ಪೈರಸಿ ತಡೆಗೆ ಹೊಸ ಸಾಫ್ಟ್‌ವೇರ್‌ – ರೆಕಾರ್ಡ್‌ ಮಾಡೋರಿಗೆ ಕಾದಿದೆ ಹಬ್ಬ!

ತಾಂತ್ರಿಕತೆಗೆ ಪುನೀತ್‌ ಚಾಲನೆ-ಮೆಚ್ಚುಗೆ

ಯಾವುದೇ ಭಾಷೆಯ ಚಿತ್ರವಿರಲಿ, ಪೈರಸಿ ಕಾಟ ತಪ್ಪಿದ್ದಲ್ಲ. ಇದು ನಿನ್ನೆ ಮೊನ್ನೆಯ ಸಮಸ್ಯೆಯಂತೂ ಅಲ್ಲ. ಹಲವು ವರ್ಷಗಳಿಂದಲೂ ಇದೆ. ಈ ಪೈರಸಿ ಎಂಬ ಗುಮ್ಮನಿಗೆ ಸಾಕಷ್ಟು ಸಲ ಗುದ್ದಲು ಪ್ರಯತ್ನ ಪಟ್ಟರೂ, ಪದೇ ಪದೇ ತನ್ನ ಅಟ್ಟಹಾಸ ಮೆರೆಯುತ್ತಲೇ ಇದೆ. ಇದರಿಂದಾಗಿ ಯಾವುದೇ ಸಿನಿಮಾಗಳು ಚಿತ್ರಮಂದಿರ ಹೊಕ್ಕರೂ, ಅಲ್ಲಿ ಪೈರಸಿ ಎಂಬ ಪೆಡಂಭೂತದಿಂದಾಗಿ ನಿರ್ಮಾಪಕ ಹೈರಾಣಾಗುತ್ತಿದ್ದಾನೆ. ಈ ಪೈರಸಿ ತಡೆಗೆ ಹೊಸ ತಾಂತ್ರಿಕತೆಯ ಅಗತ್ಯವಿತ್ತು. ಆದೀಗ ಈಡೇರಿದೆ. ಹೌದು, ಕಾಂಟ್ರಫೈನ್‌ ಸಂಸ್ಥೆಯ ದುರ್ಗಾಪ್ರಸಾದ್‌ ಹಾಗೂ ರಾಹುಲ್‌ರೆಡ್ಡಿ ಮತ್ತು ತಂಡ ಜೊತೆಗೂಡಿ ಪೈರಸಿ ತಡೆಗಟ್ಟುವ ಹೊಸ ತಾಂತ್ರಿಕತೆಯನ್ನು ಹೊರತಂದಿದ್ದು, ಅದಕ್ಕೆ ಚಾಲನೆಯೂ ಸಿಕ್ಕಿರುವುದು ವಿಶೇಷ.


ಕಾಂಟ್ರಫೈನ್ಸ್‌ ಸಂಸ್ಥೆಯ “ಫೆಂಡೆ” ಹೆಸರಿನ ಸಾಫ್ಟ್‌ವೇರ್‌ಗೆ ಪುನೀತ್‌ರಾಜಕುಮಾರ್‌ ಅವರು ಚಾಲನೆ ನೀಡುವ ಮೂಲಕ, ಹೊಸ ತಾಂತ್ರಿಕತೆಯಲ್ಲಿ ಮಾತ್ರ ಈಗ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೈರೆಸಿ ಅನ್ನುವುದು ಹೊಸದಲ್ಲ. ಅದು ವಿಡಿಯೋ ಜಮಾನ ಬಂದಾಗಿನಿಂದಲೂ ಇದೆ. ಈಗಂತೂ ಡಿಜಿಟಲ್‌ ಹವಾ. ಅದು ಹೆಚ್ಚಾಗುತ್ತಿದ್ದಂತೆ ಸಿನಿಮಾ ಮೇಕರ್ಸ್‌ ಸಂಖ್ಯೆಯೂ ಹೆಚ್ಚುತ್ತಿದೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟು ಪೈರೆಸಿ ಮಾಡುತ್ತಿದ್ದಾರೆ. ಚಿತ್ರಮಂದಿರಗಳ ಬಳಿಕ ಅನೇಕ ಸಿನಿಮಾಗಳು ಓಟಿಟಿ ಫ್ಲಾಟ್‌ಫಾರಂನತ್ತ ಹೋಗುತ್ತಿವೆ. ಈಗ ಯುವ ಬಳಗ ಸೇರಿ, ಈ ಹೊಸ ತಾಂತ್ರಿಕತೆ ಕಂಡುಹಿಡಿದಿದೆ. ಅವರ ಈ ಹೊಸ ಸಾಫ್ಟ್‌ವೇರ್ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರಿಗೂ ಉಪಯೋಗವಾಗಲಿ ಎಂದರು.


ನಟಿ ಶೃತಿ ಕೂಡ ಈ ಹೊಸ ತಾಂತ್ರಿಕತೆಯನ್ನು ಪ್ರೀತಿಯಿಂದಲೇ ಸ್ವಾಗತಿಸಿದರು. ಚಿತ್ರರಂಗದ ಅನ್ನದಾತ ನಿರ್ಮಾಪಕ. ಅವರ ಉಳಿವಿಗೆ ಮತ್ತು ಸಿನಿಮಾಗಳ ಉಳಿವಿಗೆ ಈ ಹೊಸ ತಾಂತ್ರಿಕತೆ ಬಂದಿದೆ. ಪೈರಸಿ ತೊಲಗಿಸಲು ಈ ಯುವಕರ ತಂಡ ನಿಂತಿದೆ. ನಮ್ಮ ಕನ್ನಡಿಗರು ಈ ಹೊಸ ತಾಂತ್ರಿಕತೆಯ ಹಿಂದೆ ನಿಂತಿರೋದು ಹೆಮ್ಮೆಯ ವಿಷಯ ಎಂದರು.
ಕಾಂಟ್ರಫೈನ್ಸ್ ಸಂಸ್ಥೆಯ ಫೆಂಡೆ ಸಾಫ್ಟ್‌ವೇರ್‌ ಪೈರೆಸಿ ತಡೆಯುವ ಹೊಸ ತಾಂತ್ರಿಕತೆ ಹೊಂದಿದೆ. ಇದನ್ನು ಚಿತ್ರಮಂದಿರಗಳಲ್ಲಿ ಅಳವಡಿಸಿದರೆ, ಪ್ರೇಕ್ಷಕ ಮೊಬೈಲ್‌ನಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆಗುತ್ತದೆ. ಆದರೆ ಸೌಂಡ್‌ ಮಾತ್ರ ರೆಕಾರ್ಡ್‌ ಆಗುವುದಿಲ್ಲ. ಆತ ಎಲ್ಲಿ ಕುಳಿತು ಪೈರಸಿ ಮಾಡುತ್ತಿದ್ದಾನೆ ಎಂಬುದನ್ನು ಕೂಡ ಈ ಹೊಸ ಸಾಫ್ಟ್‌ವೇರ್‌ ಪತ್ತೆ ಹಚ್ಚುತ್ತದೆ. ತಿಳಿಸುತ್ತದೆ. ಅಷ್ಟೇ ಅಲ್ಲ, ಆ ಪ್ರದರ್ಶನಕ್ಕೆ ಸಂಬಂಧಿಸಿದವರಿಗೆ ಹಾಗೂ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುತ್ತದೆ. ಮುಂದಿನ ದಿನಗಳಲ್ಲಿ ವಿಡಿಯೋ ರೆಕಾರ್ಡ್‌ ಆಗದ ಸಾಫ್ಟ್‌ವೇರ್ ಕೂಡ ಹೊರಬರಲಿದೆ ಎಂದು ಸಂಸ್ಥೆಯ ಯುವಕರು ಹೇಳಿಕೊಂಡರು.


ಅಂದಹಾಗೆ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ಬಾಬು, ದಿನಕರ ತೂಗದೀಪ, ಶೃತಿ ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ನೋಡಿದಾಗ ಕೇವಲ ವಿಡಿಯೋ ಕಾಣಿಸಿತು ವಿನಃ, ಆಡಿಯೋ ಕೇಳಿಸಲಿಲ್ಲ. ಅಲ್ಲಿಗೆ ಈ ಯುವಕರ ಸಾಧನೆ ಯಶಸ್ವಿ ಎಂಬ ಮಾತುಗಳು ಕೇಳಿಬಂದವು. ಈ ವೇಳೆ, ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಕೆ.ಸಿ.ಎನ್.ಚಂದ್ರಶೇಖರ್, ಬಾ.ಮ.ಹರೀಶ್, ಆರ್.ಎಸ್.ಗೌಡ, ಎನ್.ಎಂ.ಸುರೇಶ್ ಇತರರು ಇದ್ದರು.

Related Posts

error: Content is protected !!