ಹುಲಿಬೇಟೆಯೊಳು ದುರುಳರ ಅಳಲು! ಇದು ಬೈರಾಗಿಯ ಭರ್ಜರಿ ಬೇಟೆ…

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ : ಬೈರಾಗಿ
ನಿರ್ದೇಶನ : ವಿಜಯ್ ಮಿಲ್ಟನ್
ನಿರ್ಮಾಣ : ಕೃಷ್ಣ ಸಾರ್ಥಕ್
ತಾರಾಗಣ : ಶಿವರಾಜಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್, ಯಶಾ ಶಿವಕುಮಾರ್, ಶರತ್‌ ಲೋಹಿತಾಶ್ವ, ಅನುಪ್ರಭಾಕರ್, ವಿನೋದ್ ಆಳ್ವ ಇತರರು.

ಸಿಂಪಲ್ಲಾಗಿರೋದ್ ನೋಡಿ ಡಮ್ಮಿ‌ ಪೀಸ್‌ ಅನ್ಕೊಂಡ…’
ಈ ಡೈಲಾಗ್ ಬರುವ ಹೊತ್ತಿಗೆ ಅದಾಗಲೇ ಆ ಹುಲಿಯ ಆರ್ಭಟ ಜೋರಾಗಿರುತ್ತೆ. ಆ ಹುಲಿ ತುಂಬಾ ಸೈಲೆಂಟ್ ಕೆಣಕಿದರೆ ವೈಲೆಂಟ್… ಚಿತ್ರದುದ್ದಕ್ಕೂ ಸೈಲೆಂಟ್ ಮತ್ತು‌ವೈಲೆಂಟ್ ನ‌ ಅಬ್ಬರ ತುಸು ಜೋರಾಗಿಯೇ ಇದೆ. ಇದು ಪಕ್ಕಾ ಮಾಸ್‌ ಮತ್ತು ಕ್ಲಾಸ್ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ ಬೈರಾಗಿ ಮನರಂಜನೆಯ ಜೊತೆಗೊಂದು ಸಂದೇಶ ಸಾರುವ ಸಿನಿಮಾ‌ ಕೂಡ. ಇದು ಶಿವಣ್ಣ ಫ್ಯಾನ್ಸ್ ಮಾತ್ರವಲ್ಲ, ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.

ಶಿವರಾಜಕುಮಾರ್ ಅವರನ್ನಿಲ್ಲಿ ನಿರ್ದೇಶಕ ವಿಜಯ್ ಮಿಲ್ಟನ್ ತುಂಬಾ ಸಿಂಪಲ್ಲಾಗಿ ತೋರಿಸಿದ್ದರೂ, ಶಿವಣ್ಣ ಅವರ ಎನರ್ಜಿಯನ್ನು ಎಲ್ಲೂ ವೇ್ಟ್ ಮಾಡದಂತೆ ತೋರಿಸಿದ್ದಾರೆ. ಶಿವಣ್ಣ ಅವರಿಗೆ ಇದೊಂದು ಹೊಸ ಬಗೆಯ ಪಾತ್ರ. ಆ ಪಾತ್ರದಲ್ಲೇ ಶಿವಣ್ಣ ಜೀವಿಸಿದ್ದಾರೆ. ಇಡೀ ಸಿನಿಮಾದಲ್ಲಿ ಶಿವಣ್ಣ ಅವರ ಹುಲಿ ಘರ್ಜನೆ ಹೈಲೆಟ್.

ಇದು ತಮಿಳಿನ ‘ಕಡುಗು’ ಚಿತ್ರದ ಅವತರಣಿಕೆ. ತಮಿಳಿನಲ್ಲಿ ನಿರ್ದೇಶಿಸಿದ್ದ ವಿಜಯ್ ಮಿಲ್ಟನ್ ಅವರೇ ಈ ಸಿನಿಮಾಗೂ ಆಕ್ಷನ್‌ ಕಟ್ ಹೇಳಿದ್ದಾರೆ. ಇದು ತಮಿಳು ಸಿನಿಮಾದ ರಿಮೇಕ್ ಇದ್ದರೂ ಕನ್ನಡತನಕ್ಕೆ ಎಲ್ಲೂ ಮೋಸವಾಗಿಲ್ಲ. ಅನ್ನೋದೆ ಸಮಾಧಾನ. ಶಿವಣ್ಣ ಅವರನ್ನು ತೋರಿಸಿರುವ ರೀತಿ, ಮೇಕಿಂಗ್ ಪ್ಯಾಟ್ರನ್ ಎಲ್ಲವೂ ಇಲ್ಲಿ ಹೊಸದಾಗಿದೆ. ಇದುವರೆಗೆ ಮಾಡದಿರುವ ಪಾತ್ರದಲ್ಲಿ ಶಿವಣ್ಣ ಎಲ್ಲರಿಗೂ ಮತ್ತಷ್ಟು ಹತ್ತಿರವಾಗುತ್ತಾರೆ.

ಒಂದು ಕಥೆ ಕೇಳುವಂತಿರಬೇಕು, ಆ ಕಥೆ ತೆರೆ ಮೇಲೆ ಚಿತ್ರರೂಪವಾಗಿ ಬಂದಾಗ, ಕಾಡುವಂತಿರಬೇಕು ಆ ಕೇಳುವ, ಕಾಡುವ ಮತ್ತು‌ ನೋಡುವ ಸಿನಿಮಾ ಇದು. ಹಾಗಾಗಿ ಬೈರಾಗಿ‌ ನಂಬಿ‌ ಬಂದವರಿಗೆ ಯಾವ ಮೋಸವಾಗಲ್ಲ.

ಸಿನಿಮಾದಲ್ಲಿ ತಾರೆಗಳ ದಂಡೇ ಇದೆ. ಎಲ್ಲಾ ಪಾತ್ರಗಳಿಗೂ ಅಲ್ಲಿ ತುಂಬಾನೇ ಸ್ಪೇಸ್ ಇದೆ. ಮುಖ್ಯವಾಗಿ ಇಲ್ಲಿ ಮತ್ತೆ ಶಿವಣ್ಣ ಡಾಲಿ ಧನಂಜಯ ಕಾಂಬಿನೇಷನ್ ಇದೆ. ನಿರೀಕ್ಷೆ ಮೀರಿ ಆ ಕಾಂಬಿನೇಷನ್ ವರ್ಕೌಟ್ ಆಗಿದೆ. ಟಗರು ಮೂಲಕ ಜೋರು ಸುದ್ದಿಯಾದ ಧನಂಜಯ ಇಲ್ಲೂ ಹುಲಿ ಜೊತೆ ಸೆಣಸಾಡಿದ್ದಾರೆ. ಅವರಿಲ್ಲಿ ಒಳ್ಳೆಯವರ ಕೆಟ್ಟವರ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು.

ಕಥೆ ಏನು?

ಹುಲಿ ವೇಷ ಹಾಕಿಕೊಂಡು ಬದುಕು ಸವೆಸುವ ಶಿವಪ್ಪನಿಗೆ ಎಲ್ಲಿಲ್ಲದ ಕೋಪ. ಯಾರಾದರೂ ಕೆಣಕಿದರೆ, ಇತರರಿಗೆ ಅನ್ಯಾಯವಾದರೆ ಸಾಕು ಕೋಪ ಸ್ಪೋಟಗೊಂಡು ಅಲ್ಲೋಲ ಕಲ್ಲೋಲ ಆಗುವ ಹಂತಕ್ಕೂ ಶಿವಪ್ಪ ಕಾರಣನಾಗುತ್ತಾನೆ.

ತಮ್ಮನ್ನು ವಿನಾಕಾರಣ ಕೆಣಕಿದವರ ವಿರುದ್ಧ ಹುಲಿ ಶಿವಪ್ಪ ಕೋಪ ಹೆಚ್ಚಿಸಿಕೊಂಡು ಘಟನೆಯೊಂದರಲ್ಲಿ ಹೊಡೆದಾಡಿ, ಜೈಲಿಗೆ ಹೋಗುತ್ತಾನೆ. ಅಲ್ಲಿಂದ ಹೊರ ಬರುವ ಹುಲಿ ಶಿವಪ್ಪನಿಗೆ ಪೊಲೀಸ್ ಅಧಿಕಾರಿಯೊಬ್ಬ ಕೋಪ ಬಿಟ್ಟರೆ ನೀನು, ನಿನ್ನ ಜೊತೆ ಇರೋರು ಚೆನ್ನಾಗಿರುತ್ತಾರೆ ಅಂತ ಬುದ್ಧಿವಾದ ಹೇಳಿ ತನ್ನೊಟ್ಟಿಗೆ ಹುಲಿ ಶಿವಪ್ಪನನ್ನು ಕರೆದೊಯ್ಯುತ್ತಾರೆ. ಗೊತ್ತಿಲ್ಲದ ಊರಲ್ಲಿ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿ ಜೊತೆ ಶಿವಪ್ಪನೂ ಹೋಗ್ತಾನೆ. ಅಲ್ಲಿ ಸಿಂಪಲ್ಲಾಗಿಯೇ ಇರುವ ಶಿವಪ್ಪನ ಬದುಕಲ್ಲಿ ಒಂದೊಂದೇ ಘಟನೆಗಳು ನಡೆಯುತ್ತವೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಿವಪ್ಪ, ಕೆಲವರ ಮೇಲೆ ತಿರುಗಿ ಬೀಳುತ್ತಾನೆ. ಹೀಗಿರುವಾಗ ಒಂದು ದುರ್ಘಟನೆ ನಡೆಯುತ್ತೆ. ಅದೇನು ಅನ್ನೋ ಕುತೂಹಲ ಇದ್ದರೆ ಸಿನಿಮಾ ನೋಡಿ.

ಯಾರು ಹೇಗೆ?

ಇಲ್ಲಿ ಶಿವಣ್ಣ ಅವರ ನಟನೆ ಬಗ್ಗೆ ಮಾತಾಡುವಂತಿಲ್ಲ. ಈ ಪಾತ್ರದಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಹುಲಿಯಾಗಿ ಘರ್ಜಿಸುತ್ತಲೇ ಮುದ್ದಾಡುವಂತಹ ಹುಲಿಯಾಗಿಯೂ ಕಾಣುತ್ತಾರೆ. ಅವರ ಎನರ್ಜಿ ಇಂದಿಗೂ ಕಮ್ಮಿಯಾಗಿಲ್ಲ ಅನ್ನೋಕೆ ಈ ಪಾತ್ರದಲ್ಲಿ ಮಿಂಚಿರುವ ರೀತಿಯೇ ಸಾಕ್ಷಿ. ಅವರ ಒಂದೊಂದು ಡೈಲಾಗ್ ಗೂ ಶಿಳ್ಳೆ, ಚಪ್ಪಾಳೆ ಬೀಳುತ್ತವೆ. ಹುಲಿ‌ ಕುಣಿತದಲ್ಲಂತೂ, ಕುಳಿತವರನ್ನೇ ಕುಣಿಸುವಷ್ಟರ ಮಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು, ಫೈಟಿಂಗ್ ವಿಚಾರದಲ್ಲಂತೂ ಜಿಂಕೆ ಥರಾನೆ ಎಗರಿ ವಿಲನ್ ಗಳನ್ನು‌ ಚಚ್ಚಿದ್ದಾರೆ. ಆಗಾಗ ಭಾವುಕತೆಗೂ ದೂಡುತ್ತಾರೆ.

ಡಾಲಿ ಧನಂಜಯ್ ಇಲ್ಲಿ ಒಳ್ಳೆಯವನಾಗಿ ಕೆಟ್ಟವನಾಗಿ ನಂತರ ಹುಲಿ ಭಯಕ್ಕೆ ಒಳ್ಳೆಯವಾಗಿರುವ ಪಾತ್ರ ಮಾಡಿದ್ದಾರೆ. ಸ್ಪೇಸ್ ಕಮ್ಮಿ‌ಇದ್ದರೂ ನಟನೆಯಲ್ಲೇನೂ ಕಮ್ಮಿಯಾಗಿಲ್ಲ.
ಪೃಥ್ವಿ ಅಂಬರ್ ನಿಜಕ್ಕೂ ಇಷ್ಟವಾಗುತ್ತಾರೆ. ಹೀರೋ ಆಗಿ ಸಕ್ಸಸ್ ಕಂಡರೂ ಆ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮುಗ್ಧನಾಗಿ ತಮಾಷೆ ಹುಡುಗನಾಗಿ ನಗಿಸಿ, ಒಂದಷ್ಟು‌ ಛೇ ಪಾಪ ಎನಿಸುವಷ್ಟು ನಟಿಸಿದ್ದಾರೆ.
ಶಶಿಕುಮಾರ್ ಇಲ್ಲಿ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದರೆ, ಶರತ್ ಲೋಹಿತಾಶ್ವ ಕೆಟ್ಟ ರಾಜಕಾರಣಿಯಾಗಿ ಸೈ ಎನಿಸಿದ್ದಾರೆ. ನಾಯಕಿ ಅಂಜಲಿ ಕೂಡ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪ್ರತಿ ಪಾತ್ರಗಳು ರಿಜಿಸ್ಟರ್ ಆಗುತ್ತವೆ.

ಅನೂಪ್ ಸೀಳಿನ್ ಅವರ ಸಂಗೀತದ ಎರಡು‌ ಹಾಡು ಗುನುಗುವಂತಿವೆ. ಹಿನ್ನೆಲೆ ಸಂಗೀತ ಕೂಡ ಸಿನಿಮಾ ವೇಗ ಹೆಚ್ಚಿಸಿದೆ. ಬೈರಾಗಿಯ ಅಂದಕ್ಕೆ ಕ್ಯಾಮೆರಾ ಕೈಚಳಕ ಕಾರಣವಾಗಿದೆ.

Related Posts

error: Content is protected !!