Categories
ಸಿನಿ ಸುದ್ದಿ

ಹೊಸಬರ ದಿಲ್ಲು ಖುಷ್!

ವಿಭಿನ್ನ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ,‌ ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌ ಡಬ್ಬಿಂಗ್ ಕೂಡ ಪೂರ್ಣವಾಗಿದ್ದು, ರೀರೆಕಾರ್ಡಿಂಗ್ ನಡೆಯುತ್ತಿದೆ.

ಇದು ಬರಿ ಯುವಜನತೆಯ “ದಿಲ್ ಖುಷ್” ಅಲ್ಲ. ಎಲ್ಲರಿಗೂ ಹಿಡಿಸುವ “ದಿಲ್ ಖುಷ್”. ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಈ ಚಿತ್ರದಲ್ಲಿ ಯುವಪ್ರತಿಭೆ ರಂಜಿತ್ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ, ನಾಯಕಿ ಪಾತ್ರ ಅಷ್ಟೆ ಅಲ್ಲದೆ ಎಲ್ಲ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.

ನಮ್ಮ ಸುತ್ತ ಮುತ್ತ ನಡೆಯುವ ಕಥೆ ಎಂದೆನಿಸುತ್ತದೆ.. ಕಾಮಿಡಿ ಹಾಗು ಎಮೋಷನಲ್ ಸನ್ನಿವೇಶಗಳಲ್ಲಿ ರಂಗಾಯಣ ರಘು, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು ಅವರ ಪಾತ್ರಗಳು ಕಾಡುತ್ತವೆ ಎಂದು ನಿರ್ದೇಶಕ ಪ್ರಮೋದ್ ಜಯ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಈ ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ‌. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಫೆಬ್ರವರಿ ನಂತರ ಒಂದಾದ ಮೇಲೆ ಒಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಕೂಡ ಬರಲಿದೆ‌. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

ರಂಜಿತ್ ಎಂಬ ನೂತನ ಪ್ರತಿಭೆ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ. ಸ್ಪಂದನ ಸೋಮಣ್ಣ ಈ ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಒಂಟಿ ಪಯಣ ಹಾಡು! ನೆನಪಿನ ಹಾದಿಯಲ್ಲೊಂದು ಸಾಂಗು…

ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಮೂಲಕ ಈ ಹಿಂದೆ ಸಂಚಾರಿ ವಿಜಯ್ ಅಭಿನಯದ “6 ನೇ ಮೈಲಿ” ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ “ತಲ್ವಾರ್ ಪೇಟೆ” ಚಿತ್ರಗಳ ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ “ನೆನಪಿನ ಹಾದಿಯಲ್ಲಿ ಒಂಟಿ ಪಯಣ” ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.

ಡಾ.ಶಶಿಕಲಾ ಪುಟ್ಟಸ್ವಾಮಿ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರವೀಣ್ ತೇಜ್ ಹಾಗೂ ನಟಿ ಯಶಾ ಶಿವಕುಮಾರ್ ಅಭಿನಯಿಸಿದ್ದಾರೆ. ಸಾಯಿ ಶ್ರೀಕಿರಣ್ ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನವಿದೆ.

ಇತ್ತೀಚೆಗೆ “ನೆನಪಿನ ಹಾದಿಯಲ್ಲಿ ಒಂಟಿ ಪಯಣ” ಆಲ್ಬಂ ಸಾಂಗ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಖ್ಯಾತ ಹಾಕಿ ಆಟಗಾರ ಧನರಾಜ್ ಪಿಳ್ಳೈ, ಡಾ.ವಿ.ನಾಗೇಂದ್ರ ಪ್ರಸಾದ್, ಲಕ್ಕಣ್ಣ ಅವರು ಸೇರಿದಂತೆ ಅನೇಕರು ಇದ್ದರು.

ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಮಾತನಾಡಿ, ಹಾಡು ಚೆನ್ನಾಗಿದೆ. ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದೇವೆ. ಆ ಮೂಲಕ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಹೊಸಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಅವರಿಂದ ಈ ತಂಡದ ಪರಿಚಯವಾಯಿತು. ಶಶಿಕಲಾ ಅವರು ಬರೆದಿರುವ ಈ ಹಾಡು ಸುಂದರವಾಗಿದೆ. ಅಷ್ಟೇ ಚೆನ್ನಾಗಿ ನಿರ್ದೇಶನ ಕೂಡ ಮಾಡಿದ್ದಾರೆ. ಇಡೀ ತಂಡದ ಪರಿಶ್ರಮದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ನಟ ಪ್ರವೀಣ್ ತೇಜ್ ಹೇಳಿದರು.

ಇದು ನನ್ನ ಮೊದಲ ಆಲ್ಬಂ ಸಾಂಗ್. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟಿ ಯಶಾ ಶಿವಕುಮಾರ್.

ಹಾಡು ಬರೆದು ನಿರ್ದೇಶಿಸಿರುವ ಡಾ.ಶಶಿಕಲಾ ಪುಟ್ಟಸ್ವಾಮಿ , ಛಾಯಾಗ್ರಾಹಕ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಹಾಡಿನ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಲವ್ ಬರ್ಡ್ಸ್ ಗಳಿಗೆ ಮೆಚ್ಚುಗೆ: ಇದು ಡಾರ್ಲಿಂಗ್ ಜೋಡಿಗಳ ಚಿತ್ರ…

ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಿಸಿರುವ, ಪಿ.ಸಿ.ಶೇಖರ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಾಯಕ, ನಾಯಕಿಯಾಗಿ ನಟಿಸಿರುವ “ಲವ್ ಬರ್ಡ್ಸ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಾಯಕ, ನಾಯಕಿಯ ಪಾತ್ರವನ್ನು ಪರಿಸಿಚಯಿಸುವ ಈ ಟೀಸರ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟ ವಿಜಯ ರಾಘವೇಂದ್ರ ಹಾಗೂ ಅಜಯ್ ರಾವ್ “ಲವ್ ಬರ್ಡ್ಸ್” ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಾನು ಸಾಮಾನ್ಯವಾಗಿ ಒಂದೇ ತರಹದ ಚಿತ್ರ ಮಾಡುವುದಿಲ್ಲ. ಬೇರೆಬೇರೆ ರೀತಿಯ ಚಿತ್ರ ಮಾಡುತ್ತಿರುತ್ತೇನೆ. ಲಾಕ್ ಡೌನ್ ಸಮಯದಲ್ಲಿ ಬರೆದ ಕಥೆಯಿದು. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲವು ವಿಷಯಗಳು ಈ ಕಥೆ ಬರೆಯಲು ಸ್ಪೂರ್ತಿ. ಕಥೆ ಬರೆಯಬೇಕಾದರೆ ಕೃಷ್ಣ – ಮಿಲನ ನಾಗರಾಜ್ ಅವರೆ ನಾಯಕ-ನಾಯಕಿ ಅಂತ ನಿರ್ಧರಿಸಿದ್ದೆ. ಆನಂತರ ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಅವರು ಚಿತ್ರ ಮಾಡಲು ಮುಂದಾದರು. ಚಿತ್ರತಂಡದ ಸಹಕಾರದಿಂದ “ಲವ್ ಬರ್ಡ್ಸ್” ಚಿತ್ರ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ದೇಶಕ ಪಿ.ಸಿ.ಶೇಖರ್.

ಚಿತ್ರ ಚೆನ್ನಾಗಿ ಬಂದಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ವಿಜಯ ರಾಘವೇಂದ್ರ – ಅಜಯ್ ರಾವ್ ಅವರಿಗೆ ಧನ್ಯವಾದ. ಮುಂದಿನವಾರ ಚಿತ್ರದ ಹಾಡನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ಕಡ್ಡಿಪುಡಿ ಚಂದ್ರು ತಿಳಿಸಿದರು.

ನಾನು ಹಾಗೂ ಮಿಲನ ನಾಗರಾಜ್ “ಲವ್ ಮಾಕ್ಟೇಲ್” ಚಿತ್ರದ ನಂತರ ಮಾಡಿರುವ ಚಿತ್ರವಿದು. ಅದರಲ್ಲಿ ಆದಿ ಹಾಗೂ ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆವು. ಇದರಲ್ಲಿ ದೀಪಕ್ – ಪೂಜಾ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳು ಚೆನ್ನಾಗಿದೆ. ನಿರ್ದೇಶಕ ಪಿ.ಸಿ.ಶೇಖರ್ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಧನ್ಯವಾದ ಎಂದರು ಡಾರ್ಲಿಂಗ್ ಕೃಷ್ಣ.

ನಿರ್ಮಾಪಕ ಚಂದ್ರು ಅವರು ತುಂಬಾ ಫಾಸ್ಟ್. ನಾನಿದ್ದ ಜಾಗಕ್ಕೆ ಬಂದು ಈ ಚಿತ್ರದ ಕುರಿತು ಹೇಳಿದರು. ಕಥೆ ಇಷ್ಟವಾಯಿತು. ಪಿ.ಸಿ.ಶೇಖರ್ ಸುಂದರವಾದ ಕಥೆ ಬರೆದಿದ್ದಾರೆ. “ಲವ್ ಬರ್ಡ್ಸ್” ಚಿತ್ರದಲ್ಲಿ ಲವ್ ಅಷ್ಟೇ ಅಲ್ಲ. ಬೇರೆ ವಿಷಯಗಳು ಇದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹ ನೀಡಿ ಎಂದು ಮಿಲನ ನಾಗರಾಜ್ ಹೇಳಿದರು.

Categories
ಸಿನಿ ಸುದ್ದಿ

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 47ನೇ ವಾರ್ಷಿಕೋತ್ಸವ 21- 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ…

ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿರುವುದು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿ. ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ಕೇವಲ ಎರಡು ಪ್ರಶಸ್ತಿಗಳಿಂದ ಪ್ರಾರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು, ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೀಗ 11 ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ

ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಹಲವು ಗಣ್ಯರು ಈ ಸಮಾರಂಭಕ್ಕೆ ಜೊತೆಯಾಗಿ ಆರ್ಥವಂತಿಕೆ ಹೆಚ್ಚಿಸಿದ್ದಾರೆ.


ಕಳೆದ ವರ್ಷ ಕೋವಿಡ್​ ಕಾರಣದಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿರಲಿಲ್ಲ. ಹಾಗಾಗಿ, ಕಳೆದ ವರ್ಷದ ಶ್ರೀ ರಾಘವೇಂದ್ರ ಚಿತ್ತವಾಣಿ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ. ಸಂಸ್ಥೆಯ ಸ್ಥಾಪಕರಾದ ಡಿ.ವಿ, ಸುಧೀಂದ್ರ ಅವರ ಜನ್ಮದಿನದಂದು (ಜನವರಿ 25), ಈ ಸಮಾರಂಭವನ್ನು ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.

ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್​ ಬಣಕಾರ್​, ನಟಿಯರಾದ ರಾಗಿಣಿ, ‘ಎ’ ಖ್ಯಾತಿಯ ಚಾಂದಿನಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಶಸ್ಪ ವಿವರ

2021
ಶ್ರೀ ಪಿ. ಧನರಾಜ್
ಹಿರಿಯ ಚಲನಚಿತ್ರ ನಿರ್ಮಾಪಕರು
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಶ್ರೀ ಈಶ್ಚರ ದೈತೋಟ
ಹಿರಿಯ ಪತ್ರಕರ್ತರು
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

2022
ಶ್ರೀ ಕುಮಾರ್ ಗೋವಿಂದ್
ಹಿರಿಯ ನಟ-ನಿರ್ಮಾಪಕರು
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಶ್ರೀ ಸದಾಶಿವ ಶೆಣೈ
ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಶ್ರೀ ರಾಜೇಶ್ ಕೃಷ್ಣನ್
ಖ್ಯಾತ ಹಿನ್ನೆಲೆ ಗಾಯಕರು
ಡಾ. ರಾಜಕುಮಾರ್ ಪ್ರಶಸ್ತಿ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಕುಟುಂಬದವರಿಂದ

ಶ್ರೀ ಸಾಯಿಪ್ರಕಾಶ್
ಹಿರಿಯ ನಿರ್ದೇಶಕರು-ನಿರ್ಮಾಪಕರು
‘ಯಜಮಾನ’ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ್​ ಅವರಿಂದ

ಶ್ರೀಮತಿ ತುಳಸಿ
ಹಿರಿಯ ನಟಿ
ಖ್ಯಾತ ಅಭಿನೇತ್ರಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ

ಶ್ರೀ ನೋಬಿನ್ ಪಾಲ್
ಅತ್ಯುತ್ತಮ ಸಂಗೀತ ನಿರ್ದೇಶನ, ‘777 ಚಾರ್ಲಿ’ ಚಿತ್ರಕ್ಕಾಗಿ
ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್​ಟೈನ್​ಮೆಂಟ್​ ಪ್ರೈ ಲಿ ಪ್ರಶಸ್ತಿ

ಶ್ರೀ ಮಧುಚಂದ್ರ
ಅತ್ಯುತ್ತಮ ಕಥಾಲೇಖಕರು, ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರಕ್ಕಾಗಿ
ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ ಕೆ.ವಿ. ಜಯರಾಂ ಪ್ರಶಸ್ತಿ, ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ

ಶ್ರೀ ಎಂ.ಜಿ. ಶ್ರೀನಿವಾಸ್ (ಶ್ರೀನಿ)
ಅತ್ಯುತ್ತಮ ಸಂಭಾಷಣೆ, ‘ಓಲ್ಡ್ ಮಾಂಕ್’ ಚಿತ್ರಕ್ಕಾಗಿ
ಖ್ಯಾತ ಚಿತ್ರಸಾಹಿತಿ ಶ್ರೀ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ,
ಡಾ.ಎಚ್​.ಕೆ. ನರಹರಿ ಅವರಿಂದ

ಶ್ರೀ ಕಿರಣ್ ರಾಜ್ (‘777 ಚಾರ್ಲಿ’)
ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
ಹಿರಿತೆರೆ-ಕಿರುತೆರೆ ನಿರ್ದೇಶಕ ಶ್ರೀ ಬಿ. ಸುರೇಶ ಪ್ರಶಸ್ತಿ

ಪ್ರಮೋದ್ ಮರವಂತೆ
‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’ ಗೀತರಚನೆಗಾಗಿ
ಹಿರಿಯ ಪತ್ರಕರ್ತರಾದ ಶ್ರೀ.ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ

ಶ್ರೀನಿವಾಸಮೂರ್ತಿ
ಹಿರಿಯ ಪೋಷಕ ಕಲಾವಿದರು
ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ, ಶ್ರೀಮತಿ ನಾಗಮಣಿ ಸೀತಾರಾಮ ಕುಟುಂಬದವರಿಂದ

Categories
ಸಿನಿ ಸುದ್ದಿ

ತಮಿಳು ಸಿನಿರಂಗದತ್ತ ರಕ್ಷಿತ್ ಶೆಟ್ಟಿ! ವಿಜಯ್ ಜೊತೆ ಸಿಂಪಲ್ ಸ್ಟಾರ್ ನಟನೆ? ಇದು ಲೋಕೇಶ್ ಕನಕರಾಜ್ ಚಿತ್ರ…

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಬಿಗ್ ಪ್ಯಾನ್ ಇಂಡಿಯಾ ಸಿನಿಮಾ ಬರುತ್ತಿದೆ. ವಿಕ್ರಮ್ ಚಿತ್ರದ ನಂತರ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸ್ಟಾರ್ ನಟರು ಜತೆಗೂಡುತ್ತಿದ್ದಾರೆ. ಈ ಬಾರಿ ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಈ ದೊಡ್ಡ ಚಿತ್ರಕ್ಕೆ ಜತೆಯಾಗುತ್ತಿದ್ದಾರೆ ಅನ್ನೋದು ಈ ಹೊತ್ತಿನ ಸುದ್ದಿ.


ಹೌದು, ಲೋಕೇಶ್ ಕನಕರಾಜ್ ನಿರ್ದೇಶನದ, ಕಮಲಹಾಸನ್, ಇಳಯ ದಳಪತಿ ವಿಜಯ್ ಕಾಂಬಿನೇಶನ್, ಲಲಿತ್ ನಿರ್ಮಾಣದ ತಮಿಳಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ ಮಾಡುತ್ತಿರುವ ಸುದ್ದಿ ಈಗಷ್ಟೆ ಹೊರ ಬಂದಿದೆ. ಇದು ವಿಜಯ್ ಅವರ 67ನೇ ಚಿತ್ರದ ಸಮಾಚಾರ ಎಂಬುದು ವಿಶೇಷ.


ಅಂದಹಾಗೆ ಇದೇ ಚಿತ್ರದಲ್ಲಿ ಕೆಜಿಎಫ್ ಅಧೀರ ಸಂಜಯ್ ದತ್ ಹಾಗೂ ತ್ರಿಶಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಕಾತಿ೯ ಕೂಡ ಈ ಚಿತ್ರಕ್ಕೆ ಜತೆಗೂಡುವ ಸಾಧ್ಯತೆಗಳು ಇವೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

Categories
ಸಿನಿ ಸುದ್ದಿ

ಅಸ್ತಿತ್ವಕ್ಕೆ ಬಂತು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ : ಪದ್ಮಶ್ರೀ ಡಾ. ಗಿರೀಶ್​ ಕಾಸರವಳ್ಳಿ, ಡಾ. ವಿಜಯಮ್ಮ ಉಪಸ್ಥಿತಿ…

ಕನ್ನಡ ಚಿತ್ರರಂಗಕ್ಕೆ ಸಿನಿಮಾ ಪತ್ರಕರ್ತರ ಕೊಡುಗೆ ಅಪಾರ. ಹಲವು ದಶಕಗಳಿಂದಲೂ ಸಿನಿಮಾ ಮತ್ತು ಸಿನಿಮಾ ಪತ್ರಕರ್ತರ ಮಧ್ಯೆ ಬಾಂಧವ್ಯವಿದೆ. ಸಿನಿಮಾ ಪತ್ರಕರ್ತರಿಗಾಗಿ ಒಂದು ಸಂಘ ಇರಲಿಲ್ಲ. ಹಲವಾರು ವರ್ಷಗಳಿಂದಲೂ ಸಂಘ ಕಟ್ಟುವ ಕೆಲಸ ನಡೆಯುತ್ತಲೇ ಇತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಚಲನಚಿತ್ರ ಪತ್ರಕರ್ತರ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ

ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘಕ್ಕೆ ಚಾಲನೆ‌ ನೀಡುವುದರ ಜೊತೆಗೆ, ಲಾಂಛನ ಬಿಡುಗಡೆ ಮಾಡಿ ಅವರು ಮಾತಾಡಿದರು.


”ಸಂಸ್ಕಾರ’ , ‘ಸ್ಕೂಲ್ ಮಾಸ್ಟರ್ ‘ ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಸಿನಿಮಾಗಳನ್ನು‌ ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ಕನ್ನಡ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ, ಅದನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದರು.


‘ಕನ್ನಡದ ಅಸ್ಮಿತೆ, ಕಲಾತ್ಮಕ ಹೆಗ್ಗಳಿಕೆ ತೋರಿಸಬೇಕು, ಆ ಕೆಲಸ ಆಗಬೇಕು. ಬೆಂಗಳೂರು ಅಲ್ಲದೆ ರಾಜ್ಯದ ಆಚೆಗೂ ಕನ್ನಡದಲ್ಲಿ ಈ ರೀತಿ ಸಾಧನೆ ಆಗಿದೆ ಎನ್ನುವುದು ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು.


‘ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೊಜೆಕ್ಟ್ ಮಾಡುತ್ತಿಲ್ಲ. ‘‌ಕಾಂತಾರ ‘ ತನ್ನ ಅಸ್ಮಿತೆಯಿಂದ ದೇಶವಿದೇಶಗಳಲ್ಲಿ ಯಶಸ್ಸು ಗಳಿಸಿತು. ಆದರೆ ‘ಕೆಜಿಎಫ್’ ಹಾಗಲ್ಲ, ಅದರ ಗೆಲುವಿಗೆ ಬೇರೆಯದೇ ಆದ ಕಾರಣ ಇದೆ. ಕನ್ನಡದಲ್ಲಿ ಬೇರೆಯೇ ರೀತಿಯ ಚಿತ್ರಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿದೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೋ’, ‘ಶಿವಮ್ಮ’ ಮುಂತಾದ ಚಿತ್ರಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅವುಗಳು ಜನರಿಗೆ ತಲುಪುತ್ತಿಲ್ಲ ಅಷ್ಟೇ’ ಎಂದು ಅವರು ಹೇಳಿದರು.


ದಾಖಲು ಅಗತ್ಯ
ದಲಿತ, ಬಂಡಾಯ ಸಾಹಿತ್ಯ ಕನ್ನಡ ಚಿತ್ರರಂಗದಲ್ಲಿ ಚಿತ್ರ ಗೀತೆಯಲ್ಲಿ ಬಂದಿದೆ. ಆದರೆ ಸಿನಿಮಾದಲ್ಲಿ ಬಂದಿಲ್ಲ. ‌ಅದನ್ನು ದಾಖಲು ಮಾಡುವ ಅಗತ್ಯವಿದೆ ಎಂದ ಅವರು, ‘ಕೃತಿಯನ್ನು ಸಮಾಜದ ಬೆಳವಣಿಗೆ, ಕಾಲ ಮತ್ತು ಕಾಲಾತೀತವಾಗಿ ನೋಡಬೇಕಾಗಿದೆ. ಪುಟ್ಟಣ್ಣ ಅವರು ಸಾಂಸ್ಕೃತಿಕ, ಧಾರ್ಮಿಕ ನಿಲುವು ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಸಿನಿಮಾ ಶೂನ್ಯದಲ್ಲಿ ಸೃಷ್ಠಿ ಆಗುವುದಿಲ್ಲ’ ಎಂದು ಹೇಳಿದರು.


‘ನಾನು ಚಿತ್ರರಂಗ ಪ್ರವೇಶಿಸಿದ್ದು 1975ರಲ್ಲಿ. ಆಗ ಚಲನಚಿತ್ರ ಪತ್ರಕರ್ತಕರು ಬೆನ್ನೆಲುಬಾಗಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ಕೃತಿಕಾರ ಇಲ್ಲದಿದ್ದರೆ ವಿಮರ್ಶಕನ ಅಗತ್ಯವಿಲ್ಲ. ವಿಮರ್ಶಕ ಆಮ್ಲಜನಕದ ರೀತಿ ಕೆಲಸ ಮಾಡುತ್ತಾರೆ. ಸಿನಿಮಾ ವಿಮರ್ಶೆ ಮಾಡದಿದ್ದರೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಹಿಂದೆ ಪತ್ರಕರ್ತರ ಪರಿಷತ್ ಪ್ರತಿ ವಾರ ನಡೆಸುತ್ತಿದ್ದ ವಿಮರ್ಶೆಗಳ ವಿಮರ್ಶೆ ಸಂವಾದ ಕಾರ್ಯಕ್ರಮ ನಿರ್ದೇಶಕರನ್ನು ಉತ್ತೇಜಿಸುತ್ತಿದ್ದುದನ್ನು ಹೇಳಿದರು.
‘ವಿಮರ್ಶಕರಿಂದ ಮಾಧ್ಯಮ, ಉದ್ಯಮ ಬೆಳೆಯಲಿದೆ. ಇಲ್ಲದಿದ್ದರೆ ಸ್ಥಗಿತವಾಗಲಿದೆ. ಚಲನಚಿತ್ರ ಪತ್ರಕರ್ತರ ಸಂಘ ಮತ್ತೊಮ್ಮೆ ಉದ್ಘಾಟನೆಯಾಗಿರುವುದು ಖುಷಿಕೊಟ್ಟಿದೆ’ ಎಂದರು.


ಹಿರಿಯ ಪರ್ತಕರ್ತೆ ಡಾ. ವಿಜಯಾ ಮಾತನಾಡಿ, ‘ಹಿಂದಿನ ಸಂಘಟನೆಗಳು, ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು, ಚಿತ್ರರಂಗದ ಬೆಳವಣಿಗೆಯನ್ನಷ್ಟೇ ಬಯಸಿದವು, ಇಲ್ಲಿ ಹಾಗಾಗದಂತೆ ಗಮನಹರಿಸಿದ್ದೀರಿ’ ಎಂದು ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಕರ್ತರ ಕೊಡುಗೆ ಮತ್ತು ವಿವಿಧ ವಿಷಯಗ‌ಳ‌ ಮೇಲೆ ಬೆಳಕು ಚೆಲ್ಲಿದರು.
ಸಂಘದ ಅಧ್ಯಕ್ಷ ಬಾ.ನಾ. ಸುಬ್ರಹ್ಮಣ್ಯ ಸಂಘದ ಕಾರ್ಯ ಚಟುವಟಿಕೆ ಉದ್ದೇಶಗಳ ಕುರಿತು ವಿವರಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಖಿಲ ಭಾರತ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಮಾಧ್ಯಮ ತಜ್ಞ ಜಿ.ಎನ್. ಮೋಹನ್, ಹಿರಿಯ ಚಲನಚಿತ್ರ ಪತ್ರಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಸ್ಥಾಪಕ ಆಡಳಿತ ಮಂಡಳಿ

ಬಿ.ಎನ್. ಸುಬ್ರಹ್ಮಣ್ಯ – ಅಧ್ಯಕ್ಷರು
ಸುನಯನಾ ಸುರೇಶ್ – ಉಪಾಧ್ಯಕ್ಷರು
ನಾಡಿಗೇರ್ ಚೇತನ್ – ಕಾರ್ಯಾಧ್ಯಕ್ಷರು
ಅರುಣ್ ಕುಮಾರ್. ಜಿ – ಪ್ರಧಾನ ಕಾರ್ಯದರ್ಶಿ
ಜಗದೀಶ್ ಕುಮಾರ್ ಎಸ್ – ಕಾರ್ಯದರ್ಶಿ
ಹರೀಶ್ ಸೀನಪ್ಪ – ಸಹ ಕಾರ್ಯದರ್ಶಿ
ಕೆ.ಎಸ್.ವಾಸು – ಖಜಾಂಚಿ

ಕಾರ್ಯಕಾರಿ ಸಮಿತಿಯ ಸದಸ್ಯರು

ಮನೋಹರ್‌ ಆರ್
ಮಂಜುನಾಥ್ ಎನ್
ದೇಶಾದ್ರಿ ಹೆಚ್
ಲಕ್ಷ್ಮೀನಾರಾಯಣ
ಸಿ.ಜಿ. ರಮೇಶ್
ವಿಜಯ್ ಆರ್
ಅವಿನಾಶ್ ಜಿ.ಆರ್
ಹರ್ಷವರ್ಧನ್ ಎಸ್‌.ಆರ್‌
ಮಾಲತೇಶ ಹೆಚ್. ಜಗ್ಗೇನ್
ಶಶಿಧರ ಚಿತ್ರದುರ್ಗ

Categories
ಸಿನಿ ಸುದ್ದಿ

ಸಂಕ್ರಾಂತಿಗೊಂದು ರೈತ ಗೀತೆ: ಸುಗ್ಗಿಗೆ ಪ್ರಜಾರಾಜ್ಯ ಹಾಡು…

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಯ್ತು. ಜನರು ಸಂಪೂರ್ಣವಾಗಿ ಸ್ವಾತಂತ್ರ್ಯರಾಗಿದ್ದಾರಾ? ಎಂಬ ಪ್ರಶ್ನೆ ಹುಟ್ಟು ಹಾಕುವಂತಹ ಸಿನಿಮಾವೊಂದುಸಿದ್ಧವಾಗಿದೆ. ಅದು ‘ಪ್ರಜಾರಾಜ್ಯ’ ಸಿನಿಮಾ. ಈಗಾಗಲೇ ಚಿತ್ರದ ‘ಜೈ ಎಲೆಕ್ಷನ್ …’ ಎಂಬ ಗೀತೆ ಬಿಡುಗಡೆಯಾಗಿ ಸೌಂಡ್ ಮಾಡಿದೆ. ಈ ಗೀತೆಯನ್ನು ಯೋಗರಾಜ್ ಭಟ್ ಬರೆದಿದ್ದು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇದೀಗ ಚಿತ್ರದ ಇನ್ನೊಂದು ಸುಂದರ ಹಾಡು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ.

‘ಜಗದಲ್ಲಿ ರೈತನೆಂಬ ಬ್ರಹ್ಮ …’ ಗೀತೆಯನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಇತ್ತೀಚೆಗೆ ಈ ಗೀತೆ ಬಿಡುಗಡೆ ಮಾಡಿ ಮಾತನಾಡಿದ ನಟ ನಿರ್ದೇಶಕ ಟಿ.ಎಸ್ ನಾಗಾಭರಣ, ‘ರೈತ ಗೀತೆಗಳು ನಮಗೆಲ್ಲ ಹೊಸದಲ್ಲ. ಕುವೆಂಪು ಮಾದರಿ ಕಲ್ಪಿಸಿ ಕೊಟ್ಟಿದ್ದಾರೆ. ಈ ಚಿತ್ರದ ರೈತ ಗೀತೆಯಲ್ಲಿ ಹೊಸದನ್ನು ಹುಟ್ಟು ಹಾಕುವ ಪ್ರಯತ್ನವನ್ನು ನಾಗೇಂದ್ರ ಪ್ರಸಾದ್ ಚನ್ನಾಗಿ ಮಾಡಿದ್ದಾರೆ. ನಮ್ಮ ಮೂಲ ಸಂಸ್ಕೃತಿ ಜೊತೆ ಕೃಷಿ ಹೆಣೆಯಬೇಕು ಎನ್ನುವಾಗ ಗ್ಲೋಬಲ್ ಮಾರ್ಕೆಟ್ ಬಂದು ಅದನ್ನು ಬೆಳೆಯಲು ಬಿಡುತ್ತಿಲ್ಲ. ಈ ಮಾರ್ಕೆಟ್ ನಮ್ಮ ಸಂಸ್ಕೃತಿನ್ನು ಮರೆಸುತ್ತಿದೆ. ರೈತರು ಬೆಳೆದ ಬೆಳೆಗಳ ಬೆಲೆಗಿಂತ ಮಾರಾಟ ಮಾಡುವ ಮದ್ಯವರ್ತಿಗಳಿಗೆ ಬೇಡಿಕೆ ಇದ್ದು ಜಾಗತಿಕ ಮಾರುಕಟ್ಟೆ ಹುನ್ನಾರ ನಡೆದಿದೆ. ಕೃಷಿ ಹಾಳಾದ್ರೆ ಎನಾಗುತ್ತೆ ಎನ್ನುವುದಕ್ಕೆ ಇಂದು ಪಾಕಿಸ್ತಾನ ಒಂದು ಉತ್ತಮ ಉದಾಹರಣೆ ಎಂದಿದ್ದಾರೆ.

ಆಧುನಿಕ ಗೊಬ್ಬರ ಔಷಧಿ ಹಾಕಿ ಇಂದು ನಾವು ಮತ್ತೆ ಸಾವಯವ ಕೃಷಿಯ ಕಡೆ ಬರತಾ ಇದ್ದೇವೆ. ಟ್ರ್ಯಾಕ್ಟರ್ ಬಂದಮೇಲೆ ಎತ್ತುಗಳು ಕಡಿಮೆ ಆಗಿವೆ. ಆ ಅನುಭವನ್ನು ಜನರಿಗೆ ತಲುಪಿಸುವ ಪ್ರಯತ್ನ ಈ ತಂಡ ಮಾಡಿದೆ. ಪ್ರಜೆಗಳಿಗೆ ಮುಖ್ಯವಾಗಿ ಇರಬೇಕಾದ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಹೊಸತನವನ್ನು ಹುಡುಕುತ್ತಾ ಮುಂದೆ ಬಂದಿದೆ ಪ್ರಜಾರಾಜ್ಯ ತಂಡ. ಈ ಸಿನಿಮಾ ಪ್ರಜೆಗಳಿಗೆ ತಲುಪಬೇಕು’ ಎಂದರು.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ಡಾಕ್ಟರ್ ವರದರಾಜು ಡಿ.ಎಸ್ ‘ನಾನು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ನನ್ನ ಮೂಲ ಕೃಷಿ. ಇಂದು ದೇಶ ಕಾಪಾಡುತ್ತಿ ರೋದು ಕೃಷಿ ಹಾಗೂ ರೈತ. ಆ ರೈತರಿಗೆ ಈ ಸಾಂಗ್ ಸಮರ್ಪಣೆ. ಹಾಗಾಗಿ ನಾವು ಈ ಗೀತೆಯನ್ನು ರೈತರ ಹಬ್ಬವಾದ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.

ನಿರ್ದೇಶಕ ವಿಜಯ್ ಭಾರ್ಗವ ‘ಇದು ನನ್ನ ಮೊದಲ ಸಿನಿಮಾ. ರೈತ ಗೀತೆ ಶೂಟ್ ಮಾಡಿದ್ದು ಹೆಮ್ಮೆ ಇದೆ’ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ನಟ ಚಿಕ್ಕ ಜಾಜಿ ಮಹಾದೇವ ‘ಇದರಲ್ಲಿ ನಾನು ಸ್ಪಿಕರ್ ಪಾತ್ರ ಮಾಡಿದ್ದೇನೆ. ನಾಗಾಭರಣ ರೈತರ ಪಾತ್ರ ಮಾಡಿದ್ದು ಅವರನ್ನು ಗೀತೆಯಲ್ಲಿ ನೋಡುವುದೇ ಚಂದ’ ಎಂದು ನತಮಗೆ ಇರುವ ಕೃಷಿಯ ನಂಟನ್ನು ನೆನಪು ಮಾಡಿಕೊಂಡರು.

ವಿತರಕ ವೆಂಕಟ್ ‘ ಫೆಬ್ರವರಿ 24ರಂದು ಸಿನಿಮಾ ರಿಲೀಸ್ ಆಗಲಿದೆ. ಇದು ಸಂದೇಶ ಇರುವ ಸಿನಿಮಾ ಆದ್ದರಿಂದ 300ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ನಡೆಯುತ್ತಿದೆ’ ಎಂದು ಹೇಳಿದರು.

ಚಿತ್ರಕ್ಕೆ ವಿಜೇತ ಮಂಜಯ್ಯ ಅವರ ಸಂಗೀತ, ರಾಕೇಶ್ ತಿಲಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನವಿದೆ. ಚಿತ್ರದಲ್ಲಿ ನಿರ್ಮಾಪಕ ವರದರಾಜು ಹಾಗೂ ನಿರ್ದೇಶಕ ವಿಜಯ್ ಭಾರ್ಗವ ನಟಿಸಿದ್ದಾರೆ. ನಾಯಕಿಯಾಗಿ ದಿವ್ಯಾ ಗೌಡ ಇದ್ದಾರೆ. ಉಳಿದಂತೆ ಡೈನಾಮಿಕ್ ಸ್ಟಾರ್ ದೇವರಾಜ್, ಸುಧಾ ಬೆಳವಾಡಿ, ಟಿ.ಎಸ್. ನಾಗಾಭರಣ, ಅಚ್ಚುತ್ ಕುಮಾರ್, ತಬಲಾ ನಾಣಿ, ಸುಧಾರಾಣಿ ಇದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಯುರೋಪಿಯನ್ ಚೆಲುವೆ! ಬೆಂಗಳೂರು 69 ಸಿನಿಮಾ ಸ್ಪರ್ಶಿಸಿದ ಮಾಡೆಲ್ ಗ್ರೇಸಿಲಾ ಪಿಶ್ನರ್…

ಕನ್ನಡ ಸಿನಿಮಾರಂಗಕ್ಕೆ ವಿದೇಶಿ ಚೆಲುವೆಯರ ಆಗಮನ ಹೊಸದೇನಲ್ಲ. ಈಗಾಗಲೇ ಹಲವು ಸಿನಿಮಾಗಳಲ್ಲಿ ವಿದೇಶಿ ನಟ ನಟಿಯರ ಆಗಮನವಾಗಿದೆ. ಆ ಸಾಲಿಗೆ ಈಗ ಯುರೋಪಿಯನ್ ಮಾಡೆಲ್ ಗ್ರೇಸಿಲಾ ಪಿಶ್ನರ್ ಕೂಡ ಸೇರಿದ್ದಾರೆ

“ಬೆಂಗಳೂರು 69′ ಈ ಚಿತ್ರವನ್ನು ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
ಝಾಕಿರ್‌ಹುಸೇನ್ ಕರೀಂ ಖಾನ್, ದುಬೈ ಮೂಲದ ಕನ್ನಡಿಗ ಎನ್ಆರ್ ಐ ( NRI) ಮತ್ತು ಅವರ ಪತ್ನಿ ಗುಲ್ಜಾರ್ ಚಿತ್ರದ ನಿರ್ಮಾಪಕರು. ಬೆಂಗಳೂರು 69′, “ಟಗರು” ಖ್ಯಾತಿಯ ಅನಿತಾ ಭಟ್, 2015 ರ ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿ ಮತ್ತು ತೆಲುಗು ನಟ “ಚತ್ರಪತಿ” ಶಫಿ ನಟಿಸಿದ್ದಾರೆ, ಫೆಬ್ರವರಿ 10 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಕ್ರಾಂತಿ ಚೈತನ್ಯ ನಿರ್ದೇಶನದ ಕ್ರೈಮ್ ಥ್ರಿಲ್ಲರ್.

ಗ್ರೇಸಿಲಾ ಪಿಶ್ನರ್ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ಮಾಡಿರುವ ನಿರ್ಮಾಪಕ ಝಾಕಿರ್‌ ಹುಸೇನ್ ಕರೀಂ ಖಾನ್, ಅಸಾಧಾರಣ ಹಾಡಿನ ಚಿತ್ರೀಕರಣಕ್ಕಾಗಿ ಗ್ರೇಸಿಲಾ ಪಿಶ್ನರ್ ಹೆಸರಾಂತ ಯುರೋಪಿಯನ್ ಮಾಡೆಲ್, ಲ್ಯಾಟಿನ್ ಅಮೇರಿಕನ್ ನೃತ್ಯ ಸಂಯೋಜಕಿ ಅನುಬಿಸ್ ಮತ್ತು ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ತಂತ್ರಜ್ಞರನ್ನು ಕರೆತಂದಿದ್ದಾರೆ.

ಅಮೇರಿಕನ್ ವಸ್ತ್ರ ವಿನ್ಯಾಸಕರು ಚಿತ್ರದಲ್ಲಿ ಗ್ರೇಸಿಲಾಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರದ ವಿಶೇಷ ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ, ದುಬೈನ ಬುರ್ಜ್ ಖಲೀಫಾ ಮತ್ತು ಶಾರ್ಜಾ ಮರುಭೂಮಿಯ ಬಳಿಯ ರೆಡ್‌ಜೋನ್‌ನಂತ ಎರಿಯಾಗಳ್ಲಿ ಗ್ರೇಸಿಲಾ ಪಿಶ್ನರ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

ಗ್ರೇಸಿಲಾ ಪಿಶ್ನರ್ ಅಂತರಾಷ್ಟ್ರೀಯ ಮೆಚ್ಚುಗೆ ಪಡೆದ ಚಲನಚಿತ್ರ “ಸಿಟಿ ಆಫ್ ಗಾಡ್” ನಲ್ಲಿ ನಟಿಸಬೇಕಿತ್ತು ಆದರೆ ಅವರು ವೈಯಕ್ತಿಕ ಕಾರಣಗಳಿಗಾಗಿ ಪ್ರಸ್ತಾಪವನ್ನು ತಿರಸ್ಕರಿಸಿದರು .

ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ , ವಿಕ್ರಮ್ ಮತ್ತು ಚಂದನಾ ಸಂಗೀತ ಮತ್ತು ಸಂಕಲನವನ್ನು ಅಕ್ಷಯ್ ಪಿ ರಾವ್ ಸಂಯೋಜಿಸಿದ್ದಾರೆ , ಸಂಭಾಷಣೆಯನ್ನು ಪಿಎನ್ ವೈ ಪ್ರಸಾದ್ ಮತ್ತು ಜಯದೇವ್ ಮೋಹನ್ ಬರೆದಿದ್ದಾರೆ.

Categories
ಸಿನಿ ಸುದ್ದಿ

ಥಗ್ಸ್ ಆಫ್ ರಾಮಘಡಗೆ ಜೈ ಎಂದ ಪ್ರೇಕ್ಷಕ: ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ

ಕಳೆದ ವಾರ ಬಿಡುಗಡೆಯಾದ ಕಾರ್ತಿಕ್ ಮಾರಲಭಾವಿ ನಿರ್ದೇಶನದಲ್ಲಿ ಮೂಡಿ ಬಂದ ‘ಥಗ್ಸ್ ಆಫ್ ರಾಮಘಡ’ ಸಿನಿಮಾ ಪ್ರೇಕ್ಷಕ ಮಹಾ ಪ್ರಭುಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದು, ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರ್ತಿರುವ ಉತ್ತಮ ವಿಮರ್ಶೆ ಹಾಗೂ ಪ್ರತಿಕ್ರಿಯೆ ಕಂಡು ಚಿತ್ರತಂಡ ಕೂಡ ಖುಷಿಯಾಗಿದೆ.

ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಮೂಡಿಸಿದ್ದ ‘ಥಗ್ಸ್ ಆಫ್ ರಾಮಘಡ’ ಚಿತ್ರ ಕಾರ್ತಿಕ್ ಮಾರಲಭಾವಿ ನಿರ್ದೇಶನದ ಮೊದಲ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಜನವರಿ 6ರಂದು ಪ್ರೇಕ್ಷಕರೆದುರು ಬಂದ ಈ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದೆ. ನೈಜ ಘಟನೆಗೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಜೊತೆ ತೆರೆ ಮೇಲೆ ಬಂದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಮೊದಲ ವಾರ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಹೆಚ್ಚಿಸಿದ್ದು, ಎರಡನೇ ವಾರದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಥಗ್ಸ್ ಆಫ್ ರಾಮಘಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕನ್ನಡ ಚಿತ್ರರಂಗ ಈಗ ಶೈನ್ ! ಆದರೆ… ಸಂಕ್ರಾಂತಿಗೆ ಇಲ್ಲ ನಮ್ ಸ್ಟಾರ್ ಸಂಭ್ರಮ!!ಕನ್ನಡಕ್ಕಿಲ್ಲ ಶೋ ಸಡಗರ…

ಕನ್ನಡ ಸಿನಿಮಾ ಅಂದರೆ ಈಗ ಇಡೀ ಭಾರತವೇ ಹಾಗೊಮ್ಮೆ ತಿರುಗಿ ನೋಡುತ್ತಿದೆ. ಅಸಕ್ಕೊಂದೇ ಕಾರಣ, ಸದಭಿರುಚಿಯ ಸಿನಿಮಾಗಳು ಅವುಗಳ ಗುಣಮಟ್ಟ. ಆದರೆ, ಸೂಕ್ಷ್ಮವಾಗಿ ಒಂದು ವಿಷಯ ಗಮನಿಸಲೇಬೇಕು. ಇಲ್ಲಿ, ದೇಶದೆಲ್ಲೆಡೆ ಸದ್ದು ಮಾಡಿರುವ ಸಿನಿಮಾಗಳು ಬಂದಿವೆ. ಆದರೆ ಏನು ಪ್ರಯೋಜನ ? ಅಂದರೆ, ಸಂಕ್ರಾಂತಿಗೆ ಪರಭಾಷಿಗರದ್ದೇ ಸಮ್ ಕ್ರಾಂತಿ ಆಗುತ್ತಿದೆ. ಅವರ ಸಂಭ್ರಮ ನಮ್ಮಲಿಲ್ಲ. ವಿಷಯವಿಷ್ಟೆ, ಸಂಕ್ರಾಂತಿ ಹಬ್ಬಕ್ಕೆ ಒಂದಷ್ಟು ಪರಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ನಮ್ಮಲ್ಲಿ ಮಾತ್ರ ಹೇಳಿಕೊಳ್ಳುವಂತಹ ಸಿನಿಮಾಗಳು ಸಂಕ್ರಾಂತಿಗೆ ಬರುತ್ತಿಲ್ಲ. ಇದು ವಿಪರ್ಯಾಸ.

ಇತ್ತೀಚೆಗಿನ ಕನ್ನಡ ಸಿನಿಮಾಗಳ ಸಾಧನೆ ಬಗ್ಗೆ ಗಮನಿಸಿದರೆ ನಾವು ಯಾರಿಗೇನೂ ಕಮ್ಮಿ ಇಲ್ಲ. ಆದರೂ, ಸಂಕ್ರಾಂತಿ ಬಂತೆಂದರೆ, ಇಲ್ಲಿ ರಿಲೀಸ್ ಆಗುವ ಕನ್ನಡ‌ ಸಿನಿಮಾಗಳಿಗೆ ಥಿಯೇಟರ್ ಸಿಗೋದು ಕಷ್ಟ. ಹಿಂದಿನಿಂದಲೂ ಈ ಸಮಸ್ಯೆ ಇದೆ.

ಜನವರಿ 11(ನಾಳೆ) ಬೆಂಗಳೂರಿನ
ಚಿತ್ರ ಮಂದಿರಗಳ್ಲಿ ಇರುವ ಕನ್ನಡ ಹಾಗೂ ಅನ್ಯ ಭಾಷೆ ಚಿತ್ರಗಳ ಒಟ್ಟು ಪ್ರದರ್ಶನ ಬಗ್ಗೆ ಹೇಳುವುದಾದರೆ,
ತಮಿಳಿನ ಎರಡು ಬಿಗ್ ಬಜೆಟ್ ಸಿನಿಮಾಗಳಿವೆ. ಒಂದು ವಾರಿಸು, ಇನ್ನೊಂದು ತುನಿವು. ಈ ಪೈಕಿ ವಾರಿಸು 760 ಪ್ರದರ್ಶನಗಳನ್ನು ಕಾಣುತ್ತಿದೆ. ತುನಿವು 525 ಶೋ ಕಾಣುತ್ತಿದೆ.

ಆದರೆ, ಕನ್ನಡ ಸಿನಿಮಾಗಳು ಮಾತ್ರ ಪ್ರದರ್ಶನದಿಂದ ಹಿಂದೆ ಸರಿದಿವೆ. ವೇದ 36 ಶೋ ಮಾತ್ರ ಕಂಡರೆ, ಮಿಸ್ಟರ್ ಬ್ಯಾಚ್ಯಲರ್ 16 ಪ್ರದರ್ಶನ ಮಾತ್ರ. ಇನ್ನು, ಸ್ಪೂಕಿ ಕಾಲೇಜ್ 12 ಪ್ರದರ್ಶನ, ಪದವಿ ಪೂರ್ವ 1, ಕಾಂತಾರ 1, ಕಾಕ್ಟೈಲ್’ 4, ಥಗ್ಸ್ ಅಫ್ ರಾಮಘಡ 2, ಮಿಸ್ ನಂದಿನಿ 1, ಮರೆಯದೆ ಕ್ಷಮಿಸು 2, ನಾನು ಅದು ಮತ್ತು ಸರೋಜ 1, ಮೇಡ್ ಇನ್ ಬೆಂಗಳೂರು 1 ಪ್ರದರ್ಶನವಿದೆ.

ಇನ್ನು ಇತ್ತೀಚೆಗೆ ರಿಲೀಸ್ ಆದ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಐದೇ ದಿನದಲ್ಲಿ ಇಲ್ಲವಾಯಿತು. ಕನಿಷ್ಟ ಪಕ್ಷ ಒಂದೊಳ್ಳೆಯ ಪ್ರಯೋಗಾತ್ಮಕ ಸಿನಿಮಾಗೆ ಪ್ರದರ್ಶಿಸುವ ಅವಕಾಶ ಕೊಡಬಹುದಿತ್ತು. ಅದು ಮಲ್ಟಿಪ್ಲೆಕ್ಸ್ ನಲ್ಲೇ ಉಳಿಯಲು ಬಿಡಲಿಲ್ಲ.

ಅದೇನೆ ಇರಲಿ, . ಕನ್ನಡ ಚಿತ್ರರಂಗ ಈಗ ಸುಸ್ಥಿತಿಯಲ್ಲಿದೆ. ನೂರಾರು, ಸಾವಿರಾರು ಕೋಟಿ ವಹಿವಾಟಾಗಿರುವ ಸಿನಿಮಾಗಳು ಇಲ್ಲಿನ ಹೆಮ್ಮೆ. ಅಷ್ಟೇ ಯಾಕೆ, ಆಸ್ಕರ್ ಪ್ರಶಸ್ತಿ ನಾಮಾಂಕಿತರ ಪಟ್ಟಿಯಲ್ಲಿ ಸೇರ್ಪೇಡೆಯಾಗುತ್ತಿವೆ ಎಂಬುದೂ ಕೂಡ ದೊಡ್ಡ ವಿಷಯ.


ಇಲ್ಲಿ ಕನಸಿನ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲ, ಅಂತಹ ಚಿತ್ರಗಳಿಗೆ ಅದ್ಭುತ ಪ್ರಚಾರವೂ ಅಷ್ಟೇ ಮುಖ್ಯ. ಸಂಕ್ರಾಂತಿಗೆ ಇಲ್ಲಿನ ಒಬ್ಬ ದೊಡ್ಡ ಸ್ಟಾರ್ ಚಿತ್ರ ಬಿಡುಗಡೆ ಆಗಿದ್ದರೆ ಬೇರೆ ಭಾಷೆಯ ಸಿನಿಮಾಗಳಿಗೆ ಸಿಕ್ಕಷ್ಟೇ ಶೋ ಸಿಗುತ್ತಿತ್ತು. ಇದು ಹಬ್ಬದ ಸಂಭ್ರಮ. ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು ನಮ್ಮವರದೇ ಮಿಸ್ಟೇಕ್. ಹೀಗಾಗಿ ಇಲ್ಲಿನ ವಿತರಕರಾಗಲಿ, ಪ್ರದರ್ಶಕರಾಗಲಿ ಏನು ಮಾಡುತ್ತಾರೆ?

ಅಂತಿಮವಾಗಿ ಇಲ್ಲಿ ಸಿನಿಮಾ ಅನ್ನೋದು ಒಂದು ವ್ಯಾಪಾರ ಅಷ್ಟೇ‌. ಬೇಡಿಕೆ ಎಲ್ಲಿರುತ್ತೋ ಅಲ್ಲಿ ವ್ಯಾಪಾರ ಸಹಜ.

ಹೊಸ ಕ್ರಾಂತಿಗೆ ಸಂಕ್ರಾಂತಿ ಸಾಕಿತ್ತು. ಸರಿಯಾಗಿ ಈ ಸಂಕ್ರಾಂತಿಯನ್ನ ಕ್ರಾಂತಿ ಆವರಿಸಿಕೊಂಡಿದ್ದರೆ, ನಿಜಕ್ಕೂ ಕನ್ನಡದ. ಅಷ್ಟೂ ಥಿಯೇಟರ್ ಗಳಲ್ಲಿ ಹೊಸ ‘ಕ್ರಾಂತಿ’ಯ ದರ್ಶನವಾಗುತ್ತಿತ್ತು.

error: Content is protected !!