ಕನ್ನಡ ಸಿನಿಮಾ ಅಂದರೆ ಈಗ ಇಡೀ ಭಾರತವೇ ಹಾಗೊಮ್ಮೆ ತಿರುಗಿ ನೋಡುತ್ತಿದೆ. ಅಸಕ್ಕೊಂದೇ ಕಾರಣ, ಸದಭಿರುಚಿಯ ಸಿನಿಮಾಗಳು ಅವುಗಳ ಗುಣಮಟ್ಟ. ಆದರೆ, ಸೂಕ್ಷ್ಮವಾಗಿ ಒಂದು ವಿಷಯ ಗಮನಿಸಲೇಬೇಕು. ಇಲ್ಲಿ, ದೇಶದೆಲ್ಲೆಡೆ ಸದ್ದು ಮಾಡಿರುವ ಸಿನಿಮಾಗಳು ಬಂದಿವೆ. ಆದರೆ ಏನು ಪ್ರಯೋಜನ ? ಅಂದರೆ, ಸಂಕ್ರಾಂತಿಗೆ ಪರಭಾಷಿಗರದ್ದೇ ಸಮ್ ಕ್ರಾಂತಿ ಆಗುತ್ತಿದೆ. ಅವರ ಸಂಭ್ರಮ ನಮ್ಮಲಿಲ್ಲ. ವಿಷಯವಿಷ್ಟೆ, ಸಂಕ್ರಾಂತಿ ಹಬ್ಬಕ್ಕೆ ಒಂದಷ್ಟು ಪರಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ನಮ್ಮಲ್ಲಿ ಮಾತ್ರ ಹೇಳಿಕೊಳ್ಳುವಂತಹ ಸಿನಿಮಾಗಳು ಸಂಕ್ರಾಂತಿಗೆ ಬರುತ್ತಿಲ್ಲ. ಇದು ವಿಪರ್ಯಾಸ.
ಇತ್ತೀಚೆಗಿನ ಕನ್ನಡ ಸಿನಿಮಾಗಳ ಸಾಧನೆ ಬಗ್ಗೆ ಗಮನಿಸಿದರೆ ನಾವು ಯಾರಿಗೇನೂ ಕಮ್ಮಿ ಇಲ್ಲ. ಆದರೂ, ಸಂಕ್ರಾಂತಿ ಬಂತೆಂದರೆ, ಇಲ್ಲಿ ರಿಲೀಸ್ ಆಗುವ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗೋದು ಕಷ್ಟ. ಹಿಂದಿನಿಂದಲೂ ಈ ಸಮಸ್ಯೆ ಇದೆ.
ಜನವರಿ 11(ನಾಳೆ) ಬೆಂಗಳೂರಿನ
ಚಿತ್ರ ಮಂದಿರಗಳ್ಲಿ ಇರುವ ಕನ್ನಡ ಹಾಗೂ ಅನ್ಯ ಭಾಷೆ ಚಿತ್ರಗಳ ಒಟ್ಟು ಪ್ರದರ್ಶನ ಬಗ್ಗೆ ಹೇಳುವುದಾದರೆ,
ತಮಿಳಿನ ಎರಡು ಬಿಗ್ ಬಜೆಟ್ ಸಿನಿಮಾಗಳಿವೆ. ಒಂದು ವಾರಿಸು, ಇನ್ನೊಂದು ತುನಿವು. ಈ ಪೈಕಿ ವಾರಿಸು 760 ಪ್ರದರ್ಶನಗಳನ್ನು ಕಾಣುತ್ತಿದೆ. ತುನಿವು 525 ಶೋ ಕಾಣುತ್ತಿದೆ.
ಆದರೆ, ಕನ್ನಡ ಸಿನಿಮಾಗಳು ಮಾತ್ರ ಪ್ರದರ್ಶನದಿಂದ ಹಿಂದೆ ಸರಿದಿವೆ. ವೇದ 36 ಶೋ ಮಾತ್ರ ಕಂಡರೆ, ಮಿಸ್ಟರ್ ಬ್ಯಾಚ್ಯಲರ್ 16 ಪ್ರದರ್ಶನ ಮಾತ್ರ. ಇನ್ನು, ಸ್ಪೂಕಿ ಕಾಲೇಜ್ 12 ಪ್ರದರ್ಶನ, ಪದವಿ ಪೂರ್ವ 1, ಕಾಂತಾರ 1, ಕಾಕ್ಟೈಲ್’ 4, ಥಗ್ಸ್ ಅಫ್ ರಾಮಘಡ 2, ಮಿಸ್ ನಂದಿನಿ 1, ಮರೆಯದೆ ಕ್ಷಮಿಸು 2, ನಾನು ಅದು ಮತ್ತು ಸರೋಜ 1, ಮೇಡ್ ಇನ್ ಬೆಂಗಳೂರು 1 ಪ್ರದರ್ಶನವಿದೆ.
ಇನ್ನು ಇತ್ತೀಚೆಗೆ ರಿಲೀಸ್ ಆದ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಐದೇ ದಿನದಲ್ಲಿ ಇಲ್ಲವಾಯಿತು. ಕನಿಷ್ಟ ಪಕ್ಷ ಒಂದೊಳ್ಳೆಯ ಪ್ರಯೋಗಾತ್ಮಕ ಸಿನಿಮಾಗೆ ಪ್ರದರ್ಶಿಸುವ ಅವಕಾಶ ಕೊಡಬಹುದಿತ್ತು. ಅದು ಮಲ್ಟಿಪ್ಲೆಕ್ಸ್ ನಲ್ಲೇ ಉಳಿಯಲು ಬಿಡಲಿಲ್ಲ.
ಅದೇನೆ ಇರಲಿ, . ಕನ್ನಡ ಚಿತ್ರರಂಗ ಈಗ ಸುಸ್ಥಿತಿಯಲ್ಲಿದೆ. ನೂರಾರು, ಸಾವಿರಾರು ಕೋಟಿ ವಹಿವಾಟಾಗಿರುವ ಸಿನಿಮಾಗಳು ಇಲ್ಲಿನ ಹೆಮ್ಮೆ. ಅಷ್ಟೇ ಯಾಕೆ, ಆಸ್ಕರ್ ಪ್ರಶಸ್ತಿ ನಾಮಾಂಕಿತರ ಪಟ್ಟಿಯಲ್ಲಿ ಸೇರ್ಪೇಡೆಯಾಗುತ್ತಿವೆ ಎಂಬುದೂ ಕೂಡ ದೊಡ್ಡ ವಿಷಯ.
ಇಲ್ಲಿ ಕನಸಿನ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲ, ಅಂತಹ ಚಿತ್ರಗಳಿಗೆ ಅದ್ಭುತ ಪ್ರಚಾರವೂ ಅಷ್ಟೇ ಮುಖ್ಯ. ಸಂಕ್ರಾಂತಿಗೆ ಇಲ್ಲಿನ ಒಬ್ಬ ದೊಡ್ಡ ಸ್ಟಾರ್ ಚಿತ್ರ ಬಿಡುಗಡೆ ಆಗಿದ್ದರೆ ಬೇರೆ ಭಾಷೆಯ ಸಿನಿಮಾಗಳಿಗೆ ಸಿಕ್ಕಷ್ಟೇ ಶೋ ಸಿಗುತ್ತಿತ್ತು. ಇದು ಹಬ್ಬದ ಸಂಭ್ರಮ. ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು ನಮ್ಮವರದೇ ಮಿಸ್ಟೇಕ್. ಹೀಗಾಗಿ ಇಲ್ಲಿನ ವಿತರಕರಾಗಲಿ, ಪ್ರದರ್ಶಕರಾಗಲಿ ಏನು ಮಾಡುತ್ತಾರೆ?
ಅಂತಿಮವಾಗಿ ಇಲ್ಲಿ ಸಿನಿಮಾ ಅನ್ನೋದು ಒಂದು ವ್ಯಾಪಾರ ಅಷ್ಟೇ. ಬೇಡಿಕೆ ಎಲ್ಲಿರುತ್ತೋ ಅಲ್ಲಿ ವ್ಯಾಪಾರ ಸಹಜ.
ಹೊಸ ಕ್ರಾಂತಿಗೆ ಸಂಕ್ರಾಂತಿ ಸಾಕಿತ್ತು. ಸರಿಯಾಗಿ ಈ ಸಂಕ್ರಾಂತಿಯನ್ನ ಕ್ರಾಂತಿ ಆವರಿಸಿಕೊಂಡಿದ್ದರೆ, ನಿಜಕ್ಕೂ ಕನ್ನಡದ. ಅಷ್ಟೂ ಥಿಯೇಟರ್ ಗಳಲ್ಲಿ ಹೊಸ ‘ಕ್ರಾಂತಿ’ಯ ದರ್ಶನವಾಗುತ್ತಿತ್ತು.