





ಎನ್‌ಕೌಂಟರ್ ಖ್ಯಾತಿಯ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಬರೆದ ಅಂಕಣಗಳ ” ಹುಲಿಯ ನೆನಪುಗಳು ʼ ಕೃತಿ ಈಗ ವೆಬ್ ಸೀರಿಸ್ ಮೂಲಕ ತೆರೆ ಮೇಲೆ ಬರುತ್ತಿದೆ. “ಹುಲಿಯ ನೆನಪುಗಳುʼ ಪುಸ್ತಕದ ಇಂಗ್ಲಿಷ್ ಅವತರಣಿಕೆ ” ಟೈಗರ್ ಮೆಮೋರಿಸ್ʼ ಆಧರಿಸಿ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾಗಿದೆಯಂತೆ ಸೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ. ಹಿಂದಿ, ಇಂಗ್ಲಿಷ್ ಸೇರಿದಂತೆ ಐದು ಭಾಷೆಗಳಲ್ಲಿ ಇದು ನಿರ್ಮಾಣವಾಗುತ್ತಿದೆ. ಹಾಗೆಯೇ ಟಾಲಿವುಡ್ ನ ಹೆಸರಾಂತ ನಿರ್ದೇಶಕರೇ ಇದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆನ್ನುವ ಅಂಶ ರಿವೀಲ್ ಆಗಿದೆ.

ʼಹುಲಿಯ ನೆನಪುಗಳುʼ ಕೃತಿ ವೆಬ್ ಸೀರಿಸ್ ಆಗಿ ತೆರೆ ಮೂಡಿ ಬರುತ್ತಿರುವ ಸಂತಸದ ಸಂಗತಿಯನ್ನು ಅಶೋಕ್ ಕುಮಾರ್ ಅವರೇ ಔಪಚಾರಿಕವಾಗಿ ಹಂಚಿಕೊಂಡಿದ್ದು, ಅಧಿಕೃತವಾಗಿ ನಡೆಯ ಬೇಕಿರುವ ಎಲ್ಲಾ ಪ್ರಕ್ರಿಯೆಗಳು ಈಗ ಫೈನಲ್ ಹಂತದಲ್ಲಿವೆ. ಒಳ್ಳೆಯ ಸಂಭಾವನೆಗೆ ಇದಕ್ಕೆ ಸಿಗುತ್ತಿದೆ. ವೃತ್ತಿಯ ಜತೆಗೆ ಬರವಣಿಗೆ ಮೂಲಕವೂ ಹೀಗೆಲ್ಲ ಸಂಭಾವನೆ ಸಿಗುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್. ನೆಟ್‌ಪ್ಲೆಕ್ಸ್ ನಲ್ಲಿ ಈಗಾಗಲೇ ಲಭ್ಯವಿರುವ ʼಡೆಲ್ಲಿ ಕ್ರೈಮ್ʼ ಮಾದರಿಯಲ್ಲೇ ” ಹುಲಿಯ ನೆನಪುಗಳುʼ ಪುಸ್ತಕ ವೆಬ್ ಸೀರಿಸ್ ಆಗಿ ಮೂಡಿ ಬರಲಿದೆಯಂತೆ. ಅಲ್ಲಿ ಆಶೋಕ್ ಕುಮಾರ್ ಅವರೇ ಕೆಲವು ಘಟನೆಗಳನ್ನು ನಿರೂಪಣೆ ಮಾಡುವುದಕ್ಕೂ ಒಪ್ಪಿಕೊಂಡಿದ್ದಾರಂತೆ.

ಅವರಿಗೂ ಮತ್ತು ಸಿನಿಮಾಕ್ಕೂ ಅವಿನಾಭಾವ ನಂಟು. ಹಾಗೆ ನೋಡಿದರೆ ಅವರು ಪೊಲೀಸ್ ಇಲಾಖೆಗೆ ಬಂದಿದ್ದಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ” ಝಂಜೀರ್ʼ ಸಿನಿಮಾವೇ ಕಾರಣವಂತೆ. ಹಾಗೆ ಬಂದವರು ಸಿನಿಮಾಕ್ಕೂ ತಮ್ಮ ವೃತ್ತಿಗೂ ನಂಟು ಇಟ್ಟು ಕೊಂಡೇ ಬಂದಿದ್ದು ನಿಮಗೂ ಗೊತ್ತು. ಕಳೆದ ಕೆಲವು ವರ್ಷಗಳ ಹಿಂದಷ್ಟೇ ಬಂದು ಹೋಗಿದ್ದ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ” ಮೈನಾʼ ದ ಕತೆಗೆ ಆಶೋಕ್ ಕುಮಾರ್ ಅವರೇ ಪ್ರೇರಣೆ ಆಗಿದ್ದರು. ಅವರು ಹೇಳಿದ್ದ ಒಂದು ಘಟನೆಯನ್ನೇ ಪ್ರೇರಣೆಯಾಗಿಟ್ಟುಕೊಂಡು ʼಮೈನಾʼ ಚಿತ್ರ ಮಾಡಿದ್ದರು ನಾಗಶೇಖರ್. ಅದೆಲ್ಲ ನಿಮಗೂ ಗೊತ್ತಿರುವ ವಿಚಾರ.

ಈಗ ಅವರೇ ಬರೆದ ಕೃತಿಯೊಂದು ವೆಬ್ ಸೀರಿಸ್ ಆಗಿ ತೆರೆ ಮೇಲೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಶೋಕ್ ಕುಮಾರ್, ನಾನು ಬರೆದ ಪುಸ್ತಕಕ್ಕೆ ಈ ಮಟ್ಟದ ಡಿಮ್ಯಾಂಡ್ ಇರೋದಿಕ್ಕೆ ಖುಷಿ ಆಗಿದೆ ಎನ್ನುತ್ತಾರೆ. ಅಶೋಕ್ ಕುಮಾರ್ ಅವರು ಪೊಲೀಸ್ ಇಲಾಖೆಯಲ್ಲಿ ಒಬ್ಬ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ ಹಾಗೆಯೇ ಆ ವೃತ್ತಿಯ ಒಳನೋಟವನ್ನು ಸೂಕ್ಷ್ಮವಾಗಿ ಬಲ್ಲವರು. ಅದೇ ಕಾರಣಕ್ಕೆ ಅವರು ತಾವು ಕಂಡ ಅನುಭವಗಳನ್ನೇ ಪತ್ರಿಕೆಗಳಲ್ಲಿ ಅಂಕಣ ರೂಪದಲ್ಲಿ ಬರೆಯುತ್ತಾ ಬಂದರು. ಕ್ರಮೇಣ ಬರವಣಿಗೆ ಅವರಿಗೆ ದಕ್ಕಿತು. ಬರೆಯುತ್ತಲೇʼ ಹುಲಿಯ ನೆನಪುಗಳುʼಅಂಕಣ ಪುಸ್ತಕ ರೂಪದಲ್ಲಿ ಬಂತು. ಅದೇ ಕೃತಿ ʼಟೈಗರ್ ಮೆಮೋರಿಸ್ʼ ಹೆಸರಲ್ಲಿ ಇಂಗ್ಲಿಷ್ ಹೋಯಿತು. ಹಾಗೆಯೇ ʼಪೊಲೀಸ್ ವಿಜ್ಹಲ್ʼ, ʼಬುಲೆಟ್ ಸವಾರಿʼ ಪುಸ್ತಕಗಳನ್ನು ಬರೆದಿದ್ದು. ಅವೆಲ್ಲ ದಾಖಲೆ ಪ್ರಮಾಣದಲ್ಲಿ ಮಾರಾಟ ಕಂಡಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರ ಪೈಕಿ ಮರಿ ಟೈಗರ್ ವಿನೋದ್ ಪ್ರಭಾಕರ್ ಕೂಡ ಒಬ್ಬರು. ವಿನೋದ್ ಪಾಲಿಗೆ ದರ್ಶನ್ ಬರೀ ಆಪ್ತರು ಮಾತ್ರವಲ್ಲ, ಮಾರ್ಗದರ್ಶಕರು ಕೂಡ. ವಿನೋದ್ ಕಷ್ಟ ದಿನಗಳಲ್ಲಿ ಸಲಹೆ-ಸಹಕಾರ ನೀಡಿದ್ದಲ್ಲ, ಹೀಗೆಯೇ ನಡೆ ಅಂತ ಧೈರ್ಯ ತುಂಬಿದವರು ದರ್ಶನ್. ಹಾಗಾಗಿಯೇ ದರ್ಶನ್ ಅಂದ್ರೆ ವಿನೋದ್ ಪ್ರಭಾಕರ್ ಅವರಿಗೆ ಅತೀವ ಪ್ರೀತಿ, ಅತೀವ ಗೌರವ.ಇದೇ ಕಾರಣಕ್ಕೆ ದರ್ಶನ್ ಎದುರು ನಟ ವಿನೋದ್ ಪ್ರಭಾಕರ್ ಗಟ್ಟಿಯಾಗಿ ಮಾತನಾಡುವುದಕ್ಕೂ ಮುಜುಗರ ಪಡ್ತಾರೆ. ಇಷ್ಟಾಗಿಯೂ ದರ್ಶನ್ ಎದುರು ವಿನೋದ್ ಪ್ರಭಾಕರ್ ಒಂದು ಖಡಕ್ ಡೈಲಾಗ್ ಹೊಡೆದಿದ್ದಾರೆ.
ಅದೇ ” ಜಗ್ಗು..ಆರ್ ಬಾರ್ ತಲುಪಲ್ಲ….! ಇದು ವಿನೋಧ್ ಅವರ ಫೇವರೆಟ್ ಡೈಲಾಗ್ ಅಂತೆ. ಇದನ್ನು ಅವರು ತಮ್ಮ ತಂದೆ ಟೈಗರ್ ಪ್ರಭಾಕರ್ ಶೈಲಿಯಲ್ಲೇ ಹೊಡೆದಿದ್ದಾರೆ. ಹಾಗೆಯೇ ಡೈಲಾಗ ಹೊಡಿಬೇಕು ಅಂತ ದರ್ಶನ್ ಅವರೇ ಹೇಳಿದ್ದಂತೆ. ಇದನ್ನು ಅವರು ಶುಕ್ರವಾರ ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಫ್ರೀ ರಿಲೀಸ್ ಪ್ರಚಾರದ ಸಂಭ್ರಮದಲ್ಲಿ ಹೇಳಿದರು. ರಾಬರ್ಟ್ ಚಿತ್ರದಲ್ಲಿನ ಪಾತ್ರದ ಕುರಿತು ವೇದಿಕೆಯಲ್ಲಿ ಮಾತನಾಡುತ್ತಿದ್ದ ವಿನೋದ್ ಪ್ರಭಾಕರ್, ದಶರ್ನ್ ಜತೆಗಿನ ತಮ್ಮ ಬಾಂದವ್ಯದ ಬಗ್ಗೆ ಹಂಚಿಕೊಂಡರು.

” ಡಿ ಬಾಸ್ ಎದುರು ಇಂತಹದೊಂದು ವೇದಿಕೆಯಲ್ಲಿ ಯಾವತ್ತು ಡೈಲಾಗ್ ಹೊಡೆದಿಲ್ಲ. ಅವರ ಜತೆಗೂ ವೇದಿಕೆ ಹಂಚಿಕೊಂಡಿಲ್ಲ. ಫಸ್ಟ್ ಟೈಮ್ ಈ ಡೈಲಾಗ ಹೇಳುತ್ತಿದ್ದೇನೆ. ಇದು ನನ್ನ ಫೇವರೆಟ್ ಡೈಲಾಗ ಅಂತ ಈ ಡೈಲಾಗ ಹೇಳಿ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು ನಟ ವಿನೋದ್ ಪ್ರಭಾಕರ್. ವೇದಿಕೆ ಮುಂಭಾಗ ಕುಳಿತು ವಿನೋದ್ ಪ್ರಬಾಕರ್ ಅವರ ಮಾತುಗಳನ್ನೇ ಆಲಿಸುತ್ತಿದ್ದ ನಟ ದರ್ಶನ್, ವಿನೋದ್ ಡೈಲಾಗ್ ಗೆ ನಕ್ಕು ಸ್ವಾಗತಿಸಿದರು.

ಅವರನ್ನು ಕೆರಳಿಸುವುದಕ್ಕಾಗಿಯೇ ದರ್ಶನ್ ಈ ಮಾತು ಹೇಳಿದ್ದ ಅನ್ನೋದು ನಿಜವೇ ಆಗಿದ್ದರೂ, ರಾಬರ್ಟ್ ಚಿತ್ರದಲ್ಲಿ ಜಗಪತಿ ಬಾಬು ಅವರ ಪಾತ್ರವೇನು ಕಮ್ಮಿ ಇಲ್ಲ. ಅದನ್ನು ರಿಜಿಸ್ಟ್ರ್ ಮಾಡೋದಕ್ಕಾಗಿಯೇ ದರ್ಶನ್ ಆ ಮಾತನ್ನು ಒತ್ತು ಕೊಟ್ಟು ಹೇಳಿದ್ದು, ತೆಲುಗು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತು. ಆ ಮಟ್ಟಿಗೆ ನಿನ್ನೆ ಹೈದ್ರಾಬಾದ್ ನಲ್ಲಿ ನಡೆದ ರಾಬರ್ಟ್ ಚಿತ್ರದ ಫ್ರೀ ರಿಲೀಸ್ ಸಂಭ್ರಮ ಅದ್ದೂರಿಯಾಗಿಯೇ ನಡೆದಿದ್ದು ವಿಶೇಷ.

ಶ್ರೇಯಸ್ ಮೀಡಿಯಾ ಜತೆಗೆ ರಾಬರ್ಟ್ ಚಿತ್ರ ತಂಡ ಆಯೋಜಿಸಿದ್ದ ಈ ಕಾರ್ಯಕ್ರಮ ಕನ್ನಡದಲ್ಲಿ ನಡೆಯುವ ಹಾಗೆಯೇ ಗ್ರಾಂಡ್ ಆಗಿಯೇ ನಡೆಯಿತು. ಈ ಮುಂಚೆ ತೆಲುಗು ಟೀಸರ್ ಹಾಗೂ ಟ್ರೇಲರ್ ಮೂಲಕ ಟಾಲಿವುಡ್ ನಲ್ಲಿ ದೊಡ್ಡ ಹವಾ ಎಬ್ಬಿಸಿದ್ದ ʼರಾಬರ್ಟ್ʼ ಚಿತ್ರಕ್ಕೆ ಅಲ್ಲಿನ ಸಿನಿಮಾ ಪ್ರೇಮಿಗಳು ಚಿತ್ರದ ರಿಲೀಸ್ ಗಾಗಿ ದೊಡ್ಡ ನಿರೀಕ್ಷೆಯಲ್ಲಿರುವುದು ನಿನ್ನೆಯ ಈವೆಂಟ್ ಮೂಲಕ ಸಾಬೀತಾಯಿತು. ರಾಬರ್ಟ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲು ಟಾಲಿವುಡ್ ಗೆ ಎಂಟ್ರಿ ಆಗಿದ್ದರೂ, ಈಗಾಗಲೇ ಅವರ ಹವಾ ಶುರುವಾಗಿದೆ ಎನ್ನುವುದಕ್ಕೆ ನಿನ್ನೆಯ ಕಾರ್ಯಕ್ರಮದಲ್ಲಿ ಸಿನಿಮಾ ಆಭಿಮಾನಿಗಳು ದರ್ಶನ್, ದರ್ಶನ್ ಅಂತ ಕೂಗುತ್ತಿದ್ದೇ ಸಾಕ್ಷಿ ಆಯಿತು.

ವರ್ಣ ರಂಜಿತ ಕಾರ್ಯಕ್ರಮದಲ್ಲಿ ಸಿನಿಮಾ ಪ್ರೇಮಿಗಳು ಹಾಗೂ ಅಭಿಮಾನಿಗಳ ಸಿಳ್ಳೆ, ಕೇಕೆಗಳ ಸಂಭ್ರಮದ ನಡುವೆಯೇ ಮಾತನಾಡಿದ ನಟ ದರ್ಶನ್, ತೆಲುಗಿನಲ್ಲೇ ಭಾಷಣ ಆರಂಭಿಸಿ, ತೆಲುಗು ಸಿನಿಮಾ ಪ್ರೇಕ್ಷಕರ ಮನಗೆದ್ದರು.ಕನ್ನಡದಲ್ಲಿ ಭಾಷಣ ಆರಂಭಿಸಿ ನಂತರ ತೆಲುಗಿನಲ್ಲಿ ಮಾತು ಶುರು ಮಾಡಿದ ದರ್ಶನ್, ಮೊದಲಿಗೆ ತೆಲುಗು ಪ್ರೇಕ್ಷಕರಿಗೆ, ತೆಲುಗಿನ ವಿತರಕರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಟಾಲಿವುಡ್ ನ ಜನಪ್ರಿಯ ನಟಜಗಪತಿ ಬಾಬು ಬಗ್ಗೆ ವಿಶೇಷವಾಗಿ ಮಾತನಾಡಿದ ನಟ ದರ್ಶನ್, ‘ಸಿನಿಮಾದಲ್ಲಿ ರಾಬರ್ಟ್ ಅಲ್ಲ ಹೀರೋ ನಿಜವಾದ ಹೀರೋ ಜಗಪತಿ ಬಾಬು ನಿರ್ವಹಿಸಿರುವ ನಾನಾ ಪಾತ್ರ’ ಎಂದರು. ದರ್ಶನ್ ಅವರ ಈ ಮಾತಿಗೆ ಅಭಿಮಾನಿಗಳು ಭರ್ಜರಿ ಸಂಭ್ರಮಪಟ್ಟರು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಸಿನಿಮಾ ನಿರ್ಮಾಣದ ಸಾಹಸಕ್ಕೆ ಮೆಚ್ಚುಗೆ ಹೇಳಿದ ದರ್ಶನ್, ‘ನಾವೆಲ್ಲ ಹಣ ಪಡೆದುಕೊಂಡು ನಟಿಸಿಬಿಟ್ಟಿದ್ದೇವೆ ಅಷ್ಟೆ. ಆದರೆ ಸಿನಿಮಾದ ನಿಜವಾದ ಹೀರೋ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು. ಅವರೇ ಈ ಸಿನಿಮಾದ ಜೀವ’ ಎಂದು ಹೊಗಳಿದರು. ‘ಕಾರ್ಯಕ್ರಮದಲ್ಲಿ ನಮ್ಮ ತಂದೆ ವಿಲನ್ ಆಗಿದ್ದವರು ಎಂದೆಲ್ಲಾ ವಿಡಿಯೋ ತೋರಿಸಿದರು. ಆದರೆ ನಾನು ಸಿನಿಮಾಕ್ಕೆ ಬರುವ ಮುನ್ನವೇ ತಂದೆಯನ್ನು ಕಳೆದುಕೊಂಡೆ. ಆದರೆ ಅವರೊಟ್ಟಿಗೆ ನಟಿಸಿದ ಹಿರಿಯರೆಲ್ಲಾ ನನಗೆ ತಂದೆ ಸಮಾನ. ನಟ ದೇವರಾಜ್ ಅವರು ನನಗೆ ತಂದೆ ಸಮಾನ, ನಮ್ಮನ್ನು ಹೊಡೆಯುವ, ತಿದ್ದುವ ಅಧಿಕಾರ ಅವರಿಗೆ ಇದೆ. ಅವರೊಟ್ಟಿಗೆ ಈ ಸಿನಿಮಾದಲ್ಲಿ ನಟಿಸಿರುವುದು ನನ್ನ ಭಾಗ್ಯ’ ಎಂದು ಭಾವುಕರಾದರು ದರ್ಶನ್.
ಚಿತ್ರದ ನಾಯಕಿ ನಟಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್, ನಟ ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಇನ್ನೂ ಹಲವಾರು ಮಂದಿ ಹಾಜರಿದ್ದು ಮಾತನಾಡಿದರು. ಹಾಡು, ನೃತ್ಯಗಳ ಮೂಲಕ ಇಡೀ ಕಾರ್ಯಕ್ರಮ ಕಲರ್ ಫುಲ್ ಆಗಿ ನಡೆದಿದ್ದು, ಇಡೀ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಆಕರ್ಷಣೆ ಆಗಿದ್ದು, ತೆಲುಗು ಸಿನಿಮಾ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸೇರಿ, ಚಿತ್ರದ ಅದ್ದೂರಿ ಸ್ವಾಗತಕ್ಕೆ ಕಾದಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ವಿಜಯಪ್ರಸಾದ್ ಮತ್ತು ಜಗ್ಗೇಶ್ ಜೋಡಿಯ ‘ತೋತಾಪುರಿ’ ಚಿತ್ರತಂಡ ಕಳೆದ ವಾರ ಮೈಸೂರಿನಲ್ಲಿ ಬೀಡುಬಿಟ್ಟಿತ್ತು. ನಿರ್ದೇಶಕರು ಅಲ್ಲಿ ಸಾಕಷ್ಟು ಸನ್ನಿವೇಶಗಳನ್ನು ಚಿತ್ರಿಸಿದ್ದರು. ಶೂಟಿಂಗ್ ಹೊರತಾಗಿ ಜಗ್ಗೇಶ್ ದೂರವಾಣಿ ಕರೆಯ ವಿವಾದದ ಮೂಲಕವೂ ಸಿನಿಮಾ ಸುದ್ದಿಯಾಗಿತ್ತು. ಕೊನೆಗೆ ಪೊಲೀಸರ ರಕ್ಷಣೆ ಪಡೆದು ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ ಸದ್ಯ ಕೇರಳಕ್ಕೆ ತೆರಳಿದೆ. ಅಲ್ಲಿ ಭರದ ಚಿತ್ರೀಕರಣ ನಡೆದಿದ್ದು, ಡಾಲಿ ಧನಂಜಯ ಮತ್ತು ಸುಮನ್ ರಂಗನಾಥ್ ನಟನೆಯ ಕೆಲವು ಸನ್ನಿವೇಶಗಳು ಚಿತ್ರಣಗೊಳ್ಳುತ್ತಿವೆ.

ಕೇರಳದಲ್ಲಿ ಈಗ ಕೊರೋನಾ ಎರಡನೇ ಅಲೆಯ ಹಾವಳಿ ಇದ್ದೇ ಇದೆ. ಈ ಸಂಕಷ್ಟದ ಮಧ್ಯೆಯೂ ಸೂಕ್ತ ಮುಂಜಾಗರೂಕತಾ ಕ್ರಮಗಳೊಂದಿಗೆ ಚಿತ್ರತಂಡ ಅಲೆಪ್ಪಿಯಲ್ಲಿ ಶೂಟಿಂಗ್ ನಡೆಸುತ್ತಿದೆ. ಚಿತ್ರದಲ್ಲಿ ಧನಂಜಯ್ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದಿತಿ ಪ್ರಭುದೇವ ಮುಸ್ಲಿಂ ಯುವತಿಯಾಗಿ ಮತ್ತು ಸುಮನ್ ರಂಗನಾಥ್ ಅವರು ಕ್ರಿಶ್ಚಿಯನ್ ಮಹಿಳೆಯ ಪಾತ್ರದಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಿಸಿದ್ದ ಕೆ.ಎ. ಸುರೇಶ್ ಅವರು ‘ತೋತಾಪುರಿ’ಗೆ ಹಣ ಹಾಕಿದ್ದು, ಅನೂಪ್ ಸೀಳನ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಯೋಗರಾಜ್ ಭಟ್ಟರ ನಿರ್ದೇಶನದ ‘ಗಾಳಿಪಟ’ ತೆರೆಕಂಡು ಹದಿಮೂರು ವರ್ಷಗಳೇ ಆಗಿವೆ. ತಾಜಾ ನಿರೂಪಣೆಯಿಂದ ಈಗಲೂ ನೋಡಿಸಿಕೊಂಡು ಹೋಗುವ ಚಿತ್ರವಿದು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದರ ಸರಣಿ ಚಿತ್ರ ಆಗುವುದಾಗಿ ಘೋಷಿಸಲಾಗಿತ್ತು. ಈಗ, ಆಗ ಎನ್ನುತ್ತಲೇ ದಶಕ ದಾಟಿತು. ಕೊನೆಗೆ ಕಳೆದ ವರ್ಷ ಸೆಟ್ಟೇರಿದ ಸರಣಿಗೆ ಕೋವಿಡ್ ಸಂಕಟ ಎದುರಾಗಿತ್ತು. ಇದೀಗ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಭಟ್ಟರು ಚಿತ್ರತಂಡದೊಂದಿಗೆ ಯೂರೋಪ್‌ನಲ್ಲಿದ್ದಾರೆ.

‘ಗಾಳಿಪಟ’ದಲ್ಲಿ ಹೀರೋಗಳಾಗಿ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಇದ್ದರು. ಸರಣಿ ಚಿತ್ರದಲ್ಲಿ ಗಣೇಶ್ ಮತ್ತು ದಿಗಂತ್ ಇದ್ದು, ರಾಜೇಶ್ ಕೃಷ್ಣನ್ ಜಾಗಕ್ಕೆ ‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಬಂದಿದ್ದಾರೆ. ಇನ್ನು ನಾಯಕಿಯರು ಯಾರು ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇರಲಿಲ್ಲ. ನಾಯಕಿಯರ ಬಗೆಗಿನ ಊಹಾಪೋಹಗಳಿಗೆ ತೆರೆಬಿದ್ದಿದ್ದು ಚಿತ್ರದ ಮೂವರು ಹಿರೋಯಿನ್‌ಗಳ ಸುಳಿವು ಸಿಕ್ಕಿದೆ. ಕನ್ನಡತಿ ಶರ್ಮಿಳಾ ಮಾಂಡ್ರೆ ಜೊತೆ ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಯಾವ ಹೀರೋಗೆ ಯಾರು ಜೋಡಿ ಎನ್ನುವುದಿನ್ನೂ ಗೊತ್ತಾಗಿಲ್ಲ.

ನಟಿ ವೈಭವಿ ಅವರು ಮರಾಠಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದವರು. ಮೂರು ವರ್ಷಗಳ ಹಿಂದೆ ತೆರೆಕಂಡ ‘ರಾಜ್ ವಿಷ್ಣು’ ಕನ್ನಡ ಚಿತ್ರವೂ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ನಟಿ ಸಂಯುಕ್ತಾ ಮೆನನ್ ‘ಪಾಪ್‌ಕಾರ್ನ್’ ಮಲಯಾಳಂ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾದವರು. ಹತ್ತಾರು ಮಲಯಾಳಂ ಚಿತ್ರಗಳಲ್ಲದೆ ಎರಡು ತಮಿಳು ಚಿತ್ರಗಳ ನಾಯಕಿ. ಇನ್ನು ನಟಿ ಶರ್ಮಿಳಾ ಮಾಂಡ್ರೆ ಮೂರು ವರ್ಷಗಳ ನಂತರ ತೆರೆಗೆ ಮರಳುತ್ತಿದ್ದಾರೆ. ‘ಆಕೆ’, ‘ಲೀಡರ್’ ಕನ್ನಡ ಚಿತ್ರಗಳ ನಂತರ ಅವರೀಗ ‘ಗಾಳಿಪಟ -2’ನಲ್ಲಿ ಸಕ್ರಿಯರಾಗಿದ್ದಾರೆ.

‘ಗಾಳಿಪಟ-2’ ಚಿತ್ರದ ಮೊದಲ ಹಂತದ ಚಿತ್ರೀಕರಣ ನಾಡಿನ ವಿವಿಧೆಡೆ ನಡೆದಿತ್ತು. ಸದ್ಯ ಯೂರೋಪ್‌ನ ಹಿಮಪ್ರದೇಶಗಳು ಸೇರಿದಂತೆ ಸುಂದರ ಪ್ರಕೃತಿಯ ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೆದಿದೆ. ವಿದೇಶಿ ಚಿತ್ರೀಕರಣ ಮುಗಿಸಿಕೊಂಡು ಬಂದ ನಂತರ ಭಟ್ಟರು ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಿದ್ದಾರೆ. ಈ ಚಿತ್ರದ ನಂತರ ಯೋಗರಾಜ್ ಭಟ್ಟರು ಶಿವರಾಜಕುಮಾರ್ ಮತ್ತು ಪ್ರಭುದೇವ ನಟನೆಯ ಚಿತ್ರವೊಂದನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೊದಲ ಬಾರಿ ಒಟ್ಟಿಗೆ ನಟಿಸುತ್ತಿರುವ ಶಿವರಾಜ್-ಪ್ರಭುದೇವ ಜೋಡಿಯ ಚಿತ್ರದ ಬಗ್ಗೆ ನಟರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.


ಬಹಳ ಕುತೂಹಲದ ಬಿಗ್‌ಬಾಸ್ ಸೀಸನ್ -8ಕ್ಕೆ ಫೆಬ್ರವರಿ 28ರ ಸಂಜೆ ಅದ್ಧೂರಿ ಚಾಲನೆ ದೊರೆಯಲಿದೆ. ಈ ಕುರಿತು ಈಗಾಗಲೇ ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಸೀಸನ್-೮ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಹೋಗಲಿದ್ದಾರೆ ಅನ್ನೋದೇ ಗೌಪ್ಯ. ಆದರೂ, ಅವರು ಹೋಗ್ತಾರೆ, ಇವರು ಇರ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆವೆ.

ಈ ಬಾರಿ ಒಟ್ಟು 17 ಜನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ. ಎಲ್ಲರನ್ನೂ ಕ್ವಾರಂಟೈನ್ ಮಾಡಿಯೇ ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತಿದೆ. ಸದ್ಯ, ಆ ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸುದೀಪ್ ಕೂಡ ತಯಾರಾಗಿದ್ದಾರೆ. ಕಲರ್ಸ್ ವಾಹಿನಿಯರ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್, ಒಂದಷ್ಟು ಮಾಹಿತಿ ಕೊಟ್ಟು, ಸ್ಪರ್ಧಿಗಳಿಗೆ ಕ್ವಾರಂಟೈನ್ ಮಾಡಲಾಗುತ್ತಿದೆ.

ಹಾಗೆಯೇ ತಾಂತ್ರಿಕ ವರ್ಗದವರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಸಲ ಒಬ್ಬ ರಾಜಕಾರಣಿಯೂ ಇರುತ್ತಾರೆ. ಉಳಿದಂತೆ ನಟ,ನಟಿಯರು, ಒಂದಷ್ಟು ಗುರುತಿಸಿಕೊಂಡ ವ್ಯಕ್ತಿಗಳೂ ಇಲ್ಲಿರಲಿದ್ದಾರೆ ಎಂದಷ್ಟೇ ವಿವರಿಸಿದ್ದಾರೆ. ಅದೇನೆ ಇರಲಿ, ಬಿಗ್‌ಬಾಸ್ -೮ರಲ್ಲಿ ಯಾರು ಇರುತ್ತಾರೆ ಅನ್ನುವ ಕುತೂಹಲಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ. ಫೆ.೨೮ರ ಭಾನುವಾರ ಕಲರ್ಸ್ ವಾಹಿನಿಯಲ್ಲಿ ಸಂಜೆ 6ಕ್ಕೆ ಅದ್ದೂರಿಯಾಗಿ ಕಾರ್ಯಕ್ರಮ ಶುರುವಾಗಲಿದೆ. ಪ್ರತಿ ರಾತ್ರಿ 8 ಗಂಟೆಯಿಂದ ೯ ರವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಿರುತೆರೆ ಬಹು ನಿರೀಕ್ಷಿತ ರಿಯಾಲಿಟಿ ಶೋ “ಬಿಗ್ ಬಾಸ್ ಸೀಸನ್ ೮ʼ ರ ಶುರುವಿಗೆ ದಿನಗಣನೆ ಶುರುವಾಗಿದೆ. ಇನ್ನೇನು ಎರಡು ದಿನ ಮಾತ್ರ ಬಾಕಿ ಇವೆ. ಕಲರ್ಸ್ ಕನ್ನಡದ ಈ ಶೋ ನೋಡಲು ಕಿರುತೆರೆಯ ವೀಕ್ಷಕ ವಲಯ ತುದಿಗಾಲ ಮೇಲೆ ನಿಂತಿದೆ. ಸೀಸನ್ ೮ ರಲ್ಲಿ ಯಾರೆಲ್ಲ ಇರುತ್ತಾರೆನ್ನುವ ವೀಕ್ಷಕರ ಕುತೂಹಲಕ್ಕೆ ಈಗಾಗಲೇ ಒಂದಷ್ಟು ಕ್ಲೂ ಸಿಕ್ಕಿವೆಯಾದರೂ, ಅವೇ ಸತ್ಯ ಅಂತ ನಂಬೋ ಹಾಗಿಲ್ಲ. ಶೋ ಗೆ ಎಂಟ್ರಿಯಾದಾಗಲೇ ಯಾರೆಲ್ಲ ಇರುತ್ತಾರೆನ್ನುವುದು ಗ್ಯಾರಂಟಿ. ಉಳಿದಂತೆ ಈ ಬಾರಿಯ ಸೀಸನ್ ನಲ್ಲಿ ರಾಜಕಾರಣಿಯೊಬ್ಬರು ಎಂಟ್ರಿ ಆಗುತ್ತಿದ್ದಾರೆ.ಅವರು ನಟ ಕಿಚ್ಚ ಸುದೀಪ್ ಅವರಿಗೆ ಪರಿಚಯ ಇದ್ದವರು ಅಂತ ಸುದ್ದಿ ಗೋಷ್ಟಿಯಲ್ಲೆ ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ಬಹಿರಂಗಪಡಿಸಿದ್ದಾರೆ.

ಹಾಗಂತ ಅವರು ಯಾರು ಎನ್ನುವುದನ್ನು ಅವರು ಹೇಳಿಲ್ಲ. ಅದು ನಿಗೂಡ ಅಂತಲೂ ಹೇಳಿದ್ದಾರೆ. ಕುತೂಹಲ ಇರೋದಉ ಆ ರಾಜಕಾರಣಿ ಯಾರು ಅಂತ. ರಾಜಕಾರಣಿ ಇರ್ತಾರೆ ಅಂತ ಹೊರಟರೆ ಅವರು ಯಾರು ಅಂತ ಊಹೆ ಮಾಡುವುದು ತುಂಬಾ ಕಷ್ಟ. ಆದರೆ ಅವರು ನಟ ಕಿಚ್ಚ ಸುದೀಪ್ ಅವರಿಗೂ ತುಂಬಾ ಪರಿಚಯ ಇದ್ದವರೂ ಎನ್ನುವ ಸುಳಿವಿನ ಮೇರೆಗೆ ನೋಡುತ್ತಾ ಹೋದರೆ ಮೊದಲು ನೆನಪಾಗುವುದು ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ.

ನಟ ಸುದೀಪ್ ಹಾಗೂ ಶಾಸಕ ರಾಜು ಗೌಡ ತುಂಬಾ ಆಪ್ತರು. ಅನೇಕ ವೇದಿಕೆಗಳಲ್ಲಿ ಅವರು ಒಂದಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಟ ಸುದೀಪ್, ಸುರಪುರ ಅಭ್ಯರ್ಥಿಯಾಗಿದ್ದ ರಾಜು ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಹಾಗೆಯೇ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲೂ ಅವರಿಬ್ಬರು ಭಾಗವಹಿಸಿದ್ದರು.

ಸುದೀಪ್ ಅವರ ಫ್ಯಾಮಿಲಿ ಕಾರ್ಯಕ್ರಮಗಳಲ್ಲೂ ರಾಜು ಗೌಡ ಪಾಲ್ಗೊಂಡಿದ್ದರು ಕೂಡ ಎಲ್ಲರಿಗೂ ಗೊತ್ತು. ಒಂದೇ ಸಮುದಾಯದವರು ಅನ್ನೋದು ಇದಕ್ಕಿದ್ದ ಕಾರಣ. ಈಗ ಅದೇ ಸ್ನೇಹ, ಒಡನಾಟದಲ್ಲಿ ಬಿಗ್ ಬಾಸ್ ಸೀಸನ್ 8 ರಲ್ಲಿ ಶಾಸಕ ರಾಜುಗೌಡ ಪಾಲ್ಗೊಳ್ಳುತ್ತಿದ್ದಾರೆನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಇದು ನಿಜವಾ? ಗೊತ್ತಿಲ್ಲ. ಆದರೂ ಚುಟು ಚುಟು ಖ್ಯಾತಿಯ ಮೋಹಕ ನಟಿ ಆಶಿಕಾ ರಂಗನಾಥ್ ಕಲರ್ಸ್ ಕನ್ನಡದ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಗ್ಯಾರಂಟಿಯೋ ಗೊತ್ತಿಲ್ಲ. ಈ ಬಗ್ಗೆ ನಟಿ ಆಶಿಕಾ ರಂಗನಾಥ್ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಬಿಗ್ ಬಾಸ್ ಸೀಸನ್ ೮ ಶುರುವಾಗುವುದಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಯಾವುದಕ್ಕೂ( ಫೆ.28)ಭಾನುವಾರ ಸಂಜೆ ಗೊತ್ತಾಗಿದೆ. ಆದರೆ ಆಶಿಕಾ ರಂಗನಾಥ್ ಅವರ ಬಗ್ಗೆ ಕುತೂಹಲ ಇರೋದು, ಸಿನಿಮಾದಲ್ಲೇ ಸಿಕ್ಕಾಪಟ್ಟೆ ಸ್ಟಾರ್ ವ್ಯಾಲೂ ಹೊಂದಿರುವ ಆಶಿಕಾ ರಂಗನಾಥ್, ಬಿಗ್ ಬಾಸ್ ಮನೆಗೆ ಯಾಕೆ ಹೋಗ್ತಾರೆ ?
ಹೌದು, ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಸದ್ಯಕ್ಕೀಗ ಕನ್ನಡದ ಬಹು ಬೇಡಿಕೆ ನಟಿ. ಸ್ಟಾರ್ ನಟರ ಸಿನಿಮಾಗಳಲ್ಲೇ ನಾಯಕಿ ಆಗಿ ಅಭಿನಯಿಸುತ್ತಾ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡುತ್ತಿರುವುದು ನಿಮಗೂ ಗೊತ್ತು.ʼರಾಂಬೋ -2ʼ , ʼತಾಯಿಗೆ ತಕ್ಕ ಮಗʼ, ʼರಾಜು ಕನ್ನಡ ಮೀಡಿಯಂʼ, ʼಮುಗುಳು ನಗೆʼ ಸ್ಟಾರ್ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಈಗಲೂ ಸ್ಟಾರ್ ಸಿನಿಮಾಗಳಲ್ಲಿ ಆಶಿಕಾ ನಾಯಕಿ ಆಗಿ ಅಭಿನಯಿಸಿದ್ದು ಮಾತ್ರವಲ್ಲ, ಈಗಲೂ ಸಾಲು ಸಾಲು ಸಿನಿಮಾಗಳ ರಿಲೀಸ್ ನಿರೀಕ್ಷೆಯಲ್ಲಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ʼಕೋಟಿಗೊಬ್ಬ 3 ʼ, ಶರಣ್ ಅಭಿನಯದ “ಅವತಾರ ಪುರುಷʼ, ಶ್ರೀ ಮುರಳಿ ಅಭಿನಯದ ʼಮದಗಜʼ ಚಿತ್ರಗಳ ಜತೆಗೆ ʼಗರುಡʼ ಹಾಗೂ ಮತ್ತೊಂದು ಹೆಸರಿಡದ ಚಿತ್ರಗಳು ಈಗ ಬಿಡುಗಡೆಗೆ ರೆಡಿ ಇವೆ.

ಈಗಾಗಲೇ ತಮ್ಮ ಗ್ಲಾಮರಸ್ ನೋಟದೊಂದಿಗೆ ಪಡ್ಡೆ ಹುಡುಗರ ಮನಗೆದ್ದಿರುವ ಆಶಿಕಾ ರಂಗನಾಥ್, ಈಗ ಮತ್ತೆ ಸ್ಟಾರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ತವಕದಲ್ಲಿದ್ದಾರೆ. ಸಿನಿಮಾ ಚಟುವಟಿಕೆಗಳಲ್ಲಿ ಸದಾ ಬ್ಯುಸಿ ಆಗಿದ್ದರೂ, ಸೋಷಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಆಗಾಗ ಅಂದ-ಚಂದದ ಪೋಟೋಗಳನ್ನು ಹಾಕುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸುವುದು ಮಾಮೂಲು. ಅಂತಹದೇ ಪೋಟೋಗಳು ಸೋಷಲ್ ಮೀಡಿಯಾದಲ್ಲಿ ಹರಿದಾಡುವುದು ನಿಮಗೂ ಗೊತ್ತು. ಅಂತಹದೇ ಪೋಟೋಗಳು ಈಗ ಆಕರ್ಷಣೆ ಹುಟ್ಟಿಸಿದ್ದು ಈ ಪೋಟೋ ಝಲಕ್ ಇಲ್ಲಿದೆ.


ಕನ್ನಡ ಚಿತ್ರರಂಗ ಇದೀಗ ಬೇರೆ ಭಾಷಾ ಚಿತ್ರರಂಗಗಳಿಗೆ ಹೋಲಿಸಿದರೆ, ತುಸು ಗುಣಮಟ್ಟದ ಚಿತ್ರಗಳನ್ನೇ ಕೊಡುತ್ತ ಬಂದಿದೆ. ಅಷ್ಟೇ ಅಲ್ಲ, ಸಾಕಷ್ಟು ವಿಭಿನ್ನ ಸಿನಿಮಾಗಳ ಮೂಲಕ ಗಮನಸೆಳೆಯುತ್ತಿರುವುದು ಕೂಡ ಖುಷಿಯ ವಿಚಾರ. ಈಗಾಗಲೇ ಕನ್ನಡದ ಬಹುತೇಕ ಸಿನಿಮಾಗಳು ಈಗ ಗಡಿ ದಾಟಿವೆ, ಸಾಗರದಾಚೆಯೂ ಹೋಗಿವೆ. ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಚಿತ್ರೋತ್ಸವಗಳಲ್ಲೂ ಆಯ್ಕೆಯಾಗಿ, ಮೆಚ್ಚುಗೆ ಪಡೆದಿವೆ.

ಈಗ ಅಂಥದ್ದೊಂದು ಖುಷಿ ವಿಚಾರಕ್ಕೆ ಕನ್ನಡ ಸಿನಿಮಾವೊಂದು ಕಾರಣವಾಗಿದೆ. ಹೌದು, ಆ ಕನ್ನಡ ಸಿನಿಮಾ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಅದು “ದಾರಿ ಯಾವುದಯ್ಯ ವೈಕುಂಠಕೆ”. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಚಿತ್ರ ಸದ್ಯ ಸುದ್ದಿ ಮಾಡುತ್ತಿದ್ದು, ರಾಜಸ್ತಾನ ಅಂತಾರಾಷ್ಟ್ರೀಯ ಚಿತ್ರೋತ್ಸವ, ನಾವ್ಡ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಲರ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಬೆಟ್ಟಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ಇಂಡಿಯನ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್‌ಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಇಷ್ಟರಲ್ಲೇ ಆಯಾ ಚಿತ್ರೋತ್ಸವದ ಜ್ಯೂರಿಗಳು ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಈ ಚಿತ್ರದಲ್ಲಿ ವರ್ಧನ್ ತೀರ್ಥಹಳ್ಳಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡ, ಸ್ಪಂದನಾ ನೀನಾಸಂ, ಪ್ರಯಣಮೂರ್ತಿ ಸೇರಿದಂತೆ ಹಲವರು ಇದ್ದಾರೆ. ಚಿತ್ರದ ಒನ್‌ಲೈನ್ ಸ್ಟೋರಿ ಬಗ್ಗೆ ಹೇಳುವುದಾದರೆ, ಒಬ್ಬ ಕೊಲೆಗಾರ, ಕಳ್ಳ, ದೊಡ್ಡ ಕ್ರಿಮಿನಲ್ ವ್ಯಕ್ತಿಗೆ ಭಾವನೆಗಳ ಸ್ಪರ್ಶ ಕೊಟ್ಟರೆ, ಅವನು ಹೇಗೆ ಬದಲಾಗುತ್ತಾನೆ ಅನ್ನುವುದರ ಮೇಲೆ ಕಥೆ ಸಾಗುತ್ತದೆ.

ಇಡೀ ಚಿತ್ರದ ಚಿತ್ರೀಕರಣ ಸ್ಮಶಾನ ಮತ್ತು ಒಂದು ಹಳ್ಳಿ, ಒಂದು ಮನೆಯಲ್ಲಿ ನಡೆಯುತ್ತದೆ. ಸುಮಾರು ೩೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೊಂದು ವಿಭಿನ್ನ ಕಥಾಹಂದರವಾಗಿದ್ದು, ಇಲ್ಲಿರುವ ಪ್ರತಿ ಪಾತ್ರಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ವರ್ಧನ್ ತೀರ್ಥಹಳ್ಳಿ ಅವರಿಗೆ ಇದೊಂದು ವಿಶೇಷ ಚಿತ್ರವಂತೆ. “ಸಿನಿಲಹರಿ” ಜೊತೆ ಮಾತನಾಡಿದ ವರ್ಧನ್ ತೀರ್ಥಹಳ್ಳಿ, “ನಾನು ಇದುವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ.

ಅದರಲ್ಲಿ ಹೆಚ್ಚು ನೆಗೆಟಿವ್ ಶೇಡ್ ಪಾತ್ರಗಳೇ. ಆಕ್ಷನ್ ಜೊತೆ ಬಂದ ಪಾತ್ರಗಳನ್ನು ಕೂಡ ನಿರ್ವಹಿಸಿದ್ದೇನೆ. ಆದರೆ, ನನಗೆ ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಅಂತಹ ಪಾತ್ರಗಳಿಗೆ ಎದುರು ನೋಡುತ್ತಿದ್ದೆ. ಅದೀಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾ ಮೂಲಕ ಸಿಕ್ಕಿದೆ. ಅದು ನನ್ನ ಅದೃಷ್ಟ. ನನ್ನದು ರಫ್ ಲುಕ್. ಅದಕ್ಕೆ ಬೇರೆ ರೀತಿಯದ್ದೇ ಆಯ್ಕೆ ಇರುತ್ತೆ.

ಈ ಚಿತ್ರದ ಪಾತ್ರ ಕೂಡ ನನಗೆ ಸರಿಹೊಂದಿದ್ದರಿಂದ, ಅದು ನನ್ನ ಪಾಲಾಯಿತು. ಒಬ್ಬ ಕ್ರಿಮಿನಲ್ ಆಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಕ್ರಿಮಿನಲ್‌ಗೂ ಹೃದಯ ಇರುತ್ತೆ, ಅವನಲ್ಲೂ ಭಾವನೆಗಳಿರುತ್ತವೆ, ಅವು ಗರಿಗೆದರಿದಾಗ ಅವನು ಹೇಗೆ ರಿಯಾಕ್ಟ್ ಮಾಡ್ತಾನೆ ಅನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಆ ಪಾತ್ರ ಮಾಡಿದ್ದಕ್ಕೆ ನನಗೆ ಖುಷಿ ಇದೆ. ಅದರಲ್ಲೂ ಐದು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಚಿತ್ರ ಆಯ್ಕೆಯಾಗಿದೆ. ಇದಕ್ಕಿಂತ ಖುಷಿ ಬೇರೊಂದಿಲ್ಲ ಎನ್ನುತ್ತಾರೆ ವರ್ಧನ್ ತೀರ್ಥಹಳ್ಳಿ.

ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಈ ಹಿಂದೆ, ಇವರು, “ಕೃಷ್ಣ ಗಾರ್ಮೆಂಟ್ಸ್” ಚಿತ್ರ ನಿರ್ದೇಶಿಸಿದ್ದರು. ಶರಣಪ್ಪ ಎಂ.ಕೊಟಗಿ ಅವರಿಗೆ ಇದು ಮೊದಲ ಚಿತ್ರ. ಸಿನಿಮಾಗೆ ನಿತಿನ್ ಕ್ಯಾಮೆರಾ ಹಿಡಿದರೆ, ಲೋಕಿ ಸಂಗೀತವಿದೆ. ಮುತ್ತುರಾಜ್ ಸಂಕಲನ ಮಾಡಿದ್ದಾರೆ.