ಸೆನ್ಸಾರ್ ಮುಗಿಸಿದ ಸೀತಮ್ಮನ ಮಗ!

ನಟ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಯಾಗಿದ್ದು , ಈಗಾಗಲೇ ಮೆಚ್ಚುಗೆ ಪಡೆದುಕೊಂಡಿದೆ.

ನಾನು ಈ ಹಿಂದೆ “ಕೆಂಪೇಗೌಡ” ಸಿನಿಮಾ ಸಂದರ್ಭದಲ್ಲಿ ಒಂದು ಕಥೆ ಸಿದ್ದ ಮಾಡಿಕೊಂಡಿದ್ದೆ. ಆ ಚಿತ್ರದಲ್ಲಿ ನಟಿಸಲು ಕಿಚ್ಚ ಸುದೀಪ್ ಅವರು ಒಪ್ಪಿ, ಆರು ದಿನಗಳ ಕಾಲ್ ಶೀಟ್ ಸಹ ನೀಡಿದ್ದರು. ಕಾರಣಾಂತರದಿಂದ ಅದು ಆಗಲಿಲ್ಲ. ಆನಂತರ ಈ ಚಿತ್ರದ ಕಥೆ ಸಿದ್ದವಾಯಿತು. ನನ್ನ ಸ್ನೇಹಿತನ ಅಂತ್ಯಕ್ರಿಯೆಗಾಗಿ ಹರಿಶ್ಚಂದ್ರ ಘಾಟ್ ಗೆ ಹೋಗಿದ್ದಾಗ ಹುಟ್ಟಿದ ಕಥೆಯಿದು. ತಾಯಿ-ಮಗನ ಬಾಂಧವ್ಯವೇ ಚಿತ್ರದ ಹೈಲೆಟ್. ನಾನು ಒಂದು ಪಾತ್ರ ಮಾಡಿದ್ದೀನಿ. ಸೀತಮ್ಮನಾಗಿ ಚೈತ್ರ ಶ್ರೀನಿವಾಸ್, ಮಗನಾಗಿ ಚರಣ್ ಕಾಸಲ ಅಭಿನಯಿಸಿದ್ದಾರೆ.

ಸೋನು ಸಾಗರ, ಬುಲೆಟ್ ರಾಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಸ್ನೇಹಿತರಾದ ರಾಜಾ ನಾಯಕ್ ಅವರ ಮೂಲಕ ಮಂಜುನಾಥ್ ನಾಯಕ್ ಅವರ ಪರಿಚಯವಾಯಿತು. ಅವರು ನನ್ನ ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲೇ ಚಿತ್ರೀಕರಣ ನಡೆಯಿತು. ಈಗ ಸೆನ್ಸಾರ್ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ನಮ್ಮ ಚಿತ್ರತಂಡಕ್ಕೆ ಹಾಗೂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಲಹರಿ ವೇಲು ಹಾಗೂ ನಿರ್ಮಾಪಕ ಕೃಷ್ಣೇಗೌಡ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಯತಿರಾಜ್.

ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ದೇಶಕ ಯತಿರಾಜ್ ಕಾರಣ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಪ್ರಶಂಸೆ ದೊರಕಿರುವುದು ಸಂತೋಷ. ನಾನು ಕೂಡ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸಿದವನು. ಚಿತ್ರದುರ್ಗದ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೀನಿ. ಅವರು ಒಪ್ಪಿಗೆ ನೀಡಿದ್ದಾರೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.

ಚಿತ್ರದಲ್ಲಿ ಅಭಿನಯಿಸಿರುವ ಚೈತ್ರ ಶ್ರೀನಿವಾಸ್, ಸೋನು ಸಾಗರ, ಚರಣ್ ಕಾಸಲ, ಬುಲೆಟ್ ರಾಜು ತಮ್ಮ ಪಾತ್ರದ ಕುರಿತು ಮಾತನಾಡಿದರು.

ಟ್ರೇಲರ್ ಬಿಡುಗಡೆ ಮಾಡಿದ ಲಹರಿ ವೇಲು ಹಾಗೂ ಕೃಷ್ಣೇಗೌಡ ಅವರು “ಸೀತಮ್ಮನ ಮಗ” ನಿಗೆ ಶುಭ ಹಾರೈಸಿದರು.

Related Posts

error: Content is protected !!