ದೂರದರ್ಶನ ವೀಕ್ಷಣೆಗೆ ಬಂದ ಆಯಾನಾ! ಪೃಥ್ವಿ ಅಂಬರ್ ಜೊತೆ ರಿಕ್ಷಾ ಡ್ರೈವರ್ ಮಗಳ ಡಿಂಗುಡಾಂಗು…

ದಿಯಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬರ್‌ ಈಗ ‘ದೂರದರ್ಶನ’ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರದ ಈ ಸಿನಿಮಾದ ಟೈಟಲ್‌ ಟೀಸರ್‌ ಇತ್ತೀಚೆಗೆ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ದೂರದರ್ಶನ ಬಳಗ ನಾಯಕಿಯನ್ನು ಪರಿಚಯಿಸುತ್ತಿದೆ. ಈ ಹಿಂದೆ ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದ ಆಯಾನಾ ಪೃಥ್ವಿ ಅಂಬರ್ ಗೆ ಜೋಡಿಯಾಗಿ ನಟಿಸಿದ್ದಾರೆ.

ದೂರದರ್ಶನ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್ ಕರೆಯಲಾಗಿತ್ತು. 30 ರಿಂದ 40 ಮಂದಿ ಆಡಿಷನ್ ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಆಯಾನಾ ಫೈನಲ್ ಆಗಿ ಆಯ್ಕೆಯಾದರು ಎನ್ನುವ ನಿರ್ದೇಶಕ ಸುಕೇಶ್ ಶೆಟ್ಟಿ, ಆಯಾನಾ ಮೈತ್ರಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ರಿಕ್ಷಾ ಡ್ರೈವರ್ ಮಗಳಾಗಿ ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತೇ ಎಂಬ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.

ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ. ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ.

ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.

Related Posts

error: Content is protected !!