ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶಿಸಿ, ನಿರ್ಮಿಸಿರುವ “ಮದಕರಿಪುರ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಈ ಸಿನಿಮಾಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ, “ಯು/ಎ” ಪ್ರಮಾಣ ಪತ್ರ ನೀಡಿದೆ. ತಾತಾ ಪ್ರೊಡಕ್ಷನ್ಸ್‌ನಲ್ಲಿ ಪಲ್ಲಕ್ಕಿ ನಿರ್ಮಿಸಿರುವ ನಾಲ್ಕನೇ ಸಿನಿಮಾ ಇದು. ಅಂದಹಾಗೆ, ಈ ಸಿನಿಮಾದ ಶೀರ್ಷಿಕೆಗೆ “ಕಿಚ್ಚ ಮಾತಾಡ್ತಾನೆ” ಎಂಬ ಅಡಿಬರಹವಿದೆ.
ಸದ್ಯ ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನೂ ಬರೆದು ನಿರ್ದೇಶಿಸಿರುವ ಪಲ್ಲಕ್ಕಿ, “ಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಆಧರಿಸಿ ಚಿತ್ರ ಮಾಡಿದ್ದಾರೆ. ಇದು ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್ ಮಿಸ್ಟ್ರಿ ಜೊತೆ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿದ ʼಗಿಡ್ಡೋಬಾ ಮಾತಾಡ್ತಾನೆ” ಕಾದಂಬರಿ ನಾಟಕ ಚಿತ್ರಕ್ಕೆ ರಾಜಾಶಿವಶಂಕರ್ ಅವರು ಛಾಯಾಗ್ರಹಣ ಮಾಡಿದರೆ, ಸ್ಯಾಮ್ ಸಂಗೀತವಿದೆ. ಗೌತಮ್ ಪಲ್ಲಕ್ಕಿ ಸಂಕಲನ ಮಾಡಿದ್ದಾರೆ.
ಡಿಫರೆಂಟ್ ಡ್ಯಾನಿ ಸಾಹಸವಿದೆ. ತ್ರಿಭುವನ್ ಅವರ ನೃತ್ಯ ನಿರ್ದೇಶನವಿದೆ. ಬಹುತೇಕ ಬೆಂಗಳೂರು, ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಕೈವಾರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್ ಅರಸ್, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈರುತ್ಯ, ಸೀನೂ ಮಾರ್ಕಾಳಿ, ವಿನಯ್ ಬಲರಾಮ್, ಅರ್ಗವಿ ರಾಯ್, ರೆಡ್ಡಿ ಹಿರಿಯೂರ್, ಸವಿತಾ ಚಿನ್ಮಯಿ, ವೆಂಕಟಾಚಲ ಸೇರಿದಂತೆ ಪಲ್ಲಕ್ಕಿ ಫಿಲಂ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿಗಳು ನಟಿಸಿದ್ದಾರೆ.
ಹಲವು ದಶಕಗಳ ಹಿಂದೆ “ಪುಷ್ಪಕ ವಿಮಾನ” ಎಂಬ ಮೂಕಿ ಚಿತ್ರ ಬಂದಿದ್ದು ಬಹುತೇಕರಿಗೆ ಗೊತ್ತೇ ಇದೆ. ಆ ನಂತರವೂ ಕನ್ನಡದಲ್ಲಿ ಮೂಕಿ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಪುಷ್ಪಕ್” ಎಂಬ ಮತ್ತೊಂದು ಮೂಕಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪುಷ್ಪಕ್” ಸಿನಿಮಾವನ್ನು ಓಂ ಪ್ರಕಾಶ್ ನಾಯಕ್ ನಿರ್ದೇಶಿಸಿದ್ದಾರೆ. ಇಲ್ಲಿ ಬರೀ ಹಾವ-ಭಾವಗಳಲ್ಲೇ ಅರ್ಥವಾಗುವಂತಹ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ ನಿರ್ದೇಶಕರು. ಕಥೆಯ ಬಗ್ಗೆ ಹೇಳುವುದಾದರೆ, ಚಿತ್ರದ ಹೀರೋ ಒಬ್ಬ ಫೋಟೋಗ್ರಾಫರ್, ಬೇರೆ ಊರಿನಿಂದ ಬಂದ ಒಬ್ಬ ಶ್ರೀಮಂತ ಯುವತಿಯನ್ನು ನೋಡಿದ ಮರುಕ್ಷಣ ತನ್ನ ಮನದಲ್ಲೇ ಪ್ರೀತಿಸಲು ತೊಡಗುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್‍ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ. ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ಮುಂದಾಗುತ್ತಾನೆ. ನಂತರ ದಿನಗಳಲ್ಲಿ ದಾರಿಗೆ ನಾಯಕ ಅಡ್ಡಿಯಾದಂತೆ ಭಾವಿಸಿ ನಾಯಕನನ್ನೇ ಕೊಲ್ಲಲು ಆತ ಸಂಚು ಹೂಡುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ.
ಇನ್ನು, ಈ ಚಿತ್ರ ಮಹದೇಶ್ವರ ಎಂಟರ್‌ಪ್ರೈಸಸ್ ಬ್ಯಾನರಡಿಯಲ್ಲಿ ನಿರ್ಮಾಣವಾಗಿದೆ. ಓಂಪ್ರಕಾಶ್‌ನಾಯಕ್ ಕಥೆ, ಚಿತ್ರಕಥೆ ಬರೆದು, ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸಿದ್ದಾರೆ. ವಿಶ್ವನಾಥ್ ಅವರ ಛಾಯಾಗ್ರಹಣವಿದೆ. ಶಂಕರ್ ಹಾಗೂ ರಾವಣ ಅವರ ಸಹ ನಿರ್ದೇಶನವಿದೆ. ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಕೃತಿಕಾ, ಚಂದ್ರು, ಅವಿನಾಶ್ ಭಾರಧ್ವಜ್, ನಾಗೇಂದ್ರರಾವ್ ಆರ್.ಎಂ, ಸವಿತಾ ಇತರರು ನಟಿಸಿದ್ದಾರೆ. ಡಿಸೆಂಬರ್ 4 ರಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಏಳು ವರ್ಷ… ಏಳು ಸಿನಿಮಾ.. ಸೋಲಿಗಿಂತ ದೊಡ್ಡ ಗೆಲುವಿನ ಪಾಲೇ ಹೆಚ್ಚು..!
-ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಗಳ ಸುದ್ದಿ. ಹೌದು, ಹೊಂಬಾಳೇ ಫಿಲಂಸ್ ಕಳೆದ ಏಳು ವರ್ಷಗಳಲ್ಲಿ ಏಳು ಚಿತ್ರಗಳನ್ನು ನಿರ್ಮಾಣ ಮಾಡಿದೆ. ಈ ಪೈಕಿ ಮೂರು ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳು ಅನ್ನುವುದು ಖುಷಿ. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಇದೀಗ ಹೊಸ ಸಾಹಸಕ್ಕೆ ಹೆಜ್ಜೆ ಇಡುತ್ತಿದೆ. ಆ ಸಾಹಸವೂ ಸಿನಿಮಾ ನಿರ್ಮಾಣದ್ದೇ ಅನ್ನುವುದು ವಿಶೇಷ. ಹೌದು, ಈ ವರ್ಷಗಳ ಅವಧಿಯಲ್ಲಿ ಭಾರತ ಮಾತ್ರವಲ್ಲ, ವಿದೇಶಗಳೂ ಇತ್ತ ಒಮ್ಮೆ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟುಕೊಟ್ಟಿರುವುದು ಈ ಸಂಸ್ಥೆಯ ಹೆಮ್ಮೆ. ಈಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಸಂಸ್ಥೆ ಮುಂದಾಗಿದೆ. ಡಿಸೆಂಬರ್ 2ರ ಮಧ್ಯಾಹ್ನ ಹೊಸ ಚಿತ್ರದ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ಹಂಚಿಕೊಳ್ಳಲಿದೆ.
ವಿಜಯ್ ಕಿರಗಂದೂರು, ನಿರ್ಮಾಪಕ
ಕಳೆದ 2014ರಲ್ಲಿ “ನಿನ್ನಿಂದಲೇ” ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ನ ನಿರ್ಮಾಣದ ಪಯಣ ಇಲ್ಲಿಯವರೆಗೆ ಯಶಸ್ಸಿನ ಮೆಟ್ಟಿಲ್ಲನ್ನು ಹತ್ತಿಕೊಂಡೇ ಬಂದಿದೆ. “ಮಾಸ್ಟರ್ ಪೀಸ್”,” ರಾಜಕುಮಾರ”, “ಕೆಜಿಎಫ್”, “ಕೆಜಿಎಫ್ 2”, “ಯುವರತ್ನ” ಚಿತ್ರದವರೆಗೂ ಹೊಂಬಾಳೆ ತನ್ನ ಅದ್ಧೂರಿ ನಿರ್ಮಾಣ ಚಿತ್ರಗಳನ್ನು ನೀಡುತ್ತ ಬಂದಿದೆ. ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈ ಏಳು ಸಿನಿಮಾಗಳ ಪೈಕಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು. ಈಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಮತ್ತೊಂದು ದೊಡ್ಡ ಸಿನಿಮಾ ಘೋಷಣೆ ಮಾಡಲು ಹೊಂಬಾಳೆ ಸಂಸ್ಥೆ ರೆಡಿಯಾಗಿದೆ.
ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರ ನಿರ್ಮಿಸುವ ಗುರಿ ಹೊಂದಿರುವ ಸಂಸ್ಥೆ, ಡಿ.೨ರಂದು ಆ ಕುರಿತಂತೆ ಅಧಿಕೃತ ಮಾಹಿತಿ ಹೊರಹಾಕಲಿದೆ. ಆ ಚಿತ್ರ ಯಾವುದು, ನಿರ್ದೇಶಕರು ಯಾರು, ಯಾರೆಲ್ಲಾ ಆ ಚಿತ್ರದಲ್ಲಿರುತ್ತಾರೆ ಎಂಬಿತ್ಯಾದಿ ಕುರಿತು ವಿಷಯ ಹೊರಬೀಳಲಿದೆ.
ಈಗಾಗಲೇ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದು, ಅದೊಂದು ಉತ್ತಮ ಬೆಳೆವಣಿಗೆ ಎನ್ನಲಾಗುತ್ತಿದೆ. ಕನ್ನಡದ “ಕೆಜಿಎಫ್” ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಅದರ ಹತ್ತು ಪಟ್ಟು ನಿರೀಕ್ಷೆ “ಕೆಜಿಎಫ್ ಚಾಪ್ಟರ್ 2” ಮೇಲೂ ಇದೆ. ಹಾಗೆಯೇ ಪುನೀತ್ ರಾಜ್ಕುಮಾರ್ ಅವರ “ಯುವರತ್ನ” ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲೇ ಮೊದಲ ಸಲ ಯಾರೂ ಮಾಡದಂತಹ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಗೆ ಡಿಸೆಂಬರ್ 2 ರವರೆಗೆ ಕಾಯಬೇಕು.
ಲಾಕ್ಡೌನ್ ಸಮಯದಲ್ಲಿ ಹೆಚ್ಚು ಉಪಯೋಗವಾಗಿದ್ದು ಆನ್ನುವುದಾದರೆ ಅದು ಸಿನಿಮಾ ಮಂದಿಗೆ. ಹೌದು, ಈ ಸಮಯದಲ್ಲಿ ಸಾಕಷ್ಟು ಜನ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಒಂದೊಳ್ಳೆಯ ಸ್ಕ್ರಿಪ್ಟ್ ಮಾಡಿಕೊಂಡಿದ್ದುಂಟು. ಅಷ್ಟೇ ಅಲ್ಲ, ಬಹುತೇಕರು ಆ ಸಮಯದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾಗಿದ್ದು ಹೌದು. “ಕೊರೊನಾ” ಕುರಿತ ಕಥೆ ಹೆಣೆದ ಜನ ಒಂದಷ್ಟು ಇದ್ದರೆ, ಲಾಕ್‌ಡೌನ್ ಸಮಯದಲ್ಲಿ ಆದಂತಹ ಸಮಸ್ಯೆಗಳ ಕುರಿತು ಕಥೆ ಮಾಡಿಕೊಂಡವರು ಒಂದಷ್ಟು ಮಂದಿ ಇದ್ದಾರೆ. ಈಗ ಇಲ್ಲೊಂದು ಹೊಸಬರ ತಂಡ, ಲಾಕ್ ಡೌನ್ ಸಮಯದಲ್ಲಿ ಆಗುವಂತಹ ಕೆಲ ವಿಷಯಗಳನ್ನು ಇಟ್ಟುಕೊಂಡು ಒಂದು ಕಥೆ ಹೆಣೆದು, ಚಿತ್ರ ಮಾಡಲು ಹೊರಟಿದೆ. ಆ ಚಿತ್ರಕ್ಕೆ “ಲವ್ ಇನ್ ಲಾಕ್‌ಡೌನ್” ಎಂದು ನಾಮಕರಣ ಮಾಡಿದೆ.
ಚಿತ್ರದ ಶೀರ್ಷಿಕೆಯೇ ಹೇಳಿದಂತೆ, ಇದೊಂದು ಲಾಕ್ ಡೌನ್ ಸಮಯದಲ್ಲಿ ನಡೆದ ದುರಂತ ಪ್ರೇಮಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಒಂದಷ್ಟು ಅಪರೂಪದ ಘಟನೆಗಳು ನಡೆದಿದ್ದು, ಆ ವೇಳೆ ನಡೆದ ಒಂದು ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ ಅನ್ನುವುದು ಚಿತ್ರತಂಡದ ಹೇಳಿಕೆ.
ಅಂದಹಾಗೆ, ಲಾಕ್ ಡೌನ್ ವೇಳೆ ನಡೆದ ಪ್ರೀತಿ, ಪ್ರೇಮ ಪ್ರಣಯದ ಕಥೆಯನ್ನು ತೆರೆಯ ಮೇಲೆ ತರಲು ಹೊರಟಿರೋದು ನಿರ್ದೇಶಕ ಮಂಜುನಾಥ್ ಬಿ.ರಾಮ್. ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಂ.ನಾರಾಯಣಸ್ವಾಮಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಮಂಜುನಾಥ್ ಬಿ.ರಾಮ್ ಅವರು ತಾವು ಕಂಡ ಪ್ರೇಮಕಥೆಯೊಂದನ್ನು ಹಾಗು ಅದರ ದುರಂತ ಅಂತ್ಯವನ್ನು ಸಿನಿಮಾ ರೂಪದಲ್ಲಿ ಹೇಳ ಹೊರಟಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ.
ಈಗಾಗಲೇ “ನಾ ಕನ್ನಡಿಗನೆಂದುಕೊಂಡು ಬಾಳು ಮಗಾ..” ಎನ್ನುವ ಗೀತೆಯನ್ನು ಸುಮಾರು 40 ಮಂದಿ ನೃತ್ಯ ಕಲಾವಿದರೊಂದಿಗೆ ಚಿತ್ರೀಕರಿಸಲಾಗಿದೆ. ಇನ್ನು ಈ ಚಿತ್ರದಲ್ಲಿ ಮಂಜುನಾಥ್ ಹೀರೋ. ಅವರಿಗೆ ಯಶಸ್ವಿ ನಾಯಕಿ. ಈ ಹಿಂದೆ ಯಶಸ್ವಿ “ಲೆಕ್ಕಾಚಾರ” ಎಂಬ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ “ಕಿಲ್ಲರ್” ವೆಂಕಟೇಶ್, ಬ್ಯಾಂಕ್ ಜನಾರ್ದನ್, ಗಣೇಶ್‍ರಾವ್, ಭಲರಾಮ್ ಪಾಂಚಾಲ, ಪಲ್ಲವಿ ರಾಜೇಂದ್ರ ಇತರರು ನಟಿಸುತ್ತಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ. ಡ್ಯಾನಿಯಲ್ ಸಂಗೀತ, ಪ್ರಸನ್ನ ನೃತ್ಯವಿದೆ. ಶಿವು ಅವರ ಸಾಹಸ ಹಾಗೂ ರಾಜೀವ್ ಕೃಷ್ಣ ಅವರು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಗಜೇಂದ್ರಗಡ ಸುತ್ತಮುತ್ತ ಮೂರು ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ಮಾಡಿಕೊಂಡಿದೆ.
ಅವಳು ಮತ್ತು ಅವರು- ತ್ರಿಕೋನ ಪ್ರೇಮಕಥೆಯಲ್ಲಿ ಕೆಲಸ ಗಿಲಸ ಇತ್ಯಾದಿ..
ಪುರುಷರು ಮನೆಯಲ್ಲಿರಬಾರದು. ಹಾಗಂತ, ಹೊರಗೆ ಸುತ್ತಾಡಬೇಕು ಅಂತಲ್ಲ. ಸಣ್ಣದಾದರೂ ಪರವಾಗಿಲ್ಲ ಒಂದು ಉದ್ಯೋಗ ಅನ್ನೋದು ಇರಬೇಕು. ಅದಕ್ಕಾಗಿಯೇ ಒಂದು ಗಾದೆ ಇದೆ. “ಉದ್ಯೋಗಂ ಪುರುಷ ಲಕ್ಷಣಂ” ಅಂತ. ಈಗ ಇದೇ ಹೆಸರಿನಲ್ಲೊಂದು ಸಿನಿಮಾ ಕೂಡ ಆಗಿದೆ. ಹೌದು, ಇಲ್ಲೀಗ ಹೇಳ ಹೊರಟಿರುವುದು ಕೂಡ “ಉದ್ಯೋಗಂ ಪುರುಷ ಲಕ್ಷಣಂ” ಬಗ್ಗೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ತಮ್ಮ ಚಿತ್ರದ ಬಗ್ಗೆ ಹೇಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಆಗಮಿಸಿತ್ತು. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಚಿತ್ರ. ಈ ಚಿತ್ರದ ಮೂಲಕ ಸುಜಿತ್ ಕುಮಾರ್ ಕೆ.ಎಂ. ಕುಡ್ಲೂರು ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯೂ ಅವರದೇ. ತಮ್ಮ ಚೊಚ್ಚಲ ಸಿನಿಮಾ ಕುರಿತು ಸುಜಿತ್ ಕುಮಾರ್ ಹೇಳಿದ್ದಿಷ್ಟು.
ಸುಜಿತ್, ನಿರ್ದೇಶಕ
“ನನಗೆ ನಿರ್ದೇಶನ ಅನ್ನೋದು ತುಂಬ ಆಸಕ್ತಿಯ ವಿಷಯ. ಅದಕ್ಕಾಗಿ ನಾನು ಎಂಟು ವರ್ಷಗಳ ಕಾಲ ಅಲೆದಾಟ ನಡೆಸಿದೆ. ಒಂದು ಐಡೆಂಟಿಟಿ ಸಿಕ್ಕರೆ ಮಾತ್ರ ನಾವು ಏನು ಅಂತ ತೋರಿಸಲು ಸಾಧ್ಯ. ಹೀಗೆ ಒಮ್ಮೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾಗೆ ಹೋದೆ. ಸಿಗಲಿಲ್ಲ. ಒಂದಷ್ಟು ಸಮಯ ಹೋಗಿ ಬಂದು ಮಾಡಿದೆ. ಒಮ್ಮೆ ಸಿಕ್ಕರು. ಆಗ ನನ್ನ ಆಸೆ ಹೊರಹಾಕಿದೆ. ಚಿತ್ರಕಥೆ, ಕಟ್ಟುವ ವಿಭಾಗದಲ್ಲಿ ತರಬೇತಿ ಪಡೆದೆ. ಅವರ ಜೊತೆಗೆ ನಾನು “ಇಷ್ಟಕಾಮ್ಯ” ಸಿನಿಮಾದಲ್ಲೂ ಕೆಲಸ ಮಾಡಿದೆ. ನಂತರ ಹೊಸದೊಂದು ಸಿನಿಮಾ ಮಾಡಬೇಕು ಅಂತ ಹೊರಟೆ. ಪವನ್, ವೆಂಕಟೇಶ್, ಉಮೇಶ್ ನನ್ನ ಪ್ರಯತ್ನಕ್ಕೆ ಸಾಥ್ ಕೊಟ್ಟರು. ಈ ಚಿತ್ರ ಶುರುವಾಯ್ತು. ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ನಾಲ್ವರು ಹುಡುಗರ ಸುತ್ತ ನಡೆಯುವ ಕಥೆ. ರೊಮ್ಯಾನ್ಸ್, ಕಾಮಿಡಿ ಹಾಗು ಸಸ್ಪೆನ್ಸ್ ಜೊತೆಗೆ ಒಂದಷ್ಟು ವಿಷಯಗಳನ್ನು ಹೊಂದಿದೆ. ಸರಳ ತ್ರಿಕೋನ ಪ್ರೇಮಕಥೆ ಇಲ್ಲಿದ್ದು, ಕಾಯಕವೇ ಕೈಲಾಸ ಎಂಬುದನ್ನು ಹೇಳಲಾಗಿದೆʼ ಎನ್ನುತ್ತಾರೆ ಸುಜಿತ್.
ರಾಕೇಶ್, ನಿರ್ಮಾಪಕ
ನಾಯಕ ರಾಜ್ ಚರಣ್ ಅವರು ಇಲ್ಲಿಗೆ ಬರಲು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಕಾರಣವಂತೆ. ಅವರಿಲ್ಲಿ ಅರುಣ್ ಎಂಬ ಪಾತ್ರ ಮಾಡುತ್ತಿದ್ದು, ಅದೊಂದು ರೀತಿ ಲವ್ವರ್ ಬಾಯ್ ಪಾತ್ರವಂತೆ. ನನಗಿಲ್ಲಿ ಡ್ಯಾನ್ಸ್ ಕಷ್ಟವಿತ್ತು. ವಿಜಯ್ ಮಾಸ್ಟರ್ ಎಲ್ಲವನ್ನೂ ಚೆನ್ನಾಗಿ ಹೇಳಿಕೊಟ್ಟಿದ್ದಕ್ಕೆ ಸುಲಭವಾಯ್ತು. ಒಂದೊಳ್ಳೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂದರು ರಾಜ್‌ಚರಣ್.
ರಾಜ್ ಚರಣ್
ನಿರ್ಮಾಪಕ ರಾಕೇಶ್ ಚೆಲುವರಾಜ್ ಅವರಿಗೆ ಇದು ಮೊದಲ ಅನುಭವ. ಅವರಿಗೆ ನಿರ್ದೇಶಕ ಸುಜಿತ್ ಒಳ್ಳೆಯ ಗೆಳೆಯರು. ಅವರು ಒಮ್ಮೆ ಕಥೆ ಬಗ್ಗೆ ಚರ್ಚೆ ನಡೆಸಿದಾಗ, ಸಿನಿಮಾ ಮಾಡುವ ಮನಸ್ಸು ಮಾಡಿದರಂತೆ. ಚಿತ್ರದ ಕಥೆ ಮತ್ತು ಹಾಡು ಎಲ್ಲವೂ ಸೊಗಸಾಗಿದೆ. ಒಳ್ಳೆಯ ತಂಡ ಚೆನ್ನಾಗಿ ಕೆಲಸ ಮಾಡಿದೆ. ಪ್ರೇಕ್ಷಕರಿಗೆ ನಮ್ಮ ಸಿನಿಮಾ ಇಷ್ಟವಾಗುವ ನಂಬಿಕೆ ಇದೆʼ ಎಂಬುದು ರಾಕೇಶ್ ಚೆಲುವರಾಜ್ ಮಾತು.
ಸತ್ಯ, ಸಂಗೀತ ನಿರ್ದೇಶಕ
ಸಂಗೀತ ನಿರ್ದೇಶಕ ಸತ್ಯ ರಾಧಾಕೃಷ್ಣ ಮತ್ತು ಜತಿನ್ ದರ್ಶನ್ ಸಂಗೀತ ನೀಡಿದ್ದಾರೆ. ತಮ್ಮ ಸಂಗೀತದ ಬಗ್ಗೆ ಮಾತನಾಡಿದ ಸತ್ಯ ರಾಧಾಕೃಷ್ಣ, “ಇಲ್ಲಿ ಎರಡು ಹಾಡುಗಳಿವೆ. ನಾನು “ವಿರೂಪ” ಚಿತ್ರದಲ್ಲಿ ಕೆಲಸ ಮಾಡುವಾಗ, ನಿರ್ದೇಶಕರ ಪರಿಚಯವಾಯ್ತು. ಅದು ಈ ಸಿನಿಮಾ ಆಗುವರೆಗೆ ಬಂದು ನಿಂತಿದೆ. ಒಂದು ಹಾಡನ್ನು ನಾನು ಹಾಡಿದ್ದೇನೆ. ಇನ್ನೊಂದು ಚೇತನ್ ನಾಯಕ್ ಹಾಡಿದ್ದಾರೆ ಎಂದು ವಿವರ ಕೊಟ್ಟರು.
ರಿಧಿ ರಾವ್
ನಾಯಕಿ ರಿಧಿರಾವ್ ಅವರಿಲ್ಲಿ ಪೃಥ್ವಿ ಎಂಬ ಪಾತ್ರ ನಿರ್ವಹಿಸಿದ್ದಾರಂತೆ. ಇಬ್ಬರು ನಾಯಕರ ಜೊತೆ ಸಾಗುವ ಕಥೆಯಲ್ಲಿ ಪ್ರೀತಿಯ ಅಂಶಗಳಿವೆ ಎಂದರೆ, ಮತ್ತೊಬ್ಬ ಹೀರೋ ಸಾವನ್ ಸಿಂಗ್ ಠಾಕೂರ್, ಇಲ್ಲಿ ಚಂದು ಎಂಬ ಮುಗ್ಧ ಹುಡುಗನ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು. ನೃತ್ಯ ನಿರ್ದೇಶಕ ವಿಜಯ್ ಅವರು ಎರಡು ಸಾಂಗ್‌ಗಳಿಗೆ ನೃತ್ಯ ನಿರ್ದೇಶನ ಮಾಡಿದರ ಬಗ್ಗೆ ಹೇಳಿಕೊಂಡರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಈ ವರ್ಷದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಪುನೀತ್‌ರಾಜಕುಮಾರ್ ಅಭಿನಯದ “ಯುವರತ್ನ”. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಚಿತ್ರದ ಹೊಸದೊಂದು ಪ್ರೋಮೋ ನ.27ರ ಶುಕ್ರವಾರ ಸಂಜೆ ಬಿಡುಗಡೆಯಾಗಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ “ಯುವರತ್ನ” ಚಿತ್ರದ ‘ಪವರ್ ಆಫ್ ಯೂಥ್” ಹೆಸರಿನ ಈ ಪ್ರೋಮದಲ್ಲಿ ಯುವರತ್ನ ಸಿನಿಮಾದ ಹಾಡಿನ ತುಣುಕು ಇದೆ. ಈ ತುಣುಕಲ್ಲಿ ಪುನೀತ್‌ರಾಜ್‌ಕುಮಾರ್ ಸಖತ್ ಯೂಥ್‌ಫುಲ್ ಆಗಿ ಮಿಂಚಿದ್ದಾರೆ. ಗಿಟಾರ್ ಹಿಡಿದುಕೊಂಡು ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪುನೀತ್, “ಹೆಸರು ಮಾಡು ಹಸಿರಾಗೊ ಹಾಗೆ, ಉಸಿರು ಹೋದರೂ ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂಥ್’ ಎಂದು ಹಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಪ್ರೋಮೋದಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕೂಡ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಇದು ಒಂದು ಝಲಕ್. ಚಿತ್ರದ ಈ ಹಾಡು ಮತ್ತು ವಿಡಿಯೋ ಡಿಸೆಂಬರ್ 2ಕ್ಕೆ ಬಿಡುಗಡೆ ಆಗಲಿದೆ ಎಂಬುದು ಚಿತ್ರತಂಡದ ಮಾತು.
ಈ ಚಿತ್ರಕ್ಕೆ ವಿಜಯ್ ಕಿರಗಂದೂರ್ ನಿರ್ಮಾಪಕರು. ಪುನೀತ್ ರಾಜಕುಮಾರ್ ಅವರಿಗೆ ಚಿತ್ರದಲ್ಲಿ ಸಾಯೇಷಾ ನಾಯಕಿಯಾಗಿದ್ದಾರೆ. ಧನಂಜಯ್, ದಿಗಂತ್, ಸಾಯಿಕುಮಾರ್, ಸುಧಾರಾಣಿ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಯುವರತ್ನ” ಜನವರಿ 21ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಪಕ್ಕಾ ತಯಾರಿಯೊಂದಿಗೆ ಒಂದಷ್ಟು ಪ್ರಯೋಗದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಗುರುತಿಸಿಕೊಳ್ಳಲು ಬರುತ್ತಿರೋ ಹೊಸ ನಿರ್ದೇಶಕ ಯುವಧೀರ. ಹೌದು, ಈ ಯುವಧೀರ ಅವರಿಗೆ ಸಿನಿಮಾರಂಗ ಹೊಸದಲ್ಲ. ಕಳೆದ ಒಂದುವರೆ ದಶಕದಿಂದಲೂ ಸಿನಿಮಾರಂಗದಲ್ಲಿ ಜೀವಿಸಿದ್ದಾರೆ. ಈಗಲೂ ಜೀವಿಸುತ್ತಿದ್ದಾರೆ. ಈಗ ಹೊಸ ಸುದ್ದಿಯೆಂದರೆ, ಹೊಸತನ ಇಟ್ಟುಕೊಂಡಿರುವ ಕಥೆ ಹೆಣೆದು, ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅವರ ಕನಸಿಗೆ ನಿರ್ಮಾಪಕ ಸುರೇಶ ಬಿ. ಅವರು ಬಣ್ಣ ತುಂಬಲು ಸಜ್ಜಾಗಿದ್ದಾರೆ.
ಯುವಧೀರ, ನಿರ್ದೇಶಕ
ಇಬ್ಬರಿಗೂ ಇದು ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ಒಂದಷ್ಟು ಗಮನ ಸೆಳೆಯು ಅಂಶಗಳೊಂದಿಗೆ ಕನ್ನಡ ಸಿನಿಪ್ರೇಮಿಗಳಿಗೆ ಸಿನಿಮಾ ಕಟ್ಟಿಕೊಡುವ ಉದ್ದೇಶ ಇವರಿಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಯುವಧೀರ, ತಮ್ಮ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲು ತಯಾರಿ ಮಾಡಿಕೊಂಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ನವೆಂಬರ್ ೨೯ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕ ಯುವಧೀರ ಅವರು, ಶೀರ್ಷಿಕೆಗಾಗಿಯೇ ಒಂದು ಪ್ರೋಮೋ ಮಾಡಿದ್ದಾರೆ. ಅಂದು ಪ್ರೋಮೋ ಮೂಲಕ ಚಂದದ ಶೀರ್ಷಿಕೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.
ಅಷ್ಟಕ್ಕೂ ಯುವಧೀರ ಅವರ ಶೀರ್ಷಿಕೆಯೇ ಒಂದಷ್ಟು ವಿಭಿನ್ನವಾಗಿದೆ. ಕಥೆಗೆ ಪೂರಕವಾಗಿಯೇ ಅವರು ಆ ಶೀರ್ಷಿಕೆ ಇಟ್ಟಿದ್ದಾರಂತೆ. ಆ ಶೀರ್ಷಿಕೆ ಕುರಿತು ಹೇಳುವ ಯುವಧೀರ, ಎಲ್ಲರಿಗೂ ಸುಲಭವೆನಿಸುವ, ಎಲ್ಲರ ಬಾಯಲ್ಲೂ ಸದಾ ಬರುವ ಪದವನ್ನೇ ಇಟ್ಟುಕೊಂಡು ಶೀರ್ಷಿಕೆ ಇಟ್ಟಿದ್ದಾರೆ. ಆ ಶೀರ್ಷಿಕೆಗಾಗಿ ಒಂದು ಚಂದದ ಟೈಟಲ್ ಟೀಸರ್ ಮಾಡಿಕೊಂಡಿರುವ ಯುವಧೀರ, ಜನವರಿ ಬಳಿಕ ಚಿತ್ರೀಕರಣಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ.
ಸುರೇಶ, ನಿರ್ಮಾಪಕರು
ಅಂದಹಾಗೆ, ಈ ಚಿತ್ರವನ್ನು ಸರ್ವಮಂಗಳ ಸುರೇಶ ಅವರು ಅರ್ಪಿಸುತ್ತಿದ್ದು, ಶ್ರೀನಿಧಿ ಪಿಕ್ಚರ್ಸ್ ಮೂಲಕ ತಯಾರಾಗುತ್ತಿದೆ. ಯುವಧೀರ ಅವರು, ಇಷ್ಟು ವರ್ಷಗಳ ಅನುಭವಗಳನ್ನು ಒಟ್ಟಿಗೆ ಸೇರಿಸಿಕೊಂಡು ಒಂದು ಚಂದದ ಈ ಸಿನಿಮಾಗೆ ಕೈ ಹಾಕಿದ್ದಾರೆ. ಇದೊಂದು ಡಾರ್ಕ್ ಹ್ಯೂಮರ್ ಸೆಟೈರ್ ಕಾಮಿಡಿ ಚಿತ್ರ. ಇದರೊಂದಿಗೆ ರೊಮ್ಯಾನ್ಸ್, ಥ್ರಿಲ್ಲರ್, ಡ್ರಾಮಾ, ಕ್ರೈಮ್, ಸ್ಟಂಟ್ಸ್ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಇದು ಒಂದೇ ಜಾನರ್‌ಗೆ ಸೇರುವ ಸಿನಿಮಾ ಅಲ್ಲ ಅನ್ನುವ ಅವರು, ಹಲವು ಜಾನರ್‌ಗಳ ಸಮ್ಮಿಶ್ರಣ ಇಲ್ಲಿದೆ. ಹಾಗಾಗಿ ಇದನ್ನು ಹೊಸತನದ ಸಿನಿಮಾ ಎನ್ನಬಹುದು ಎಂಬುದು ಯುವಧೀರ ಮಾತು.
ಈ ಚಿತ್ರಕ್ಕೆ ಇನ್ನೂ ನಾಯಕ, ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ಆಗಿಲ್ಲ. ಆದರೆ, ತಾಂತ್ರಿಕ ವರ್ಗ ಅಂತಿಮವಾಗಿದೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತವಿದೆ. ಮರಿಸ್ವಾಮಿ ಅವರ ಸಂಕಲನವಿದೆ. ಕುಮಾರ್ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸದ್ಯಕ್ಕೆ ಟೈಟಲ್ ಟೀಸರ್ ಮೇಕಿಂಗ್‌ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.
ಝೇಂಕಾರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಹಾಡಿಗೆ ಮೆಚ್ಚುಗೆ
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆ ಸಾಲಿಗೆ ಈಗ “ರಾಣಿಜೇನು” ಎಂಬ ರೊಮ್ಯಾಂಟಿಕ್ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಹೌದು, ಸಂಗೀತ ಕ್ಷೇತ್ರದಲ್ಲಿ ತಮ್ಮದ್ದೊಂದು ಛಾಪು ಮೂಡಿಸಿರುವ ಝೇಂಕಾರ್ ಮ್ಯೂಸಿಕ್ ಸಂಸ್ಥೆ ಇತ್ತೀಚೆಗೆ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ “ರಾಣಿಜೇನು” ಎಂಬ ಹೆಸರಿನ ರೊಮ್ಯಾಂಟಿಕ್ ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ. ಸೋನಿ ಆಚಾರ್ಯ ಹಾಗೂ ಪೂಜಾ ನಾಣಯ್ಯ ನಟಿಸಿರುವ ಈ ರೊಮ್ಯಾಂಟಿಕ್ ಆಲ್ಬಂಗೆ ಈಗಾಗಲೇ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.
ಈ ಹಾಡನ್ನು ಶ್ರೀರಂಗಪಟ್ಟಣ, ಕರಿಘಟ್ಟ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ಒದಗಿಸುವುದರ ಜೊತೆಗೆ ನಟಿಸಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋ ಅಲ್ಬಂಗೆ ರಾಮ್‌ಸಂತೋಷ್ ಅವರು ಛಾಯಾಗ್ರಹಣ ಮಾಡಿದರೆ, ಶಶಾಂಕ್ ಮುರಳೀಧರನ್ ಸಂಕಲನವಿದೆ. ಶ್ರೀಧರ್ ಶ್ರೀ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಝೇಂಕಾರ್ ಮ್ಯೂಸಿಕ್ ಯುಟ್ಯೂಬ್‌ನಲ್ಲಿ “ರಾಣಿಜೇನು” ಮೆಚ್ಚುಗೆ ಪಡೆಯುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ “ಆ ಒಂದು ಕನಸು” ಚಿತ್ರವೂ ಒಂದು ರಂಗು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ದಿಲೀಪ್ ಬಿ.ಎಂ. ಅವರು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರ “ಆ ಒಂದು ಕನಸು”. ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟ ಎಸ್. ಉಮೇಶ್ ಅವರು ಬಿಡುಗಡೆ ಮಾಡಿರುವುದು ವಿಶೇಷ. ಇವರೊಂದಿಗೆ ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ ಹಾಗು ಹಿರಿಯ ಕಂಠದಾನ ಕಲಾವಿದೆ ಆಶಾ ಅವರೂ ಸೇರಿಕೊಂಡು ಬಿಡುಗಡೆಗೆ ಸಾಥ್ ನೀಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಷ್ಣು ನಾಚನೇಕರ್ ನಿರ್ದೇಶನ ಮಾಡುತ್ತಿರುವುದು ವಿಶೇಷ. ಡಿಸೆಂಬರ್ ೩ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ವಿಷ್ಣು ನಾಚನೇಕರ್ ಕನ್ನಡದ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಕಿರುತೆರೆಯ ಹಲವು ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. “ಶನಿ” ಧಾರಾವಾಹಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಷ್ಣು ನಾಚನೇಕರ್ ಅವರು, “ಆ ಒಂದು ಕನಸು” ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಉದಯಂ ಕಥೆ ಬರೆದರೆ, ಮಳವಳ್ಳಿ ಸಾಯಿಕೃಷ್ಣ ಅವರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ಅಭಿಷೇಕ್ ಜೆ. ರಾಯ್ ಸಂಗೀತವಿದೆ. ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಮಾಡಿದರೆ, ಹೈಟ್ ಮಂಜು, ಸ್ಟಾರ್ ಗಿರಿ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ನಾಲ್ಕು ಫೈಟ್ಸ್ ಇದೆ. ಬೆಂಗಳೂರು, ಸಾಗರ, ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.
ಅಂದಹಾಗೆ, ಈ ಚಿತ್ರಕ್ಕೆ ವಿಶ್ವಾಸ್ ಹೀರೋ. ಅವರಿಗೆ ಇದು ಎರಡನೆ ಸಿನಿಮಾ. ಇವರು ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಅಮಿತ್, ಗಿರೀಶ್ ಶಿವಣ್ಣ, ರಮೇಶ್ ಭಟ್.
ಗಿರೀಜಾ ಲೋಕೇಶ್, ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾರಾವ್, ಜಯಶ್ರೀ, ನಾರಾಯಣ ಸ್ವಾಮಿ ಇತರರು ನಟಿಸುತ್ತಿದ್ದಾರೆ.
ಯಾವುದೇ ಭಾಷೆಯ ಚಿತ್ರವಿರಲಿ, ಪೈರಸಿ ಕಾಟ ತಪ್ಪಿದ್ದಲ್ಲ. ಇದು ನಿನ್ನೆ ಮೊನ್ನೆಯ ಸಮಸ್ಯೆಯಂತೂ ಅಲ್ಲ. ಹಲವು ವರ್ಷಗಳಿಂದಲೂ ಇದೆ. ಈ ಪೈರಸಿ ಎಂಬ ಗುಮ್ಮನಿಗೆ ಸಾಕಷ್ಟು ಸಲ ಗುದ್ದಲು ಪ್ರಯತ್ನ ಪಟ್ಟರೂ, ಪದೇ ಪದೇ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಇದರಿಂದಾಗಿ ಯಾವುದೇ ಸಿನಿಮಾಗಳು ಚಿತ್ರಮಂದಿರ ಹೊಕ್ಕರೂ, ಅಲ್ಲಿ ಪೈರಸಿ ಎಂಬ ಪೆಡಂಭೂತದಿಂದಾಗಿ ನಿರ್ಮಾಪಕ ಹೈರಾಣಾಗುತ್ತಿದ್ದಾನೆ. ಈ ಪೈರಸಿ ತಡೆಗೆ ಹೊಸ ತಾಂತ್ರಿಕತೆಯ ಅಗತ್ಯವಿತ್ತು. ಆದೀಗ ಈಡೇರಿದೆ. ಹೌದು, ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಹಾಗೂ ರಾಹುಲ್‌ರೆಡ್ಡಿ ಮತ್ತು ತಂಡ ಜೊತೆಗೂಡಿ ಪೈರಸಿ ತಡೆಗಟ್ಟುವ ಹೊಸ ತಾಂತ್ರಿಕತೆಯನ್ನು ಹೊರತಂದಿದ್ದು, ಅದಕ್ಕೆ ಚಾಲನೆಯೂ ಸಿಕ್ಕಿರುವುದು ವಿಶೇಷ.
ಕಾಂಟ್ರಫೈನ್ಸ್ ಸಂಸ್ಥೆಯ “ಫೆಂಡೆ” ಹೆಸರಿನ ಸಾಫ್ಟ್‌ವೇರ್‌ಗೆ ಪುನೀತ್‌ರಾಜಕುಮಾರ್ ಅವರು ಚಾಲನೆ ನೀಡುವ ಮೂಲಕ, ಹೊಸ ತಾಂತ್ರಿಕತೆಯಲ್ಲಿ ಮಾತ್ರ ಈಗ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೈರೆಸಿ ಅನ್ನುವುದು ಹೊಸದಲ್ಲ. ಅದು ವಿಡಿಯೋ ಜಮಾನ ಬಂದಾಗಿನಿಂದಲೂ ಇದೆ. ಈಗಂತೂ ಡಿಜಿಟಲ್ ಹವಾ. ಅದು ಹೆಚ್ಚಾಗುತ್ತಿದ್ದಂತೆ ಸಿನಿಮಾ ಮೇಕರ್ಸ್ ಸಂಖ್ಯೆಯೂ ಹೆಚ್ಚುತ್ತಿದೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟು ಪೈರೆಸಿ ಮಾಡುತ್ತಿದ್ದಾರೆ. ಚಿತ್ರಮಂದಿರಗಳ ಬಳಿಕ ಅನೇಕ ಸಿನಿಮಾಗಳು ಓಟಿಟಿ ಫ್ಲಾಟ್‌ಫಾರಂನತ್ತ ಹೋಗುತ್ತಿವೆ. ಈಗ ಯುವ ಬಳಗ ಸೇರಿ, ಈ ಹೊಸ ತಾಂತ್ರಿಕತೆ ಕಂಡುಹಿಡಿದಿದೆ. ಅವರ ಈ ಹೊಸ ಸಾಫ್ಟ್‌ವೇರ್ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರಿಗೂ ಉಪಯೋಗವಾಗಲಿ ಎಂದರು.
ನಟಿ ಶೃತಿ ಕೂಡ ಈ ಹೊಸ ತಾಂತ್ರಿಕತೆಯನ್ನು ಪ್ರೀತಿಯಿಂದಲೇ ಸ್ವಾಗತಿಸಿದರು. ಚಿತ್ರರಂಗದ ಅನ್ನದಾತ ನಿರ್ಮಾಪಕ. ಅವರ ಉಳಿವಿಗೆ ಮತ್ತು ಸಿನಿಮಾಗಳ ಉಳಿವಿಗೆ ಈ ಹೊಸ ತಾಂತ್ರಿಕತೆ ಬಂದಿದೆ. ಪೈರಸಿ ತೊಲಗಿಸಲು ಈ ಯುವಕರ ತಂಡ ನಿಂತಿದೆ. ನಮ್ಮ ಕನ್ನಡಿಗರು ಈ ಹೊಸ ತಾಂತ್ರಿಕತೆಯ ಹಿಂದೆ ನಿಂತಿರೋದು ಹೆಮ್ಮೆಯ ವಿಷಯ ಎಂದರು.
ಕಾಂಟ್ರಫೈನ್ಸ್ ಸಂಸ್ಥೆಯ ಫೆಂಡೆ ಸಾಫ್ಟ್‌ವೇರ್ ಪೈರೆಸಿ ತಡೆಯುವ ಹೊಸ ತಾಂತ್ರಿಕತೆ ಹೊಂದಿದೆ. ಇದನ್ನು ಚಿತ್ರಮಂದಿರಗಳಲ್ಲಿ ಅಳವಡಿಸಿದರೆ, ಪ್ರೇಕ್ಷಕ ಮೊಬೈಲ್‌ನಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆಗುತ್ತದೆ. ಆದರೆ ಸೌಂಡ್ ಮಾತ್ರ ರೆಕಾರ್ಡ್ ಆಗುವುದಿಲ್ಲ. ಆತ ಎಲ್ಲಿ ಕುಳಿತು ಪೈರಸಿ ಮಾಡುತ್ತಿದ್ದಾನೆ ಎಂಬುದನ್ನು ಕೂಡ ಈ ಹೊಸ ಸಾಫ್ಟ್‌ವೇರ್ ಪತ್ತೆ ಹಚ್ಚುತ್ತದೆ. ತಿಳಿಸುತ್ತದೆ. ಅಷ್ಟೇ ಅಲ್ಲ, ಆ ಪ್ರದರ್ಶನಕ್ಕೆ ಸಂಬಂಧಿಸಿದವರಿಗೆ ಹಾಗೂ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತದೆ. ಮುಂದಿನ ದಿನಗಳಲ್ಲಿ ವಿಡಿಯೋ ರೆಕಾರ್ಡ್ ಆಗದ ಸಾಫ್ಟ್‌ವೇರ್ ಕೂಡ ಹೊರಬರಲಿದೆ ಎಂದು ಸಂಸ್ಥೆಯ ಯುವಕರು ಹೇಳಿಕೊಂಡರು.
ಅಂದಹಾಗೆ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ಬಾಬು, ದಿನಕರ ತೂಗದೀಪ, ಶೃತಿ ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ನೋಡಿದಾಗ ಕೇವಲ ವಿಡಿಯೋ ಕಾಣಿಸಿತು ವಿನಃ, ಆಡಿಯೋ ಕೇಳಿಸಲಿಲ್ಲ. ಅಲ್ಲಿಗೆ ಈ ಯುವಕರ ಸಾಧನೆ ಯಶಸ್ವಿ ಎಂಬ ಮಾತುಗಳು ಕೇಳಿಬಂದವು. ಈ ವೇಳೆ, ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಕೆ.ಸಿ.ಎನ್.ಚಂದ್ರಶೇಖರ್, ಬಾ.ಮ.ಹರೀಶ್, ಆರ್.ಎಸ್.ಗೌಡ, ಎನ್.ಎಂ.ಸುರೇಶ್ ಇತರರು ಇದ್ದರು.