ಆ್ಯಕ್ಟರ್ ಆಗಲು ಬಂದು ಡೈರೆಕ್ಟರ್ ಆದ ಎಳ್ಳಂಪಳ್ಳಿ ಹುಡುಗನ ‘ಬಹುಕೃತವೇಷಂ’

ಹಸಿವು ನಿರ್ದೇಶಕನ್ನನಾಗಿಸಿತು- ಪ್ರಶಾಂತ್ ಎಳ್ಳಂಪಳ್ಳಿ


ಸಿನಿಮಾ ಅಂದ್ರೆ ಸಿಕ್ಕಾ ಪಟ್ಟೆ ಕ್ರೇಜು. ವಾರಕ್ಕೆ ಮೂರು ಸಿನಿಮಾ ನೋಡುತ್ತಿದ್ದೆ. ನೋಡ್ತಾ ನೋಡ್ತಾ ನಟನೆಯ ಕನಸು ಕಂಡೆ. ಆ ಕನಸು ನನಸಾಗಿಸಿಕೊಳ್ಳಲು ನನ್ನೂರು ಎಳ್ಳಂಪಳ್ಳಿಯಿಂದ ಬೆಂಗಳೂರು ಬಸ್ಸು ಹಿಡಿದೆ‌‌. ಅಲ್ಲಿಂದ ಬಂದು ಇಲ್ಲಿಗೆ ೧೮ ವರ್ಷ. ಹತ್ತಾರು ಅವತಾರ ಗಳಾದವು. ಕೊನೆಗೆ ನಿರ್ದೇಶನವೇ ಸೂಕ್ತ ಎನಿಸಿತು. ಹಾಗೆ ಆಗಲು ಪಟ್ಟ ಶ್ರಮ ಮಾತ್ರ ಭೀಕರವಾದದ್ದು….

ಯುವ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಇಷ್ಟು ಹೇಳಿ ಒಂದು ಕ್ಷಣ ಮೌನಕ್ಕೆ ಜಾರಿದರು. ಸುದೀರ್ಘ 18 ವರ್ಷದ ಹಾದಿಯನ್ನು ನೆನಪಸಿಕೊಳ್ಳುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು. ಏನೇನೋ ಆಗಿ, ಕೊನೆಗೆ ನಿರ್ದೇಶಕನಾದೆ ಎನ್ನುವ ಸಮಾಧಾನವೂ ಇತ್ತು. ಆದರೆ ಅಂತಹದೊಂದು ಪವಿತ್ರವಾದ ಜವಾಬ್ದಾರಿ ಯ ಕೆಲಸಕ್ಕೆ ತನ್ನನ್ನು ತಾನು ಪಕ್ವವಾಗಿಸಿಕೊಳ್ಳಲು ಅವರು ಪಟ್ಟ ಶ್ರಮ ಅತ್ಯಂತ ಕಠಿಣವಾಗಿತ್ತು ಅಂತ ಪ್ಲಾಷ್ ಬ್ಯಾಕ್ ಕಡೆ ಜಾರಿದರು. ನಮ್ಮಿಬ್ಬರ ನಡುವೆ ಈ ಮಾತಿನ ಲಹರಿ ಶುರುವಾಗಿದ್ದು ‘ ಬಹುಕೃತವೇಷಂ’ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ.

ಬಹುಕೃತವೇಷಂ…..

‘ಗೌಡ್ರು ಸೈಕಲ್’ ಚಿತ್ರದ ನಂತರ ಯುವ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಈಗ ‘ಬಹುಕೃತವೇಷಂ ‘ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ಹೊಸ ಪ್ರತಿಭೆ ಶಶಿಕಾಂತ್ ಈ‌ ಚಿತ್ರದ ನಾಯಕ. ‘ಅಗ್ನಿ ಸಾಕ್ಷಿ’ ಧಾರಾವಾಹಿಯ ಖ್ಯಾತಿಯ ನಟಿ ವೈಷ್ಣವಿ ಇದರ ನಾಯಕಿ. ಚಿತ್ರಕ್ಕೆ ಲಾಕ್ ಡೌನ್ ಗೂ ಮುಂಚೆಯೇ ಚಾಲನೆ ಸಿಕ್ಕಿತ್ತು. ಲಾಕ್ ಡೌನ್ ಶುರುವಾದ ಕಾರಣ ಚಿತ್ರೀಕರಣ ಸ್ಥಗಿತ ಗೊಂಡಿತು. ಒಂದಷ್ಟು ಗ್ಯಾಪ್ ನಂತರವೀಗ ಮತ್ತೆ ಚಿತ್ರೀಕರಣ ಶುರುವಾಗಿದೆ. ಬೆಂಗಳೂರಿನ ಕೆಂಗೇರಿಯ ಮನೆಯೊಂದರಲ್ಲಿ ಆ ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪ್ರಶಾಂತ್ ಎಳ್ಳಂಪಳ್ಳಿ ಮಾತಿಗೆ ಸಿಕ್ಕರು. ತಾವು ನಿರ್ದೇಶಕನಾದ ಹಿಂದಿನ ರೋಚಕ ಸ್ಟೋರಿ ತೆರೆದಿಟ್ಟರು.

ಎಳ್ಳಂ‌ಪಳ್ಳಿ ಎಂಬ ಪಕ್ಕಾ ಹಳ್ಳಿ ಪ್ರತಿಭೆ….

‘ನನ್ನೂರು ಎಳ್ಳಂಪಳ್ಳಿ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು. ಅಷ್ಟೇನು ಅಭಿವೃದ್ಧಿ ಕಾಣದ ಕುಗ್ರಾಮ. ಅಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಬಾಲ್ಯದಿಂದಲೇ ಸಿನಿಮಾ ಹುಚ್ಚು. ಗೆಳೆಯರೆಲ್ಲಾ ತಾವು ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಮೇಸ್ಟ್ರು ಆಗ್ಬೇಕು ಅಂತೆಲ್ಲ ಹೇಳುತ್ತಿದ್ದಾಗ ನಾನು ಆ್ಯಕ್ಟರ್ ಆಗ್ಬೇಕು ಅಂತಿದ್ದೆ. ಹಾಗೆ ಶುರುವಾಗಿದ್ದ ನಟನೆಯ ಕನಸು‌ ನನಸಾಗಿಸಿಕೊಳ್ಳಲು ಕಾಲೇಜು ಶಿಕ್ಷಣ ಮುಗಿಸಿದೆ. ಆನಂತರ ಊರಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದೆ‌. ಅಲ್ಲಿಂದ ಬೆಂಗಳೂರಿಗೆ ಬಸ್ಸು ಹತ್ತಿದೆ. ಅಲ್ಲಿ ನನ್ನ ದೊಡ್ಡಪ್ಪನ ಮಗನ‌ ಅಂಗಡಿಯಲ್ಲಿ ಕೆಲಸ‌ ಮಾಡಿದೆ.ಅಲ್ಲಿಂದ ಯು.ವಿ. ನಂಜಪ್ಪ ಎಂಬುವರು ಪರಿಚಯವಾದರು. ಅವರ ಮೂಲಕ ಬೆನಕ ರಂಗ ತಂಡಕ್ಕೆ ಪರಿಚಯವಾಯಿತು. ಅಲ್ಲಿ ಯಶ್ ಕೂಡ ಇದ್ದರು. ನಾವೆಲ್ಲ ಒಟ್ಟಿಗೆ ನಟನೆಯ ತರಬೇತಿ ಪಡೆಯು ತ್ತಿದ್ದೇವು‌.‌ ಅಲ್ಲಿಂದ ಹಲವು ಧಾರಾವಾಹಿಗಳಲ್ಲಿ ನಟಿಸಿದೆ. ಸಿನಿಮಾಗಳಿಗೂ ಬಣ್ಣ ಹಚ್ಚಿದೆ‌. ಹಿರಿಯರಾದ ಸುಧಾಕರ್ ಬನ್ನಂಜೆ ಸೇರಿದಂತೆ ಹಲವರಿಗೆ ಸಹಾಯಕ ನಿರ್ದೇಶಕನಾದೆ.‌ ಹಾಗೆಯೇ ನನಗೂ ಸ್ವತಂತ್ರ ನಿರ್ದೇಶಕನಾಗುವ ಅವಕಾಶ ಬಂತು. ‘ಗೌಡ್ರು ಸೈಕಲ್’ ಮೂಲಕ‌ ಅಂತ ಅದೃಷ್ಟ ಒಲಿದು ಬಂತು’ ಎನ್ನುತ್ತಾ ನಿರ್ದೇಶಕನಾದೆ ಬಗೆಯನ್ನು ಪ್ರಶಾಂತ್ ಮನಬಿಚ್ಚಿ ಹೇಳಿಕೊಂಡರು.

ಸೈಕಲ್ ಏರಿ ಬಂದ್ರು…

‘ಗೌಡ್ರು ಸೈಕಲ್’ ಪ್ರಶಾಂತ್ ಎಳ್ಳಂಪಳ್ಳಿ‌ನಿರ್ದೇಶನದ ಚೊಚ್ವಲ ಸಿನಿಮಾ. ಹೊಸಬರನ್ನು ಹಾಕಿಕೊಂಡು‌ ಆ ಸಿನಿಮಾ ಮಾಡಿದ್ದರು. ಆದರೆ ಚಿತ್ರಕ್ಕೆ ನಿರೀಕ್ಷಿತ ಪ್ರಚಾರ ಸಿಗಲಿಲ್ಲ. ಒಂದಷ್ಟು ಕೊರತೆಗಳ ನಡುವೆಯೇ ಈ ಚಿತ್ರ ಚಿತ್ರ ಮಂದಿರಕ್ಕೆ ಬಂತು. ಕತೆ ಚೆನ್ನಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಅದರೆ ನಿರೀಕ್ಷಿತ ಸಕ್ಸಸ್ ಸಿನಿಮಾಕ್ಕೆ ಸಿಗದೆ ಹೋಯಿತು.‌ ಅದರೂ ಪ್ರಶಾಂತ್ ಮೇಲೆ ಕೆಲವರು ಇಟ್ಟಿದ್ದ ನಂಬಿಕೆಗೆ ಅದು ದಕ್ಕೆ ತರಲಿಲ್ಲ. ಅವರ ವರ್ಚಸ್ಸು ಕೂಡ ಕಮ್ಮಿ ಆಗಲಿಲ್ಲ. ಆಗ ಶುರುವಾಗಿದ್ದು ‘ಬಹುಕೃತವೇಷಂ’. ಚಿತ್ರ.

ಕಷ್ಟ ಇಲ್ಲಿಗೆ ಬಂದಾಗಲೇ ಗೊತ್ತಾಗಿದ್ದು…

‘ಸರ್ , ನಾನು ನಿರ್ದೇಶಕನಾಗಿದ್ದು ಇಲ್ಲಿಗೆ ಬಂದ 18 ವರ್ಷಗಳ ಬಳಿಕ. ಇದು ನಾವಂದುಕೊಂಡಷ್ಟು ಸುಲಭದ ಹಾದಿಯಲ್ಲ. ಕಡು ಕಷ್ಟ.‌ ಯಾವುದೇ ಹಿನ್ನೆಲೆ ಇಲ್ಲದೆ, ಹಣ ಬಲ ಇಲ್ಲದೆ ಇಲ್ಲಿ ಒಂದು ಹಂತಕ್ಕೇರಿದ್ದು ಅತ್ಯಂತ ಕಠಿಣ. ಬಾಲ್ಯದಲ್ಲಿ ನಾನೇನೋ ಆ್ಯಕ್ಟರ್ ಆಗ್ಬೇಕು ಅಂತ ಕನಸು ಕಂಡೆ. ಆದರೆ ಅದನ್ನು ನನಸಾಗಿಸಿಕೊಳ್ಳುವುದು ಎಷ್ಟು ಕಷ್ಟ ಅಂತ ಇಲ್ಲಿಗೆ ಬಂದಾಗಲೇ ಗೊತ್ತಾಗಿದ್ದು. ಕೊನೆಗೆ ನಿರ್ದೇಶಕನಾಗಲು ಹೊರಟೆ. ಆಗ ನನಗೆ ಸಹಕಾರ, ಸಲಹೆ ನೀಡಿದ್ದು ಗುರುಗಳಾದ ಸುಧಾಕರ್ ಬನ್ನಂಜೆ ಹಾಗೂ‌ ಟಿ.ಎಸ್. ನಾಗಭರಣ. ಅವರಿಂದಲೇ ನಾನಿಲ್ಲಿಗೆ ಬಂದೆ ‘ ಎನ್ನುತ್ತಾರೆ ಪ್ರಶಾಂತ್.

ಜನ ಮೆಚ್ಚುವ ಸಿನಿಮಾವೇ ಟಾರ್ಗೆಟ್‌…

ಸಿನಿಮಾ‌ ನಿರ್ದೇಶವನ್ನೇ ಮುಂದೆ ವೃತ್ತಿಯಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಪ್ರಶಾಂತ್ ಅವರಿಗೆ ಪ್ರೇಕ್ಷಕರಿಗೆ‌ ಒಳ್ಳೆಯ ಸಿನಿಮಾ ಕೊಡಬೇಕೆನ್ನುವುದೇ ಮೊ‌ದಲ ಟಾರ್ಗೆಟ್ ಅಂತೆ. ಆ ನಿಟ್ಟಿನಲ್ಲೇ ತಮ್ನ ಎರಡನೇ ಸಿನಿಮಾ ‘ಬಹುಕೃತವೇಷಂ ‘ಮೂಡಿಬರಲಿದೆ ಎನ್ನುತ್ತಾರೆ‌. ತಮ್ಮ ಆಶಯಕ್ಕೆ ಚಿತ್ರದ ನಿರ್ಮಾಪಕರು ಹಾಗೂ ಚಿತ್ರದ ನಾಯಕ ಶಶಿಕಾಂತ್ ತಂಡ ಸಾಥ್ ನೀಡಿದ್ದಾರೆ ಎನ್ನುತ್ತಾ ನಗು ಬೀರುತ್ತಾರೆ ಪ್ರಶಾಂತ್. ಅವರು ಅಂದುಕೊಂಡಂತೆ ‘ ಬಹುಕೃತವೇಷಂ’ ಒಂದೊಳ್ಳೆಯ ಸಿನಿಮಾವಾಗಿ‌ ಮೂಡಿ‌ಬರಲಿ. ಪ್ರಶಾಂತ್ ಸ್ಟಾರ್‌ ನಿರ್ದೇಶಕರಾಗಲಿ ಎನ್ನುವುದು ‘ಸಿನಿ ಲಹರಿ’ಯ ಹಾರೈಕೆ.

Related Posts

error: Content is protected !!