Categories
ಸಿನಿ ಸುದ್ದಿ

‘ಪೃಥ್ವಿ’ಯ ಒಡಲು ಸೇರಿತು ಬೆಟ್ಟದ ಹೂವು; ಅಪ್ಪುಗೆ ಕಣ್ಣೀರ ವಿದಾಯ !

ದೊಡ್ಮನೆಯ‌ ಹುಡುಗ, ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಪೃಥ್ವಿ’ ಮೇಲಿನ ಪಯಣ ಮುಗಿದೇಹೋಯ್ತು.
ವಿಧಿಯ ಆಟಕ್ಕೆ ಹೃದಯಾಘಾತಗೊಂಡು ಉಸಿರು ಚೆಲ್ಲಿದ ಅಪ್ಪು ಅಂತಿಮ ಯಾತ್ರೆ ಮುಗಿಸಿಕೊಂಡು ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೇ ಬಿಟ್ಟರು.


ಮನೆಮಗನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ದೊಡ್ಮನೆ ಕಣ್ಣೀರು ಹಾಕುತ್ತಲೇ ಇದೆ. ಇದಕ್ಕೆ,
ಚಿತ್ರರಂಗದ ಸ್ಟಾರ್ ನಟ ನಟಿಯರು ಕೂಡ ಹೊರತಾಗಿಲ್ಲ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಶ್ರುತಿ- ಸುಧಾರಾಣಿ- ರಚಿತರಾಮ್- ಅನುಪ್ರಭಾಕರ್- ರಶ್ಮಿಕಾ- ಯಶ್- ರವಿಚಂದ್ರನ್- ಸುದೀಪ್- ಉಪ್ಪಿ- ಅಭಿಷೇಕ್- ವಿನೋದ್ ಪ್ರಭಾಕರ್- ರಾಕ್ ಲೈನ್ ವೆಂಕಟೇಶ್ – ಬಹದ್ದೂರ್ ಚೇತನ್- ರಮೇಶ್ ಅರವಿಂದ್- ದುನಿಯಾ ವಿಜಯ್ – ಡಾಲಿ ಧನಂಜಯ್ – ವಸಿಷ್ಟ- ವಿಜಯ್ ಪ್ರಕಾಶ್ – ಶಶಿಕುಮಾರ್ ಸೇರಿದಂತೆ ಭಾಗಿಯಾಗಿದ್ದ ಕನ್ನಡದ ಧ್ರುವತಾರೆಗಳೆಲ್ಲರೂ ಕಂಬನಿ ಮಿಡಿದರು. ಹೃದಯ ಭಾರಮಾಡಿಕೊಂಡು ಪುನೀತ್ ರನ್ನು ಕಳುಹಿಸಿಕೊಟ್ಟರು.

ಶುಕ್ರವಾರ ಮಧ್ಯಾಹ್ನದೊತ್ತಿಗೆ ಇಹಲೋಕ ತ್ಯಜಿಸಿದ ಅಪ್ಪುಗೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕಂಠೀರವ ಸ್ಟೇಡಿಯಂನಿಂದ ಬೆಳಗ್ಗೆ 4.45 ರ ಸುಮಾರಿಗೆ ಹೊರಟ ಪಾರ್ಥೀವ ಶರೀರದ ಮೆರವಣಿಗೆ 5.30 ರೊಳಗೆ ಕಂಠೀರವ ಸ್ಡುಡಿಯೋ ತಲುಪಿತು.


ಈಡಿಗ ಸಂಪ್ರದಾಯದಂತೆ ವಿನಯ್ ರಾಜ್ ಕುಮಾರ್
ಅಂತಿಮಕಾರ್ಯದ ವಿಧಿ ವಿಧಾನಗಳನ್ನು ನೆರವೇರಿಸಿದರು.ರಾಣೆಬೆನ್ನೂರಿನ ಶರಣಬಸವೇಶ್ವರ ಮಠದ ಡಾ. ಪರಮಾನಂದ ಸ್ವಾಮೀಜಿಯಿಂದ ಮಂತ್ರ ಪಠಣೆ ಮಾಡಿದರು. ಕುಶಾಲು ತೋಪು ಸಿಡಿಸಿ, ರಾಷ್ಟ್ರಗೀತೆ ಮೂಲಕ ಸಕಲ ಸರ್ಕಾರಿ ಗೌರವಗಳನ್ನು ನೀಡುವುದರ ಮೂಲಕ ಅಪ್ಪು ಅಂತ್ಯಸಂಸ್ಕಾರಕ್ಕೆ ಸರ್ಕಾರದವರು ಸಹಕರಿಸಿದರು.

ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಸಿ.ಎಂ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮುನಿ ರತ್ನ, ಶಾಸಕ ಕುಮಾರ್ ಬಂಗಾರಪ್ಪ, ಶಾಸಕ ಎಸ್. ಆರ್. ವಿಶ್ವನಾಥ್, ಸಚಿವರಾದ ಆರ್. ಅಶೋಕ್ ಸೇರಿದಂತೆ ಹಲವು ರಾಜಕೀಯ ಧುರೀಣರು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.‌ ಕಳೆದ ಮೂರು ದಿನಗಳಿಂದಲೂ ದೊಡ್ಮನೆಯ ಜೊತೆಗಿದ್ದು ಕಷ್ಟಕ್ಕೆ ಸ್ಪಂಧಿಸುತ್ತಿರುವ ಗಣ್ಯರು, ತಮ್ಮನನ್ನು ಕಳೆದುಕೊಂಡು ಕಣ್ಣೀರು‌ ಸುರಿಸುತ್ತಲೇ ಇದ್ದ ಶಿವಣ್ಣ ಹಾಗೂ ರಾಘಣ್ಣರಿಗೆ ಎಲ್ಲಾ ಗಣ್ಯರುಗಳು ಕೂಡ ಸಂತೈಸುವ ಕೆಲಸ ಮಾಡ್ತಿದ್ದರು. ಆದರೆ, ಜೀವವೇ ಆಗಿದ್ದ ಸಹೋದರನ ಸಾವು ಶಿವಣ್ಣ ಹಾಗೂ ರಾಘಣ್ಣರನ್ನ ಭಾದಿಸುತ್ತಿದ್ದೆ. ಇಬ್ಬರು ಅಣ್ತಮ್ಮಂದಿರ ಹೃದಯ ನುಚ್ಚುನೂರಾಗಿದೆ.

ಇನ್ನೂ ಪತಿಯನ್ನು ಕಳೆದುಕೊಂಡ ದುಃಖ ಅಶ್ವಿನಿ ಪುನೀತ್ ರನ್ನು ಮೌನ ಕ್ಕೆ ‌ಶರಣಾಗುವಂತೆ ಮಾಡಿದೆ. ಅಪ್ಪನ ಅಗಲಿಕೆ ವಂದಿತಾ ಹಾಗೂ ಧೃತಿಯನ್ನ ಕಂಗಾಲಾಗಿಸಿದೆ. ಅಪ್ಪಾ‌.. ಅಪ್ಪಾ.. ಅಪ್ಪಾ.. ಎನ್ನುತ್ತಲೇ ನೋವುಣ್ಣುತ್ತಿದ್ದಾರೆ. ಇವರೊಟ್ಟಿಗೆ ಕೋಟ್ಯಾಂತರ ಅಭಿಮಾನಿಗಳೂ ಕೂಡ ದುಃಖಿತರಾಗಿದ್ದಾರೆ.
ಆಪ್ತರು ಹಾಗೂ ಕುಟುಂಬ ಸ್ಥರಿಗಷ್ಟೇ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶವಿದ್ದಿದ್ದರಿಂದ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಸಾರ್ವಜನಿಕ ದರ್ಶನ ಮಾಡಿದರೂ ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗಲಿಲ್ಲವಲ್ಲ ಎನ್ನುವ ಬೇಜಾರ್ ನಲ್ಲಿದ್ದಾರೆ. ಹೀಗಾಗಿ ದೊಡ್ಮನೆ ಕುಟುಂಬಸ್ಥರು ಅಂತಿಮ ನಮನದ ನಂತರ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಗರೋಪಾದಿಯಲ್ಲಿ ಅಭಿಮಾನಿಗಳು ಅಪ್ಪು ಅಂತ್ಯಸಂಸ್ಕಾರಗೊಂಡ ಜಾಗಕ್ಕೆ ಬಂದು ನಮಿಸುತ್ತಿದ್ದಾರೆ.

ಭಾವುಕಗೊಂಡು ವಿದಾಯ ಹೇಳುತ್ತಿದ್ದಾರೆ.‌ ಏನೇ ಹೇಳಿ ಭಗವಂತ ದೊಡ್ಮನೆ ರಾಜಕುಮಾರನನ್ನು ನೋಡಿ ಅಸೂಹೆ ಪಟ್ಟುಬಿಟ್ಟ. ಕೋಟ್ಯಾಂತರ ಭಕ್ತರಿಗೆ ಅಪ್ಪು ಆರಾಧ್ಯದೈವ ವಾಗಿದ್ದನ್ನು ನೋಡಿ‌ ದೇವರಿಗೆ ಸಹಿಸಿಕೊಳ್ಳೋದಕ್ಕೆ ಆಗಲಿಲ್ಲ ಅನ್ಸುತ್ತೆ ಅದಕ್ಕೆ ಬೇಗ ಕಿತ್ಕೊಂಡುಬಿಟ್ಟಿದ್ದಾನೆ. ಇನ್ಮೇಲೆ ಆದರೂ ದೈವಸಮಾನರನ್ನು ಅರ್ಧ ವಯಸ್ಸಿಗೆ ಕಿತ್ತುಕೊಳ್ಳದಿರಲಿ ಎನ್ನುವುದೇ ಸಕಲರ ಬೇಡಿಕೆ

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ಅಪ್ಪು ನೋಡಿ ಭಾವುಕರಾದ ತೆಲುಗು ಸ್ಟಾರ್ಸ್‌ ; ಪುನೀತ್‌ ಸರಳತೆ ಗುಣಗಾನ ಮಾಡಿದ ಟಾಲಿವುಡ್ ಕಲಾವಿದರು

ಪುನೀತ್ ರಾಜ್‌ಕುಮಾರ್‌ ಅವರ ದರ್ಶನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಅದರಲ್ಲೂ ಸೌತ್‌ ಇಂಡಿಯ ಫಿಲ್ಮ್‌ ಇಂಡಸ್ಟ್ರಿಯಂತೂ ಅಪ್ಪು ನಿಧನವನ್ನು ಸಹಿಸಿಕೊಳ್ಳುತ್ತಿಲ್ಲ. ಜನಸಾಗರದ ನಡುವೆಯೇ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ಬಾಲಕೃಷ್ಣ, ಅರ್ಜುನ್‌ ಸರ್ಜಾ, ವೆಂಕಟೇಶ್‌, ಜೂನಿಯರ್‌ ಎನ್ ಟಿ ಆರ್, ಶ್ರೀಕಾಂತ್‌, ಅಲಿ, ರಾಣಾ ದಗ್ಗುಬಾಟಿ, ಪ್ರಭುದೇವ ಪುನೀತ್​ ಪಾರ್ಥಿವ ಶರೀರ ನೋಡಿ ಭಾವುಕರಾದರು. ಈ ವೇಳೆ ಎಲ್ಲರೂ ಕೂಡ ಪಕ್ಕದಲ್ಲೇ ನಿಂತಿದ್ದ ಶಿವರಾಜ್‌ಕುಮಾರ್‌ ಅವರನ್ನು ತಬ್ಬಿಕೊಂಡು ಸಂತೈಸಿದರು. ಜ್ಯೂ.ಎನ್​.ಟಿ.ಆರ್.​ ರಾಜ್​​ಕುಮಾರ್ ಅವರ ಕುಟುಂಬದೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಲ್ಲದೇ ಪುನೀತ್​ ಅವರ ಚಕ್ರವ್ಯೂಹ ಸಿನಿಮಾದಲ್ಲಿ ನಟ ಎನ್​​ಟಿಆರ್​ ಅವರು ಗೆಳೆಯ ಗೆಳೆಯ ಹಾಡನ್ನು ಹಾಡಿದ್ದರು. ಈ ವೇಳೆ ಎಲ್ಲರೂ ಪುನೀತ್‌ ಅವರ ಸರಳತೆ ಕುರಿತು ಮಾತಾಡಿದರು.

“ಪುನೀತ್​ ಇಲ್ಲ ಅನ್ನೋದು ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಲ್ಲ, ನನಗೆ ವೈಯಕ್ತಿಕ ನಷ್ಟ . ಹುಟ್ಟಿದ ಬಳಿಕ ಎಲ್ಲರೂ ಸಾಯಬೇಕು.. ಆದರೆ ಸಾಯೋ ವೇಳೆಗೆ ಜನರ ಮನಸ್ಸಿನಲ್ಲಿ ಉಳಿದು ಹೋಗುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರು ತಾವು ಹುಟ್ಟಿದ ದೇಶ, ಊರು, ಕುಟುಂಬಕ್ಕೆ ಪ್ರತಿಷ್ಠೆಯನ್ನು ತಂದು ಕೊಡುತ್ತಾರೋ ಅವರ ಜನುಮ ಸಾರ್ಥಕವಾಗುತ್ತದೆ. ಕನ್ನಡ ಚಲನಚಿತ್ರ ರಂಗದಲ್ಲಿ ಪುನೀತ್ ಅವರ ಸ್ಥಾನವನ್ನು ಯಾರು ತುಂಬಲು ಆಗೋದಿಲ್ಲ. ಒಬ್ಬ ಕಲಾವಿದನಾಗಿ, ಅವರ ಸಾಮಾಜಿಕ ಕಾರ್ಯಗಳೊಂದಿಗೆ ಮೇರು ವ್ಯಕ್ತಿಯಾಗಿ ಅವರ ಮೂರ್ತಿಯನ್ನು ನನ್ನ ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ.

-ಬಾಲಕೃಷ್ಣ, ತೆಲುಗು ನಟ

“ಪುನೀತ್ ಅಗಲಿಕೆ ನಮಗೂ ನೋವು ತಂದಿದೆ. ನಮ್ಮ ಅಪ್ಪು ಹೋದ ದೇವರು ಅನ್ಯಾಯ ಮಾಡಿಬಿಟ್ಟ. ಮಿಸ್ ಯೂ ಅಪ್ಪು. ರಾಜ್​​ಕುಮಾರ್ ಕುಟುಂಬದ ಜೊತೆಗೆ ಸುಮಧುರ ಬಾಂಧವ್ಯವಿದೆ. ಎರಡು ಕುಟುಂಬಗಳಲ್ಲಿ ಯಾವುದೇ ಸಮಾರಂಭ ನಡೆದರು ಪರಸ್ಪರ ಭಾಗಿಯಾಗುತ್ತಿದ್ದೆವು. ನಾನು ಬೆಂಗಳೂರಿಗೆ ಯಾವಾಗ ಬಂದ್ರೂ ರಾಜ್​ಕುಮಾರ್ ಅವರ ಮನೆಗೆ ಹೋಗ್ತಿದ್ದೆ. ಇತ್ತೀಚೆಗೂ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಪುನೀತ್​ ರಾಜ್​ಕುಮಾರ್ ಅವರಿಗೆ ಸ್ವರ್ಗ ಲೋಕದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸುತ್ತೇನೆ


ಚಿರಂಜೀವಿ, ತೆಲುಗು ನಟ

ಪುನೀತ್​ರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ನಮಗೆಲ್ಲ ಅತಿ ದೊಡ್ಡ ನಷ್ಟ. ರಾಜರತ್ನ ಅಪ್ಪುನಾ ಕಳೆದುಕೊಂಡ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ.

ವಿಕ್ಟರಿ ವೆಂಕಟೇಶ್, ತೆಲುಗು ನಟ

“ಅಪ್ಪು ಸಾವಿನಿಂದ ನಮಗೆಲ್ಲ ತುಂಬಾ ನೋವಾಗ್ತಿದೆ. ಜೇಮ್ಸ್ ಚಿತ್ರದಲ್ಲಿ ನಾನು ಸ್ಕ್ರೀನ್ ಶೇರ್ ಮಾಡಿದ್ದೀನಿ. 45 ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರು ಬಂದ್ರೂ ರೆಸ್ಪೆಕ್ಟ್ ಕೊಡ್ತಿದ್ರು. ಎಲ್ಲರಿಗೂ ರೆಸ್ಪೆಕ್ಟ್ ಕೊಟ್ಟು ಮಾತನಾಡಿಸ್ತಾರೆ. ತೆಲುಗಿನಲ್ಲಿ ಎಲ್ಲಾ ಹೀರೋಗಳೂ ಪುನೀತ್ ಅವರನ್ನ ರೆಸ್ಪೆಕ್ಟ್ ಮಾಡ್ತಿದ್ರು.

ಕಳೆದ ವಾರ ಅವರನ್ನು ಫೋನ್ ಮೂಲಕ ಮಾತಾಡಿಸಿದ್ದೆ. ಶಿವಣ್ಣ ನಾವೆಲ್ಲ 25 ವರ್ಷಗಳಿಂದ ಪರಿಚಿತರು. ಅಪ್ಪು ಕಳೆದುಕೊಂಡು ನೋವಲ್ಲಿರೋ ದೊಡ್ಮನೆ ಕುಟುಂಬಕ್ಕೆ ದುಃಖ ಬರಿಸೋ ಶಕ್ತಿ ಕೊಡಲಿ ದೇವರು.
ಶ್ರೀಕಾಂತ್‌, ತೆಲುಗು ನಟ.

Categories
ಸಿನಿ ಸುದ್ದಿ

ದೇವರ ದರ್ಶನಕ್ಕೆ ಕೊನೆಯುಂಟು, ಅಪ್ಪು ದರ್ಶನಕ್ಕೆ ಕೊನೆಯುಂಟೇ? ಪುನೀತ್‌ ದರ್ಶನ ಪಡೆದ ಲಕ್ಷಾಂತರ ಫ್ಯಾನ್ಸ್

ದೇವರ ದರ್ಶನಕ್ಕೆ ನಿಂತ ಭಕ್ತ ಸಮೂಹದ ಸಾಲು ಕೊನೆಯಾಗಬಹುದು ಆದರೆ ಅಪ್ಪು ಅಂತಿಮ ದರ್ಶನಕ್ಕೆ ಹರಿದು ಬಂದಿದ್ದ ಜನಸಾಗರದ ಸಾಲು ಮಾತ್ರ 48 ಗಂಟೆಗಳು ಕಳೆದರೂ ಇನ್ನೂ ಕಮ್ಮಿಯಾಗಿಲ್ಲ…

ಕನ್ನಡದ ಪವರ್‌ಫುಲ್‌ ನಟ ಪುನೀತ್‌ ರಾಜ್‌ಕುಮಾರ್‌ಗೆ ಅಭಿಮಾನಿಗಳೆಂದರೆ ದೇವ್ರು. ಆದರೆ, ಅಭಿಮಾನಿಗಳಿಗೆ ಪುನೀತ್‌ ಅಂದರೆ ದೇವ್ರು. ಆ ದೇವರನ್ನು ನೋಡಲು ನಿನ್ನೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಧಾವಿಸಿ ಬಂದಿದ್ದಾರೆ. ಈಗಲೂ ರಾಜ್ಯ, ಅಂತಾರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸಿ, ಪ್ರೀತಿಯ ಹೀರೋನ ದರ್ಶನ ಪಡೆದು ಕಣ್ಣೀರು ಸುರಿಸುತ್ತಿದ್ದಾರೆ.


ಹೌದು, ಪುನೀತ್‌ರಾಜಕುಮಾರ್‌ ಅವರನ್ನು ಒಂದೊಮ್ಮೆ ನೋಡಬೇಕು, ಅವರ ಮುಂದೆ ನಿಂತು ಕೊನೆಯ ಸಲ ಕೈಮುಗಿಯಬೇಕು ಅಂತ ಸಾಲುಗಟ್ಟಿರುವ ಅಭಿಮಾನಿಗಳ ಸಂಖ್ಯೆಗೇನೂ ಲೆಕ್ಕವಿಲ್ಲ. ನಿನ್ನೆ ಪುನೀತ್‌ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ ಅತ್ತ, ವಿಕ್ರಮ್‌ ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿದರು. ನಂತರ ಕಂಠೀರವ ಸ್ಟೇಡಿಯಂಗೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಂತೆಯೇ, ಎಲ್ಲಿಂದ ಹರಿದೋ ಬಂತೋ ಏನೋ, ಎತ್ತ ನೋಡಿದರೂ ಜನ ಜನ ಜನ. ಕಣ್ಣಾಯಿಸಿದ ಕಡೆಯೆಲ್ಲ ಅಭಿಮಾನಿಗಳದ್ದೇ ಗೋಳಾಟ.


ನಿನ್ನೆ ಮಧ್ಯಾಹ್ನದಿಂದ ಹಿಡಿದು, ರಾತ್ರಿ ಇಡೀ ಅಭಿಮಾನಿಗಳು ಸಾಲುಗಟ್ಟಿ ಬಂದು ಪುನೀತ್‌ ಅವರ ದರ್ಶನ ಪಡೆದಿದ್ದು ನಿಜಕ್ಕೂ ದುಃಖ ತರುವಂಥದ್ದು. ಶನಿವಾರವೂ ಸಹ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೇಡಿಯಂನಲ್ಲಿ ಸೇರಿ ತಮ್ಮ ಪ್ರೀತಿಯ ನಾಯಕರನ್ನು ಕಣ್ತುಂಬಿಕೊಂಡರು. ಸಂಜೆ ಐದು ಆಗಿದ್ದರೂ, ಜನಸಾಗರ ಹರಿದುಬರುತ್ತಲೇ ಇತ್ತು. ನಿನ್ನೆಯಿಂದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್‌ ಅವರನ್ನು ನೋಡಿ ಭಾವುಕರಾಗಿದ್ದಾರೆ.

ಡಾ.ರಾಜಕುಮಾರ್‌ ಅವರ ನಿಧನದ ಸಂದರ್ಭದಲ್ಲೂ ಇಷ್ಟೇ ಜನಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈಗ ಪುನೀತ್‌ ಅವರನ್ನು ನೋಡಬೇಕು ಅಂತಾನೇ, ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ರಾತ್ರೋ ರಾತ್ರಿ ಬಂದಿದ್ದಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮ್ಮ ಪ್ರೀತಿಯ ಹೀರೋನನ್ನು ನೋಡಿ ಕಣ್ಣೀರಾಗಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿದಂಲೂ ತುಂಬಲು ಸಾಧ್ಯವಿಲ್ಲ-ಸುದೀಪ್‌ ಭಾವುಕ ಪತ್ರ

ನಟ ಕಿಚ್ಚ ಸುದೀಪ್‌ ಕನಲಿ ಹೋಗಿದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ಸಾವು ಅವರನ್ನು ತೀವ್ರವಾಗಿ ಘಾಸಿಗೊಳಿಸಿದೆ. ಚಿತ್ರೀಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಗಿದ್ದ ಸುದೀಪ್‌ ವಿಷಯ ಗೊತ್ತಾಗಿ ಶುಕ್ರವಾರವೇ ಬೆಂಗಳೂರಿಗೆ ವಾಪಾಸ್‌ ಆಗಿ ಪುನೀತ್‌ ರಾಜಕುಮಾರ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದೀಗ ಅಂದ್ರೆ ಶನಿವಾರ ಕಿರಿಯ ಗೆಳೆಯ ಅಪ್ಪು ನೆನಪಿಸಿಕೊಂಡು ಭಾವುಕ ಪತ್ರವೊಂದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ ಎಂದು ದು:ಖ ವ್ಯಕ್ತಪಡಿಸಿದ್ದಾರೆ. ಅವರು ಹಂಚಿಕೊಂಡ ಪತ್ರದ ವಿವರ ಇಂತಿದೆ….

‘ ಇದು ಬಾಲ್ಯದಿಂದಲೂ ಬಂದ ಪ್ರಯಾಣ. ನಾವು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯದಾಗ ಅವರು ಆಗಲೇ ಸ್ಟಾರ್‌ ಆಗಿದ್ದರು. ಅವರು ಭಾಗ್ಯವಂತ ಚಿತ್ರದ ಯಶಸ್ವಿ ಪ್ರವಾಸದಲ್ಲಿದ್ದರು.ಅದು ದೈತ್ಯಾಕಾರದ ಹಿಟ್‌ ಆಗಿತ್ತು.ನನ್ನ ತಂದೆ ಚಿತ್ರರಂಗದವರಿಗೆ ಚಿರಪರಿಚಿತ ಹೆಸರಾಗಿದ್ದರಿಂದ ಪುನೀತ್‌ ಅವರನ್ನು ಅವರ ಥಿಯೇಟರ್‌ ಭೇಟಿಯ ನಂತರ ಮಧ್ಯಾಹ್ನ ಊಟಕ್ಕೆ ಅವರ ಜನರು ಮನೆಗೆ ಕರೆತಂದರು.ಆಗ ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾದೆ ಮತ್ತು ಪ್ರಾಯಶ: ವಯಸ್ಸಿನ ಅಂಶವು ನಮ್ಮನ್ನು ತಕ್ಷಣವೇ ಬೆರೆಯುವಂತೆ ಮಾಡಿತು.ಅವರು ಊಟದ ಉಪಚಾರಕ್ಕಿಂತ ನನ್ನ ಆಟಿಕೆಗಳ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು.ಅಪ್ಪು ಮತ್ತು ನಾನು ಆಟದಲ್ಲಿ ನಿರತರಾಗಿದ್ದಾಗ ಒಬ್ಬರು ಪುನೀತ್‌ಗೆ ಊಟ ಮಾಡಿಸಲು ಮಹಿಳೆಯೊಬ್ಬರು ಅವರ ಹಿಂದೆಯೇ ಸುತ್ತುತ್ತಿದ್ದು ನನಗಿನ್ನೂ ನೆನಪಿದೆ.

ಅವರು ಖುಷಿಯಾಗಿದ್ದಿದ್ದನ್ನ ಕಂಡು ನಾನೂ ಖುಷಿಯಾಗಿದ್ದೆ. ಪುನೀತ್ ಅವರನ್ನ ನೋಡಲು ನಮ್ಮ ಅಕ್ಕ-ಪಕ್ಕದ ಮನೆಯವರೆಲ್ಲಾ ನಮ್ಮ ಮನೆಯ ಮುಂದೆಯೇ ನೆರೆದಿದ್ದರು. ಯಾಕಂದ್ರೆ, ಪುನೀತ್ ಅದಾಗಲೇ ಸ್ಟಾರ್ ಆಗಿದ್ದವರು. ಹೇಳಿ ಕೇಳಿ ಅವರು ಲೆಜೆಂಡ್ ಡಾ.ರಾಜ್‌ಕುಮಾರ್ ಅವರ ಪುತ್ರ’ ಅಂದಿನಿಂದ ನಾವು ಕೆಲ ಬಾರಿ ಭೇಟಿಯಾಗಿದ್ದೇವೆ ಮತ್ತು ಇದೇ ಬಾತೃತ್ವದ ಸಹದ್ಯೋಗಿಗಳಾಗಿ ಹೋದೆವು. ಬಳಿಕ ನಾವಿಬ್ಬರೂ ಸಿನಿಮಾ ರಂಗಕ್ಕೆ ಸೇರಿದ್ವಿ. ಅವರು ಒಳ್ಳೆಯ ನಟ, ಅತ್ಯುತ್ತಮ ಡ್ಯಾನ್ಸರ್ ಹಾಗೂ ಫೈಟರ್. ಇಂದು ಚಿತ್ರರಂಗ ಅವರಿಲ್ಲದೆ ಅಪೂರ್ಣವಾಗಿದೆ. ಕಾಲ ಬಹಳ ಕ್ರೂರಿ. ನಿನ್ನೆ ನಾನು ಬೆಂಗಳೂರಿಗೆ ಬಂದಿಳಿದು, ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಹೋದಾಗ ನನ್ನ ಉಸಿರು ಭಾರವಾಗ ತೊಡಗಿತು. ಅವರು ಮಲಗಿರುವುದನ್ನ ನೋಡಿ ಅನೇಕ ಪ್ರಶ್ನೆಗಳು ತಲೆಯಲ್ಲಿ ಮೂಡಿದವು. ಯಾಕೆ? ಹೇಗೆ? ಇದೇ ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಅವರನ್ನ ಹೆಚ್ಚು ಹೊತ್ತು ನನ್ನಿಂದ ನೋಡಲು ಸಾಧ್ಯವಾಗಲಿಲ್ಲ. ಆ ನೋಟ ನನಗಿನ್ನೂ ಕಾಡುತ್ತಲೇ ಇದೆ. ಶಿವಣ್ಣ ಅವರ ಪರಿಸ್ಥಿತಿಯನ್ನ ಕಂಡು ನೋವಾಗುತ್ತಿದೆ. ‘’ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಇದೇ ತೋಳಲ್ಲಿ ಅವನನ್ನ ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಸಾಕಷ್ಟು ನೋಡಿದ್ದೇನೆ. ನಾನು ಇನ್ನೇನು ನೋಡೋಕೆ ಇದೆ’’ ಅಂತ ಶಿವಣ್ಣ ನನಗೆ ಹೇಳಿದರು. ಆ ಮಾತು ಈಗಲೂ ನನ್ನನ್ನ ಕಾಡುತ್ತಿದೆ. ಎಲ್ಲರೂ ಆಘಾತಗೊಂಡಿದ್ದಾರೆ, ಜರ್ಜರಿತಗೊಂಡಿದ್ದಾರೆ. ಈ ವಾಸ್ತವವನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕು. ಅವರು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆ ಜಾಗ ಯಾವತ್ತಿದ್ದರೂ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಸೇರಿದ್ದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ’’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
– ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪುನೀತ್ ದರ್ಶನ ಪಡೆದ ರಮ್ಯಾ ; ಜೇಮ್ಸ್ , ದ್ವಿತ್ವ ಚಿತ್ರಕ್ಕೆ ನಾನೇ ನಾಯಕಿಯಾಗಬೇಕಿತ್ತು; ಕಮ್ ಬ್ಯಾಕ್ ಮಾಡಿದ್ದರೆ ಪವರ್ ಜೊತೆ ನಟಿಸೋ ಕನಸು ಕಂಡಿದ್ರು ಪದ್ಮಾವತಿ !

ದೊಡ್ಮನೆಯ ರಾಜಕುಮಾರನ ಅಗಲಿಕೆ‌ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮೂಲಕ ಭಾವುಕತೆಯನ್ನು ಹೊರಹಾಕಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ದುಃಖ ತಾಳಲಾರದೇ ಫ್ಲೈಟ್ ಹತ್ಕೊಂಡು ಬೆಂಗಳೂರಿಗೆ ಬಂದಿಳಿದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, ಅಪ್ಪು ನನಗೆ
ಕೋಸ್ಟಾರ್ ಮಾತ್ರವಲ್ಲ ಒಳ್ಳೆಯ ಫ್ರೆಂಡ್ ಕೂಡ ಆಗಿದ್ದರು. ಅಭಿ, ಆಕಾಶ್, ಅರಸು ಸೇರಿ ಮೂರು ಚಿತ್ರ ಒಟ್ಟಿಗೆ ಮಾಡಿದ್ದೇನೆ. ಮೂರು ವಾರಗಳ ಹಿಂದಷ್ಟೇ ಅವರೊಟ್ಟಿಗೆ ಮಾತನಾಡಿದ್ದೆ ಈಗ ನೋಡಿದರೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೊರಟುಬಿಟ್ಟಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಬಿಗಿಹಿಡಿದ ಗಂಟಲಲ್ಲೇ ಮಾತನಾಡಿದ ಮೋಹಕತಾರೆ ರಮ್ಯಾ,
ದೊಡ್ಮನೆ ಬ್ಯಾನರ್ ಚಿತ್ರ ಬಂದಾಗ ನನಗೆ ಫಸ್ಟ್ ಪ್ರಿಪ್ರೆನ್ಸ್ ಕೊಡ್ತಿದ್ದರು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದ್ಮೇಲೂ ಕೂಡ ಅವರೊಟ್ಟಿಗೆ ನಿರಂತರ ಸಂಪರ್ಕದಲ್ಲಿದ್ದೆ. ಕಂಬ್ಯಾಕ್ ಮಾಡುವುದಾದರೆ ದೊಡ್ಮನೆಯ ರಾಜಕುಮಾರ ನೊಟ್ಟಿಗೆ ಮಾಡಬೇಕು ಅಂತ ನಿರ್ಧರಿಸಿದ್ದೆ ಎಂದರು.

ಕಂಬ್ಯಾಕ್ ವಿಚಾರದ ಬಗ್ಗೆ ಎಷ್ಟೋ ಭಾರಿ ಅಪ್ಪು ಜೊತೆ ಡಿಸ್ ಕಷನ್ ಕೂಡ ಮಾಡಿದ್ದೆ. ಅಭಿ, ಆಕಾಶ್, ಅರಸು ಜಾನರ್ ನಂಥ ಕಥೆಗಳು ಅರಸಿಕೊಂಡು ಬಂದರೆ ಇಬ್ಬರು ಒಟ್ಟಾಗಿ ಸಿನಿಮಾ ಮಾಡಬೇಕು ಎನ್ನುವುದು ನಮ್ಮಿಬ್ಬರ ಕನಸಾಗಿತ್ತು. ಅಭಿಮಾನಿಗಳು ಕೂಡ ಇದನ್ನೇ ಬಯಸ್ತಿದ್ದರು. ಪವರ್ ಸ್ಟಾರ್ ಹಾಗೂ ಪದ್ಮಾವತಿ ಜೊತೆಯಾಗಬೇಕು, ಬಿಗ್ ಸ್ಕ್ರೀನ್ ಮೇಲೆ ದಿಬ್ಬಣ ಹೊರಡಬೇಕು ಅಂತ ಆಸೆಪಟ್ಟಿದ್ದರು. ಆದರೆ, ಅದಕ್ಕೂ ಮೊದಲೇ ದೊಡ್ಮನೆಯ ಅರಸು, ಕೋಟ್ಯಾಂತರ ಭಕ್ತರ ನಾಯಕ ಅಪ್ಪು ಬಹುದೂರ ಹೋಗಿಬಿಟ್ಟರು. ಈ ಸುದ್ದಿ ಈ ಕ್ಷಣಕ್ಕೂ ಶಾಕಿಂಗ್ಗೇ. ಭಗವಂತ ಕರುಣಾಮಯಿ ಆಗಿ ಯುವರತ್ನನನ್ನು ಉಳಿಸಿಕೊಡಲಿ ಅಂತಾನೇ ಸಕಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ.


ಆದರೆ ವಾಸ್ತವ ಕಟುಸತ್ಯ ಅಲ್ಲವೇ ಅದನ್ನು ಎಲ್ಲರೂ ನಂಬಲೆಬೇಕು. ಅಪ್ಪು ಆತ್ಮಕ್ಕೆ ಶಾಂತಿ ಸಿಗುವ ಹಾಗೇ ಕಳುಹಿಸಿಕೊಡಬೇಕು.ಇದನ್ನೇ ದೊಡ್ಮನೆ ಕುಟುಂಬ ವರ್ಗ ಹೇಳ್ತಿದೆ. ಅದಕ್ಕೆ ಅಭಿಮಾನಿಗಳು ಕೂಡ ಸ್ಪಂಧಿಸುತ್ತಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಟ್ಟಿದ್ದು ಲಕ್ಷಾಂತರ ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ನನ್ನ ನೆಚ್ಚಿನ ಅಪ್ಪು ಇಲ್ಲದೆ ನಾನೇಕೆ ಬದುಕಲಿ ಅಂದ ಅಭಿಮಾನಿಯ ದುರಂತ ಅಂತ್ಯ !

ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ, ನಾನೇಕೆ ಇರಲಿ ಅಂತ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಯುವಕನ ಹೆಸರು ರಾಹುಲ್‌ ಬಾಬು ಗಾಡಿವಡ್ಡರ್.‌ ಊರು ಅಥಣಿ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಅಕಾಲಿಕ ಸಾವು ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರೆಗಿದ ಬಹುದೊಡ್ಡ ಆಘಾತ. ಅದರಲ್ಲೂ ಅವರ ಅಪ್ಪಟ್ಟ ಅಭಿಮಾನಿಗಳಿಗೆ ಬಹುದೊಡ್ಡ ಮೈಂಡ್‌ ಸ್ಟ್ರೋಕ್‌. ಈಗಾಗಲೇ ಈ ಸುದ್ದಿಯ ಶಾಕ್‌ ನಿಂದ ರಾಜ್ಯದಲ್ಲಿ ಇಬ್ಬರು ಪವರ್‌ ಸ್ಟಾರ್‌ ಅಭಿಮಾನಿಗಳು ಮೃತಪಟ್ಟಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಆತನ ಹೆಸರೇ ರಾಹುಲ್‌ ಬಾಬು ಗಾಡಿವಡ್ಡರ್.‌ ಈತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಥಣಿ ಪಟ್ಟಣದ ವಡ್ಡರ ಗಲ್ಲಿ ನಿವಾಸಿ. ಆತನಿಗೀಗ ವಯಸ್ಸು ೨೪. ಕಾಲೇಜು ವಿದ್ಯಾರ್ಥಿ.

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಇತ್ತೀಚೆಗೆ ತೆರೆ ಕಂಡ ಪುನೀತ್‌ ಅಭಿನಯದ ಯಾವುದೇ ಸಿನಿಮಾವನ್ನು ಆತ ನೋಡದೆ ಬಿಟ್ಟಿಲ್ಲ. ಪುನೀತ್‌ ರಾಜಕುಮಾರ್‌ ಅಂದ್ರೆ ಆತನಿಗೆ ಪ್ರಾಣ. ಅವರ ಯಾವುದೇ ಸಿನಿಮಾ ರಿಲೀಸ್‌ ಅಂದ್ರೆ ಸಾಕು, ಅಲ್ಲಿನ ಥಿಯೇಟರ್‌ ನಲ್ಲಿ ತನ್ನದೇ ಸ್ವಂತ ಖರ್ಚಿನಲ್ಲಿ ಪೋಸ್ಟರ್‌, ಕಟೌಟ್‌ ಹಾಕಿಸಿ, ಸ್ಟಾರ್‌ ಮೇಲಿನ ಅಭಿಮಾನ ಮರೆಯುತ್ತಾ ಬಂದಿದ ಹುಡುಗ. ಶುಕ್ರವಾರ ದಿಢೀರ್‌ ಅಂತ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಬ್ರಮೆಗೆ ಒಳಗಾಗಿದ್ದ. ಕೊನೆಗೆ ಸಂಜೆಯೇ ಸ್ನೇಹಿತರನ್ನೆಲ್ಲ ಸೇರಿಸಿ, ತನ್ನ ನೆಚ್ಚಿನ ನಟನ ಸಾವಿಗೆ ಸಂತಾಪ ಸೂಚಿಸಿ ಶದ್ರ್ದಾಂಜಲಿ ಸಲ್ಲಿಸಿದ್ದ.

ಅಲ್ಲಿಂದ ಸಂಜೆ ಸ್ನೇಹಿತರೆಲ್ಲ ಮನೆಗೆ ಹೋದ ಬಳಿಕ, ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ ನಾನೇಕೆ ಇರಲಿ ಅಂತ ಗೆಳೆಯರಿಗೆಲ್ಲ ಮೊಬೈಲ್‌ ಮೂಲಕ ಮೆಸೇಜ್‌ ರವಾನಿಸಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಈ ಕುರಿತು ಆತನ ಸ್ನೇಹಿತ ಅಥಣಿಯ ಜಗದೀಶ್‌ ಗೆಳೆಯನ ಅಗಲಿಕೆಗೆ ಅತೀವ ನೋವು ವ್ಯಕ್ತಪಡಿಸಿದ್ದು, ಯಾರಿಗೂ ಗೊತ್ತಾಗದ್ದಂತೆ ಈ ಅಚಾತುರ್ಯ ನಡೆದುಹೋಗಿದೆ ಎಂದು ಕಣ್ಣೇರಿಟ್ಟಿದ್ದಾರೆ. ʼ ರಾಹುಲ್‌ ತುಂಬಾ ಚುರುಕಿನ ಹುಡುಗ. ನಟ ಪುನೀತ್‌ ಅಂದ್ರೆ ಆತನಿಗೆ ಪಂಚ ಪ್ರಾಣ. ಅವರ ಸಿನಿಮಾ ರಿಲೀಸ್‌ ಆದ್ರೆ ಸಾಕು ಆತನಿಗೆ ಹಬ್ಬವೇ ಇದ್ದಂತೆ ಇರುತ್ತಿದ್ದ. ಆ ಸಿನಿಮಾ ಬೆಳಗಾವಿ, ಹುಬ್ಬಳಿ ಎಲ್ಲಿಯೇ ಸನಿಹ ಇದ್ದರೂ ಸರಿ ಅಲ್ಲಿಗೇ ಹೋಗಿ ನೋಡಿಕೊಂಡು ಬರುತ್ತಿದೆ. ಈಗ ಅವರ ಸಾವಿನ ಸುದ್ದಿ ಕೇಳಇ ಆತನೂ ಸಾವಿಗೆ ಶರಣಾಗಿರುವುದು ನಮಗೆಲ್ಲ ಅತೀವ ದು:ಖ ತಂದಿದೆ ಎಂದು ಜಗದೀಶ್‌ ಹೇಳಿಕೊಂಡಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

17ನೇ ತಾರೀಖು ಭೂಮಿಗೆ ಬಂದ ಧ್ರುವತಾರೆಗಳನ್ನು ಹೇಳದೇ ಕೇಳದೇ ಹೊತ್ತು ಹೊಯ್ಯುತ್ತಾನ್ಯಾಕೆ ಜವರಾಯ !? ಅಪ್ಪು-ಚಿರು- ಸಂಚಾರಿ ವಿಜಯ್ ಅರ್ಧ ವಯಸ್ಸಿಗೆ ಬದುಕು ಮುಗಿಸುವಂತಾಯ್ತು !

ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಎನ್ನುವ ಕಟುಸತ್ಯ ಇಡೀ ಮನುಕುಲಕ್ಕೆ ಗೊತ್ತಿದೆ. ಆದರೆ, ಹುಟ್ಟಿಗೆ ಒಂಭತ್ತು ತಿಂಗಳು ಟೈಮ್ ಕೊಡುವ ಬ್ರಹ್ಮ, ಉಸಿರು‌ ನಿಲ್ಲಿಸಿ ದೇಹ ಹೊತ್ತೊಯ್ಯುವಾಗ ಟೈಮ್ ಕೊಡದೇ ಬಾರದ ಲೋಕಕ್ಕೆ ಕಳುಹಿಸಿಬಿಡ್ತಾನೆ.
ಇದ್ಯಾವ ನ್ಯಾಯವೋ? ಇದ್ಯಾವ ಸೀಮೆ ತೀರ್ಮಾನವೋ ಗೊತ್ತಿಲ್ಲ ಜವರಾಯ ಬಲೆಬೀಸಿದಾಗ ಬಲಿಯಾಗಲೇಬೇಕು. ಹೀಗಾಗಿಯೇ, ದೊಡ್ಮನೆಯ ಅರಸು, ಕರ್ನಾಟಕದ ಜನರ ಪಾಲಿನ ರಾಜರತ್ನ ವಿಧಿಯ ಆಟಕ್ಕೆ ಶರಣಾಗಬೇಕಾಗಿ ಬಂತು. ಅರ್ಧಕ್ಕೆ ಬದುಕಿನ ಪಯಣ ಮುಗಿಸಿ ಮುರಳಿಬಾರದೂರಿಗೆ ಹೋಗಬೇಕಾಗಿ ಬಂತು.

ಅಪ್ಪುದು ಸಾಯೋ ವಯಸ್ಸಲ್ಲ. ಇನ್ನೂ 46 ಅಷ್ಟೇ. ಬಾಳಿ ಬದುಕಬೇಕಿದ್ದ, ಸುಂದರ ಜೀವನ‌ ನಡೆಸಬೇಕಿದ್ದ ಪುನೀತ್ ರಾಜ್ ಕುಮಾರ್
ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕವಾಗಿ ಅಗಲಿದ್ದು
ಆರೂವರೆ ಕೋಟಿ ಕನ್ನಡಿಗರನ್ನ ದುಃಖದ ಮಡಿಲಿಗೆ ನೂಕಿದೆ. ಹದಿನೇಳರಂದು ಭೂಮಿಗೆ ಬಂದ ಧ್ರುವತಾರೆಗಳನ್ನೇಕೆ ವಿಧಿ ಟಾರ್ಗೆಟ್ ಮಾಡ್ತಾನೆ ? ಅದ್ಯಾಕೆ ಅರ್ಧ ವಯಸ್ಸಿಗೆ ಬದುಕನ್ನು ಕೊನೆಗಾಣಿಸುತ್ತಾನೆ? ಏಕಾಏಕಿ ಅದ್ಯಾಕೆ ಕಿತ್ತುಕೊಳ್ತಾನೆ? ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಹೌದು, ಹದಿನೇಳನೇ ತಾರೀಖ್ ನಂದು ತಾಯಿ ಗರ್ಭದಿಂದ ಪೃಥ್ವಿಗೆ ಬಂದಂತಹ, ಬೆಳ್ಳಿತೆರೆ ಬೆಳಗಿದಂತಹ, ಕನ್ನಡಿಗರ ಮನೆಮನ ತಣಿಸಿದಂತಹ,
ಗಂಧದಗುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದಂತಹ ಕನ್ನಡದ ಮೂವರು ಧ್ರುವತಾರೆಗಳಾದ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ‌ವಿಜಯ್ ವಿಧಿಯಾಟಕ್ಕೆ ಬಲಿಯಾದರು. ಜವರಾಯನ ಅಣತಿಯಂತೆ ತಮ್ಮೆಲ್ಲಾ ಆಸೆ – ಕನಸು- ಬದುಕು- ಕುಟುಂಬ- ಅಭಿಮಾನಿ ದೇವರುಗಳು ಹೀಗೆ ಎಲ್ಲರನ್ನೂ ಬಿಟ್ಟು ಬಹುದೂರ ಹೋಗಿಬಿಟ್ಟರು.

ಅಷ್ಟಕ್ಕೂ, ಹದಿನೇಳಕ್ಕೂ, ಹದಿನೇಳರಂದು ಹುಟ್ಟಿದ ಕನ್ನಡ ಚಿತ್ರರಂಗದ ಧ್ರುವತಾರೆಗಳ ಅಕಾಲಿಕ ಮರಣಕ್ಕೂ ಕಂಟಕವೋ?
ಬ್ರಹ್ಮ ನಿರ್ಣಯವೋ, ವಿಧಿ ಲಿಖಿತವೋ ಗೊತ್ತಿಲ್ಲ? 1975 ಮಾರ್ಚ್ 17 ರಂದು ಹುಟ್ಟಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,
1984 ಅಕ್ಟೋಬರ್ 17 ರಂದು ಜನಿಸಿದ ಚಿರಂಜೀವಿ ಸರ್ಜಾ, 1983 ಜುಲೈ 17 ರಂದು ಹುಟ್ಟಿದ ಸಂಚಾರಿ ವಿಜಯ್ ಮೂವರು ಸ್ಟಾರ್ ಗಳು ಹಠಾತ್ತನೇ ಉಸಿರು‌ ಚೆಲ್ಲಿದರು. ಕನ್ನಡ ಚಿತ್ರರಂಗ ಕಂಡ ಅಪರೂಪದ ಈ ಮೂವರು ನಟಸಾರ್ವಭೌಮರ ಸಾವಿಗೆ ಕಾರಣ ಜವರಾಯ.

ಸದಾ ಕ್ರೂರತ್ವ ಮೆರೆಯೋ ಯಮಧರ್ಮ ಕೊಂಚಕರುಣಾಮಯಿಯಾಗಿದ್ರೆ ದೊಡ್ಮನೆಯ ರಾಜಕುಮಾರ, ಸರ್ಜಾ ಕುಟುಂಬದ ಕುವರ ಹಾಗೂ ಸಂಚಾರಿ ವಿಜಯ್ ಅವರು ಗೋಣು ಚೆಲ್ಲುತ್ತಿರಲಿಲ್ಲ. ಕುಟುಂಬವನ್ನು ಕೋಟ್ಯಾನುಕೋಟಿ ಭಕ್ತರನ್ನು ಬಿಟ್ಟು ಅಗಲುತ್ತಿರಲಿಲ್ಲ. ಆದರೆ ಏನ್ಮಾಡೋದು ಭಗವಂತನ್ನ, ಜವರಾಯನನ್ನ, ವಿಧಿನಾ ಫೇಸ್ ಮಾಡುವ ಶಕ್ತಿ ? ಪ್ರಶ್ನೆ ಮಾಡುವ ಪವರ್ ಯಾರಿಗಿದೆ ಹೇಳಿ. ಅಸ್ತು ಎಂದಾಗ ಹುಟ್ಟಬೇಕು, ಸುಸ್ತಾಗುವ ಮೊದಲೇ ಇಹಲೋಕ ತ್ಯಜಿಸಬೇಕು

ವಿಶಾಲಾಕ್ಷಿ,
ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ನಿಜ ಜೀವನದಲ್ಲೂ ಅಪ್ಪು ರಾಜಕುಮಾರ!


ಪುನೀತ್‌ ರಾಜಕುಮಾರ್‌ ಒಬ್ಬ ಸರಳ ವ್ಯಕ್ತಿತ್ವ ಹೊಂದಿದವರು. ಅವರು ಸ್ಟಾರ್‌ ನಟರಾಗಿದ್ದರೂ, ಎಂದಿಗೂ ಆ ಸ್ಟಾರ್‌ಗಿರಿ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಪುನೀತ್‌ ಅವರು ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ವೃದ್ಧರು, ಅನಾಥರು ಮತ್ತು ಹೆಣ್ಣುಮಕ್ಕಳನ್ನೂ ಗೌರವದಿಂದ ನೋಡುವ ಮೂಲಕ ಅವರಿಗೆ ಕಾಳಜಿಯಿಂದಲೇ ಸೇವೆ ಮಾಡಿಕೊಂಡು ಬಂದವರು. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಗೋ ಶಾಲೆಗಳಿಗೆ ನೆರವು ನೀಡುತ್ತಿದ್ದರು. ಸಮಾಜ ಸೇವೆ ಬಗ್ಗೆ ಎಂದಿಗೂ ಹೇಳಿಕೊಂಡವರಲ್ಲ.

ಅವರ ವ್ಯಕ್ತಿತ್ವ ಆಕಾಶದೆತ್ತರಕ್ಕೆ ಇತ್ತು. 26ಕ್ಕೂ ಹೆಚ್ಚು ಅನಾಥಾಶ್ರಮಗಳು 16 ವೃದ್ಧಾಶ್ರಮಗಳು ಮತ್ತು 19 ಗೋಶಾಲೆಗಳಿಗೆ ನೆರವು ನೀಡುತ್ತಿದ್ದರು. ಅದು ನಿರಂತರವಾಗಿ. ಅಷ್ಟೇ ಅಲ್ಲ, ಅವರು ೪೫ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಶಕ್ತಿಧಾಮ ಮೂಲಕ ಸುಮಾರು ೧೮೦೦ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಪತ್ನಿ ಕೂಡ ಪುನೀತ್‌ ಅವರಿಗೆ ಸಾಥ್‌ ನೀಡುತ್ತಿದ್ದರು. ಪುನೀತ್‌ ಎಂದಿಗೂ ಈ ಸೇವೆ ಬಗ್ಗೆ ಹೇಳಿಕೊಂಡವರಲ್ಲ. ಅವರಿಂದ ಸಹಾಯ ಪಡೆದವರೂ ಹೇಳುತ್ತಿರಲಿಲ್ಲ. ಬಲಗೈಯಲ್ಲಿ ಪಡೆದದದ್ದು ಎಡಗೈಗೆ ಗೊತ್ತಾಗಬಾರದು ಎಂಬ ಸಿದ್ಧಾಂತ ಪುನೀತ್‌ ಅವರದ್ದು.

Categories
ಸಿನಿ ಸುದ್ದಿ

ಅಪ್ಪ ಕೊಟ್ಟ ಮಾತು ಉಳಿಸಿಕೊಂಡ ಅಪ್ಪು! ನೇತ್ರದಾನ ಮಾಡಿ ಪುನೀತರಾದ ಪುನೀತ್



ಅಣ್ಣಾವ್ರು ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಈಗ ಅಪ್ಪ ಕೊಟ್ಟ ಮಾತನ್ನು ಮಗ ಕೂಡ ಉಳಿಸಿಕೊಂಡಿದ್ದಾರೆ. ಹೌದು, ಪುನೀತ್‌ ರಾಜಕುಮಾರ್‌ ಅವರ ಕಣ್ಣುಗಳನ್ನು ಕುಟುಂಬ ದಾನ ಮಾಡಿದೆ. ಪುನೀತ್‌ ಅವರು ನಿಧನರಾದರು ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಡಾ.ರಾಜಕುಮಾರ್‌ ಅವರ ಕುಟುಂಬದವರು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ ಅವರನ್ನು ಸಂಪರ್ಕಿಸಿ, ಪುನೀತ್‌ ಅವರ ನಿಧನದ ವಿಷಯ ತಿಳಿಸಿ, ಕಣ್ಣುಗಳನ್ನು ದಾನ ಮಾಡುವ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಡಾ.ಭುಜಂಗಶೆಟ್ಟಿ ಅವರು, ತಮ್ಮ ತಂಡದ ಜೊತೆ ವಿಕ್ರಮ್‌ ಆಸ್ಪತ್ರೆಗೆ ಧಾವಿಸಿ, ಅಲ್ಲಿ ಕಣ್ಣುಗಳನ್ನು ಪಡೆದಿದ್ದಾರೆ.

ಪುನೀತ್‌ ರಾಜಕುಮಾರ್‌ ಅವರು ಅಪ್ಪನಂತೆಯೇ ತಮ್ಮ ಕಣ್ಣುಗಳನ್ನೂ ಸಹ ದಾನ ಮಾಡಿದ್ದಾರೆ.
ನೇತ್ರಾಲಯ ಉದ್ಘಾಟನೆಯಲ್ಲಿ ಅಣ್ಣಾವ್ರು ಸ್ವತಃ ನನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ನಮ್ಮ ಮನೆಯವರು, ಮಕ್ಕಳು ಸಹ ನೇತ್ರದಾನ ಮಾಡ್ತೀವಿ ಅಂದಿದ್ದರು. ಹಾಗೆಯೇ ಮಕ್ಕಳೆಲ್ಲರೂ ಅಪ್ಪನಂತೆಯೇ ನೇತ್ರದಾನ ಮಾಡುವುದಾಗಿ ಹೇಳಿದ್ದರು. ಈಗ ಪುನೀತ್‌ ಆ ಮಾತನ್ನು ಉಳಿಸಿಕೊಂಡಾಗಿದೆ. ಆದರೆ, ಇಷ್ಟು ಬೇಗ ಕಣ್ಣುಗಳನ್ನು ದಾನ ಮಾಡಬೇಕಾದ ಸ್ಥಿತಿ ಬಂದಿದ್ದು ದುರಂತ.

ಪುನೀತ್‌ ರಾಜಕುಮಾರ್‌ ಅವರ ಕಣ್ಣುಗಳನ್ನು, ಇಬ್ಬರಿಗೆ ದಾನ ಮಾಡಲಾಗುತ್ತದೆ ಎಂದು ಡಾ.ಭಜುಂಗಶೆಟ್ಟಿ ಅವರು ಹೇಳಿದ್ದಾರೆ. ಸದ್ಯ ಪುನೀತ್‌ ರಾಜಕುಮಾರ್‌ ಅವರ ನಾರಾಯಣ ನೇತ್ರಾಲಯಕ್ಕೆ ತರಲಾಗಿದ್ದು, ವೇಟಿಂಗ್‌ ಲಿಸ್ಟ್‌ ಇರುವುದರಿಂದ ಯಾರಿಗೆ ಅದು ಸೂಟ್‌ ಆಗುತ್ತೋ ನೋಡಿ, ಅವರಿಗೆ ನಾಳೆ, ಅಥವಾ ನಾಡಿದ್ದು ಅಳವಡಿಸಲಾಗುತ್ತದೆ. ಇಬ್ಬರಿಗೆ ಕಣ್ಣುಗಳನ್ನು ಅಳವಡಿಸುವ ಅವಕಾಶ ಇದೆ. ನೇತ್ರದಾನ ಮೇಲೆ ಅವರಿಗೆ ನಿಜವಾದ ಕಾಳಜಿ ಇತ್ತು. ಅಣ್ಣಾವ್ರು ನೇತ್ರದಾನ ಪವಿತ್ರವಾದದ್ದು ಅಂತ ಹೇಳೋರು. ಈಗ ಪುನೀತ್‌ ಅವರ ನಿಧನ ನಂಬಲು ಅಸಾಧ್ಯ ಎಂದಿದ್ದಾರೆ ಭುಜಂಗಶೆಟ್ಟಿ.

Categories
ಸಿನಿ ಸುದ್ದಿ

ದೊಡ್ಮನೆಯವರು ಅಂತ ಎಂದಿಗೂ ದೊಡ್ಡಸ್ತಿಕೆ ತೋರಿಸಿರಲಿಲ್ಲ ಅಪ್ಪು !



ದೊಡ್ಮನೆಯೇ ಹಾಗೆ. ಅದು ಬರೀ ಹೆಸರಷ್ಟೇ, ಹಾಗೆಂದು ಎಂದಿಗೂ ದೊಡ್ಡಸ್ತಿಕೆ ತೋರಿಸಿಲ್ಲ ಅಣ್ಣಾವ್ರ ಕುಟುಂಬ. ಒಂದ್ರೀತಿ ಅಣ್ಣಾವ್ರ ಮುಂದುವರೆಕೆಯೇ ವ್ಯಕ್ತಿತ್ವ ಆಗಿದ್ದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಎಂದಿಗೂ ತಾವೊಬ್ಬ ದೊಡ್ಡ ಸ್ಟಾರ್‌ ಅಂತ ಎಂದಿಗೂ ಮರೆದಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತೆ ಎಲ್ಲಿಯೇ ಸಿಕ್ಕಾಗಲೂ ಅದೇ ವಿನಯತೆ, ಅದೇ ಸಿಂಪ್ಲಿಸಿಟಿ ಮೂಲಕವೇ ಮಾಧ್ಯಮದವರನ್ನು ಮಾತನಾಡಿಸುವ ಪರಿಯೇ ಅಚ್ಚರಿ ತರಿಸುತ್ತಿತ್ತು.

ಅಪ್ಪ ದೊಡ್ಡ ಸ್ಟಾರ್‌, ಅಮ್ಮ ದೊಡ್ಡ ನಿರ್ಮಾಪಕರು, ಹಾಗೆಯೇ ಅಣ್ಣಂದಿರೆಲ್ಲ ಸ್ಟಾರ್ ಗಳು, ಇಷ್ಟೆಲ್ಲ ಪ್ರಭಾವ ಇದ್ದರೂ ಸಾರ್ವಜನಿಕ ಕ್ಷೇತ್ರದಲ್ಲಿ ಅದೆಲ್ಲವನ್ನು ಎಂದಿಗೂ ತೋರಿಸಿರಲಿಲ್ಲ ಪುನೀತ್.‌ ಅನೇಕ ಸಿನಿಮಾ ಕಾರ್ಯಕ್ರಮಗಳಿಗೆ ಬಂದಾಗೆಲ್ಲ ವಿನಯ ವಿದ್ಯಾರ್ಥಿಯಂತೆ ವೇದಿಕೆಯಲ್ಲಿ ಕುಳಿತು, ಅಷ್ಟೇ ವಿನಯದಲ್ಲಿ ನಾಲ್ಕು ಮಾತನಾಡಿ, ಸಿನಿಮಾ ತಂಡದವರಿಗೆ ಶುಭ ಹಾರೈಸಿ ಹೋಗುತ್ತಿದ್ದ ಅವರ ಸರಳ ಮತ್ತು ವಿನಯತೆಯ ಮೂಲಕವೇ ಅವರೊಬ್ಬ ದೊಡ್ಡ ಸ್ಟಾರ್‌ ಆಗಿ ಮರೆದಿದ್ದರು.

ಅಭಿಮಾನಿಗಳ ಪಾಲಿಗೆ ಅವರೊಬ್ಬ ಪವರ್ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದರು, ಕನ್ನಡ ಚಿತ್ರರಂಗ ಪಾಲಿಗೆ ಪ್ರೀತಿಯ ಅಪ್ಪು ಆಗಿದ್ದರು. ಚಿತ್ರರಂಗದ ಯಾರೇ ಹಿರಿಯರು ಸಿಕ್ಕರೂ, ಅವರಿಗೆ ನಮಸ್ಕರಿಸಿ, ಗೌರವಿಸಿ, ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಪರಿಯೇ ಮಾದರಿಯಾಗಿತ್ತು. ಸಿನಿಮಾ ರಂಗಕ್ಕೆ ಯಾರೇ ಹೊಸಬರು ಬಂದರೂ, ಅವರನ್ನು ಅಷ್ಟೇ ಗೌರವದಿಂದ ಸ್ವಾಗತಿಸುವ ರೀತಿ ಇನ್ನೂ ವಿಶೇಷ. ಸಾಮಾನ್ಯವಾಗಿ ಇತ್ತೀಚಿಗೆ ಸಿನಿಮಾ ರಂಗಕ್ಕೆ ಬಂದು ಆಕಸ್ಮಿಕವಾಗಿ ಗೆದ್ದು ಬೀಗಿದವರೆಲ್ಲ ಸ್ಟಾರ್‌ ಎಂಬ ಕೊಂಬು ಹೊದ್ದು ಮರೆದರು, ಪುನೀತ್‌ ಬಾಕ್ಸ್‌ ಆಫೀಸ್‌ ಸ್ಟಾರ್‌ ಆಗಿದ್ದರೂ, ಸ್ಟಾರ್‌ ಎಂಬ ಕೊಂಬು ಮೂಡಿಸಿಕೊಂಡಿರಲಿಲ್ಲ. ಅದು ಅವರ ಸರಳತೆಯ ಇನ್ನೊಂದು ವಿಶೇಷವೇ ಹೌದು.

error: Content is protected !!