ಯುವರತ್ನ ಪ್ರೋಮೋ ರಿಲೀಸ್‌- ಜನವರಿ 21ಕ್ಕೆ ಚಿತ್ರ ಬರುವ ಸಾಧ್ಯತೆ

ಪವರ್‌ ಅಫ್‌ ಯೂಥ್‌ ಅನ್ನಿ ಅಂದ್ರು ಅಪ್ಪು

ಈ ವರ್ಷದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಅಂದರೆ ಅದು ಪುನೀತ್‌ರಾಜಕುಮಾರ್‌ ಅಭಿನಯದ “ಯುವರತ್ನ”. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಚಿತ್ರದ ಹೊಸದೊಂದು ಪ್ರೋಮೋ ನ.27ರ ಶುಕ್ರವಾರ ಸಂಜೆ ಬಿಡುಗಡೆಯಾಗಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ “ಯುವರತ್ನ” ಚಿತ್ರದ ‘ಪವರ್ ಆಫ್ ಯೂಥ್” ಹೆಸರಿನ ಈ ಪ್ರೋಮದಲ್ಲಿ ಯುವರತ್ನ ಸಿನಿಮಾದ ಹಾಡಿನ ತುಣುಕು ಇದೆ. ಈ ತುಣುಕಲ್ಲಿ ಪುನೀತ್‌ರಾಜ್‌ಕುಮಾರ್ ಸಖತ್ ಯೂಥ್‌ಫುಲ್ ಆಗಿ ಮಿಂಚಿದ್ದಾರೆ. ಗಿಟಾರ್ ಹಿಡಿದುಕೊಂಡು ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪುನೀತ್, “ಹೆಸರು ಮಾಡು ಹಸಿರಾಗೊ ಹಾಗೆ, ಉಸಿರು ಹೋದರೂ ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂಥ್’ ಎಂದು ಹಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಪ್ರೋಮೋದಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್ ಕೂಡ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಇದು ಒಂದು ಝಲಕ್. ಚಿತ್ರದ ಈ ಹಾಡು ಮತ್ತು ವಿಡಿಯೋ ಡಿಸೆಂಬರ್ 2ಕ್ಕೆ ಬಿಡುಗಡೆ ಆಗಲಿದೆ ಎಂಬುದು ಚಿತ್ರತಂಡದ ಮಾತು.


ಈ ಚಿತ್ರಕ್ಕೆ ವಿಜಯ್ ಕಿರಗಂದೂರ್ ನಿರ್ಮಾಪಕರು. ಪುನೀತ್‌ ರಾಜಕುಮಾರ್‌ ಅವರಿಗೆ ಚಿತ್ರದಲ್ಲಿ ಸಾಯೇಷಾ ನಾಯಕಿಯಾಗಿದ್ದಾರೆ. ಧನಂಜಯ್, ದಿಗಂತ್, ಸಾಯಿಕುಮಾರ್, ಸುಧಾರಾಣಿ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಯುವರತ್ನ” ಜನವರಿ 21ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

Related Posts

error: Content is protected !!