಸು ತಟ್ಟುವಂತೆ ನಟಿಸುತ್ತಾರೆ? ಅಷ್ಟೊಂದು ಶ್ರದ್ಧೆ ಅವರಿಗೆ ಹೇಗೆ ಬರುತ್ತೆ? ಅವರನ್ನು ತೆರೆ ಮೇಲೆ ತೋರಿಸಲು ಪ್ರಯತ್ನಿಸುವ ತೆರೆಯ ಹಿಂದಿನ ಜನರ ಶ್ರಮ ಹೇಗಿರುತ್ತೆ ? ಅಂತೆಲ್ಲ ಯೋಚಿಸುತ್ತಿದ್ದೆ. ಆ ಬಗ್ಗೆ ನನ್ನದೇ ಒಂದು ಕಲ್ಪನೆ ಕಟ್ಟಿಕೊಂಡಿದ್ದೆ. ಜಸ್ಟ್ ಲೈಕ್, ನಾವೆಲ್ಲ ದೇವಾಲಯಕ್ಕೆ ಹೋಗುವಾಗ ಇರುವ ಶ್ರದ್ಧೆ, ಸೈಲೆನ್ಸ್ ಹೇಗಿರುತ್ತೋ ಹಾಗೆಯೇ ಒಂದು ಸಿನಿಮಾ ಅಥವಾ ಸೀರಿಯಲ್ ಚಿತ್ರೀಕರಣದ ಸೆಟ್ ನಲ್ಲೂ ಇರುತ್ತೆ ಅಂದುಕೊಂಡಿದ್ದೆ. ನಿಜಕ್ಕೂ ಅದು ವಾಸ್ತವವೇ ಎನಿಸಿದ್ದು ಹೀರೋ ಸೆಟ್ ಗೆ ಕಾಲಿಟ್ಟಾಗ. ದೇವರು ನಂಗಲ್ಲಿ ಅದನ್ನೇ ಸೃಷ್ಟಿಸಿದ್ದ, ನಾನು ಕಂಡಿದ್ದು ಕಲ್ಪನೆಯಲ್ಲ, ವಾಸ್ತವವೇ ಅಂತ ನನಗೆ ನಾನೇ ಅಚ್ಚರಿ ಪಟ್ಟೆ.

ಗಿವ್‌ ಆಂಡ್‌ ಟೇಕ್‌ ಇಂಪಾರ್ಟೆಂಟ್…

ಕಲಾವಿದರು ಎಷ್ಟೇ ಅನುಭವಿಗಳಾದರೂ ಒಂದು ಪಾತ್ರಕ್ಕೆ ಜೀವಂತಿಕೆ‌ ಬರೋದು‌‌ ನಿರ್ದೇಶಕರ ದೃಷ್ಟಿಯಿಂದ. ‌ಹಾಗೆಯೇ ಛಾಯಾಗ್ರಾಹಕರ ಕಣ್ಣಿನಿಂದ‌. ಯಾಕಂದ್ರೆ ಕಲಾವಿದರಾಗಿ ನಾವು ಕ್ಯಾಮೆರಾ ಮುಂದೆ ನಿಂತಾಗ ನಮ್ಮೆದುರು ಕಾಣೋದು ಇಬ್ಬರೇ. ನಿರ್ದೆಶಕರು ಹಾಗೂ ಛಾಯಾಗ್ರಾಹಕರು‌‌ . ಒಂದು ಕತೆಗೆ ಅಥವಾ ಪಾತ್ರಕ್ಕೆ ಏನೆಲ್ಲ ಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಅವರ ತುಡಿತ, ಏನರ್ಜಿ ನಮ್ಮೊಳಗೆ ಪಾಸ್ ಆದಾಗಲೇ , ಒಂದೊಳ್ಳೆಯ ಅಭಿನಯ ಬರಲು ಸಾಧ್ಯ. ಹಾಗಾಗಿ ನಿರ್ದೇಶಕರು , ಛಾಯಾಗ್ರಾಹಕರು ಮತ್ತು ಕಲಾವಿದರ ನಡುವೆ ಗಿವ್ ಆಂಡ್ ಟೇಕ್ ತುಂಬಾ ಇಂಪಾರ್ಟೆಂಟ್ . ಬೈ ಲಕ್ , ನಂಗೆ ಈ ತಂಡದಲ್ಲಿ ಅಂತಹ
ಕೊಡುಕೊಳ್ಳುವಿಕೆ ಹೇರಳವಾಗಿ ಸಿಕ್ಕಿದೆ.

ಅಂತಹ‌ ಸಂದರ್ಭ ನಂಗಿನ್ನು ಬಂದಿಲ್ಲ.‌..‌

ಕಲಾಲೋಕಕ್ಕೆ ನನ್ನನ್ನು ನಾನು ಶರಣಾಗಿಸಿಕೊಂಡ ದಿನದಿಂದ ದೇವರೇ ಒಂದೊಂದು ವೇದಿಕೆ ಸೃಷ್ಟಿಸುತ್ತಾ ಬಂದ.’ ಮಗಳು ಜಾನಕಿ‌’ ನಂತರ ಮುಂದೇನು ಅಂದಾಗ ಹೀರೋ ದಂತಹ ಅದ್ಭುತ ವೇದಿಕೆ ಸಿಗುತ್ತೆ ಅಂತ ನಾನಂದುಕೊಂಡಿರಲಿಲ್ಲ‌. ಆದರೇ ಅದು ದೇವರ ಸೃಷ್ಟಿ. ಮುಂದೆ ಹೇಗೋ ನಂಗೆ‌ ಗೊತ್ತಿಲ್ಲ. ಆದರೆ ಅವಕಾಶಗಳಿಗೆ ಹುಡುಕಿಕೊಂಡು ಹೋಗುವಂತಹ ಸಂದರ್ಭವನ್ನು ದೇವರು ನಂಗಿನ್ನು‌ಕೊಟ್ಟಿಲ್ಲ. ಅವಕಾಶಗಳಿಗೆ ನಾನು‌ ಕಾಯಬೇಕು ಎನ್ನುವುದಕ್ಕಿಂತ ಅಂತಹ ಅವಕಾಶ ದೇವರೇ ಸೃಷ್ಟಿಸುತ್ತಿದ್ದಾನೆ. ಹಾಗಾಗಿ ನಾನು ಆ ಬಗ್ಗೆ‌ ತಲೆಕೆಡಿಸಿಕೊಳ್ಳುವುದಿಲ್ಲ.

….. ಇದಿಷ್ಟು‌’ ಮಗಳು ಜಾನಕಿ‌’ ಮಾತು. ‘ಹೀರೋ’ ಮೂಲಕ ಇದೇ ಮೊದಲು ಮಾಧ್ಯಮದ‌ಮುಂದೆ ಬಂದಿದ್ದ ನಟಿ ಗಾನವಿ ಲಕ್ಣ್ಮಣ್ ಸುದೀರ್ಘವಾಗಿ ಹೀಗೆ ಮಾತನಾಡಿದರು.ಮೊದಲ ಮಾತು‌ ಅಲ್ವಾ, ಸಿನಿಮಾ, ಪಾತ್ರ ಎನ್ನುವುದಕ್ಕಿಂತ ಅಧ್ಯಾತ್ಮದೊಳಗಿನ ಕಲಾ ಸರಸ್ವತಿಯ ಬಗ್ಗೆ ಹೇಳಿಕೊಂಡರು. ಇದೇ ಮಾತುಗಳು‌ ಮುಂದಿನ ಸಲವೂ ಪುನಾರವರ್ತನೆಯಾದರೆ, ಕೇಳುಗರಿಗೂ ಬೋರ್ ಆದೀತು. ಆದರೆ ಟಿ.ಎನ್. ಸೀತಾರಾಂ ಗರಡಿಯಲ್ಲಿ ಪಳಗಿರುವ ಗಾನವಿ ಅವರಿಗೆ ಅದೆಲ್ಲ ಸೆನ್ಸ್ ಇದ್ದೇ ಇದೆ ಎನ್ನುವುದು ಕೂಡ ಅಷ್ಟೇ ಸತ್ಯ.

Categories
ಸಿನಿ ಸುದ್ದಿ

ಕೆಜಿಎಫ್‌ 2 ಟೀಸರ್‌ ಗೆ ಆರ್‌ಜಿವಿ ಪ್ರಶಂಸೆ, ‘ ಕೆಜಿಎಫ್‌ 2’ ಹೊಗಳುವ ನೆಪದಲ್ಲಿ ರಾಜ್‌ಮೌಳಿಗೆ ಟಾಂಗ್‌ ಕೊಟ್ಟ ವರ್ಮ…..

ವರ್ಮ ಅಂದ್ರೆ  ವಿವಾದ ಇರಲೇಬೇಕಾ?

ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ” ಕೆಜಿಎಫ್‌ 2 ‘ ಚಿತ್ರದ ಟೀಸರ್‌ ಜಾಗತಿಕ ಮಟ್ಟದಲ್ಲೇ ದೊಡ್ಡ ಹವಾ ಸೃಷ್ಟಿಸುತ್ತಿದೆ. ಟೀಸರ್‌ ಲಾಂಚ್‌ ಇಲ್ಲಿಗೆ ಒಂದು ವಾರ ಕಳೆದಿದೆ. ಈ ಹೊತ್ತಿಗೆ ಸೋಷಲ್‌ ಮೀಡಿಯಾದಲ್ಲಿ ಟೀಸರ್‌ ವೀಕ್ಷಿಸಿದವರ ಸಂಖ್ಯೆ 15 ಕೋಟಿ ಗೂ ಹೆಚ್ಚಿದೆ. ಅತೀ ಕಡಿಮೆ ಅವದಿಯಲ್ಲಿ ಇಷ್ಟು ಪ್ರಮಾಣದಲ್ಲಿ ವೀಕ್ಷಣೆ ಮಾಡಿದ ದಾಖಲೆ ಯಾವುದೇ ಚಿತ್ರಕ್ಕಿಲ್ಲ. ಅದೀಗ ಕೆಜಿಎಫ್‌ 2 ಚಿತ್ರಕ್ಕೆ ದಕ್ಕಿದೆ. ಈಗಾಗಲೇ ಇದ್ದ ಹಲವು ದಾಖಲೆಗಳನ್ನು ಅದು ಬ್ರೇಕ್‌ ಮಾಡಿದ್ದು, ಚಿತ್ರ ರಂಗದ ಗಣ್ಯರಿಂದ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಶುಕ್ರವಾರ ʼಕೆಜಿಎಫ್‌ ೨ʼ ಚಿತ್ರದ ಟೀಸರ್‌ ಮೆಚ್ಚಿಕೊಂಡು ಭಾರತೀಯ ಚಿತ್ರ ರಂಗ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದ ರಾಮ್‌ ಗೋಪಾಲ್‌ ವರ್ಮ್‌ ಕೂಡ ಟ್ವಿಟ್‌ ಮಾಡಿದ್ದಾರೆ.

ವರ್ಮ ಟ್ವಿಟ್‌ ಮಾಡಿರುವ ರೀತಿಯೇ ವಿಚಿತ್ರವಾಗಿದೆ. ಯಾರನ್ನು ಹೊಗಳುವ ನೆಪದಲ್ಲಿ ಇನ್ನಾರನ್ನೋ ತೆಗಳಿದರೂ ಎನ್ನುವ ಹಾಗೆ ಆರ್‌ಜಿವಿ ಟ್ವಿಟ್‌ ಮಾಡಿದ್ದಾರೆ. ” ಬಾಹುಬಲಿ 2 ‘ ಚಿತ್ರದ ಟ್ರೈಲರ್‌ 11 ಕೋಟಿ ವೀಕ್ಷಣೆ ರೀಚ್‌ ಆಗುವುದಕ್ಕೆ ಮೂರು ವರ್ಷ ತೆಗೆದುಕೊಂಡಿತು. ಆರ್‌ ಆರ್‌ ಆರ್‌ ಚಿತ್ರದ ಟೀಸರ್‌ 3.5 ಕೋಟಿ ವೀಕ್ಷಣೆ ಪಡೆಯುವುದಕ್ಕೆ ಮೂರು ತಿಂಗಳು ಬೇಕಾಯಿತು. ಆದರೆ ‘ಕೆಜಿಎಫ್‌ 2 ‘ ಚಿತ್ರದ ಟೀಸರ್‌ ಮೂರು ದಿವಸದಲ್ಲಿ 14 ಕೋಟಿ ವೀಕ್ಷಣೆ ಪಡೆದಿದೆ. ಎಲ್ಲಾ ಕನ್ನಡಿಗರ ಪರವಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಇತರೆ ಭಾಷೆಯ ಚಿತ್ರರಂಗಕ್ಕೆ ಕೊಟ್ಟ ಸ್ಟಮಕ್‌ ಪಂಚ್‌ ಇದುʼ ಅಂತ ವರ್ಮ ಟ್ವಿಟ್‌ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಿಷಬ್‌ ಶೆಟ್ಟಿ ಸಹಾಯಕನ ಹೊಸ ಸಾಹಸ, ನಿರ್ದೇಶನಕ್ಕೆ ಕೈ ಹಾಕಿದ ರಾಘವೇಂದ್ರ ವಿ. ಇಳಿಗಾರ್‌

ಬುದ್ದ ಮಾರ್ಗ ತುಳಿದ ಹೊಸ ಪ್ರತಿಭೆ

ʼಮುಂಗಾರು ಮಳೆʼ ಚಿತ್ರದ ಮೂಲಕ ಯೋಗರಾಜ್‌ ಭಟ್‌ ದೊಡ್ಡ ಸಕ್ಸಸ್‌ ಕಂಡ ನಂತರ ಅವರ ಶಿಷ್ಯಂದಿರು ಒಬ್ಬೊಬ್ಬರಾಗಿಯೇ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದು ಹಳೇ ಸುದ್ದಿ. ಹಾಗೆ ಭಟ್ಟರ ಬಳಗದಿಂದ ಬಂದವರು ಚಿತ್ರೋದ್ಯಮದಲ್ಲಿ ಸಾಕಷ್ಟು ಜನರಿದ್ದಾರೆ. ಅದೇ ರೀತಿ ಈಗ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್‌ ಶೆಟ್ಟಿ ತಂಡದಲ್ಲೀಗ ಅಂತಹ ಬಿರುಗಾಳಿ ಎದ್ದಿದೆ. ಅಲ್ಲಿರುವವರ ಪೈಕಿ ಈಗ ಒಬ್ಬೊಬ್ಬರಾಗಿಯೇ ನಿರ್ದೇಶನದ ಸಾಹಸಕ್ಕಿಳಿಯುತ್ತಿದ್ದಾರೆ. ಈಗ ಅಂತಹ ಸಾಹಸದಲ್ಲೀಗ ಸುದ್ದಿಯಲ್ಲಿದ್ದವರು ರಾಘವೇಂದ್ರ ವಿ. ಇಳಿಗಾರ್‌. ಸದ್ಯಕ್ಕೆ ಟೈಟಲ್‌ ಫೈನಲ್‌ ಆಗದ ಚಿತ್ರವೊಂದಕ್ಕೆ ರಾಘವೇಂದ್ರ ವಿ. ಇಳಿಗಾರ್‌ ನಿರ್ದೇಶಕ. ಸಂಕ್ರಾಂತಿ ಹಬ್ಬಕ್ಕೆ ಅದರ ಮೊದಲ ಪೋಸ್ಟರ್‌ ಲಾಂಚ್‌ ಆಗಿದೆ. ” ಪ್ರೊಡಕ್ಷನ್‌ ೨ʼ ಹೆಸರಲ್ಲಿ ಪೋಸ್ಟರ್‌ ಹೊರ ಬಂದಿದೆ.

ಬುದ್ಧನ ಮರಣ ನಂತರ ಅವರ ಪರಿಶ್ರಮ ಯಾವ ರೀತಿ ಅನುಕರಣೆಗೆ ಬಂದ ಬಗೆಯನ್ನು ಪೋಸ್ಟರ್‌ ನಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಮಧ್ಯದಲ್ಲಿ ಬುದ್ಧನ ಮುಖ, ತುತ್ತತುದಿಯಲ್ಲಿ ಹರಿದಿರುವ ವಿಚಿತ್ರ ಧ್ವಜ, ಅಕ್ಕಪಕ್ಕದಲ್ಲಿ ಎರಡು ಮಿಲಿಟರಿ ಹೆಲಿಕಾಫ್ಟರ್‌ಗಳು ಹಾರಾಡುತ್ತಿರುವುದು, ಕೆಳಗಡೆ ಒಂದು ಕಡೆಯಲ್ಲಿ ಜೀಪುಗಳು, ಮತ್ತೊಂದು ಭಾಗದಲ್ಲಿ ವ್ಯಕ್ತಿಯೊಬ್ಬ ಕುದುರೆ ಮೇಲೆ ಕೂತಿದ್ದೇನೆ. ಪಕ್ಕದಲ್ಲೆ ಬಾಂಬ್ ಸಿಡಿಸಲು ಟ್ಯಾಂಕ್‌ವೊಂದು ಸಜ್ಜಾಗಿದೆ. ಶಾಂತಿ ಮತ್ತು ಹಿಂಸೆ ಒಟ್ಟಿಗೆ ನಿರ್ಗಮನ. ಇವೆಲ್ಲವೂ ಪೋಸ್ಟರ್‌ದಲ್ಲಿ ಕಂಡುಬಂದಿದೆ. ಇದೊಂದು ಪೌರಾಣಿಕ ಹಾಗೂ ಫ್ಯಾಂಟಸಿ ಸಾಹಸದ ಸನ್ನಿವೇಶಗಳನ್ನು ಹೊಂದಿದ್ದು, ಚಿತ್ರ ಹೊಸ ತೆರೆನಾದ ಕತೆಯನ್ನು ತೋರಿಸಲು ಹೊರಟಿದೆಯಂತೆ. ಸದ್ಯಕ್ಕೆ ಚಿತ್ರದ ಛಾಯಾಗ್ರಾಹಕರಾಗಿ ಅರ್ಜುನ್‌ ಕೋಟ್‌ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಘು ದೀಕ್ಷಿತ್‌ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಕಲಾವಿದರು ಹಾಗೂ ತಂತ್ರಜ್ಣರ ಆಯ್ಕೆ ಬಾಕಿ ಇದೆ. ಇಷ್ಟರಲ್ಲಿಯೇ ಇವೆಲ್ಲ ಪ್ರಕ್ರಿಯೆ ಮುಗಿಯಲಿದೆಯಂತೆ.


ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪೋಸ್ಟರ್‌ ಲಾಂಚ್‌ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹಾಗೆಯೇ ತಮ್ಮ ಶಿಷ್ಯ ರಾಘವೇಂದ್ರ ಅವರ ಸಿನಿ ಬದುಕಿಗೆ ಹರಸಿದ್ದಾರೆ. ರಾಘವೇಂದ್ರ ಅವರಿಗೆ ಇದು ಚೊಚ್ಚಲ ಸಿನಿಮಾವಾದರೂ, ಸಿನಿಮಾ ಜಗತ್ತು ಅವರಿಗೆ ಹೊಸದಲ್ಲ. ರಿಷಬ್‌ ಶೆಟ್ಟಿ ಅವರ ಬಳಿಯೇ ಸಾಕಷ್ಟು ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರಂತೆ. ಸೈಕಾಲಜಿ ಓದಿ, ಜೀವನದಲ್ಲಿ ಇನ್ನೇನೋ ಆಗುವ ಕನಸು ಕಂಡಿದ್ದ ರಾಘವೇಂದ್ರ ಅವರು, ಸಿನಿಮಾ ಮೇಲಿನ ಆಸಕ್ತಿಯಿಂದ ಬಣ್ಣದ ಜಗತ್ತಿಗೆ ಬಂದರಂತೆ. ವಿಶೇಷ ಅಂದ್ರೆ ಹತ್ತೋಂಬತ್ತನೇ ವಯಸ್ಸಿನಲ್ಲೇ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಗಳಿಸಿದ್ದು, ಅವರೊಳಗಿನ ನಿರ್ದೇಶಕನಾಗುವ ಕನಸಿಗೆ ಮತ್ತಷ್ಟು ರೆಕ್ಕೆ ಬರುವಂತೆ ಮಾಡಿತು ಎನ್ನುವುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ ರಾಘವೇಂದ್ರ ವಿ. ಇಳಿಗಾರ್.‌ ಇಷ್ಟರಲ್ಲಿಯೇ ಟೈಟಲ್‌ ಲಾಂಚ್‌ ಮಾಡುವುದಾಗಿ ಹೇಳಿರುವ ಚಿತ್ರ ತಂಡ, ಸದ್ಯಕ್ಕೆ ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಪ್ರಿಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಸ್ಕಾಯರ್‌ ಕಾನ್‌ಸೆಫ್ಟ್ಸ್‌ ಅಡಿಯಲ್ಲಿ ಜ್ನಾನ್‌ ಶೇಖರ್‌ ಸಿದ್ದಯ್ಯ, ರವಿಕುಮಾರ್, ಸುನಿಲ್‌ಗಾಟ್ಗೆ ಹಾಗೂ ರಾಘವೇಂದ್ರ.ಜಿ.ಆರ್ ಜಂಟಿಯಾಗಿ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Categories
ಸಿನಿ ಸುದ್ದಿ

ಲಂಕೆಯಲ್ಲಿ ಗೂಂಡಾಗಿರಿ, ಯೋಗಿ ಅವರದೇ‌ ಅಲ್ಲಿ ದಾದಾಗಿರಿ, ಇದು ಆಧುನಿಕ ರಾಮಾಯಣದ ಲಂಕೆಯಂತೆ…!

ಟೈಟಲ್ ಲಾಂಚ್ ನಲ್ಲಿ ನೋಡುಗರಿಗೆ ಭರ್ಜರಿ ಕಿರಿ ಕಿರಿ…..

ಲಂಕೆಯಲ್ಲಿ ರೌಡಿಸಂ ಅಂತೆ, ಅದು ಹೇಗೆ ? ರಾಮಾಯಣ ಬಲ್ಲವರಿಗೆ ಇದು ಅಚ್ಚರಿ. ಯಾಕಂದ್ರೆ ಅಲ್ಲಿ ಆಗಿದ್ದು ರಾಮ- ರಾವಣರ ಯುದ್ದ. ಬದಲಿಗೆ ಅಲ್ಲೂ ರೌಡಿಸಂ ಇತ್ತು ಅನ್ನೋದನ್ನು ಯಾರು ಕೇಳಿ ತಿಳಿದಿಲ್ಲ. ಆದ್ರೆ, ಇಲ್ಲಿ ಸೃಷ್ಟಿಸಿರುವವರ ‘ಲಂಕೆ’ಯಲ್ಲಿ ರೌಡಿಸಂ ಇದೆ. ಇಲ್ಲಿ ನಟ‌ ಲೂಸ್ ಮಾದ ಯೋಗೇಶ್ ಅವರದೇ ಗೂಂಡಾಗಿರಿ.ಯಾಕಂದ್ರೆ ಅವರೇ ಈ ‘ಲಂಕೆ’ ಯ‌ ರೌಡಿ !ಇ

ದು ಆಧುನಿಕ ರಾಮಾಯಣದ ಲಂಕೆ. ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ . ರಾಮ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರತಿತ್ತು. ಕೊರೋನಾ ಕಾರಣ ಇದೀಗ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್ ಸಿದ್ಧತೆಯಲ್ಲಿರುವ ಚಿತ್ರ ತಂಡ, ಈಗ ಟೈಟಲ್ ಲಾಂಚ್ ಮಾಡಿಕೊಂಡು, ಪ್ರಚಾರಕ್ಕೆ ಚಾಲನೆ ಕೊಟ್ಟಿದೆ.

ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಚಿತ್ರ ತಂಡ ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸರಿಯಾದ ವ್ಯವಸ್ಥೆ ಇಲ್ಲದೆ ಕೊಂಚ ಸಭಿಕರಿಗೆ ಕಿರಿ ಕಿರಿ ಉಂಟಾಯಿತು. ಕೊನೆಗೂ ಕಾರ್ಯಕ್ರಮ ಶುರುವಾಯಿತು.

ಮೊದಲಿಗೆ ಮಾತನಾಡಿದ ನಿರ್ದೇಶಕ ರಾಮ‌್ ಪ್ರಸಾದ್, ಕಥೆ ಬರೆಯುತ್ತಿದ್ದಂತೆ ರಾಮಾಯಣದ ತಿರುಳಿರುವ ಹಿನ್ನೆಲೆಯಲ್ಲಿ ಲಂಕೆ ಎಂದೇ ಶೀರ್ಷಿಕೆ ಫಿಕ್ಸ್ ಆಯ್ತು. ‌ಚಿತ್ರೀಕರಣ ಶುರುವಾಗಿ , ಇದೀಗ ಸಿನಿಮಾ ಚಿತ್ರ ಬಿಡುಗಡೆ ಹಂತದಲ್ಲಿದೆ ಎಂದರು ನಿರ್ದೇಶಕರು. ಚಿತ್ರದ ನಾಯಕಿಯರಾದ ಕೃಷಿ ತಾಪಂಡ ಹಾಗೂ ಕಾವ್ಯಾ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ನಟ ಸಂಚಾರಿ ವಿಜಯ್ ಈ‌ ಚಿತ್ರದ‌ಮತ್ತೋರ್ವ ಪ್ರಮುಖ ಪಾತ್ರಧಾರಿ.’ ನನ್ನ ಮತ್ತು ಯೋಗಿ ಅವರ ಮೊದಲ ಸಿನಿಮಾ ಇದು. ಇಬ್ಬರಿಗೂ ಕಾಂಬಿನೇಷನ್ ಇಲ್ಲ. ಫ್ಲ್ಯಾಶ್ಬ್ಯಾಕ್ನಲ್ಲಿ ನಡೆಯುವ ಕಥೆಯಲ್ಲಿ ಎಸ್ತರ್ ನರೋನಾ ನನಗೆ ಜೋಡಿಯಾಗಿದ್ದಾರೆ. ಮಂಡ್ಯದಲ್ಲಿ ನಡೆದ ನೈ ಘಟನೆಯನ್ನೇ ವಿಶೇಷವಾಗಿ ತೋರಿಸಿದ್ದಾರೆ ನಿರ್ದೇಶಕರು ಎಂದರು ನಟ ವಿಜಯ್.

ಹೆಚ್ಚೇನೂ ಮಾತನಾಡದ ಲೂಸ್ ಮಾದ ಯೋಗಿ,ರೌಡಿಸಂ ಹಿನ್ನೆಲೆಯ ಕಥೆ. ಸಂಚಾರಿ ವಿಜಯ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ ಎಂದರು. ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ಮಾತನಾಡಿ, ಒಂದೊಳ್ಳೆಯ ಸಿನಿಮಾ‌ಮಾಡಿದ‌ ಅನುಭವ ಹೇಳಿಕೊಂಡರು. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು. ಇದೇ ವೇಳೆ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ, ಜನ್ಮದಿನದ ನಿಮಿತ್ತ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿತು ಚಿತ್ರತಂಡ.

Categories
ಸಿನಿ ಸುದ್ದಿ

ಸಿನಿಮಾ ನಿರ್ಮಾಣಕ್ಕೆ ಬಂದ ಮೈಲಾರಿ ಗ್ರೂಪ್, ಶೀಘ್ರವೇ ಹೊಸ ಸಿನಿಮಾ ಆರಂಭ ಎನ್ನುತ್ತಾರೆ ನಿರ್ಮಾಪಕ ಮಹೇಶ್

ಕನ್ಮಡದ ಸಿನಿಮಾ ಪ್ರೇಕ್ಷಕರ ಮುಂದೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ‌ !

ಹಾಸನ ಮೂಲದ ಮೈಲಾರಿ ಗ್ರೂಪ್ ಆಫ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ‌ ಮುಂದಾಗಿದೆ. ಸಂಸ್ಥೆಯ ಮಾಲೀಕರಾದ ಮೈಲಾರಿ ಮಹೇಶ್ ಸಿನಿಮಾ ನಿರ್ಮಾಣಕ್ಕೆ ವಿಶೇಷ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗುವುದಾಗಿ ಅನೌನ್ಸ್ ಮಾಡಿದ್ದಾರೆ. ಕನ್ನಡ ಚಿತ್ರ ರಂಗಕ್ಕೆ ಇದು ಮೈಲಾರಿ ಗ್ರೂಪ್ ಆಫ್ ಸಂಸ್ಥೆಯ ಮೊದಲ ಕೊಡುಗೆ.

ನಿರ್ಮಾಪಕ‌ ಮಹೇಶ್ ಹಾಗೂ ನಿರ್ದೇಶಕ ರಾಜ್ ಚೈತನ್ಯ

ಕನ್ನಡದ ಹೆಸರಾಂತ ನಿರ್ದೇಶಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಬಳಿ ಕೆಲಸ ಯುವ ನಿರ್ದೇಶಕ ರಾಜ ಚೈತನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿ ದ್ದಾರೆ.ಈಗಾಗಲೇ ಅವರು, ‘ಅಮೃತ ವರ್ಷಿಣಿ’, ‘ಕೃಷ್ಣ ರುಕ್ಕು’, ‘ಲಕ್ಷ್ಮೀ ಬಾರಮ್ಮ’, ‘ಜೊತೆಜೊತೆಯಲಿ’ ಧಾರಾವಾಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವಿ.ಆ ಮೂಲಕವೇ ಈಗ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ‌ ಗುರುರಾಜ್ ಎಂ ದೇಸಾಯಿ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ತಾರಾಗಣದ ವಿವರ ಲಭ್ಯವಾಗಿಲ್ಲ. ಆದರೆ ಚಿತ್ರ ತಂಡ ಅನುಭವಿ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿದೆ.

ಜಯಂತ್ ಕಾಯ್ಕಿಣಿ

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ರಾಜ ಚೈತನ್ಯ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರಂತೆ. ಹಾಗೆಯೇ, ಜಾನಿ, ಮುರಳಿ, ಚಿನ್ನಿಪ್ರಕಾಶ್, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ, ರವಿವರ್ಮ, ವಿನೋದ್ ಹಾಗೂ ವಿಕ್ರಂ ಮೋರ್ (ಕೆ ಜಿ ಎಫ್) ಅವರ ಸಾಹಸ ‌ನಿರ್ದೇಶನ ಈ ಚಿತ್ರಕ್ಕಿದೆ.‌ಮಹೇಶ್ ತಲಕಾಡು ಛಾಯಾಗ್ರಾಹಕರಾಗಿ, ಜೋನಿ ಹರ್ಷ ಸಂಕಲನಕಾ ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹದೊಂದು ದೊಡ್ಡ ತಂಡವನ್ನೇ ಸೃಷ್ಟಿಸಿಕೊಂಡಿರುವ ಮೈಲಾರಿ‌ಗ್ರೂಪ್
ಬಿಗ್ ಬಜೆಟ್ ಸಿನಿಮಾ ಮಾಡುವುದು ಗ್ಯಾರಂಟಿ ಆಗಿದೆ. ಹಾಗೆಯೇ ದೊಡ್ಡ ಸ್ಟಾರ್ ಈ‌ಸಿನಿಮಾದಲ್ಲಿರುವುದು ಕೂಡ ಗ್ಯಾರಂಟಿಯಂತೆ.ಅದೆಲ್ಲವೂ ಮುಂದೆ ರಿವೀಲ್ ಆಗಲಿದೆಯಂತೆ.

ಅರ್ಜುನ್ ಜನ್ಯಾ
error: Content is protected !!