Categories
ಸಿನಿ ಸುದ್ದಿ

ಚಾರ್ಲಿ ಮೊಗದಲ್ಲಿ ಗೆಲುವಿನ ಮಂದಹಾಸ: ಚಾರ್ಲಿ ಹೆಸರಲ್ಲಿ ಎನ್ ಜಿ ಓಗಳಿಗೆ ಸಹಾಯ- ಕಲಾವಿದ, ತಂತ್ರಜ್ಞರಿಗೂ ಲಾಭ ಹಂಚಿಕೆ…

ಮನುಷ್ಯ ಹಾಗೂ ಶ್ವಾನದ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ನಿರ್ದೇಶಕ ಕಿರಣ್ ರಾಜ್ “777 ಚಾರ್ಲಿ” ಚಿತ್ರದಲ್ಲಿ ತೋರಿಸಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. “ಚಾರ್ಲಿ” ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿ 25 ದಿನ ಪೂರೈಸಿ ಮುನ್ನಡೆಯುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದೆ.

ಈವರೆಗೂ ಒಟ್ಟಾರೆ 150 ಕೋಟಿ ಗ್ರಾಸ್​ ಗಳಿಕೆಯಾಗಿದೆ. ಅದರಲ್ಲಿ 90ರಿಂದ 100 ಕೋಟಿವರೆಗೂ ಲಾಭ ಬಂದಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರಿಡಿಂಗ್​ ವಿರುದ್ಧ ಹೋರಾಡುತ್ತಿರುವ ಹಾಗೂ ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್​ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ. ಶೇ.5ರಷ್ಟು ಎಂದರೆ ಐದು ಕೋಟಿ ರೂಪಾಯಿಗಳಷ್ಟಾಗುತ್ತದೆ. ಅದನ್ನು ನೇರವಾಗಿ ಹಂಚಿಕೆ ಮಾಡಬೇಕಾ? ಅಥವಾ ಚಾರ್ಲಿ ಹೆಸರಿನಲ್ಲಿ ಒಂದು ಅಕೌಂಟ್​ ಮಾಡಿ ದುಡ್ಡಿಟ್ಟು, ಪ್ರತಿ ತಿಂಗಳು ಸಿಗುವ ಬಡ್ಡಿಯಲ್ಲಿ ಸಹಾಯ ಮಾಡಬೇಕಾ? ಎಂಬ ವಿಷಯವಾಗಿ ಇನ್ನೂ ತೀರ್ಮಾನವಾಗಿಲ್ಲ. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರಿಗೆ ಶೇ. 10ರಷ್ಟು ಲಾಭದಲ್ಲಿ ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ 10 ಕೋಟಿ ರೂಪಾಯಿಗಳಷ್ಟಾಗುತ್ತದೆ. ಈ ಪಟ್ಟಿಯಲ್ಲಿ ನಾನಿಲ್ಲ. ಏಕೆಂದರೆ, ನಾನು ಒಬ್ಬ ನಟ ಮತ್ತು ನಿರ್ಮಾಪಕನಾಗಿರುವುದರಿಂದ, ನನ್ನನ್ನು ಬಿಟ್ಟು ಮಿಕ್ಕವರಿಗೆ ಹಂಚಲಿದ್ದೇವೆ ಎಂದರು ರಕ್ಷಿತ್ ಶೆಟ್ಟಿ.

25 ದಿನ ಕರ್ನಾಟಕದಲ್ಲಿ 100 ಪ್ಲಸ್​ ಸೆಂಟರ್​ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೇರೆ ದೇಶಗಳಲ್ಲಿ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾಗಿ 15 ದಿನಗಳ ನಂತರ ಚಿತ್ರತಂಡದವರು ದುಬೈಗೆ ಹೋಗಿ ಬಂದಿದ್ದಾರೆ. ಮಾರಿಷಸ್​, ಜಪಾನ್​ ಮುಂತಾದ ಕಡೆ ಸಹ ಚಿತ್ರ ಪ್ರದರ್ಶನವಾಗುತ್ತಿದೆ. ಅಲ್ಲಿ ಪ್ರದರ್ಶನಗಳ ಪ್ರಮಾಣ ಕಡಿಮೆ ಇರಬಹುದು. ಆದರೆ, ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲ ಪ್ರದರ್ಶನವಾಗುತ್ತಿದೆ. ಸಾಮಾನ್ಯವಾಗಿ ಚಿತ್ರಕ್ಕೆ ಜನ ಬರುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ, ಚಿತ್ರವನ್ನು ಚೆನ್ನಾಗಿ ಪ್ರಮೋಟ್​ ಮಾಡಿದರೆ, ಖಂಡಿತಾ ಜನ ಬರುತ್ತಾರೆ ಎಂದು “777 ಚಾರ್ಲಿ” ತೋರಿಸಿಕೊಟ್ಟಿದೆ. ಚಿತ್ರಕ್ಕೆ ಈಗಲೂ ಜನ ಬರುತ್ತಿದ್ದಾರೆ. ಭಾನುವಾರ 1 ಕೋಟಿಗೂ ಹೆಚ್ಚು ಗಳಿಕೆಯಾಗಿದೆ. ಚಿತ್ರ ಬಿಡುಗಡೆಯಾಗಿ 25 ದಿನಗಳ ನಂತರವೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ಗಳಲ್ಲಿ ಬೇಡಿಕೆ ಇದೆ ಎಂದರು ವಿತರಕ ಕಾರ್ತಿಕ್ ಗೌಡ.

ಸಾಮಾನ್ಯವಾಗಿ ನಾಯಕಿ ಅಂದರೆ ಪ್ರೇಮಕಥೆ ಇರುತ್ತದೆ. ಇಲ್ಲಿ ಹಾಗಿಲ್ಲ. ಆದರೂ ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವುದೇ ಸಂತೋಷ. ಅವಕಾಶ ಕೊಟ್ಟ ಎಲ್ಲರಿಗೂ ನಾಯಕಿ ಸಂಗೀತ ಶೃಂಗೇರಿ ಧನ್ಯವಾದಗಳನ್ನು ಸಲ್ಲಿಸಿದರು.

ಸ್ನೇಹಿತರು ಮತ್ತು ಸಂಬಂಧಿಕರು ಚಿತ್ರ ನೋಡಿ ಖುಷಿಪಟ್ಟರು. ನಾವು 65 ಜನ ಒಟ್ಟಿಗೆ ಸಿನಿಪೊಲಿಸ್​ಗೆ ಹೋಗಿ ಚಿತ್ರ ನೋಡಿ ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮ ಆಚರಿಸಿದ್ದೇವೆ. ನಾನು ಕ್ಲಾಸ್​ಗೆ ಹೋಗುವಾಗ ಚಾರ್ಲಿ ಹುಡುಗಿ ಅಂತ ಎಲ್ಲ ಹೇಳುತ್ತಾರೆ. ಸೆಲ್ಫಿ ತೆಗೆಸಿಕೊಂಡು ಆಲ್​ ದಿ ಬೆಸ್ಟ್​ ಹೇಳುತ್ತಾರೆ ಎಂದು ಪುಟಾಣಿ ಶಾರ್ವರಿ ತಮ್ಮ ಅನುಭವ ಹಂಚಿಕೊಂಡರು.

ಸೋಲು ಹಲವು ಪಾಠ ಕಲಿಸುತ್ತದೆ. ಗೆಲುವು ಹಲವು ದಾರಿಗಳನ್ನು ತೋರಿಸುತ್ತವೆ. ಸಹಾಯಕ ನಿರ್ದೇಶಕನಾಗಿ ಮೂರು ಸಿನಿಮಾಗಳನ್ನು ಮಾಡಿದ್ದೇನೆ. ಸೋಲು, ಗೆಲುವು ಎರಡನ್ನು ನೋಡಿದ್ದೀನಿ. ಸೋಲು ನೋಡಿರುವುದರಿಂದ ಗೆಲುವಿನ ಮಹತ್ವ ಗೊತ್ತಾಯಿತು. ಈ ಜರ್ನಿಯಲ್ಲಿ ಹಲವರಿದ್ದಾರೆ. ಒಂದೇ ಮನಸ್ಥಿತಿಯವರಾದ್ದರಿಂದ ಇಂಥದ್ದೊಂದು ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಯಿತು. ಚಿತ್ರ 25 ದಿನ ಪೂರೈಸಿದೆ. ಮುಂದೆ ಸಹ ಇದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಲಾಭ ಕೊಡುತ್ತದೆ ಎಂಬ ನಂಬಿಕೆ ಇದೆ. ಈ ಗೆಲುವಿನಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಕ್ಕೆ ಸ್ಫೂರ್ತಿ ಸಿಕ್ಕಿದೆ. ಕಿರಿಕ್​ ಪಾರ್ಟಿ ಮಾಡಿದಾಗ ಹಣದ ಅಭಾವವಿತ್ತು. ಆಗ ರಕ್ಷಿತ್ ಎಲ್ಲರನ್ನೂ ಕರೆದು, ಚಿತ್ರ ಚೆನ್ನಾಗಿ ಹೋದರೆ ಇನ್ನಷ್ಟು ಕೊಡುವುದಾಗಿ ಹೇಳಿದ್ದರು. ಅದರಂತೆ ಚಿತ್ರ ಗೆದ್ದ ಮೇಲೆ ಹಲವರಿಗೆ ಅವರ ಪಾಲು ಕೊಟ್ಟರು. ಇದನ್ನು ನೋಡಿ ಕೆಲವರು ಕಣ್ಣೀರು ಹಾಕಿದ್ದು ನೆನಪಿದೆ. ಈಗಲೂ ರಕ್ಷಿತ್​ ಅದನ್ನೇ ಮುಂದುವರೆಸಿದ್ದಾರೆ ಎಂದರು ನಿರ್ದೇಶಕ ಕಿರಣ್ ರಾಜ್.

Categories
ಸಿನಿ ಸುದ್ದಿ

ನಮ್ಮ ಹುಡುಗರ ಜೊತೆ ನಿಮ್ಮ ಹುಡುಗ ನಿರಂಜನ್ ಆಗಮನ…

ನಾಲ್ವರು ಸ್ನೇಹಿತರ ಮಧ್ಯೆ ಹುಟ್ಟಿಕೊಳ್ಳುವ ಒಂದು ಸುಳ್ಳು ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಯಿತು ಎಂಬ ಎಳೆ ಇಟ್ಟುಕೊಂಡು ಯುವ ನಿರ್ದೇಶಕ ಹೆಚ್.ಬಿ. ಸಿದ್ದು ಅವರು ನಿರ್ದೇಶಿಸಿರುವ ಚಿತ್ರ ನಮ್ಮ ಹುಡುಗರು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಟ ವಸಿಷ್ಠಸಿಂಹ ಅವರು ಈ ಚಿತ್ರದಲ್ಲಿ ಒಬ್ಬ ಕಲಾವಿದನಾಗೇ ಕಾಣಿಸಿಕೊಂಡಿದ್ದಾರೆ.

ಜುಲೈ 6ರಂದು ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀರಿಲೀಸ್ ಕಾರ್ಯಕ್ರ ನಡೆಯಲಿದೆ. ಕಿಚ್ಚ ಸುದೀಪ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇಲ್ಲಿ ಮಂಡ್ಯದ ಹಿನ್ನೆಲೆಯಲ್ಲಿ ನಡೆಯುವ ಕಥೆಯಿದೆ. ಅಲ್ಲೊಂದು ಸ್ನೇಹಿತರ ಬಳಗ, ಆ ಸ್ನೇಹಿತರ ಹುಡುಗಾಟ, ಅವರ ನಡುವೆ ಹುಟ್ಟಿಕೊಳ್ಳುವ ಸುಳ್ಳಿನಿಂದ ಆರಂಭವಾಗಿ ಸುಳ್ಳಿನಿಂದಲೇ ಮುಗಿಯುವ ಕಥೆಯನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಮಂಡ್ಯದಲ್ಲಿ ಪ್ರಾರಂಭವಾಗಿ ಮಂಗಳೂರಿನಲ್ಲಿ ಎಂಡ್ ಆಗುವ ಕಥೆಯಿದು. ಒಂದು ಪದ ಇಟ್ಟುಕೊಂಡು ಇಡೀ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಇದರಲ್ಲಿ ಹೇಳಲಾಗಿದೆ. ಸ್ನೇಹಿತರ ನಡುವೆ ಮೋಸ, ವಂಚನೆ ಸುಳಿಯಬಾರದು, ಅಲ್ಲಿ ಸುಳ್ಳೊಂದು ಹುಟ್ಟಿದಾಗ ಅದು ಏನೆಲ್ಲ ತೊಂದರೆಗೆ ಕಾರಣವಾಯಿತೆಂದು ಈ ಚಿತ್ರ ನಿರೂಪಿಸುತ್ತದೆ. ಮಂಡ್ಯ, ಮೈಸೂರು, ಬೆಂಗಳೂರು, ಕಾರವಾರ, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆದಿದೆ. ಅಭಿಮನ್ ರಾಯ್ ಅವರ ಸಂಗೀತವಿದೆ. ಇಲ್ಲಿ ಬಿಂದು. ಶಫಿ ಎಂಬ ಹೊಸ ಗಾಯಕರಿಗೆ ಅವಕಾಶ ನೀಡಲಾಗಿದೆ.

ನಿರ್ದೇಶಕರು ಹೇಳುವಂತೆ, ಕಥೆಯ ನೆರೇಶನ್ ವಿಶೇಷವಾಗಿದೆ. ಆರಂಭ ಅಂತ್ಯ ಎರಡೂ ಸ್ಪೆಷಲ್ ಎಲಿಮೆಂಟ್. ಅಲ್ಲದೆ ಚಿತ್ರದ ಎಲ್ಲಾ ಪಾತ್ರಗಳು ಕಥೆಯನ್ನು ಕ್ಯಾರಿ ಮಾಡುತ್ತವೆ. ಸಿನಿಮಾ ನೋಡಿದ ಉಪೇಂದ್ರ ಅವರು ಫಸ್ಟ್ ಅಟೆಂಪ್ಟ್ ಆದರೂ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಮೆಚ್ಚಿಕೊಂಡರು. ಲೆಂತ್ ಆಗುತ್ತೆ ಅಂತ ನಾವು ತೆಗೆದುಹಾಕಿದ್ದ ಸೀನನ್ನು ಕಥೆಗದು ಬೇಕು ಎಂದು ಮತ್ತೆ ಹಾಕಿಸಿದರು ಎಂದು ಸಿದ್ದು ವಿವರಿಸುತ್ತಾರೆ.

ನಂತರ ನಾಯಕ ನಿರಂಜನ್, ಹೀರೋ ಆಗಿ ನನ್ನ ಮೊದಲ ಚಿತ್ರವಿದು. ನಾರ್ಮಲ್ ಸಿನಿಮಾ ಇದಲ್ಲ. ಒಂದೊಳ್ಳೇ ಕಂಟೆಂಟ್ ಇದೆ. ರಿಯಲ್ ಲೈಫ್‌ನಲ್ಲಿ ಎಲ್ಲರಿಗೂ ಎಮೋಷನಲಿ ಕನೆಕ್ಟ್ ಆಗುವಂಥ ಸಬ್ಜೆಕ್ಟ್. ಚಿತ್ರದಲ್ಲಿ ಹಾಡುಗಳೂ ಹೈಲೈಟ್, ಇವತ್ತು ಹಾಡೊಂದನ್ನು ಶ್ರೀಮುರುಳಿ ಅವರು ಬಿಡುಗಡೆ ಮಾಡಿಕೊಟ್ಟರು. ಅಪ್ಪು ಅವರ ವೀಡಿಯೋ ಹಾಡನ್ನು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ರಾಘಣ್ಣ ರಿಲೀಸ್ ಮಾಡಲಿದ್ದಾರೆ. ಇಂಟರ್‌ವೆಲ್‌ಗೂ ಮುಂಚೆ ಬರುವ ಸೀನೊಂದನ್ನು ಬೆಟ್ಟದ ಮೇಲೆ ಶೂಟ್ ಮಾಡಿದ್ದೇವೆ. ಸಖತ್ ಹೈಟ್‌ಪೀಕ್‌ನಲ್ಲಿ ಮಾಡಿದ ಆ ಸೀನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲೋಕ್, ಪ್ರವೀಣ್ ಹಾಗೂ ಮಾರುತಿ ನನ್ನ ಸ್ನೇಹಿತರಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸೆಂಟಿಮೆಂಟ್, ಕಾಮಿಡಿಯಿಂದ ಆರಂಭವಾಗುವ ಕಥೆ ನಂತರ ಸೀರಿಯಸ್ ಆಗುತ್ತದೆ ಎಂಬುದು ನಿರಂಜನ್ ಮಾತು.

ಚಿತ್ರದ ನಾಯಕಿ ರಾಧ್ಯ ಗೌರಿ ಎಂಬ
ಮಂಡ್ಯ ಹುಡುಗಿಯಾಗಿ ನಟಿಸಿದ್ದಾರೆ., ಎಲ್ಲರ ಮನಕ್ಕೂ ಹತ್ತಿರವಾಗುವಂಥ ಪಾತ್ರವಂತೆ ಅದು. ಗೋಲ್ಡನ್ ಹಾರ್ಟ್ಸ್ ಮೂಲಕ ಕೆಕೆ. ಅಶ್ರಫ್ ಅವರ ನಿರ್ಮಾಣದ ಈ ಚಿತ್ರವನ್ನು ಜಯಣ್ಣ ಫಿಲಂಸ್ ಬಿಡಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ನಟಿ ಹರ್ಷಿಕಾಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ: ಸಮಾಜ ಸೇವೆಗೆ ಸಂದ ಫಲ…

ಕನ್ನಡ ಚಿತ್ರರಂಗದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಹರ್ಷಿಕಾ ಅವರು ತೆರೆಯ ಮೇಲೆ ಮಾತ್ರ ನಾಯಕಿಯಲ್ಲ. ತೆರೆಯ ಹಿಂದೆಯೂ ನಾಯಕಿ ಅಂತಾ ಕೊರೊನಾ ಸಮಯದಲ್ಲೇ ಸಾಮಾಜಿಕ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ.

ಭುವನಂ ಸಂಸ್ಥೆಯ ಮೂಲಕ ನಟ ಭುವನ್‌ ಅವರೊಂದಿಗೆ ಹರ್ಷಿಕಾ ಜೊತೆಯಾಗಿ, ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಅದನ್ನು ಪರಿಗಣಿಸಿ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಕಲಾವಿದರು ನಿಜ ಜೀವನದಲ್ಲೂ ನಾಯಕ, ನಾಯಕಿ ಆಗೋದು ಸ್ವಲ್ಪ ಕಮ್ಮಿ. ಆದರೆ ನಿಜ ಬದುಕಲ್ಲೂ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ಅವರು ನಾಯಕ, ನಾಯಕಿ ಅನ್ನುವುದನ್ನು ತೋರಿಸಿದ್ದಾರೆ.

ಇವರಿಬ್ಬರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ.

ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್‌ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಡೈನಾಮಿಕ್ ಪ್ರಿನ್ಸ್ ಬರ್ತ್ ಡೇಗೆ ಮಾಸ್ ಪೋಸ್ಟರ್ ರಿಲೀಸ್…

ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಹಾಗಾಗಿ ಅವರು ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರತಂಡ ಹೊಸ ಮಾಸ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕ ಪ್ರಜ್ವಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದೆ.

ಕ್ರೈಂ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಜುಲೈ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಲೋಹಿತ್ ಹೆಚ್. ನಿರ್ದೇಶಿಸುತ್ತಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶೈನ್ ಶೆಟ್ಟಿ, ದೇವರಾಜ್, ವಿಜಯ್ ಚೆಂಡೂರ್, ವಾಸುಕಿ ವೈಭವ್, ಸಾಧುಕೋಕಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ದೂರದರ್ಶನ ವೀಕ್ಷಣೆಗೆ ಬಂದ ಆಯಾನಾ! ಪೃಥ್ವಿ ಅಂಬರ್ ಜೊತೆ ರಿಕ್ಷಾ ಡ್ರೈವರ್ ಮಗಳ ಡಿಂಗುಡಾಂಗು…

ದಿಯಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬರ್‌ ಈಗ ‘ದೂರದರ್ಶನ’ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರದ ಈ ಸಿನಿಮಾದ ಟೈಟಲ್‌ ಟೀಸರ್‌ ಇತ್ತೀಚೆಗೆ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ದೂರದರ್ಶನ ಬಳಗ ನಾಯಕಿಯನ್ನು ಪರಿಚಯಿಸುತ್ತಿದೆ. ಈ ಹಿಂದೆ ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದ ಆಯಾನಾ ಪೃಥ್ವಿ ಅಂಬರ್ ಗೆ ಜೋಡಿಯಾಗಿ ನಟಿಸಿದ್ದಾರೆ.

ದೂರದರ್ಶನ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್ ಕರೆಯಲಾಗಿತ್ತು. 30 ರಿಂದ 40 ಮಂದಿ ಆಡಿಷನ್ ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಆಯಾನಾ ಫೈನಲ್ ಆಗಿ ಆಯ್ಕೆಯಾದರು ಎನ್ನುವ ನಿರ್ದೇಶಕ ಸುಕೇಶ್ ಶೆಟ್ಟಿ, ಆಯಾನಾ ಮೈತ್ರಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ರಿಕ್ಷಾ ಡ್ರೈವರ್ ಮಗಳಾಗಿ ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತೇ ಎಂಬ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.

ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ. ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ.

ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.

Categories
ಸಿನಿ ಸುದ್ದಿ

ಇದು ಎಲ್ಲರಿಗೂ ಸ್ಪೆಷಲ್ ಗಿಫ್ಟ್! ಜುಲೈ 8ಕ್ಕೆ ವೆಡ್ಡಿಂಗ್ ಗಿಫ್ಟ್ ಸಿನಿಮಾ ರಿಲೀಸ್…

ಕನ್ನಡದಲ್ಲಿ ಈಗಾಗಲೇ ಅನೇಕ ವಿಭಿನ್ನ ಕಥೆ ಇರುವ ಸಿನಿಮಾಗಳು ಬಂದಿವೆ. ಅ ಸಾಲಿಗೆ ಇದೀಗ ‘ ವೆಡ್ಡಿಂಗ್ ಗಿಫ್ಟ್’ ಸಿನಿಮಾ ಕೂಡ ಸೇರಿದೆ. ಶೀರ್ಷಿಕೆಯಲ್ಲೇ ವಿಶೇಷ ಎನಿಸುವ ಈ ಚಿತ್ರ ಫಟಾಫಟ್ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಹೌದು ಜುಲೈ 8 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ವಿಕ್ರಂಪ್ರಭು ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಎಂಟ್ರಿಯಾಗಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮದುವೆ ಹಿಂದಿನ‌ಕಥೆ ಮತ್ತು ವ್ಯಥೆ ಕುರಿತ ಸಿನಿಮಾ. ಈಗಿನ ಮದುವೆ ಸಂಬಂಧಗಳು ಎಷ್ಟರ ಮಟ್ಟಿಗೆ ಗಟ್ಟಿ ಅನ್ನೋದು ಗೊತ್ತಿದೆ. ಅಂಥದ್ದೇ ಒಂದು ಎಳೆ ಇಟ್ಟುಕೊಂಡು ಹೆಣೆದಿರುವ ಸಿನಿಮಾ ಇದು. ಮದುವೆಯಾದ ಆರಂಭದಲ್ಲೇ ಗಂಡ-ಹೆಂಡತಿ ಮಧ್ಯೆ ಬಿರುಕು ಬಂದರೆ ಏನೆಲ್ಲಾ ಆಗುತ್ತೆ ಎಂಬ ಕಥಾವಸ್ತು ಚಿತಗರದ ಹೈಲೆಟ್.


ಚಿತ್ರದಲ್ಲಿ ನಿಶಾಂತ್ ಮತ್ತು ಸೋನುಗೌಡ ನಾಯಕ- ನಾಯಕಿಯಾಗಿದ್ದಾರೆ. ಇನ್ನು ಚಿತ್ರದ ಪ್ರಮುಖ ಆಕರ್ಷಣೆ ನಟಿ ಪ್ರೇಮ. ತುಂಬಾ ದಿನಗಳ ಬಳಿಕ ಪ್ರೇಮ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲೆಡೆ ಮೆಚ್ಚುಗೆ ಪಡೆದಿದೆ.

ಈ ಸಿನಿಮಾ ನಿರ್ದೇಶಕ ವಿಕ್ರಂ ಪ್ರಭು ಅವರಿಗೆ ಇದು ಮೊದಲ ಅನುಭವ. ಹಾಗಂತ, ಸಿನಿಮಾರಂಗ ಗೊತ್ತಿಲ್ಲ ಅಂತಲ್ಲ. ಅಚರು ಈ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ಪೂನಾದಲ್ಲಿ ಉದ್ಯಮಿಯಾಗಿ ನೆಲೆಸಿ, ತಾನೊಂದು ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಲೇಬೇಕು ಅಂತ ಕೆಲವು ವರ್ಷಗಳ ನಂತರ ಈ “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಕೂಡ ಮಾಡಿದ್ದಾರೆ.

ಕಳೆದ ಜುಲೈನಲ್ಲಿ ಈ ಸಿನಿಮಾದ ಮುಹೂರ್ತ ನಡೆದಿತ್ತು. ಈ ಜುಲೈ 8ರಂದು ಚಿತ್ರ ತೆರೆ ಕಾಣುತ್ತಿದೆ. ಹೀಗಾಗಿ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ.

ನಿರ್ದೇಶಕ ವಿಕ್ರಂ ಪ್ರಭು ಅವರು ಪಕ್ಕಾ ಪ್ಲಾನ್ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ. ಮೊದಲು ಒಂದೊಳ್ಳೆಯ ಕಥೆ ರೆಡಿ ಮಾಡಿ, ಅದಕ್ಕೆ ಇಂತಹ ಕಲಾವಿದರೇ ಸೂಕ್ತ ಅಂದುಕೊಂಡು ನಿಗಧಿತ ಅವಧಿಯಲ್ಲೇ ಸಿನಿಮಾ ಮಾಡಿದ ಸಂತಸ ಅವರದು. ಸರಿಯಾದ ಸಮಯಕ್ಕೆ ಸಿನಿಮಾ ಮಾಡಿ ರಿಲೀಸ್ ಮಾಡೋಕೆ ಚಿತ್ರತಂಡದ ಸಹಕಾರ ಅಪಾರವಾಗಿದೆ ಎನ್ನುವ ನಿರ್ದೇಶಕ ವಿಕ್ರಮ್ ಪ್ರಭು, ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಚಿತ್ರ ಇದಾಗಲಿದೆ ಎಲ್ಲರೂ ನಮ್ಮನ್ನು ಹರಸಿ ಎನ್ನುತ್ತಾರೆ.

ನಟಿ ಪ್ರೇಮ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಗಕವು ಕಥೆ ಬಂದರೂ ಸರಿಯಾಗಿಲ್ಲ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡುತ್ತಿದ್ದರಂತೆ. ಆದರೆ ಅವರು, ವಿಕ್ರಂಪ್ರಭು ಅವರು ಹೇಳಿದ ಕಥೆ ಕೇಳಿ ತಕ್ಷಣ ನಟಿಸಲು ಒಪ್ಪಿಕೊಂಡರಂತೆ. ಅಂದಹಾಗೆ, ನಟಿ ಪ್ರೇಮ ಇಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದಾರೆ.

ನಟಿ ಸೋನು ಗೌಡ ಅವರಿಗೆ ಕಥೆ ಇಷ್ಟವಾಗಿದ್ದೇ ತಡ ನಟಿಸೋಕೆ ಒಪ್ಪಿದರಂತೆ. ಇದೊಂದು ಭಾವನಾತ್ಮಕ ಚಿತ್ರ. ಯಾರು ಈ ಕಷ್ಟಗಳನೆಲ್ಲಾ ಅನುಭವಿಸಿರುತ್ತಾರೊ, ಅವರಿಗೆ ಈ ಚಿತ್ರ ಹತ್ತಿರವಾಗಲಿದೆ. ಈ ಪಾತ್ರ ಮಾಡುವಾಗ ನನಗಂತು‌ ನಿಜವಾಗಲೂ ಕಷ್ಟವಾಯಿತು. ಇಂತಹವರೂ ಇರುತ್ತಾರಾ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಒಬ್ಬ ನಟಿಯಾಗಿ ಎಲ್ಲಾ ಪಾತ್ರಗಳನ್ನು ಮಾಡಬೇಕು. ಪಾಸಿಟಿವ್ ಹಾಗೂ ನೆಗಟಿವ್ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದೇನೆ. ಹಾಗೊಂದು ವೇಳೆ ನೆಗಟಿವ್ ಪಾತ್ರ ನೋಡುಗರಿಗೆ ಹಿಡಿಸಿತೆಂದರೆ, ಅದು ನನ್ನ ನಿಜವಾದ ಗೆಲುವು ಎಂಬುದು ನಟಿ ಸೋನು ಗೌಡ‌ ಅವರ ಮಾತು.

ಜುಲೈ 8 ರಂದು ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ, ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದೆ ಅನ್ನೋದು ವಿತರಕ ಶ್ರೀಧರ್ ಮಾತು.

ಚಿತ್ರಕ್ಕೆ ಉದಯ್ ಲೀಲ ಕ್ಯಾಮೆರಾ ಹಿಡಿದರೆ, ವಿಜೇತ್ ಚಂದ್ರ ಸಂಕಲನವಿದೆ. ಚಿತ್ರದಲ್ಲಿ ಅಚ್ಯುತ್ ರಾವ್, ಪವಿತ್ರಾ ಲೋಕೇಶ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಹುಲಿಬೇಟೆಯೊಳು ದುರುಳರ ಅಳಲು! ಇದು ಬೈರಾಗಿಯ ಭರ್ಜರಿ ಬೇಟೆ…

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ : ಬೈರಾಗಿ
ನಿರ್ದೇಶನ : ವಿಜಯ್ ಮಿಲ್ಟನ್
ನಿರ್ಮಾಣ : ಕೃಷ್ಣ ಸಾರ್ಥಕ್
ತಾರಾಗಣ : ಶಿವರಾಜಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್, ಯಶಾ ಶಿವಕುಮಾರ್, ಶರತ್‌ ಲೋಹಿತಾಶ್ವ, ಅನುಪ್ರಭಾಕರ್, ವಿನೋದ್ ಆಳ್ವ ಇತರರು.

ಸಿಂಪಲ್ಲಾಗಿರೋದ್ ನೋಡಿ ಡಮ್ಮಿ‌ ಪೀಸ್‌ ಅನ್ಕೊಂಡ…’
ಈ ಡೈಲಾಗ್ ಬರುವ ಹೊತ್ತಿಗೆ ಅದಾಗಲೇ ಆ ಹುಲಿಯ ಆರ್ಭಟ ಜೋರಾಗಿರುತ್ತೆ. ಆ ಹುಲಿ ತುಂಬಾ ಸೈಲೆಂಟ್ ಕೆಣಕಿದರೆ ವೈಲೆಂಟ್… ಚಿತ್ರದುದ್ದಕ್ಕೂ ಸೈಲೆಂಟ್ ಮತ್ತು‌ವೈಲೆಂಟ್ ನ‌ ಅಬ್ಬರ ತುಸು ಜೋರಾಗಿಯೇ ಇದೆ. ಇದು ಪಕ್ಕಾ ಮಾಸ್‌ ಮತ್ತು ಕ್ಲಾಸ್ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ ಬೈರಾಗಿ ಮನರಂಜನೆಯ ಜೊತೆಗೊಂದು ಸಂದೇಶ ಸಾರುವ ಸಿನಿಮಾ‌ ಕೂಡ. ಇದು ಶಿವಣ್ಣ ಫ್ಯಾನ್ಸ್ ಮಾತ್ರವಲ್ಲ, ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.

ಶಿವರಾಜಕುಮಾರ್ ಅವರನ್ನಿಲ್ಲಿ ನಿರ್ದೇಶಕ ವಿಜಯ್ ಮಿಲ್ಟನ್ ತುಂಬಾ ಸಿಂಪಲ್ಲಾಗಿ ತೋರಿಸಿದ್ದರೂ, ಶಿವಣ್ಣ ಅವರ ಎನರ್ಜಿಯನ್ನು ಎಲ್ಲೂ ವೇ್ಟ್ ಮಾಡದಂತೆ ತೋರಿಸಿದ್ದಾರೆ. ಶಿವಣ್ಣ ಅವರಿಗೆ ಇದೊಂದು ಹೊಸ ಬಗೆಯ ಪಾತ್ರ. ಆ ಪಾತ್ರದಲ್ಲೇ ಶಿವಣ್ಣ ಜೀವಿಸಿದ್ದಾರೆ. ಇಡೀ ಸಿನಿಮಾದಲ್ಲಿ ಶಿವಣ್ಣ ಅವರ ಹುಲಿ ಘರ್ಜನೆ ಹೈಲೆಟ್.

ಇದು ತಮಿಳಿನ ‘ಕಡುಗು’ ಚಿತ್ರದ ಅವತರಣಿಕೆ. ತಮಿಳಿನಲ್ಲಿ ನಿರ್ದೇಶಿಸಿದ್ದ ವಿಜಯ್ ಮಿಲ್ಟನ್ ಅವರೇ ಈ ಸಿನಿಮಾಗೂ ಆಕ್ಷನ್‌ ಕಟ್ ಹೇಳಿದ್ದಾರೆ. ಇದು ತಮಿಳು ಸಿನಿಮಾದ ರಿಮೇಕ್ ಇದ್ದರೂ ಕನ್ನಡತನಕ್ಕೆ ಎಲ್ಲೂ ಮೋಸವಾಗಿಲ್ಲ. ಅನ್ನೋದೆ ಸಮಾಧಾನ. ಶಿವಣ್ಣ ಅವರನ್ನು ತೋರಿಸಿರುವ ರೀತಿ, ಮೇಕಿಂಗ್ ಪ್ಯಾಟ್ರನ್ ಎಲ್ಲವೂ ಇಲ್ಲಿ ಹೊಸದಾಗಿದೆ. ಇದುವರೆಗೆ ಮಾಡದಿರುವ ಪಾತ್ರದಲ್ಲಿ ಶಿವಣ್ಣ ಎಲ್ಲರಿಗೂ ಮತ್ತಷ್ಟು ಹತ್ತಿರವಾಗುತ್ತಾರೆ.

ಒಂದು ಕಥೆ ಕೇಳುವಂತಿರಬೇಕು, ಆ ಕಥೆ ತೆರೆ ಮೇಲೆ ಚಿತ್ರರೂಪವಾಗಿ ಬಂದಾಗ, ಕಾಡುವಂತಿರಬೇಕು ಆ ಕೇಳುವ, ಕಾಡುವ ಮತ್ತು‌ ನೋಡುವ ಸಿನಿಮಾ ಇದು. ಹಾಗಾಗಿ ಬೈರಾಗಿ‌ ನಂಬಿ‌ ಬಂದವರಿಗೆ ಯಾವ ಮೋಸವಾಗಲ್ಲ.

ಸಿನಿಮಾದಲ್ಲಿ ತಾರೆಗಳ ದಂಡೇ ಇದೆ. ಎಲ್ಲಾ ಪಾತ್ರಗಳಿಗೂ ಅಲ್ಲಿ ತುಂಬಾನೇ ಸ್ಪೇಸ್ ಇದೆ. ಮುಖ್ಯವಾಗಿ ಇಲ್ಲಿ ಮತ್ತೆ ಶಿವಣ್ಣ ಡಾಲಿ ಧನಂಜಯ ಕಾಂಬಿನೇಷನ್ ಇದೆ. ನಿರೀಕ್ಷೆ ಮೀರಿ ಆ ಕಾಂಬಿನೇಷನ್ ವರ್ಕೌಟ್ ಆಗಿದೆ. ಟಗರು ಮೂಲಕ ಜೋರು ಸುದ್ದಿಯಾದ ಧನಂಜಯ ಇಲ್ಲೂ ಹುಲಿ ಜೊತೆ ಸೆಣಸಾಡಿದ್ದಾರೆ. ಅವರಿಲ್ಲಿ ಒಳ್ಳೆಯವರ ಕೆಟ್ಟವರ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು.

ಕಥೆ ಏನು?

ಹುಲಿ ವೇಷ ಹಾಕಿಕೊಂಡು ಬದುಕು ಸವೆಸುವ ಶಿವಪ್ಪನಿಗೆ ಎಲ್ಲಿಲ್ಲದ ಕೋಪ. ಯಾರಾದರೂ ಕೆಣಕಿದರೆ, ಇತರರಿಗೆ ಅನ್ಯಾಯವಾದರೆ ಸಾಕು ಕೋಪ ಸ್ಪೋಟಗೊಂಡು ಅಲ್ಲೋಲ ಕಲ್ಲೋಲ ಆಗುವ ಹಂತಕ್ಕೂ ಶಿವಪ್ಪ ಕಾರಣನಾಗುತ್ತಾನೆ.

ತಮ್ಮನ್ನು ವಿನಾಕಾರಣ ಕೆಣಕಿದವರ ವಿರುದ್ಧ ಹುಲಿ ಶಿವಪ್ಪ ಕೋಪ ಹೆಚ್ಚಿಸಿಕೊಂಡು ಘಟನೆಯೊಂದರಲ್ಲಿ ಹೊಡೆದಾಡಿ, ಜೈಲಿಗೆ ಹೋಗುತ್ತಾನೆ. ಅಲ್ಲಿಂದ ಹೊರ ಬರುವ ಹುಲಿ ಶಿವಪ್ಪನಿಗೆ ಪೊಲೀಸ್ ಅಧಿಕಾರಿಯೊಬ್ಬ ಕೋಪ ಬಿಟ್ಟರೆ ನೀನು, ನಿನ್ನ ಜೊತೆ ಇರೋರು ಚೆನ್ನಾಗಿರುತ್ತಾರೆ ಅಂತ ಬುದ್ಧಿವಾದ ಹೇಳಿ ತನ್ನೊಟ್ಟಿಗೆ ಹುಲಿ ಶಿವಪ್ಪನನ್ನು ಕರೆದೊಯ್ಯುತ್ತಾರೆ. ಗೊತ್ತಿಲ್ಲದ ಊರಲ್ಲಿ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿ ಜೊತೆ ಶಿವಪ್ಪನೂ ಹೋಗ್ತಾನೆ. ಅಲ್ಲಿ ಸಿಂಪಲ್ಲಾಗಿಯೇ ಇರುವ ಶಿವಪ್ಪನ ಬದುಕಲ್ಲಿ ಒಂದೊಂದೇ ಘಟನೆಗಳು ನಡೆಯುತ್ತವೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಿವಪ್ಪ, ಕೆಲವರ ಮೇಲೆ ತಿರುಗಿ ಬೀಳುತ್ತಾನೆ. ಹೀಗಿರುವಾಗ ಒಂದು ದುರ್ಘಟನೆ ನಡೆಯುತ್ತೆ. ಅದೇನು ಅನ್ನೋ ಕುತೂಹಲ ಇದ್ದರೆ ಸಿನಿಮಾ ನೋಡಿ.

ಯಾರು ಹೇಗೆ?

ಇಲ್ಲಿ ಶಿವಣ್ಣ ಅವರ ನಟನೆ ಬಗ್ಗೆ ಮಾತಾಡುವಂತಿಲ್ಲ. ಈ ಪಾತ್ರದಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಹುಲಿಯಾಗಿ ಘರ್ಜಿಸುತ್ತಲೇ ಮುದ್ದಾಡುವಂತಹ ಹುಲಿಯಾಗಿಯೂ ಕಾಣುತ್ತಾರೆ. ಅವರ ಎನರ್ಜಿ ಇಂದಿಗೂ ಕಮ್ಮಿಯಾಗಿಲ್ಲ ಅನ್ನೋಕೆ ಈ ಪಾತ್ರದಲ್ಲಿ ಮಿಂಚಿರುವ ರೀತಿಯೇ ಸಾಕ್ಷಿ. ಅವರ ಒಂದೊಂದು ಡೈಲಾಗ್ ಗೂ ಶಿಳ್ಳೆ, ಚಪ್ಪಾಳೆ ಬೀಳುತ್ತವೆ. ಹುಲಿ‌ ಕುಣಿತದಲ್ಲಂತೂ, ಕುಳಿತವರನ್ನೇ ಕುಣಿಸುವಷ್ಟರ ಮಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು, ಫೈಟಿಂಗ್ ವಿಚಾರದಲ್ಲಂತೂ ಜಿಂಕೆ ಥರಾನೆ ಎಗರಿ ವಿಲನ್ ಗಳನ್ನು‌ ಚಚ್ಚಿದ್ದಾರೆ. ಆಗಾಗ ಭಾವುಕತೆಗೂ ದೂಡುತ್ತಾರೆ.

ಡಾಲಿ ಧನಂಜಯ್ ಇಲ್ಲಿ ಒಳ್ಳೆಯವನಾಗಿ ಕೆಟ್ಟವನಾಗಿ ನಂತರ ಹುಲಿ ಭಯಕ್ಕೆ ಒಳ್ಳೆಯವಾಗಿರುವ ಪಾತ್ರ ಮಾಡಿದ್ದಾರೆ. ಸ್ಪೇಸ್ ಕಮ್ಮಿ‌ಇದ್ದರೂ ನಟನೆಯಲ್ಲೇನೂ ಕಮ್ಮಿಯಾಗಿಲ್ಲ.
ಪೃಥ್ವಿ ಅಂಬರ್ ನಿಜಕ್ಕೂ ಇಷ್ಟವಾಗುತ್ತಾರೆ. ಹೀರೋ ಆಗಿ ಸಕ್ಸಸ್ ಕಂಡರೂ ಆ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮುಗ್ಧನಾಗಿ ತಮಾಷೆ ಹುಡುಗನಾಗಿ ನಗಿಸಿ, ಒಂದಷ್ಟು‌ ಛೇ ಪಾಪ ಎನಿಸುವಷ್ಟು ನಟಿಸಿದ್ದಾರೆ.
ಶಶಿಕುಮಾರ್ ಇಲ್ಲಿ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದರೆ, ಶರತ್ ಲೋಹಿತಾಶ್ವ ಕೆಟ್ಟ ರಾಜಕಾರಣಿಯಾಗಿ ಸೈ ಎನಿಸಿದ್ದಾರೆ. ನಾಯಕಿ ಅಂಜಲಿ ಕೂಡ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪ್ರತಿ ಪಾತ್ರಗಳು ರಿಜಿಸ್ಟರ್ ಆಗುತ್ತವೆ.

ಅನೂಪ್ ಸೀಳಿನ್ ಅವರ ಸಂಗೀತದ ಎರಡು‌ ಹಾಡು ಗುನುಗುವಂತಿವೆ. ಹಿನ್ನೆಲೆ ಸಂಗೀತ ಕೂಡ ಸಿನಿಮಾ ವೇಗ ಹೆಚ್ಚಿಸಿದೆ. ಬೈರಾಗಿಯ ಅಂದಕ್ಕೆ ಕ್ಯಾಮೆರಾ ಕೈಚಳಕ ಕಾರಣವಾಗಿದೆ.

Categories
ಸಿನಿ ಸುದ್ದಿ

ಗಾಳಿಪಟದ ಹಾಡು ಹೊರಬಂತು! ಇದು ಗಣೇಶ್ ಹುಟ್ಟು ಹಬ್ಬದ ಉಡುಗೊರೆ…

ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಇದರ ಸವಿನೆನಪಿಗಾಗಿ “ಗಾಳಿಪಟ 2” ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಿದೆ.

ಜಯಂತ ಕಾಯ್ಕಿಣಿ ಅವರು ಬರೆದಿರುವ “ನಾನಾಡದ ಮಾತೆಲ್ಲವ ಕದ್ದಾಲಿಸು” ಎಂಬ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ . “ಗಾಳಿಪಟ” ಮೊದಲ ಭಾಗದ “ಮಿಂಚಾಗಿ ನೀನು ಬರಲು” ಹಾಡು ಕೂಡ ಜಯಂತ ಕಾಯ್ಕಿಣಿ, ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ “ಗಾಳಿಪಟ 2” ಚಿತ್ರದ ಈ ಹಾಡು ಕೂಡ ಅದೇ‌ ರೀತಿ ಯಶಸ್ಸು ಕಾಣಲಿದೆ.

ನಮ್ಮ ಚಿತ್ರದ ನಾಯಕ ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭ. ಈ ಸುಂದರ ಕ್ಷಣಕ್ಕೆ ನಮ್ಮ ಹಾಡಿನ ಉಡುಗೊರೆ. ಜುಲೈ 2 ಗಣೇಶ್ ಹುಟ್ಟುಹಬ್ಬ. ಅಂದು ಅವರು ಊರಿನಲ್ಲಿರದ ಕಾರಣ ಈಗ ಮಾಧ್ಯಮ ಮಿತ್ರರ ಮುಂದೆ ಈ ಹಾಡು ಬಿಡುಗಡೆ ಮಾಡಿದ್ದೇವೆ. ಜುಲೈ 2 ರಂದು ಆನಂದ್ ಆಡಿಯೋ ಮೂಲಕ ಈ ಹಾಡು ಎಲ್ಲರಿಗೂ ತಲುಪಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು. ಹಾಡಿನ ಪದಪದದ ಅರ್ಥ ವಿವರಿಸಿ, ಹಾಡು ಬರೆದಿರುವ ಜಯಂತ ಕಾಯ್ಕಿಣಿ ಕಾಯ್ಕಿಣಿ, ಹಾಡಿರುವ ಸೋನು ನಿಗಂ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಧನ್ಯವಾದ ಹೇಳಿದರು.

ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ, ನಾನು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ. ನಾನು ಅಂದು ಬೆಂಗಳೂರಿನಲ್ಲಿ ಇರುವುದಿಲ್ಲ.
ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಷನ್ ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡ ಇದ್ದೆವು. ಕಲಾ ನಿರ್ದೇಶಕ‌ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದರು. ಯೋಗರಾಜ್ ಸರ್ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರೆಸಿದ್ದಾರೆ ಅವರು. ಇದರ ಬಗ್ಗೆ ಕೇಳಿದಾಗ ಹುಡುಗ ಹೀಟ್ ಆಗಿರುತ್ತಾನೆ. ಇದು ಅದರ ಸಂಕೇತವೆಂದರು. ಧನು ಮಾಸ್ಟರ್ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು ನಾಯಕ ಗಣೇಶ್.

ಹಾಡು ಚೆನ್ನಾಗಿದೆ. ಈ ಹಾಡಿಗೆ ಬಳಸಿದ ವಸ್ತುಗಳನ್ನು ನೆನಪಿಗಾಗಿ ನಮ್ಮ ಮನೆಯ ಬಳಿ ತರಿಸಿಟ್ಟುಕೊಂಡಿದ್ದೀನಿ. ಈ ಹಾಡನ್ನು ನನ್ನ ಮಗಳು ದಿನ ಕೇಳುತ್ತಿರುತ್ತಾಳೆ. ಬಿಡುಗಡೆ ಮುಂಚೆಯೇ ಈ ಹಾಡು ಗೆದ್ದಿದೆ ಎನ್ನಬಹುದು. ನಮ್ಮ ಚಿತ್ರಕ್ಕೆ
ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ಸುಂದರವಾದ ಹಾಡು. ಅಷ್ಟೇ ಸುಂದರವಾದ ಸ್ಥಳ. ಅದ್ಭುತವಾದ ಸೆಟ್ ನಲ್ಲಿ ಐದು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ.
ಗಣೇಶ್ ಅವರನ್ನು ಕ್ಲೋಸಪ್ ನಲ್ಲಿ ತೋರಿಸಿದ್ದೇವೆ. ತುಂಬಾ ಮುದ್ದಾಗಿ ಕಾಣುತ್ತಾರೆ ಎನ್ನುತ್ತಾರೆ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ.

Categories
ಸಿನಿ ಸುದ್ದಿ

ಇನ್ನಿಲ್ಲ ಸೂರಿ! ಇದು ಹೊಸಬರ ವಿಭಿನ್ನ ಬಗೆಯ ಚಿತ್ರ…

ಹೇಳಿ ಕೇಳಿ ಇದು ಪ್ರಯೋಗಾತ್ಮಕ ಬಣ್ಣದ ಲೋಕ. ಅದರ ಮುಂದುವರೆದ ಭಾಗವಾಗಿ ರೂಪಗೊಳ್ಳುತ್ತಿರುವ ಸಿನಿಮಾ
ಇನ್ನಿಲ್ಲ ಸೂರಿ. ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗುತ್ತಿರುವುದು ನಿರ್ದೇಶಕ ಪ್ರೇಮ್ ಕುಮಾರ್ ಹೆಚ್ ಆರ್. ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಪ್ರೇಮ್ ಕುಮಾರ್ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಕಿರುತೆರೆ ಮಾತ್ರವಲ್ಲ ಮನೆ ಮಾರಾಟಕ್ಕಿದೆ ಹಾಗೂ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ನಿರ್ದೇಶನದ ಕೌಶಲ್ಯಗಳನ್ನು ಕಲಿತುಕೊಂಡಿದ್ದಾರೆ. ಈ ಭರವಸೆಯೊಂದಿಗೆ ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಪ್ರೇಮ್ ಕುಮಾರ್ ಸ್ವತಂತ್ರ ನಿರ್ದೇಶಕರಾಗಿ ನಿರ್ದೇಶನದ ಅಖಾಡಕ್ಕೆ ಧುಮುಕ್ಕಿದ್ದಾರೆ.

ಇತ್ತೀಚೆಗೆಷ್ಟೇ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಶ್ರೀ ಶೃಂಗಗಿರಿ ಷಣ್ಮುಖ ಸನ್ನಿಧಿಯಲ್ಲಿ ಇನ್ನಿಲ್ಲ ಸೂರಿ ಸಿನಿಮಾದ ಮುಹೂರ್ತ ನೆರವೇರಿದೆ. ನೀರ್ ದೋಸೆ ಹಾಗೂ ತೋತಾಪುರಿ ಸಿನಿಮಾಗಳ ಖ್ಯಾತಿಯ ವಿಜಯ್ ಪ್ರಸಾದ್ ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಬೆಲ್ ಬಾಟಂ ಸಿನಿಮಾದ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರೀ, ಶೇಖರ್, ಪೃಥ್ವಿರಾಜ್ ಕುಲಕರ್ಣಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಸಿನಿಮಾಗೆ ಶುಭ ಕೋರಿದ್ದಾರೆ.

ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಬಡ್ತಿ ಪಡೆದಿರುವ ಪ್ರೇಮ್ ಕುಮಾರ್ ಕನಸಿಗೆ ಸೂರಿ ಸಾಥ್ ಕೊಟ್ಟಿದ್ದಾರೆ. ಹಲವು ವರ್ಷಗಳಿಂದ ಧಾರಾವಾಹಿಗಳಲ್ಲಿ ಮ್ಯಾನೇಜರ್ ಆಗಿ ಗುರುತಿಸಿಕೊಂಡಿರುವ ಸೂರಿ ಈ ಚಿತ್ರಕ್ಕೆ ಹಣ ಹಾಕಲಿದ್ದಾರೆ.

ಪ್ರಸ್ತುತ ಸಮಾಜದಲ್ಲಿ ನಡೆಯುವ ಹದಿ ಹರೆಯದ ಯುವಕ ಯುವತಿಯರ ಮನಸ್ಥಿತಿಯನ್ನು ಅತ್ಯಂತ ಮನರಂಜನಾತ್ಮಕವಾಗಿ ಹಾಗೂ ಕರುಳು ಹಿಂಡುವ ತಾಯಿ ಮಗನ ಕಥೆಯನ್ನು ಇನ್ನಿಲ್ಲ ಸೂರಿ ಸಿನಿಮಾ ಮೂಲಕ ಕಟ್ಟಿಕೊಡಲಿದ್ದಾರೆ ನಿರ್ದೇಶಕ ಪ್ರೇಮ್ ಕುಮಾರ್.

ಸದ್ಯ ಕಲಾವಿದರ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಚಿತ್ರತಂಡ ಶೀರ್ಘದಲ್ಲಿಯೇ ಮಾಹಿತಿ ರಿವೀಲ್ ಮಾಡಲಿದೆ. ಮಂಡ್ಯ ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಸೆನ್ಸಾರ್ ಮುಗಿಸಿದ ಸೀತಮ್ಮನ ಮಗ!

ನಟ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಯಾಗಿದ್ದು , ಈಗಾಗಲೇ ಮೆಚ್ಚುಗೆ ಪಡೆದುಕೊಂಡಿದೆ.

ನಾನು ಈ ಹಿಂದೆ “ಕೆಂಪೇಗೌಡ” ಸಿನಿಮಾ ಸಂದರ್ಭದಲ್ಲಿ ಒಂದು ಕಥೆ ಸಿದ್ದ ಮಾಡಿಕೊಂಡಿದ್ದೆ. ಆ ಚಿತ್ರದಲ್ಲಿ ನಟಿಸಲು ಕಿಚ್ಚ ಸುದೀಪ್ ಅವರು ಒಪ್ಪಿ, ಆರು ದಿನಗಳ ಕಾಲ್ ಶೀಟ್ ಸಹ ನೀಡಿದ್ದರು. ಕಾರಣಾಂತರದಿಂದ ಅದು ಆಗಲಿಲ್ಲ. ಆನಂತರ ಈ ಚಿತ್ರದ ಕಥೆ ಸಿದ್ದವಾಯಿತು. ನನ್ನ ಸ್ನೇಹಿತನ ಅಂತ್ಯಕ್ರಿಯೆಗಾಗಿ ಹರಿಶ್ಚಂದ್ರ ಘಾಟ್ ಗೆ ಹೋಗಿದ್ದಾಗ ಹುಟ್ಟಿದ ಕಥೆಯಿದು. ತಾಯಿ-ಮಗನ ಬಾಂಧವ್ಯವೇ ಚಿತ್ರದ ಹೈಲೆಟ್. ನಾನು ಒಂದು ಪಾತ್ರ ಮಾಡಿದ್ದೀನಿ. ಸೀತಮ್ಮನಾಗಿ ಚೈತ್ರ ಶ್ರೀನಿವಾಸ್, ಮಗನಾಗಿ ಚರಣ್ ಕಾಸಲ ಅಭಿನಯಿಸಿದ್ದಾರೆ.

ಸೋನು ಸಾಗರ, ಬುಲೆಟ್ ರಾಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಸ್ನೇಹಿತರಾದ ರಾಜಾ ನಾಯಕ್ ಅವರ ಮೂಲಕ ಮಂಜುನಾಥ್ ನಾಯಕ್ ಅವರ ಪರಿಚಯವಾಯಿತು. ಅವರು ನನ್ನ ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲೇ ಚಿತ್ರೀಕರಣ ನಡೆಯಿತು. ಈಗ ಸೆನ್ಸಾರ್ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ನಮ್ಮ ಚಿತ್ರತಂಡಕ್ಕೆ ಹಾಗೂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಲಹರಿ ವೇಲು ಹಾಗೂ ನಿರ್ಮಾಪಕ ಕೃಷ್ಣೇಗೌಡ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಯತಿರಾಜ್.

ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ದೇಶಕ ಯತಿರಾಜ್ ಕಾರಣ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಪ್ರಶಂಸೆ ದೊರಕಿರುವುದು ಸಂತೋಷ. ನಾನು ಕೂಡ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸಿದವನು. ಚಿತ್ರದುರ್ಗದ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೀನಿ. ಅವರು ಒಪ್ಪಿಗೆ ನೀಡಿದ್ದಾರೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.

ಚಿತ್ರದಲ್ಲಿ ಅಭಿನಯಿಸಿರುವ ಚೈತ್ರ ಶ್ರೀನಿವಾಸ್, ಸೋನು ಸಾಗರ, ಚರಣ್ ಕಾಸಲ, ಬುಲೆಟ್ ರಾಜು ತಮ್ಮ ಪಾತ್ರದ ಕುರಿತು ಮಾತನಾಡಿದರು.

ಟ್ರೇಲರ್ ಬಿಡುಗಡೆ ಮಾಡಿದ ಲಹರಿ ವೇಲು ಹಾಗೂ ಕೃಷ್ಣೇಗೌಡ ಅವರು “ಸೀತಮ್ಮನ ಮಗ” ನಿಗೆ ಶುಭ ಹಾರೈಸಿದರು.

error: Content is protected !!