Categories
ಸಿನಿ ಸುದ್ದಿ

ದಿಲ್‌ ಪಸಂದ್‌‌ ಫಸ್ಟ್‌ ಪೋಸ್ಟರ್‌‌ ರಿಲೀಸ್! ಫಸ್ಟ್‌ ಲುಕ್‌ನಲ್ಲೇ ಕಾಂತಿ ತುಂಬಿದ ತೇಜಸ್ಸು!!

ನಿರ್ದೇಶಕ ಶಿವತೇಜಸ್‌ ಅವರು “ದಿಲ್‌ ಪಸಂದ್”‌ ಸಿನಿಮಾ ಕೈಗೆತ್ತಿಕೊಂಡಿರೋದು ಗೊತ್ತೇ ಇದೆ. ಈಗ ಆ ಸಿನಿಮಾದ ಹೊಸ ಸುದ್ದಿ ಅಂದರೆ, ಚಿತ್ರದ ಫಸ್ಟ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಸಿನಿಮಾದವರಿಗೆ ಶುಕ್ರವಾರ ಅಂದರೆ, ಶುಭ ದಿನ. ಹಾಗಾಗಿ, ಚಿತ್ರತಂಡ, ಮೊದಲ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ನಿರ್ದೇಶಕ ಶಿವತೇಜಸ್‌, ಅವರು ಹೆಣೆದಿರುವ ಬ್ಯೂಟಿಫುಲ್‌ ಲವ್‌ಸ್ಟೋರಿಗೆ “ಡಾರ್ಲಿಂಗ್‌” ಕೃಷ್ಣ ಬೋಲ್ಡ್‌ ಆಗಿ, ಕ್ಯಾಮೆರಾ ಮುಂದೆ ನಿಂತಿದ್ದು ಆಗಿದೆ. ಚಿತ್ರಗಳಲ್ಲಿ ಹಲವು ವಿಶೇಷತೆಗಳಿವೆ. ಆ ಪೈಕಿ ಮೊದಲು ಇಲ್ಲಿ ಕಥೆ ವಿಶೇಷವಾಗಿದೆ. ಅಷ್ಟೇ ಅಲ್ಲ, ಒಬ್ಬ ಸಕ್ಸಸ್‌ಫುಲ್‌ ಹೀರೋ ಸ್ಪೆಷಲ್‌ ಸ್ಟೋರಿ ಮತ್ತು ರೋಲ್‌ ಒಪ್ಪಿಕೊಂಡು ಮಾಡುತ್ತಿರುವ ಸಿನಿಮಾ.

ಇನ್ನು, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಸುಮಂತ್‌ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್‌ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್‌ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ಅನ್ನೋದು ವಿಶೇಷ.


ಹೌದು, “ದಿಲ್‌ ಪಸಂದ್‌” ಸಿನಿಮಾದ ಶೀರ್ಷಿಕೆಯೇ ಆಕರ್ಷಣೆಯಾಗಿದೆ. ಪೊಲೀಸ್‌ ಅಧಿಕಾರಿ ಚನ್ನಣ್ಣನವರ್‌ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸದ್ಯ, ಚಿತ್ರದ ಚಿತ್ರೀಕರಣ ಮೊದಲ ಹಂತ ಮುಗಿದೆ. ಇಲ್ಲಿಯವರೆಗೆ ಹತ್ತು ದಿನಗಳ ಕಾಲ ಶೂಟಿಂಗ್‌ ನಡೆಸಿರುವ ನಿರ್ದೇಶಕ ಶಿವತೇಜಸ್‌, ಡಿಸೆಂಬರ್‌ ೧ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಜೋರು ಮಳೆ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಮುಂದೂಡಲಾಗಿದೆ.

ಇನ್ನು, ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಈಗಾಗಲೇ ಅರ್ಜುನ್‌ ಜನ್ಯಾ ಅವರ ಸ್ಟುಡಿಯೋದಲ್ಲಿ “ದಿಲ್‌ ಪಸಂದ್‌” ಚಿತ್ರದ ಹಾಡುಗಳಿಗೆ ಕೆಲಸ ನಡೆಯುತ್ತಿದೆ. ಮೊದಲ ಹಂತದ ಹತ್ತು ದಿನಗಳ ಚಿತ್ರೀಕರಣದಲ್ಲಿ ಶೇ.೩೦ ರಷ್ಟು ಚಿತ್ರೀಕರಣ ಮಾಡಲಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಡಾರ್ಲಿಂಗ್‌ ಕೃಷ್ಣ. ನಿಶ್ವಿಕಾ ನಾಯ್ಡು, ತಬಲಾ ನಾಣಿ, ರಂಗಾಯಣ ರಘು, ಚಿತ್‌ಕಲಾ, ಅರುಣ ಬಾಲರಾಜ್‌ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದಾರೆ.

ಈವರೆಗೆ ರಿಚ್‌ ಮನೆಗಳಲ್ಲೇ ಚಿತ್ರೀಕರಣ ನಡೆದಿದೆ. ಇನ್ನು, ಎರಡನೇ ಹಂತದ ಶೂಟಿಂಗ್‌ನಲ್ಲಿ ಪಬ್‌, ಟೆಂಪಲ್‌, ಸಾಫ್ಟ್‌ವೇರ್‌ ಕಂಪೆನಿ ಹೀಗೆ ಇತರೆ ಲೊಕೇಷನ್‌ಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನುವ ನಿರ್ದೇಶಕರು, ಎರಡನೇ ಹಂತದಲ್ಲಿ ಕಾಮಿಡಿ ನಟ ಸಾಧುಕೋಕಿಲ, ಗಿರಿ ಇತರರು ಕೂಡ ಸೇರಿಕೊಳ್ಳಲಿದ್ದಾರೆ ಎಂದು ವಿವರ ಕೊಡುತ್ತಾರೆ. ಸದ್ಯ ಎರಡನೇ ಹಂತದಲ್ಲಿ ಮಾತಿನ ಭಾಗ ಮುಗಿಸಿ, ನಂತರ ಫೈಟ್‌ ಮತ್ತು ಸಾಂಗ್‌ ಪ್ಲಾನ್‌ ಮಾಡಲಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಪ್ರಶಾಂತ್ ಸಂಬರ್ಗಿಗೆ ಮರ್ರಾಮೋಸ !? ಕೋರ್ಟ್ ಮೆಟ್ಟಿಲೇರಿದ ಸಂಬರ್ಗಿಗೆ ಗೆಲುವು ಸಿಕ್ಕಿತಾ ?

ತೆಲುಗು ಚಿತ್ರ ನಿರ್ಮಾಪಕರಿಂದ ಕನ್ನಡದ ನಟ-ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಮೋಸ ಆಗಿರುವ ಸುದ್ದಿ ಹೊರಬಿದ್ದಿದೆ. ತೆಲುಗಿನ ಚಿತ್ರವೊಂದನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಕರಾರಿನಲ್ಲಿ ವಂಚನೆಯಾಗಿದೆ ಎಂದು ಸಂಬರಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು.

ಬೆಂಗಳೂರಿನ ವಾಣಿಜ್ಯ ನ್ಯಾಯಲಯವೊಂದು ಈಗ ಸಂಬರಗಿ ಪರವಾಗಿ ಆದೇಶ ಹೊರಡಿಸಿದ್ದು, ತೆಲುಗಿನ ಬಾಲಾಜಿ ಸಿನಿ ಮೀಡಿಯಾ ಕಂಪನಿಯ ಜೆ.ಭಗವಾನ್ ಮತ್ತು ಜೆ.ಫುಲ್ಲ ರಾವ್ ಅವರುಗಳಿಗೆ ಸಂಬರಿಗೆ ಕೊಡಬೇಕಾದ ರೂ 1,28,31,500 ಜೊತೆಗೆ ಬಡ್ಡಿಯನ್ನು ಸೇರಿಸಿ ಹಿಂದಿರುಗಿಸಬೇಕೆಂದು ಆದೇಶ ಮಾಡಿದೆ. ಎರಡು ದಿನಗಳ ಹಿಂದೆ ಇದೇ ನ್ಯಾಯಾಲಯ ಆದೇಶದ ಜಾರಿಗೆ ಎಕ್ಸಿಕ್ಯೂಷನ್ ಪಿಟೀಷನ್ ಅನ್ನು ಹೈದರಾಬಾದಿನ ನ್ಯಾಯಾಲಯಕ್ಕೆ ಕಳುಹಿಸಿದೆ.

ಗೋಪಿಚಂದ್ ಮತ್ತು ಹನ್ಸಿಕ ಮೋಟ್ವಾನಿ ನಟನೆಯ ತೆಲುಗಿನ ಗೌತಮಾನಂದ, ಜುಲೈ 27, 2017 ರಲ್ಲಿ ಬಿಡುಗಡೆಯಾಗಿತ್ತು. ಅದನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು, ಸಂಬರಗಿ ತೆಲುಗು ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ರೂ 90 ಲಕ್ಷ ಅವರ ಖಾತೆಗೆ ಪಾವತಿಸಿದ್ದರು. ತೆಲುಗು ನಿರ್ಮಾಪಕರು ಆ ಚಿತ್ರದ ಹಕ್ಕನ್ನು ಮತ್ತೊಬ್ಬರಿಗೆ ಮಾರಿದ್ದರಿಂದ ಸಂಬರಗಿಗೆ ಡಬ್ಬಿಂಗ್ ಹಕ್ಕನ್ನು ಹಸ್ತಾಂತರ ಮಾಡಿರಲಿಲ್ಲ. ಈ ಕಾರಣಕ್ಕೆ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಇಪ್ಪತ್ತು ತಿಂಗಳಿಗೂ ಅಧಿಕ ದಿನ ನಡೆದ ಕೇಸ್ ಕೊನೆಗೆ ಆಗಸ್ಟ್ 31, 2021 ರಂದು ಸಂಬರಗಿ ಪರವಾಯಿತು. ರೂ 1,28,31,500 ಮತ್ತು ಬಡ್ಡಿ ಅವರಿಗೆ ತೆಲುಗು ನಿರ್ಮಾಪಕರು ಕೊಡಬೇಕೆಂದು ಬೆಂಗಳೂರಿನ ನ್ಯಾಯಾಲಯ ಆದೇಶ ಮಾಡಿತು. ಈ ನಡುವೆ ಅದೇ ತೆಲುಗು ನಿರ್ಮಾಪಕರ ರಿಪಬ್ಲಿಕ್ ಎನ್ನುವ ಮತ್ತೊಂದು ತೆಲುಗು ಚಿತ್ರ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಬಿಡುಗಡೆಯಾಯಿತು.

ಆಗಸ್ಟ್ 31 ರ ಆದೇಶವನ್ನು ಅನುಷ್ಠಾನ ಮಾಡಲು ಹೈದರಾಬಾದಿನ ನ್ಯಾಯಾಲಯಕ್ಕೆ ಈಗ ಮೊರೆ ಹೋಗಿದ್ದಾರೆ.ಈ ರೀತಿ ಮೋಸ ಹೋಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ನಾಚಿಯಾಗುತ್ತಿದೆ. ಈಗಲೂ ಕೂಡ ಸಿನೆಮಾ ವಿತರಣೆ ಒಂದು ವ್ಯವಸ್ಥಿತ ವ್ಯಾಪಾರವಲ್ಲ. ಅದರಲ್ಲೂ ಡಬ್ಬಿಂಗ್ ವಿಷಯದಲ್ಲಿ ಸಾಕಷ್ಟು ಗೊಂದಲವಿದೆ. ಡಬ್ಬಿಂಗ್ ಸಿನೆಮಾಗಳ ವಿತರಣೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶವಿದೆ,” ಎನ್ನುತ್ತಾರೆ ಸಂಬರಗಿ. ಈ ಹಿನ್ನಡೆ ಹೊರತಾಗಿಯೂ, ಕನ್ನಡಕ್ಕೆ ಒಳ್ಳೆ ಪರಬಾಷ ಸಿನೆಮಾಗಳನ್ನು ಡಬ್ಬಿಂಗ್ ಮಾಡಿಸಿ ಬಿಡುಗಡೆ ಮಾಡುವ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ.

ಮೂಲತಃ ವ್ಯಾಪಾರಿಯಾದ ಸಂಬರ್ಗಿ, ಸಿನೆಮಾ ವಿತರಣೆ, ಇನ್-ಬ್ರಾಂಡಿಂಗ್ ಮತ್ತು ನಟನೆಯಲ್ಲೂ ಗುರುತಿಸಿಕೊಂಡಿದ್ದು ಕಳೆದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಕೊನೆಯ ಹಂತದವರೆಗೂ ಪೈಪೋಟಿಯಲ್ಲಿದ್ದರು.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಲಕ್ಷೂರಿ ವಾಚ್ ಗಿಫ್ಟ್; ಡಾರ್ಲಿಂಗ್ ಪ್ರಭಾಸ್ ಕ್ರೇಜಿ ಫ್ಯಾನ್- ಕ್ರೇಜಿ ಟ್ಯಾಟೂ !?

ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆಲ್‌ಓವರ್ ಇಂಡ್ಯಾ ಗುರ್ತಿಸಿಕೊಂಡಿದ್ದಾರೆ. ಇಡೀ ಜಗತ್ತಿನ ತುಂಬೆಲ್ಲಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅಭಿನಯದ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಪ್ರಭಾಸ್ ಎಲ್ಲರ ನೆಚ್ಚಿನ ಡಾರ್ಲಿಂಗೇ ಸರೀ. ಹೀಗಾಗಿ, ಒಬ್ಬೊಬ್ಬ ಅಭಿಮಾನಿಯೂ ಕೂಡ ಒಂದೊಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇಲ್ಲೊಬ್ಬ ಅಭಿಮಾನಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಮೇಲಿನ ಪ್ರೀತಿಯನ್ನು ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ತೋರಿಸಿದ್ದಾನೆ.

ತಮ್ಮ ನೆಚ್ಚಿನ ಸ್ಟಾರ್‌ಗಳ ಮೇಲಿನ ಅಭಿಮಾನವನ್ನು ಟ್ಯಾಟೂ ಮೂಲಕ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ, ತಲೆಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ತರ‍್ಸೋದು ತೀರಾ ವಿರಳ. ಸಾಮಾನ್ಯವಾಗಿ ಫ್ಯಾನ್ಸ್ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಎದೆ-ಬೆನ್ನು-ದೇಹದ ಮೇಲೆ ತಾವು ಪ್ರೀತ್ಸೋ-ಆರಾಧಿಸೋ ಸ್ಟಾರ್‌ಗಳ ಭಾವಚಿತ್ರವನ್ನು-ಹೆಸರನ್ನು-ಸಿನಿಮಾದ ಟೈಟಲ್‌ಗಳನ್ನು ಕೆತ್ತಿಸಿಕೊಳ್ಳುತ್ತಾರೆ. ದೇವರು ನಮ್ಮೊಟ್ಟಿಗೆ ಸದಾ ಇರುತ್ತಾನೋ ಇಲ್ಲವೋ ಗೊತ್ತಿಲ್ಲ. ಆರಾಧ್ಯದೈವ ಮಾತ್ರ ಅಚ್ಚೆ ಮೂಲಕ ಸದಾ ನಮ್ಮೊಟ್ಟಿಗಿರಬೇಕು ಎಂದು ಬಯಸ್ತಾರೆ. ಇದಕ್ಕೆ ಬಾಹುಬಲಿ ಅಭಿಮಾನಿಗಳು ಕೂಡ ಹೊರತಾಗಿಲ್ಲ.

ಹೌದು, ಡಾರ್ಲಿಂಗ್‌ಗೆ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳ ಪೈಕಿ ಓರ್ವ ಡಾರ್ಲಿಂಗ್ ಅಭಿಮಾನಿ `ಪ್ರಭಾಸ್’ ಹೆಸರನ್ನು ತಲೆ ಮೇಲೆ ಕೆತ್ತಿಸಿಕೊಂಡಿದ್ದಾನೆ. ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಹೀಗೆ ಸೋಷಿಯಲ್ ಸಮುದ್ರದಲ್ಲಿ ವೈರಲ್ ಆದ ಫೋಟೋ ಅಮರೇಂದ್ರ ಬಾಹುಬಲಿಯನ್ನು ತಲುಪಿದೆ. ಮಾತ್ರವಲ್ಲ ಅಭಿಮಾನಿ ತೋರಿಸಿದ ಪ್ರೀತಿಯನ್ನು ಕಂಡು ಆದಿಪುರುಷನ ಕಣ್ಣಾಲಿಗೆಗಳು ಒದ್ದೆಯಾಗಿವೆ. ಆ ಅಭಿಮಾನಿಯನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವ ಮನಸ್ಸಾಗಿದೆ. ಹೀಗಾಗಿ, ತಮ್ಮ ಫ್ಯಾನ್‌ನ ಮನೆಗೆ ಕರೆಸಿ ಮಾತನಾಡಿದ್ದಾರೆ. ಪಕ್ಕದಲ್ಲೇ ಕೂರಿಸಿಕೊಂಡು ಕೆಲಕಾಲ ಟೈಮ್ ಸ್ಪೆಂಡ್ ಮಾಡುವುದರ ಜೊತೆಗೆ ಬೆಲೆಬಾಳುವ ವಾಚ್‌ನ ಉಡುಗೊರೆಯಾಗಿ ನೀಡಿದ್ದಾರಂತೆ.

ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಿಂದ ನೇರವಾಗಿ ಸೋಷಿಯಲ್ ಪ್ರಪಂಚಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದೆ. ಪ್ರಭಾಸ್ ಮಿಸ್ಟರ್ ಪರ್ಫೆಕ್ಷನಿಸ್ಟ್- ಮಂಚಿ ಮನಸ್ಸುಳ್ಳ ಮನುಷಿ ಅಂತ ಬರೀ ಟಿಟೌನ್‌ಗೆ ಮಾತ್ರವಲ್ಲ ಇಡೀ ವಲ್ಡ್ಗೆ ಗೊತ್ತಾಗಿ ಯಾವುದೋ ಕಾಲವಾಗಿದೆ ಬಿಡಿ. ಎನಿವೇ, ಹೃದಯವಂತ ಪ್ರಭಾಸ್ ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಬೆಳಿಬೇಕು. ರಾಧೆಶ್ಯಾಮ್- ಸಲಾರ್- ಆದಿಪುರುಷ್ ಚಿತ್ರಗಳು ನಿರೀಕ್ಷೆಗೂ ಮೀರಿದ ಯಶಸ್ಸು ಸಿಗ್ಬೇಕು. ಇದು ಆಲ್‌ಓವರ್ ಇಂಡ್ಯಾದಲ್ಲಿರುವ ರೆಬೆಲ್ ಪ್ರಭಾಸ್ ಅಭಿಮಾನಿಗಳ ಒಂದೇ ಕೋರಿಕೆ..

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲೇಡಿಸೂಪರ್‌ಸ್ಟಾರ್ ಹುಟ್ಟುಹಬ್ಬದಲ್ಲಿ ಆ್ಯಪಲ್ ಬ್ಯೂಟಿ ಸಮಂತಾ ಮಿಂಚಿಂಗ್ ;ವಿಘ್ನೇಶ್ ಶಿವನ್ ಟ್ರೀಟ್‌ಗೆ ನಯನ ದಿಲ್ ಖುಷ್ !

ಲೇಡಿಸೂಪರ್‌ಸ್ಟಾರ್ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37 ನೇವಸಂತಕ್ಕೆ ಕಾಲಿಟ್ಟಿರೋ ಸೌತ್‌ಸುಂದರಿ ನಯನತಾರಾ ಭಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಹಾಗೂ ಇಂಡಸ್ಟ್ರಿಯ ಸ್ನೇಹಿತರ ಜೊತೆ ಬರ್ತ್ ಡೇ ಸೆಲಬ್ರೇಟ್ ಮಾಡ್ಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸ್ನೇಹಿತೆ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಪಲ್ ಬ್ಯೂಟಿ ಸಮಂತಾ ಭಾಗಿಯಾಗಿದ್ದರು. ವಿಜಯ್ ಸೇತುಪತಿ ಸೇರಿದಂತೆ ಹಲವು ಕಾಲಿವುಡ್ ಸ್ಟಾರ್‌ಗಳು ಪಾಲ್ಗೊಂಡಿದ್ದರು.

ಅದ್ದೂರಿಯಾಗಿ ಜನ್ಮದಿನ ಆಚರಣೆ ಮಾಡಿಕೊಂಡ ನಯನತಾರಾ, ಗೆಳೆಯ ವಿಘ್ನೇಶ್ ಶಿವನ್ ಕೊಟ್ಟ ಸಪ್ರೈಸ್‌ಗೆ ಸಖತ್ ಥ್ರಿಲ್ಲಾದರು. ಹೌದು, `ಕಾತು ವಾಕುಲ ರೆಂಡು ಕಾದಲ್ ಚಿತ್ರದ ಫಸ್ಟ್ ಲುಕ್‌ನ ನೋಡಿ ಖುಷಿಪಟ್ಟರು.ಕಾತು ವಾಕುಲ ರೆಂಡು ಕಾದಲ್’ ಸೂಪರ್ ಸುಂದರಿಯ ಅಪ್‌ಕಮ್ಮಿಂಗ್ ಚಿತ್ರವಾಗಿದ್ದು, ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ‘ನಾನುಂ ರೌಡಿಧಾನ್'ಚಿತ್ರದ ನಂತರ ಲವ್‌ಬರ್ಡ್ಸ್ ಜತೆಯಾಗಿ ಮಾಡ್ತಿರೋ ‘ಕಾತು ವಾಕುಲ ರೆಂಡು ಕಾದಲ್’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

Categories
ಸಿನಿ ಸುದ್ದಿ

ಅಪ್ಪು ಅಣ್ಣನಿಲ್ಲದ ನಮಗೆ ಶಿವಣ್ಣ- ಗೀತಕ್ಕನೇ ತಂದೆ- ತಾಯಿ; ಶಕ್ತಿಧಾಮದ ಮಕ್ಕಳ ಹೃದಯ ಗೀತೆಗೆ ಕಣ್ಣೀರಾಗ್ತೀರಿ ನೀವೆಲ್ಲ !

ಅಪ್ಪು ಮರೆಯಾದ್ಮೇಲೆ ದೊಡ್ಮನೆಯಲ್ಲಿ ಎಷ್ಟು ಕತ್ತಲು ಕವಿದಿದೆಯೋ, ಅದೆಷ್ಟು ದುಃಖ- ನೋವು ತುಂಬಿಕೊಂಡಿದೆಯೋ, ಅದೆಷ್ಟು ಅನಾಥಭಾವ ದೊಡ್ಮನೆಗೆ ಕಾಡುತ್ತಿದೆಯೋ, ಅದೆಷ್ಟು ಕಣ್ಣೀರು ಹನಿಯಾಗಿ ಹರಿದಿದೆಯೋ ಅಷ್ಟೇ ದುಃಖ-ನೋವು- ಸಂಕಟವನ್ನು ಶಕ್ತಿಧಾಮವೂ ಅನುಭವಿಸಿದೆ. ಶಕ್ತಿಧಾಮ ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ನಡೆಸುತ್ತಿದ್ದಂತಹ ಅನಾಥಾಶ್ರಮ. ಅಣ್ಣಾವ್ರು ಮತ್ತು ಅಮ್ಮಾವ್ರು ಹೋದ್ಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮದ ಬೆನ್ನಿಗೆ ನಿಂತರು. ವೃದ್ದರು- ಅನಾಥರು- ನಿರ್ಗತಿಕರು- ಅಶಕ್ತರು ಸೇರಿದಂತೆ ಸಾವಿರಾರು ಜನರ ಜವಬ್ದಾರಿಯನ್ನು ವಹಿಸಿಕೊಂಡರು. ಊಟ-ವಸತಿ- ಶಿಕ್ಷಣ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡರು.ಹೀಗೆ ಅಪ್ಪು ಆಸರೆಯಲ್ಲಿ ನಿಶ್ಚಿಂತರಾಗಿ ಬದುಕುತ್ತಿದ್ದ
ಜೀವಗಳಿಗೆ ದೊಡ್ಮನೆ ರಾಜಕುಮಾರನ ಸಾವು ಬರಸಿಡಿಲು ಬಡಿದಂತಾಗಿದೆ. ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವ ಮೊದಲೇ ಶಕ್ತಿಧಾಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಸರೆಯಾಗಿ ನಿಂತಿದ್ದಾರೆ.

ಹೌದು, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮವನ್ನು ಮುನ್ನಡೆಸಲಿದ್ದಾರೆ. ತಮ್ಮನ ಸಮಾಜ ಸೇವೆಗೆ ಬೆನ್ನೆಲುಬಾಗಿ ಶಿವಣ್ಣ- ರಾಘಣ್ಣ ನಿಂತ್ಕೊಳ್ಳಲಿದ್ದಾರೆ. ಹೀಗಾಗಿ, ಶಕ್ತಿಧಾಮದ ಸಕಲರೂ ನಿರಾಳರಾಗಿದ್ದಾರೆ. ಆದರೆ, ನಟಸಾರ್ವಭೌಮನಿಲ್ಲದ ನೋವು ಮಾತ್ರ ಶಕ್ತಿಧಾಮದ ಸಕಲರನ್ನೂ ಹೈರಣಾಗಿಸಿದೆ. ಕನ್ನಡ ಚಿತ್ರರಂಗ ಹಮ್ಮಿಕೊಂಡಿದ್ದ ‘ ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಕ್ತಿಧಾಮದ ಮಕ್ಕಳು ಪರಮಾತ್ಮನ ಸ್ಮರಣೆ ಮಾಡಿ ಹೃದಯ ಗೀತೆಯ ಮೂಲಕ ತಮ್ಮ ಭಾವಾಂಜಲಿಯನ್ನು ಅರ್ಪಿಸಿದರು.

ಶಕ್ತಿಧಾಮದ ಹೆಸರು ಎಷ್ಟು ಸುಂದರ…ಮುಕ್ತಿ ನೀಡುವ ನಮಗೆ ಭವ್ಯಮಂದಿರ…

ಅಂಬೆಗಾಲ ಇಡುತ ನಾವು ಬದುಕುತ್ತಿದೆವು…ಅಮ್ಮ ನಿಮ್ಮ ಶಕ್ತಿಯಿಂದ ಎದ್ದುನಿಂತೆವು…

ಕರವ ಮುಗಿದು ನಮಿಸಬೇಕು ಇಂಥ ಶಕ್ತಿಗೆ…ಜಯವಾಗಲಿ ಎಂದೆಂದೂ ಶಕ್ತಿಧಾಮಗೆ…

ಒಂದೇ ಬಳ್ಳಿ ಹೂಗಳಂತೆ ನಾವು
ಎಲ್ಲರು…ನಗುನಗುತ ಬಾಳಬೇಕು ಇಲ್ಲಿ ಎಲ್ಲರು…

ದಾರಿತೋರಿ ನಡೆಸಬೇಕು ಹಿರಿಯರೆಲ್ಲರು…ಸಹಕರಿಸಿ ನಡೆಯಬೇಕು ಕಿರಿಯರೆಲ್ಲರು…

ತಾಯಿಯಂತೆ ಗೀತಮ್ಮ ಸಲಹುತಿರುವರು…
ತಂದೆಯಂತೆ ಶಿವಣ್ಣ ಹರಸುತ್ತಿರುವರು…

ಅಪ್ಪು ಅಣ್ಣ ಎಂದೆಂದು ಮನದಲಿರುವರು…ಅವರು ಕೊಟ್ಟ ಪ್ರೀತಿಯನ್ನು ಮರೆಯಲಾರೆವು…

ಶಕ್ತಿಧಾಮದ ಏಳ್ಗೆ ನಮ್ಮದಂತೆ…ನಮ್ಮೆಲ್ಲರ ಬದುಕಿಗೆ ಆಸರೆಯಂತೆ…

ದುಡಿದವರೆಲ್ಲ ಎಂದೆಂದೂ ಶಕ್ತಿಧಾಮಕೆ…ನಡೆವರೆಲ್ಲರ ಎಂದೆಂದೂ ಶಕ್ತಿಧಾಮಕೆ…

ಇದು ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮದಲ್ಲಿ ಆಸರೆ ಪಡೆಯುತ್ತಿರುವ ಮಕ್ಕಳು ಸಾಮೂಹಿಕವಾಗಿ ಒಟ್ಟಾಗಿ ಹಾಡಿದಂತಹ ಹಾಡು. ಇದು ಕೇವಲ ಹಾಡಲ್ಲ. ಅವರೆಲ್ಲರ ಹೃದಯದ ಮಾತು- ದೊಡ್ಮನೆ ಮೇಲೆ ಅವರಿಗಿರುವ ಪ್ರೀತಿ- ಗೌರವ- ಹೆಮ್ಮೆ- ವಿಶ್ವಾಸ- ನಂಬಿಕೆ- ಭರವಸೆಯನ್ನು ತುಂಬಿಕೊಂಡಿದ್ದ ಗೀತೆ ಇದು. ಈ ಹಾಡು ಅರಸು ಆರಾಧನೆಯಲ್ಲಿ ಮಕ್ಕಳು ಹಾಡುತ್ತಿದ್ದಾಗ ಕಣ್ಣಾಲಿಗೆಗಳು ಒದ್ದೆಯಾದ್ವು, ರಾಜರತ್ನ ಅಪ್ಪು ಮೇಲಿದ್ದ ಪ್ರೀತಿ ಮತ್ತು ಗೌರವ ಒಂದು ತೂಕ ಹೆಚ್ಚಾಯ್ತು. ನಮ್ಮ ಅಪ್ಪು ನಮಗೆ ಬೇಕು ಎಂದು ಹಠ ಹಿಡಿದುಕೊಳ್ಳುವಂತಾಯ್ತು. ಆದರೆ ಏನ್ಮಾಡೋದು ಕ್ರೂರ ವಿಧಿ ರಾಜಕುಮಾರನ ಹೃದಯ ವೈಶ್ಯಾಲ್ಯತೆಯನ್ನು ನೋಡಿ ಅಸೂಹೆ ಪಟ್ಟು ಕಿತ್ಕೊಂಡಿದ್ದಾನೆ. ಅವನೇ ಬೆಟ್ಟದ ಹೂ ನ ಭೂಮಿಗೆ ಮತ್ತೆ ವಾಪಾಸ್ ಕಳುಹಿಸಿಕೊಡಬೇಕು. ದೊಡ್ಮನೆಯಲ್ಲಿ ಅಪ್ಪು ಮತ್ತೆ ಹುಟ್ಟಿ ಬರಬೇಕು.
ಇದೇ ಕೋಟಿ ಮಂದಿಯ ಕೊನೆಯ ಆಸೆ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಪ್ಪು ಸಮಾಧಿ ಬಳಿ ಬನಾರಸ್ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಬಿಡುಗಡೆ

ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ – ಸೋನಾಲ್ ಮಾಂಟೆರೊ ನಾಯಕ,‌ ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್”.
ಈ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿದೆ.

ಇದಕ್ಕೂ ಮುನ್ನ ಚಿತ್ರತಂಡ ಡಾ.ರಾಜಕುಮಾರ್, ಪಾರ್ವತಮ್ಮ ರಾಜ್‍ಕುಮಾರ್, ಅಂಬರೀಶ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ‌ ಸಮಾಧಿಗಳಿಗೆ ಪೂಜೆ ಸಲ್ಲಿಸಿದ್ದರು. ಕಂಠೀರವ ಸ್ಟುಡಿಯೋದಿಂದ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಗೂ ಪೂಜೆ ಸಲ್ಲಿಸಿ, ಲಕ್ಷ್ಮೀ ಪೂಜೆ ಮಾಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಗೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಯಾರೂ ನಿರೀಕ್ಷಿಸದಂಥಾ ದುರಂತ ಘಟಿಸದಿದ್ದರೆ ಈ ದಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೇ ಖುದ್ದಾಗಿ ಬನಾರಸ್‌ನ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ಕನ್ನು ಬಿಡುಗಡೆಗೊಳಿಸ ಬೇಕಿತ್ತು.. ದುರಾದೃಷ್ಟವಶಾತ್ ಅವರು ಮರೆಯಾಗಿದ್ದಾರೆ. ಅವರು ತೋರಿದ ಪ್ರೀತಿಯನ್ನು ಮನಸಲ್ಲಿಟ್ಟುಕೊಂಡು ಅವರ ಪುಣ್ಯಭೂಮಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಅಲ್ಲಿಂದಲೇ ಅಪ್ಪು ಖುಷಿಗೊಳ್ಳುತ್ತಾರೆ, ಹರಸುತ್ತಾರೆಂಬ ತುಂಬು ನಂಬಿಕೆ ಚಿತ್ರ ತಂಡಕ್ಕಿದೆ. ಈ ಪೂಜೆ ಮತ್ತು ಫಸ್ಟ್ ಲುಕ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಾಯಕ ನಾಯಕಿಯರಾದ ಝೈದ್ ಖಾನ್, ಸೋನಲ್ ಮಾಂಟೆರೊ, ಖ್ಯಾತ ಹಾಸ್ಯ ನಟ ಸುಜಯ್ ಮುಂತಾದವರು ಉಪಸ್ಥಿತರಿದ್ದರು. ಇಡೀ ಚಿತ್ರ ಮೂಡಿ ಬಂದಿರುವ ಅದ್ಧೂರಿತನ ಮತ್ತು ವಿಭಿನ್ನ ಕಥಾನಕದ ಸುಳಿವನ್ನು ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ನೀಡಲಿದೆ.

ಹಲವಾರು ಅದ್ಭುತಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಚಿತ್ರದ ೯೦ ಭಾಗದ ಚಿತ್ರೀಕರಣವನ್ನು ಬನಾರಸ್‌ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದೆ. ಇಲ್ಲಿನ 84 ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವುದು ಬನಾರಸ್‌ನ ಮತ್ತೊಂದು ಪ್ರಧಾನ ಅಂಶ.
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರಾಗಿರುವ ಬನಾರಸ್, ದೇಶವ್ಯಾಪಿ ಸದ್ದು ಮಾಡಲಿದೆ.

ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳೂ ಕೂಡಾ ದೇಶವ್ಯಾಪಿ ಹಬ್ಬಿಕೊಂಡಿದೆ. ಅದೆಲ್ಲಕ್ಕೂ ಕಳಶವಿಟ್ಟಂತೆ ಈಗ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಇದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಚಿತ್ರತಂಡದಲ್ಲಿ ಹೊಸಾ ಹುರುಪು ಮೂಡಿಸಿದೆ.
ಹೊಸಾ ಪ್ರತಿಭೆಯ ಆಗಮನಕ್ಕೆ ಮತ್ತು ಹೊಸತನದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಕಾಲವೂ ಇರಲಿ ಎನ್ನುವುದು ಚಿತ್ರತಂಡದ ಮನವಿ.

Categories
ಸಿನಿ ಸುದ್ದಿ

ಹೊಸಬರ ಜುಗಲ್ ಬಂದಿ! ಡಿಂಡಿಮ ಬಾರಿಸಲಿದ್ದಾರೆ ದಿವಾಕರ್!

ಜುಗಲ್ ಬಂದಿ..ಕನ್ನಡದಲ್ಲಿ ಹೀಗೊಂದು ಹೊಸ ಸಿನಿಮಾ ಸದ್ದು ಮಾಡುತ್ತಿದೆ. ಹೊಸಬರೇ ಸೇರಿ ಮಾಡ್ತಿರುವ ಜುಗಲ್ ಬಂದಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.

ಡಿಂಡಿಮ ಪ್ರೊಡಕ್ಷನ್ ನಡಿ ರೆಡಿಯಾಗ್ತಿರುವ ಜುಗಲ್ ಬಂದಿ ಸಿನಿಮಾಕ್ಕೆ ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿದ್ದಾರೆ.
ನಿರ್ದೇಶನದ ಜೊತೆಗೆ ಡಿಂಡಿಮ ಸಿನಿಮಾ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಥ್ರಿಲ್ಲರ್ ಕಥಾಹಂದರ ಹೊಂದಿರುವ ಜುಗಲ್ ಬಂದಿ ಸಿನಿಮಾಕ್ಕೆ ಪ್ರದ್ಯೋತನ್ ಸಂಗೀತ ನಿರ್ದೇಶನ ನೀಡಿದ್ದಾರೆ, ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ಜುಗಲ್ ಬಂದಿ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ.


ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್,ಕೆಲಸ ನಿರ್ವಹಿಸಲಿದ್ದಾರೆ.

ಫಸ್ಟ್ ಲುಕ್ ಮೂಲಕ ಹೊಸ ನಿರೀಕ್ಷೆ ಹುಟ್ಟಿಸಿರುವ ಜುಗಲ್ ಬಂದಿ ಸಿನಿಮಾ ಇದೇ 20 ರಂದು ಮುಹೂರ್ತ ಮೂಲಕ ಕಿಕ್ ಸ್ಟಾರ್ಟ್ ಆಗಲಿದೆ.

Categories
ಸಿನಿ ಸುದ್ದಿ

ಹೊಸಬರ ವೆಡ್ಡಿಂಗ್‌ ಗಿಫ್ಟ್!‌ ಮೇಷ್ಟ್ರು ಕ್ಲಾಪ್‌ ಮಾಡಿದ್ರು -ಪ್ರೇಮ ಚಾಲನೆ ಕೊಟ್ರು…

ವೆಡ್ಡಿಂಗ್‌ ಗಿಫ್ಟ್….‌ ಇದು ಹೊಸಬರ ಸಿನಿಮಾ. ಇದೇ ಮೊದಲ ಸಲ ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಮೊದಲ ಸನ್ನಿವೇಶಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್‌ ಮಾಡಿದರೆ, ನಟಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು

ಇದೇ ಮೊದಲ ಸಲ ನಿರ್ದೇಶನದ ಪಟ್ಟ ಅಲಂಕರಿಸಿರುವ ವಿಕ್ರಂ ಪ್ರಭು, “ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ.‌ ನಾನೇ ಕಥೆ ಬರೆದು, ನಿರ್ಮಾಣ ಮಾಡುತ್ತಿದ್ದೇನೆ. ನಿಶಾನ್ ನಾಣಯ್ಯ ಈ ಚಿತ್ರದ ನಾಯಕ. ನಾಯಕಿಯಾಗಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಪ್ರೇಮ ನಾಲ್ಕುವರ್ಷಗಳ ನಂತರ ಅವರಿಲ್ಲಿ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವಿತ್ರ ಲೋಕೇಶ್, ಯಮುನ ಶ್ರೀನಿಧಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು ಆದರೆ, ಇದು ಡಾರ್ಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ವಿಕ್ರಂಪ್ರಭು.

ಹೀರೋ ನಿಶಾನ್‌ ಮಾತನಾಡಿ, “ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು . ವಿಲಾಸ್ ಎಂಬ ಪಾತ್ರ ನಿರ್ವಹಿಸಿಸುತ್ತಿದ್ದೇನೆ ಎಂದರು ನಾಯಕ ನಿಶಾನ್ ನಾಣಯ್ಯ.

ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ. ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು.. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದರು ನಾಯಕಿ ಸೋನು ಗೌಡ.

ಉಳಿದಂತೆ ನಟಿ ಯಮುನ ಶ್ರೀನಿಧಿ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ಮಾತನಾಡಿದರು.

Categories
ಸಿನಿ ಸುದ್ದಿ

ಸಸ್ಪೆನ್ಸ್ ಗೋವಿಂದ !‌ ನ.26ಕ್ಕೆ ಸುಮಂತ್‌ ಸಿನಿಮಾ ರಿಲೀಸ್

ವಿಭಿನ್ನ ಕಥಾಹಂದರದ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶೈಲೇಂದ್ರ ಪ್ರೊಡಕ್ಷನ್ಸ್ , ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಿನಿಮಾಗೆ ತಿಲಕ್‌ ನಿರ್ದೇಶಕರು. ಅವರು ಈ ಚಿತ್ರದ ಕುರಿತು ಹೇಳುವುದಿಷ್ಟು. “ರಂಗಭೂಮಿಯಲ್ಲಿ ಅನುಭವವಿರುವ ನನಗೆ, ಹಿರಿತರೆಯಲ್ಲಿ ಮೊದಲ ಚಿತ್ರ. ರವಿ ಆರ್ ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಾರೆ. ಅವರಿಗೂ ಹಾಗೂ ಇತರ ನಿರ್ಮಾಪಕರಿಗೆ ಧನ್ಯವಾದ. ಇದು ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿದೆ ಎಂದರು ನಿರ್ದೇಶಕ ತಿಲಕ್.

ನಾನು, ಕಿಶೋರ್ ಹಾಗೂ ಶೈಲೇಂದ್ರ ಬಾಬು ಮೂವರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಉತ್ತಮ ಚಿತ್ರಗಳಿಗೆ ಮಾಧ್ಯಮದ ಸಹಕಾರ ಇದೆ ಇರುತ್ತದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಸ್ವಲ್ಪ ಹೆಚ್ಚಿರಲಿ ಎಂದರು ನಿರ್ಮಾಪಕ ರವಿ ಆರ್ ಗರಣಿ.

ನಮ್ಮ ಶೈಲೇಂದ್ರ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಾಣವಾಗಿರುವ ಎಲ್ಲಾ ಚಿತ್ರಗಳಿಗೂ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ, ಬೇರೆ ಸಂಸ್ಥೆಗಳ ಜೊತೆ ಸೇರಿ ನಿರ್ಮಾಣ ಮಾಡಿದೆ. ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನದಲ್ಲಿ ಉತ್ತಮ ಚಿತ್ರ ಮೂಡಿ ಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶೈಲೇಂದ್ರ ಬಾಬು.
.
ಮತ್ತೊಬ್ಬ ನಿರ್ಮಾಪಕ ಕಿಶೋರ್ ಎಂ ಕೆ ಮಧುಗಿರಿ ಅವರು ಉತ್ತಮ ಚಿತ್ರ ನಿರ್ಮಾಣ ಮಾಡಿದ್ದೇವೆ ನೋಡಿ ಹಾರೈಸಿ ಎಂದರು.

ನಾಯಕ ಸುಮಂತ್ ಶೈಲೇಂದ್ರ, ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಕಾಮಿಡಿ ತುಂಬಾ ಇರುತ್ತದೆ. ಇಡೀ ಸಿನಿಮಾ ನನ್ನೊಬ್ಬ‌ನಿಂದಲೇ ನಗಿಸುವುದು ಕಷ್ಟ.. ನನ್ನ ಸ್ನೇಹಿತರ ಪಾತ್ರದಲ್ಲಿ ಪವನ್ ಕುಮಾರ್ ಹಾಗೂ ವಿಜಯ್ ಚೆಂಡೂರ್ ನಟಿಸಿದ್ದು, ಮೂವರು ಸೇರಿ ಉತ್ತಮ ಮನೋರಂಜನೆ ನೀಡುತ್ತೇವೆ. ನನ್ನ ಹಿಂದಿನ ಚಿತ್ರಗಳಿಗೆ ನೀವು ನೀಡಿರುವ ಪ್ರೋತ್ಸಾಹಕ್ಕೆ ನಾನು ಆಭಾರಿ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ ಎಂದರು.

ಚಿತ್ರದಲ್ಲಿ ಅಭಿನಯಿಸಿರುವ ರೂಪೇಶ್ ಶೆಟ್ಟಿ, ಕವಿತಾ ಗೌಡ, ಪವನ್ ಕುಮಾರ್, ವಿಜಯ್ ಚಂಡೂರ್, ಸಂಗೀತ ನಿರ್ದೇಶಕ ಹಿತನ್ ಹಾಸನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ಮಾತನಾಡಿದರು.

ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಕವಿತಾ ಗೌಡ, ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನ ಶ್ರೀನಿಧಿ ಇತರರಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಕಲೆ- ಕಾರ್ಯವೈಖರಿ – ಸೇವೆ ಮುನ್ನಡೆಸೋಣ ಅಂದ್ರು ದರ್ಶನ್!

ಕನ್ನಡ ಚಿತ್ರರಂಗದ ಧ್ರುವ ತಾರೆ, ದೊಡ್ಮನೆ ನಂದಾದೀಪ, ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಅಗಲಿ ಇವತ್ತಿಗೆ ಹತ್ತೊಂಭತ್ತು ದಿನಗಳು ಕಳೆದಿವೆ. ಆದರೆ, ಅಪ್ಪು ಇನ್ನಿಲ್ಲದ ನೋವು ಮಾತ್ರ ಎಲ್ಲರಿಗೂ ದೊಡ್ಡ ಆಘಾತ ನೀಡಿದೆ. ಅಗಲಿದ ಅಪ್ಪುಗೆ ಕನ್ನಡ ಚಿತ್ರರಂಗದ ವತಿಯಿಂದ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ ವುಡ್ ಕಲಾವಿದರು ಸೇರಿದಂತೆ ಪರಭಾಷೆಯವರು ಆಗಮಿಸಿದ್ದರು. ಈ ವೇಳೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಹಿತ್ಯದ ಮೂಲಕ ಗಂಧದಗುಡಿಯ ಅರಸುನಾ ನೆನೆದರು.

ಕಾಣದ ಕೈಯಲಿ ಗೊಂಬೆಯು ನೀನು ಕಾಲದ ಎದುರಲಿ, ಕುರುಡನು ನೀನು, ಅರ್ಥವೇ ಆಗದ ಜಗದಲ್ಲಿ, ಅರ್ಥವ ಹುಡುಕಿದೆ ನೀನಿಲ್ಲಿ ಗೀಚಿದ ಬ್ರಹ್ಮ ಗೀಚುವ ಮುಂಚೆ, ಯೋಚಿಸಲೇ ಇಲ್ಲ ಹಣೆಯ ಮೇಲೆ ಕೆತ್ತಿದ ಮೇಲೆ ತಿದ್ದುವರು ಯಾರಿಲ್ಲ…

ಗೀತ ಸಾಹಿತಿ ವಿ.‌ನಾಗೇಂದ್ರ ಪ್ರಸಾದ್ ಅವರ ಬರೆದಂತಹ ಸಾಲುಗಳಿವು. ಅಪ್ಪು ಇಲ್ಲದ ಈ ಕ್ಷಣಕ್ಕೆ ಈ ಸಾಹಿತ್ಯದ ಸಾಲುಗಳು ಹೊಂದಿಕೆಯಾಗುತ್ತವೆ. ಅಂದ್ಹಾಗೇ, ಗೇಟ್ ಇಂದ ಆಚೆ ಹೋದವರು ಮತ್ತೆ ಬರ್ತೀವಿ ಎನ್ನುವ ನಂಬಿಕೆ ಇಲ್ಲ. ಎಷ್ಟು ನಿಮಿತ್ತ ಆಗೋದ್ವಿ‌ ನಾವು. ನಾವು ಈ‌ಕ್ಷಣ ಇದೀವೋ ಇಲ್ಲವೋ ಎನ್ನುವುದನ್ನು ಯೋಚನೆ ಮಾಡೋದಕ್ಕೆ ಆಗುತ್ತಿಲ್ಲ.‌ಆ ಬ್ರಹ್ಮ 47 ಅಂತ ಬರೆದ . ಆದರೆ ಅವನ ಕೈಯ್ಯಲ್ಲಿ ತಿದ್ದೋಕೆ‌ ಆಗಲಿಲ್ಲವೇನೋ ಅಪ್ಪು ಆಯಸ್ಸನ್ನು. ಯಾಕಂದ್ರೆ ಇನ್ನೂ ಜೀವನ ಇತ್ತು.

ಚಿತ್ರರಂಗದಲ್ಲಾಗಲಿ, ಪ್ರತಿಯೊಂದರಲ್ಲಿ ಸಾಧನೆ ಮಾಡುವುದು ಬಹಳಷ್ಟಿತ್ತು. ಅವರ ಮಕ್ಕಳನ್ನು ನೋಡಿದಾಗ ಅನ್ಸುತ್ತೆ ಅಪ್ಪು ಇನ್ನೂ ಮಾಡಬೇಕಾಗಿದ್ದು ಬಹಳ ಇತ್ತು ಅಂತ. ಆದರೆ ಏನ್ ಮಾಡೋದು ವಿಧಿ ಕ್ರೂರಿಯಾಗಿ ಪವರ್ ಸ್ಟಾರ್ ನ ಕಿತ್ಕೊಂಡು ಬಿಟ್ಟ. ಇನ್ಮೇಲೆ ನಾವು ಅವರ ನೆನಪಲ್ಲಿ, ಅವರು ನಡೆದ ಹಾದಿಯಲ್ಲಿ ಸಾಗುತ್ತಾ,
ಅಪ್ಪು ,ಕಾರ್ಯವೈಖರಿ ಕಲೆ ಸೇವೆ ಮುಂದುವರೆಸಿಕೊಂಡು ಹೋಗೋಣ…

error: Content is protected !!