ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಬಿಗ್ ಪ್ಯಾನ್ ಇಂಡಿಯಾ ಸಿನಿಮಾ ಬರುತ್ತಿದೆ. ವಿಕ್ರಮ್ ಚಿತ್ರದ ನಂತರ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸ್ಟಾರ್ ನಟರು ಜತೆಗೂಡುತ್ತಿದ್ದಾರೆ. ಈ ಬಾರಿ ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಈ ದೊಡ್ಡ ಚಿತ್ರಕ್ಕೆ ಜತೆಯಾಗುತ್ತಿದ್ದಾರೆ ಅನ್ನೋದು ಈ ಹೊತ್ತಿನ ಸುದ್ದಿ.
ಹೌದು, ಲೋಕೇಶ್ ಕನಕರಾಜ್ ನಿರ್ದೇಶನದ, ಕಮಲಹಾಸನ್, ಇಳಯ ದಳಪತಿ ವಿಜಯ್ ಕಾಂಬಿನೇಶನ್, ಲಲಿತ್ ನಿರ್ಮಾಣದ ತಮಿಳಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ ಮಾಡುತ್ತಿರುವ ಸುದ್ದಿ ಈಗಷ್ಟೆ ಹೊರ ಬಂದಿದೆ. ಇದು ವಿಜಯ್ ಅವರ 67ನೇ ಚಿತ್ರದ ಸಮಾಚಾರ ಎಂಬುದು ವಿಶೇಷ.
ಅಂದಹಾಗೆ ಇದೇ ಚಿತ್ರದಲ್ಲಿ ಕೆಜಿಎಫ್ ಅಧೀರ ಸಂಜಯ್ ದತ್ ಹಾಗೂ ತ್ರಿಶಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಕಾತಿ೯ ಕೂಡ ಈ ಚಿತ್ರಕ್ಕೆ ಜತೆಗೂಡುವ ಸಾಧ್ಯತೆಗಳು ಇವೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಕನ್ನಡ ಚಿತ್ರರಂಗಕ್ಕೆ ಸಿನಿಮಾ ಪತ್ರಕರ್ತರ ಕೊಡುಗೆ ಅಪಾರ. ಹಲವು ದಶಕಗಳಿಂದಲೂ ಸಿನಿಮಾ ಮತ್ತು ಸಿನಿಮಾ ಪತ್ರಕರ್ತರ ಮಧ್ಯೆ ಬಾಂಧವ್ಯವಿದೆ. ಸಿನಿಮಾ ಪತ್ರಕರ್ತರಿಗಾಗಿ ಒಂದು ಸಂಘ ಇರಲಿಲ್ಲ. ಹಲವಾರು ವರ್ಷಗಳಿಂದಲೂ ಸಂಘ ಕಟ್ಟುವ ಕೆಲಸ ನಡೆಯುತ್ತಲೇ ಇತ್ತಾದರೂ, ಅದು ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಚಲನಚಿತ್ರ ಪತ್ರಕರ್ತರ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ
ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘಕ್ಕೆ ಚಾಲನೆ ನೀಡುವುದರ ಜೊತೆಗೆ, ಲಾಂಛನ ಬಿಡುಗಡೆ ಮಾಡಿ ಅವರು ಮಾತಾಡಿದರು.
”ಸಂಸ್ಕಾರ’ , ‘ಸ್ಕೂಲ್ ಮಾಸ್ಟರ್ ‘ ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಸಿನಿಮಾಗಳನ್ನು ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ಕನ್ನಡ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ, ಅದನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದರು.
‘ಕನ್ನಡದ ಅಸ್ಮಿತೆ, ಕಲಾತ್ಮಕ ಹೆಗ್ಗಳಿಕೆ ತೋರಿಸಬೇಕು, ಆ ಕೆಲಸ ಆಗಬೇಕು. ಬೆಂಗಳೂರು ಅಲ್ಲದೆ ರಾಜ್ಯದ ಆಚೆಗೂ ಕನ್ನಡದಲ್ಲಿ ಈ ರೀತಿ ಸಾಧನೆ ಆಗಿದೆ ಎನ್ನುವುದು ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು.
‘ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೊಜೆಕ್ಟ್ ಮಾಡುತ್ತಿಲ್ಲ. ‘ಕಾಂತಾರ ‘ ತನ್ನ ಅಸ್ಮಿತೆಯಿಂದ ದೇಶವಿದೇಶಗಳಲ್ಲಿ ಯಶಸ್ಸು ಗಳಿಸಿತು. ಆದರೆ ‘ಕೆಜಿಎಫ್’ ಹಾಗಲ್ಲ, ಅದರ ಗೆಲುವಿಗೆ ಬೇರೆಯದೇ ಆದ ಕಾರಣ ಇದೆ. ಕನ್ನಡದಲ್ಲಿ ಬೇರೆಯೇ ರೀತಿಯ ಚಿತ್ರಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿದೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೋ’, ‘ಶಿವಮ್ಮ’ ಮುಂತಾದ ಚಿತ್ರಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅವುಗಳು ಜನರಿಗೆ ತಲುಪುತ್ತಿಲ್ಲ ಅಷ್ಟೇ’ ಎಂದು ಅವರು ಹೇಳಿದರು.
ದಾಖಲು ಅಗತ್ಯ ದಲಿತ, ಬಂಡಾಯ ಸಾಹಿತ್ಯ ಕನ್ನಡ ಚಿತ್ರರಂಗದಲ್ಲಿ ಚಿತ್ರ ಗೀತೆಯಲ್ಲಿ ಬಂದಿದೆ. ಆದರೆ ಸಿನಿಮಾದಲ್ಲಿ ಬಂದಿಲ್ಲ. ಅದನ್ನು ದಾಖಲು ಮಾಡುವ ಅಗತ್ಯವಿದೆ ಎಂದ ಅವರು, ‘ಕೃತಿಯನ್ನು ಸಮಾಜದ ಬೆಳವಣಿಗೆ, ಕಾಲ ಮತ್ತು ಕಾಲಾತೀತವಾಗಿ ನೋಡಬೇಕಾಗಿದೆ. ಪುಟ್ಟಣ್ಣ ಅವರು ಸಾಂಸ್ಕೃತಿಕ, ಧಾರ್ಮಿಕ ನಿಲುವು ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಸಿನಿಮಾ ಶೂನ್ಯದಲ್ಲಿ ಸೃಷ್ಠಿ ಆಗುವುದಿಲ್ಲ’ ಎಂದು ಹೇಳಿದರು.
‘ನಾನು ಚಿತ್ರರಂಗ ಪ್ರವೇಶಿಸಿದ್ದು 1975ರಲ್ಲಿ. ಆಗ ಚಲನಚಿತ್ರ ಪತ್ರಕರ್ತಕರು ಬೆನ್ನೆಲುಬಾಗಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ಕೃತಿಕಾರ ಇಲ್ಲದಿದ್ದರೆ ವಿಮರ್ಶಕನ ಅಗತ್ಯವಿಲ್ಲ. ವಿಮರ್ಶಕ ಆಮ್ಲಜನಕದ ರೀತಿ ಕೆಲಸ ಮಾಡುತ್ತಾರೆ. ಸಿನಿಮಾ ವಿಮರ್ಶೆ ಮಾಡದಿದ್ದರೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಹಿಂದೆ ಪತ್ರಕರ್ತರ ಪರಿಷತ್ ಪ್ರತಿ ವಾರ ನಡೆಸುತ್ತಿದ್ದ ವಿಮರ್ಶೆಗಳ ವಿಮರ್ಶೆ ಸಂವಾದ ಕಾರ್ಯಕ್ರಮ ನಿರ್ದೇಶಕರನ್ನು ಉತ್ತೇಜಿಸುತ್ತಿದ್ದುದನ್ನು ಹೇಳಿದರು. ‘ವಿಮರ್ಶಕರಿಂದ ಮಾಧ್ಯಮ, ಉದ್ಯಮ ಬೆಳೆಯಲಿದೆ. ಇಲ್ಲದಿದ್ದರೆ ಸ್ಥಗಿತವಾಗಲಿದೆ. ಚಲನಚಿತ್ರ ಪತ್ರಕರ್ತರ ಸಂಘ ಮತ್ತೊಮ್ಮೆ ಉದ್ಘಾಟನೆಯಾಗಿರುವುದು ಖುಷಿಕೊಟ್ಟಿದೆ’ ಎಂದರು.
ಹಿರಿಯ ಪರ್ತಕರ್ತೆ ಡಾ. ವಿಜಯಾ ಮಾತನಾಡಿ, ‘ಹಿಂದಿನ ಸಂಘಟನೆಗಳು, ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು, ಚಿತ್ರರಂಗದ ಬೆಳವಣಿಗೆಯನ್ನಷ್ಟೇ ಬಯಸಿದವು, ಇಲ್ಲಿ ಹಾಗಾಗದಂತೆ ಗಮನಹರಿಸಿದ್ದೀರಿ’ ಎಂದು ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಕರ್ತರ ಕೊಡುಗೆ ಮತ್ತು ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಸಂಘದ ಅಧ್ಯಕ್ಷ ಬಾ.ನಾ. ಸುಬ್ರಹ್ಮಣ್ಯ ಸಂಘದ ಕಾರ್ಯ ಚಟುವಟಿಕೆ ಉದ್ದೇಶಗಳ ಕುರಿತು ವಿವರಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಚಲನಚಿತ್ರ ಅಕಾಡಮಿ ಅಧ್ಯಕ್ಷ ಅಶೋಕ್ ಕಶ್ಯಪ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಖಿಲ ಭಾರತ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಮಾಧ್ಯಮ ತಜ್ಞ ಜಿ.ಎನ್. ಮೋಹನ್, ಹಿರಿಯ ಚಲನಚಿತ್ರ ಪತ್ರಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಸ್ಥಾಪಕ ಆಡಳಿತ ಮಂಡಳಿ
ಬಿ.ಎನ್. ಸುಬ್ರಹ್ಮಣ್ಯ – ಅಧ್ಯಕ್ಷರು ಸುನಯನಾ ಸುರೇಶ್ – ಉಪಾಧ್ಯಕ್ಷರು ನಾಡಿಗೇರ್ ಚೇತನ್ – ಕಾರ್ಯಾಧ್ಯಕ್ಷರು ಅರುಣ್ ಕುಮಾರ್. ಜಿ – ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಮಾರ್ ಎಸ್ – ಕಾರ್ಯದರ್ಶಿ ಹರೀಶ್ ಸೀನಪ್ಪ – ಸಹ ಕಾರ್ಯದರ್ಶಿ ಕೆ.ಎಸ್.ವಾಸು – ಖಜಾಂಚಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಮನೋಹರ್ ಆರ್ ಮಂಜುನಾಥ್ ಎನ್ ದೇಶಾದ್ರಿ ಹೆಚ್ ಲಕ್ಷ್ಮೀನಾರಾಯಣ ಸಿ.ಜಿ. ರಮೇಶ್ ವಿಜಯ್ ಆರ್ ಅವಿನಾಶ್ ಜಿ.ಆರ್ ಹರ್ಷವರ್ಧನ್ ಎಸ್.ಆರ್ ಮಾಲತೇಶ ಹೆಚ್. ಜಗ್ಗೇನ್ ಶಶಿಧರ ಚಿತ್ರದುರ್ಗ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಯ್ತು. ಜನರು ಸಂಪೂರ್ಣವಾಗಿ ಸ್ವಾತಂತ್ರ್ಯರಾಗಿದ್ದಾರಾ? ಎಂಬ ಪ್ರಶ್ನೆ ಹುಟ್ಟು ಹಾಕುವಂತಹ ಸಿನಿಮಾವೊಂದುಸಿದ್ಧವಾಗಿದೆ. ಅದು ‘ಪ್ರಜಾರಾಜ್ಯ’ ಸಿನಿಮಾ. ಈಗಾಗಲೇ ಚಿತ್ರದ ‘ಜೈ ಎಲೆಕ್ಷನ್ …’ ಎಂಬ ಗೀತೆ ಬಿಡುಗಡೆಯಾಗಿ ಸೌಂಡ್ ಮಾಡಿದೆ. ಈ ಗೀತೆಯನ್ನು ಯೋಗರಾಜ್ ಭಟ್ ಬರೆದಿದ್ದು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇದೀಗ ಚಿತ್ರದ ಇನ್ನೊಂದು ಸುಂದರ ಹಾಡು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ.
‘ಜಗದಲ್ಲಿ ರೈತನೆಂಬ ಬ್ರಹ್ಮ …’ ಗೀತೆಯನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಇತ್ತೀಚೆಗೆ ಈ ಗೀತೆ ಬಿಡುಗಡೆ ಮಾಡಿ ಮಾತನಾಡಿದ ನಟ ನಿರ್ದೇಶಕ ಟಿ.ಎಸ್ ನಾಗಾಭರಣ, ‘ರೈತ ಗೀತೆಗಳು ನಮಗೆಲ್ಲ ಹೊಸದಲ್ಲ. ಕುವೆಂಪು ಮಾದರಿ ಕಲ್ಪಿಸಿ ಕೊಟ್ಟಿದ್ದಾರೆ. ಈ ಚಿತ್ರದ ರೈತ ಗೀತೆಯಲ್ಲಿ ಹೊಸದನ್ನು ಹುಟ್ಟು ಹಾಕುವ ಪ್ರಯತ್ನವನ್ನು ನಾಗೇಂದ್ರ ಪ್ರಸಾದ್ ಚನ್ನಾಗಿ ಮಾಡಿದ್ದಾರೆ. ನಮ್ಮ ಮೂಲ ಸಂಸ್ಕೃತಿ ಜೊತೆ ಕೃಷಿ ಹೆಣೆಯಬೇಕು ಎನ್ನುವಾಗ ಗ್ಲೋಬಲ್ ಮಾರ್ಕೆಟ್ ಬಂದು ಅದನ್ನು ಬೆಳೆಯಲು ಬಿಡುತ್ತಿಲ್ಲ. ಈ ಮಾರ್ಕೆಟ್ ನಮ್ಮ ಸಂಸ್ಕೃತಿನ್ನು ಮರೆಸುತ್ತಿದೆ. ರೈತರು ಬೆಳೆದ ಬೆಳೆಗಳ ಬೆಲೆಗಿಂತ ಮಾರಾಟ ಮಾಡುವ ಮದ್ಯವರ್ತಿಗಳಿಗೆ ಬೇಡಿಕೆ ಇದ್ದು ಜಾಗತಿಕ ಮಾರುಕಟ್ಟೆ ಹುನ್ನಾರ ನಡೆದಿದೆ. ಕೃಷಿ ಹಾಳಾದ್ರೆ ಎನಾಗುತ್ತೆ ಎನ್ನುವುದಕ್ಕೆ ಇಂದು ಪಾಕಿಸ್ತಾನ ಒಂದು ಉತ್ತಮ ಉದಾಹರಣೆ ಎಂದಿದ್ದಾರೆ.
ಆಧುನಿಕ ಗೊಬ್ಬರ ಔಷಧಿ ಹಾಕಿ ಇಂದು ನಾವು ಮತ್ತೆ ಸಾವಯವ ಕೃಷಿಯ ಕಡೆ ಬರತಾ ಇದ್ದೇವೆ. ಟ್ರ್ಯಾಕ್ಟರ್ ಬಂದಮೇಲೆ ಎತ್ತುಗಳು ಕಡಿಮೆ ಆಗಿವೆ. ಆ ಅನುಭವನ್ನು ಜನರಿಗೆ ತಲುಪಿಸುವ ಪ್ರಯತ್ನ ಈ ತಂಡ ಮಾಡಿದೆ. ಪ್ರಜೆಗಳಿಗೆ ಮುಖ್ಯವಾಗಿ ಇರಬೇಕಾದ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಹೊಸತನವನ್ನು ಹುಡುಕುತ್ತಾ ಮುಂದೆ ಬಂದಿದೆ ಪ್ರಜಾರಾಜ್ಯ ತಂಡ. ಈ ಸಿನಿಮಾ ಪ್ರಜೆಗಳಿಗೆ ತಲುಪಬೇಕು’ ಎಂದರು.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ಡಾಕ್ಟರ್ ವರದರಾಜು ಡಿ.ಎಸ್ ‘ನಾನು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ನನ್ನ ಮೂಲ ಕೃಷಿ. ಇಂದು ದೇಶ ಕಾಪಾಡುತ್ತಿ ರೋದು ಕೃಷಿ ಹಾಗೂ ರೈತ. ಆ ರೈತರಿಗೆ ಈ ಸಾಂಗ್ ಸಮರ್ಪಣೆ. ಹಾಗಾಗಿ ನಾವು ಈ ಗೀತೆಯನ್ನು ರೈತರ ಹಬ್ಬವಾದ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.
ನಿರ್ದೇಶಕ ವಿಜಯ್ ಭಾರ್ಗವ ‘ಇದು ನನ್ನ ಮೊದಲ ಸಿನಿಮಾ. ರೈತ ಗೀತೆ ಶೂಟ್ ಮಾಡಿದ್ದು ಹೆಮ್ಮೆ ಇದೆ’ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ನಟ ಚಿಕ್ಕ ಜಾಜಿ ಮಹಾದೇವ ‘ಇದರಲ್ಲಿ ನಾನು ಸ್ಪಿಕರ್ ಪಾತ್ರ ಮಾಡಿದ್ದೇನೆ. ನಾಗಾಭರಣ ರೈತರ ಪಾತ್ರ ಮಾಡಿದ್ದು ಅವರನ್ನು ಗೀತೆಯಲ್ಲಿ ನೋಡುವುದೇ ಚಂದ’ ಎಂದು ನತಮಗೆ ಇರುವ ಕೃಷಿಯ ನಂಟನ್ನು ನೆನಪು ಮಾಡಿಕೊಂಡರು.
ವಿತರಕ ವೆಂಕಟ್ ‘ ಫೆಬ್ರವರಿ 24ರಂದು ಸಿನಿಮಾ ರಿಲೀಸ್ ಆಗಲಿದೆ. ಇದು ಸಂದೇಶ ಇರುವ ಸಿನಿಮಾ ಆದ್ದರಿಂದ 300ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ನಡೆಯುತ್ತಿದೆ’ ಎಂದು ಹೇಳಿದರು.
ಚಿತ್ರಕ್ಕೆ ವಿಜೇತ ಮಂಜಯ್ಯ ಅವರ ಸಂಗೀತ, ರಾಕೇಶ್ ತಿಲಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನವಿದೆ. ಚಿತ್ರದಲ್ಲಿ ನಿರ್ಮಾಪಕ ವರದರಾಜು ಹಾಗೂ ನಿರ್ದೇಶಕ ವಿಜಯ್ ಭಾರ್ಗವ ನಟಿಸಿದ್ದಾರೆ. ನಾಯಕಿಯಾಗಿ ದಿವ್ಯಾ ಗೌಡ ಇದ್ದಾರೆ. ಉಳಿದಂತೆ ಡೈನಾಮಿಕ್ ಸ್ಟಾರ್ ದೇವರಾಜ್, ಸುಧಾ ಬೆಳವಾಡಿ, ಟಿ.ಎಸ್. ನಾಗಾಭರಣ, ಅಚ್ಚುತ್ ಕುಮಾರ್, ತಬಲಾ ನಾಣಿ, ಸುಧಾರಾಣಿ ಇದ್ದಾರೆ.
ಕನ್ನಡ ಸಿನಿಮಾರಂಗಕ್ಕೆ ವಿದೇಶಿ ಚೆಲುವೆಯರ ಆಗಮನ ಹೊಸದೇನಲ್ಲ. ಈಗಾಗಲೇ ಹಲವು ಸಿನಿಮಾಗಳಲ್ಲಿ ವಿದೇಶಿ ನಟ ನಟಿಯರ ಆಗಮನವಾಗಿದೆ. ಆ ಸಾಲಿಗೆ ಈಗ ಯುರೋಪಿಯನ್ ಮಾಡೆಲ್ ಗ್ರೇಸಿಲಾ ಪಿಶ್ನರ್ ಕೂಡ ಸೇರಿದ್ದಾರೆ
“ಬೆಂಗಳೂರು 69′ ಈ ಚಿತ್ರವನ್ನು ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಝಾಕಿರ್‌ಹುಸೇನ್ ಕರೀಂ ಖಾನ್, ದುಬೈ ಮೂಲದ ಕನ್ನಡಿಗ ಎನ್ಆರ್ ಐ ( NRI) ಮತ್ತು ಅವರ ಪತ್ನಿ ಗುಲ್ಜಾರ್ ಚಿತ್ರದ ನಿರ್ಮಾಪಕರು. ಬೆಂಗಳೂರು 69′, “ಟಗರು” ಖ್ಯಾತಿಯ ಅನಿತಾ ಭಟ್, 2015 ರ ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿ ಮತ್ತು ತೆಲುಗು ನಟ “ಚತ್ರಪತಿ” ಶಫಿ ನಟಿಸಿದ್ದಾರೆ, ಫೆಬ್ರವರಿ 10 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಕ್ರಾಂತಿ ಚೈತನ್ಯ ನಿರ್ದೇಶನದ ಕ್ರೈಮ್ ಥ್ರಿಲ್ಲರ್.
ಗ್ರೇಸಿಲಾ ಪಿಶ್ನರ್ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ಮಾಡಿರುವ ನಿರ್ಮಾಪಕ ಝಾಕಿರ್ ಹುಸೇನ್ ಕರೀಂ ಖಾನ್, ಅಸಾಧಾರಣ ಹಾಡಿನ ಚಿತ್ರೀಕರಣಕ್ಕಾಗಿ ಗ್ರೇಸಿಲಾ ಪಿಶ್ನರ್ ಹೆಸರಾಂತ ಯುರೋಪಿಯನ್ ಮಾಡೆಲ್, ಲ್ಯಾಟಿನ್ ಅಮೇರಿಕನ್ ನೃತ್ಯ ಸಂಯೋಜಕಿ ಅನುಬಿಸ್ ಮತ್ತು ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ತಂತ್ರಜ್ಞರನ್ನು ಕರೆತಂದಿದ್ದಾರೆ.
ಅಮೇರಿಕನ್ ವಸ್ತ್ರ ವಿನ್ಯಾಸಕರು ಚಿತ್ರದಲ್ಲಿ ಗ್ರೇಸಿಲಾಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರದ ವಿಶೇಷ ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ, ದುಬೈನ ಬುರ್ಜ್ ಖಲೀಫಾ ಮತ್ತು ಶಾರ್ಜಾ ಮರುಭೂಮಿಯ ಬಳಿಯ ರೆಡ್‌ಜೋನ್‌ನಂತ ಎರಿಯಾಗಳ್ಲಿ ಗ್ರೇಸಿಲಾ ಪಿಶ್ನರ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.
ಗ್ರೇಸಿಲಾ ಪಿಶ್ನರ್ ಅಂತರಾಷ್ಟ್ರೀಯ ಮೆಚ್ಚುಗೆ ಪಡೆದ ಚಲನಚಿತ್ರ “ಸಿಟಿ ಆಫ್ ಗಾಡ್” ನಲ್ಲಿ ನಟಿಸಬೇಕಿತ್ತು ಆದರೆ ಅವರು ವೈಯಕ್ತಿಕ ಕಾರಣಗಳಿಗಾಗಿ ಪ್ರಸ್ತಾಪವನ್ನು ತಿರಸ್ಕರಿಸಿದರು .
ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ , ವಿಕ್ರಮ್ ಮತ್ತು ಚಂದನಾ ಸಂಗೀತ ಮತ್ತು ಸಂಕಲನವನ್ನು ಅಕ್ಷಯ್ ಪಿ ರಾವ್ ಸಂಯೋಜಿಸಿದ್ದಾರೆ , ಸಂಭಾಷಣೆಯನ್ನು ಪಿಎನ್ ವೈ ಪ್ರಸಾದ್ ಮತ್ತು ಜಯದೇವ್ ಮೋಹನ್ ಬರೆದಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಕಾರ್ತಿಕ್ ಮಾರಲಭಾವಿ ನಿರ್ದೇಶನದಲ್ಲಿ ಮೂಡಿ ಬಂದ ‘ಥಗ್ಸ್ ಆಫ್ ರಾಮಘಡ’ ಸಿನಿಮಾ ಪ್ರೇಕ್ಷಕ ಮಹಾ ಪ್ರಭುಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದು, ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರ್ತಿರುವ ಉತ್ತಮ ವಿಮರ್ಶೆ ಹಾಗೂ ಪ್ರತಿಕ್ರಿಯೆ ಕಂಡು ಚಿತ್ರತಂಡ ಕೂಡ ಖುಷಿಯಾಗಿದೆ.
ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಮೂಡಿಸಿದ್ದ ‘ಥಗ್ಸ್ ಆಫ್ ರಾಮಘಡ’ ಚಿತ್ರ ಕಾರ್ತಿಕ್ ಮಾರಲಭಾವಿ ನಿರ್ದೇಶನದ ಮೊದಲ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಜನವರಿ 6ರಂದು ಪ್ರೇಕ್ಷಕರೆದುರು ಬಂದ ಈ ಚಿತ್ರ ಉತ್ತರ ಕರ್ನಾಟಕ ಭಾಗದಲ್ಲಿ1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದೆ. ನೈಜ ಘಟನೆಗೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಜೊತೆ ತೆರೆ ಮೇಲೆ ಬಂದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಮೊದಲ ವಾರ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಹೆಚ್ಚಿಸಿದ್ದು, ಎರಡನೇ ವಾರದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಥಗ್ಸ್ ಆಫ್ ರಾಮಘಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಕನ್ನಡ ಸಿನಿಮಾ ಅಂದರೆ ಈಗ ಇಡೀ ಭಾರತವೇ ಹಾಗೊಮ್ಮೆ ತಿರುಗಿ ನೋಡುತ್ತಿದೆ. ಅಸಕ್ಕೊಂದೇ ಕಾರಣ, ಸದಭಿರುಚಿಯ ಸಿನಿಮಾಗಳು ಅವುಗಳ ಗುಣಮಟ್ಟ. ಆದರೆ, ಸೂಕ್ಷ್ಮವಾಗಿ ಒಂದು ವಿಷಯ ಗಮನಿಸಲೇಬೇಕು. ಇಲ್ಲಿ, ದೇಶದೆಲ್ಲೆಡೆ ಸದ್ದು ಮಾಡಿರುವ ಸಿನಿಮಾಗಳು ಬಂದಿವೆ. ಆದರೆ ಏನು ಪ್ರಯೋಜನ ? ಅಂದರೆ, ಸಂಕ್ರಾಂತಿಗೆ ಪರಭಾಷಿಗರದ್ದೇ ಸಮ್ ಕ್ರಾಂತಿ ಆಗುತ್ತಿದೆ. ಅವರ ಸಂಭ್ರಮ ನಮ್ಮಲಿಲ್ಲ. ವಿಷಯವಿಷ್ಟೆ, ಸಂಕ್ರಾಂತಿ ಹಬ್ಬಕ್ಕೆ ಒಂದಷ್ಟು ಪರಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ನಮ್ಮಲ್ಲಿ ಮಾತ್ರ ಹೇಳಿಕೊಳ್ಳುವಂತಹ ಸಿನಿಮಾಗಳು ಸಂಕ್ರಾಂತಿಗೆ ಬರುತ್ತಿಲ್ಲ. ಇದು ವಿಪರ್ಯಾಸ.
ಇತ್ತೀಚೆಗಿನ ಕನ್ನಡ ಸಿನಿಮಾಗಳ ಸಾಧನೆ ಬಗ್ಗೆ ಗಮನಿಸಿದರೆ ನಾವು ಯಾರಿಗೇನೂ ಕಮ್ಮಿ ಇಲ್ಲ. ಆದರೂ, ಸಂಕ್ರಾಂತಿ ಬಂತೆಂದರೆ, ಇಲ್ಲಿ ರಿಲೀಸ್ ಆಗುವ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗೋದು ಕಷ್ಟ. ಹಿಂದಿನಿಂದಲೂ ಈ ಸಮಸ್ಯೆ ಇದೆ.
ಜನವರಿ 11(ನಾಳೆ) ಬೆಂಗಳೂರಿನ ಚಿತ್ರ ಮಂದಿರಗಳ್ಲಿ ಇರುವ ಕನ್ನಡ ಹಾಗೂ ಅನ್ಯ ಭಾಷೆ ಚಿತ್ರಗಳ ಒಟ್ಟು ಪ್ರದರ್ಶನ ಬಗ್ಗೆ ಹೇಳುವುದಾದರೆ, ತಮಿಳಿನ ಎರಡು ಬಿಗ್ ಬಜೆಟ್ ಸಿನಿಮಾಗಳಿವೆ. ಒಂದು ವಾರಿಸು, ಇನ್ನೊಂದು ತುನಿವು. ಈ ಪೈಕಿ ವಾರಿಸು 760 ಪ್ರದರ್ಶನಗಳನ್ನು ಕಾಣುತ್ತಿದೆ. ತುನಿವು 525 ಶೋ ಕಾಣುತ್ತಿದೆ.
ಆದರೆ, ಕನ್ನಡ ಸಿನಿಮಾಗಳು ಮಾತ್ರ ಪ್ರದರ್ಶನದಿಂದ ಹಿಂದೆ ಸರಿದಿವೆ. ವೇದ 36 ಶೋ ಮಾತ್ರ ಕಂಡರೆ, ಮಿಸ್ಟರ್ ಬ್ಯಾಚ್ಯಲರ್ 16 ಪ್ರದರ್ಶನ ಮಾತ್ರ. ಇನ್ನು, ಸ್ಪೂಕಿ ಕಾಲೇಜ್ 12 ಪ್ರದರ್ಶನ, ಪದವಿ ಪೂರ್ವ 1, ಕಾಂತಾರ 1, ಕಾಕ್ಟೈಲ್’ 4, ಥಗ್ಸ್ ಅಫ್ ರಾಮಘಡ 2, ಮಿಸ್ ನಂದಿನಿ 1, ಮರೆಯದೆ ಕ್ಷಮಿಸು 2, ನಾನು ಅದು ಮತ್ತು ಸರೋಜ 1, ಮೇಡ್ ಇನ್ ಬೆಂಗಳೂರು 1 ಪ್ರದರ್ಶನವಿದೆ.
ಇನ್ನು ಇತ್ತೀಚೆಗೆ ರಿಲೀಸ್ ಆದ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಐದೇ ದಿನದಲ್ಲಿ ಇಲ್ಲವಾಯಿತು. ಕನಿಷ್ಟ ಪಕ್ಷ ಒಂದೊಳ್ಳೆಯ ಪ್ರಯೋಗಾತ್ಮಕ ಸಿನಿಮಾಗೆ ಪ್ರದರ್ಶಿಸುವ ಅವಕಾಶ ಕೊಡಬಹುದಿತ್ತು. ಅದು ಮಲ್ಟಿಪ್ಲೆಕ್ಸ್ ನಲ್ಲೇ ಉಳಿಯಲು ಬಿಡಲಿಲ್ಲ.
ಅದೇನೆ ಇರಲಿ, . ಕನ್ನಡ ಚಿತ್ರರಂಗ ಈಗ ಸುಸ್ಥಿತಿಯಲ್ಲಿದೆ. ನೂರಾರು, ಸಾವಿರಾರು ಕೋಟಿ ವಹಿವಾಟಾಗಿರುವ ಸಿನಿಮಾಗಳು ಇಲ್ಲಿನ ಹೆಮ್ಮೆ. ಅಷ್ಟೇ ಯಾಕೆ, ಆಸ್ಕರ್ ಪ್ರಶಸ್ತಿ ನಾಮಾಂಕಿತರ ಪಟ್ಟಿಯಲ್ಲಿ ಸೇರ್ಪೇಡೆಯಾಗುತ್ತಿವೆ ಎಂಬುದೂ ಕೂಡ ದೊಡ್ಡ ವಿಷಯ.
ಇಲ್ಲಿ ಕನಸಿನ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲ, ಅಂತಹ ಚಿತ್ರಗಳಿಗೆ ಅದ್ಭುತ ಪ್ರಚಾರವೂ ಅಷ್ಟೇ ಮುಖ್ಯ. ಸಂಕ್ರಾಂತಿಗೆ ಇಲ್ಲಿನ ಒಬ್ಬ ದೊಡ್ಡ ಸ್ಟಾರ್ ಚಿತ್ರ ಬಿಡುಗಡೆ ಆಗಿದ್ದರೆ ಬೇರೆ ಭಾಷೆಯ ಸಿನಿಮಾಗಳಿಗೆ ಸಿಕ್ಕಷ್ಟೇ ಶೋ ಸಿಗುತ್ತಿತ್ತು. ಇದು ಹಬ್ಬದ ಸಂಭ್ರಮ. ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು ನಮ್ಮವರದೇ ಮಿಸ್ಟೇಕ್. ಹೀಗಾಗಿ ಇಲ್ಲಿನ ವಿತರಕರಾಗಲಿ, ಪ್ರದರ್ಶಕರಾಗಲಿ ಏನು ಮಾಡುತ್ತಾರೆ?
ಅಂತಿಮವಾಗಿ ಇಲ್ಲಿ ಸಿನಿಮಾ ಅನ್ನೋದು ಒಂದು ವ್ಯಾಪಾರ ಅಷ್ಟೇ. ಬೇಡಿಕೆ ಎಲ್ಲಿರುತ್ತೋ ಅಲ್ಲಿ ವ್ಯಾಪಾರ ಸಹಜ.
ಹೊಸ ಕ್ರಾಂತಿಗೆ ಸಂಕ್ರಾಂತಿ ಸಾಕಿತ್ತು. ಸರಿಯಾಗಿ ಈ ಸಂಕ್ರಾಂತಿಯನ್ನ ಕ್ರಾಂತಿ ಆವರಿಸಿಕೊಂಡಿದ್ದರೆ, ನಿಜಕ್ಕೂ ಕನ್ನಡದ. ಅಷ್ಟೂ ಥಿಯೇಟರ್ ಗಳಲ್ಲಿ ಹೊಸ ‘ಕ್ರಾಂತಿ’ಯ ದರ್ಶನವಾಗುತ್ತಿತ್ತು.
ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಈಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿದ್ದಾರೆ.
‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಜರ್ನಿ ಆಗಿದೆ. ಕಳೆದ ವರ್ಷ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್, ಥ್ರಿಲ್ಲರ್ ಚಿತ್ರ. ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು ‘ವಾಕ್ರೋ ಹೌಸ್’.
ನಾನು ಇಲ್ಲಿ ಲಂಡನ್ ಬೇಸ್ ಬುಕ್ ರೈಟರ್ ಪಾತ್ರ ಮಾಡುತ್ತಿದ್ದು, ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ನಡೆದಿದೆ. ನನ್ನ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಜನ ಒಳ್ಳೆಯ ಕಲಾವಿದರಿದ್ದಾರೆ. ಇದು ನನ್ನ ಮೊದಲ ಹಿಂದಿ ಹಾರರ್ ಸಿನಿಮಾ. ಒಳ್ಳೆಯ ಕಥೆ, ಪಾತ್ರ ಇದ್ದ್ದುದರಿಂದ ಖುಷಿಯಾಗಿದ್ದೇನೆ ಎಂಬುದು ಅವರ ಮಾತು.
‘ಈ ಹಿಂದಿ ಸಿನಿಮಾ ಜೊತೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ 2 ಸಿನಿಮಾ ಮಾಡುತ್ತಿದ್ದೇನೆ. ಈ ಮಾರ್ಚ್ ಗೆ ನನ್ನ ಸಿನಿಮಾಗಳು ರಿಲೀಸ್ ಆಗಬಹುದು.
‘ನಾನೊಬ್ಬ ಭಾರತೀಯ’ ಎಂಬ ತಮಿಳು ಚಿತ್ರದಲ್ಲಿ ಕಮಾಂಡೋ ಪಾತ್ರ ಮಾಡುತ್ತಿದ್ದು, ಇದು ನನಗೆ ವಿಷೇಶವಾದ ಸಿನಿಮಾ’ ಎನ್ನುತ್ತಾರೆ ರಾಗಿಣಿ.
ಹಾಸ್ಟೆಲ್ ಹುಡುಗರೆಲ್ಲ ಸೇರಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರನ್ನು ಕಿಡ್ನಾಪ್ ಮಾಡಿದ್ದಾರೆ. ಎರಡು ವಾರವಾದರೂ ಇನ್ನೂ ಬಿಡುಗಡೆ ಮಾಡಿಲ್ಲ. ಇಷ್ಟು ದಿನ ಹಾಡು ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದ ಹುಡುಗರು, ಈಗ ಬಿಡುಗಡೆಯಾಗಿರುವ ಹಾಡು ಹತ್ತು ಮಿಲಿಯನ್ ವೀವ್ಸ್ ಪಡೆದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಹಿಂಸೆ ನೀಡುತ್ತಿದ್ದಾರೆ ಎಂದು ಅಜನೀಶ್ ಲೋಕನಾಥ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಿಡುಗಡೆಯಾಗಿರುವ ‘ಪ್ರೊಟೆಸ್ಟ್ ಸಾಂಗ್’ ಹತ್ತು ಮಿಲಿಯನ್ ವೀವ್ಸ್ ಪಡೆಯಲು ಸಹಕರಿಸಿ ಎಂದು ಕರ್ನಾಟಕ ಜನತೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಅಜನೀಶ್. ಆದರೆ ಇದೆಲ್ಲ ರಿಯಲ್ ಅಲ್ಲ ರೀಲ್. ಹೌದು, ಇದು ಬಿಡುಗಡೆಗೆ ಸಜ್ಜಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಹೊಸ ರೀತಿಯ ಪ್ರಮೋಶನ್ ತಂತ್ರ.
ಸಖತ್ ಕ್ರಿಯೇಟಿವ್ ಆಗಿ ಸಿನಿಮಾ ಪ್ರಮೋಷನ್ ಮಾಡುತ್ತ ಕಲಾರಸಿಕರುನ್ನು ತನ್ನತ್ತ ಸೆಳೆಯುತ್ತಿರುವ, ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಕಳೆದ ವಾರ ಚಿತ್ರತಂಡ ‘ಪ್ರೊಟೆಸ್ಟ್ ಸಾಂಗ್’ ಬಿಡುಗಡೆ ಮಾಡಿತ್ತು. ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಯೋಗರಾಜ್ ಭಟ್ ಕ್ಯಾಚಿ ಲಿರಿಕ್ಸ್, ಅಜನೀಶ್ ಲೋಕನಾಥ್ ಕಿಕ್ ಕೊಡೋ ಮ್ಯೂಸಿಕ್ ಹಾಗೂ ಹಾಡು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು.
ಇದೀಗ ಈ ಹಾಡು ಹತ್ತು ಮಿಲಿಯನ್ ವೀವ್ಸ್ ಕಾಣಬೇಕೆಂಬುದು ಹಾಸ್ಟೆಲ್ ಹುಡುಗರ ಮಹದಾಸೆ. ಅದಕ್ಕೆಂದೇ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರಿಂದ ಪತ್ರ ಬರೆಸಿ ಮನವಿ ಮಾಡಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.
ಯೂನಿಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.
ಈ ಹಿಂದೆ ಪಲ್ಲಕ್ಕಿ, ಅಮೃತವಾಹಿನಿ ಚಿತ್ರ ನಿರ್ದೇಶಿಸಿದ್ದ ಕೆ.ನರೇಂದ್ರಬಾಬು ಈಗ ’13’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಇಲ್ಲಿ ಹೈಲೆಟ್. ಯುವಿ ಪ್ರೊಡಕ್ಷನ್ಸ್ ಮೂಲಕ ಚಿತ್ರವನ್ನು ಸಂಪತ್ ಕುಮಾರ್, ಮಂಜುನಾಥ್, ಮಂಜುನಾಥಗೌಡ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಗುಜರಿ ಅಂಗಡಿ ಮಾಲೀಕರಾಗಿ, ಶ್ರುತಿ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆ ಚಿತ್ರಕ್ಕೆ ಸ್ಫೂರ್ತಿ.
ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ, ಚಿತ್ರದ ಮೇಕಿಂಗ್ ವೀಡಿಯೋ ತೋರಿಸಿ ಚಿತ್ರೀಕರಣದ ಅನುಭವ ಹಂಚಿಕೊಂಡಿತು. ಅಂತರ್ಜಾತಿ ಪ್ರೇಮ ಕಥೆ ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಫೂರ್ತಿ ಹೇಗೆಲ್ಲ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು.
‘ಮುಹೂರ್ತದ ಸಂದರ್ಭದಲ್ಲಿ 3 ತಿಂಗಳಲ್ಲಿ ಮೊದಲ ಪ್ರತಿ ಹೊರ ತರುತ್ತೇನೆ ಎಂದು ಹೇಳಿದ್ದೆ, ಆದರೆ ಸಾಕಷ್ಟು ಅಡೆತಡೆಗಳುಂಟಾಗಿ 6 ತಿಂಗಳಾಗಿದೆ, ಕೊಟ್ಟಿಗೆಹಾರದಲ್ಲಿ ಮಾಡಬೇಕೆಂದಿದ್ದ ಸೀನನ್ನು ಮಂಡ್ಯ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ್ದೇನೆ. ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾಲ್ವರು ಪ್ರೊಡ್ಯೂಸರ್ ಪಿಲ್ಲರ್ ಗಳಂತೆ ನಿಂತಿದ್ದಾರೆ. ರಾಘಣ್ಣ ಅವರನ್ನು ಈವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ಇಲ್ಲಿ ನೋಡಬಹುದು ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿದರು.
ರಾಘಣ್ಣ ಮಾತನಾಡಿ, ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ ’13’ ಇದೇನಿರಬಹುದು ಅನಿಸಿತ್ತು. ಶೃತಿ ಮಾಡುತ್ತಿದ್ದಾರೆ ಅಂದಾಗ ಇಷ್ಟವಾಯ್ತು. ನಮಗೂ ಆಕ್ಟ್ ಮಾಡುವಾಗ ಕುತೂಹಲ ಮೂಡುತ್ತೆ. ಚಿತ್ರದಲ್ಲಿ 13 ಪದಕ್ಕೆ ಅರ್ಥ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ, ಈಗ ಶೂಟಿಂಗ್ ಮಾಡುವುದು ಮುಖ್ಯವಲ್ಲ, ನಂತರ ಅದನ್ನು ಹೇಗೆ ಪ್ರೊಮೋಟ್ ಮಾಡಬೇಕು ಅನ್ನೋದು ಮುಖ್ಯ. ಶಾಲೆ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವುದು, ಇಂಥ ಕೆಲಸಗಳನ್ನು ಮಾಡುವ ಮೂಲಕ ಪ್ರೊಮೋಟ್ ಮಾಡಬೇಕಿದೆ. ಎಲ್ಲೋ ಒಂದು ಕಡೆ ಸಿನಿಮಾದವರು ಸೇವೆಯನ್ನೂ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗಬೇಕು. ಶ್ರುತಿ ಅದ್ಭುತ ನಟಿ. ಅವರ ಜೊತೆ 2ನೇ ಚಿತ್ರ ಎಂದರು.
ಶೃತಿ ಮಾತನಾಡಿ, 13 ಹೆಸರು ಮಾತ್ರ ನೆಗೆಟಿವ್, ಸಿನಿಮಾಪೂರ್ತಿ ಪಾಸಿಟಿವ್ ಆಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಹೆದರಿದ್ದೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಅಲ್ಲದೆ ಎಲ್ಲೋ ಸ್ವಲ್ಪ ಲೋಪದೋಷ ಆದರೂ ತಂಡಕ್ಕೆ ಅಲ್ಲದೆ ವೈಯಕ್ತಿಕವಾಗಿ ನಮಗೂ ತೊಂದರೆ ಆಗುತ್ತದೆ. ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಜೊತೆ ಅಭಿನಯಿಸಿದ್ದೇನೆ ಎಂದು ಹೇಳಿದರು.
ನಿರ್ಮಾಪಕ ಕೆ. ಸಂಪತ್ ಕುಮಾರ್ ಮಾತನಾಡಿ, ಏನೇ ನೋವು ಕೊಟ್ಟರೂ ಸಿನಿಮಾ ಆದ್ಭುತವಾಗಿ ಬಂದಿದೆ. ಗೋವಿಂದ ಗೋಪಾಲ, ಸಾಫ್ಟ್‌ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು. ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.
ಯುವನಟ ಅಭಯ್ ಚಂದ್ರಶೇಖರ್ ವಿಭಿನ್ನ ಪ್ರೇಮಕಥೆಯುಳ್ಳ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ಈಗವರು ಮತ್ತೊಂದು ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಮಂಗಳವಾರ ಅಭಯ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದ ಹೆಸರು ಮಂಡ್ಯಹೈದ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, ಮಂಡ್ಯ ಹೈದ ನಮ್ಮ ಬ್ಯಾನರ್‌ನಿಂದ ಹೊರಬರುತ್ತಿರುವ ೫ನೇ ಚಿತ್ರ. ಅಲ್ಲದೆ ನನ್ನ ಮಗನನ್ನು ಹಾಕಿಕೊಂಡು ನಿರ್ಮಿಸುತ್ತಿರುವ ೨ನೇ ಚಿತ್ರವೂ ಹೌದು. ತೇಜಸ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳ ೧೮ರಂದು ಚಿತ್ರದ ಮುಹೂರ್ತ ನಡೆಸಿ, ಅಂದಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ, ಅದೇ ದಿನ ಚಿತ್ರದ ಟೈಟಲ್, ಕಥೆಯ ಕುರಿತಂತೆ ಹಾಗೂ ಚಿತ್ರೀಕರಣದ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸುತ್ತೇವೆ, ಇಂದು ಅಭಯ್ ಹುಟ್ಟುಹಬ್ಬ, ಹಾಗಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ್ದೇವೆ, ಕಿರುತೆರೆ ನಟಿ ಭೂಮಿಕಾ ಅವರನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.
ನಂತರ ನಿರ್ದೇಶನ ಶ್ರೀಕಾಂತ್ ಮಾತನಾಡಿ, ನಾನು ಈ ಹಿಂದೆ ರಾಗಣ್ಣ ಅಭಿನಯದ ವಾರ್ಡ್ ನಂ.೧೧ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನ್ನ ನಿರ್ದೇಶನದ ೨ನೇ ಚಿತ್ರ. ಮಂಡ್ಯ ಹೈದನ ಲವ್ ಯಾವ ಥರ ಇರುತ್ತೆ ಅಂತ ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಈ ಚಿತ್ರದ ಶೇ.೮೦ ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ ೨೦ ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನೇ ತೆಗೀತಾರೆ, ಇನ್ನೂ ಕೆಲವರು ಪ್ರಾಣವನ್ನು ಕೊಡುತ್ತಾರೆ, ನಾಯಕ ಪ್ರೀತಿಗಾಗಿ ಪ್ರಾಣ ಕೊಡ್ತಾನಾ, ಅಥವಾ ಪ್ರಾಣ ತೆಗೀತಾನಾ ಅನ್ನುವುದೇ ಮಂಡ್ಯಹೈದ ಚಿತ್ರದ ಒನ್‌ಲೈನ್ ಕಥೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ ಎಂದು ಹೇಳಿದರು. ಚಿತ್ರದ ನಾಯಕ ಅಭಯ್ ಮಾತನಾಡಿ ಇಂದು ನನಗೆ ತುಂಬಾ ವಿಶೇಷವಾದ ದಿನ, ಈ ಸಿನಿಮಾದಲ್ಲಿ ನನ್ನ ತಂದೆ ತುಂಬಾ ಇನ್‌ವಾಲ್ ಆಗಿದ್ದಾರೆ. ನನ್ನ ಮೊದಲ ಚಿತ್ರದಲ್ಲೂ ಅಷ್ಟೇ. ಅಲ್ಲದೆ ಇದು ನನಗೆ ತುಂಬಾ ಇಷ್ಟವಾಗಿರುವಂಥ ಸಬ್ಜೆಕ್ಟ್. ಪಕ್ಕಾ ಮಂಡ್ಯ ಭಾಷೆ ಈ ಚಿತ್ರದಲ್ಲಿರುತ್ತದೆ. ನನ್ನ ಸಹೋದರ ತೇಜಸ್ ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾ ಮಾತನಾಡುತ್ತ ನಾನು ಈಗಾಗಲೇ ಗೀತಾ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೆ. ಜೊತೆಗೆ ಪುಟ್ಟಕ್ಕನ ಮಕ್ಕಳು ನಲ್ಲೂ ಅಭಿನಯಿಸಿದ್ದೇನೆ. ಜೊತೆಗೆ ರಾಬರ್ಟ್, ಬ್ರಹ್ಮಚಾರಿ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ಮಾಡಿದ್ದೆ, ಈ ಚಿತ್ರದ ಮೂಲಕ ನಾಯಕಿಯಾಗುತ್ತಿದ್ದೇನೆ ಎಂದು ಹೇಳಿದರು,