ಸ್ಯಾಂಡಲ್ ವುಡ್ ಕಳೆಗಟ್ಟುವುದು ಖಾತರಿ ಆಯ್ತು, ಚಿತ್ರೋದ್ಯಮ ಎದುರು‌ ನೋಡುತ್ತಿದ್ದ ದಿನ ಬಂದೇ ಬಿಡ್ತು !

‘ರಾಬರ್ಟ್ ‘ ತೆರೆ ಕಂಡರೆ ಎಲ್ಲವೂ ಸಹಜವಾಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರರಂಗ

ಸ್ಟಾರ್ ಸಿನ್ಮಾ ಬರ್ಬೇಕು, ಬಂದ್ರೆ ನಮ್ಗೂ ಒಂದ್ರೀತಿ ಧೈರ್ಯ ಬರ್ತೈತಿ….. ಹೀಗಂತ  ಬಿಡುಗಡೆಗೆ ಸಿದ್ದಗೊಂಡ ಅದೆಷ್ಟೋ ಮಂದಿ ಸಣ್ಣ ಪುಟ್ಟ ಸಿನಿಮಾಗಳ ನಿರ್ಮಾಪಕರು ಹೇಳುತ್ತಿದ್ದರು‌.ಸ್ಟಾರ್ ಸಿನಿಮಾ ಬಂದ್ರೆ ಸಾಕು ಅಂತಲೂ ಕಾಯುತ್ತಿದ್ದರು. ವಿಶೇಷವಾಗಿ ದರ್ಶನ್ ಸಿನ್ಮಾ ಬಂದ್ರೆ ಚಿತ್ರ ಮಂದಿರಗಳತ್ತ ಜನ ಬರ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿತು. ಇನ್ನೇನು ಫೆಬ್ರವರಿ ಕಳೆದರೆ ಸ್ಯಾಂಡಲ್ ವುಡ್‌ ಮತ್ತೆ ಕಳೆ ಗಟ್ಟುವುದು ಗ್ಯಾರಂಟಿ ಆಗಿದೆ. ಮಾರ್ಚ್ 11 ಕ್ಕೆ ದರ್ಶನ್ ಅಭಿನಯದ ಬಹು ನಿರೀಕ್ಷಿತ’ ರಾಬರ್ಟ್’ ಚಿತ್ರ ತೆರೆ ಕಾಣುತ್ತಿದೆ.  ಕೊನೆಗೂ ಚಿತ್ರ ತಂಡ ರಿಲೀಸ್ ದಿನಾಂಕ ಅನೌನ್ಸ್ ಮಾಡಿ, ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದು ದರ್ಶನ್ ಅಭಿಮಾನಿಗಳಿಗೆ ಮಾತ್ರ ಸಿಹಿ ಸುದ್ದಿ ಅಲ್ಲ, ಇಡೀ ಕನ್ನಡ ಚಿತ್ರರಂಗಕ್ಕೂ ಸಿಹಿ ಸುದ್ದಿಯೇ. ಅದೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ

ಜನ ಬರ್ತೀಲ್ಲ ಅಂತ ಕಂಗಾಲು ಆಗಿತ್ತು ಉದ್ಯಮ….

ಲಾಕ್ ಡೌನ್ ತೆರವಾದ ದಿನ ದಿಂದಲೇ ಚಿತ್ರ ಮಂದಿರಗಳು ಒಪನ್ ಆಗಿದ್ದು ನಿಮಗೂ ಗೊತ್ತು. ಅಕ್ಟೋಬರ್ 15 ಕ್ಕೆ ಅಧಿಕೃತ ಅಪ್ಪಣೆ ಕೂಡ ಸಿಕ್ಕಿತು. ಅಂದೇ ಕೆಲವು ಚಿತ್ರಗಳು ಪ್ರಾಯೋಗಿಕ ವಾಗಿ ತೆರೆಕಂಡವು. ಆದರೆ ಚಿತ್ರ ಮಂದಿರಗಳಲ್ಲಿ ಮಾತ್ರ ಜನ ಕಾಣಲಿಲ್ಲ. ಕಾರಣ ಕೊರೋನಾ ಆತಂಕ ಹಾಗೆಯೇ ಇತ್ತು. ಅಲ್ಲಿಂದ ಇಲ್ಲಿವರೆಗೂ ಹೆಚ್ಚೇನು ವ್ಯತ್ಯಾಸ ಕಂಡಿಲ್ಲ. ಕೊಂಚ ಕೊರೋನಾಂತಕ ಜ‌ನರಲ್ಲಿ ಕಮ್ಮಿ ಆಗಿದೆ ಎನ್ನುವುದನ್ನು ಬಿಟ್ಟರೆ,  ಚಿತ್ರ ಮಂದಿರಗಳಲ್ಲಿ ಜನ ಅಷ್ಟಕಷ್ಟೆ ಎನ್ನುವಂತಾಯಿತು‌. ಹಾಗೆ ನೋಡಿದರೆ ಇದುವರೆಗೂ ಒಂದಷ್ಟು ಸಕ್ಸಸ್ ಹಾಗೂ ಕಲೆಕ್ಷನ್ ಕಂಡ ಚಿತ್ರ ಆಕ್ಟ್ ೧೯೭೮ . ಇಷ್ಟಾಗಿಯೂ ಸಿನಿಮಾ‌ಮಂದಿಗೆ ಧೈರ್ಯ ಬಂದಿಲ್ಲ‌.  ಸಿನಿಮಾ ಮಾಡೋದೆನೋ ಸರಿ, ಹಾಕಿದ ದುಡ್ಡು ವಾಪಾಸ್ ಬರದಿದ್ದರೇನು‌ ಗತಿ  ಎನ್ನುವ ಭಯ ಚಿತ್ರ ರಂಗವನ್ನು ಕಾಡುತ್ತಲೇ ಇತ್ತು. ಹಾಗಾಗಿ ಅದೆಷ್ಟೋ ಸಿನಿಮಾಗಳು ರಿಲೀಸ್ ಗೆ ರೆಡಿ ಇದ್ದರೂ, ತೆರೆಗೆ ಬರುವುದಕ್ಕೆ ಮೀನಾ ಮೇಷ ಎಣಿಸುತ್ತಿದ್ದವು. ಅವುಗಳ ನಿರ್ಮಾಪಕ ರೆಲ್ಲ ಸ್ಟಾರ್ ಸಿನಿಮಾ ಬಂದ್ರೆ, ನಮಗೂ ಧೈರ್ಯ ಬರುತ್ತೆ ಅಂತಿದ್ರು. ಈಗ ಅದು ಕೂಡ ನೆರವೇರುತ್ತಿದೆ.

ದರ್ಶನ್ ಸಿನಿಮಾ ರಾಬರ್ಟ್ ಬಂದ್ರೆ ಏನಾಗುತ್ತೆ…?

ಕನ್ನಡ ದಲ್ಲಿ ದರ್ಶನ್ ಅವರಿಗೆ ಇರುವಷ್ಟು ಫ್ಯಾನ್ಸ್ ಇನ್ನಾರಿಗೂ ಇಲ್ಲ.‌ ಅವರೆಲ್ಲ ಪಕ್ಕಾ ಆಡಿಯನ್ಸ್ ಅನ್ನೋದು ಕೂಡ ಇನ್ನೊಂದು ವಿಶೇಷ. ಅವರೆಲ್ಲ ದರ್ಶನ್ ಸಿನಿಮಾ‌ ಚಿತ್ರ ಮಂದಿರಕ್ಕೆ ಬಾರದೆ ಒಂದು ವರ್ಷ ಆಗಿದೆ.ಎಲ್ಲವೂ ಅಂದುಕೊಂಡಿದ್ದರೆ ಕಳೆದ ವರ್ಷದ ಮಾರ್ಚ್ ನಲ್ಲೇ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಆಗಲೇ ಕೊರೋನಾ ಬಂತು. ದೇಶ ಲಾಕ್ ಡೌನ್ ಆಯಿತು. ರಾಬರ್ಟ್ ಕೂಡ ಬಾಕ್ಸ್ ನಲ್ಲಿ ಉಳಿಯಿತು. ಅವತ್ತಿನಿಂದ ಬಿಡುಗಡೆಗೆ ಕಾದಿದ್ದ ಆ ಚಿತ್ರ ಈಗ ಚಿತ್ರ ಮಂದಿರಕ್ಕೆ ಬರುವುದಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ.  ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. ಇದೇ ಹೊತ್ತಿಗೆ ಕೊರೋನಾಂತಕ ಕೂಡ ಕಮ್ಮಿ ಆಗಿದೆ. ಮತ್ತೊಂದೆಡೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಶುರುವಾಗುವುದಕ್ಕೂ ಸಿದ್ದತೆ ನಡೆದಿದೆ. ಇನ್ನೇನು ನುಗ್ಗೋಣ ಚಿತ್ರಮಂದಿರಕ್ಕೆ ಅಂತಿದೆ ದರ್ಶನ್ ಅಭಿಮಾನಿ ಬಳಗ.ಒಂದು ಸಲ ಚಿತ್ರ ಮಂದಿರಗಳು ಈ ರೀತಿ ತುಂಬಿಕೊಂಡರೆ, ಸಹಜವಾಗಿಯೇ ಹಳೆಯ ವೈಭವ ಮರುಕಳಿಸುತ್ತೆ ಅಂತಿದೆ ಚಿತ್ರರಂಗ.

Related Posts

error: Content is protected !!