ನಟ ತಬಲಾ ನಾಣಿಗೆ ಹೆಂಡ್ತಿ ಬೇಕಂತೆ! ಅರೇ ಇದೇನಪ್ಪಾ ಅಂತ ಪ್ರಶ್ನೆ ಮಾಡ್ಕೋಬೇಡಿ. ಇದು ಸಿನಿಮಾ ವಿಷಯ. ಹೌದು, ‘ನನಗೂ ಹೆಂಡ್ತಿ ಬೇಕು’ ಎಂಬ ಸಿನಿಮಾದಲ್ಲಿ ಅವರೇ ಮುಖ್ಯ ಅಕರ್ಷಣೆ. ಇದೊಂದು ಹಾಸ್ಯಮಯ ಸಿನಿಮಾ ಅನ್ನೋದು ಶೀರ್ಷಿಕೆಯಲ್ಲೇ ಗೊತ್ತಾಗುತ್ತೆ. ಅಂದಹಾಗೆ, ಈ ಸಿನಿಮಾಗೆ ಕೆ.ಶಂಕರ್ ನಿರ್ದೇಶಕರು.
ಹಿಂದೆ ದೇಶಪ್ರೇಮ ಸಾರುವ ಆ್ಯಕ್ಟ್ 370 ಎಂಬ ಚಿತ್ರ ನಿರ್ದೇಶಿಸಿದ್ದರು. ಆದರೆ, ಅದು ಹೇಳಿಕೊಳ್ಳುವಂತಹ ದೇಶಪ್ರೇಮದ ಕಥೆ ಎನಿಸಲಿಲ್ಲ. ನಿರೀಕ್ಷೆಯೂ ಕಾಣಲಿಲ್ಲ. ಅವರೀಗ ಕಾಮಿಡಿ ಜಾನರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಲೈರಾ ಎಂಟರ್ ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಕಥೆ ಇದು… ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ.
ಮದುವೆಯಾಗಲು ಹೊರಟು ಒಂದು ಹೆಣ್ಣು ಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿ ಜೊತೆ ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿದ್ದು, ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ.
ಇಡೀ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.