ನಿಗೂಢ ಸೆಟ್ ನಲ್ಲಿ ಸಾಂಗ್ ಶೂಟಿಂಗ್: ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರೀಕರಣ ಮುಕ್ತಾಯ

ಹಯವದನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಎಲ್ಲೋ ಜೋಗಪ್ಪ ನಿನ್ನರಮನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಒಂದು ಹಾಡಿನ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿತ್ತು. ಈಗ ಆ ಹಾಡಿನ ಶೂಟಿಂಗ್ ಕೂಡ‌ ಕಂಪ್ಲೀಟ್ ಮಾಡಲಾಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಹಾಕಿದ್ದ ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್ ಚಿತ್ರೀಕರಿಸಿದೆ. ಹೌದ ಹುಲಿಯಾ ಹೌದೌದು ಎಂಬ ಹಾಡಿಗೆ ಮೋಹನ್ ಮಾಸ್ಟರ್ ಕೋರಿಯೋಗ್ರಫಿ ನೃತ್ಯ ಸಂಯೋಜನೆಯಲ್ಲಿ ನಾಯಕ ಅಂಜನ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ನಿರ್ದೇಶಕ ಹಯವದನ ಮಾತನಾಡಿ, ಹೌದ ಹುಲಿಯಾ ಎಂಬ ಮಾಸ್ ಸಾಂಗ್ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಕೊನೆಯ ದಿನದ ಚಿತ್ರೀಕರಣ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾ ಬೆಂಗಳೂರಿನಿಂದ ಶುರುವಾಗಿ ಉತ್ತರದ ಕಡೆ ಹೋಗುತ್ತದೆ. ಬಹಳಷ್ಟು ಜಾಗ. ಬಹಳಷ್ಟು ರಾಜ್ಯಗಳಲ್ಲಿ ಶೂಟ್ ಆಗಿದೆ. ಕಥೆಯ ಮೂಲ ಪಾತ್ರ ಹೋಗಿ ತಲುಪುವುದು ಹಿಮಾಲಯದಲ್ಲಿ. ಅದಕ್ಕೊಂದು ಉದ್ದೇಶ-ಕಾರಣವಿದೆ. ಈ ಚಿತ್ರ ಎಲ್ಲರಿಗೂ‌ ಕನೆಕ್ಟ್ ಆಗುತ್ತದೆ. ಎಲ್ಲೋ‌ ಜೋಗಪ್ಪ ನಿನ್ನ ಅರಮನೆ ಜನಪದ ಹಾಡಿಗೆ, ಶಿವಣ್ಣ ಜೋಗಿ ಸಿನಿಮಾದ ಹಾಡಿನ ಮೂಲಕ ಖ್ಯಾತಿ ಪಡೆದಿದೆ. ಎರಡನ್ನು ಜಸ್ಟಿಫೈ ಮಾಡಿಕೊಂಡು, ಆ ಟೈಟಲ್ ಗೆ ನಮ್ಮ ಕಥೆ ನ್ಯಾಯ ಸಲ್ಲಿಸುತ್ತದೆ ಎಂಬ ನಂಬಿಕೆ‌ ನನಗೆ ಇದೆ ಎಂದರು.

ನಾಯಕ ಅಂಜನ್ ನಾಗೇಂದ್ರ ಮಾತನಾಡಿ, ಎಲ್ಲೋ‌ ಜೋಗಪ್ಪ ನಿನ್ನ ಅರಮನೆ ಸಿನಿಮಾಗಾಗಿ‌ ಇಡೀ ಇಂಡಿಯಾ ಸುತ್ತಿದ್ದೇನೆ. ಇದೊಂದು ಜರ್ನಿ ಕಥೆ. ಅಪ್ಪ-ಮಗನ ಬಾಂಧವ್ಯ ಹೇಳುವ ಕಥೆ. ಬೆಂಗಳೂರಿನಿಂದ ಶುರುವಾದ ಜರ್ನಿ ಹಿಮಾಲಯ ತನಕ ಹೋಗುತ್ತದೆ. ಒಂದೊಳ್ಳೆ ಎಮೋಷನಲ್ ಸಿನಿಮಾ. ಯೂತ್ ಫುಲ್ ಎಂಟರ್ ಟೈನರ್ ಎಂದರು.

ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್‌. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ. ಲವ್‌, ಸೆಂಟಿಮೆಂಟ್‌, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ ವೆನ್ಯ ರೈ ನಟಿಸ್ತಿದ್ದು, ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ತಾರಾಬಳಗದಲ್ಲಿದ್ದಾರೆ.

ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯಾ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ಹೊಸಮನೆ‌ ಮೂರ್ತಿ‌ ಕಲಾ ನಿರ್ದೇಶನ, ರವಿಚಂದ್ರನ್ ಸಂಕಲನದಲ್ಲಿ ಸಿನಿಮಾ ಮೂಡಿ ಬರಲಿದೆ. ರವೀಂದ್ರ ಮುದ್ದಿ, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಎಲ್ಲಾ ಕೆಲಸ ಮುಗಿಸಿ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!