Categories
ಸಿನಿ ಸುದ್ದಿ

ಮೋಹನ್ ಲಾಲ್ ಈಗ ವೃಷಭ! ಇದು ಪ್ಯಾನ್ ಇಂಡಿಯಾ ಚಿತ್ರ: ರಾಗಿಣಿ ಪ್ರಮುಖ ಆಕರ್ಷಣೆ

ನಂದಕಿಶೋರ್ ನಿರ್ದೇಶನದ ವೃಷಭ ಚಿತ್ರದಲ್ಲಿ ಮಲಯಾಳಂ ಚಿತ್ರ ರಂಗದ ಖ್ಯಾತ ನಟ ಮೋಹನ್ ಲಾಲ್ ಹೀರೋ. ಇದು 2024ರಲ್ಲಿ ನಾಲ್ಕು ಭಾಷೆಗಳಲ್ಲಿ ಜಗತ್ತಿನಾದ್ಯಂತ 4500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ರಾಗಿಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಭಾರತದ ಬೃಹತ್ ಆಕ್ಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ.


‘ವೃಷಭ’ ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಆಕ್ಷನ್ ಮತ್ತು ರೋಚಕ ದೃಶ್ಯಗಳು ಇರಲಿದ್ದು, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

‘ಕಾಂದಹಾರ್’ ನಂತರ ಇದೇ ಎರಡನೆಯ ಬಾರಿಗೆ ಮೋಹನ್ ಲಾಲ್ ಜೊತೆಗೆ ರಾಗಿಣಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.


ಚಿತ್ರ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ನಟ ಮೋಹನ್ ಲಾಲ್, ‘’ವೃಷಭ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದ್ದಾರೆ.


‘ವೃಷಭ’ ಚಿತ್ರವನ್ನು ಬಾಲಿವುಡ್‌ ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋದ ಸಹಯೋಗದೊಂದಿಗೆ ನಿರ್ಮಿಸುತ್ತಿದೆ.

ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.


ಬಹು ನಿರೀಕ್ಷಿತ ಈ ಚಿತ್ರವು ಮುಂದಿನ ವರ್ಷ ಜಗತ್ತಿನಾದ್ಯಂತ 4500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ತಬಲಾ ನಾಣಿಗೆ ಹೆಂಡ್ತಿ ಬೇಕಂತೆ! ಅಪಾರ್ಥ ಬೇಡ ಇದು ಸಿನಿಮಾ ವಿಚಾರ

ನಟ ತಬಲಾ ನಾಣಿಗೆ ಹೆಂಡ್ತಿ ಬೇಕಂತೆ! ಅರೇ ಇದೇನಪ್ಪಾ ಅಂತ ಪ್ರಶ್ನೆ ಮಾಡ್ಕೋಬೇಡಿ. ಇದು ಸಿನಿಮಾ ವಿಷಯ. ಹೌದು, ‘ನನಗೂ ಹೆಂಡ್ತಿ ಬೇಕು’ ಎಂಬ ಸಿನಿಮಾದಲ್ಲಿ ಅವರೇ ಮುಖ್ಯ ಅಕರ್ಷಣೆ. ಇದೊಂದು ಹಾಸ್ಯಮಯ ಸಿನಿಮಾ ಅನ್ನೋದು ಶೀರ್ಷಿಕೆಯಲ್ಲೇ ಗೊತ್ತಾಗುತ್ತೆ. ಅಂದಹಾಗೆ, ಈ ಸಿನಿಮಾಗೆ ಕೆ.ಶಂಕರ್ ನಿರ್ದೇಶಕರು.

ಹಿಂದೆ ದೇಶಪ್ರೇಮ ಸಾರುವ ಆ್ಯಕ್ಟ್ 370 ಎಂಬ ಚಿತ್ರ ನಿರ್ದೇಶಿಸಿದ್ದರು. ಆದರೆ, ಅದು ಹೇಳಿಕೊಳ್ಳುವಂತಹ ದೇಶಪ್ರೇಮದ ಕಥೆ ಎನಿಸಲಿಲ್ಲ. ನಿರೀಕ್ಷೆಯೂ ಕಾಣಲಿಲ್ಲ. ಅವರೀಗ ಕಾಮಿಡಿ ಜಾನರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಲೈರಾ ಎಂಟರ್ ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಕಥೆ ಇದು… ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ.

ಮದುವೆಯಾಗಲು ಹೊರಟು ಒಂದು ಹೆಣ್ಣು ಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿ ಜೊತೆ ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿದ್ದು, ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ.

ಇಡೀ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ವಿಜಯ್ ಸೇತುಪತಿ ಈಗ ಸಾವಿನ ವ್ಯಾಪಾರಿ! ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ರಗಡ್ ರೋಲ್

ಶಾರುಖ್ ಖಾನ್ ಅಭಿನಯದ ಹೊಸ ಚಿತ್ರ ‘ಜವಾನ್’ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಅದಕ್ಕೆ ಸರಿಯಾಗಿ ಇಂದು ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಅನ್ನು ಶಾರುಖ್ ಖಾನ್ ಬಿಡುಗಡೆ ಮಾಡಿದ್ದಾರೆ.


ವಿಜಯ್ ಸೇತುಪತಿ ಅವರನ್ನು ಚಿತ್ರದಲ್ಲಿ ‘ಸಾವಿನ ವ್ಯಾಪಾರಿ’ ಎಂದು ಶಾರುಖ್ ಬಣ್ಣಿಸಿದ್ದು, ಈ ಚಿತ್ರದಲ್ಲಿ ಅವರೊಂದಿಗೆ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಜವಾನ್’ ಚಿತ್ರದ ಪ್ರಿವ್ಯೂನಲ್ಲಿ ವಿಜಯ್ ಸೇತುಪತಿ ಅವರ ಝಲಕ್ ನೋಡುವುದಕ್ಕೆ ಸಿಕ್ಕಿತ್ತು. ಈಗ ಅವರ ಪಾತ್ರವನ್ನು ಹೊಸ ಪೋಸ್ಟರ್ ಮೂಲಕ ಪರಿಚಯಿಸಿದ್ದಾರೆ ಶಾರುಖ್ ಖಾನ್.

ಇದುವರೆಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ವೈವಿಧ್ಯಮಯ ಪಾತ್ರಗಳಿಂದ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದ ವಿಜಯ್ ಸೇತುಪತಿ, ಈಗ ಮೊದಲ ಬಾರಿಗೆ ಶಾರುಖ್ ಖಾನ್ ಎದುರು ಖಳನಟನಾಗಿ ಅಬ್ಬರಿಸಲಿದ್ದಾರೆ. ಪ್ರತಿ ಹೊಸ ಪೋಸ್ಟರ್ ಮೂಲಕವೂ ‘ಜವಾನ್’ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ.

ಮೊದಲು ಶಾರುಖ್ ಖಾನ್ ಅವರ ಬಾಲ್ಡ್ ಲುಕ್, ನಂತರ ನಯನತಾರಾ ಅವರ ಸಾಹಸಮಯ ಅವತಾರ, ಈಗ ವಿಜಯ್ ಸೇತುಪತಿ ಅವರ ಪಾತ್ರದ ಪರಿಚಯ … ಇದೆಲ್ಲದರಿಂದ ಜವಾನ್ ಈ ವರ್ಷದ ಅತೀ ನಿರೀಕ್ಷಿತ ಚಿತ್ರವಾಗಿದೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ ವರ್ಮ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ನಿತಿನ್ ಈಗ ಎಕ್ಸ್ಟ್ರಾ ಆರ್ಡಿನರಿ ಮ್ಯಾನ್! ಶ್ರೀಲೀಲಾ ನಾಯಕಿ: ಡಿ 23ಕ್ಕೆ ಸಿನಿಮಾ ರಿಲೀಸ್

ತೆಲುಗು ಚಿತ್ರರಂಗದ ಪ್ರಾಮಿಸಿಂಗ್ ಹೀರೋ‌ ನಿತಿನ್ ಅವರ 32ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವಕ್ಕಂತಂ ವಂಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್ ನ ಒಂದು‌ ಫೋಟೋದಲ್ಲಿ ನಿತಿನ್ ಗಡ್ಡ, ಕೂದಲು ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ರೆ, ಮತ್ತೊಂದು ಫೋಟೋದಲ್ಲಿ ಸ್ಟೈಲೀಶ್ ಆಗಿ ಮಿಂಚಿದ್ದಾರೆ. ಎರಡು ಶೇಡ್‌ನಲ್ಲಿ ನಾಯಕನನ್ನು ಪರಿಚಯ ಮಾಡಿಕೊಡಲಾಗಿದೆ. ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ನಿತಿನ್ ನಟಿಸಿದ್ದಾರೆ.

ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಔಟ್ ಅಂಡ್ ಔಟ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು, ಈಗಾಗಲೇ 60% ಶೂಟಿಂಗ್ ಕಂಪ್ಲೀಟ್ ಮಾಡಲಾಗಿದೆ. ಇನ್ನು, ನಿತಿನ್ ಗೆ ಜೋಡಿಯಾಗಿ ಮೋಸ್ಟ್ ಹ್ಯಾಪನಿಂಗ್ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಾರೆ ಅಂತ ಚಿತ್ರತಂಡ ಘೋಷಿಸಿತ್ತು.

ನಿತಿನ್- ರಶ್ಮಿಕಾ ನಟನೆಯ ‘ಭೀಷ್ಮ’ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಟಿಸೋದು ಕನ್ಫರ್ಮ್ ಆಗಿತ್ತು. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ರಶ್ಮಿಕಾ ಭಾಗಿ ಆಗಿದ್ದರು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದೆ.

ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿರುವ ಎಕ್ಸ್ಟ್ರಾಡಿನರಿ ಮ್ಯಾನ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಸಹ ತಿಳಿಸಿದೆ. ಇದೇ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 23ಕ್ಕೆ ಎಕ್ಸ್ಟ್ರಾಡಿನರಿ ಮ್ಯಾನ್ ಸಿನಿಮಾ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಈ ಪಟ್ಟಣಕ್ಕೆ ಐದು ಗ್ಯಾರಂಟಿ ಕೊಟ್ಟ ಚಿತ್ರತಂಡ! ಟೀಸರ್ ರಿಲೀಸ್ ಆಯ್ತು

ಈಗ ಜನರಿಗೆ ಗ್ಯಾರೆಂಟಿ ಹಾಗೂ ಭಾಗ್ಯಗಳ ಬಗ್ಗೆ ಹೆಚ್ಚು ಆಸಕ್ತಿ.
ಪ್ರಸ್ತುತ ತಮ್ಮ ಸಿನಿಮಾ ಟೀಸರ್ ಮೂಲಕ ಐದು ಗ್ಯಾರೆಂಟಿಗಳನ್ನು ನೀಡಲಿದೆ “ಈ ಪಟ್ಟಣಕ್ಕೆ ಏನಾಗಿದೆ ?” ಚಿತ್ರತಂಡ

ನೀವು ಯಾವುದೇ ಚಿತ್ರಮಂದಿರಕ್ಕೆ ಹೋದರೂ, ಚಿತ್ರ ಪ್ರಾರಂಭಕ್ಕೆ ಮೊದಲು ಬರುವ ಜಾಹಿರಾತಿನಲ್ಲಿ ಕೇಳುವ ಪದವೇ “ಈ ಪಟ್ಟಣಕ್ಕೆ ಏನಾಗಿದೆ?”. ಈಗ ಇದೇ ಪದ ಚಿತ್ರದ ಶೀರ್ಷಿಕೆ. ಶೀರ್ಷಿಕೆಯ ಮೂಲಕವೇ ಸಾಕಷ್ಟು ಕತೂಹಲ ಮೂಡಿಸಿರುವ ಈ ಚಿತ್ರ ರವಿತೇಜೊ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿದೆ. ಬಿಡುಗಡೆಗೂ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಟೀಸರ್ ಮೂಲಕ ಚಿತ್ರದ ಕುರಿತು ಐದು ಗ್ಯಾರೆಂಟಿಗಳನ್ನು ಪ್ರೇಕ್ಷಕರಿಗೆ ನೀಡುವುದಾಗಿ ನಿರ್ದೇಶಕ ರವಿ ಸುಬ್ಬರಾವ್ ತಿಳಿಸಿದ್ದಾರೆ.

ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಈ ಚಿತ್ರದಲ್ಲಿ ನಾಯಕ ತನ್ನ ವಿಲಾಸ ಜೀವನಕ್ಕಾಗಿ ಹೇಗೆ ಅನೇಕರನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಉನ್ನತ ಸ್ಥಾನಕ್ಕೆ ಏರುತ್ತಾನೆ ಎನ್ನುವದರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಕೂಡ ಕುತೂಹಲ ಭರಿತವಾಗಿ ತೋರಿಸಲಾಗಿದೆ.

ಪ್ಯಾನ್ ಇಂಡಿಯಾ ಚಿತ್ರವಾಗುವ ಎಲ್ಲ ಸಾಧ್ಯತೆಗಳನ್ನೊಳಗೊಂಡ ಯೂನಿವರ್ಸಲ್ ಅಂಶಗಳಿರುವ ಈ ಚಿತ್ರಕ್ಕೆ ರವಿ ಸುಬ್ಬ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವುದಲ್ಲದೆ, ನಾಯಕನಾಗೂ ಅಭಿನಯಿಸಿದ್ದಾರೆ. ರಾಧಿಕಾರಾಮ್ ಈ ಚಿತ್ರದ ನಾಯಕಿ. ರಿತೇಶ್ ಜೋಶಿ, ಶ್ರೀನಿಧಿ, ಸತೀಶ್ ಶೆಟ್ಟಿ , ಸೋನಾ , ದಿಶಾ , ಸಂಧ್ಯಾ ವೇಣು , ಶ್ರೀ ಕ್ರೇಜಿಮೈನ್ಡ್ಜ್ , ಬಲರಾಮ್ , ಸುಕನ್ಯಾ, ಗೋಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ರಿತೇಶ್ ಜೋಶಿ ಮತ್ತು ರವಿ ಸುಬ್ಬ ರಾವ್ ನಿರ್ಮಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನೀಡಿದ್ದಾರೆ.
ನೆಲ್ಸನ್ ಮೆಂಡಿಸ್ ಸಂಕಲನ ಹಾಗೂ ವಿನೋದ್ , ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣವಿದೆ.

“ಈ ಪಟ್ಟಣಕ್ಕೆ ಏನಾಗಿದೆ?” ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲನೇ ಭಾಗ ತೆರೆಗೆ ಬರಲು ಸಿದ್ದವಾಗಿದೆ. ಎರಡನೇ ಭಾಗದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.

Categories
ಸಿನಿ ಸುದ್ದಿ

ಜುಲೈ 24 ಹಾಸ್ಯ ಚಕ್ರವರ್ತಿ ಹುಟ್ದಬ್ಬ: ವರ್ಷವಿಡೀ ನರಸಿಂಹರಾಜು ಜನ್ಮ ಶತಮಾನೋತ್ಸವ

ಜುಲೈ 24, ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು ನರಸಿಂಹರಾಜು ಜನ್ಮ‌ ಶತಮಾನೋತ್ಸವ ಎಂಬ ಹೆಸರಿನಿಂದ ವರ್ಷವಿಡೀ ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಈ ಕಾರ್ಯಕ್ರಮಗಳ ಪೈಕಿ ಮೊದಲನೆಯದಾಗಿ ನರಸಿಂಹರಾಜು ಅವರನ್ನು ಈಗಿನ ಯುವಜನತೆಗೆ ತಲುಪಿಸುವ ಪ್ರಯತ್ನ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್ ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.

ಆನಂತರ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ(ಹಾಸ್ಯದ ಕುರಿತು) ಆಯೋಜಿಸಲಾಗುವುದು. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ದೊಡ್ಡಮಟ್ಟದ ಸಮಾರಂಭ ಆಯೋಜಿಸಿ, ಆ ಕಾರ್ಯಕ್ರಮದಲ್ಲಿ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವದ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.


. ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಯನಾಟಕಗಳನ್ನು (ನರಸಿಂಹರಾಜು ಅವರ ಅಭಿನಯದ ನಾಟಕಗಳು ಮಾತ್ರ). ಆಯೋಜಿಸಲಾಗುವುದು.

ಕರ್ನಾಟಕದ ಸುಮಾರು ಎಂಟು ಜಲ್ಲೆಗಳಲ್ಲಿ ಈಗಲೂ ನಾಟಕ ಕಂಪನಿಗಳಿದೆ. ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ಜನಪ್ರಿಯ ನಾಟಕಗಳನ್ನು ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ಆಯೋಜಿಸುವ ಯೋಜನೆಯಿದೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮಗಳ ಮೂಲಕ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಯಾರಿ ನಡೆಯುತ್ತಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಜುಲೈ 24 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು, ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ತಿಳಿಸುತ್ತಿದ್ದಾರೆ

Categories
ಸಿನಿ ಸುದ್ದಿ

ನಿಗೂಢ ಸೆಟ್ ನಲ್ಲಿ ಸಾಂಗ್ ಶೂಟಿಂಗ್: ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರೀಕರಣ ಮುಕ್ತಾಯ

ಹಯವದನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಎಲ್ಲೋ ಜೋಗಪ್ಪ ನಿನ್ನರಮನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಒಂದು ಹಾಡಿನ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿತ್ತು. ಈಗ ಆ ಹಾಡಿನ ಶೂಟಿಂಗ್ ಕೂಡ‌ ಕಂಪ್ಲೀಟ್ ಮಾಡಲಾಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಹಾಕಿದ್ದ ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್ ಚಿತ್ರೀಕರಿಸಿದೆ. ಹೌದ ಹುಲಿಯಾ ಹೌದೌದು ಎಂಬ ಹಾಡಿಗೆ ಮೋಹನ್ ಮಾಸ್ಟರ್ ಕೋರಿಯೋಗ್ರಫಿ ನೃತ್ಯ ಸಂಯೋಜನೆಯಲ್ಲಿ ನಾಯಕ ಅಂಜನ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ನಿರ್ದೇಶಕ ಹಯವದನ ಮಾತನಾಡಿ, ಹೌದ ಹುಲಿಯಾ ಎಂಬ ಮಾಸ್ ಸಾಂಗ್ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಕೊನೆಯ ದಿನದ ಚಿತ್ರೀಕರಣ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾ ಬೆಂಗಳೂರಿನಿಂದ ಶುರುವಾಗಿ ಉತ್ತರದ ಕಡೆ ಹೋಗುತ್ತದೆ. ಬಹಳಷ್ಟು ಜಾಗ. ಬಹಳಷ್ಟು ರಾಜ್ಯಗಳಲ್ಲಿ ಶೂಟ್ ಆಗಿದೆ. ಕಥೆಯ ಮೂಲ ಪಾತ್ರ ಹೋಗಿ ತಲುಪುವುದು ಹಿಮಾಲಯದಲ್ಲಿ. ಅದಕ್ಕೊಂದು ಉದ್ದೇಶ-ಕಾರಣವಿದೆ. ಈ ಚಿತ್ರ ಎಲ್ಲರಿಗೂ‌ ಕನೆಕ್ಟ್ ಆಗುತ್ತದೆ. ಎಲ್ಲೋ‌ ಜೋಗಪ್ಪ ನಿನ್ನ ಅರಮನೆ ಜನಪದ ಹಾಡಿಗೆ, ಶಿವಣ್ಣ ಜೋಗಿ ಸಿನಿಮಾದ ಹಾಡಿನ ಮೂಲಕ ಖ್ಯಾತಿ ಪಡೆದಿದೆ. ಎರಡನ್ನು ಜಸ್ಟಿಫೈ ಮಾಡಿಕೊಂಡು, ಆ ಟೈಟಲ್ ಗೆ ನಮ್ಮ ಕಥೆ ನ್ಯಾಯ ಸಲ್ಲಿಸುತ್ತದೆ ಎಂಬ ನಂಬಿಕೆ‌ ನನಗೆ ಇದೆ ಎಂದರು.

ನಾಯಕ ಅಂಜನ್ ನಾಗೇಂದ್ರ ಮಾತನಾಡಿ, ಎಲ್ಲೋ‌ ಜೋಗಪ್ಪ ನಿನ್ನ ಅರಮನೆ ಸಿನಿಮಾಗಾಗಿ‌ ಇಡೀ ಇಂಡಿಯಾ ಸುತ್ತಿದ್ದೇನೆ. ಇದೊಂದು ಜರ್ನಿ ಕಥೆ. ಅಪ್ಪ-ಮಗನ ಬಾಂಧವ್ಯ ಹೇಳುವ ಕಥೆ. ಬೆಂಗಳೂರಿನಿಂದ ಶುರುವಾದ ಜರ್ನಿ ಹಿಮಾಲಯ ತನಕ ಹೋಗುತ್ತದೆ. ಒಂದೊಳ್ಳೆ ಎಮೋಷನಲ್ ಸಿನಿಮಾ. ಯೂತ್ ಫುಲ್ ಎಂಟರ್ ಟೈನರ್ ಎಂದರು.

ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್‌. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ. ಲವ್‌, ಸೆಂಟಿಮೆಂಟ್‌, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ ವೆನ್ಯ ರೈ ನಟಿಸ್ತಿದ್ದು, ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ತಾರಾಬಳಗದಲ್ಲಿದ್ದಾರೆ.

ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯಾ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ಹೊಸಮನೆ‌ ಮೂರ್ತಿ‌ ಕಲಾ ನಿರ್ದೇಶನ, ರವಿಚಂದ್ರನ್ ಸಂಕಲನದಲ್ಲಿ ಸಿನಿಮಾ ಮೂಡಿ ಬರಲಿದೆ. ರವೀಂದ್ರ ಮುದ್ದಿ, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಎಲ್ಲಾ ಕೆಲಸ ಮುಗಿಸಿ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಹೀರೋ ಆಗಿದ್ದ ಡ್ಯಾನ್ಸ್ ಮಾಸ್ಟರ್ ಭೂಷಣ್ ಈಗ ಡೈರೆಕ್ಟರ್

ಚುಟು ಚುಟು ಅಂತೈತಿ, ಸಿಂಗಾರ ಸಿರಿಯೇ, ಕಣ್ಣು ಹೊಡಿಯಾಕ ಹೀಗೆ ಸಾಕಷ್ಟು ಹಾಡಿನ ಮೂಲಕ ನೃತ್ಯ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದವರು ಭೂಷಣ್ ಮಾಸ್ಟರ್. ನಟಸಾರ್ವಭೌಮ, ಬೆಲ್ ಬಾಟಂ, ರಾಬರ್ಟ್ ಸೇರಿದಂತೆ 50ಕ್ಕೂ ಅಧಿಕ ಹಾಡುಗಳಿಗೆ ಕೋರಿಯೋಗ್ರಾಫರ್ ಆಗಿ ದುಡಿದಿರುವ ಭೂಷಣ್, ರಾಜ ರಾಣಿ ರೋರರ್ ರಾಕೆಟ್ ಸಿನಿಮಾ ಮೂಲಕ ಹೀರೋ ಆಗಿ ಭರವಸೆ ಮೂಡಿಸಿದ್ದಾರೆ.

ಈಗ ಭೂಷಣ್ ಮಾಸ್ಟರ್ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ನೃತ್ಯ‌ ನಿರ್ದೇಶನ, ನಾಯಕನಾಗಿ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅಂದರೆ ಭೂಷಣ್ ಮಾಸ್ಟರ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಜನ್ಮದಿನದ ವಿಶೇಷವಾಗಿ ತಮ್ಮ ಮುಂದಿನ ನಡೆ ಬಗ್ಗೆ ಸಣ್ಣ ವಿಡಿಯೋ ತುಣುಕಿನ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸಖತ್ ಫನ್ ಆಗಿ, ಕ್ರಿಯೇಟಿವ್ ಆಗಿ‌ ನಿರ್ದೇಶನದ ಅಖಾಡಕ್ಕಿಳಿಯುವ ಬಗ್ಗೆ ತಿಳಿಸಿದ್ದಾರೆ.

ಆದರೆ ಸಿನಿಮಾ ಯಾವುದು? ಯಾವ ಜಾನರ್? ಹೀರೋ? ಮತ್ತಿತರ ಮಾಹಿತಿ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ಭೂಷಣ್ ಮಾಸ್ಟರ್ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಡಾಕ್ಟರ್, ಇಂಜಿನಿಯರ್ ಆಗಲು ಕೋರ್ಸ್ ಬೇಕು. ಆದರೆ ಡೈರೆಕ್ಟರ್ ಆಗಲು ಫೋರ್ಸ್ ಎಂಬ ವಿಡಿಯೋ ಝಲಕ್ ಮೂಲಕ‌ ಕಿಕ್ ಕೊಟ್ಟಿರುವ ಅವರು, ಶೀಘ್ರದಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸಮಾಚಾರ ಹಂಚಿಕೊಳ್ಳಲಿದ್ದಾರೆ.

ಈಗಾಗಲೇ ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್, ನೃತ್ಯ ನಿರ್ದೇಶನ, ನಟನೆ,‌ ನಿರ್ಮಾಣದ ಜೊತೆಗೆ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಈಗ ಅವರ ಹಾದಿಯಲ್ಲೇ ಹೆಜ್ಜೆ ಇಡುತ್ತಿರುವ ಭೂಷಣ್ ಮಾಸ್ಟರ್ ಮೇಲೆ ನಿಮ್ಮದೊಂದು ಆಶೀರ್ವಾದ ಇರಲಿ.

Categories
ಸಿನಿ ಸುದ್ದಿ

ಡ್ಯಾನ್ಸ್ ಮಾಸ್ಟರ್ ಕಲೈ ಈಗ ಡೈರೆಕ್ಟರ್: ಪ್ರಜ್ವಲ್ ದೇವರಾಜ್ ಹೀರೋ

ರಾಜಲಕ್ಷ್ಮೀ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರತಿಭಾ ಅವರು ನಿರ್ಮಾಣ ಮಾಡುತ್ತಿರುವ ಹಾಗೂ ಕಲೈ ನಿರ್ದೇಶಿಸುತ್ತಿರುವ ನೂತನ ಚಿತ್ರದ ನಾಯಕರಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ನಿರ್ಮಾಪಕಿ ಪ್ರತಿಭಾ ಮಂಗಳೂರಿನ ಮೂಲದವರು. ಇಪ್ಪತ್ತುವರ್ಷಗಳಿಂದ ರಾಜಲಕ್ಷ್ಮೀ ಟ್ರಾವಲ್ಸ್ ನಡೆಸುತ್ತಿರುವ ಇವರು ನಿರ್ಮಿಸುತ್ತಿರುವ ಮೂರನೇ ಚಿತ್ರವಿದು.

23 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ನಿರ್ದೇಶಕ ಕಲೈ , ನೃತ್ಯ ನಿರ್ದೇಶಕರಾಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮದನ್ – ಹರಿಣಿ, ಚಿನ್ನಿಪ್ರಕಾಶ್, ತ್ರಿಭುವನ್, ಫೈವ್ ಸ್ಟಾರ್ ಗಣೇಶ್ ಮುಂತಾದ ಹಿರಿಯ ನೃತ್ಯ ನಿರ್ದೇಶಕರೊಂದಿಗೆ ಕೆಲಸ‌ ಮಾಡಿರುವ ಕಲೈ, ಜನಪ್ರಿಯ ನಾಯಕರ 300ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದು ಕಲೈ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರವಿದು.

ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಹೆಚ್ಚಿನ ಭಾಗದ ‌ಚಿತ್ರೀಕರಣ ಅದ್ದೂರಿ ಸೆಟ್ ಗಳಲೇ 80 ದಿನಗಳ ಕಾಲ ನಡೆಯಲಿದೆ. ಅರು ಭರ್ಜರಿ ಫೈಟ್ ಗಳು ಹಾಗೂ ಆರು ಹಾಡುಗಳು ಈ ಚಿತ್ರದಲ್ಲಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಶಂಕರ್ ಹಾಗೂ ಚಂದ್ರಮೌಳಿ(ಕೆ.ಜಿ.ಎಫ್ ಖ್ಯಾತಿ) ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಅನಿರುದ್ಧ ಹೊಸ ಸಿನಿಮಾಗೆ ಚಾಲನೆ: ಇದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಸ್ಟೋರಿ

ತಮ್ಮ ಸಹಜ ಅಭಿನಯದ ಮೂಲಕ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ಅನಿರುದ್ಧ್ ಜತ್ಕರ್ ನೂತನ ಚಿತ್ರವೊಂದರ ನಾಯಕನಾಗಿ ನಟಿಸುತ್ತಿದ್ದಾರೆ. ಎಂ.ಆನಂದರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಇತ್ತೀಚೆಗೆ ಮೈಸೂರಿನ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ ನೆರವೇರಿದೆ.

ಭಾರತಿ ವಿಷ್ಣುವರ್ಧನ್ ಅವರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಗಸ್ಟ್ 10 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.‌

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಅವರ ನಿರ್ಮಾಣದ ಮೊದಲ ಚಿತ್ರ.

ಇದೇ ವರ್ಷ ತೆರೆಕಂಡಿದ್ದ ವಿಜಯ ರಾಘವೇಂದ್ರ ಅಭಿನಯದ “ರಾಘು” ಚಿತ್ರವನ್ನು ‌ನಿರ್ದೇಶಿಸಿದ್ದ ಆನಂದ್ ರಾಜ್ ಈ ನೂತನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆಯುತ್ತಿದ್ದಾರೆ.

ಉಳಿದಂತೆ ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ಡಿ.ಐ(ವಿಕ್ರಾಂತ್ ರೋಣ ಖ್ಯಾತಿ), ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಸೌಂಡ್ ಡಿಸೈನರ್ ಆಗಿ ಬಿ.ಆರ್ ನವೀನ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್‌(ಲವ್ ಮಾಕ್ಟೇಲ್ 2 ಖ್ಯಾತಿ) ಅಭಿನಯಿಸುತ್ತಿದ್ದಾರೆ.
ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಡಾರ್ಕ್ ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಅನಾವರಣವಾಗಲಿದೆ.

error: Content is protected !!