ಯೋಗರಾಜ್ ಭಟ್ಟರ ನಿರ್ದೇಶನದ ‘ಗಾಳಿಪಟ’ ತೆರೆಕಂಡು ಹದಿಮೂರು ವರ್ಷಗಳೇ ಆಗಿವೆ. ತಾಜಾ ನಿರೂಪಣೆಯಿಂದ ಈಗಲೂ ನೋಡಿಸಿಕೊಂಡು ಹೋಗುವ ಚಿತ್ರವಿದು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದರ ಸರಣಿ ಚಿತ್ರ ಆಗುವುದಾಗಿ ಘೋಷಿಸಲಾಗಿತ್ತು. ಈಗ, ಆಗ ಎನ್ನುತ್ತಲೇ ದಶಕ ದಾಟಿತು. ಕೊನೆಗೆ ಕಳೆದ ವರ್ಷ ಸೆಟ್ಟೇರಿದ ಸರಣಿಗೆ ಕೋವಿಡ್ ಸಂಕಟ ಎದುರಾಗಿತ್ತು. ಇದೀಗ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಭಟ್ಟರು ಚಿತ್ರತಂಡದೊಂದಿಗೆ ಯೂರೋಪ್‌ನಲ್ಲಿದ್ದಾರೆ.
‘ಗಾಳಿಪಟ’ದಲ್ಲಿ ಹೀರೋಗಳಾಗಿ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಇದ್ದರು. ಸರಣಿ ಚಿತ್ರದಲ್ಲಿ ಗಣೇಶ್ ಮತ್ತು ದಿಗಂತ್ ಇದ್ದು, ರಾಜೇಶ್ ಕೃಷ್ಣನ್ ಜಾಗಕ್ಕೆ ‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಬಂದಿದ್ದಾರೆ. ಇನ್ನು ನಾಯಕಿಯರು ಯಾರು ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇರಲಿಲ್ಲ. ನಾಯಕಿಯರ ಬಗೆಗಿನ ಊಹಾಪೋಹಗಳಿಗೆ ತೆರೆಬಿದ್ದಿದ್ದು ಚಿತ್ರದ ಮೂವರು ಹಿರೋಯಿನ್‌ಗಳ ಸುಳಿವು ಸಿಕ್ಕಿದೆ. ಕನ್ನಡತಿ ಶರ್ಮಿಳಾ ಮಾಂಡ್ರೆ ಜೊತೆ ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಯಾವ ಹೀರೋಗೆ ಯಾರು ಜೋಡಿ ಎನ್ನುವುದಿನ್ನೂ ಗೊತ್ತಾಗಿಲ್ಲ.
ನಟಿ ವೈಭವಿ ಅವರು ಮರಾಠಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದವರು. ಮೂರು ವರ್ಷಗಳ ಹಿಂದೆ ತೆರೆಕಂಡ ‘ರಾಜ್ ವಿಷ್ಣು’ ಕನ್ನಡ ಚಿತ್ರವೂ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ನಟಿ ಸಂಯುಕ್ತಾ ಮೆನನ್ ‘ಪಾಪ್‌ಕಾರ್ನ್’ ಮಲಯಾಳಂ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾದವರು. ಹತ್ತಾರು ಮಲಯಾಳಂ ಚಿತ್ರಗಳಲ್ಲದೆ ಎರಡು ತಮಿಳು ಚಿತ್ರಗಳ ನಾಯಕಿ. ಇನ್ನು ನಟಿ ಶರ್ಮಿಳಾ ಮಾಂಡ್ರೆ ಮೂರು ವರ್ಷಗಳ ನಂತರ ತೆರೆಗೆ ಮರಳುತ್ತಿದ್ದಾರೆ. ‘ಆಕೆ’, ‘ಲೀಡರ್’ ಕನ್ನಡ ಚಿತ್ರಗಳ ನಂತರ ಅವರೀಗ ‘ಗಾಳಿಪಟ -2’ನಲ್ಲಿ ಸಕ್ರಿಯರಾಗಿದ್ದಾರೆ.
‘ಗಾಳಿಪಟ-2’ ಚಿತ್ರದ ಮೊದಲ ಹಂತದ ಚಿತ್ರೀಕರಣ ನಾಡಿನ ವಿವಿಧೆಡೆ ನಡೆದಿತ್ತು. ಸದ್ಯ ಯೂರೋಪ್‌ನ ಹಿಮಪ್ರದೇಶಗಳು ಸೇರಿದಂತೆ ಸುಂದರ ಪ್ರಕೃತಿಯ ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೆದಿದೆ. ವಿದೇಶಿ ಚಿತ್ರೀಕರಣ ಮುಗಿಸಿಕೊಂಡು ಬಂದ ನಂತರ ಭಟ್ಟರು ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಿದ್ದಾರೆ. ಈ ಚಿತ್ರದ ನಂತರ ಯೋಗರಾಜ್ ಭಟ್ಟರು ಶಿವರಾಜಕುಮಾರ್ ಮತ್ತು ಪ್ರಭುದೇವ ನಟನೆಯ ಚಿತ್ರವೊಂದನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೊದಲ ಬಾರಿ ಒಟ್ಟಿಗೆ ನಟಿಸುತ್ತಿರುವ ಶಿವರಾಜ್-ಪ್ರಭುದೇವ ಜೋಡಿಯ ಚಿತ್ರದ ಬಗ್ಗೆ ನಟರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.