ಇದೇ ಮೊದಲ ಸಲ 5ಡಿ ಚಿತ್ರದಲ್ಲಿ ಖಡಕ್ ಕಾಪ್
ನೃತ್ಯ ನಿರ್ದೇಶಕನಾಗಿ ಇದ್ದವನು ನಾನು. ಸದಾ ತೆರೆ ಹಿಂದೆ ಇರುವಂಥವನಿಗೆ ಒಳ್ಳೆಯ ಅವಕಾಶವಿದು.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ…
ಮಾಲೂರು ಶ್ರೀನಿವಾಸ್. ಕನ್ನಡ ಚಿತ್ರರಂಗ ಕಂಡ ಯಶ್ವಿ ನೃತ್ಯ ನಿರ್ದೇಶಕ. ಈ ಬಣ್ಣದ ಲೋಕ ಸ್ಪರ್ಶಿಸಿ ಎರಡು ದಶಕ ಕಳೆದಿರುವ ಮಾಲೂರು ಶ್ರೀನಿವಾಸ್, ಸುಮಾರು 400ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ಸೇರಿದಂತೆ ಹೊಸಬರಿಗೂ ಸ್ಟೆಪ್ ಹೇಳಿಕೊಟ್ಟ ಕೀರ್ತಿ ಇವರದು.
ಇಷ್ಟಕ್ಕೂ ಈ ಡ್ಯಾನ್ಸ್ ಮಾಸ್ಟರ್ ಮಾಲೂರು ಶ್ರೀನಿವಾಸ್ ಕುರಿತು ಇಷ್ಟೊಂದು ಪೀಠಿಕೆಯಾಕೆ ಗೊತ್ತಾ? ಮಾಲೂರು ತೆರೆ ಹಿಂದಷ್ಟೇ ಅಲ್ಲ, ತೆರೆ ಮೇಲೂ ಕಾಣಿಸಿಕೊಂಡಿದ್ದಾರೆ. ಹಾಗಂತ, ಅವರಿಗೆ ಇದು ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಸ್ಟಾರ್ ಜೊತೆ ಹೆಜ್ಜೆ ಹಾಕಿದ್ದಾರೆ.
ಸಣ್ಣಪುಟ್ಟ ಪಾತ್ರಕ್ಕೂ ಜೈ ಎಂದಿದ್ದಾರೆ. ಆದರೆ, ಈಗ ಮೊದಲ ಸಲ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಹೌದು, ಮಾಲೂರು ಶ್ರೀನಿವಾಸ್, ಎಅ್.ನಾರಾಯಣ್ ನಿರ್ದೇಶನದ “5ಡಿ” ಚಿತ್ರದಲ್ಲಿ ಒಂದೊಳ್ಳೆಯ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗನ್ ಹಿಡಿದಿದ್ದಾರೆ.
ಆ ಕುರಿತು ಹೇಳುವ ಮಾಲೂರು ಶ್ರೀನಿವಾಸ್, ” ಇದು ಮೊದಲ ಕಾಪ್ ಪಾತ್ರ. ನಾನು ಹಿಂದೆ ಒಂದಷ್ಟು ಸಿನಿಮಾದಲ್ಲಿ ನಟಿಸಿದ್ದರೂ, ಈ ರೀತಿಯ ಪಾತ್ರ ಮಾಡಿರಲಿಲ್ಲ. ಈಗ ನಾರಾಯಣ್ ಸರ್ ನನ್ನ ಗುರುಗಳು. ಅವರ ಎಲ್ಲಾ ಸಿನಿಮಾಗಳಿಗೂ ನಾನೇ ಕೋರಿಯೋಗ್ರಾಫರ್. ಹಾಗಾಗಿ ಇಲ್ಲೂ ಹಾಡುಗಳಿಗೆ ಕೋರಿಯೋಗ್ರಾಫ್ ಮಾಡಿದ್ದೇನೆ. ನಾರಾಯಣ್ ಸರ್ ಇಲ್ಲಿ ಕಾಪ್ ಪಾತ್ರ ಮಾಡಿಸಿದ್ದಾರೆ. ಈಗಾಗಲೇ ಆ ಸೀನ್ ಚಿತ್ರೀಕರಣಗೊಂಡಿದೆ.
ನಾನೊಬ್ಬ ಕಡಕ್ ಪೊಲೀಸ್ ಅಧಿಕಾರಿ. ನನ್ ಕಂಟ್ರೋಲ್ ಇರುವ ಒಂದು ಪೊಲೀಸ್ ಸ್ಟೇಷನ್ ಅಧಿಕಾರಿ ನಾನು. ಚೆನ್ನಾಗಿದೆ. ಮೂರು ದಿನಗಳ ಕಾಲ ನನ್ನ ಎಪಿಸೋಡ್ ಮಾಡಲಾಗಿದೆ. ಆದಿತ್ಯ ಅವರ ಜೊತೆಗಿನ ಕಾಂಬಿನೇಷನ್ ಇಲ್ಲ.
ಒಂದು ತನಿಖೆ ಅಧಿಕಾರಿ. ಒಳ್ಳೆಯ ಪಾತ್ರವದು. ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನಂಬರ್ ಆಫ್ ಶಾಟ್ಸ್, ಬಿಲ್ಡಪ್ಸ್ ಇವೆ. ಒಂದು ದಿನ ಫುಲ್ ಇಂಟ್ರಡಕ್ಷನ್ ಸೀನ್ ಮಾಡಿದ್ದಾರೆ. ಎಲ್ಲರಿಗೂ ಮಾಲೂರು ಸ್ಕ್ರೀನ್ ಮೇಲೆ ಬೇರೆ ರೀತಿ ಕಾಣುತ್ತಾರೆ. ಈ ಚಿತ್ರದಲ್ಲಿ ನಾನು ತೆರೆಯ ಹಿಂದೆ, ಮುಂದೆ ಎರಡು ರೀತಿ ಕೆಲಸ ಮಾಡಿದ್ದೇನೆ.
ಸಾಂಗ್ ಗೂ ಕೋರಿಯೊಗ್ರಾಫ್ ಮಾಡಿದ್ದೇನೆ. ಕಾಪ್ ಆಗಿಯೂ ನಟಿಸಿದ್ದೇನೆ. ಇದೊಂದು ಅಪರೂಪದ ಪಾತ್ರ. ನಾರಾಯಣ್ ಸರ್ ಕರೆದು ಈ ಪಾತ್ರ ಮಾಡಿ ಅಂದಾಗ, ಇಲ್ಲ ಅನ್ನೋಕೆ ಆಗಲಿಲ್ಲ. ಮಾಡಿದೆ.
ನೃತ್ಯ ನಿರ್ದೇಶಕನಾಗಿ ಇದ್ದವನು ನಾನು. ಸದಾ ತೆರೆ ಹಿಂದೆ ಇರುವಂಥವನಿಗೆ ಇದೊಂದು ಒಳ್ಳೆಯ ಅವಕಾಶ.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ.
ಬಹುತೇಕ ವಾಹಿನಿಗಳಿಗೆ ರಿಯಾಲಿಟಿ ಶೋಗಳಿಗೆ ಮೊದಲು ಎಂಟ್ರಿಕೊಟ್ಟವನು ಎಂಬ ಹೆಮ್ಮೆಯೂ ಇದೆ. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದವನು. ಅಲ್ಲಿಂದ ಒಂದು ಡ್ಯಾನ್ಸ್ ಶೋ ಸಂಗ್ರಾಮ ಮಾಡಿದ ಖುಷಿ ಇದೆ. “ಕುಣಿಯೋಣು ಬಾರಾ” ಎಂಬ ಜನಪ್ರಿಯ ಶೋ ಮೂಲಕ ಹೊಸ ಡ್ಯಾನ್ಸ್ ಕ್ರಾಂತಿಯೇ ಆಗೋಯ್ತು. ಆಗಲೇ 9 ಸೀಸನ್ ಮಾಡಿದ್ದೆ. ಆ ದಿನಗಳಲ್ಲೇ ನನಗೆ ಹೀರೋ ಆಗಿ ನಟಿಸುವ ಅವಕಾಶ ಬಂದಿದ್ದವು.
ಆದರೆ, ನಾನು ಆಗ ಬಿಝಿ ಇದ್ದಂತಹ ಕಾಲಘಟ್ಟ, ಒಂದು ಕಡೆ ರಿಯಾಲಿಟಿ ಶೋ, ಇನ್ನೊಂದು ಕಡೆ ಸಾಲು ಸಾಲು ಸಿನಿಮಾಗಳಿದ್ದವು. ಹಾಗಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನಟನೆಯತ್ತ ವಾಲಿದ್ದೇನೆ. ನನಗೆ ಸೂಕ್ತ ಎನಿಸುವ ಪಾತ್ರ ಇದ್ದರೆ ಖಂಡಿತ ಮಾಡ್ತೀನಿ. ಸದ್ಯ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ” ಎನ್ನುತ್ತಾರೆ ಮಾಲೂರು ಶ್ರೀನಿವಾಸ್.
ಅದೇನೆ ಇರಲಿ ದಶಕಗಳ ಕಾಲ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್, ಈಗ ನಟನೆ ಕಡೆ ಗಮನ ಹರಿಸಿದ್ದಾರೆ. ಒಬ್ಬ ಯಶಸ್ವಿ ಡ್ಯಾನ್ಸ್ ಮಾಸ್ಟರ್ ಆಗಿರುವ ಅವರು, ಒಳ್ಳೆಯ ಕಲಾವಿದರಾಗಿಯೂ ಹೊರ ಹೊಮ್ಮಲಿ ಎಂಬುದು “ಸಿನಿಲಹರಿ” ಹಾರೈಕೆ.