ಈ ಹಿಂದೆ ಪಲ್ಲಕ್ಕಿ, ಅಮೃತವಾಹಿನಿ ಚಿತ್ರ ನಿರ್ದೇಶಿಸಿದ್ದ ಕೆ.ನರೇಂದ್ರಬಾಬು ಈಗ ’13’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಇಲ್ಲಿ ಹೈಲೆಟ್. ಯುವಿ ಪ್ರೊಡಕ್ಷನ್ಸ್ ಮೂಲಕ ಚಿತ್ರವನ್ನು ಸಂಪತ್ ಕುಮಾರ್, ಮಂಜುನಾಥ್, ಮಂಜುನಾಥಗೌಡ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಗುಜರಿ ಅಂಗಡಿ ಮಾಲೀಕರಾಗಿ, ಶ್ರುತಿ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆ ಚಿತ್ರಕ್ಕೆ ಸ್ಫೂರ್ತಿ.
ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ, ಚಿತ್ರದ ಮೇಕಿಂಗ್ ವೀಡಿಯೋ ತೋರಿಸಿ ಚಿತ್ರೀಕರಣದ ಅನುಭವ ಹಂಚಿಕೊಂಡಿತು.
ಅಂತರ್ಜಾತಿ ಪ್ರೇಮ ಕಥೆ ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಫೂರ್ತಿ ಹೇಗೆಲ್ಲ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು.
‘ಮುಹೂರ್ತದ ಸಂದರ್ಭದಲ್ಲಿ 3 ತಿಂಗಳಲ್ಲಿ ಮೊದಲ ಪ್ರತಿ ಹೊರ ತರುತ್ತೇನೆ ಎಂದು ಹೇಳಿದ್ದೆ, ಆದರೆ ಸಾಕಷ್ಟು ಅಡೆತಡೆಗಳುಂಟಾಗಿ 6 ತಿಂಗಳಾಗಿದೆ, ಕೊಟ್ಟಿಗೆಹಾರದಲ್ಲಿ ಮಾಡಬೇಕೆಂದಿದ್ದ ಸೀನನ್ನು ಮಂಡ್ಯ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ್ದೇನೆ. ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾಲ್ವರು ಪ್ರೊಡ್ಯೂಸರ್ ಪಿಲ್ಲರ್ ಗಳಂತೆ ನಿಂತಿದ್ದಾರೆ. ರಾಘಣ್ಣ ಅವರನ್ನು ಈವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ಇಲ್ಲಿ ನೋಡಬಹುದು ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿದರು.
ರಾಘಣ್ಣ ಮಾತನಾಡಿ, ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ ’13’ ಇದೇನಿರಬಹುದು ಅನಿಸಿತ್ತು. ಶೃತಿ ಮಾಡುತ್ತಿದ್ದಾರೆ ಅಂದಾಗ ಇಷ್ಟವಾಯ್ತು. ನಮಗೂ ಆಕ್ಟ್ ಮಾಡುವಾಗ ಕುತೂಹಲ ಮೂಡುತ್ತೆ. ಚಿತ್ರದಲ್ಲಿ 13 ಪದಕ್ಕೆ ಅರ್ಥ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ, ಈಗ ಶೂಟಿಂಗ್ ಮಾಡುವುದು ಮುಖ್ಯವಲ್ಲ, ನಂತರ ಅದನ್ನು ಹೇಗೆ ಪ್ರೊಮೋಟ್ ಮಾಡಬೇಕು ಅನ್ನೋದು ಮುಖ್ಯ. ಶಾಲೆ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವುದು, ಇಂಥ ಕೆಲಸಗಳನ್ನು ಮಾಡುವ ಮೂಲಕ ಪ್ರೊಮೋಟ್ ಮಾಡಬೇಕಿದೆ. ಎಲ್ಲೋ ಒಂದು ಕಡೆ ಸಿನಿಮಾದವರು ಸೇವೆಯನ್ನೂ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗಬೇಕು. ಶ್ರುತಿ ಅದ್ಭುತ ನಟಿ. ಅವರ ಜೊತೆ 2ನೇ ಚಿತ್ರ ಎಂದರು.
ಶೃತಿ ಮಾತನಾಡಿ, 13 ಹೆಸರು ಮಾತ್ರ ನೆಗೆಟಿವ್, ಸಿನಿಮಾಪೂರ್ತಿ ಪಾಸಿಟಿವ್ ಆಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಹೆದರಿದ್ದೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಅಲ್ಲದೆ ಎಲ್ಲೋ ಸ್ವಲ್ಪ ಲೋಪದೋಷ ಆದರೂ ತಂಡಕ್ಕೆ ಅಲ್ಲದೆ ವೈಯಕ್ತಿಕವಾಗಿ ನಮಗೂ ತೊಂದರೆ ಆಗುತ್ತದೆ. ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಜೊತೆ ಅಭಿನಯಿಸಿದ್ದೇನೆ ಎಂದು ಹೇಳಿದರು.
ನಿರ್ಮಾಪಕ ಕೆ. ಸಂಪತ್ ಕುಮಾರ್ ಮಾತನಾಡಿ, ಏನೇ ನೋವು ಕೊಟ್ಟರೂ ಸಿನಿಮಾ ಆದ್ಭುತವಾಗಿ ಬಂದಿದೆ. ಗೋವಿಂದ ಗೋಪಾಲ, ಸಾಫ್ಟ್‌ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು.
ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.