Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ನಿರ್ದೇಶಕ ಆಸ್ಕರ್ ಕೃಷ್ಣ ಇದೇ ಮೊದಲು ನಾಯಕರಾಗಿ ಅಭಿನಯಿಸಿರುವ ” ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟʼ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲು ಸಿದ್ಧತೆ ನಡೆಸಿರುವ ಚಿತ್ರ ತಂಡ ಈಗ ಚಿತ್ರದ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್ ಮಾಡ್ಬೇಕು… ಎನ್ನುವ ಸ್ಪೆಷಲ್ ಸಾಂಗ್ ನಲ್ಲಿ ಕನ್ನಡದ ಪ್ರತಿಭಾನ್ವಿತ ನಟಿ ಹರ್ಷಿತಾ ಕಲ್ಲಿಂಗಲ್ ಸಖತ್ ಆಗಿಯೇ ಕುಣಿದಿದ್ದು, ಪಡ್ಡೆ ಗಳಿಗಾಗಿಯೇ ಚಿತ್ರ ತಂಡ ಈ ಹಾಡು ಚಿತ್ರೀಕರಿಸಿದಷ್ಟು ಮಾದಕವಾಗಿದೆ.
ಐಟಂ ಮಾದರಿಯ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ಹರ್ಷಿತಾ ಕಲ್ಲಿಂಗಲ್ ಮೂಲತಃ ಬೆಂಗಳೂರಿನ ಹುಡುಗಿ. ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಪ್ಪಟ ಕನ್ನಡತಿ ಎನ್ನುವುದು ವಿಶೇಷ. ಈಗಾಗಲೇ ಮಲಯಾಳಂ, ತೆಲುಗು, ತಮಿಳು ಹಾಗೂ ಇತರೇ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹರ್ಷಿತಾ ಕಲ್ಲಿಂಗಲ್ ಈಗ ಕನ್ನಡದತ್ತ ಮುಖ ಮಾಡಿದ್ದಾರೆ. ಇದೇ ಮೊದಲು ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ ಚಿತ್ರದಲ್ಲಿನ ವಿಶೇಷ ಹಾಡಿನ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿದ್ದಾರೆ. ಇಲ್ಲಿ ಅವರನ್ನು ತಮ್ಮ ಚಿತ್ರಕ್ಕೆ ತಂದು ಕುಣಿಸಿದ್ದು ನಿರ್ದೇಶಕ ಆಸ್ಕರ್ ಕೃಷ್ಣ.
ಮನುಷ್ಯನಾಗಿ ಹುಟ್ಟಿದ್ಮೇಲೆ ಏನ್ ಮಾಡ್ಬೇಕು ಹಾಡನ್ನು ಚಿತ್ರದಲ್ಲಿ ತರಬೇಕು ಅಂದಾಗ ಅದಕ್ಕೆ ಸೂಕ್ತ ನಟಿಯನ್ನೇ ತರಬೇಕೆಂದು ಹುಡುಕಾಟದಲ್ಲಿದ್ದೇವು. ಆಗ ನಮಗೆ ಪರಿಚಯದವರ ಮೂಲಕ ಸಿಕ್ಕವರು ನಟಿ ಹರ್ಷಿಕಾ ಕಲ್ಲಿಂಗಲ್. ಈ ವೇಳೆಗಾಗಲೇ ಅವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಕನ್ನಡದವರೇ ಆಗಿದ್ದರು, ಅವರು ಮೊದಲು ಅಲ್ಲಿ ಗುರುತಿಸಿಕೊಂಡಿದ್ದರು. ಅವರನ್ನೇ ಯಾಕೆ ನಮ್ಮ ಸಿನಿಮಾದ ಮೂಲಕ ಪರಿಚಯಿಸಬಾರದು ಅಂತ ನಾವು ಹರ್ಷಿತಾ ಅವರನ್ನೇ ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಟ ಆಸ್ಕರ್ ಕೃಷ್ಣ. ಇತ್ತೀಚೆಗಷ್ಟೇ ಯುಟ್ಯೂಬ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಭಾರೀ ಮೆಚ್ಚುಗೆ ಸಿಕ್ಕಿದೆಯಂತೆ.
ರೆಡ್ ಅಂಡ್ ವೈಟ್ ಬ್ಯಾನರ್ ಅಡಿಯಲ್ಲಿ, ‘ಆಸ್ಕರ್’ ಕೃಷ್ಣರವರೇ ನಿರ್ಮಿಸಿ, ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಚಿತ್ರವಿದು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮಾರ್ಚ್ ಕೊನೆಯ ವಾರ ಈ ಚಿತ್ರವು ತೆರೆಗೆ ಬರಲಿದೆಯಂತೆ.
ಬದುಕೇ ಹಾಗೆ ಎಲ್ಲವೂ ನಾವಂದುಕೊಂಡಂತೆ ಅಲ್ಲ. ಯಾವುದನ್ನು ವಿರೋಧಿಸುತ್ತೇವೋ, ಒಂದೊಮ್ಮೆ ಅದನ್ನು ಅಪ್ಪಿಕೊಳ್ಳುವ ಸಂದರ್ಭವೂ ಬರುತ್ತೆ. ಅದಕ್ಕೆ ಡಾನ್ ಜೈರಾಜ್ ಅವರ ವಂಶ ಕೂಡ ಹೊರತಲ್ಲ. ಒಂದು ಕಾಲದ ಡಾನ್ ಜೈರಾಜ್ ಗೆ ಪೊಲೀಸರೇ ಮೊದಲ ಶತ್ರು ಆಗಿದ್ರಂತೆ. ಖಾಕಿ ಕಂಡ್ರೆ ಕೆಂಡ ಕಾರುತ್ತಿದ್ರಂತೆ. ಪೊಲೀಸರನ್ನು ನಾಯಿಗಳು ಅಂತ ಹಿಯಾಳಿಸಿದ್ರಂತೆ. ಅಂದ್ರೆ ಇವತ್ತು ಅವರ ಪುತ್ರ ಅಜಿತ್ ಜೈರಾಜ್ ಪೊಲೀಸ್ ಅಧಿಕಾರಿ !
ಹೌದು, ಹೊಸಬರೇ ನಿರ್ಮಿಸಿ, ನಿರ್ದೇಶಿಸಿರುವ “ರೈಮ್ಸ್’ ಹೆಸರಿನ ಚಿತ್ರದಲ್ಲಿ ಜೈರಾಜ್ ಪುತ್ರ ಅಜಿತ್ ಜೈರಾಜ್ ಈಗ ಖಾಕಿ ತೊಟ್ಟಿದ್ದಾರೆ. ಕ್ರೈಮ್ ಪ್ರಕರಣ ಭೇದಿಸಲು ಪೊಲೀಸ್ ಅಧಿಕಾರಿಯಾಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಈಗಾಗಲೇ ಮೂರ್ನಾಲ್ಕು ಚಿತ್ರಗಳಲ್ಲಿ ಸಹನಟರಾಗಿ ಅಭಿನಯಿಸಿದ್ದ್ ಅಜಿತ್ ಜೈರಾಜ್, ಇದೇ ಮೊದಲು ” ರೈಮ್ಸ್’ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ಅವರದು ಪೊಲೀಸ್ ಅಧಿಕಾರಿ ಪಾತ್ರ ಎನ್ನುವುದೇ ವಿಶೇಷ.
ಯುವ ಪ್ರತಿಭೆ ಅಜಿತ್ ಕುಮಾರ್ ನಿರ್ದೇಶನ ದ ” ರೈಮ್ಸ್ʼ ಕಳೆದ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು. ಇದೀಗ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ರಿಲೀಸ್ ಗೆ ರೆಡಿ ಆಗಿದೆ. ಏಪ್ರಿಲ್ ನಲ್ಲಿ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರ ತಂಡವು, ಈಗ ಚಿತ್ರದ ಪೋಸ್ಟರ್ ಲಾಂಚ್ ಮೂಲಕ ಸದ್ದು ಮಾಡಿದೆ. ಆ ದಿನ’ ರೈಮ್ಸ್’ ಪೋಸ್ಟರ್ ಲಾಂಚ್ ಗೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಖ್ಯಾತಿಯ ಅಶೋಕ್ ಕುಮಾರ್ ಬಂದಿದ್ದರು.
ನಾಯಕ ನಟ ಅಜಿತ್ ಜೈರಾಜ್, ನಿರ್ದೇಶಕ ಅಜಿತ್ ಕುಮಾರ್, ಮಿಮಿಕ್ರಿ ಗೋಪಿ, ಬಾಲ ನಟಿ ಬಾಸ್ಮತಿ, ನಿರ್ಮಾಪಕರಾದ ಜ್ನಾನಶೇಖರ್ ಸಿದ್ದಯ್ಯ, ರವಿಕುಮಾರ್, ಗಿರೀಶ್ ಗೌಡ, ರಮೇಶ್ ಆರ್ಯ ಹಾಜರಿದ್ದರು. ಪೋಸ್ಟರ್ ಲಾಂಚ್ ನಂತರ ಮಾತಾನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್, ನಾನು ವೃತ್ತಿಯಲ್ಲಿದ್ದಾಗ ಜೈರಾಜ್ ಮತ್ತು ನನ್ನ ನಡುವೆ ದೊಡ್ಡ ಕಾದಾಟ ನಡೆದಿತ್ತು. ಆಗಾಗ ಅವರಿಗಾಗಿ ನಾವು ಹುಡುಕುತ್ತಾ ಹೊರಟರೆ, ಜೈರಾಜ್ ತಪ್ಪಿಸಿಕೊಂಡು ಹೊಗುತ್ತಿದ್ದರು. ಹೀಗೆಯೇ ಇತ್ತು ಕಳ್ಳ-ಪೊಲೀಸ್ ಆಟ ಎನ್ನುತ್ತಾ ಜೈರಾಜ್ ಜತೆಗಿನ ತಮ್ಮ ಸಂಬಂಧವನ್ನು ವಿಭಿನ್ನವಾಗಿ ವಿವರಿಸಿದರು ಟೈಗರ್ ಅಶೋಕ್ ಕುಮಾರ್
ಅಜಿತ್ ಜೈರಾಜ್ ತಮ್ಮ ಪಾತ್ರ ಬಗ್ಗೆ ಮಾತನಾಡುತ್ತಾ, ʼ ಇದೊಂದು ಕಂಪ್ಲೀಟ್ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರ. ಇಲ್ಲಿ ನಾನೊಂದು ಕೊಲೆ ಪ್ರಕರಣ ಭೇದಿಸಲು ಹೊರಡುವ ಪೊಲೀಸ್ ಅಧಿಕಾರಿ. ಪಾತ್ರ ತುಂಬಾ ಚೆನ್ನಾಗಿದೆ. ಅಭಿನಯದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳಲು ಬಹಳಷ್ಟು ಅವಕಾಶ ಸಿಕ್ಕಿದೆʼ ಎಂದರು. ಅಜಿತ್ ಪಾತ್ರ ಬಗ್ಗೆ ಚಿತ್ರ ತಂಡವೂ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿತು.
ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕ ಬಳಗವಿದೆ. ವಿವಿಧ ಕ್ಷೇತ್ರಗಳ, ವಿಭಿನ್ನ ವ್ಯಕ್ತಿತ್ವ – ಅಭಿರುಚಿಯ ಸ್ಪರ್ಧಿಗಳು ಮನೆಯಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಳ್ಳುತ್ತಾರೆ. ನಿನ್ನೆ ಬಿಗ್‌ಬಾಸ್ 8ನೇ ಸೀಸನ್‌ಗೆ ಚಾಲನೆ ಸಿಕ್ಕಿದೆ. ಈ ಬಾರಿಯ ಹದಿನೇಳು ಸ್ಪರ್ಧಿಗಳನ್ನು ಸ್ಟಾರ್ ನಿರೂಪಕ ಸುದೀಪ್ ಅವರು ವೇದಿಕೆಗೆ ಆಹ್ವಾನಿಸಿ, ವೀಕ್ಷಕರಿಗೆ ಪರಿಚಯಿಸಿ ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ಈ ಅಭ್ಯರ್ಥಿಗಳು ಯಾರು, ಅವರ ಹಿನ್ನೆಲೆ ಏನು ಎನ್ನುವುದನ್ನು ಪರಿಚಯಿಸಿಕೊಳ್ಳೋಣ.
ಧನುಶ್ರೀ: ಇಪ್ಪತ್ತು ವರ್ಷದ ಧನುಶ್ರೀ ಹಾಸನದ ಹುಡುಗಿ. ಟಿಕ್‌ಟಾಕ್ ವೀಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಅವರ ಟಿಕ್‌ಟಾಕ್ ವೀಡಿಯೋಗಳು ಮಿಲಿಯನ್‌ಗಟ್ಟಲೆ ವೀವ್ಸ್ ಕಂಡಿವೆ. ಉತ್ತಮ ಡ್ಯಾನ್ಸರ್ ಕೂಡ ಹೌದು.
ಶುಭಾ ಪೂಂಜಾ: ಮಾಡಲಿಂಗ್, ಟೀವಿ ಜಾಹೀರಾತುಗಳ ಮೂಲಕ ಕ್ಯಾಮೆರಾ ಎದುರಿಸಿದ ಶುಭಾ ಪೂಂಜಾ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮೊಗ್ಗಿನ ಮನಸು’ ಚಿತ್ರದ ನಟನೆಗೆ ಅವರಿಗೆ ಫಿಲ್ಮ್‌ಫೇರ್ ಪುರಸ್ಕಾರ ಸಂದಿದೆ. ಸಾಲು, ಸಾಲು ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ‘ಬಿಗ್‌ಬಾಸ್’ ಅವರ ಅದೃಷ್ಟ ಬದಲಿಸಲಿದೆಯೇ ಎಂದು ನೋಡಬೇಕು.
ಶಂಕರ್ ಅಶ್ವಥ್: ಕನ್ನಡ ಚಿತ್ರರಂಗದ ಮೇರು ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಕಿರುತೆರೆ, ಸಿನಿಮಾ ನಟ. ಸೂಕ್ತ ಅವಕಾಶಗಳಿಲ್ಲದೆ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡವರು. ಜೀವನೋಪಾಯಕ್ಕಾಗಿ ನಟನೆ ಜೊತೆ ಕ್ಯಾಬ್ ಡ್ರೈವರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ ಶಂಕರ್ ಅಶ್ವಥ್.
ವಿಶ್ವನಾಥ್: ಧಾರವಾಡದ ವಿಶ್ವನಾಥ್ ‘ಹಾಡು ಕರ್ನಾಟಕ’ ಸಂಗೀತ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದವರು. ಹತ್ತನ್ನೆರೆಡರ ಹರೆಯದಲ್ಲೇ ಶಾಸ್ತ್ರೀಯ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡ ಅವರಿಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಇರಾದೆ.
ವೈಷ್ಣವಿ ಗೌಡ: ‘ಅಗ್ನಿಸಾಕ್ಷಿ’ ಕನ್ನಡ ಧಾರಾವಾಹಿಯೊಂದಿಗೆ ಜನಪ್ರಿಯತೆ ಗಳಿಸಿದವರು ವೈಷ್ಣವಿ. ಮೂಲತಃ ಭರತನಾಟ್ಯ ಕಲಾವಿದೆ. ಧಾರಾವಾಹಿ ಯಶಸ್ಸು ಅವರನ್ನು ಬೆಳ್ಳಿತೆರೆಗೆ ಕರೆದೊಯ್ದಿತು. ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಚಿತ್ರರಂಗದಲ್ಲಿ ಗಮನಾರ್ಹ ಬ್ರೇಕ್‌ನ ನಿರೀಕ್ಷೆಯಲ್ಲಿದ್ದಾರೆ.
ಕೆ.ವಿ.ಅರವಿಂದ್: ವೃತ್ತಿಪರ ಬೈಕ್ ರೇಸರ್. ಸಾಹಸ ಪ್ರವೃತ್ತಿಯ ಅರವಿಂದ್ ಹಲವಾರು ಸಿನಿಮಾ ಮತ್ತು ಟೀವಿ ಜಾಹೀರಾತುಗಳಲ್ಲಿ ಸಾಹಸ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ‘ಬೆಂಗಳೂರು ಡೇಸ್’ ಮಲಯಾಳಂ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಬಿಗ್‌ಬಾಸ್ ಮನೆಯಲ್ಲಿ ವಿಶೇಷ ಸ್ಪರ್ಧಿ.
ನಿಧಿ ಸುಬ್ಬಯ್ಯ: ‘ಅಭಿಮಾನಿ’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ನಿಧಿ ಸುಬ್ಬಯ್ಯ ಮೂಲತಃ ರೂಪದರ್ಶಿ. ‘ಪಂಚರಂಗಿ’ ಸಿನಿಮಾ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಬಾಲಿವುಡ್‌ಗೆ ಹಾರಿದ ಅವರು ನಾಲ್ಕು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸದ್ಯ ಗ್ಲಾಮರ್ ತಾರೆ.
ಶಮಂತ್: ಜನ್ಮನಾಮ ಶಮಂತ್ ಎಂದಿದ್ದರೂ ‘ಬ್ರೋ ಗೌಡ’ ಎನ್ನುವ ವಿಚಿತ್ರ ಹೆಸರಿನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ಅದು ವೆಬ್ ಸರಣಿಯೊಂದರಲ್ಲಿನ ಅವರ ಪಾತ್ರದ ಹೆಸರು. ಸಂಗೀತದಲ್ಲಿ ಆಸಕ್ತಿ ಇರುವ ಅವರು ಗಾಯಕರೂ ಹೌದು. ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದು ಅವರ ಗುರಿ.
ಗೀತಾ ಭಾರತಿ ಭಟ್: ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿದ್ದಾರೆ ಗೀತಾ ಭಟ್. ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲವೆಂದು ಅಲವತ್ತುಕೊಂಡಿದ್ದ ಅವರು ‘ಬಿಗ್‌ಬಾಸ್’ ಮನೆಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಮಂಜು ಪಾವಗಡ: ‘ಮಜಾಭಾರತ’ ಕನ್ನಡ ಕಿರುತೆರೆ ರಿಯಾಲಿಟಿ ಶೋನಲ್ಲಿ ಪರಿಚಯವಾದವರು ಮಂಜು. ಕಳೆದ ಏಳೆಂಟು ವರ್ಷಗಳಿಂದ ನಾಟಕಗಳಲ್ಲಿ ನಟಿಸುತ್ತಾ ಬಂದಿರುವ ಮಂಜುಗೆ ‘ಮಜಾಭಾರತ’ ಒಂದೊಳ್ಳೆಯ ತಿರುವು ನೀಡಿತು. ಅವರೀಗ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
ದಿವ್ಯಾ ಸುರೇಶ್: ‘ಮಿಸ್ ಸೌತ್ ಇಂಡಿಯಾ’ ಕಿರೀಟದೊಂದಿಗೆ ಲೈಮ್‌ಲೈಟ್‌ಗೆ ಬಂದ ದಿವ್ಯಾ ಕನ್ನಡ, ತೆಲುಗು ಸಿನಿಮಾಗಳು ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಮಿಲ್ಟನ್ ಹೌಸ್’ ಕನ್ನಡ ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಶುರುವಾಯ್ತು. ‘ನನ್ ಹೆಂಡ್ತಿ ಎಂಬಿಬಿಎಸ್’, ‘ಜೋಡಿಹಕ್ಕಿ’ ಕಿರುತೆರೆ ಸರಣಿಗಳೊಂದಿಗೆ ಕನ್ನಡಿಗರಿಗೆ ಪರಿಚಿತರು.
ಚಂದ್ರಕಲಾ ಮೋಹನ್: ಚಿಕ್ಕ ವಯಸ್ಸಿನಲ್ಲೇ ವೃತ್ತಿ ರಂಗಭೂಮಿ ಪ್ರವೇಶಿಸಿದ ಚಂದ್ರಕಲಾ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡವರು. ‘ಪುಟ್ಟಗೌರಿ ಮದುವೆ’ ಸರಣಿ ಕಿರುತೆರೆಯಲ್ಲಿ ಅವರಿಗೆ ಬಹುದೊಡ್ಡ ತಿರುವು. ಪ್ರಸ್ತುತ ಸಿನಿಮಾ, ಕಿರುತೆರೆ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬಿಗ್‌ಬಾಸ್’ ಮನೆಯಲ್ಲಿರುವವರ ಪೈಕಿ ಹಿರಿಯ ಮಹಿಳೆ.
ರಘು ಗೌಡ: ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ರಘು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಕೆಲಸ ತೊರೆದು ಬಂದರು. ‘ವೈನ್ ಸ್ಟೋರ್’ ಯೂಟ್ಯೂಬ್ ಚಾನೆಲ್ ರೂಪಿಸಿ ವೈವಿಧ್ಯಮಯ ವೀಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ.
ಪ್ರಶಾಂತ್ ಸಂಬರ್ಗಿ: ವರ್ಣರಂಜಿತ ವ್ಯಕ್ತಿತ್ವದ ಪ್ರಶಾಂತ್ ಸಂಬರ್ಗಿ ಅವರು ಬಿಗ್‌ಬಾಸ್ ಮನೆಯಲ್ಲಿ ಗಮನಸೆಳೆಯುವಂತಹ ಸ್ಪರ್ಧಿ. ತಮ್ಮನ್ನು ‘ಸಾಮಾಜಿಕ ಕಾರ್ಯಕರ್ತ’ ಎಂದು ಗುರುತಿಸಿಕೊಳ್ಳುವ ಪ್ರಶಾಂತ್ ಸಿನಿಮಾ ಮಂದಿಗೆ ಆಪ್ತರು. ರಾಜಕಾರಣಿಯೂ ಹೌದು. ಇತ್ತೀಚಿನ ಡ್ರಗ್ಸ್ ಪ್ರಕರಣದಲ್ಲಿ ಸಿನಿ ತಾರೆಯರ ಮೇಲಿನ ಆರೋಪಗಳಿಂದ ಸುದ್ದಿಯಾಗಿದ್ದರು.
ದಿವ್ಯಾ ಉರುಡುಗ: ತೀರ್ಥಹಳ್ಳಿ ಮೂಲದ ದಿವ್ಯಾ ಉರುಡುಗ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಮಲ್ಟಿಮೀಡಿಯಾದಲ್ಲಿ ಪದವಿ ಪಡೆದಿರುವ ಅವರು ಧಾರಾವಾಹಿ ನಟಿಯಾದದ್ದು ಆಕಸ್ಮಿಕ. ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸರಣಿಗಳಲ್ಲಿ ನಟಿಸಿರುವ ಅವರು ‘ಸೂಪರ್ ಕಬಡ್ಡಿ’ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು. ‘ಹುಲಿರಾಯ’ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾದ ದಿವ್ಯಾ ‘ಧ್ವಜ’ ಮತ್ತು ‘ಫೇಸ್ 2 ಫೇಸ್’ ಚಿತ್ರಗಳಲ್ಲೂ ನಟಿಸಿದ್ದಾರೆ.
ರಾಜೀವ್: ನಟನಾಗುವ ಇರಾದೆ ಹೊಂದಿರುವ ರಾಜೀವ್ ಅತ್ಯುತ್ತಮ ಕ್ರಿಕೆಟ್ ಆಟಗಾರ. ನಟ ಸುದೀಪ್ ನೇತೃತ್ವದಲ್ಲಿ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಆಕರ್ಷಕ ಬ್ಯಾಟ್ಸ್‌ಮನ್ ಆಗಿ ಹೆಸರು ಮಾಡಿದ್ದರು. ವೃತ್ತಿಪರ ಕ್ರಿಕೆಟರ್ ಆಗಿ ರೂಪುಗೊಳ್ಳುವುದರ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳಬೇಕು ಎನ್ನುವುದು ಅವರ ಆಸೆ.
ನಿರ್ಮಲಾ ಚೆನ್ನಪ್ಪ: ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಿರ್ಮಲಾ ಚೆನ್ನಪ್ಪ ನಟಿ, ಡಬ್ಬಿಂಗ್ ಕಲಾವಿದೆ, ನಿರ್ಮಾಪಕಿ. ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗುವುದು ಅವರ ಗುರಿ. ಓದುವ ಅಭಿರುಚಿ ಇರುವ ನಿರ್ಮಲಾ ಫಿಲಾಸಫಿ ಬಗ್ಗೆ ಸೊಗಸಾಗಿ ಮಾತನಾಡುತ್ತಿದ್ದಾರೆ. ಕನ್ನಡ ಸಿನಿಮಾ ನಟ ಸರ್ದಾರ್ ಸತ್ಯ ಅವರು ನಿರ್ಮಲಾರ ಪತಿ.
ಇವ್ರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀಯಿಯಲಿ ಜಾನಕಿರಾಮ, ತಿರುಗಿ ಬಿದ್ರೆ….
– ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಾವಿರಾರು ಅಭಿಮಾನಿಗಳ ಮುಂದೆ ಈ ರೀತಿ ತಮ್ಮದೇ ಮಾತುಗಳ ಮೂಲಕ ಗುಣಗಾನಮಾಡಿದ್ದು ಬೇರಾರರು ಅಲ್ಲ, ಒನ್ ಡ್ ಒನ್ಲಿ ರಾಬರ್ಟ್ ನಾಯಕಿ, ಭದ್ರಾವತಿಯ ಚೆಲುವೆ , ಮಾಡೆಲ್ ಆಶಾಭಟ್.
ಫೆ ೨೬ ರಂದು ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಆಶಾಭಟ್, ದರ್ಶನ್ ಅವರಂತಹ ಸ್ಟಾರ್ ನಟನ ಕಾಂಬಿನೇಷನ್ ಮೂಲಕ ಮೊಟ್ಟ ಮೊದಲು ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿರುವುದಕ್ಕೆ ಅಗಾದ ಆನಂದ ವ್ಯಕ್ತಪಡಿಸಿದರು.
‘ ಫಸ್ಟ್ ಟೈಮ್ ಸಿನಿಮಾ ಸಂಬಂಧಿತ ಇಷ್ಟು ದೊಡ್ಡ ವೇದಿಕೆ ನಿಂತು ಮಾತನಾಡುತ್ತಿದ್ದೇನೆ. ಐ ಡೋಂಟ್ ಪರ್ಗೆಟ್ ಇಟ್, ನನ್ನ ಜೀವನದಲ್ಲೇ ಮರೆಯಲಾರದ ಕ್ಷಣ ಇದು. ದೇವರ ದಯೆ, ಹಾಗೆಯೇ ಚಿತ್ರ ತಂಡದ ಆಶೀರ್ವಾದ ದ ಫಲವಾಗಿ ಇದು ಒದಗಿ ಬಂತು. ಕನ್ನಡ ನನ್ನ ಉಸಿರು. ಕನ್ನಡದ ಮೂಲಕವೇ ಇವತ್ತು ಟಾಲಿವುಡ್ ಗೂ ಎಂಟ್ರಿಯಾಗುವ ಅವಕಾ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕಿದೆ. ಯಾವುದೇ ಕಲಾವಿದರಿಗೆ ಪ್ರೇಕ್ಷಕರೇ ದೇವರು ‘ ಎನ್ನುತ್ತಾ ತೆಲುಗು ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಿದರು ಸೂಪರ್ ಮಾಡೆಲ್ ಆಶಾ ಭಟ್.
ಚಿತ್ರದ ನಾಯಕ ದರ್ಶನ್ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದ ಆಶಾ ಭಟ್, ಇವ್ರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀಯಿಯಲಿ ಜಾನಕಿರಾಮ, ತಿರುಗಿ ಬಿದ್ರೆ……ಎನ್ನುವ ಮಾತನ್ನು ಅರ್ಧದಲ್ಲೇ ನಿಲ್ಲಿಸಿ ಅದನ್ನು ಪ್ರೇಕ್ಷಕರ ಊಹೆಗೆ ಬಿಟ್ಟ ಆಶಾ ಭಟ್, ಅವರ ಜತೆಗೆ ಸ್ಕೀನ್ ಹಂಚಿಕೊಂಡಿರುವುದು ನನ್ನ ಅದೃಷ್ಟ ಎಂದರು.
ಹೈದ್ರಾಬಾದ್ ಪ್ರೀ ರಿಲೀಸ್ ಈವೆಂಟ್ ನಂತರ ದೂರವಾಣಿ ಮೂಲಕ ‘ಸಿನಿಲಹರಿ’ ಜತೆಗೆ ಮಾತನಾಡಿದ ಅವರು, ಫಸ್ಟ್ ಟೈಮ್ ಸಿನಿಮಾ ಪ್ರಚಾರದ ಅಷ್ಟು ದೊಡ್ಡ ವೇದಿಕೆ ಹಂಚಿಕೊಂಡಿದ್ದನ್ನು ಮರೆಯಲಾರೆ. ಇದು ನನ್ನ ಪಾಲಿಗೆ ಸಿಕ್ಕ ಅತೀ ದೊಡ್ಡ ಅವಕಾಶ. ದೇವರ ದಯೆ, ಹಾಗೆಯೇ ಚಿತ್ರ ತಂಡದ ಆಶೀರ್ವಾದ ದ ಫಲವಾಗಿ ಇದು ಒದಗಿ ಬಂತು. ಅತ್ಯಂತ ಖುಷಿ ಯಾಗುತ್ತಿದೆ ಎಂದರು.
ಸಿನಿಮಾ ಅಂದ್ರೆ ಈಗ ಬರೀ ಮನರಂಜನೆ ಅಂತಾರೆ. ಬಹುತೇಕ ಈಗಿನ ತಲೆಮಾರು ಅದನ್ನು ಹಾಗೆಯೇ ಸ್ವೀಕರಿಸಿದೆ. ಆದರೆ ಒಂದಷ್ಟು ವರ್ಷಗಳಿಗೆ ಹಿಂದಕ್ಕೆ ಹೋದರೆ ಸಿನಿಮಾ ಅನ್ನೋದು ಅನೇಕ ರೀತಿಯಲ್ಲಿ ಒಬ್ಬೊಬ್ಬರಿಗೆ ಪ್ರೇರಣೆ ನೀಡಿದೆ. ಹಾಗೆಯೇ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಬದುಕಲ್ಲೂ ಕೂಡ. ಯಾಕಂದ್ರೆ, ಅಶೋಕ್ ಕುಮಾರ್ ಪೊಲೀಸ್ ಅಧಿಕಾರಿ ಆಗ್ಬೇಕೆಂದು ಕನಸು ಕಂಡಿದ್ದೇ ಹಿಂದಿಯ ʼಝಂಜೀರ್ʼ ಸಿನಿಮಾ ನೋಡಿದ ನಂತರವಂತೆ.
ಅಂದ ಹಾಗೆ, “ಝಂಜೀರ್ʼ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಚಿತ್ರ. ಇದು ತೆರೆಗೆ ಬಂದಿದ್ದ 1973 ರಲ್ಲಿ. ಆಗ ಅಶೋಕ್ ಕುಮಾರ್ ಕಾಲೇಜು ಸ್ಟುಡೆಂಟ್. ಯಾವುದೋ ಕಾಲೇಜ್ ಸ್ಟ್ರೈಕ್ ನಲ್ಲಿ ಪೊಲೀಸರು ಹಾಗೂ ಸ್ಟುಡೆಂಟ್ ನಡುವೆ ಘರ್ಷಣೆ ಆದಾಗ ಅಶೋಕ್ ಕುಮಾರ್ ಅವರಿಗೆ ಪೊಲೀಸರು ಹಿಗ್ಗಾಮುಗ್ಗಾ ಹೊಡೆದರಂತೆ. ಅವರ ಜೀವನದಲ್ಲಿ ವೈರಿ ಅಂತ ಇದ್ರೆ ಪೊಲೀಸರೇ ಅಂತ ಡಿಸೈಡ್ ಮಾಡಿಕೊಂಡಿದ್ದರಂತೆ. ಕೊನೆಗೊಂದು ದಿನ ಅಮಿತಾಬ್ ಬಚ್ಚನ್ ಅಭಿನಯದ “ಝಂಜೀರ್ʼ ಚಿತ್ರ ನೋಡಿದಾಗ ಪೊಲೀಸ್ ಅಧಿಕಾರಿ ಆಗ್ಬೇಕೆಂದು ಕನಸು ಕಂಡ್ರಂತೆ. ಮುಂದೆ ಆ ಕನಸು ನನಸೂ ಆಯಿತು ಎನ್ನುವ ಅವರು, ಜೀವನ ನಾವಂದುಕೊಂಡಂತೆ ಅಲ್ಲ. ನಂಗೆ ಪೊಲೀಸ್ ಇಲಾಖೆ ಅಂದ್ರೆನೆ ಆಗುತ್ತಿರಲಿಲ್ಲ. ಕೊನೆಗೆ ಹಣೆಬರಹ ಅದೇ ಇಲಾಖೆಗೆ ಇಷ್ಟಪಟ್ಟು ಬಂದೆ ಅಂತ ಹಳೆದ್ದನ್ನು ನೆನಪಿಸಿಕೊಂಡರು.
ಹೊಸಬರ ರೈಮ್ಸ್ ಹೆಸರಿನ ಚಿತ್ರದ ಪೋಸ್ಟರ್ ಲಾಂಚ್ ಸಂದರ್ಭದಲ್ಲಿ ಟೈಗರ್ ಅಶೋಕ್ ಕುಮಾರ್ ಅವರು ತಾವು ಪೊಲೀಸ್ ಇಲಾಖೆಗೆ ಸೇರ್ಪಡೆ ಆಗಿದ್ದಕ್ಕೂ, ತಾವಂದುಕೊಂಡಂತೆ ಆಗದ್ದಕ್ಕೂ, ಅವೆಲ್ಲವನ್ನು ಹೇಳಿಕೊಂಡಿದ್ದಕ್ಕೂ ಕಾರಣ ರೈಮ್ಸ್ ಚಿತ್ರದಲ್ಲಿನ ನಾಯಕ ಅಜಿತ್ ಜೈರಾಜ್ ಪೊಲೀಸ್ ಅಧಿಕಾರಿ ಬಣ್ಣ ಹಚ್ಚಿದ್ದು. ಅಂದ್ರೆ, ಈ ಅಜಿತ್ ಜೈರಾಜ್ ಬೇರಾರು ಅಲ್ಲ ಬೆಂಗಳೂರಿನ ಒಂದು ಕಾಲದ ಡಾನ್ ಜೈರಾಜ್ ಪುತ್ರ. ಜೈರಾಜ್ ಆಗ ಪೊಲೀಸ್ ವಿರೋಧಿ. ಖಾಕಿ ಕಂಡ್ರೆ ಅವರಿಗೆ ಆಗುತ್ತಿರಲಿಲ್ವಂತೆ. ಅಂತಹ ವ್ಯಕ್ತಿಯ ಮಗ ಈಗ ಪೊಲೀಸ್ ಅಧಿಕಾರಿಯಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದರೆ, ಅದೇ ಅಲ್ವ ಬದುಕು, ಹಣೆಬರಹ ಅನ್ನೋದು ಅಶೋಕ್ ಕುಮಾರ್ ಮಾತು. ತಾವು ಕೂಡ ಪೊಲೀಸ್ ವಿರೋಧಿ ಆಗಿದ್ದವರೂ, ಕಾಲಚಕ್ರದಲ್ಲಿ ಅದೇ ಇಲಾಖೆಗೆ ಬರಬೇಕಾಯಿತು ಅಂತ ವಿವರಿಸಿದರು.
ಇನ್ನು ತೆರೆ ಮೇಲೆ ಪೊಲೀಸರ ನಿಜ ಬದುಕನ್ನು ತೋರಿಸದ ಚಿತ್ರ ರಂಗದ ಬಗ್ಗೆ ಅವರಲ್ಲಿ ತೀರಾ ಬೇಸರ ಇದೆ. ” ಪೊಲೀಸರು ಮನುಷ್ಯರೆ. ನಮಗೂ ಭಾವನೆಗಳಿವೆ. ಆದರೂ, ಇದುರವರೆಗೂ ನಮ್ಮ ಭಾವನೆಗಳು ತೆರೆ ಮೇಲೆ ಕಂಡಿದ್ದು ನಾನು ನೋಡಿಲ್ಲ. ಬದಲಿಗೆ ಪೊಲೀಸ್ ಅಂದ್ರೆ ಟೆರರ್, ಹಿಂಸೆ ನೀಡುವವರು, ವಿಕೃತಿಗಳು ಅಂತಲೇ ತೋರಿಸಲಾಗುತ್ತದೆ. ಅದು ಬಿಡಿ, ಪೊಲೀಸ್ ಬಟ್ಟೆಗೂ ಒಂದು ಶಿಸ್ತು ಇದೆ. ಅದು ಹೀಗೆ ಇರಬೇಕು, ಆ ಬಟ್ಟೆಗಳ ಮೇಲಿನ ಬಣ್ಣದ ಹೀಗೆ ಬರಬೇಕು ಅಂತ ನಿಯಮ ಇದೆ. ಆದರೆ ಸಿನಿಮಾ ಮಂದಿ ಪೊಲೀಸ್ ಬಟ್ಟೆ ತೋರಿಸುವಾಗ ಹೇಗೆಗೋ ತೋರಿಸುತ್ತಾರೆ. ಏನಾದ್ರೂ ಮಾಡುವಾಗ ಅನುಭವಿಗಳನ್ನು ಸಂಪರ್ಕಿಸಿ ಅಂತ ಕಿವಿ ಮಾತು ಹೇಳುತ್ತಾರೆ ಟೈಗರ್ ಅಶೋಕ್ ಕುಮಾರ್.
ಎನ್‌ಕೌಂಟರ್ ಖ್ಯಾತಿಯ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಬರೆದ ಅಂಕಣಗಳ ” ಹುಲಿಯ ನೆನಪುಗಳು ʼ ಕೃತಿ ಈಗ ವೆಬ್ ಸೀರಿಸ್ ಮೂಲಕ ತೆರೆ ಮೇಲೆ ಬರುತ್ತಿದೆ. “ಹುಲಿಯ ನೆನಪುಗಳುʼ ಪುಸ್ತಕದ ಇಂಗ್ಲಿಷ್ ಅವತರಣಿಕೆ ” ಟೈಗರ್ ಮೆಮೋರಿಸ್ʼ ಆಧರಿಸಿ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾಗಿದೆಯಂತೆ ಸೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ. ಹಿಂದಿ, ಇಂಗ್ಲಿಷ್ ಸೇರಿದಂತೆ ಐದು ಭಾಷೆಗಳಲ್ಲಿ ಇದು ನಿರ್ಮಾಣವಾಗುತ್ತಿದೆ. ಹಾಗೆಯೇ ಟಾಲಿವುಡ್ ನ ಹೆಸರಾಂತ ನಿರ್ದೇಶಕರೇ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆನ್ನುವ ಅಂಶ ರಿವೀಲ್ ಆಗಿದೆ.
ʼಹುಲಿಯ ನೆನಪುಗಳುʼ ಕೃತಿ ವೆಬ್ ಸೀರಿಸ್ ಆಗಿ ತೆರೆ ಮೂಡಿ ಬರುತ್ತಿರುವ ಸಂತಸದ ಸಂಗತಿಯನ್ನು ಅಶೋಕ್ ಕುಮಾರ್ ಅವರೇ ಔಪಚಾರಿಕವಾಗಿ ಹಂಚಿಕೊಂಡಿದ್ದು, ಅಧಿಕೃತವಾಗಿ ನಡೆಯ ಬೇಕಿರುವ ಎಲ್ಲಾ ಪ್ರಕ್ರಿಯೆಗಳು ಈಗ ಫೈನಲ್ ಹಂತದಲ್ಲಿವೆ. ಒಳ್ಳೆಯ ಸಂಭಾವನೆಗೆ ಇದಕ್ಕೆ ಸಿಗುತ್ತಿದೆ. ವೃತ್ತಿಯ ಜತೆಗೆ ಬರವಣಿಗೆ ಮೂಲಕವೂ ಹೀಗೆಲ್ಲ ಸಂಭಾವನೆ ಸಿಗುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್. ನೆಟ್‌ಪ್ಲೆಕ್ಸ್ ನಲ್ಲಿ ಈಗಾಗಲೇ ಲಭ್ಯವಿರುವ ʼಡೆಲ್ಲಿ ಕ್ರೈಮ್ʼ ಮಾದರಿಯಲ್ಲೇ ” ಹುಲಿಯ ನೆನಪುಗಳುʼ ಪುಸ್ತಕ ವೆಬ್ ಸೀರಿಸ್ ಆಗಿ ಮೂಡಿ ಬರಲಿದೆಯಂತೆ. ಅಲ್ಲಿ ಆಶೋಕ್ ಕುಮಾರ್ ಅವರೇ ಕೆಲವು ಘಟನೆಗಳನ್ನು ನಿರೂಪಣೆ ಮಾಡುವುದಕ್ಕೂ ಒಪ್ಪಿಕೊಂಡಿದ್ದಾರಂತೆ.
ಅವರಿಗೂ ಮತ್ತು ಸಿನಿಮಾಕ್ಕೂ ಅವಿನಾಭಾವ ನಂಟು. ಹಾಗೆ ನೋಡಿದರೆ ಅವರು ಪೊಲೀಸ್ ಇಲಾಖೆಗೆ ಬಂದಿದ್ದಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ” ಝಂಜೀರ್ʼ ಸಿನಿಮಾವೇ ಕಾರಣವಂತೆ. ಹಾಗೆ ಬಂದವರು ಸಿನಿಮಾಕ್ಕೂ ತಮ್ಮ ವೃತ್ತಿಗೂ ನಂಟು ಇಟ್ಟು ಕೊಂಡೇ ಬಂದಿದ್ದು ನಿಮಗೂ ಗೊತ್ತು. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಬಂದು ಹೋಗಿದ್ದ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ” ಮೈನಾʼ ದ ಕತೆಗೆ ಆಶೋಕ್ ಕುಮಾರ್ ಅವರೇ ಪ್ರೇರಣೆ ಆಗಿದ್ದರು. ಅವರು ಹೇಳಿದ್ದ ಒಂದು ಘಟನೆಯನ್ನೇ ಪ್ರೇರಣೆಯಾಗಿಟ್ಟುಕೊಂಡು ʼಮೈನಾʼ ಚಿತ್ರ ಮಾಡಿದ್ದರು ನಾಗಶೇಖರ್. ಅದೆಲ್ಲ ನಿಮಗೂ ಗೊತ್ತಿರುವ ವಿಚಾರ.
ಈಗ ಅವರೇ ಬರೆದ ಕೃತಿಯೊಂದು ವೆಬ್ ಸೀರಿಸ್ ಆಗಿ ತೆರೆ ಮೇಲೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಶೋಕ್ ಕುಮಾರ್, ನಾನು ಬರೆದ ಪುಸ್ತಕಕ್ಕೆ ಈ ಮಟ್ಟದ ಡಿಮ್ಯಾಂಡ್ ಇರೋದಿಕ್ಕೆ ಖುಷಿ ಆಗಿದೆ ಎನ್ನುತ್ತಾರೆ. ಅಶೋಕ್ ಕುಮಾರ್ ಅವರು ಪೊಲೀಸ್ ಇಲಾಖೆಯಲ್ಲಿ ಒಬ್ಬ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ ಹಾಗೆಯೇ ಆ ವೃತ್ತಿಯ ಒಳನೋಟವನ್ನು ಸೂಕ್ಷ್ಮವಾಗಿ ಬಲ್ಲವರು. ಅದೇ ಕಾರಣಕ್ಕೆ ಅವರು ತಾವು ಕಂಡ ಅನುಭವಗಳನ್ನೇ ಪತ್ರಿಕೆಗಳಲ್ಲಿ ಅಂಕಣ ರೂಪದಲ್ಲಿ ಬರೆಯುತ್ತಾ ಬಂದರು. ಕ್ರಮೇಣ ಬರವಣಿಗೆ ಅವರಿಗೆ ದಕ್ಕಿತು. ಬರೆಯುತ್ತಲೇʼ ಹುಲಿಯ ನೆನಪುಗಳುʼಅಂಕಣ ಪುಸ್ತಕ ರೂಪದಲ್ಲಿ ಬಂತು. ಅದೇ ಕೃತಿ ʼಟೈಗರ್ ಮೆಮೋರಿಸ್ʼ ಹೆಸರಲ್ಲಿ ಇಂಗ್ಲಿಷ್ ಹೋಯಿತು. ಹಾಗೆಯೇ ʼಪೊಲೀಸ್ ವಿಜ್ಹಲ್ʼ, ʼಬುಲೆಟ್ ಸವಾರಿʼ ಪುಸ್ತಕಗಳನ್ನು ಬರೆದಿದ್ದು. ಅವೆಲ್ಲ ದಾಖಲೆ ಪ್ರಮಾಣದಲ್ಲಿ ಮಾರಾಟ ಕಂಡಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರ ಪೈಕಿ ಮರಿ ಟೈಗರ್ ವಿನೋದ್ ಪ್ರಭಾಕರ್ ಕೂಡ ಒಬ್ಬರು. ವಿನೋದ್ ಪಾಲಿಗೆ ದರ್ಶನ್ ಬರೀ ಆಪ್ತರು ಮಾತ್ರವಲ್ಲ, ಮಾರ್ಗದರ್ಶಕರು ಕೂಡ. ವಿನೋದ್ ಕಷ್ಟ ದಿನಗಳಲ್ಲಿ ಸಲಹೆ-ಸಹಕಾರ ನೀಡಿದ್ದಲ್ಲ, ಹೀಗೆಯೇ ನಡೆ ಅಂತ ಧೈರ್ಯ ತುಂಬಿದವರು ದರ್ಶನ್. ಹಾಗಾಗಿಯೇ ದರ್ಶನ್ ಅಂದ್ರೆ ವಿನೋದ್ ಪ್ರಭಾಕರ್ ಅವರಿಗೆ ಅತೀವ ಪ್ರೀತಿ, ಅತೀವ ಗೌರವ.ಇದೇ ಕಾರಣಕ್ಕೆ ದರ್ಶನ್ ಎದುರು ನಟ ವಿನೋದ್ ಪ್ರಭಾಕರ್ ಗಟ್ಟಿಯಾಗಿ ಮಾತನಾಡುವುದಕ್ಕೂ ಮುಜುಗರ ಪಡ್ತಾರೆ. ಇಷ್ಟಾಗಿಯೂ ದರ್ಶನ್ ಎದುರು ವಿನೋದ್ ಪ್ರಭಾಕರ್ ಒಂದು ಖಡಕ್ ಡೈಲಾಗ್ ಹೊಡೆದಿದ್ದಾರೆ.
ಅದೇ ” ಜಗ್ಗು..ಆರ್ ಬಾರ್ ತಲುಪಲ್ಲ….! ಇದು ವಿನೋಧ್ ಅವರ ಫೇವರೆಟ್ ಡೈಲಾಗ್ ಅಂತೆ. ಇದನ್ನು ಅವರು ತಮ್ಮ ತಂದೆ ಟೈಗರ್ ಪ್ರಭಾಕರ್ ಶೈಲಿಯಲ್ಲೇ ಹೊಡೆದಿದ್ದಾರೆ. ಹಾಗೆಯೇ ಡೈಲಾಗ ಹೊಡಿಬೇಕು ಅಂತ ದರ್ಶನ್ ಅವರೇ ಹೇಳಿದ್ದಂತೆ. ಇದನ್ನು ಅವರು ಶುಕ್ರವಾರ ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಫ್ರೀ ರಿಲೀಸ್ ಪ್ರಚಾರದ ಸಂಭ್ರಮದಲ್ಲಿ ಹೇಳಿದರು. ರಾಬರ್ಟ್ ಚಿತ್ರದಲ್ಲಿನ ಪಾತ್ರದ ಕುರಿತು ವೇದಿಕೆಯಲ್ಲಿ ಮಾತನಾಡುತ್ತಿದ್ದ ವಿನೋದ್ ಪ್ರಭಾಕರ್, ದಶರ್ನ್ ಜತೆಗಿನ ತಮ್ಮ ಬಾಂದವ್ಯದ ಬಗ್ಗೆ ಹಂಚಿಕೊಂಡರು.
” ಡಿ ಬಾಸ್ ಎದುರು ಇಂತಹದೊಂದು ವೇದಿಕೆಯಲ್ಲಿ ಯಾವತ್ತು ಡೈಲಾಗ್ ಹೊಡೆದಿಲ್ಲ. ಅವರ ಜತೆಗೂ ವೇದಿಕೆ ಹಂಚಿಕೊಂಡಿಲ್ಲ. ಫಸ್ಟ್ ಟೈಮ್ ಈ ಡೈಲಾಗ ಹೇಳುತ್ತಿದ್ದೇನೆ. ಇದು ನನ್ನ ಫೇವರೆಟ್ ಡೈಲಾಗ ಅಂತ ಈ ಡೈಲಾಗ ಹೇಳಿ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು ನಟ ವಿನೋದ್ ಪ್ರಭಾಕರ್. ವೇದಿಕೆ ಮುಂಭಾಗ ಕುಳಿತು ವಿನೋದ್ ಪ್ರಬಾಕರ್ ಅವರ ಮಾತುಗಳನ್ನೇ ಆಲಿಸುತ್ತಿದ್ದ ನಟ ದರ್ಶನ್, ವಿನೋದ್ ಡೈಲಾಗ್ ಗೆ ನಕ್ಕು ಸ್ವಾಗತಿಸಿದರು.
ರಾಬರ್ಟ್ ಸಿನಿಮಾದಲ್ಲಿ ಹೀರೋ ಕ್ಯಾರೆಕ್ಟರ್ ನಂದಲ್ಲ, ನಿಜವಾದ ಹೀರೋ ಜಗಪತಿ ಬಾಬು ಅವರ ಕ್ಯಾರೆಕ್ಟರ್……– ಇದು ನಟ ದರ್ಶನ್ ಅವರ ಮಾತು. ಹೈದ್ರಾಬಾದ್ ನಲ್ಲಿ ಶುಕ್ರವಾರ ಏರ್ಡಿಸಿದ್ದ ” ರಾಬರ್ಟ್ʼ ಚಿತ್ರದ ಪ್ರೀ ರಿಲೀಸ್ ಸಂಭ್ರಮದಲ್ಲಿ ದರ್ಶನ್ ಈ ಮಾತು ಹೇಳುತ್ತಿದ್ದಂತೆ ತೆಲುಗು ಸಿನಿಮಾ ಪ್ರೇಮಿಗಳು, ಸೌತ್ ಸ್ಟಾರ್ ಜಗಪತಿ ಬಾಬು ಅವರ ಅಭಿಮಾನಿಗಳು ಸಿಳ್ಳೆ, ಕೇಕೆ ಗಳ ಮೂಲಕ ಹುಚ್ಚೆದ್ದು ಕುಣಿದರು.
ಅವರನ್ನು ಕೆರಳಿಸುವುದಕ್ಕಾಗಿಯೇ ದರ್ಶನ್ ಈ ಮಾತು ಹೇಳಿದ್ದ ಅನ್ನೋದು ನಿಜವೇ ಆಗಿದ್ದರೂ, ರಾಬರ್ಟ್ ಚಿತ್ರದಲ್ಲಿ ಜಗಪತಿ ಬಾಬು ಅವರ ಪಾತ್ರವೇನು ಕಮ್ಮಿ ಇಲ್ಲ. ಅದನ್ನು ರಿಜಿಸ್ಟ್ರ್ ಮಾಡೋದಕ್ಕಾಗಿಯೇ ದರ್ಶನ್ ಆ ಮಾತನ್ನು ಒತ್ತು ಕೊಟ್ಟು ಹೇಳಿದ್ದು, ತೆಲುಗು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತು. ಆ ಮಟ್ಟಿಗೆ ನಿನ್ನೆ ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಫ್ರೀ ರಿಲೀಸ್ ಸಂಭ್ರಮ ಅದ್ದೂರಿಯಾಗಿಯೇ ನಡೆದಿದ್ದು ವಿಶೇಷ.
ಶ್ರೇಯಸ್ ಮೀಡಿಯಾ ಜತೆಗೆ ರಾಬರ್ಟ್ ಚಿತ್ರ ತಂಡ ಆಯೋಜಿಸಿದ್ದ ಈ ಕಾರ್ಯಕ್ರಮ ಕನ್ನಡದಲ್ಲಿ ನಡೆಯುವ ಹಾಗೆಯೇ ಗ್ರಾಂಡ್ ಆಗಿಯೇ ನಡೆಯಿತು. ಈ ಮುಂಚೆ ತೆಲುಗು ಟೀಸರ್ ಹಾಗೂ ಟ್ರೇಲರ್ ಮೂಲಕ ಟಾಲಿವುಡ್ ನಲ್ಲಿ ದೊಡ್ಡ ಹವಾ ಎಬ್ಬಿಸಿದ್ದ ʼರಾಬರ್ಟ್ʼ ಚಿತ್ರಕ್ಕೆ ಅಲ್ಲಿನ ಸಿನಿಮಾ ಪ್ರೇಮಿಗಳು ಚಿತ್ರದ ರಿಲೀಸ್ ಗಾಗಿ ದೊಡ್ಡ ನಿರೀಕ್ಷೆಯಲ್ಲಿರುವುದು ನಿನ್ನೆಯ ಈವೆಂಟ್ ಮೂಲಕ ಸಾಬೀತಾಯಿತು. ರಾಬರ್ಟ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲು ಟಾಲಿವುಡ್ ಗೆ ಎಂಟ್ರಿ ಆಗಿದ್ದರೂ, ಈಗಾಗಲೇ ಅವರ ಹವಾ ಶುರುವಾಗಿದೆ ಎನ್ನುವುದಕ್ಕೆ ನಿನ್ನೆಯ ಕಾರ್ಯಕ್ರಮದಲ್ಲಿ ಸಿನಿಮಾ ಆಭಿಮಾನಿಗಳು ದರ್ಶನ್, ದರ್ಶನ್ ಅಂತ ಕೂಗುತ್ತಿದ್ದೇ ಸಾಕ್ಷಿ ಆಯಿತು.
ವರ್ಣ ರಂಜಿತ ಕಾರ್ಯಕ್ರಮದಲ್ಲಿ ಸಿನಿಮಾ ಪ್ರೇಮಿಗಳು ಹಾಗೂ ಅಭಿಮಾನಿಗಳ ಸಿಳ್ಳೆ, ಕೇಕೆಗಳ ಸಂಭ್ರಮದ ನಡುವೆಯೇ ಮಾತನಾಡಿದ ನಟ ದರ್ಶನ್, ತೆಲುಗಿನಲ್ಲೇ ಭಾಷಣ ಆರಂಭಿಸಿ, ತೆಲುಗು ಸಿನಿಮಾ ಪ್ರೇಕ್ಷಕರ ಮನಗೆದ್ದರು.ಕನ್ನಡದಲ್ಲಿ ಭಾಷಣ ಆರಂಭಿಸಿ ನಂತರ ತೆಲುಗಿನಲ್ಲಿ ಮಾತು ಶುರು ಮಾಡಿದ ದರ್ಶನ್, ಮೊದಲಿಗೆ ತೆಲುಗು ಪ್ರೇಕ್ಷಕರಿಗೆ, ತೆಲುಗಿನ ವಿತರಕರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಟಾಲಿವುಡ್ ನ ಜನಪ್ರಿಯ ನಟಜಗಪತಿ ಬಾಬು ಬಗ್ಗೆ ವಿಶೇಷವಾಗಿ ಮಾತನಾಡಿದ ನಟ ದರ್ಶನ್, ‘ಸಿನಿಮಾದಲ್ಲಿ ರಾಬರ್ಟ್ ಅಲ್ಲ ಹೀರೋ ನಿಜವಾದ ಹೀರೋ ಜಗಪತಿ ಬಾಬು ನಿರ್ವಹಿಸಿರುವ ನಾನಾ ಪಾತ್ರ’ ಎಂದರು. ದರ್ಶನ್ ಅವರ ಈ ಮಾತಿಗೆ ಅಭಿಮಾನಿಗಳು ಭರ್ಜರಿ ಸಂಭ್ರಮಪಟ್ಟರು.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಸಿನಿಮಾ ನಿರ್ಮಾಣದ ಸಾಹಸಕ್ಕೆ ಮೆಚ್ಚುಗೆ ಹೇಳಿದ ದರ್ಶನ್, ‘ನಾವೆಲ್ಲ ಹಣ ಪಡೆದುಕೊಂಡು ನಟಿಸಿಬಿಟ್ಟಿದ್ದೇವೆ ಅಷ್ಟೆ. ಆದರೆ ಸಿನಿಮಾದ ನಿಜವಾದ ಹೀರೋ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು. ಅವರೇ ಈ ಸಿನಿಮಾದ ಜೀವ’ ಎಂದು ಹೊಗಳಿದರು. ‘ಕಾರ್ಯಕ್ರಮದಲ್ಲಿ ನಮ್ಮ ತಂದೆ ವಿಲನ್ ಆಗಿದ್ದವರು ಎಂದೆಲ್ಲಾ ವಿಡಿಯೋ ತೋರಿಸಿದರು. ಆದರೆ ನಾನು ಸಿನಿಮಾಕ್ಕೆ ಬರುವ ಮುನ್ನವೇ ತಂದೆಯನ್ನು ಕಳೆದುಕೊಂಡೆ. ಆದರೆ ಅವರೊಟ್ಟಿಗೆ ನಟಿಸಿದ ಹಿರಿಯರೆಲ್ಲಾ ನನಗೆ ತಂದೆ ಸಮಾನ. ನಟ ದೇವರಾಜ್ ಅವರು ನನಗೆ ತಂದೆ ಸಮಾನ, ನಮ್ಮನ್ನು ಹೊಡೆಯುವ, ತಿದ್ದುವ ಅಧಿಕಾರ ಅವರಿಗೆ ಇದೆ. ಅವರೊಟ್ಟಿಗೆ ಈ ಸಿನಿಮಾದಲ್ಲಿ ನಟಿಸಿರುವುದು ನನ್ನ ಭಾಗ್ಯ’ ಎಂದು ಭಾವುಕರಾದರು ದರ್ಶನ್.
ಚಿತ್ರದ ನಾಯಕಿ ನಟಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್, ನಟ ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಇನ್ನೂ ಹಲವಾರು ಮಂದಿ ಹಾಜರಿದ್ದು ಮಾತನಾಡಿದರು. ಹಾಡು, ನೃತ್ಯಗಳ ಮೂಲಕ ಇಡೀ ಕಾರ್ಯಕ್ರಮ ಕಲರ್ ಫುಲ್ ಆಗಿ ನಡೆದಿದ್ದು, ಇಡೀ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಆಕರ್ಷಣೆ ಆಗಿದ್ದು, ತೆಲುಗು ಸಿನಿಮಾ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸೇರಿ, ಚಿತ್ರದ ಅದ್ದೂರಿ ಸ್ವಾಗತಕ್ಕೆ ಕಾದಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ವಿಜಯಪ್ರಸಾದ್ ಮತ್ತು ಜಗ್ಗೇಶ್ ಜೋಡಿಯ ‘ತೋತಾಪುರಿ’ ಚಿತ್ರತಂಡ ಕಳೆದ ವಾರ ಮೈಸೂರಿನಲ್ಲಿ ಬೀಡುಬಿಟ್ಟಿತ್ತು. ನಿರ್ದೇಶಕರು ಅಲ್ಲಿ ಸಾಕಷ್ಟು ಸನ್ನಿವೇಶಗಳನ್ನು ಚಿತ್ರಿಸಿದ್ದರು. ಶೂಟಿಂಗ್ ಹೊರತಾಗಿ ಜಗ್ಗೇಶ್ ದೂರವಾಣಿ ಕರೆಯ ವಿವಾದದ ಮೂಲಕವೂ ಸಿನಿಮಾ ಸುದ್ದಿಯಾಗಿತ್ತು. ಕೊನೆಗೆ ಪೊಲೀಸರ ರಕ್ಷಣೆ ಪಡೆದು ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ ಸದ್ಯ ಕೇರಳಕ್ಕೆ ತೆರಳಿದೆ. ಅಲ್ಲಿ ಭರದ ಚಿತ್ರೀಕರಣ ನಡೆದಿದ್ದು, ಡಾಲಿ ಧನಂಜಯ ಮತ್ತು ಸುಮನ್ ರಂಗನಾಥ್ ನಟನೆಯ ಕೆಲವು ಸನ್ನಿವೇಶಗಳು ಚಿತ್ರಣಗೊಳ್ಳುತ್ತಿವೆ.
ಕೇರಳದಲ್ಲಿ ಈಗ ಕೊರೋನಾ ಎರಡನೇ ಅಲೆಯ ಹಾವಳಿ ಇದ್ದೇ ಇದೆ. ಈ ಸಂಕಷ್ಟದ ಮಧ್ಯೆಯೂ ಸೂಕ್ತ ಮುಂಜಾಗರೂಕತಾ ಕ್ರಮಗಳೊಂದಿಗೆ ಚಿತ್ರತಂಡ ಅಲೆಪ್ಪಿಯಲ್ಲಿ ಶೂಟಿಂಗ್ ನಡೆಸುತ್ತಿದೆ. ಚಿತ್ರದಲ್ಲಿ ಧನಂಜಯ್ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದಿತಿ ಪ್ರಭುದೇವ ಮುಸ್ಲಿಂ ಯುವತಿಯಾಗಿ ಮತ್ತು ಸುಮನ್ ರಂಗನಾಥ್ ಅವರು ಕ್ರಿಶ್ಚಿಯನ್ ಮಹಿಳೆಯ ಪಾತ್ರದಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಿಸಿದ್ದ ಕೆ.ಎ. ಸುರೇಶ್ ಅವರು ‘ತೋತಾಪುರಿ’ಗೆ ಹಣ ಹಾಕಿದ್ದು, ಅನೂಪ್ ಸೀಳನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಯೋಗರಾಜ್ ಭಟ್ಟರ ನಿರ್ದೇಶನದ ‘ಗಾಳಿಪಟ’ ತೆರೆಕಂಡು ಹದಿಮೂರು ವರ್ಷಗಳೇ ಆಗಿವೆ. ತಾಜಾ ನಿರೂಪಣೆಯಿಂದ ಈಗಲೂ ನೋಡಿಸಿಕೊಂಡು ಹೋಗುವ ಚಿತ್ರವಿದು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದರ ಸರಣಿ ಚಿತ್ರ ಆಗುವುದಾಗಿ ಘೋಷಿಸಲಾಗಿತ್ತು. ಈಗ, ಆಗ ಎನ್ನುತ್ತಲೇ ದಶಕ ದಾಟಿತು. ಕೊನೆಗೆ ಕಳೆದ ವರ್ಷ ಸೆಟ್ಟೇರಿದ ಸರಣಿಗೆ ಕೋವಿಡ್ ಸಂಕಟ ಎದುರಾಗಿತ್ತು. ಇದೀಗ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಭಟ್ಟರು ಚಿತ್ರತಂಡದೊಂದಿಗೆ ಯೂರೋಪ್‌ನಲ್ಲಿದ್ದಾರೆ.
ವೈಭವಿ ಶಾಂಡಿಲ್ಯ
‘ಗಾಳಿಪಟ’ದಲ್ಲಿ ಹೀರೋಗಳಾಗಿ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಇದ್ದರು. ಸರಣಿ ಚಿತ್ರದಲ್ಲಿ ಗಣೇಶ್ ಮತ್ತು ದಿಗಂತ್ ಇದ್ದು, ರಾಜೇಶ್ ಕೃಷ್ಣನ್ ಜಾಗಕ್ಕೆ ‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಬಂದಿದ್ದಾರೆ. ಇನ್ನು ನಾಯಕಿಯರು ಯಾರು ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇರಲಿಲ್ಲ. ನಾಯಕಿಯರ ಬಗೆಗಿನ ಊಹಾಪೋಹಗಳಿಗೆ ತೆರೆಬಿದ್ದಿದ್ದು ಚಿತ್ರದ ಮೂವರು ಹಿರೋಯಿನ್‌ಗಳ ಸುಳಿವು ಸಿಕ್ಕಿದೆ. ಕನ್ನಡತಿ ಶರ್ಮಿಳಾ ಮಾಂಡ್ರೆ ಜೊತೆ ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಯಾವ ಹೀರೋಗೆ ಯಾರು ಜೋಡಿ ಎನ್ನುವುದಿನ್ನೂ ಗೊತ್ತಾಗಿಲ್ಲ.
ಸಂಯುಕ್ತ ಮೆನನ್
ನಟಿ ವೈಭವಿ ಅವರು ಮರಾಠಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದವರು. ಮೂರು ವರ್ಷಗಳ ಹಿಂದೆ ತೆರೆಕಂಡ ‘ರಾಜ್ ವಿಷ್ಣು’ ಕನ್ನಡ ಚಿತ್ರವೂ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ನಟಿ ಸಂಯುಕ್ತಾ ಮೆನನ್ ‘ಪಾಪ್‌ಕಾರ್ನ್’ ಮಲಯಾಳಂ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾದವರು. ಹತ್ತಾರು ಮಲಯಾಳಂ ಚಿತ್ರಗಳಲ್ಲದೆ ಎರಡು ತಮಿಳು ಚಿತ್ರಗಳ ನಾಯಕಿ. ಇನ್ನು ನಟಿ ಶರ್ಮಿಳಾ ಮಾಂಡ್ರೆ ಮೂರು ವರ್ಷಗಳ ನಂತರ ತೆರೆಗೆ ಮರಳುತ್ತಿದ್ದಾರೆ. ‘ಆಕೆ’, ‘ಲೀಡರ್’ ಕನ್ನಡ ಚಿತ್ರಗಳ ನಂತರ ಅವರೀಗ ‘ಗಾಳಿಪಟ -2’ನಲ್ಲಿ ಸಕ್ರಿಯರಾಗಿದ್ದಾರೆ.
ಶರ್ಮಿಳಾ ಮಾಂಡ್ರೆ
‘ಗಾಳಿಪಟ-2’ ಚಿತ್ರದ ಮೊದಲ ಹಂತದ ಚಿತ್ರೀಕರಣ ನಾಡಿನ ವಿವಿಧೆಡೆ ನಡೆದಿತ್ತು. ಸದ್ಯ ಯೂರೋಪ್‌ನ ಹಿಮಪ್ರದೇಶಗಳು ಸೇರಿದಂತೆ ಸುಂದರ ಪ್ರಕೃತಿಯ ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೆದಿದೆ. ವಿದೇಶಿ ಚಿತ್ರೀಕರಣ ಮುಗಿಸಿಕೊಂಡು ಬಂದ ನಂತರ ಭಟ್ಟರು ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಿದ್ದಾರೆ. ಈ ಚಿತ್ರದ ನಂತರ ಯೋಗರಾಜ್ ಭಟ್ಟರು ಶಿವರಾಜಕುಮಾರ್ ಮತ್ತು ಪ್ರಭುದೇವ ನಟನೆಯ ಚಿತ್ರವೊಂದನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೊದಲ ಬಾರಿ ಒಟ್ಟಿಗೆ ನಟಿಸುತ್ತಿರುವ ಶಿವರಾಜ್-ಪ್ರಭುದೇವ ಜೋಡಿಯ ಚಿತ್ರದ ಬಗ್ಗೆ ನಟರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.