Categories
ಸಿನಿ ಸುದ್ದಿ

ಆ್ಯಕ್ಟರ್ ಆಗಲು ಬಂದು ಡೈರೆಕ್ಟರ್ ಆದ ಎಳ್ಳಂಪಳ್ಳಿ ಹುಡುಗನ ‘ಬಹುಕೃತವೇಷಂ’

ಹಸಿವು ನಿರ್ದೇಶಕನ್ನನಾಗಿಸಿತು- ಪ್ರಶಾಂತ್ ಎಳ್ಳಂಪಳ್ಳಿ


ಸಿನಿಮಾ ಅಂದ್ರೆ ಸಿಕ್ಕಾ ಪಟ್ಟೆ ಕ್ರೇಜು. ವಾರಕ್ಕೆ ಮೂರು ಸಿನಿಮಾ ನೋಡುತ್ತಿದ್ದೆ. ನೋಡ್ತಾ ನೋಡ್ತಾ ನಟನೆಯ ಕನಸು ಕಂಡೆ. ಆ ಕನಸು ನನಸಾಗಿಸಿಕೊಳ್ಳಲು ನನ್ನೂರು ಎಳ್ಳಂಪಳ್ಳಿಯಿಂದ ಬೆಂಗಳೂರು ಬಸ್ಸು ಹಿಡಿದೆ‌‌. ಅಲ್ಲಿಂದ ಬಂದು ಇಲ್ಲಿಗೆ ೧೮ ವರ್ಷ. ಹತ್ತಾರು ಅವತಾರ ಗಳಾದವು. ಕೊನೆಗೆ ನಿರ್ದೇಶನವೇ ಸೂಕ್ತ ಎನಿಸಿತು. ಹಾಗೆ ಆಗಲು ಪಟ್ಟ ಶ್ರಮ ಮಾತ್ರ ಭೀಕರವಾದದ್ದು….

ಯುವ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಇಷ್ಟು ಹೇಳಿ ಒಂದು ಕ್ಷಣ ಮೌನಕ್ಕೆ ಜಾರಿದರು. ಸುದೀರ್ಘ 18 ವರ್ಷದ ಹಾದಿಯನ್ನು ನೆನಪಸಿಕೊಳ್ಳುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು. ಏನೇನೋ ಆಗಿ, ಕೊನೆಗೆ ನಿರ್ದೇಶಕನಾದೆ ಎನ್ನುವ ಸಮಾಧಾನವೂ ಇತ್ತು. ಆದರೆ ಅಂತಹದೊಂದು ಪವಿತ್ರವಾದ ಜವಾಬ್ದಾರಿ ಯ ಕೆಲಸಕ್ಕೆ ತನ್ನನ್ನು ತಾನು ಪಕ್ವವಾಗಿಸಿಕೊಳ್ಳಲು ಅವರು ಪಟ್ಟ ಶ್ರಮ ಅತ್ಯಂತ ಕಠಿಣವಾಗಿತ್ತು ಅಂತ ಪ್ಲಾಷ್ ಬ್ಯಾಕ್ ಕಡೆ ಜಾರಿದರು. ನಮ್ಮಿಬ್ಬರ ನಡುವೆ ಈ ಮಾತಿನ ಲಹರಿ ಶುರುವಾಗಿದ್ದು ‘ ಬಹುಕೃತವೇಷಂ’ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ.

ಬಹುಕೃತವೇಷಂ…..

‘ಗೌಡ್ರು ಸೈಕಲ್’ ಚಿತ್ರದ ನಂತರ ಯುವ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಈಗ ‘ಬಹುಕೃತವೇಷಂ ‘ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ಹೊಸ ಪ್ರತಿಭೆ ಶಶಿಕಾಂತ್ ಈ‌ ಚಿತ್ರದ ನಾಯಕ. ‘ಅಗ್ನಿ ಸಾಕ್ಷಿ’ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ ಇದರ ನಾಯಕಿ. ಚಿತ್ರಕ್ಕೆ ಲಾಕ್ ಡೌನ್ ಗೂ ಮುಂಚೆಯೇ ಚಾಲನೆ ಸಿಕ್ಕಿತ್ತು. ಲಾಕ್ ಡೌನ್ ಶುರುವಾದ ಕಾರಣ ಚಿತ್ರೀಕರಣ ಸ್ಥಗಿತ ಗೊಂಡಿತು. ಒಂದಷ್ಟು ಗ್ಯಾಪ್ ನಂತರವೀಗ ಮತ್ತೆ ಚಿತ್ರೀಕರಣ ಶುರುವಾಗಿದೆ. ಬೆಂಗಳೂರಿನ ಕೆಂಗೇರಿಯ ಮನೆಯೊಂದರಲ್ಲಿ ಆ ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪ್ರಶಾಂತ್ ಎಳ್ಳಂಪಳ್ಳಿ ಮಾತಿಗೆ ಸಿಕ್ಕರು. ತಾವು ನಿರ್ದೇಶಕನಾದ ಹಿಂದಿನ ರೋಚಕ ಸ್ಟೋರಿ ತೆರೆದಿಟ್ಟರು.

ಎಳ್ಳಂ‌ಪಳ್ಳಿ ಎಂಬ ಪಕ್ಕಾ ಹಳ್ಳಿ ಪ್ರತಿಭೆ….

‘ನನ್ನೂರು ಎಳ್ಳಂಪಳ್ಳಿ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು. ಅಷ್ಟೇನು ಅಭಿವೃದ್ಧಿ ಕಾಣದ ಕುಗ್ರಾಮ. ಅಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯದಿಂದಲೇ ಸಿನಿಮಾ ಹುಚ್ಚು. ಗೆಳೆಯರೆಲ್ಲಾ ತಾವು ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಮೇಸ್ಟ್ರು ಆಗ್ಬೇಕು ಅಂತೆಲ್ಲ ಹೇಳುತ್ತಿದ್ದಾಗ ನಾನು ಆ್ಯಕ್ಟರ್ ಆಗ್ಬೇಕು ಅಂತಿದ್ದೆ. ಹಾಗೆ ಶುರುವಾಗಿದ್ದ ನಟನೆಯ ಕನಸು‌ ನನಸಾಗಿಸಿಕೊಳ್ಳಲು ಕಾಲೇಜು ಶಿಕ್ಷಣ ಮುಗಿಸಿದೆ. ಆನಂತರ ಊರಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದೆ‌. ಅಲ್ಲಿಂದ ಬೆಂಗಳೂರಿಗೆ ಬಸ್ಸು ಹತ್ತಿದೆ. ಅಲ್ಲಿ ನನ್ನ ದೊಡ್ಡಪ್ಪನ ಮಗನ‌ ಅಂಗಡಿಯಲ್ಲಿ ಕೆಲಸ‌ ಮಾಡಿದೆ.ಅಲ್ಲಿಂದ ಯು.ವಿ. ನಂಜಪ್ಪ ಎಂಬುವರು ಪರಿಚಯವಾದರು. ಅವರ ಮೂಲಕ ಬೆನಕ ರಂಗ ತಂಡಕ್ಕೆ ಪರಿಚಯವಾಯಿತು. ಅಲ್ಲಿ ಯಶ್ ಕೂಡ ಇದ್ದರು. ನಾವೆಲ್ಲ ಒಟ್ಟಿಗೆ ನಟನೆಯ ತರಬೇತಿ ಪಡೆಯು ತ್ತಿದ್ದೇವು‌.‌ ಅಲ್ಲಿಂದ ಹಲವು ಧಾರಾವಾಹಿಗಳಲ್ಲಿ ನಟಿಸಿದೆ. ಸಿನಿಮಾಗಳಿಗೂ ಬಣ್ಣ ಹಚ್ಚಿದೆ‌. ಹಿರಿಯರಾದ ಸುಧಾಕರ್ ಬನ್ನಂಜೆ ಸೇರಿದಂತೆ ಹಲವರಿಗೆ ಸಹಾಯಕ ನಿರ್ದೇಶಕನಾದೆ.‌ ಹಾಗೆಯೇ ನನಗೂ ಸ್ವತಂತ್ರ ನಿರ್ದೇಶಕನಾಗುವ ಅವಕಾಶ ಬಂತು. ‘ಗೌಡ್ರು ಸೈಕಲ್’ ಮೂಲಕ‌ ಅಂತ ಅದೃಷ್ಟ ಒಲಿದು ಬಂತು’ ಎನ್ನುತ್ತಾ ನಿರ್ದೇಶಕನಾದೆ ಬಗೆಯನ್ನು ಪ್ರಶಾಂತ್ ಮನಬಿಚ್ಚಿ ಹೇಳಿಕೊಂಡರು.

ಸೈಕಲ್ ಏರಿ ಬಂದ್ರು…

‘ಗೌಡ್ರು ಸೈಕಲ್’ ಪ್ರಶಾಂತ್ ಎಳ್ಳಂಪಳ್ಳಿ‌ನಿರ್ದೇಶನದ ಚೊಚ್ವಲ ಸಿನಿಮಾ. ಹೊಸಬರನ್ನು ಹಾಕಿಕೊಂಡು‌ ಆ ಸಿನಿಮಾ ಮಾಡಿದ್ದರು. ಆದರೆ ಚಿತ್ರಕ್ಕೆ ನಿರೀಕ್ಷಿತ ಪ್ರಚಾರ ಸಿಗಲಿಲ್ಲ. ಒಂದಷ್ಟು ಕೊರತೆಗಳ ನಡುವೆಯೇ ಈ ಚಿತ್ರ ಚಿತ್ರ ಮಂದಿರಕ್ಕೆ ಬಂತು. ಕತೆ ಚೆನ್ನಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಅದರೆ ನಿರೀಕ್ಷಿತ ಸಕ್ಸಸ್ ಸಿನಿಮಾಕ್ಕೆ ಸಿಗದೆ ಹೋಯಿತು.‌ ಅದರೂ ಪ್ರಶಾಂತ್ ಮೇಲೆ ಕೆಲವರು ಇಟ್ಟಿದ್ದ ನಂಬಿಕೆಗೆ ಅದು ದಕ್ಕೆ ತರಲಿಲ್ಲ. ಅವರ ವರ್ಚಸ್ಸು ಕೂಡ ಕಮ್ಮಿ ಆಗಲಿಲ್ಲ. ಆಗ ಶುರುವಾಗಿದ್ದು ‘ಬಹುಕೃತವೇಷಂ’. ಚಿತ್ರ.

ಕಷ್ಟ ಇಲ್ಲಿಗೆ ಬಂದಾಗಲೇ ಗೊತ್ತಾಗಿದ್ದು…

‘ಸರ್ , ನಾನು ನಿರ್ದೇಶಕನಾಗಿದ್ದು ಇಲ್ಲಿಗೆ ಬಂದ 18 ವರ್ಷಗಳ ಬಳಿಕ. ಇದು ನಾವಂದುಕೊಂಡಷ್ಟು ಸುಲಭದ ಹಾದಿಯಲ್ಲ. ಕಡು ಕಷ್ಟ.‌ ಯಾವುದೇ ಹಿನ್ನೆಲೆ ಇಲ್ಲದೆ, ಹಣ ಬಲ ಇಲ್ಲದೆ ಇಲ್ಲಿ ಒಂದು ಹಂತಕ್ಕೇರಿದ್ದು ಅತ್ಯಂತ ಕಠಿಣ. ಬಾಲ್ಯದಲ್ಲಿ ನಾನೇನೋ ಆ್ಯಕ್ಟರ್ ಆಗ್ಬೇಕು ಅಂತ ಕನಸು ಕಂಡೆ. ಆದರೆ ಅದನ್ನು ನನಸಾಗಿಸಿಕೊಳ್ಳುವುದು ಎಷ್ಟು ಕಷ್ಟ ಅಂತ ಇಲ್ಲಿಗೆ ಬಂದಾಗಲೇ ಗೊತ್ತಾಗಿದ್ದು. ಕೊನೆಗೆ ನಿರ್ದೇಶಕನಾಗಲು ಹೊರಟೆ. ಆಗ ನನಗೆ ಸಹಕಾರ, ಸಲಹೆ ನೀಡಿದ್ದು ಗುರುಗಳಾದ ಸುಧಾಕರ್ ಬನ್ನಂಜೆ ಹಾಗೂ‌ ಟಿ.ಎಸ್. ನಾಗಭರಣ. ಅವರಿಂದಲೇ ನಾನಿಲ್ಲಿಗೆ ಬಂದೆ ‘ ಎನ್ನುತ್ತಾರೆ ಪ್ರಶಾಂತ್.

ಜನ ಮೆಚ್ಚುವ ಸಿನಿಮಾವೇ ಟಾರ್ಗೆಟ್‌…

ಸಿನಿಮಾ‌ ನಿರ್ದೇಶವನ್ನೇ ಮುಂದೆ ವೃತ್ತಿಯಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಪ್ರಶಾಂತ್ ಅವರಿಗೆ ಪ್ರೇಕ್ಷಕರಿಗೆ‌ ಒಳ್ಳೆಯ ಸಿನಿಮಾ ಕೊಡಬೇಕೆನ್ನುವುದೇ ಮೊ‌ದಲ ಟಾರ್ಗೆಟ್ ಅಂತೆ. ಆ ನಿಟ್ಟಿನಲ್ಲೇ ತಮ್ನ ಎರಡನೇ ಸಿನಿಮಾ ‘ಬಹುಕೃತವೇಷಂ ‘ಮೂಡಿಬರಲಿದೆ ಎನ್ನುತ್ತಾರೆ‌. ತಮ್ಮ ಆಶಯಕ್ಕೆ ಚಿತ್ರದ ನಿರ್ಮಾಪಕರು ಹಾಗೂ ಚಿತ್ರದ ನಾಯಕ ಶಶಿಕಾಂತ್ ತಂಡ ಸಾಥ್ ನೀಡಿದ್ದಾರೆ ಎನ್ನುತ್ತಾ ನಗು ಬೀರುತ್ತಾರೆ ಪ್ರಶಾಂತ್. ಅವರು ಅಂದುಕೊಂಡಂತೆ ‘ ಬಹುಕೃತವೇಷಂ’ ಒಂದೊಳ್ಳೆಯ ಸಿನಿಮಾವಾಗಿ‌ ಮೂಡಿ‌ಬರಲಿ. ಪ್ರಶಾಂತ್ ಸ್ಟಾರ್‌ ನಿರ್ದೇಶಕರಾಗಲಿ ಎನ್ನುವುದು ‘ಸಿನಿ ಲಹರಿ’ಯ ಹಾರೈಕೆ.

Categories
ಸಿನಿ ಸುದ್ದಿ

ರಾಕ್ ಲೈನ್ ಸುಧಾಕರ್ ನಿಧನ ಶೂಟಿಂಗ್ ವೇಳೆ ಹೃದಯಾಘಾತ

ಕನ್ನಡ ಚಿತ್ರರಂಗದ ಹಾಸ್ಯ ನಟ ರಾಕ್ ಲೈನ್ ಸುಧಾಕರ್ (65) ಗುರುವಾರ (ಸೆ.24) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ವಿಶಿಷ್ಠ ಧ್ವನಿ ಮತ್ತು ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಸುಧಾಕರ್‌ ಅವರು, ‘ಶುಗರ್ ಲೆಸ್’ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ.
‘ಪಂಚರಂಗಿ’, ‘ಪರಮಾತ್ಮ’, ‘ಡ್ರಾಮಾ’, ‘ಟೋಪಿವಾಲಾ’, ‘ಝೂಮ್‌’, ‘ವಾಸ್ತು ಪ್ರಕಾರ’, ‘ಲವ್ ಇನ್‌ ಮಂಡ್ಯ’, ‘ಮಿಸ್ಟರ್ ಅಂಡ್ ಮಿಸೆಸ್‌ ರಾಮಾಚಾರಿ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’,’ಶೋಕಿವಾಲ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದರು.
ಸುಧಾಕರ್ ಅವರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗಾಗಿ ಅವರಿಗೆ ರಾಕ್ ಲೈನ್ ಸುಧಾಕರ್ ಎಂದೇ ಕರೆಯಲಾಗುತ್ತಿತ್ತು.
ಕೆ.ಎಂ.ಶಶಿಧರ್ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಶುಗರ್ ಲೆಸ್’ ಚಿತ್ರದಲ್ಲಿ ಅವರು, ಮೂರು ದಿನಗಳ ಕಾಲ ನಟಿಸಿದ್ದರು. ಗುರುವಾರ ಬೆಳಗ್ಗೆ ಬನ್ನೇರುಘಟ್ಟ ಸಮೀಪ ಚಿತ್ರೀಕರಣ ನಡೆಯುತ್ತಿತ್ತು. ತಮ್ಮ ಪಾತ್ರಕ್ಕೆ ಮೇಕಪ್ ಮಾಡಿಕೊಂಡು ಶಾಟ್ ಗೆ ರೆಡಿಯಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಶುಕ್ರವಾರ (ಸೆ.25)ರಂದು ನಡೆಯಲಿದೆ.
ಸಂತಾಪ: ಕನ್ನಡ ಚಿತ್ರರಂಗದ ಗಣ್ಯರು, ನಟ, ನಿರ್ಮಾಪಕ, ನಿರ್ದೇಶಕರು
ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಎವಿಡೆನ್ಸ್ ಕಂಪ್ಲೀಟ್

  • ಒಂದೇ ಲೊಕೇಷನ್,  ಐದು ದಿನ ಚಿತ್ರೀಕರಣ – –ಕನ್ನಡದಲ್ಲೊಂದು ಇದು ವಿಭಿನ್ನ ಪ್ರಯೋಗ

5 ದಿನ ರಾತ್ರಿ ಹಗಲು ಚಿತ್ರೀಕರಣ

‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಮಾನಸ ಜೋಶಿ ವಿಭಿನ್ನ ಕಥೆ, ಪಾತ್ರವಿರುವ ‘ಎವಿಡೆನ್ಸ್’ ಚಿತ್ರ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಈಗ ಆ ಚಿತ್ರ ಪೂರ್ಣಗೊಂಡಿದೆ.
ಹೌದು ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಮಾನಸ ಜೋಶಿ ಅವರ ‘ಎವಿಡೆನ್ಸ್’ ಚಿತ್ರಕ್ಕೆ ಪ್ರವೀಣ್ (ಪಿ ಆರ್) ನಿರ್ದೇಶಕರು. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ.

ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ‌ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ. ಆ ರೂಮ್ ನಲ್ಲೇ ಚಿತ್ರೀಕರಣ ಮಾಡಿ ಮುಗಿಸಿರುವ ನಿರ್ದೇಶಕರು, ಸದ್ಯ ಎಡಿಟಿಂಗ್, ಡಬ್ಬಿಂಗ್ ಕಡೆ ಗಮನ ಹರಿಸಿದ್ದಾರೆ.

ಕನ್ನಡಕ್ಕೊಂದು ವಿಭಿನ್ನ ಪ್ರಯತ್ನದ ಸಿನಿಮಾ‌ ಆಗಿರುವುದರಿಂದ ಚಿತ್ರಮಂದಿರ ಶುರುವಾಗುತ್ತಿದ್ದಂತೆಯೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ.ಇನ್ನು ಈ ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಅದಿತಿ ಪ್ರಭುದೇವ್ ಈಗ ಪರ್ಫೆಕ್ಟ್ ಗರ್ಲ್!


ಶ್ಯಾನೆ ಅಲ್ಲ, ಸಿಕ್ಕಾಪಟ್ಟೆ ಟಾಪಗೌಳೆ ಈ ಹುಡುಗಿ

ಶ್ಯಾನೆ‌ ಟಾಪಗೌಳೆ ನಮ್ಮುಡುಗಿ ಅಂದ್ರೆ ಸಾಕು ಸಿನಿ ದುನಿಯಾದಲ್ಲಿ ತಟ್ಟಂತೆ ನೆನಾಪಾಗುವ ಹೆಸರು ಅದಿತಿ ಪ್ರಭುದೇವ್. ಈಗ ಇನ್ನೂ ಟಾಪಗೌಳೆ ಈ ಹುಡುಗಿ ಅಂದ್ರೆ ಸಾಕು ಸಿನಿ ಜಗತ್ತಿನಲ್ಲಿ ಅವರೇ ನೆನಪಾಗುವುದು ಕೂಡ ಅಷ್ಟೇ ಸಹಜ. ಯಾಕಂದ್ರೆ, ಈಗ ಅದಿತಿ ಪ್ರಭುದೇವ್ ಇರುವುದೇ ಹಾಗೆ. ಅದಕ್ಕೆ ಸಾಕ್ಷಿ ಈ ಫೋಟೋಸ್. ಕ್ಯಾಮೆರಾ ಕಣ್ಣಿಗೆ ಅವರಿಲ್ಲಿ ಕೊಟ್ಟ ಹಾಟ್ ಲುಕ್ಕು, ಖಡಕ್ ಫೋಸು. ಅಬ್ಬಾ, ಪಡ್ಡೆ ಹುಡುಗರ ಕಣ್ಣಿಗೆ ಮಸ್ತ್ ಮಸ್ತ್ !

ಪರ್ಫೆಕ್ಟ್ ಗರ್ಲ್ :

ಅಂದ ಹಾಗೆ, ಇದ್ಯಾವುದೋ ಅವರ ಹೊಸ ಸಿನಿಮಾದ ಫೋಟೋಶೂಟ್ ಅಲ್ಲ. ಹಾಗೆಯೇ ಅವರೇನು ಹೊಸದಾಗಿ ಮಾಡಿಸಿದ ಫೋಟೋಗಳು ಕೂಡ ಅಲ್ಲ. ಬದಲಿಗೆ ಹೊಸದೊಂದು ವಿಡಿಯೋ ಸಾಂಗ್ ಆಲ್ಬಂ ನಲ್ಲಿ ನಟಿ ಅದಿತಿ‌ ಪ್ರಭುದೇವ್ ಕಾಣಿಸಿಕೊಂಡಿದ್ದು ಹೀಗೆ‌. ಸುಜುಕಿ ಬೈಕು, ರೈಡರ್ ಲುಕ್ಕು, ‘ತೋತಾಪುರಿ’ ಚೆಲುವೆಯ ಖದರೇ ಬೇರೆ. ಯಾಕಂದ್ರೆ ,ಅವರೀಗ ಪರ್ಫೆಕ್ಟ್ ಗರ್ಲ್. ಇದೇ ಮೊದಲು ಅದಿತಿ ಪ್ರಭುದೇವ್ ಕಾಣಿಸಿಕೊಂಡ ವಿಡಿಯೋ ಸಾಂಗ್ ಆಲ್ಬಂ ಹೆಸರೇ ಪರ್ಫೆಕ್ಟ್ ಗರ್ಲ್. ಇದೊಂದು ಕಾಕತಾಳೀಯ. ಮಿಸ್ಟರ್ ಪರ್ಫೆಕ್ಟ್ ಥರ , ಸ್ಯಾಂಡಲ್ ವುಡ್ ನಲ್ಲಿ ಅದಿತಿ‌ ಪ್ರಭುದೇವ್ ಪರ್ಫೆಕ್ಟ್ ನಟಿ. ಕಾಕತಾಳೀಯ ಎನ್ನುವಂತೆ ಅವರ ಮೊದಲ ವಿಡಿಯೋ ಸಾಂಗ್ ಆಲ್ಬಂ ಹೆಸರು ಕೂಡ ‘ಪರ್ಫೆಕ್ಟ್ ಗರ್ಲ್’.

ಫೋಟೋಗಳದ್ದೇ ಸದ್ದು:

ಅಭಿ ಮುಲ್ಟಿ ನಿರ್ಮಾಣ ಹಾಗೂ ಅಭಿಷೇಕ್ ಮಠದ್ ನಿರ್ದೇಶನದ ಈ ವಿಡಿಯೋ ಸಾಂಗ್ ಆಲ್ಬಂ ಇನ್ನು ಹೊರ ಬಂದಿಲ್ಲ. ಅಕ್ಟೋಬರ್ ಫಸ್ಟ್ ವೀಕ್ ಆನಂದ್ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗುತ್ತಿದೆ. ಸದ್ಯ ಅದು ನಟಿ ಅದಿತಿ ಪ್ರಭುದೇವ್ ಅವರ ಭರ್ಜರಿ ಬೈಕ್ ರೈಡಿಂಗ್ ಪೋಸು, ಖಡಕ್ ಲುಕ್ಕು, ಆ್ಯಟ್ರ್ಯಾಕ್ಟಿವ್ ಫೇಸ್ ನ ಫೋಟೋಸ್ ಮೂಲಕ ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅದಿತಿ ಪ್ರಭುದೇವ್ ಅವರ ಸಿನಿ ಜರ್ನಿಯ‌ ಮಟ್ಟಿಗೆ ಇಂತಹದೊಂದು ಕಾಸ್ಟ್ಯೂಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಟಾಮ್ ಬಾಯ್ ಥರ ಬೈಕ್ ರೈಡಿಂಗ್ ಲುಕ್ ನಲ್ಲಿ ಭರ್ಜರಿ ಪೋಸು‌ ನೀಡಿರುವುದು ವಿಶೇಷ.

ಪ್ರೇಕ್ಷಕರೆದುರು ಬಾರದ ಕೊರಗು:

ಕೊರೋನಾ‌ ಕಾರಣಕ್ಕೆ‌‌ಕನ್ನಡದ ಬಹಳಷ್ಟು ನಟ-ನಟಿಯರು ಈ ವರ್ಷವಿನ್ನು ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿಲ್ಲ. ಅಂತಹ ಸಾಧ್ಯತೆಯೂ ಈಗ ಕಾಣುತ್ತಿಲ್ಲ. ಬಹಳಷ್ಟು ಜನ ಕಲಾವಿದರಿಗೆ ಅಂತಹದೊಂದು ಬೇಸರ, ನೋವು ಇದ್ದೇ ಇದೆ. ಇನ್ನು 2019ಕ್ಕೆ ಸಾಲು ಸಾಲು ಸಿನಿಮಾಗಳ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ಅದಿತಿ ಪ್ರಭುದೇವ್ ಅವರಿಗೂ ಅದು ಹೊರತಾಗುಳಿದಿಲ್ಲ. ತೆರೆ ಕಾಣಬೇಕಿರುವ ಸಾಕಷ್ಟು ಸಿನಿಮಾಗಳಿದ್ದರೂ, ಕೊರೋನಾ ಕಾರಣ ಅವು ಬಹುತೇಕ 2021ಕ್ಕೆ ತೆರೆಗೆ ಬರುವುದು ಗ್ಯಾರಂಟಿ.ಆದರೆ ಈ ವರ್ಷ ಪ್ರೇಕ್ಷಕರ ಮುಂದೆ ಬರಲಾಗಿಲಿಲ್ಲ ಎನ್ನುವ ಕೊಡಗನ್ನು ‘ಪರ್ಫೆಕ್ಟ್ ಗರ್ಲ್’ ವಿಡಿಯೋ‌ಸಾಂಗ್ ಆಲ್ಬಂ ಮೂಲಕ ನಿಗಿಸಿಕೊಳ್ಳುವ ತವಕದಲ್ಲಿದ್ದಾರೆ ನಟಿ ಅದಿತಿ ಪ್ರಭುದೇವ್.

ಇದೊಂಥರ ಆಕಸ್ಮಿಕ:

‘ ಇದೊಂಥರ ಆಕಸ್ಮಿಕ. ಕೊರೋನಾ ಕಾರಣ ಶೂಟಿಂಗ್ ಇಲ್ದೇ ಮನೆಯಲ್ಲಿದ್ದೇವು. ಆಗ ಕ್ಯಾಮೆರಾಮೆನ್ ಶಿವು ಸರ್ ಅವರು ಈ ಪ್ರಾಜೆಕ್ಟ್ ಬಗ್ಗೆ ಹೇಳಿದರು. ನಾನು ಕೂಡ ವಿಡಿಯೋ ಸಾಂಗ್ ಆಲ್ಭಂನಲ್ಲಿ ಕಾಣಿಸಿಕೊಂಡಿರಲಿಲ್ಲ. ಆರಂಭದಲ್ಲಿ‌ಕಾಸ್ಟ್ಯೂಮ್, ಗೆಟಪ್ ಬಗ್ಗೆ ಹೇಳಿದ್ರು. ಏನೋ ಹೊಸತೆನಿಸಿತು. ಚೆನ್ನಾಗಿರುತ್ತೆ ಅಂತ ಎಕ್ಸೈಟ್ ಆಯ್ತು. ಹಾಗಾಗಿ ಒಪ್ಪಿಕೊಂಡೆ.‌ತುಂಬಾ ಚೆನ್ನಾಗಿ ಬಂದಿದೆ. ಸೋಷಲ್ ಮೀಡಿಯಾದಲ್ಲಿ‌ಲಾಂಚ್ ಆಗುತ್ತಿದೆ. ನಂಗೂ ಈ ವರ್ಷ ಜನರ‌ ಕಾಣಿಸಿಕೊಳ್ಳಲು ಆಗಲಿಲ್ಲ ಅಂತ ಬೇಸರ ಇತ್ತು. ಅದು ಈ ಮೂಲಕವಾದರೂ ಸಾಧ್ಯವಾಗುತ್ತಿದೆಯೆಲ್ಲ ಅಂತ ಖುಷಿಯಾಗುತ್ತಿದೆ’ ಎನ್ನುತ್ತಾರೆ ನಟಿ‌ ಅದಿತಿ ಪ್ರಭುದೇವ್‌.

ಉತ್ಸಾಹಿಗಳ ಪ್ರಯತ್ನ:

‘ಪರ್ಫೆಕ್ಟ್ ಗರ್ಲ್ ‘ವಿಡಿಯೋ ಸಾಂಗ್ ಆಲ್ಬಂ‌ನ‌ ನಿರ್ಮಾಣದ ಹಿಂದೆ ಒಂದು ಉತ್ಸಾಹಿ ಯುವಕರ ಶ್ರಮವಿದೆ. ಅಭಿ‌ಮುಲ್ಟಿ ಅವರೇ ಇದಕ್ಕೆ ಸಾಹಿತ್ಯ, ಸಂಗೀತ ಹಾಗೂ ನಿರ್ಮಾಣದ ಜತೆಗೆ ತಾವೇ ಹಾಡಿದ್ದಾರೆ. ಅವರೊಂದಿಗೆ ಹರ್ಷಿಲ್ ರೆಡ್ಡಿ ಸಹ‌ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ನಿರ್ದೇಶಕ ಅಭಿಷೇಕ್ ನಿರ್ದೇಶನದ ಜತೆಗೆ ನೃತ್ಯ ನಿರ್ದೇಶನ‌ ಮಾಡಿದ್ದಾರೆ. ಶಿವಸೇನಾ ಛಾಯಾಗ್ರಹಣ ಮಾಡಿದ್ದಾರೆ. ಮಹೇಶ್ ಸಂಕಲನವಿದೆ. ಚಂದನ್ ಗೌಡ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಇನ್ನೇನು ಆನಂದ್ ಆಡಿಯೋ ಆಲ್ಬಂ ಲಾಂಚ್ ಗೆ ಸಜ್ಜಾಗಿದೆ.‌ ಅಕ್ಟೋಬರ್ ಮೊದಲ‌ ವಾರ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲಿದೆ.

Categories
ಸಿನಿ ಸುದ್ದಿ

ಸಾಧಕಿ‌ ಈ ‌ಸುಂದರಿ !

ನಟಿಯಾಗಿಯೂ ಮಿಂಚುತ್ತಿರುವ ಸಾತ್ವಿಕಾ ಎಂಬ ಕನಸು ಕಂಗಳ ಚೆಲುವೆ

…………………………………………………………………….

ಕಪ್ಪು- ಬಿಳಿಕಣ್ಣಲ್ಲಿ ಕಲರ್ ಫುಲ್ ಕನಸು, ಸಿನಿ ಜಗತ್ತಿನತ್ತ ಮೋಹಕ ಬೆಡಗಿಯ ಚಿತ್ತ, ಅಲ್ಟ್ರಾ ಮಾರ್ಡನ್ ಹುಡುಗಿಗೆ ಬಣ್ಣದ ಲೋಕದಲ್ಲಿ ಮಿಂದೇಳುವ ಬಯಕೆ

ಹಿತ್ತಲ ಗಿಡ ಮದ್ದಲ್ಲ ಅಂತಾರೆ. ಕನ್ನಡದ ಕೆಲವು ನಟಿಯರ ವಿಚಾರಕ್ಕೆ ಈ ಮಾತು ಅಕ್ಷರಶಃ ಸತ್ಯ.‌ಪ್ರತಿಭೆ ಇದ್ದರೂ ಹುಟ್ಟೂರಿನಲ್ಲಿ ಅವಕಾಶ ಸಿಗದೆ ಪಕ್ಕದ ಭಾಷೆಗಳಿಗೆ ಹೋಗಿ ಬೇಡಿಕೆಯ ನಟಿಯಾಗಿ ಗುರುತಿಸಿ ಕೊಂಡವರು ಹಲವರು.ಆ ಪೈಕಿ ಬೆಂಗಳೂರು ಹುಡುಗಿ ಸಾತ್ವಿಕ್ ಕೂಡ ಒಬ್ಬರು. ಈಗ ಕನ್ನಡದಲ್ಲೇ ಮಿಂಚಬೇಕೆಂದು ಬಂದಿದ್ದಾರೆ. ಒಂದೆರೆಡು ಸಿನಿಮಾ ಅವಕಾಶವೂ ಸಿಕ್ಕಿವೆ. ಹೊಸ ಅವಕಾಶಗಳತ್ತ ಮುಖ‌ ಮಾಡಿರುವ ಈ ಮೋಹಕ ತಾರೆ, ಚೆಂದದ ಫೋಟೋಶೂಟ್ ‌ನಲ್ಲಿ ಅಲ್ಟ್ರಾ ಮಾರ್ಡನ್ ಹುಡುಗಿಯಾಗಿ ಮಿರ ಮಿರ ಮಿಂಚಿದ್ದು ಹೀಗೆ…( Exclusive photos)

ಈಕೆ ಬೆಳ್ಳಿತೆರೆಯ ಕನಸು ಕಂಗಳ‌ ಚೆಲುವೆ. ಸಿನಿ‌ದುನಿಯಾ ಎಂಬ ಕಲರ್ ಫುಲ್ ಜಗತ್ತಿನಲ್ಲಿ ಕಲರ್ ಫುಲ್ ಕನಸು‌ ಕಂಡ ಮೋಹಕ ಬೆಡಗಿ. ನಾಯಕಿಯೋ, ಸಹ ನಟಿಯೋ ಯಾವುದೇ ಪಾತ್ರಕ್ಕೂ ಸೈ ಎನ್ನುವ ಅಲ್ಟ್ರಾ ಮಾರ್ಡನ್ ಹುಡುಗಿ. ಹೆಸರು ಸಾತ್ವಿಕಾ. ಕನ್ನಡ ಸಿನಿಮಾ ಮತ್ತು ಸೀರಿಯಲ್ ಜಗತ್ತಿಗೆ ಈಗಷ್ಟೇ ಪರಿಚಯವಾಗುತ್ತಿರುವ ಹೆಸರು. ಆದರೆ ತೆಲುಗು ಸೀರಿಯಲ್ ಜಗತ್ತಿನಲ್ಲಿ ಸಾಕಷ್ಟು ಹೆಸರು‌ ಮಾಡಿದ‌ ಪ್ರತಿಭಾವಂತೆ. ತೆಲುಗು ಈ ಟಿವಿಯಲ್ಲಿ ಪ್ರಸಾರವಾದ ದ’ ಅತ್ತಾರಿಂಟಿಕಿ ದಾರೆದಿ’ ಹೆಸರಿನ ಧಾರಾವಾಹಿಯಲ್ಲಿ ಸಾತ್ವಿಕಾ ಖಡಕ್ ವಿಲನ್ ಮಿಂಚಿದವರು‌. ವಿಲನ್ ಅಂದ್ರೆ ಬರೀ ವಿಲನ್ ಅಲ್ಲ, ಅದೇ ಅಲ್ಲಿನ ಮೈನ್ ಕ್ಯಾರೆಕ್ಟರ್. ಅವರ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿದ್ದ ಫೋಟೋ ನೋಡಿಯೇ ಸಾತ್ವಿಕಾ, ಆ ಕ್ಯಾರೆಕ್ಟರ್ ಗೆ ಸೆಲೆಕ್ಟ್ ಆಗಿದ್ರಂತೆ. ಸಾತ್ವಿಕಾ ಮೊದಲೇ ಛಲಗಾತಿ. ಅದೃಷ್ಟವೇ ಎನ್ನುವ ಹಾಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ‌ ಬಳಸಿಕೊಂಡರು. ಆ ಮೂಲಕ ಅಲ್ಲಿ ಮನೆ ಮಾತಾದರು. ಹಾಗಂತ ಪಕ್ಕದೂರು ಎಷ್ಟು ದಿನ?

ಕನ್ನಡವೇ ನನ್ನಮ್ಮ ..

ಕನ್ನಡದವಳಾಗಿ ಕನ್ನಡದಲ್ಲೇ ನಟಿಯಾಗಿ ಮಿಂಚ ಬೇಕೆನ್ನುವ ಮಹಾದಾಸೆ ಹೊತ್ತು, ಈಗ ಸ್ಯಾಂಡಲ್ ವುಡ್ ಅಂಗಳಕ್ಕೂ ದಾಂಗುಡಿಯಿಟ್ಟಿದ್ದಾರೆ. ಎಂಟ್ರಿಯಲ್ಲೇ ನಟ ದಿಗಂತ್ ಅಭಿನಯದ ‘ ಮಾರಿಗೋಲ್ಡ್’ ಹೆಸರಿನ ಒಂದು ಚಿತ್ರದಲ್ಲಿ ಪ್ರಮುಖ‌ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಆ ಚಿತ್ರ ರಿಲೀಸ್ ಗೂ ರೆಡಿ ಆಗುತ್ತಿದೆ. ಹಾಗೆಯೇ ಶಿವು ಜಮಖಂಡಿ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ಸೆಲೆಕ್ಟ್ ಆಗಿದ್ದಾರಂತೆ. ಸದ್ಯಕ್ಕೆ ಕನ್ನಡ ಸಿನಿ‌ ದುನಿಯಾದಲ್ಲೆ ನಟಿಯಾಗಿ ಗುರುತಿಸಿಕೊಳ್ಳುವ ಮಹಾದಾಸೆ ಅವರದು. ಹಾಗಾಗಿಯೇ ಈಗ ಹೊಸ ಅವಕಾಶಗಳತ್ತ ಮುಖ ಮಾಡಿರುವ ಸಾತ್ವಿಕಾ, ಒಂದು ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಹೈಟು, ವೈಟು, ಲುಕು, ಫೇಸು…ಉಹುಂ ಯಾವುದರಲ್ಲೂ ಕಮ್ಮಿಯಿಲ್ಲ ಈ ನಟಿ.

ಕ್ಯಾರೆಕ್ಟರ್ ಮುಖ್ಯ..

ಸಿನಿಮಾ‌ ಅಥವಾ ಸೀ‌ರಿಯಲ್ ಎಲ್ಲದ್ದಕ್ಕೂ ಸೈ ಎನ್ನುವಂತಿರುವ ಪಕ್ಕಾ ಅಲ್ಟ್ರಾ ಮಾಡ್ರನ್ ಹುಡುಗಿ. ದುಂಡು ಮುಖದ ಈ ಚೆಲುವೆ, ತನ್ನ ಅಂದದ ನೋಟದೊಂದಿಗೆ ಬಣ್ಣದ ಲೋಕದಲ್ಲಿ ಹೊಸ ಖದರ್ ತೋರಿಸುವ ತವಕದ. ಪಕ್ಕಾ ಮಾರ್ಡನ್ ಲುಕ್ ಕ್ಯಾರೆಕ್ಟರ್ ಗಳಿಗೆ ಹೇಳಿ ಮಾಡಿಸಿದಂತಿದ್ದರೂ, ಸೀರಿಯಲ್ ದುನಿಯಾದಲ್ಲಿ ಹೋಮ್ಲಿ‌ಗರ್ಲ್ ಆಗಿಯೂ ಮಿಂಚಿದವರು. ಯಾವುದೇ ಪಾತ್ರವಾದರೂ ಸರಿ ಎನ್ನುವ ಪ್ರತಿಭಾವಂತೆ.’ ನಟಿ‌ ಎನ್ನುವುದಕ್ಕಿಂತ ನನಗಿರುವ ಆಸೆ, ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆನ್ನುವುದು. ಹಾಗಾಗಿ ಇಂತಹದೇ ಪಾತ್ರ ಬೇಕು ಎನ್ನುವ ಯಾವುದೇ ನಿಬಂಧನೆ ನನ್ನಲ್ಲಿಲ್ಲ. ಪಾತ್ರ ಚೆನ್ನಾಗಿರಬೇಕು, ನನ್ನ ಮನಸ್ಸಿಗೆ ಹಿಡಿಸಬೇಕು, ಜನರಿಗೂ ಅದು ಇಷ್ಟ ಆಗಬೇಕು’ ಎನ್ನುತ್ತಾರೆ ನಟಿ ಸಾತ್ವಿಕಾ.

ಸಾಧನೆಯ ಸಾಹಸಿ..

ಸಾತ್ವಿಕಾ ಬರೀ‌ ನಟಿ ಯಲ್ಲ! ಹೊಸ ತಲೆಮಾರಿನ ಯುವತಿಯರಿಗೆ ಮಾದರಿಯಾಗಬಲ್ಲ ಸಾಧನೆಯ ಛಲಗಾತಿ. ನಟನೆಯ ಮೇಲಿನ ಆಸಕ್ತಿ ಕತೆ ಒಂದು ಕಡೆಯಾದರೆ, ಮತ್ತೊಂದಡೆ ಬಣ್ಣದ ಲೋಕದಲ್ಲೆ ಏನಾದರೂ ಸಾಧಿಸಬೇಕೆನ್ನುವ ಅವರ ಸಾಹಸವೇ ರೋಚಕವಾಗಿದೆ‌. ಸಿನಿಮಾ‌ ಮತ್ತು ಸಿರೀಯಲ್ ಚಿತ್ರೀಕರಣಕ್ಕೆ ಬೇಕಾಗುವ ಸುಂದರ ಮನೆಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವುದು ಅವರ ಪ್ರಮುಖ ಉದ್ಯೋಗ. ಅದು ಬಿಟ್ಟರೆ ಈಗ ತಮ್ಮದೇ ಒಂದು ಪ್ರೊಡಕ್ಷನ್ ಹೌಸ್ ತೆರೆಯುವ ಸಾಹಸದಲ್ಲಿದ್ದಾರೆ‌.‌ ಒಳ್ಳೆಯ ಸಿನಿಮಾ, ಸೀರಿಯಲ್ ನಿರ್ಮಾಣ ಮಾಡ್ಬೇಕು, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡ ಬೇಕೆನ್ನುವುದು ಅವರ ಕನಸು. ಅಂದುಕೊಂಡಂತೆ ಅವರ ಆ ಕನಸು ಈಡೇರಲಿ, ನಟಿಯಾಗಿಯೂ ಸಾತ್ವಿಕಾ ಮಿಂಚಲಿ ಎನ್ನುವುದು ಸಿನಿಲಹರಿ ಹಾರೈಕೆ.

Categories
ಸಿನಿ ಸುದ್ದಿ

ಶುಗರ್ ಲೆಸ್ ಶುರು… ಆ್ಯಕ್ಷನ್ ಕಟ್ ಹೇಳಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ನಿರ್ದೇಶನ ಮಾಡಲು ಹೊರಟ ಸುದ್ದಿ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಅವರು ‘ಶುಗರ್‌ಲೆಸ್‌ ‘ ಚಿತ್ರದ ಮುಹೂರ್ತ ನೆರವೇರಿಸಿದ್ದರು. ಸೋಮವಾರ ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ್ದಾರೆ.ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್,ಚಿತ್ರದ ಕಥೆಗೆ ತಕ್ಕಂತೆ ಶೀರ್ಷಿಕೆ ಇಟ್ಟಿದ್ದು, ಡಯಾಬಿಟಿಸ್‌ ಕುರಿತ ಕಥೆ ಹೇಳಲು ಹೊರಟಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಹೊರಟಿದ್ದಾರೆ ಅವರು.ಶಶಿಧರ್ ಹೇಳುವಂತೆ, ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅವರು. ಯಾವ ಭಾಷೆಯಲ್ಲೂ ಈ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ.ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದಾರೆ.

Categories
ಸಿನಿ ಸುದ್ದಿ

ರೋರಿಂಗ್ ಸ್ಟಾರ್ ನ್ಯೂ ಲುಕ್…. ಸಿಕ್ಸ್ ಪ್ಯಾಕ್ ಮದಗಜ!

ನಟ ಶ್ರೀಮುರಳಿ ಅಭಿನಯದ “ಮದಗಜ” ಇದೀಗ ಶೂಟಿಂಗ್ ಹೊರಡಲು ತಯಾರಿ‌ ನಡೆಸಿದೆ. ಸೆಪ್ಟೆಂಬರ್ 19 ರಿಂದ ಮದಗಜನ ಆರ್ಭಟ ಶುರುವಾಗಲಿದೆ.

ಈ ಹಂತದ ಚಿತ್ರೀಕರಣ ಸುಮಾರು 35 ದಿನಗಳ ಕಾಲ ನಡೆಯಲಿದ್ದು, ದೊಡ್ಡ ಹಂತದ‌ ಚಿತ್ರೀಕರವಿದು ಎಂಬುದು ತಂಡದ ಹೇಳಿಕೆ.
ಇನ್ನು, “ಮದಗಜ” ಚಿತ್ರಕ್ಕಾಗಿಯೇ ಶ್ರೀಮುರಳಿ ಅವರು, ತಮ್ಮ‌ ದೇಹವನ್ನು ದಂಡಿಸಿದ್ದಾರೆ. ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಮಿಂಚಲಿದ್ದಾರೆ ಎಂಬುದು ವಿಶೇಷ.‌ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿರುವ ಶ್ರೀ ಮುರಳಿ, ಈ‌ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಇದ್ದಾರೆ. ಇನ್ನು “ಅಯೋಗ್ಯ” ಬಳಿಕ ಮಹೇಶ್ ಕುಮಾರ್ ಅವರ ನಿರ್ದೇಶನಕ್ಕೆ ಇಳಿದಿದ್ದಾರೆ. ಈಗಿನ ಟ್ರೆಂಡ್ ಗೆ ತಕ್ಕ ಕಥೆ ಹೆಣೆದು ಪ್ಯಾನ್ ಇಂಡಿಯಾ ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ.
ಉಮಾಪತಿ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಊರ ಬಿಟ್ಟು ಊರೀಗೆ ಬಂದೀವಿ ಹಾಡಿಗೆ ಮೆಚ್ಚುಗೆ… ಯು ಟರ್ನ್‌ಗೆ ನವೀನ್‌ಸಜ್ಜು ಗಾನ


ಕನ್ನಡದಲ್ಲಿ “ಯು ಟರ್ನ್‌ ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಜೋರು ಸುದ್ದಿ ಮಾಡಿದ ಚಿತ್ರವದು. ಈಗ ಮತ್ತೆ “ಯು ಟರ್ನ್‌ ” ಸುದ್ದಿ ಮಾಡುತ್ತಿದೆ. ಆದರೆ, ಇದು ಆ “ಯು ಟರ್ನ್‌ ” ಅಲ್ಲ ಅನ್ನೋದು ವಿಶೇಷ. ಹೌದು, ಇದು “ಯು ಟರ್ನ್‌ 2” ಹಾಗಂತ, ಆ “ಯು ಟರ್ನ್‌ ” ಚಿತ್ರಕ್ಕೂ ಈ “ಯು ಟರ್ನ್‌ 2” ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ, ಇದೇ ಬೇರೆ. ಹೊಸ ಬಗೆಯ ಕಥೆ, ಚಿತ್ರಕಥೆ, ನಿರೂಪಣೆಯೊಂದಿಗೆ ತಯಾರಾಗಿರುವ ಸಿನಿಮಾ ಇದು. ಈ ಚಿತ್ರದ ಮೂಲಕ ಚಂದ್ರು ಓಬಯ್ಯ ನಿರ್ದೇಶಕರಾಗುತ್ತಿದ್ದಾರೆ. ಹಾಗಂತ ಚಂದ್ರು ಓಬಯ್ಯ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಚಂದ್ರು ಓಬಯ್ಯ ಅವರು ನಿರ್ದೇಶಕರಾಗುವುದಕ್ಕೂ ಮುನ್ನ ಸಂಗೀತ ನಿರ್ದೇಶಕರಾದವರು. “ಟ್ರಿಗರ್‌”, “ಮನೋರಥ”, ” ರಾಜಪಥ” ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು. ಈಗ “ಯು ಟರ್ನ್‌ 2” ನಿರ್ದೇಶನದ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರಂಗಿನ ಲೋಕಕ್ಕೆ ಕಲರ್‌ ಫುಲ್‌ ಕನಸಿನೊಂದಿಗೆ ಎಂಟ್ರಿಯಾದ ಚಂದ್ರ ಓಬಯ್ಯ ಇದೀಗ ತಮ್ಮ ಕನಸಿನ ನಿರ್ದೇಶನದ ಚಿತ್ರದ ಮೂಲಕ ಹೊಸ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದ ಮೊದಲ ಮೆಟ್ಟಿಲೆಂಬಂತೆ ಚಿತ್ರದ ಲಿರಿಕಲ್‌ ಸಾಂಗ್ ಕೂಡ ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
“ಯು ಟರ್ನ್‌ 2” ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನು ಐದು ದಿನಗಳ ಪ್ಯಾಚ್‌ ವರ್ಕ್‌ ಮುಗಿದರೆ ಸಿನಿಮಾ ಕಂಪ್ಲೀಟ್‌ ಆಗಲಿದೆ. ಸೆ. 11 ರಂದು ಚಿತ್ರದ ಲಿರಿಕಲ್‌ ವಿಡಿಯೊ ರಿಲೀಸ್‌ ಆಗಿದ್ದು, “ಊರ ಬಿಟ್ಟು ಊರೀಗೆ ಬಂದೀವಿ…” ಎಂಬ ಅರ್ಥಪೂರ್ಣ ಸಾಹಿತ್ಯವಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನವೀನ್‌ ಸಜ್ಜು ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಆನಂದ್‌ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್‌ ಆದ ಕೆಲ ಗಂಟೆಗಳಲ್ಲೇ ಸಾವಿರಾರು ಲೈಕ್ಸ್‌ ಪಡೆದುಕೊಂಡಿದೆ. ಹಾಡಲ್ಲಿ ಸಾಹಿತ್ಯದ ಜೊತೆಗೆ ಸಂಗೀತದ ಮಾಧುರ್ಯ ಕೂಡ ಸೊಗಸಾಗಿದೆ. ಲೈವ್‌ ಜರ್ಮನ್‌ ಫ್ಲ್ಯೂಟ್‌ ಬಳಸಲಾಗಿದೆ. ಗುಣಮಟ್ಟದಿಂದ ಕೂಡಿರುವ ಹಾಡು ಕೊಡುವ ಉದ್ದೇಶದಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಹಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕ ಚಂದ್ರು ಓಬಯ್ಯ ಅವರ ಮಾತು.
ಮೂವೀಸ್‌ ಫೋರ್ಟ್‌ ಬ್ಯಾನರ್‌ ನಲ್ಲಿ ಸಿನಿಮಾ ತಯಾರಾಗಿದ್ದು, ಆನಂದ್‌ ಸಂಪಂಗಿ ನಿರ್ಮಾಣವಿದೆ. ಇನ್ನು, ಈ ಸಿನಿಮಾದಲ್ಲಿ “ತಿಥಿʼ ಖ್ಯಾತಿಯ ಪೂಜಾ ನಾಯಕಿಯಾದರೆ, ಪ್ರಮುಖವಾಗಿ ನಿರ್ದೇಶಕ ಚಂದ್ರು ಓಬಯ್ಯ, ಕರಿಸುಬ್ಬು, “ಕಿರಿಕ್‌ ಪಾರ್ಟಿ” ರಾಘು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇದೊಂದು ಹಾರರ್‌ ಜಾನರ್‌ ಸಿನಿಮಾ ಆಗಿದ್ದು, ಮೊದಲು ಬಂದ ಯು ಟರ್ನ್‌ ಸಿನಿಮಾಗೂ ಈ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಸಾಂಗ್‌ ಶೂಟ್‌ ಮಾಡಿದರೆ ಚಿತ್ರೀಕರಣ ಮುಗಿಯಲಿದೆ. ಚಿತ್ರಕ್ಕೆ ನವೀನ್‌ ತುರುವೇಕೆರೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಚೆಲುವ ಮೂರ್ತಿ, ಪ್ರಮೋದ್‌ ಗೌಡ, ಸ್ವರಾಜ್‌, ಅಶೋಕ್‌ ಇತರರು ” ಯು ಟರ್ನ್‌ 2 ” ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರೆಡಿಯಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

 

 

Categories
ಸಿನಿ ಸುದ್ದಿ

ಗಾಂಧಿ ಆದರ್ಶಗಳಿಗೆ ಮನಸೋತ ನಾಗೇಂದ್ರ ಪ್ರಸಾದ್ ಪುತ್ರಿ!

ಗಾಂಧಿ‌ ಮತ್ತು‌ನೋಟು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ದ್ವಿವಿಜಾ

 

ಗಾಂಧಿ‌ ಕುರಿತು ಕನ್ನಡದಲ್ಲೇ ಸಾಕಷ್ಟು ಸಿನಿಮಾ‌ ಮಂದಿವೆ.‌ಇತ್ತೀಚೆಗಷ್ಟೇ ನಿರ್ದೇಶಕ ಶೇಷಾದ್ರಿ ನಿರ್ದೇಶಿಸಿ, ನಿರ್ಮಾಣ ಮಾಡಿದ ‘ಮೋಹನದಾಸ’ ದೊಡ್ಡ ಸುದ್ದಿ ಮಾಡಿದ್ದು ನಿಮಗೂ ಗೊತ್ತು.‌ಈಗ ಮತ್ತೊಂದು‌ ಗಾಂಧಿ ಕುರಿತ  ಚಿತ್ರ ಕನ್ನಡದಲ್ಲೇ ಸದ್ದು‌ಮಾಡುತ್ತಿದೆ. ಹಾಗಂತ ಇದು ಕೂಡ ಗಾಂಧಿ‌‌ ಕುರಿತ ಬಯೋಫಿಕ್ ಅಲ್ಲ. ಬದಲಿಗೆ ಗಾಂಧಿ ಆದರ್ಶ ಗಳಿಗೆ ಮನಸೋತ ಒಬ್ಬ ಬಾಲಕಿಯ ಕತೆ. ಆ ಚಿತ್ರದ ಹೆಸರು ಗಾಂಧಿ ಮತ್ತು‌ ನೋಟು.

……………

ಆ‌ ಹುಡುಗಿಯ ಹೆಸರು ಸುಕ್ರಿ. ಕುಗ್ರಾಮವೊಂದರಲ್ಲಿ ಓದುತ್ತಿರುವ ಬಾಲಕಿ. ಆಕೆಗೆ ಗಾಂಧಿ ಮತ್ತು ಗಾಂಧಿ‌ಯ  ಆದರ್ಶಗಳ ಮೇಲೆ‌ ತೀವ್ರ ಆಸಕ್ತಿ.  ಪರಿಣಾಮ ಗಾಂಧಿ‌ ಆದರ್ಶಗಳನ್ನು ಓದುತ್ತಾ ಹೋದಂತೆ, ಜೀವನದಲ್ಲೂ ಅಳವಡಿಸಿಕೊಳ್ಳಲು‌ ಮುಂದಾಗುತ್ತಾಳೆ. ಸತ್ಯ ಹೇಳುತ್ತಾಳೆ.‌‌  ದುಶ್ವಟಗಳಿಂದ ದೂರ ಉಳಿಯುತ್ತಾಳೆ. ಮನೆಯಲ್ಲಿ‌ ಅವರಪ್ಪ ವಿಪರೀತ ಕುಡುಕ.‌ ದುಶ್ಚಟದಿಂದ‌ ತನ್ನ‌ ತಂದೆ ದೂರವಿರುವಂತೆ ಒತ್ತಾಯಿಸು ತ್ತಾಳೆ.‌ಹಾಗೆಯೇ ಸಮಾಜದಲ್ಲಿ ಕೆಟ್ಟದ್ದು‌ನಡೆದರೆ ಖಂಡಿಸುತ್ತಾಳೆ. ದುಶ್ಚಟದಿಂದ ಜನರು ದೂರವಿರುವಂತೆ ಹೋರಾಡುತ್ತಾಳೆ.‌ ಆದರೆ ಈ‌ ಸಮಾಜ‌ ಅಥವಾ ವ್ಯವಸ್ಥೆ ಒಬ್ಬ ಬಾಲಕಿಯ ಮಾತನ್ನು ಅಷ್ಟು ಸುಲಭವಾಗಿ‌ ಒಪ್ಪಿಕೊಳ್ಳುತ್ತಾ? ಮುಂದೇನಾಗುತ್ತೆ ಎನ್ನುವುದು ಈ ಚಿತ್ರದ ಕತೆ.‌ ಅಂದ ಹಾಗೆ ಈ ಚಿತ್ರದ ಹೆಸರು’ ಗಾಂಧಿ‌ ಮತ್ತು ನೋಟು’ .ಇದು ಯೋಗಿ ದೇವಗಂಗೆ ನಿರ್ದೇಶನದ ಚಿತ್ರ.‌ ಈ‌ಹಿಂದೆ‌ಇವರು ಸೆಕೆಂಡ್ ಹಾಫ್ ಹೆಸರಿನ ಚಿತ್ರವೊಂದನ್ನು ‌ನಿರ್ದೇಶಿಸಿದ್ದರು. ಆದಾದ‌ ನಂತರ‌ಇದು ಅವರ ಮತ್ತೊಂದು ಪ್ರಾಜೆಕ್ಟ್.ವಿಶೇಷ ಅಂದ್ರೆ,  ಇದರ ಪ್ರಮುಖ‌ ಪಾತ್ರಧಾರಿ‌‌ ಬಾಲಕಿ‌ ಸುಕ್ರಿಯಾಗಿ ಕಾಣಿಸಿಕೊಳ್ಳುತ್ತಿರುವವರು ಪುಟಾಣಿ ದ್ವಿವಿಜಾ. ಈಕೆ ಸಾಹಿತಿ ನಾಗೇಂದ್ರ ಪ್ರಸಾದ್ ಪುತ್ರಿ. ಈ ಚಿತ್ರದೊಂದಿಗೆ ಬಾಲ‌ನಟಿಯಾಗಿ ಚಿತ್ರರಂಗಕ್ಕೆ‌ ಎಂಟ್ರಿಯಾಗುತ್ತಿದ್ದಾಳೆ. ಅಪ್ಪ ಸಿನಿಮಾ‌ ನಿರ್ದೇಶನ ,ಸಾಹಿತ್ಯ ‌ಮತ್ತು ನಟನೆಯಲ್ಲಿ ಮಿಂಚುತ್ತಿದ್ದರೆ, ತಂದೆಯಂತೆಯೇ ಮಗಳು ಕೂಡ  ಬಾಲ‌ನಟಿಯಾಗಿ ಬೆಳ್ಳಿ ಪರದೆಯಲ್ಲಿ‌ ಮಿಂಚಲು ರೆಡಿಯಾಗಿದ್ದಾಳೆ. ಮಗಳನ್ನು ಸಿನಿಮಾ‌ರಂಗಕ್ಕೆ‌ಪರಿಚಯಿಸುತ್ತಿರುವುದಕ್ಕೆ ಪ್ರಮುಖ‌ಕಾರಣ ಕತೆ. ಅದರಲ್ಲೂ ಅದು ಗಾಂಧಿ‌ ಆದರ್ಶಗಳ‌ ಮೇಲಿನ ಕತೆ.‌ ಮೊದಲ‌ ಬಾರಿಗೆ ಅಂತಹ ಸಿಕ್ಕಿತು.‌ಹಾಗಾಗಿ‌ ನಿರ್ದೇಶಕರ ಮಾತಿಗೆ ಗೌರವ ಕೊಟ್ಟು ಮಗಳನ್ನು‌ಈ‌ ಚಿತ್ರದಲ್ಲಿ ಅಭಿನಯಿಸಲು ಕಳುಹಿಸಿದೆ’ ಎನ್ನುತ್ತಾರೆ ಸಾಹಿತಿ ನಾಗೇಂದ್ರ ಪ್ರಸಾದ್.ದ್ವಿವಿಜಾ ಜತೆಗೆ ಸಾಕಷ್ಟು ಮಂದಿ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.


ಇನ್ನು ಭವಾನಿ ಕ್ರಿಯೇಷನ್ಸ್ ಮೂಲಕ ಸುಧಾರಾಣಿ, ವೀಷಾ ಪದ್ನನಾಭ್ ಹಾಗೂ ಮಂಜುನಾಥ್ ಎಂಬುವರು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಸಾಹಿತ್ಯ ನಾಗೇಂದ್ರ ಪ್ರಸಾದ್ ಬರೆದಿದ್ದು, ಗುರುಪ್ರಸಾದ್ ಸಂಭಾಷಣೆ ಚಿತ್ರಕ್ಕಿದೆ‌.‌ ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರ್ದೇಶಕ ಯೋಗಿ ಪ್ರಕಾರ ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಶಿವಮೊಗ್ಗ, ಹೊಸನಗರ, ಕೊಡಚಾದ್ರಿ‌ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಅದರ ಜತೆಗೆ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಕೂಡ ಕಂಪ್ಲೀಟ್ ಆಗಿದೆ‌ . ಚಿತ್ರ ರಿಲೀಸ್ ಗೆ ರೆಡಿಯಿದ್ದು, ಸೂಕ್ತ ಸಮಯಕ್ಕೆ ಕಾಯುತ್ತಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಮಂಗಳ ಹಿಂದೆ ನಿಂತ ಕುಣಿಗಲ್‌ ಹುಡುಗ- ಕನ್ನಡ ವೆಬ್‌ ಸೀರೀಸ್‌ನಲ್ಲಿ ಥ್ರಿಲ್ಲರ್‌ ಸ್ಟೋರಿ

ಈಗಂತೂ ಡಿಜಿಟಲ್‌ನದ್ದೇ ಸುದ್ದಿ. ಅದರಲ್ಲೂ ಈಗಿನ ಯೂಥ್‌ ಡಿಜಿಟಲ್‌ ವೇದಿಕೆಯನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಂತೂ ಈಗಾಗಲೇ ವೆಬ್‌ಸೀರೀಸ್‌ ಹವಾ ಜೋರಾಗಿಯೇ ಇದೆ. ಅಷ್ಟಕ್ಕೂ ಈ ವೆಬ್‌ ಸೀರೀಸ್‌ ನಲ್ಲಿ ಹೊಸಬರೇ ಇದ್ದಾರೆ ಅನ್ನೋದು ವಿಶೇಷ. ಆ ಮೂಲಕ ಕೆಲವರು ಸುದ್ದಿಯಾಗಿದ್ದಾರೆ ಕೂಡ. ಆ ಸಾಲಿಗೆ “ಮಂಗಳʼ ಹೆಸರಿನ ವೆಬ್‌ಸೀರೀಸ್‌ ಕೂಡ ಸೇರಿದೆ. ಹೌದು, ಈಗಾಗಲೇ “ಮಂಗಳʼ ಎಂಬ ವೆಬ್‌ ಸೀರೀಸ್‌ ಹಿಂದೆ ಹೊಸಬರ ತಂಡ ಅಣಿಯಾಗಿದೆ. ಈಗಾಗಲೇ “ಮಂಗಳ” ವೆಬ್‌ ಸೀರೀಸ್‌ ನ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದೆದು, ಆ ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ.
ಅಂದಹಾಗೆ, ಈ “ಮಂಗಳʼ ವೆಬ್‌ಸೀರೀಸ್‌ಗೆ ಪೃಥ್ವಿ ಕುಣಿಗಲ್ ನಿರ್ದೇಶಕರು. ಕಥೆ, ಚಿತ್ರಕಥೆ ಇವರೇ ಬರೆದಿದ್ದಾರೆ. ಜೆ.ಜಿ.ಪ್ರೊಡಕ್ಷನ್ಸ್‌ ನಡಿ ಈ ವೆಬ್‌ ಸೀರೀಸ್‌ ನಿರ್ಮಾಣ ಮಾಡಲಾಗಿದೆ. “ಮಂಗಳ” ಕುರಿತು ನಿರ್ದೇಶಕ ಪೃಥ್ವಿ ಕುಣಿಗಲ್‌ ಹೇಳುವುದೇನು ಗೊತ್ತಾ? ಈ ವೆಬ್‌ ಸೀರೀಸ್ ನಲ್ಲಿ ಏಳು ಎಪಿಸೋಡ್‌ಗಳು ಇರಲಿವೆ. ಇದೊಂದು ಮಂಗಳಮುಖಿಯರ ಕುರಿತು ಸಾಗುವ ಕಥೆ. ಮಂಗಳ ಮುಖಿ ಅವರ ಬಗ್ಗೆ ಮಾಡುತ್ತಿರುವುದರಿಂದ ಸಾಕಷ್ಟು ಸಂಶೋಧನೆ ನಡೆಸಿ, ಚಿತ್ರಕ್ಕೆ ಕೈ ಹಾಕಿದ್ದು, ಮಂಗಳ ಮುಖಿಯರು ವಾಸ ಮಾಡುವಂತಹ ಸ್ಥಳಗಳಿಗೆ ಹೋಗಿ, ಅವರ ಹಾವ-ಭಾವ, ನೋವು-ನಲಿವು ಸೇರಿದಂತೆ ಅವರ ಕಷ್ಟ-ಸುಖ ಎಲ್ಲವನ್ನೂ ಆಲಿಸಿ, ಒಂದು ವರ್ಷಗಳ ಕಾಲ ಗಮನಿಸಿ, ಸಂಶೋಧನೆಯನ್ನೂ ನಡೆಸಿ, ಈಗ ವೆಬ್‌ ಸೀರೀಸ್‌ ಮಾಡಲಾಗುತ್ತಿದೆ. ಈ “ಮಂಗಳʼ ವೆಬ್‌ ಸೀರೀಸ್‌ ಒಂದು ಥ್ರಿಲ್ಲರ್‌ ಸ್ಟೋರಿ. ಒಂದು ಕೊಲೆಯ ಸುತ್ತ ನಡೆಯೋ ಕಥೆ ಇದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ, ಮಂಗಳ ಮುಖಿಯೊಬ್ಬರು ಸಿಲುಕುತ್ತಾರೆ. ಅದರಿಂದ ಅವರು ಹೇಗೆಲ್ಲಾ ಪರಿತಪಿಸುತ್ತಾರೆ. ಆಮೇಲೆ ಅದರಿಂದ ಅವರು ಹೊರ ಬರುತ್ತಾರೋ ಇಲ್ಲವೋ ಎಂಬುದು ಸಸ್ಪೆನ್ಸ್.
ವಿಶೇಷವೆಂದರೆ, “ಮಂಗಳ” ಈಗಾಗಲೇ ಮಾರತಹಳ್ಳಿ ಸುತ್ತಮುತ್ತ ಹಂತದ ಚಿತ್ರೀಕರಣ ಮುಗಿಸಿದೆ. ಇಷ್ಟರಲ್ಲೇ ದೂರದ ಕೊಲ್ಕೊತ್ತಾದಲ್ಲೂ ಹೋಗಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕ ಪೃಥ್ವಿ ಕುಣಿಗಲ್‌ ಅವರದು. ಅಂದಹಾಗೆ, ಈ ವೆಬ್‌ ಸೀರೀಸ್‌ ನಲ್ಲಿ ಅಜಯ್‌ ರಾಜ್‌, ವಿನಯ್‌ ಕೃಷ್ಣಸ್ವಾಮಿ, ಕಾವ್ಯಾಶಾಸ್ತ್ರಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ, ಬೇಬಿ ಅಂಕಿತ, ಮಂಜು ಪಾವಗಡ, ಅಮರ್ ನಾಥ್‌, ಕಿರಣ್ ಬಗಾಡೆ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಆನಂದ್‌ ಸುಂದರೇಶ ಕ್ಯಾಮೆರಾ ಹಿಡಿದರೆ, ಮಯೂರೇಶ್‌ ಸಂಗೀತವಿದೆ. ಇನ್ನು ಪ್ರಮೋದ್‌ ಮರವಂತೆ ಸಂಭಾಷಣೆ ಬರೆದಿದ್ದಾರೆ.  ಮಹೇಶ್ ತೊಗಟ ಸಂಕಲನವಿದೆ. ಒಟ್ಟಾರೆ, ಥ್ರಿಲ್‌ ಎನಿಸುವ ವೆಬ್‌ ಸೀರೀಸ್‌ ಕಟ್ಟಿಕೊಡುವ ಉತ್ಸಾಹದಲ್ಲಿರುವ ಪೃಥ್ವಿ ಮತ್ತು ತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದೆ.

error: Content is protected !!