ವಿಜಯ್ ಸೇತುಪತಿ ಈಗ ಸಾವಿನ ವ್ಯಾಪಾರಿ! ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ರಗಡ್ ರೋಲ್

ಶಾರುಖ್ ಖಾನ್ ಅಭಿನಯದ ಹೊಸ ಚಿತ್ರ ‘ಜವಾನ್’ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಅದಕ್ಕೆ ಸರಿಯಾಗಿ ಇಂದು ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಅನ್ನು ಶಾರುಖ್ ಖಾನ್ ಬಿಡುಗಡೆ ಮಾಡಿದ್ದಾರೆ.


ವಿಜಯ್ ಸೇತುಪತಿ ಅವರನ್ನು ಚಿತ್ರದಲ್ಲಿ ‘ಸಾವಿನ ವ್ಯಾಪಾರಿ’ ಎಂದು ಶಾರುಖ್ ಬಣ್ಣಿಸಿದ್ದು, ಈ ಚಿತ್ರದಲ್ಲಿ ಅವರೊಂದಿಗೆ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ‘ಜವಾನ್’ ಚಿತ್ರದ ಪ್ರಿವ್ಯೂನಲ್ಲಿ ವಿಜಯ್ ಸೇತುಪತಿ ಅವರ ಝಲಕ್ ನೋಡುವುದಕ್ಕೆ ಸಿಕ್ಕಿತ್ತು. ಈಗ ಅವರ ಪಾತ್ರವನ್ನು ಹೊಸ ಪೋಸ್ಟರ್ ಮೂಲಕ ಪರಿಚಯಿಸಿದ್ದಾರೆ ಶಾರುಖ್ ಖಾನ್.

ಇದುವರೆಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ವೈವಿಧ್ಯಮಯ ಪಾತ್ರಗಳಿಂದ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದ ವಿಜಯ್ ಸೇತುಪತಿ, ಈಗ ಮೊದಲ ಬಾರಿಗೆ ಶಾರುಖ್ ಖಾನ್ ಎದುರು ಖಳನಟನಾಗಿ ಅಬ್ಬರಿಸಲಿದ್ದಾರೆ. ಪ್ರತಿ ಹೊಸ ಪೋಸ್ಟರ್ ಮೂಲಕವೂ ‘ಜವಾನ್’ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ.

ಮೊದಲು ಶಾರುಖ್ ಖಾನ್ ಅವರ ಬಾಲ್ಡ್ ಲುಕ್, ನಂತರ ನಯನತಾರಾ ಅವರ ಸಾಹಸಮಯ ಅವತಾರ, ಈಗ ವಿಜಯ್ ಸೇತುಪತಿ ಅವರ ಪಾತ್ರದ ಪರಿಚಯ … ಇದೆಲ್ಲದರಿಂದ ಜವಾನ್ ಈ ವರ್ಷದ ಅತೀ ನಿರೀಕ್ಷಿತ ಚಿತ್ರವಾಗಿದೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ ವರ್ಮ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Related Posts

error: Content is protected !!