ಚಾರ್ಲಿ ಮೊಗದಲ್ಲಿ ಗೆಲುವಿನ ಮಂದಹಾಸ: ಚಾರ್ಲಿ ಹೆಸರಲ್ಲಿ ಎನ್ ಜಿ ಓಗಳಿಗೆ ಸಹಾಯ- ಕಲಾವಿದ, ತಂತ್ರಜ್ಞರಿಗೂ ಲಾಭ ಹಂಚಿಕೆ…

ಮನುಷ್ಯ ಹಾಗೂ ಶ್ವಾನದ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ನಿರ್ದೇಶಕ ಕಿರಣ್ ರಾಜ್ “777 ಚಾರ್ಲಿ” ಚಿತ್ರದಲ್ಲಿ ತೋರಿಸಿದ್ದಾರೆ. ಇಡೀ ವಿಶ್ವದಾದ್ಯಂತ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಕ್ಷಿತ ಶೆಟ್ಟಿ ಅವರ ಅಮೋಘ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. “ಚಾರ್ಲಿ” ನಟನೆಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಯಶಸ್ವಿ 25 ದಿನ ಪೂರೈಸಿ ಮುನ್ನಡೆಯುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದೆ.

ಈವರೆಗೂ ಒಟ್ಟಾರೆ 150 ಕೋಟಿ ಗ್ರಾಸ್​ ಗಳಿಕೆಯಾಗಿದೆ. ಅದರಲ್ಲಿ 90ರಿಂದ 100 ಕೋಟಿವರೆಗೂ ಲಾಭ ಬಂದಿದೆ. ಅದರಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರಿಡಿಂಗ್​ ವಿರುದ್ಧ ಹೋರಾಡುತ್ತಿರುವ ಹಾಗೂ ಅದನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್​ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ. ಶೇ.5ರಷ್ಟು ಎಂದರೆ ಐದು ಕೋಟಿ ರೂಪಾಯಿಗಳಷ್ಟಾಗುತ್ತದೆ. ಅದನ್ನು ನೇರವಾಗಿ ಹಂಚಿಕೆ ಮಾಡಬೇಕಾ? ಅಥವಾ ಚಾರ್ಲಿ ಹೆಸರಿನಲ್ಲಿ ಒಂದು ಅಕೌಂಟ್​ ಮಾಡಿ ದುಡ್ಡಿಟ್ಟು, ಪ್ರತಿ ತಿಂಗಳು ಸಿಗುವ ಬಡ್ಡಿಯಲ್ಲಿ ಸಹಾಯ ಮಾಡಬೇಕಾ? ಎಂಬ ವಿಷಯವಾಗಿ ಇನ್ನೂ ತೀರ್ಮಾನವಾಗಿಲ್ಲ. ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರಿಗೆ ಶೇ. 10ರಷ್ಟು ಲಾಭದಲ್ಲಿ ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ 10 ಕೋಟಿ ರೂಪಾಯಿಗಳಷ್ಟಾಗುತ್ತದೆ. ಈ ಪಟ್ಟಿಯಲ್ಲಿ ನಾನಿಲ್ಲ. ಏಕೆಂದರೆ, ನಾನು ಒಬ್ಬ ನಟ ಮತ್ತು ನಿರ್ಮಾಪಕನಾಗಿರುವುದರಿಂದ, ನನ್ನನ್ನು ಬಿಟ್ಟು ಮಿಕ್ಕವರಿಗೆ ಹಂಚಲಿದ್ದೇವೆ ಎಂದರು ರಕ್ಷಿತ್ ಶೆಟ್ಟಿ.

25 ದಿನ ಕರ್ನಾಟಕದಲ್ಲಿ 100 ಪ್ಲಸ್​ ಸೆಂಟರ್​ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೇರೆ ದೇಶಗಳಲ್ಲಿ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾಗಿ 15 ದಿನಗಳ ನಂತರ ಚಿತ್ರತಂಡದವರು ದುಬೈಗೆ ಹೋಗಿ ಬಂದಿದ್ದಾರೆ. ಮಾರಿಷಸ್​, ಜಪಾನ್​ ಮುಂತಾದ ಕಡೆ ಸಹ ಚಿತ್ರ ಪ್ರದರ್ಶನವಾಗುತ್ತಿದೆ. ಅಲ್ಲಿ ಪ್ರದರ್ಶನಗಳ ಪ್ರಮಾಣ ಕಡಿಮೆ ಇರಬಹುದು. ಆದರೆ, ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲ ಪ್ರದರ್ಶನವಾಗುತ್ತಿದೆ. ಸಾಮಾನ್ಯವಾಗಿ ಚಿತ್ರಕ್ಕೆ ಜನ ಬರುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಆದರೆ, ಚಿತ್ರವನ್ನು ಚೆನ್ನಾಗಿ ಪ್ರಮೋಟ್​ ಮಾಡಿದರೆ, ಖಂಡಿತಾ ಜನ ಬರುತ್ತಾರೆ ಎಂದು “777 ಚಾರ್ಲಿ” ತೋರಿಸಿಕೊಟ್ಟಿದೆ. ಚಿತ್ರಕ್ಕೆ ಈಗಲೂ ಜನ ಬರುತ್ತಿದ್ದಾರೆ. ಭಾನುವಾರ 1 ಕೋಟಿಗೂ ಹೆಚ್ಚು ಗಳಿಕೆಯಾಗಿದೆ. ಚಿತ್ರ ಬಿಡುಗಡೆಯಾಗಿ 25 ದಿನಗಳ ನಂತರವೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ಗಳಲ್ಲಿ ಬೇಡಿಕೆ ಇದೆ ಎಂದರು ವಿತರಕ ಕಾರ್ತಿಕ್ ಗೌಡ.

ಸಾಮಾನ್ಯವಾಗಿ ನಾಯಕಿ ಅಂದರೆ ಪ್ರೇಮಕಥೆ ಇರುತ್ತದೆ. ಇಲ್ಲಿ ಹಾಗಿಲ್ಲ. ಆದರೂ ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವುದೇ ಸಂತೋಷ. ಅವಕಾಶ ಕೊಟ್ಟ ಎಲ್ಲರಿಗೂ ನಾಯಕಿ ಸಂಗೀತ ಶೃಂಗೇರಿ ಧನ್ಯವಾದಗಳನ್ನು ಸಲ್ಲಿಸಿದರು.

ಸ್ನೇಹಿತರು ಮತ್ತು ಸಂಬಂಧಿಕರು ಚಿತ್ರ ನೋಡಿ ಖುಷಿಪಟ್ಟರು. ನಾವು 65 ಜನ ಒಟ್ಟಿಗೆ ಸಿನಿಪೊಲಿಸ್​ಗೆ ಹೋಗಿ ಚಿತ್ರ ನೋಡಿ ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮ ಆಚರಿಸಿದ್ದೇವೆ. ನಾನು ಕ್ಲಾಸ್​ಗೆ ಹೋಗುವಾಗ ಚಾರ್ಲಿ ಹುಡುಗಿ ಅಂತ ಎಲ್ಲ ಹೇಳುತ್ತಾರೆ. ಸೆಲ್ಫಿ ತೆಗೆಸಿಕೊಂಡು ಆಲ್​ ದಿ ಬೆಸ್ಟ್​ ಹೇಳುತ್ತಾರೆ ಎಂದು ಪುಟಾಣಿ ಶಾರ್ವರಿ ತಮ್ಮ ಅನುಭವ ಹಂಚಿಕೊಂಡರು.

ಸೋಲು ಹಲವು ಪಾಠ ಕಲಿಸುತ್ತದೆ. ಗೆಲುವು ಹಲವು ದಾರಿಗಳನ್ನು ತೋರಿಸುತ್ತವೆ. ಸಹಾಯಕ ನಿರ್ದೇಶಕನಾಗಿ ಮೂರು ಸಿನಿಮಾಗಳನ್ನು ಮಾಡಿದ್ದೇನೆ. ಸೋಲು, ಗೆಲುವು ಎರಡನ್ನು ನೋಡಿದ್ದೀನಿ. ಸೋಲು ನೋಡಿರುವುದರಿಂದ ಗೆಲುವಿನ ಮಹತ್ವ ಗೊತ್ತಾಯಿತು. ಈ ಜರ್ನಿಯಲ್ಲಿ ಹಲವರಿದ್ದಾರೆ. ಒಂದೇ ಮನಸ್ಥಿತಿಯವರಾದ್ದರಿಂದ ಇಂಥದ್ದೊಂದು ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಯಿತು. ಚಿತ್ರ 25 ದಿನ ಪೂರೈಸಿದೆ. ಮುಂದೆ ಸಹ ಇದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಲಾಭ ಕೊಡುತ್ತದೆ ಎಂಬ ನಂಬಿಕೆ ಇದೆ. ಈ ಗೆಲುವಿನಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಕ್ಕೆ ಸ್ಫೂರ್ತಿ ಸಿಕ್ಕಿದೆ. ಕಿರಿಕ್​ ಪಾರ್ಟಿ ಮಾಡಿದಾಗ ಹಣದ ಅಭಾವವಿತ್ತು. ಆಗ ರಕ್ಷಿತ್ ಎಲ್ಲರನ್ನೂ ಕರೆದು, ಚಿತ್ರ ಚೆನ್ನಾಗಿ ಹೋದರೆ ಇನ್ನಷ್ಟು ಕೊಡುವುದಾಗಿ ಹೇಳಿದ್ದರು. ಅದರಂತೆ ಚಿತ್ರ ಗೆದ್ದ ಮೇಲೆ ಹಲವರಿಗೆ ಅವರ ಪಾಲು ಕೊಟ್ಟರು. ಇದನ್ನು ನೋಡಿ ಕೆಲವರು ಕಣ್ಣೀರು ಹಾಕಿದ್ದು ನೆನಪಿದೆ. ಈಗಲೂ ರಕ್ಷಿತ್​ ಅದನ್ನೇ ಮುಂದುವರೆಸಿದ್ದಾರೆ ಎಂದರು ನಿರ್ದೇಶಕ ಕಿರಣ್ ರಾಜ್.

Related Posts

error: Content is protected !!