ಹೊಂಬಾಳೆ ಫಿಲಂಸ್‌ ಮತ್ತೊಂದು ದೊಡ್ಡ ಹೆಜ್ಜೆ- ಏಕಕಾಲದಲ್ಲಿ ಹಲವು ಭಾಷೆಯ ಸಿನಿಮಾ ಮಾಡಲು ರೆಡಿ

ಡಿ. 2 ರಂದು ಹೊರಬೀಳಲಿದೆ ಬಹುದೊಡ್ಡ ಘೋಷಣೆ

ಏಳು ವರ್ಷ… ಏಳು ಸಿನಿಮಾ.. ಸೋಲಿಗಿಂತ ದೊಡ್ಡ ಗೆಲುವಿನ ಪಾಲೇ ಹೆಚ್ಚು..!
-ಇದು ಹೊಂಬಾಳೆ ಫಿಲಂಸ್‌ ನಿರ್ಮಾಣದ ಚಿತ್ರಗಳ ಸುದ್ದಿ. ಹೌದು, ಹೊಂಬಾಳೇ ಫಿಲಂಸ್‌ ಕಳೆದ ಏಳು ವರ್ಷಗಳಲ್ಲಿ ಏಳು ಚಿತ್ರಗಳನ್ನು ನಿರ್ಮಾಣ ಮಾಡಿದೆ. ಈ ಪೈಕಿ ಮೂರು ಚಿತ್ರಗಳು ಪ್ಯಾನ್‌ ಇಂಡಿಯಾ ಸಿನಿಮಾಗಳು ಅನ್ನುವುದು ಖುಷಿ. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ ಇದೀಗ ಹೊಸ ಸಾಹಸಕ್ಕೆ ಹೆಜ್ಜೆ ಇಡುತ್ತಿದೆ. ಆ ಸಾಹಸವೂ ಸಿನಿಮಾ ನಿರ್ಮಾಣದ್ದೇ ಅನ್ನುವುದು ವಿಶೇಷ. ಹೌದು, ಈ ವರ್ಷಗಳ ಅವಧಿಯಲ್ಲಿ ಭಾರತ ಮಾತ್ರವಲ್ಲ, ವಿದೇಶಗಳೂ ಇತ್ತ ಒಮ್ಮೆ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟುಕೊಟ್ಟಿರುವುದು ಈ ಸಂಸ್ಥೆಯ ಹೆಮ್ಮೆ. ಈಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಸಂಸ್ಥೆ ಮುಂದಾಗಿದೆ. ಡಿಸೆಂಬರ್​ 2ರ ಮಧ್ಯಾಹ್ನ ಹೊಸ ಚಿತ್ರದ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ಹಂಚಿಕೊಳ್ಳಲಿದೆ.

ವಿಜಯ್‌ ಕಿರಗಂದೂರು, ನಿರ್ಮಾಪಕ

ಕಳೆದ 2014ರಲ್ಲಿ “ನಿನ್ನಿಂದಲೇ” ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ವಿಜಯ್‌ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ನ ನಿರ್ಮಾಣದ ಪಯಣ ಇಲ್ಲಿಯವರೆಗೆ ಯಶಸ್ಸಿನ ಮೆಟ್ಟಿಲ್ಲನ್ನು ಹತ್ತಿಕೊಂಡೇ ಬಂದಿದೆ. “ಮಾಸ್ಟರ್ ಪೀಸ್”​,” ರಾಜಕುಮಾರ”, “ಕೆಜಿಎಫ್”, “ಕೆಜಿಎಫ್​ 2”, “ಯುವರತ್ನ” ಚಿತ್ರದವರೆಗೂ ಹೊಂಬಾಳೆ ತನ್ನ ಅದ್ಧೂರಿ ನಿರ್ಮಾಣ ಚಿತ್ರಗಳನ್ನು ನೀಡುತ್ತ ಬಂದಿದೆ. ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈ ಏಳು ಸಿನಿಮಾಗಳ ಪೈಕಿ ಮೂರು ಪ್ಯಾನ್​ ಇಂಡಿಯಾ ಚಿತ್ರಗಳು. ಈಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಮತ್ತೊಂದು ದೊಡ್ಡ ಸಿನಿಮಾ ಘೋಷಣೆ ಮಾಡಲು ಹೊಂಬಾಳೆ ಸಂಸ್ಥೆ ರೆಡಿಯಾಗಿದೆ.

ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರ ನಿರ್ಮಿಸುವ ಗುರಿ ಹೊಂದಿರುವ ಸಂಸ್ಥೆ, ಡಿ.೨ರಂದು ಆ ಕುರಿತಂತೆ ಅಧಿಕೃತ ಮಾಹಿತಿ ಹೊರಹಾಕಲಿದೆ. ಆ ಚಿತ್ರ ಯಾವುದು, ನಿರ್ದೇಶಕರು ಯಾರು, ಯಾರೆಲ್ಲಾ ಆ ಚಿತ್ರದಲ್ಲಿರುತ್ತಾರೆ ಎಂಬಿತ್ಯಾದಿ ಕುರಿತು ವಿಷಯ ಹೊರಬೀಳಲಿದೆ.
ಈಗಾಗಲೇ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದು, ಅದೊಂದು ಉತ್ತಮ ಬೆಳೆವಣಿಗೆ ಎನ್ನಲಾಗುತ್ತಿದೆ. ಕನ್ನಡದ “ಕೆಜಿಎಫ್”​ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಅದರ ಹತ್ತು ಪಟ್ಟು ನಿರೀಕ್ಷೆ “ಕೆಜಿಎಫ್​ ಚಾಪ್ಟರ್ 2” ಮೇಲೂ ಇದೆ. ಹಾಗೆಯೇ ಪುನೀತ್ ರಾಜ್​ಕುಮಾರ್ ಅವರ “ಯುವರತ್ನ” ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲೇ ಮೊದಲ ಸಲ ಯಾರೂ ಮಾಡದಂತಹ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಗೆ ಡಿಸೆಂಬರ್‌ 2 ರವರೆಗೆ ಕಾಯಬೇಕು.

Related Posts

error: Content is protected !!