Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಕಳೆಗಟ್ಟುವುದು ಖಾತರಿ ಆಯ್ತು, ಚಿತ್ರೋದ್ಯಮ ಎದುರು‌ ನೋಡುತ್ತಿದ್ದ ದಿನ ಬಂದೇ ಬಿಡ್ತು !

‘ರಾಬರ್ಟ್ ‘ ತೆರೆ ಕಂಡರೆ ಎಲ್ಲವೂ ಸಹಜವಾಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರರಂಗ

ಸ್ಟಾರ್ ಸಿನ್ಮಾ ಬರ್ಬೇಕು, ಬಂದ್ರೆ ನಮ್ಗೂ ಒಂದ್ರೀತಿ ಧೈರ್ಯ ಬರ್ತೈತಿ….. ಹೀಗಂತ  ಬಿಡುಗಡೆಗೆ ಸಿದ್ದಗೊಂಡ ಅದೆಷ್ಟೋ ಮಂದಿ ಸಣ್ಣ ಪುಟ್ಟ ಸಿನಿಮಾಗಳ ನಿರ್ಮಾಪಕರು ಹೇಳುತ್ತಿದ್ದರು‌.ಸ್ಟಾರ್ ಸಿನಿಮಾ ಬಂದ್ರೆ ಸಾಕು ಅಂತಲೂ ಕಾಯುತ್ತಿದ್ದರು. ವಿಶೇಷವಾಗಿ ದರ್ಶನ್ ಸಿನ್ಮಾ ಬಂದ್ರೆ ಚಿತ್ರ ಮಂದಿರಗಳತ್ತ ಜನ ಬರ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿತು. ಇನ್ನೇನು ಫೆಬ್ರವರಿ ಕಳೆದರೆ ಸ್ಯಾಂಡಲ್ ವುಡ್‌ ಮತ್ತೆ ಕಳೆ ಗಟ್ಟುವುದು ಗ್ಯಾರಂಟಿ ಆಗಿದೆ. ಮಾರ್ಚ್ 11 ಕ್ಕೆ ದರ್ಶನ್ ಅಭಿನಯದ ಬಹು ನಿರೀಕ್ಷಿತ’ ರಾಬರ್ಟ್’ ಚಿತ್ರ ತೆರೆ ಕಾಣುತ್ತಿದೆ.  ಕೊನೆಗೂ ಚಿತ್ರ ತಂಡ ರಿಲೀಸ್ ದಿನಾಂಕ ಅನೌನ್ಸ್ ಮಾಡಿ, ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದು ದರ್ಶನ್ ಅಭಿಮಾನಿಗಳಿಗೆ ಮಾತ್ರ ಸಿಹಿ ಸುದ್ದಿ ಅಲ್ಲ, ಇಡೀ ಕನ್ನಡ ಚಿತ್ರರಂಗಕ್ಕೂ ಸಿಹಿ ಸುದ್ದಿಯೇ. ಅದೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ

ಜನ ಬರ್ತೀಲ್ಲ ಅಂತ ಕಂಗಾಲು ಆಗಿತ್ತು ಉದ್ಯಮ….

ಲಾಕ್ ಡೌನ್ ತೆರವಾದ ದಿನ ದಿಂದಲೇ ಚಿತ್ರ ಮಂದಿರಗಳು ಒಪನ್ ಆಗಿದ್ದು ನಿಮಗೂ ಗೊತ್ತು. ಅಕ್ಟೋಬರ್ 15 ಕ್ಕೆ ಅಧಿಕೃತ ಅಪ್ಪಣೆ ಕೂಡ ಸಿಕ್ಕಿತು. ಅಂದೇ ಕೆಲವು ಚಿತ್ರಗಳು ಪ್ರಾಯೋಗಿಕ ವಾಗಿ ತೆರೆಕಂಡವು. ಆದರೆ ಚಿತ್ರ ಮಂದಿರಗಳಲ್ಲಿ ಮಾತ್ರ ಜನ ಕಾಣಲಿಲ್ಲ. ಕಾರಣ ಕೊರೋನಾ ಆತಂಕ ಹಾಗೆಯೇ ಇತ್ತು. ಅಲ್ಲಿಂದ ಇಲ್ಲಿವರೆಗೂ ಹೆಚ್ಚೇನು ವ್ಯತ್ಯಾಸ ಕಂಡಿಲ್ಲ. ಕೊಂಚ ಕೊರೋನಾಂತಕ ಜ‌ನರಲ್ಲಿ ಕಮ್ಮಿ ಆಗಿದೆ ಎನ್ನುವುದನ್ನು ಬಿಟ್ಟರೆ,  ಚಿತ್ರ ಮಂದಿರಗಳಲ್ಲಿ ಜನ ಅಷ್ಟಕಷ್ಟೆ ಎನ್ನುವಂತಾಯಿತು‌. ಹಾಗೆ ನೋಡಿದರೆ ಇದುವರೆಗೂ ಒಂದಷ್ಟು ಸಕ್ಸಸ್ ಹಾಗೂ ಕಲೆಕ್ಷನ್ ಕಂಡ ಚಿತ್ರ ಆಕ್ಟ್ ೧೯೭೮ . ಇಷ್ಟಾಗಿಯೂ ಸಿನಿಮಾ‌ಮಂದಿಗೆ ಧೈರ್ಯ ಬಂದಿಲ್ಲ‌.  ಸಿನಿಮಾ ಮಾಡೋದೆನೋ ಸರಿ, ಹಾಕಿದ ದುಡ್ಡು ವಾಪಾಸ್ ಬರದಿದ್ದರೇನು‌ ಗತಿ  ಎನ್ನುವ ಭಯ ಚಿತ್ರ ರಂಗವನ್ನು ಕಾಡುತ್ತಲೇ ಇತ್ತು. ಹಾಗಾಗಿ ಅದೆಷ್ಟೋ ಸಿನಿಮಾಗಳು ರಿಲೀಸ್ ಗೆ ರೆಡಿ ಇದ್ದರೂ, ತೆರೆಗೆ ಬರುವುದಕ್ಕೆ ಮೀನಾ ಮೇಷ ಎಣಿಸುತ್ತಿದ್ದವು. ಅವುಗಳ ನಿರ್ಮಾಪಕ ರೆಲ್ಲ ಸ್ಟಾರ್ ಸಿನಿಮಾ ಬಂದ್ರೆ, ನಮಗೂ ಧೈರ್ಯ ಬರುತ್ತೆ ಅಂತಿದ್ರು. ಈಗ ಅದು ಕೂಡ ನೆರವೇರುತ್ತಿದೆ.

ದರ್ಶನ್ ಸಿನಿಮಾ ರಾಬರ್ಟ್ ಬಂದ್ರೆ ಏನಾಗುತ್ತೆ…?

ಕನ್ನಡ ದಲ್ಲಿ ದರ್ಶನ್ ಅವರಿಗೆ ಇರುವಷ್ಟು ಫ್ಯಾನ್ಸ್ ಇನ್ನಾರಿಗೂ ಇಲ್ಲ.‌ ಅವರೆಲ್ಲ ಪಕ್ಕಾ ಆಡಿಯನ್ಸ್ ಅನ್ನೋದು ಕೂಡ ಇನ್ನೊಂದು ವಿಶೇಷ. ಅವರೆಲ್ಲ ದರ್ಶನ್ ಸಿನಿಮಾ‌ ಚಿತ್ರ ಮಂದಿರಕ್ಕೆ ಬಾರದೆ ಒಂದು ವರ್ಷ ಆಗಿದೆ.ಎಲ್ಲವೂ ಅಂದುಕೊಂಡಿದ್ದರೆ ಕಳೆದ ವರ್ಷದ ಮಾರ್ಚ್ ನಲ್ಲೇ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಆಗಲೇ ಕೊರೋನಾ ಬಂತು. ದೇಶ ಲಾಕ್ ಡೌನ್ ಆಯಿತು. ರಾಬರ್ಟ್ ಕೂಡ ಬಾಕ್ಸ್ ನಲ್ಲಿ ಉಳಿಯಿತು. ಅವತ್ತಿನಿಂದ ಬಿಡುಗಡೆಗೆ ಕಾದಿದ್ದ ಆ ಚಿತ್ರ ಈಗ ಚಿತ್ರ ಮಂದಿರಕ್ಕೆ ಬರುವುದಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ.  ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. ಇದೇ ಹೊತ್ತಿಗೆ ಕೊರೋನಾಂತಕ ಕೂಡ ಕಮ್ಮಿ ಆಗಿದೆ. ಮತ್ತೊಂದೆಡೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಶುರುವಾಗುವುದಕ್ಕೂ ಸಿದ್ದತೆ ನಡೆದಿದೆ. ಇನ್ನೇನು ನುಗ್ಗೋಣ ಚಿತ್ರಮಂದಿರಕ್ಕೆ ಅಂತಿದೆ ದರ್ಶನ್ ಅಭಿಮಾನಿ ಬಳಗ.ಒಂದು ಸಲ ಚಿತ್ರ ಮಂದಿರಗಳು ಈ ರೀತಿ ತುಂಬಿಕೊಂಡರೆ, ಸಹಜವಾಗಿಯೇ ಹಳೆಯ ವೈಭವ ಮರುಕಳಿಸುತ್ತೆ ಅಂತಿದೆ ಚಿತ್ರರಂಗ.

Categories
ಸಿನಿ ಸುದ್ದಿ

ಫಸ್ಟ್ ನಿಮ್ ‌ಮನೆ‌ ನೋಡ್ಕೊಳ್ಳಿ, ಆಮೇಲೆ ನಾನು ಸೇರಿದಂತೆ ಇನ್ನೊಬ್ಬರ ಬಗ್ಗೆ ಯೋಚಿಸಿ ! 

ಲಕ್ಷಾಂತರ ಮಂದಿ ಅಭಿಮಾನಿಗಳಿಗೆ ನಟ ದರ್ಶನ್ ಹೀಗೆಂದು ಕೈ ಮುಗಿದು ವಿನಂತಿಸಿಕೊಂಡಿದ್ದು ಯಾಕೆ ಗೊತ್ತಾ? ಅದಕ್ಕೂ ಕಾರಣ ಇದೆ. ಅದೇನು ಅಂತ ನಾವ್ ಹೇಳ್ತೀವಿ ಕೇಳಿ….!
…,………………………………

ಇತಿಹಾಸಕ್ಕೆ ಸೇರಿಕೊಂಡ 2020 ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ವರ್ಷ. ಅದು ಹೇಗೆ ಅಂತ ವಿವರಿಸಿ ಹೇಳಬೇಕಿಲ್ಲ. ಕೊರೋನಾ ಎನ್ನುವ ಮಹಾಮಾರಿ ಸೃಷ್ಟಿಸಿದ ಅವಾಂತರ ಎಲ್ಲರಿಗೂ ಗೊತ್ತು. ಯಾರಾರನ್ನೋ ಶಾಶ್ವತವಾಗಿ ಕಳೆದುಕೊಂಡು, ಕೆಲಸ ಇಲ್ಲದೆ, ದುಡ್ಡು ಕಾಸು ಕಾಣದೆ ಒಂದೊತ್ತಿನ‌ ಊಟಕ್ಕೂ ಪರದಾಡಿದವರಿಗೆ ಕಮ್ಮಿ ಇಲ್ಲ. ಅದೆಲ್ಲ ಬಹಳಷ್ಟು ಜನರಿಗೆ ಆದ ಸ್ವಂತ ಅನುಭವ. ಹಾಗಾಗಿ, ಅಷ್ಟು ಕೆಟ್ಟ ದಿನಗಳನ್ನು ಅನುಭವಿಸಿ ಈಗ ಅದು, ಇದು ಅಂತ ಕೈಗೊಂದು ಕೆಲಸ, ಒಂದೊತ್ತಿನ ಊಟ, ಒಂದಷ್ಟು ನೆಮ್ಮದಿ ಕಂಡುಕೊಂಡ ಸಂದರ್ಭದಲ್ಲಿ ಅಭಿಮಾನ ಅಂತೇಳಿ, ದೂರದ ಊರುಗಳಿಂದ ಬಸ್ಸು, ಕಾರು,ಬೈಕು ಹತ್ತಿಕೊಂಡು ಬೆಂಗಳೂರಿಗೆ ಬಂದು ನನ್ನ ಹುಟ್ಟು ಹಬ್ಬ ಅಚರಿಸಿ ಸಂಭ್ರಮಿಸುವ ಬದಲಿಗೆ ಇದೊಂದು ವರ್ಷ‌ ನೀವು ಮೊದಲು ನಿಮ್ಮ‌ಮನೆ- ಮಠ ನೋಡ್ಕೊಳ್ಳಿ, ಆಮೇಲೆ ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸುವುದು ಇದದ್ದೇ…….ಅಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್.
ಅದಕ್ಕೆ ಕಾರಣ ಅವರ ಹುಟ್ಟು ಹಬ್ಬ‌.

ಫೆಬ್ರವರಿ 16 ಕ್ಕೆ ದರ್ಶನ್ ಹುಟ್ಟು ಹಬ್ಬ‌. ಈ ದಿನ ಬಂದ್ರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆ ಮುಂದೆ ಹೇಗೆಲ್ಲ ಅಭಿಮಾನಿಗಳು ಸೇರ್ತಾರೆ, ಅವರ ಹುಟ್ಟು ಹಬ್ಬದ ಆಚರಣೆ ಹೇಗಿರುತ್ತೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೆಲ್ಲ ಗೊತ್ತಿರುವ ವಿಚಾರ. ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅವರು. ಆ ದಿನ ಬಂದ್ರೆ ಸಾಕು ಅಪಾರ ಸಂಖ್ಯೆಯ ಅಭಿಮಾನಿಗಳು ರಾಜ್ಯದ‌ ಮೂಲೆ‌ಮೂಲೆಗಳಿಂದ ಬರುವುದು ಕಾಮನ್.‌ಆದ್ರೆ ಈ ವರ್ಷಕ್ಕೆ ಅದಕ್ಕೆಲ್ಲ ಬ್ರೇಕ್ ಹಾಕಲು‌ ನಿರ್ಧರಿಸಿರುವ ನಟ ದರ್ಶನ್, ಅಭಿಮಾನಿಗಳ ಜವಾಬ್ದಾರಿ ಏನು? ಹೇಗೆಲ್ಲ ಅವರು ತಮ್ಮ ಕುಟುಂಬದ ಕಡೆ ಗಮನ ಹರಿಸಬೇಕು ಅನ್ನೋದನ್ನು ಭಾನುವಾರ( ಜ.10) ರಂದು ಫೇಸ್ ಬುಕ್ ಲೈವ್ ಮೂಲಕ ಹೇಳಿಕೊಂಡರು.

 

‘ ಇದೊಂದು ವರ್ಷ ನೀವು ಬೆಂಗಳೂರಿಗೆ ಬಂದು ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ. ಕಳೆದ ವರ್ಷ ಏನೆಲ್ಲ ಆಯಿತು. ಯಾರೆಲ್ಲ ಕೆಲಸ ಕಳೆದುಕೊಂಡು ಊರು ಸೇರಿಕೊಳ್ಳಬೇಕಾಯಿತು, ಒಂದೂತ್ತಿನ ಊಟಕ್ಕೂ ಹಲವರು ಹೇಗೆಲ್ಲ ಪರದಾಡಬೇಕಾಗಿ ಬಂತು ಅನ್ನೋದು ನಂಗೆ ಗೊತ್ತಿದೆ. ದಯಮಾಡಿ ನೀವು ಈಗ ಮೊದಲು‌ ನಿಮ್ಮ‌ನಿಮ್ಮ‌ ಮನೆ-ಮಠ ಅಂತ ನೋಡ್ಕೊಳ್ಳಿ, ಆಮೇಲೆ ಇನ್ನೊಬ್ಬರ ಬಗ್ಗೆ ಯೋಚಿಸಿ ಅಂತ ಮನವಿ ಮಾಡಿಕೊಂಡರು. ಇದೊಂದು ವಿಚಾರದ ಜತೆಗೆ ಇವತ್ತೇ ಅವರು ಫೇಸ್ ಬುಕ್ ಲೈವ್ ಬರೋದಿಕ್ಕೆ ಇನ್ನೊಂದು ಕಾರಣವೂ ಇತ್ತು. ಅದು ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಬಿಡುಗಡೆ ವಿಚಾರ. ಮಾರ್ಚ್ 11ರಂದು ‘ರಾಬರ್ಟ್’ ರಿಲೀಸ್‌ಆಗುತ್ತಿದೆ. ಹಾಗಂತ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರ ತಂಡ ಡಿಸೈಡ್ ಮಾಡಿದೆ.ಅದನ್ನು ದರ್ಶನ್ ಫೇಸ್ ಬುಕ್ ಲೈವ್ ನಲ್ಲಿ ಅಧಿಕೃತ ವಾಗಿ ಹೇಳಿದರು.’ ಈ ಬಾರಿ ಯಾವುದೇ ರೀತಿಯ ಜನ್ಮದಿನ ಆಚರಣೆ ಇರುವುದಿಲ್ಲ .ಹಾಗಾಗಿ, ಯಾರೂ ಮನೆ ಬಳಿ ಬರಬೇಡಿ ಅಂತ ಮೊದಲು ಅಭಿಮಾನಿಗಳಿಗೆ ಮನವಿ ಮಾಡಿದರು.

Categories
ಸಿನಿ ಸುದ್ದಿ

ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್

ದರ್ಶನ್ ವಿಡಿಯೋ ಮೂಲಕ ವಿವರಣೆ

ದರ್ಶನ್ ಅಭಿನಯದ “ರಾಬರ್ಟ್‌” ಸಿನಿಮಾ ಬಿಡುಗಡೆ ಯಾವಾಗ ಎನ್ನುವವರಿಗೆ ಚಿತ್ರತಂಡ ಹೀಗೊಂದು ಸಿಹಿ ಸುದ್ದಿ ನೀಡಿದೆ.
ಹೌದು “ರಾಬರ್ಟ್” ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದೇ ಮಾರ್ಚ್11 ರಂದು “ರಾಬರ್ಟ್” ಬಿಡುಗಡೆಯಾಗುತ್ತಿದೆ.

ಈ ವಿಷಯವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

Categories
ಸಿನಿ ಸುದ್ದಿ

ಒಳ್ಳೆಯ ಅವಕಾಶಗಳು ಬಂದ್ರೆ ಕನ್ನಡದಲ್ಲಿ ಅಭಿನಯಿಸಲು ಉತ್ಸುಕಳಾಗಿದ್ದೇನೆ- ನವ್ಯ ನಾಯರ್

ಧನ್ಯವೀಣಾ’ ಆತ್ಮ ಕಥನ ಬಿಡುಗಡೆ ಯಲ್ಲಿ ತಮ್ಮ ಇಂಗಿತ ಹೊರ ಹಾಕಿದ ಗಜ ಖ್ಯಾತಿಯ ಮಲಯಾಳಂ ನಟಿ

ಮಲಯಾಳಂ ನಟಿ‌ ನವ್ಯ ನಾಯರ್ ಕನ್ನಡಕ್ಕೇನು ಅಪರಿಚಿತರಲ್ಲ. ದರ್ಶನ್ ಅಭಿನಯದ ಗಜಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿ ಮೂರ್ನಾಲ್ಕು ಸ್ಟಾರ್ ಸಿನಿಮಾಗಳಿಗೆ ನಾಯಕಿಯಾದರು. ಕನ್ನಡಕ್ಕೆ ಹೊಂದಿಕೆಯಾಗುವ ಮುದ್ದು‌ಮುಖ ಅವರದ್ದಾಗಿದ್ದರೂ, ಅದ್ಯಾಕೋ ಅವರಿಗೆ ಮುಂದೆ ಅಷ್ಟೇನು ಅವಕಾಶ ಸಿಗಲಿಲ್ಲ. ಮುಂದೆ ಅವರು ಮಲಯಾಳಂ ನಲ್ಲೇ ಬ್ಯುಸಿಯಾದರು ಅನ್ನೋದು ಬಹುತೇಕರಿಗೂ ಗೊತ್ತಿರುವ ವಿಚಾರ.

ಅವರು ತಮ್ಮ ಚಿತ್ರ ರಂಗದ ಅನುಭವ ಕುರಿತು ಆತ್ಮ‌ಕಥನ ಹೊರ ತಂದಿದ್ದಾರೆ. ಮಲಯಾಳಂನಲ್ಲಿ ಬರೆದಂಥ ಆ ಕೃತಿಯ ಹೆಸರು ‘ನವ್ಯ ರಸಂಗಳ್: ಈಗ ಅದೇ ಪುಸ್ತಕದ ಸಾರವನ್ನು ಗ್ರಹಿಸಿ ಪ್ರಾಧ್ಯಾಪಕಿ ಜಾನೆಟ್ ಐ.ಜೆ ಕನ್ನಡ ಭಾಷೆಗೆ ತರ್ಜುಮೆ ಮಾಡಿದ್ದು, ಅದನ್ನು ಜಿ.ಎಸ್. ಯುಧಿಷ್ಟರ ನಿರೂಪಣೆ ಮಾಡಿದ್ದಾರೆ. ಅದರ ಹಸರು ‘ಧನ್ಯವೀಣಾ’ . ಶನಿವಾರ ಶುಕ್ರವಾರ( ಜ.8 ) ಈ ಪುಸ್ತಕ ಲೋಕಾರ್ಪಣೆ ಗೊಂಡಿತು.

ಪತ್ರಕರ್ತೆ ಹಾಗೂ ‘ ಓ ಮನಸೇ’ ಸಂಪಾದಕಿ ಭಾವನಾ ಬೆಳಗೆರೆ , ಪುಸ್ತಕ ಲೋಕಾರ್ಪಣೆ ಮಾಡಿದರು. ಸಮಾರಂ ಭದಲ್ಲಿ ನಟಿ ನವ್ಯಾ ನಾಯರ್, ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರಶಾಂತ್ಕಲ್ಲೂರು, ರಾಷ್ಟಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪುಸ್ತಕದ ನಿರೂಪಕ ಜಿ.ಎಸ್.ಯುಧಿಷ್ಟಿರ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನವ್ಯ ನಾಯರ್, ‘ ಕನ್ನಡ
ಚಿತ್ರರಂಗದ ಬಗ್ಗೆ ನನಗೆ ಒಳ್ಳೇ ಅನುಭವಗಳಿವೆ. ಇಲ್ಲಿ ಉತ್ತಮ ವಾತಾವರಣವಿದೆ. ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲಿ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ’ ಎಂದರು. ಹಾಗೆಯೇ ಮಲಯಾಳಂನಲ್ಲಿ ತಾವು ಎಂಟು ವರ್ಷಗಳ ಬಳಿಕ ಮತ್ತೆಬಣ್ಣ ಹಚ್ಚಿದ್ದೇನೆ. ಆ ಚಿತ್ರದ ಹೆಸರು ‘ಉರುಪಿ’. ಇದೊಂದು ನಾಯಕಿ ಪ್ರಧಾನ ಚಿತ್ರ ಎಂಬುದಾಗಿ ಅವರು ಹೇಳಿಕೊಂಡರು.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ಹೊಸ ಥರ : ಮೂರು ಸಿನಿಮಾ ಜತೆಗೆ ಮದುವೆ ಆಗುವ ಯೋಚನೆ ಕೂಡ ಇದೆ ಅಂದ್ರು ಮನುರಂಜನ್ !

ಬದಲಾದ ಸನ್ನಿವೇಶಗಳೊಂದಿಗೆ ಶುರುವಾಗಲಿದೆ “ಮುಗಿಲ್ ಪೇಟೆ’ ಪಯಣ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಹೊಸ ವರ್ಷ 2021 ಕ್ಕೆ ಹೊಸ ತೆರೆನಾಗಿಯೇ ತೆರೆಬರಲು ಸಜ್ಜಾಗುತ್ತಿದ್ದಾರೆ. ಸದ್ಯಕ್ಕೆ ಅವರು ಅಭಿನಯಿಸಿರುವ ” ಪ್ರಾರಂಭ’ ಚಿತ್ರ ರಿಲೀಸ್ ಗೆ ರೆಡಿಯಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಅದು ತೆರೆ ಕಂಡು ಇಲ್ಲಿಗೆ ಹೆಚ್ಚು ಕಡಿಮೆ ವರ್ಷವೇ ಅಗಲಿತ್ತು. ಕಳೆದ ವರ್ಷ ಮಾರ್ಚ್ 27ಕ್ಕೆ ಅದರ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಹೊತ್ತಿಗೆ ಕೊರೋನಾ ಬಂತು, ಚಿತ್ರ ಮಂದಿರಗಳು ಲಾಕ್ ಡೌನ್ ಅಡಿ ಸಿಲುಕಿ ಬಂದ್ ಆದವು. ಅಲ್ಲಿಂದ ಇಲ್ಲಿವರೆಗೂ ಏನಾಯ್ತು ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ಇದೀಗ ಚಿತ್ರ ರಿಲೀಸ್ ಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಅದರ ನಾಯಕ ನಟ ಮನು ರಂಜನ್ ನೀಡುವ ಮಾಹಿತಿ ಪ್ರಕಾರ ಫೆಬ್ರವರಿ ಕೊನೆ ಅಥವಾ ಮಾರ್ಚ್ ತಿಂಗಳಲ್ಲಿ ಅದು ತೆರೆಗೆ ಬರಲಿದೆಯಂತೆ.


ಇನ್ನು ಮನು ರಂಜನ್ ನಾಯಕ ನಟಯಾಗಿ ಅಭಿನಯಿಸಿರುವ ಮತ್ತೊಂದು ಚಿತ್ರ ” ಮುಗಿಲ್ ಪೇಟೆ’. ಇದು ಭರತ್ ನಾವುಂದ ನಿರ್ದೇಶನದ ಚಿತ್ರ. ಇದರ ಕಡೆ ಈಗ ಅವರು ಹೆಚ್ಚು ಗಮನ ಹರಿಸಿದ್ದಾರಂತೆ. ಸದ್ಯಕ್ಕೆ ಅದಕ್ಕೀಗ ಶೇಕಡಾ 60 ಭಾಗದ ಚಿತ್ರೀಕರಣ ಮುಗಿದಿದೆ. ಇನ್ನೇನು 40 ಭಾಗದ ಚಿತ್ರೀಕರಣ ಬಾಕಿಯಿದೆ. ಅದಕ್ಕೆ ಫೆಬ್ರವರಿ 3 ರಿಂದ ಚಿತ್ರೀಕರಣ ಶುರುವಾಗಕಿದೆಯಂತೆ. ಆದರೆ ಈ ಚಿತ್ರದ ಚಿತ್ರಕತೆಯಲ್ಲೀಗ ಸಾಕಷ್ಟು ಬದಲಾವಣೆ ಆಗಿದೆಯಂತೆ. ಸ್ವತಹ ರವಿಚಂದ್ರನ್ ಅವರೇ ಒಂದಷ್ಟು ಸಲಹೆ ಕೊಟ್ಟಿದ್ದಾರಂತೆ. ಮನುರಂಜನ್ ಸಿನಿ ಜರ್ನಿಯಲ್ಲಿ ಇದುವರೆಗೂ ಆದ ಮಿಸ್ಟೇಕ್ಸ್ ಇನ್ನು ಮುಂದೆ ಆಗಬಾರದು ಅಂತ ಸಿನಿಮಾದಲ್ಲಿ ಒಂದಷ್ಟು ಮಾಸ್ ಮತ್ತು ಸೆಂಟಿಮೆಂಟ್ ಅಂಶಗಳು ಜಾಸ್ತಿ ಇರಲಿ ಅಂತಲೇ ರವಿಚಂದ್ರನ್ ಅವರು ʼಮುಗಿಲ್ ಪೇಟೆʼ ಚಿತ್ರದ ಟೀಮ್ ಗೆ ಸಲಹೆ ನೀಡಿದ್ದಾರಂತೆ. ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸ್ಕ್ರಿಫ್ಟ್ ನಲ್ಲಿ ಒಂದಷ್ಟು ಚೇಂಜಸ್ ಮಾಡಿಕೊಂಡು ಬಾಕಿ ಉಳಿದ ಚಿತ್ರೀಕರಣ ಶುರು ಮಾಡಲಿದೆಯಂತೆ.


ಮುಗಿಲ್ ಪೇಟೆ ಚಿತ್ರದ ಮೇಲೆ ಮನು ರಂಜನ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ನನ್ನ ಫೆವರೆಟ್ ಮೂವೀ ಅಂತಲೇ ಮಾತಿಗಿಳಿಯುತ್ತಾರೆ. ” ನಾನು ಮಾಡುವ ಎಲ್ಲಾ ಸಿನಿಮಾಗಳು ನಂಗಿಷ್ಟ. ಆದರೆ ಮುಗಿಲ್ ಪೇಟೆ ನಂಗೆ ಒಂದಷ್ಟು ಸ್ಪೆಷಲ್. ನನಗಾಗಿ ನನ್ನ ಗೆಳೆಯ ನಿರ್ಮಾಣ ಮಾಡುತ್ತಿರುವ ಚಿತ್ರ. ಹಾಗೆಯೇ ಚಿತ್ರದ ಕತೆ. ಅಪ್ಪ ಇದೇ ಮೊದಲು ಅದರ ಪೂರ್ಣ ಕತೆ ಕೇಳಿ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಇನ್ನು ನಾನು ಗೆಲ್ಲಲೇ ಬೇಕಿದೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರ ಕೊಡಲೇಬೇಕಿದೆ. ಆನಿಟ್ಟಿನಲ್ಲಿ ಅದನ್ನು ಒಂದಷ್ಟು ಚೇಂಜಸ್ ಮೂಲಕ ಚಿತ್ರೀಕರಿಸುತ್ತಿದ್ದೇವೆ’ ಎನ್ನುತ್ತಾರೆ ಮನುರಂಜನ್.


‘‍ಮುಗಿಲ್ ಪೇಟೆ’ ಜತೆಗೆ ‘ಚಿಲ್ಲಂ’ ಹೆಸರಿನ ಚಿತ್ರವೊಂದಕ್ಕೂ ಮನು ರಂಜನ್ ನಾಯಕರಾಗಿದ್ದಾರೆ. ಆ ಚಿತ್ರ ಐದಾರು ದಿನ ಚಿತ್ರೀಕರಣ ಮುಗಿಸಿ, ಅರ್ಧಕ್ಕೆ ನಿಂತಿದೆ. ಅದಕ್ಕೂ ಕೂಡ ಇಷ್ಟರಲ್ಲಿಯೇ ಚಾಲನೆ ಸಿಗಲಿದೆಯಂತೆ. ಈ ಚಿತ್ರದಲ್ಲಿ ಮನು ರಂಜನ್ ಅವರದ್ದು ವಿಲನ್ ಕ್ಯಾರೆಕ್ಟರ್. ಅದರ ಫಸ್ಟ್ ಲುಕ್ ಸಾಕಷ್ಟು ಸದ್ದು ಮಾಡಿದ್ದೂ ನಿಮಗೂ ಗೊತ್ತು. ಇದರ ಜತೆಗೆ ಮತ್ತೊಂದು ಕತೆ ಕೇಳಿದ್ದಾರಂತೆ. ದುನಿಯಾ ಸೂರಿ ಅವರ ಜತೆಗೂ ಒಂದು ಸಿನಿಮಾದ ಮಾತುಕತೆ ನಡೆದಿದೆಯಂತೆ. ಸದ್ಯಕ್ಕೆ ಅದು ಫೈನಲ್ ಆಗಿಲ್ಲ ಅಂತ ಮನುರಂಜನ್ ಹೇಳುತ್ತಾರದರೂ, ಅದು ಚಿತ್ರ ಮಂದಿರಕ್ಕೋ, ಒಟಿಟಿ ಪ್ಲಾಟ್ ಫಾರ್ಮ್ ಗೋ ಅನ್ನೋದು ಡಿಸೈಡ್ ಆದರೆ ಇಷ್ಟರಲ್ಲೇ ಅದು ಕೂಡ ಶರುವಾಗಲಿದೆಯಂತೆ. ಇದರ ಜತೆಗೆ ರವಿಚಂದ್ರನ್, ವಿಕ್ರಮ್ ಹಾಗೂ ತಾವು ಸೇರಿ ಒಂದು ಸಿನಿಮಾ ಮಾಡುವ ಸಾಧ್ಯತೆಗಳು ಇವೆ ಅಂತಾರೆ ಮನು ರಂಜನ್. ಅಲ್ಲಿಗೆ ನಟನಾಗಿ 2021 ಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ಯುಸಿ ಆಗಿರಲು ನಿರ್ಧರಿಸಿರುವ ಮನು ರಂಜನ್, ಇದೇ ವರ್ಷವೇ ಮದುವೆ ಕೂಡ ಆಗಲಿದ್ದಾರಂತೆ. ಅದು ಕೂಡ ಅಪ್ಪ- ಅಮ್ಮ ತೋರಿಸಿದ ಹುಡುಗಿಯನ್ನೇ ತಾವು ಮದುವೆ ಆಗೋದು ಅಂತಾರೆ. ಇದಿಷ್ಟು ಮಾಹಿತಿಯನ್ನು ಅವರು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.

Categories
ಸಿನಿ ಸುದ್ದಿ

ರಣಧೀರ ಬಂದಿದ್ದರೆ ನಾನು ಸ್ಟಾರ್‌ ಆಗಿರುತ್ತಿದ್ದೆ-  ನಟ ಮನುರಂಜನ್‌ ಹೀಗೇಕೆ   ಹೇಳಿದ್ರು?

ಇದು ಪಶ್ಚಾತಾಪವೋ, ಪುನರ್‌ ಅವಲೋಕನವೋ ….

ಇದು ಅವರ ಸೋಲಿನ ಪಯಣದ ಪಶ್ಚಾತಾಪವೋ ಅಥವಾ ಪುನರ್‌ ಅವಲೋಕನವೋ ಗೊತ್ತಿಲ್ಲ, ಅದರೆ ನಟ ರವಿಚಂದ್ರನ್‌ ಅವರ ಹಿರಿಯ ಪುತ್ರ ಮನುರಂಜನ್‌, ಇದುವರೆಗಿನ ತಮ್ಮ ಸಿನಿ ಪಯಣದಲ್ಲಾದ ಕಹಿ ಅನುಭವದ ಕುರಿತು ಮಾತನಾಡುವಾಗ, “ರಣಧೀರʼ ಚಿತ್ರ ಬಂದಿದ್ದರೆ ಇಷ್ಟು ಹೊತ್ತಿಗೆ ನಾನು ಸ್ಟಾರ್‌ ಆಗಿರುತ್ತಿದ್ದೆ ಎನ್ನುವ ಮಾತುಗಳನ್ನು ಅತ್ಯಂತ ನೋವಿನಿಂದಲೇ ಹೇಳಿಕೊಂಡರು.

ಹೊಸ ವರ್ಷದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಮಾಧ್ಯಮದವರ ಮುಂದೆ ಹಾಜರಾಗಿದ್ದ ಅವರು, ಲಾಕ್‌ ಡೌನ್‌ ದಿನಗಳು, ಆನಂತರದ ಜರ್ನಿಯ ಜತೆಗೆ ಮುಂದೆ ಯೋಚಿಸಿರುವ ಪ್ಲಾನ್ ಗಳ ಬಗ್ಗೆ ಮಾತನಾಡಿದರು. ಹಾಗೆ ಮಾತನಾಡುವಾಗ ʼಬೃಹಸ್ಪತಿʼ ಚಿತ್ರದ ಸೋಲಿನ ನಂತರ ತಮ್ಮ ಬದುಕಿನಲ್ಲಾದ ಕಹಿ ಘಟನೆಗಳನ್ನು ನೆನಪಿಸಿಕೊಂಡು, ರಣಧೀರ ಬಂದಿದ್ದರೆ ಹೀಗಾಗುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನಾನು ಸ್ಟಾರ್‌ ಆಗಿರುತ್ತಿದೆʼ ಎನ್ನುತ್ತಾ ಬೇಸರ ಹೊರ ಹಾಕಿದರು.

ʼರಣಧೀರʼ ರವಿಚಂದ್ರನ್‌ ಅಭಿನಯದ ಬ್ಲಾಕ್‌ ಬಸ್ಟರ್‌ ಚಿತ್ರ. ಅದೇ ಹೆಸರಲ್ಲಿ ಮತ್ತೊಂದು ಚಿತ್ರ ಮಾಡುವ ಪ್ಲಾನ್‌ ರವಿಚಂದ್ರನ್‌ ಅವರಿಗಿತ್ತು. ಆ ಚಿತ್ರದೊಂದಿಗೆ ಹಿರಿಯ ಪುತ್ರ ಮನುರಂಜನ್‌ ಅವರನ್ನು ಬೆಳ್ಳಿ ತೆರೆಗೆ ಪರಿಚಯಿಸುವುದಕ್ಕೂ ಸಿದ್ದತೆ ನಡೆದಿತ್ತು. ಆದರೆ ಅದು ಕಾರಣಾಂತರಗಳಿಂದ ಅದು ಅಲ್ಲಿಗೇ ನಿಂತು ಹೋಯಿತು. ಹಾಗಾಗಿ ಮನುರಂಜನ್‌ ಅವರು, ರಣಧೀರ ಚಿತ್ರದ ಬದಲಿಗೆ ʼಸಾಹೇಬʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಆನಂತರ ರಾಕ್‌ ಲೈನ್‌ ಪ್ರೊಡಕ್ಷನ್‌ ಮೂಲಕ ತಮಿಳಿನ ʼವಿಐಪಿʼ ಚಿತ್ರ ʼಬೃಹಸ್ಪತಿʼಯಾಗಿ ಕನ್ನಡಕ್ಕೆ ಬಂತು. ಅದರಲ್ಲಿ ಮನು ರಂಜನ್‌ ನಾಯಕರಾಗಿ ಕಾಣಸಿಕೊಂಡರು. ಇದು ಅವರ ಎರಡನೇ ಚಿತ್ರ. ಅವೆರೆಡು ಚಿತ್ರಗಳೂ ನಿರೀಕ್ಷಿತ ಗೆಲವು ಕಾಣಲಿಲ್ಲ. ಹಾಗಾಗಿ ಆ ಚಿತ್ರಗಳ ಸೋಲಿನ ಬಗ್ಗೆ ಮಾತನಾಡುವಾಗ ʼರಣಧೀರʼ ಚಿತ್ರ ನೆನಪಿಸಿಕೊಂಡರು.

ಅಲ್ಲಿಂದ ಮುಂದೆ ಮುಕ್ತ ಮಾತುಕತೆ. ಇದೇ ಮೊದಲ ಬಾರಿಗೆ ಆಫ್‌ ದಿ ರೆಕಾರ್ಡ್‌ ಎನ್ನುವ ಸಂಗತಿಗಳನ್ನು ಬಿಚ್ಚಿಟ್ಟರು. ಎಲ್ಲವನ್ನು ಅವರು ಮನದಾಳದಿಂದಲೇ ಹಂಚಿಕೊಂಡರು “ನಾನು ತುಂಬಾ ರಿಜ್ವರ್ಡ್‌ ಪರ್ಸನ್.‌ ಅದೇ ನಂಗೆ ಒಂಥರ ಪ್ಲಸ್‌ ಆಗಿದೆ, ಹಾಗೆಯೇ ನೆಗೆಟಿವ್‌ ಕೂಡ ಆಗಿದೆ. ಆದರೆ ಮಾಧ್ಯಮದ ಮುಂದೆ ನಾನಿನ್ನು ಮಾತನಾಡಲೇಬೇಕಿದೆ. ಹೆಚ್ಚೆಚ್ಚು ಮಾತನಾಡುತ್ತೇನೆ. ಉಳಿದಂತೆ ಪಾರ್ಟಿ- ಗಿರ್ಟಿ ಇತ್ಯಾದಿ ವಿಷಯಗಳಲ್ಲಿ ಮೊದಲಿನ ಹಾಗೆಯೇ. ಯಾಕಂದ್ರೆ , ನಮ್ಮ ಅಪ್ಪ ಇರೋದೆ ಹಾಗೆ. ಅವರಿಗೆ ಇದೆಲ್ಲ ಇಷ್ಟ ಇಲ್ಲ. ಅವರಿಗೆ ವಿರುದ್ಧವಾಗಿ ನಾನು ನಡೆದುಕೊಳ್ಳುವುದಿಲ್ಲ. ಅದು ನನ್ನ ಪಾಲಿಸಿ. ಅದಕ್ಕಾಗಿಯೇ ನನ್ನ ಮೇಲೆ, ಆತ ಯಾರನ್ನು ಮಾತನಾಡಿಸೋದಿಲ್ಲ, ತುಂಬಾ ರಿಜ್ವರ್ಡ್‌ ಎನ್ನುವ ಆರೋಪ ಇದೆ. ಅದೇನಾದ್ರೂ, ಇರಲಿ, ಅದಕ್ಕೆ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ. ಅದರಾಚೆ, ಮಾಧ್ಯಮದವರು ನಮ್ಮನ್ನು ಬೆಳೆಸುವವರು. ಅವರ ಜತೆಗೆ ನಮ್ಮ ಮಾತುಕತೆ ಇದ್ದೇ ಇರುತ್ತದೆ. ಇನ್ನು ಮುಂದೆ ತುಸು ಹೆಚ್ಚಾಗಿಯೇ ಇರುತ್ತದೆʼ ಅಂತ ನಗು ಬೀರಿದರು.

Categories
ಸಿನಿ ಸುದ್ದಿ

ಎಲ್ಲರೂ ದಪ್ಪ- ದಪ್ಪ ಅಂತಾರೆ, ಆದ್ರೆ ಅವರಿಗೆ ನನ್ನ ಆರೋಗ್ಯದ ಸಮಸ್ಯೆ ಗೊತ್ತಿದಿಯಾ ? ನಟ ಮನುರಂಜನ್‌ ಪ್ರಶ್ನೆ

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನುರಂಜನ್‌ ರಿವೀಲ್‌ ಮಾಡಿದರು ಯಾರಿಗೆ ಗೊತ್ತಿರದ ಒಂದು ಸತ್ಯ !

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಹಿರಿಯ ಪುತ್ರ ಹಾಗೂ “ಸಾಹೇಬʼ ಖ್ಯಾತಿಯ ಯುವ ನಟ ಮನುರಂಜನ್‌ ಕೊನೆಗೂ ಒಂದು ವಿಷಯ ಬಹಿರಂಗ ಪಡಿಸಿದ್ದಾರೆ. ಇದುವರೆಗೂ ಅವರು ಮತ್ತು ಅವರ ಕುಟುಂಬ ಬಚ್ಚಿಟ್ಟಿದ ಸತ್ಯ ಅದು. ಆದರೂ ಅದನ್ನೀಗ ಮನುರಂಜನ್‌ ರಿವೀಲ್‌ ಮಾಡಿದ್ದಾರೆ. ಇದು ಅವರ ತಂದೆ ರವಿಚಂದ್ರನ್‌ ಅವರಿಗೂ ಗೊತ್ತಿಲ್ಲ, ಹಾಗೂ ಅವರ ಕುಟುಂಬಕ್ಕೂ ಗೊತ್ತಿಲ್ಲ. ಆದರೂ ಮನುರಂಜನ್‌, ಶನಿವಾರ ಮಾಧ್ಯಮದ ಮುಂದೆ ತುಂಬಾ ನೋವಿನಿಂದಲೇ ಇದನ್ನು ಹೇಳಿಕೊಂಡರು. ಅದಕ್ಕೆ ಕಾರಣ ಕನ್ನಡದ ಸಿನಿಮಾ ಪ್ರೇಕ್ಷಕರಲ್ಲಿ ಅವರ ಬಗ್ಗೆ ಇರುವ ಒಂದ್ರೀತಿ ತಪ್ಪು ಅಭಿಪ್ರಾಯ.” ಎಲ್ಲರೂ ನಾನು ದಪ್ಪ ದಪ್ಪ ಅಂತಾರೆ. ವರ್ಕೌಟ್‌ ಮಾಡುತ್ತಿದ್ದರೂ ನಾನೇಕೆ ದಪ್ಪ ಆಗಿಯೇ ಇರುತ್ತೇನೆ ಅನ್ನೋದು ಅವರಿಗೆ ಗೊತ್ತಿಲ್ಲ. ಅದು ನನ್ನ ಸಮಸ್ಯೆ ಅಲ್ಲ. ಬದಲಿಗೆ ಅದು ನನ್ನ ಆರೋಗ್ಯದ ಸಮಸ್ಯೆʼ ಎನ್ನುತ್ತಾ ಕೊಂಚ ಬೇಸರದ ಮಾತುಗಳಲ್ಲಿ ಇಷ್ಟು ದಿನ ತಾವು ಮತ್ತು ಕುಟುಂಬ ರಹಸ್ಯವಾಗಿಟ್ಟಿದ್ದ ವಿಷಯವನ್ನು ಹೇಳಿಕೊಂಡರು.

“ಇದು ಹೇಗಾಯ್ತೋ ಗೊತ್ತಿಲ್ಲ. “ಬೃಹಸ್ಪತಿʼ ಸಿನಿಮಾ ಬಂದು ಹೋದ ಮೇಲೆ ಒಂದಷ್ಟು ದಿನ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಆ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ ಎನ್ನುವುದು. ಅದೇ ಟೆನ್ಸ್‌ ನಲ್ಲಿ ನಾನು ಒಂದಷ್ಟು ಡಿಪ್ರೆಷನ್‌ ಗೆ ಹೋದೆ. ಅದಕ್ಕೆ ಕಾರಣ ಸಿನಿಮಾ ಸೋಲಿನ ಮಾನಸಿಕ ಒತ್ತಡ. ಅದರಿಂದಾಗಿಯೋ ಏನೋ ಆರೋಗ್ಯ ಸಮಸ್ಯೆ ಶುರುವಾಯ್ತು. ದೇಹದ ಎಡಭಾಗದಲ್ಲಿ ನರ ದೌರ್ಬಲ್ಯದ ಸಮಸ್ಯೆ ಬಂತು. ಅದಕ್ಕಾಗಿ ಆಸ್ಪತ್ರೆಗೆ ದಾಖಲಾದೆ. ಅಲ್ಲಿಂದ ದೇಹಕ್ಕೆ ಸ್ಯ್ಟಾರಾಯ್ಡ್‌ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಹಾಗೆಯೇ ಪ್ರತಿ ಆರು ತಿಂಗಳಿಗೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದೆಲ್ಲದರ ನಡುವೆಯೂ ವರ್ಕೌಟ್‌ ಮಾಡುತ್ತಲೇ ಇದ್ದೆ. ಆದರೂ ದೇಹದ ತೂಕದಲ್ಲಿ ಏರಿಳಿತ ಆಗುತ್ತಲೇ ಇದೆ. ಒಂದಷ್ಟು ದಿನ ಸಣ್ಣಗಾಗಿದ್ದವನು, ಏಕಾಏಕಿ ಮತ್ತೆ ದಪ್ಪ ಆಗುತ್ತಿದ್ದೆ. ಇದೆಲ್ಲ ಆರೋಗ್ಯದ ಸಮಸ್ಯೆಯಿಂದಲೇ. ಅ ಸಮಯದಲ್ಲೂ ನಾನು ʼಪ್ರಾರಂಭʼ ಚಿತ್ರ ಒಪ್ಪಿಕೊಂಡೆ. ಯಾಕೆ ಗೊತ್ತಾ? ಸಿನಿಮಾ ಮೇಲಿನ ಪ್ರೀತಿಗಾಗಿ. ಇದು ಕೆಲವರಿಗೆ ಗೊತ್ತಿಲ್ಲ. ಹಾಗಾಗಿ ನಾನು ಫಿಟ್‌ ಇಲ್ಲ, ದಪ್ಪ ಇದ್ದಾರೆ ಎನ್ನುತ್ತಾರೆʼ ಎಂಬ ಮಾತುಗಳೊಂದಿಗೆ ಮನುರಂಜನ್‌ ಕೊಂಚ ಭಾವುಕರಾದರು.

ಹಾಗಂತ ಅವರಿಗೆ ಈಗಲೂ ಆರೋಗ್ಯದ ಸಮಸ್ಯೆ ಇದೆಯಾ ಅಂತ ಅನುಮಾನಿಸಬೇಕಿಲ್ಲ. ಕ್ರೇಜಿಸ್ಟಾರ್‌ ಅಭಿಮಾನಿಗಳು ಗಾಬರಿ ಆಗುವ ಅಗತ್ಯವೂ ಇಲ್ಲ, ಯಾಕಂದ್ರೆ ಮನು ರಂಜನ್‌ ಈಗ ಕಂಪ್ಲಿಟ್ಲಿ ಫೈನ್.‌ ಈಗಲೂ ಆರು ತಿಂಗಳೊಮ್ಮೆ ಅಸ್ಪತ್ರೆಗೆ ಹೋಗಬೇಕು, ಸ್ಟೆರಾಯ್ಡ್‌ ತೆಗೆದುಕೊಳ್ಳಬೇಕೆನ್ನುವುದನ್ನು ಬಿಟ್ಟರೆ ಅವರೀಗ ಸಂಪೂರ್ಣವಾಗಿಯೂ ಫಿಟ್‌ ಆಗಿದ್ದಾರೆ. ಅಷ್ಟು ಬೇಗ ಅದರಿಂದ ಅವರು ಹೇಗೆ ಹೊರ ಬಂದ್ರು ಅಂತೆನ್ನುವುದಕ್ಕೆ ಸಿನಿಮಾ ಮೇಲಿನ ಪ್ರೀತಿ, ಸೋಲೋ, ಗೆಲುವೋ, ಇಲ್ಲಿಯೇ ಸಾಧಿಸಬೇಕೆನ್ನುವ ವಿಶ್ವಾಸ ಮತ್ತು ಛಲವೇ ಕಾರಣವಂತೆ.” ಡಿಪ್ರೆಷನ್‌ ಇತ್ತು. ಅದು ಆ ಕ್ಷಣಕ್ಕೆ. ಯಾಕಂದ್ರೆ ಆ ಕ್ಷಣದಲ್ಲಿ ನನಗಾದ ನೋವು ಹಾಗಿತ್ತು. ಆದರೆ ಅದನ್ನು ಅಲ್ಲಿಗೇ ಮರೆತು ಬಿಟ್ಟೆ. ಆದರೆ ಅದರಿಂದಲೇ ಏನೋ ಉಂಟಾದ ಆರೋಗ್ಯ ಸಮಸ್ಯೆಗೆ ಒಂದಷ್ಟು ದಿನ ರೆಸ್ಟ್‌ ತೆಗೆದುಕೊಳ್ಳಲೇ ಬೇಕಾಯಿತು. ಹಾಗಂತ ಅದನ್ನೇನು ಹೆಚ್ಚು ದಿನಕ್ಕೆ ಮುಂದುವರೆಸಲಿಲ್ಲ. ಅದೆಲ್ಲ ಬಿಟ್ಟು ಮುಂದಕ್ಕೆ ಹೋಗಬೇಕು ಅಂತಲೇ ಆಸ್ಪತ್ರೆಯಲ್ಲಿದ್ದಾಗ ಪ್ರಾರಂಭ ಚಿತ್ರದ ಕತೆ ಕೇಳಿದೆ. ಸಿನಿಮಾ ಪಯಣ ಮತ್ತೆ ಅಲ್ಲಿಂದ ಶುರುವಾಯಿತುʼ ಎನ್ನುವ ಮನದಾಳದ ಮಾತುಗಳನ್ನು ನಟ ಮನುರಂಜನ್‌ ಶನಿವಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಣ್ಣದೊಂದು ಮಾಧ್ಯಮಗೋಷ್ಠಿಯಲ್ಲಿ ತಮ್ಮ ಮನದಾಳ ಮಾತು ಹಂಚಿಕೊಂಡರು.

Categories
ಸಿನಿ ಸುದ್ದಿ

ಶೂಟಿಂಗ್ ಮುಗಿಸಿದ ಧೀರ – ಸಂಭ್ರಮದಲ್ಲಿ ಸಾಮ್ರಾಟ್

ಉತ್ಸಾಹದಲ್ಲಿ ಹೊಸಬರು

ಕಳೆದ ಜನವರಿಯಲ್ಲಿ ಮಹೂರ್ತ ಕಂಡಿದ್ದ “ಧೀರ ಸಾಮ್ರಾಟ್” ಈಗ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದೆ.
ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಈ ಚಿತ್ರ ಇತ್ತೀಚೆಗೆ ಕುಂಬಳಕಾಯಿ ಒಡೆದಿದೆ.
ಅಂದಹಾಗೆ, ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಸಾಕಷ್ಟು ಅನುಭವ ಹೊಂದಿರುವ ಪವನ್ ಕುಮಾರ್ (ಪಚ್ಚಿ ) ಈ ಸಿನಿಮಾಗೆ ನಿರ್ದೇಶಕರು.

ಸುಮಾರು 45 ದಿನಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ನಡೆಸಿದ ಚಿತ್ರತಂಡ, ನಗರದ ಹೊರ ಭಾಗದಲ್ಲಿ ನಡೆದ ಕೊನೆ ದಿನದ ಚಿತ್ರೀಕರಣದಲ್ಲಿ ಸಿನೆಮಾದ ನಾಯಕನ ತಂಡ ಮತ್ತು ಖಳನಾಯಕನ ಮಧ್ಯೆ ಜಿದ್ದಾಜಿದ್ದಿನ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಮುಗಿಸಿದೆ. ತನ್ವಿ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಉತ್ತರ ಕರ್ನಾಟಕದ ಗುರು ಬಂಡಿ ಚಿತ್ರದ ನಿರ್ಮಾಪಕರು.

ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಹೊಸಬರ ತಂಡದ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹಾಡುಗಳಿಗೆ ಮುರಳಿ ಮಾಸ್ಟರ್ ಮತ್ತು ಕಿಶೋರ್ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದ ಚಿತ್ರೀಕರಣದಲ್ಲಿ ವೀರೇಶ್ ಎನ್ ಟಿ ಎ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದರೆ, ಎರಡನೇ ಭಾಗದ ಚಿತ್ರೀಕರಣಕ್ಕೆ ಅರುಣ್ ಸುರೇಶ್ ಕ್ಯಾಮೆರಾ ಹಿಡಿದಿದ್ದಾರೆ. ಎ. ಆರ್. ಸಾಯಿರಾಂ ಸಂಭಾಷಣೆ ಬರೆದಿರೋ ಈ ಸಿನಿಮಾದಲ್ಲಿ ನಿರ್ದೇಶಕ ಪವನ್ ಕುಮಾರ್ ಕೂಡ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಆರಂಭದಲ್ಲಿ ಆಕ್ಷನ್ ಪ್ರಿನ್ಸ್ ಧೃವ‌ ಸರ್ಜಾಅವರು ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ವಿ.ನಾಗೇಂದ್ರ ಪ್ರಸಾದ್ ಮತ್ತು “ಭರ್ಜರಿ” ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ರಾಕೇಶ್ ಬಿರಾದರ್ ಮತ್ತು ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಉಳಿದಂತೆ ಬಲರಾಜ್ ವಾಡಿ, ನಾಗೇಂದ್ರ ಅರಸ್, ಶೋಭರಾಜ್, ಶಂಕರ್ ಭಟ್, ರವೀಂದ್ರನಾಥ್, ರಮೇಶ್ ಭಟ್, ಮಂಡ್ಯ ಚಂದ್ರು, ಮನಮೋಹನ್ ರೈ, ಯತಿರಾಜ್ , ಸಂಕಲ್ಪ್, ರವಿ, ಗಿರಿಧರ್, ಹರೀಶ್ ಅರಸು, ಇಂಚರ, ಜ್ಯೋತಿ ಮುರೂರ್ ಅಭಿನಯಿಸಿದ್ದಾರೆ. ರಾಘವ್ ಸುಭಾಷ್ ಸಂಗೀತ ನೀಡಿದ್ದು, ಸತೀಶ್ ಚಂದ್ರಯ್ಯ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ಗಾಜನೂರು ಹೆಸರಿನಲ್ಲೊಂದು ಸಿನಿಮಾ!

ಸಂಕ್ರಾಂತಿಕ್ಕೆ ಸೆಟ್ಟೇರುತ್ತಿದೆ ಹೊಸ ಸಿನಿಮಾ

ಗಾಜನೂರು ಅಂದಾಕ್ಷಣ ಕನ್ನಡ ಚಿತ್ರರಂಗಕ್ಕೆ ನೆನಪಾಗೋದು ವರನಟ ಡಾ. ರಾಜ್‌ಕುಮಾರ್‌ ಅವರ ಹುಟ್ಟೂರು. ಆದರೆ ಅದೇ ಹೆಸರಲ್ಲೊಂದು‌ ಊರು ಶಿವಮೊಗ್ಗ ಜಿಲ್ಲೆಯಲ್ಲೂ ಇದೆ. ಆ ಊರಿನಲ್ಲಿ ನಡೆಯುವ ನೈಜ ಘಟನೆಯೊಂದನ್ನು ಆಧರಿಸಿ,  ಅದೇ ಊರಿನ ಹೆಸರಲ್ಲೊಂದು ಸಿನಿಮಾ ಸೆಟ್ಟೇರಲು ರೆಡಿ ಆಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲೇ ಅಂದ್ರೆ ಜ 16 ಕ್ಕೆ ʼಗಾಜನೂರುʼ ಚಿತ್ರದ ಮುಹೂರ್ತ ಫಿಕ್ಸ್‌ ಆಗಿದೆ. ಕೃತಿಕಾ ರಾಮ್‌ ಮೂವೀಸ್‌ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಲಬುರಗಿ ಮೂಲದ ಅವಿನಾಶ್‌ ಬಂಡವಾಳ ಹೂಡುತ್ತಿದ್ದಾರೆ. ಇದು ಅವರ ನಿರ್ಮಾಣದ ಚೊಚ್ಚಲ ಚಿತ್ರ. ಯುವ ಪ್ರತಿಭೆ ವಿಜಯ್‌ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾದ ಎಸ್.ಮೋಹನ್, ನಂದಕಿಶೋರ್ ನಿರ್ದೇಶಕರ ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದಲ್ಲಿ ವಿಜಯ್‌, ಈಗ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಕೀರ್ತಿ ಕತೆ, ಚಿತ್ರಕತೆ ಬರೆದಿದ್ದಾರೆ. ಕ್ರಾಂತಿಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರ ತಂಡದ ಪ್ರಕಾರ ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರದ ಚಿತ್ರ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಾಳ್ಕರ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ತೀರ್ಥಹಳ್ಳಿ, ಬೆಂಗಳೂರಿನಲ್ಲಿ 35 ದಿನಗಳ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಮಾಡಿಕೊಂಡಿದೆ. ಅವತಾರ್, ರವಿಶಂಕರ್, ತಬಲ ನಾಣಿ, ಕುರಿ ಪ್ರತಾಪ್, ಗೋಪಾಲಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ತರಂಗ ವಿಶ್ವ, ವಾಣಿ, ಸಂತು ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚೆಗೆ ಚಿತ್ರ ತಂಡವು ಎಡಿಜಿಪಿ ಭಾಸ್ಕರ್‌ ರಾವ್‌ ಅವರನ್ನು ಭೇಟಿ ಮಾಡಿ, ಚಿತ್ರಕ್ಕೆ ಆಶೀರ್ವಾದ ಪಡೆಯಿತು.

Categories
ಸಿನಿ ಸುದ್ದಿ

ಹುಬ್ಳಿ ಹುಡುಗಿ ಕೀರ್ತಿ ಕಲ್ಕೇರಿ ಜತೆಗೆ ನಟ ಶಶಿಕುಮಾರ್‌ ಪುತ್ರನ ಲವ್ವಿ ಡವ್ವಿ !

‘ ಓ ಮೈ ಲವ್‌ ‘ ಅಂತ ಪ್ರೇಮ ಕಾವ್ಯ ಬರೆಯಲು ಹೊರಟ ಯುವ ಜೋಡಿ

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಹೀರೋ ಆಗಿ ಬೆಳ್ಳಿತೆರೆಗೆ ಕಾಲಿಡುವ ಮುನ್ನವೇ ಪ್ರೀತಿಯಲ್ಲಿ ಬಿದ್ದಿದ್ದಾರೆ. ʼ ಓ ಮೈ ಲವ್‌ʼ ಅಂತ ಹುಬ್ಳಿ ಹುಡುಗಿ ಕೀರ್ತಿ ಕಲ್ಕೇರಿ ಜತೆಗೆ ಹೊಸ ಪ್ರೇಮಕಾವ್ಯ ಬರೆಯಲು ರೆಡಿ ಆಗಿದ್ದಾರೆ. ಇಷ್ಟರಲ್ಲಿ ಈ ತರುಣ ಜೋಡಿಯ ಪ್ರೇಮ ಪುರಾಣ ಬಯಲಾಗುವುದು ಖಾತರಿ ಆಗಿದೆ.

ಅರೆ, ಇದೇನು ಹೊಸ ಪ್ರೇಮ ಪುರಾಣ ಅಂತ ಗಾಬರಿಯಾಗುವುದು ಬೇಡ, ಯಾಕಂದ್ರೆ ಇದೊಂದು ಹೊಸ ಸಿನಿಮಾದ ತಾಜಾ ವಿಚಾರ.

ʼಸೀತಾಯಣʼ ಹಾಗೂʼ ಸಮಿತ್‌ʼ ಚಿತ್ರಗಳ ಜತೆಗೀಗ ನಟ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ʼಓ ಮೈ ಲವ್‌ʼ ಹೆಸರಿನ ಮತ್ತೊಂದು ಚಿತ್ರಕ್ಕೆ ನಾಯಕರಾಗಿದ್ದಾರೆ. ಜಿಎಸ್‌ಬಿ ಪ್ರೊಡಕ್ಷನ್‌ ಮೂಲಕ ಜಿ. ರಾಮಾಂಜನಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸ್ಮೈಲ್‌ ಶ್ರೀನು ಆಕ್ಷನ್‌ ಕಟ್‌ ಹೇಳುತ್ತಿದ್ದು, ಜನವರಿ ೧೫ ರಂದು ಈ ಚಿತ್ರಕ್ಕೆ ಮುಹೂರ್ತ ಕೂಡ ಫಿಕ್ಸ್‌ ಆಗಿದೆ. ಈ ಚಿತ್ರದಲ್ಲಿ ಅಕ್ಷಿತ್‌ ಶಶಿಕುಮಾರ್‌ ಅವರಿಗೆ ಹುಬ್ಬಳ್ಳಿ ಹುಡುಗಿ ಕೀರ್ತಿ ಕಲ್ಕೇರಿ ನಾಯಕಿ ಎನ್ನುವುದು ವಿಶೇಷ.

ನಾಯಕಿ ಕೀರ್ತಿ ಕಲ್ಕೇರಿ ಅವರಿಗೆ ಇದು ಎರಡನೇ ಚಿತ್ರ. ಈಗಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್‌ ಪುತ್ರ ಮನು ರಂಜನ್‌ ಅಭಿನಯದ ‘ಪ್ರಾರಂಭ’ ಚಿತ್ರದೊಂದಿಗೆ ಸ್ಯಾಂಡಲ್‌ ವುಡ್‌ ಗೆ ಎಂಟ್ರಿಯಾಗಿದ್ದು , ಅದಿನ್ನು ತೆರೆ ಕಾಣುವುದು ಬಾಕಿಯಿದೆ. ಅದು ತೆರೆ ಕಾಣುವ ಮುನ್ನವೇ ಮತ್ತೊಂದು ಚಿತ್ರಕ್ಕೆ ನಾಯಕಿ ಆಗುವ ಅವಕಾಶ ಕೀರ್ತಿ ಅವರಿಗೆ ಸಿಕ್ಕಿದೆ‌. ಹೆಸರಾಂತ ಶಹನಾಯಿ ವಾದಕ ಸನಾದಿ ಅಪ್ಪಣ್ಣ ಅವರ ಮೊಮ್ಮಗಳು ಈ ಕೀರ್ತಿ ಕಲ್ಕೇರಿ.

ಹಾಗೊಂದು ಹಿನ್ನೆಲೆ ಅವರಿಗಿದೆ. ಆದರೂ, ಸಿನಿಮಾದ ಮೇಲಿನ ಪ್ರೀತಿ, ನಟನೆಯ ಆಸಕ್ತಿ ಜತೆಗೆ ಒಂದಷ್ಟು ತರಬೇತಿ ಪಡೆದುಕೊಂಡೆ ಸಿನಿಪಯಣ ಆರಂಭಿಸಿರೋ, ಈ ಹುಡುಗಿಗೆ ಮೊದಲ ಸಿನಿಮಾ ತೆರೆ ಕಾಣುವ ಮುನ್ನವೇ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದೆ. ಓ ಮೈ ಲವ್‌ ಅಂತ ಈಗ ಶಶಿ ಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಜತೆಗೆ ಹೊಸ ಪ್ರೇಮ ಕಾವ್ಯ ಬರೆಯಲು ರೆಡಿಯಾಗಿದ್ದಾರೆ.

‘ ಎಲ್ಲವೂ ಅದೃಷ್ಟವೆ‌. ಮೊದಲ ಸಿನಿಮಾದ ಆಫರ್ ಕೂಡ ಹಾಗೆಯೇ ಬಂತು. ನಿರ್ದೇಶಕ ಮನು ಕಲ್ಯಾಡಿ ಅವರೆ ಕಡೆಯಿಂದ ಚಿತ್ರ ರಂಗಕ್ಕೆ ಬರುವ ಅವಕಾಶ ಸಿಕ್ಕಿತು. ಅದೇ ಮೆಟ್ಟಿಲು ಮೂಲಕ ಈ ಸಿನಿಮಾ ಅವಕಾಶ ಬಂತು. ಒಳ್ಳೆಯ ಅವಕಾಶ ಅಂತ ಒಪ್ಪಿಕೊಂಡೆ. ಒಳ್ಳೆಯ ತಂಡ, ಖುಷಿ ಆಗುತ್ತಿದೆ ‘ ಎನ್ನುತ್ತಾ ಎರಡನೇ ಸಿನಿಮಾದ ಆಫರ್ ಬಗ್ಗೆ ಮನ ಬಿಚ್ಚಿ ಮಾತನಾಡುತ್ತಾರೆ ನಟಿ ಕೀರ್ತೀ ಕಲ್ಕೇರಿ.

error: Content is protected !!