Categories
ಸಿನಿ ಸುದ್ದಿ

ಹಣ ಮಾಡೋದಿಕ್ಕೆ ನಾನ್ ಈ ಸಿನ್ಮಾ‌‌ ಮಾಡಿಲ್ಲ- ಡಾ. ಜಾಕ್ಲಿನ್ ಫ್ರಾನ್ಸಿಸ್

ಚಿತ್ರ ತಂಡದ‌ ಭವಿಷ್ಯಕ್ಕೆ‌ ಸಿನಿಮಾ‌‌ ನಿರ್ಮಾಣ ಮಾಡಿದೆ ಅಂದ‌‌‌ ನಾನೊಂಥರ ನಿರ್ಮಾಪಕಿ 

ಹಣ ಮಾಡ್ಬೇಕು‌ ಅನ್ನೋದಲ್ಲ,‌ ನನ್ನಿಂದ ಒಂದಷ್ಟು ಜನರಿಗೆ ಉಪಯೋಗ ಆಗುತ್ತೆ ಅನ್ನೋದೇ ‘ ನಾನೊಂಥರ’ ‌ಹೆಸರಿನ ಚಿತ್ರ ನಿರ್ಮಾಣ ಮಾಡಿದ್ದಕ್ಕೆ ಇರೋ ಮುಖ್ಯ ಕಾರಣ…

ವೃತ್ತಿಯಲ್ಲಿ ನೀವು ವೈದ್ಯರು.‌ ಅಲ್ಲಿಯೇ ಸಾಕಷ್ಟು ಕೆಲಸ, ಕೈ ತುಂಬಾ ಸಂಪಾದನೆ‌ಯಿದೆ.‌ ಅಷ್ಟಾಗಿಯೂ ಈ ಸಿನಿ‌ ದುನಿಯಾಕ್ಕೆ ನಿರ್ಮಾಪಕರಾಗಿ ಯಾಕೆ ಬಂದ್ರಿ ಎನ್ನುವ ಪ್ರಶ್ನೆಗೆ ಡಾ.‌ಜಾಕ್ಲಿನ್ ಫ್ರಾನ್ಸಿಸ್ ಕೊಟ್ಟ ಉತ್ತರ ಹೀಗಿತ್ತು.

ಅಂದ ಹಾಗೆ, ‘ನಾನೊಂಥರ’ ಅನ್ನೋದು ಹೊಸಬರ ಚಿತ್ರ. ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಸೇರಿದಂತೆ ಎಲ್ಲರೂ ಹೊಸಬರು. ಸಿನಿಮಾ ಮೇಲಿನ ಆಸಕ್ತಿಯಿಂದ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ. ಡಿಸೆಂಬರ್ 18 ಕ್ಕೆ  ತೆರೆಗೆ ಬರುತ್ತಿದೆ.

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರವು ಕಳೆದ ಮಾರ್ಚ್ ತಿಂಗಳಲ್ಲೆ ತೆರೆಗೆ ಬರಬೇಕಿತ್ತು. ಇನ್ನೇನು ಚಿತ್ರ ತಂಡವು ತಾವು  ರಿಲೀಸ್ ಗೆ  ರೆಡಿ ಎಂದು ಅನೌನ್ಸ್ ಮಾಡುವ ಹೊತ್ತಿಗೆ ಕೊರೋನಾ ಬಂತು. ಚಿತ್ರರಂಗ ಬಂದ್ ಆಯ್ತು. ಪರಿಣಾಮ ಈಗ ‘ನಾನೊಂಥರ ‘ ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೊರೋನಾ ಭೀತಿಯ ನಡುವೆಯೇ ‘ ಆಕ್ಟ್ 1978’ ಚಿತ್ರ ಬಿಡುಗಡೆ ಆಗಿ ದೊಡ್ಡ ಸಕ್ಸಸ್ ಕಂಡ ಬೆನ್ನಲೇ ‘ ‘ನಾನೊಂಥರ ‘ ಚಿತ್ರವು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಡಾ.ಜಾಕ್ಲಿನ್‌ ಫ್ರಾನ್ಸಿಸ್ ಚಿತ್ರದ ವಿಶೇಷತೆ ಜತೆಗೆ ತಮ್ಮ ಹಿನ್ನೆಲೆ ಕುರಿತು’ ಸಿನಿಲಹರಿ ‘ಜತೆಗೆ ಮಾತನಾಡಿದರು.

ಜೈ ಸನ್, ಡಾ. ಜಾಕ್ಲಿನ್ ಫ್ರಾನ್ಸಿಸ್

ಬಾಲ್ಯದಿಂದಲೂ‌ ಇತ್ತು ಸಿನಿಮಾ ನಂಟು…

ನಾನೀಗ ವೃತ್ತಿಯಲ್ಲಿ ವೈದ್ಯೆ. ಆದರೆ ಸಿನಿಮಾ‌ ಅನ್ನೊದು ನನಗೆ ಬಾಲ್ಯದಿಂದಲೂ ಇರುವ ನಂಟು. 8 ನೇ ತರಗತಿಯಲ್ಲಿ ದ್ದಾಗಲೇ ನಾನು ರಾಜ್ ಕುಮಾರ್ ಅಭಿನಯದ’ ಧ್ರುವತಾರೆ ‘ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದೆ. ಅದು ಅಮ್ಮನ ಕಾರಣಕ್ಕೆ. ಯಾಕಂದ್ರೆ, ನನ್ನಮ್ಮನಿಗೆ ನಾನು ನಟಿಯಾಗಬೇಕೆನ್ನುವ ಹುಚ್ಚು. ಅದಕ್ಕೆ‌ಕಾರಣ ಬಟ್ಟೆ ಮೇಲೆ ನನಗಿದ್ದ ಮೋಹ. ತುಂಬಾ ಬಟ್ಟೆ ತೊಡುತ್ತಿದೆ. ಚಂದದ ಬಟ್ಟೆ ಕಂಡ್ರೆ ಅವುಗಳನ್ನು ಕೊಂಡು ತಂದುತೊಡುವುದು, ಶಾಲೆಗಳಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು‌ ನೋಡಿ, ನೀನು ನಟಿ ಆಗ್ಬೇಕು ಎನ್ನುತ್ತಿದ್ದರು. ಆಗಲೇ ಧ್ರುವತಾರೆ ಸಿನಿಮಾಕ್ಕೆ‌ ಬಾಲನಟಿಯಾಗಲು ಆಡಿಷನ್ಸ್ ಗೆ ಹೋದೆ. ಅದೃಷ್ಟವಶಾತ್ ಅಲ್ಲಿ ಆಯ್ಕೆಯಾದೆ . ರಾಜಕುಮಾರ್ ಸೇರಿದಂತೆದೊಡ್ಡ ಕಲಾವಿದರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು.‌ಅ ಹೊತ್ತಿಗೆ ನನ್ನ ಅಮ್ಮನ‌ ಆಸೆ ಕೂಡ ಈಡೇರಿತು.ಮುಂದೆ ಓದು ನನ್ನ ಟಾರ್ಗೆಟ್ ಆಯಿತು. ಅಂದುಕೊಂಡಂತೆ ಮೆಡಿಕಲ್ ಓದಿ‌ ಡಾಕ್ಟರ್ ಆದೆ.

ಚಿತ್ರದ ನಾಯಕ ತಾರಕ್, ನಾಯಕಿ ರಕ್ಷಿಕಾ

ಕತೆಗಿಂತ ಅವರ ಭವಿಷ್ಯ‌ ಮುಖ್ಯ ಎನಿಸಿತು…

‘ನಾನೊಂಥರ ‘ ಒಂದೊಳ್ಳೆಯ ಕಥಾ ಹಂದರದ ಚಿತ್ರ.‌ಒಂದಿನ‌ ನಿರ್ದೇಶಕ ರಮೇಶ್ ಹಾಗೂ ನಾಯಕ‌ ನಟ‌ ತಾರಕ್ ಮಿಟ್ ಮಾಡಿ ಕತೆ ಹೇಳಿದ್ರು. ಕತೆ ಹಾರ್ಟ್ ಗೆ ಟಚ್ ಆಗುವ ಹಾಗಿತ್ತು. ನಿರ್ಮಾಣಕ್ಕೆ ಬಂಡವಾಳ ಹಾಕಿದರೆ ನಷ್ಟ ಇಲ್ಲ ಅಂತೆನಿಸಿತು. ಪ್ರೇಕ್ಷಕರಿಗೂ ಒಂದೊಳ್ಳೆಯ ಸಿನಿಮಾ‌‌ಕೊಟ್ಟ ತೃಪ್ತಿ ಸಿಗಬಹುದು ಅಂತೆನಿಸಿತು.‌ಅದಕ್ಕಿಂತ ಮುಖ್ಯವಾಗಿ ನನಗೆ ಏನೇನೋ ಕನಸು ಹೊತ್ತು ಬಂದ ನಿರ್ದೇಶಕ ರಮೇಶ್ ಹಾಗೂ‌ ನಾಯಕ‌ನಟ ತಾರಕ್ ಅವರ ಭವಿಷ್ಯವೂ ಮುಖ್ಯ ಎನಿಸಿತು. ಅವರ ಕನಸಿಗೆ ಬೆಂಬಲವಾಗಿ ನಿಂತರೆ ಮುಂದೆ ಅವರು ಉನ್ನತ ಹಂತಕ್ಕೆ ಹೋಗಬಹುದು ಅಂತೆನಿಸಿತು. ಹಾಗಾಗಿ ಹಿಂದು ‌ಮುಂದು‌ನೋಡದೆ ಈ‌ಸಿನಿಮಾ‌ಕ್ಕೆ‌ ಬಂಡವಾಳ ಹಾಕುತ್ತೇನೆ ಅಂತ ಮಾತು‌ಕೊಟ್ಟೆ.‌ಅಲ್ಲಿಂದ ವೈದ್ಯಕೀಯ ಕ್ಷೇತ್ರದಲ್ಲಿದ್ದ ನಾನು ಸಿನಿಮಾ‌ ನಿರ್ಮಾಪಕಿ‌ ಎನ್ನುವ ಜವಾಬ್ದಾರಿ ಹೊತ್ತಿಕೊಂಡೆ.

ತಾರಕ್

ಎಲ್ಲರಿಗೂ ಇಷ್ಟವಾಗುವ ಸಿನಿಮಾ…

‘ನಾನೊಂಥರ’  ಎಲ್ಲರಿಗೂ ಇಷ್ಟವಾಗುವ ಸಿನಿಮಾ. ನಮ್ಮ‌ಸಿನಿ‌ಮಾ‌ ಎನ್ನುವ ಪ್ರೀತಿ, ಕಾಳಜಿ ಅಥವಾ ವ್ಯಾಮೋಹಕ್ಕೆ ನಾನೀ ಮಾತು ಹೇಳುತ್ತಿಲ್ಲ, ಇದರ ಕತೆಯೇ ಹಾಗಿದೆ. ಒಬ್ಬ ಕುಡುಕ ಗಂಡ, ಜವಾಬ್ದಾರಿಯುತ ಹೆಂಡತಿ‌ ಸುತ್ತಲ ಕತೆ ಪ್ರತಿಯೊಬ್ಬ ರ ಫ್ಯಾಮಿಲಿಗೂ ಕನೆಕ್ಟ್‌ಆಗುತ್ತೆ.‌ಅಲ್ಲಿ ಅದಷ್ಟೇ ಇಲ್ಲ. ಮಗನಿಗಾಗಿ‌ ಪರಿತಪಿಸುವ ತಂದೆ, ಕಟ್ಟಿಕೊಂಡವನನ್ನು‌ ಸರಿ ದಾರಿಗೆ ತರಲು ಪರದಾಡುವ ಹುಡುಗಿ, ಅಣ್ಣನಿಗಾಗಿ ಎಲ್ಲವನ್ನು ತ್ಯಾಗ ಮಾಡಿ ನಿಲ್ಲುವ ಸಹೋದರ.. ಹೀಗೆ ಪ್ರತಿ ಪಾತ್ರಗಳು ಅಲ್ಲಿ ಹೈಲೈಟ್ಸ್. ಇಂತಹದೊಂದು ಸಿನಿಮಾ ಮಾಡಿ, ಚಿತ್ರ ಮಂದಿರಕ್ಕೆ ತರುತ್ತಿರುವ ನಮಗೆ ಇಲ್ಲಿ ಎಲ್ಲವೂ ಹೊಸದು.‌ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ? ಚಿತ್ರ ತಂಡದ ಮುಂದಿನ‌ ಭವಿಷ್ಯವೇನು? ಒಂಥರ ಆತ‌ಂಕ, ಇನ್ನೊಂದೆಡೆ‌ ಚಿತ್ರ ಚೆನ್ನಾಗಿದೆ ಎನ್ನುವ ನಂಬಿಕೆ.

ಮಗ ಜೈಸನ್ ಮುಂದೆ ಹೀರೋ...

ಅದು ರಕ್ತಗತ ನಂಟೋ ಏನೋ ಗೊತ್ತಿಲ್ಲ. ನಾನು ಬಾಲ್ಯದಲ್ಲಿದ್ದಾಗ ನಾನು‌ನಟಿ ಆಗ್ಬೇಕು ಅನ್ನೊದು‌ನನ್ನಮ್ಮನ‌ಆಸೆ‌ ಆಗಿತ್ತು. ಅದೇ ಕಾರಣಕ್ಕೆ ನಾನು ಆಡಿಷನ್ಸ್ ಗೆ ಹೋಗಿ ಬಾಲ‌ ನಟಿ‌ಆಗಿ ಅಭಿನಯಿಸಿದೆ.‌ಈಗ ನನ್ನ‌ಮಗ ಕೂಡ ನಟ‌ನಾಗಿ‌ ನಿಮ್ಮ‌ಮುಂದೆ‌ ಬರುತ್ತಿದ್ದಾನೆ. ಹಾಗಂತ ಆತ ನಟ ಆಗ್ಬೇಕು‌ ಅನ್ನೋದು ನನ್ನಾಸೆ ಅಲ್ಲ. ಒತ್ತಡವೂ ಇಲ್ಲ. ಅದು ಆತನ ಆಸೆ.‌ ಒಬ್ಬ ತಾಯಿಯಾಗಿ ನಾನೀಗ ಆತನ‌ ಆಸೆ ಈಡೇರಿಸುತ್ತಿದ್ದೇನೆ. ಈ‌ ಚಿತ್ರದಲ್ಲಿ‌ಆತ ನಾಯಕನ ಸಹೋದರ. ಆತನ‌ವಯಸ್ಸಿಗೆ ಅದೊಂದು‌ಒಳ್ಳೆಯ ಪಾತ್ರ.‌ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಎಲ್ಲರಿಗೂ ಇಷ್ಟವಾಗಿದೆ.‌ಒಳ್ಳೆಯ ಕಲಾವಿದ ಆಗ್ತಾನೆ‌ ಅಂತ ಚಿತ್ರ‌ತಂಡ ಬೆನ್ನು ತಟ್ಟಿದೆ. ಮುಂದೆ ಆತನನ್ನು ಹೀರೋ‌ಆಗಿ‌ಪರಿಚಯಿಸಬೇಕೆನ್ನುವ ಹಂಬಲ ನಮಗೂ‌ ಇದೆ. ಎಲ್ಲದಕ್ಕೂ ಪ್ರೇಕ್ಷಕರ ಅಶೀರ್ವಾದ ಬೇಕು.

ಬಹು ದಿನಗಳ ನಂತರ ನಾನೂ‌ ಬಣ್ಣ ಹಚ್ಚಿದೆ…

ನಾನೊಂಥರ ಸಿನಿಮಾ ನನ್ನ ಮಟ್ಟಿಗೆ ಅತೀ‌ಮುಖ್ಯ.‌ ಯಾಕಂದ್ರೆ ಬಹು ದಿನಗಳ‌ನಂತರ ನಾನಗೂ ಸಿನಿಮಾ‌ ಜಗತ್ತಿಗೂ ಇದ್ದ  ನಂಟು ನೆನಪಿಸಿತು.‌ಹಾಗೆಯೇ ಪುತ್ರ ಕೂಡ ನಟನಾಗಿ ಪರಿಚಯವಾಗುತ್ತಿದ್ದಾನೆ.‌ಅದರ ಜತೆಗೆಯೇ ಹಲವು ವರ್ಷಗಳ ನಂತರ ನಾನೂ ಕೂಡ ಇಲ್ಲಿ ಬಣ್ಣ ಹೆಚ್ಚಿದೆ. ಅದೊಂದು ‌ಚಿಕ್ಕ ಪಾತ್ರ. ಚರ್ಚ್ ನ ಮದರ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ನನಗೆ ಖುಷಿ ನೀಡುವ ಹಾಗೆ ಅಭಿನಯಿಸಿದ್ದೇನೆ ಎನ್ನುವ ನಂಬಿಕೆ ಇದೆ. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

ಪ್ರೇಕ್ಷಕರ ಆಶೀರ್ವಾದ ವೇ ನಮಗೆ ಮುಖ್ಯ…

ಹಣ ಮಾಡ್ಬೇಕು ಅಂತ ನಾನು ಈ ಸಿನಿಮಾಮಾಡಿಲ್ಲ. ತಂಡ ಭವಿಷ್ಯ ಚೆನ್ನಾಗಿರಲಿ ಅಂತ ಹಣ ಹಾಕಿದ್ದೇನೆ.‌ಇದು ಕೈ ಗೂಡಬೇಕಾದರೆ ಜನರ‌ ಆಶೀರ್ವಾದ ಬೇಕು.‌ಹಾಗಂತ ಸಿನಿಮಾ‌ಕೆಟ್ಟದ್ದಾಗಿದ್ದರೂ ಬಂದು ‌‌ಸಿನಿಮಾ‌ ನೋಡಿ‌‌ ಅಂತ ಹೇಳಲಾರೆ.‌ಸಿನಿಮಾ‌ ಚೆನ್ನಾಗಿದೆ.‌ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವೇ ಅದಕ್ಕೆ ಕಾರಣ.

Categories
ಸಿನಿ ಸುದ್ದಿ

ಕಥೆ ಶಿಕಾರಿಯತ್ತ ಶ್ರೀಪ್ರಿಯಾ – ಭರತನಾಟ್ಯ ಪ್ರವೀಣೆಯ ಸಿನಿ ಪಯಣ

ಎಂಜಿನಿಯರ್‌ ಹುಡುಗಿಯ ಕಲಾನಂಟು

ಈ ಸಿನಿಮಾ ಅಂದರೇನೆ ಹಾಗೆ. ಕಪ್ಪು ಬಿಳಿ ಕಣ್ಣಿನಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬರುವವರ ಸಂಖ್ಯೆಗೇನೂ ಇಲ್ಲಿ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಅಂಥದ್ದೊಂದು ಕನಸಿನೊಂದಿಗೆ ಈ ಸಿನಿರಂಗವನ್ನು ಅಪ್ಪಿಕೊಂಡಿದ್ದಾರೆ. ಚಿತ್ರರಂಗ ಕೂಡ ಕೆಲವರನ್ನು ಒಪ್ಪಿಕೊಂಡಿದೆ.

ಅಂತಹ‌ ಬಣ್ಣದ ಕನಸು ನಂಬಿ ಬಂದವರ ಪೈಕಿ ಶ್ರೀಪ್ರಿಯಾ ಸಹ ಒಬ್ಬರು. ಇಷ್ಟಕ್ಕೂ ಯಾರು ಈ ಶ್ರೀಪ್ರಿಯಾ ಅಂದರೆ, ಈಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ನಟಿ. ಹೌದು, ಶ್ರೀಪ್ರಿಯಾ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈ ಚಿತ್ರದೊಳಗಿನ ಅವರ ಪಾತ್ರ ಕೂಡ ಗಮನ ಸೆಳೆದಿದೆ. ಹಾಗಾಗಿ ಶ್ರೀಪ್ರಿಯಾ ಅವರಿಗೀಗ ಮೊದಲ ಇನ್ನಿಂಗ್ಸ್ ನಲ್ಲೇ ಟ್ವೆಂಟಿ ಟ್ವೆಂಟಿ ಐಪಿಎಲ್ ಸೀರೀಸ್ ಗೆದ್ದಷ್ಟೇ ಖುಷಿ ಇದೆ. ಸದ್ಯ ತಮ್ಮ ಸಿನಿಪಯಣ ಕುರಿತು, ಶ್ರೀಪ್ರಿಯಾ ‘ಸಿನಿಲಹರಿ’ಜೊತೆ ಒಂದಷ್ಟು ಮಾತನಾಡಿದ್ದಾರೆ.

 

ಓವರ್ ಟು ಶ್ರೀಪ್ರಿಯಾ
‘ನಾನು ಮೂಲತಃ ಬೆಂಗಳೂರಿನ ಅಪ್ಪಟ ಕನ್ನಡದ ಹುಡುಗಿ. ಬೇಸಿಕಲಿ ನಾನೊಬ್ಬ ಎಂಜಿನಿಯರ್. ಅಷ್ಟೇ ಅಲ್ಲ, ಭರತನಾಟ್ಯ ಕಲಾವಿದೆ ಕೂಡ. ಚಿಕ್ಕಂದಿನಿಂದಲೂ ಭರತನಾಟ್ಯ ಕಲೆ‌ ಮೇಲೆ ಅಪಾರ ಪ್ರೀತಿ ಇದೆ. ಕಲಾರಂಗದಲ್ಲೇ ಏನಾದರೊಂದು ಸಾಧಿಸಬೇಕೆಂಬ ಆಸೆ ಇತ್ತು. ಹಾಗಾಗಿ ನಾನು ಭರತನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ಕೂಡ‌ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಿದ್ದೇನೆ. ಹಲವು ಭರತನಾಟ್ಯ ಕಾರ್ಯಕ್ರಮ ಕೂಡ ಕೊಟ್ಟಿದ್ದೇನೆ.

ಈಗಲೂ ಕೊಡುತ್ತಿದ್ದೇನೆ. ಇನ್ನು‌ ಈ ಸಿನಿಮಾರಂಗದ ಮೇಲೆ ಆಸಕ್ತಿ ಹುಟ್ಟೋಕೆ ಕಾರಣ, ನಾನು ರಂಗಶಂಕರದಲ್ಲಿ ಮಾಡಿದ‌ ನಾಟಕ ಕೆಲಸ. ಇದರ ನಡುವೆಯೇ ನಾನು‌ ಮಾಡೆಲಿಂಗ್ ಕೂಡ ಶುರು ಮಾಡಿದೆ. ಅದಾದ ಮೇಲೆ ನಟನೆ‌ ಮೇಲೂ ಆಸಕ್ತಿ ಇತ್ತು. ರಂಗಭೂಮಿಯಲ್ಲಿ ಹಲವು ನಾಟಕ‌ ಪ್ರಯೋಗ ಮಾಡುತ್ತಲೆ ನಟನೆಯ ಮೇಲೆ ಹೆಚ್ಚು ಆಸಕ್ತಿ ತೋರಿದೆ. ಅಲ್ಲಿಂದಲೇ ಸಿನಿಮಾ ‌ಮಾಡುವ ಆಸೆ ಹೆಚ್ಚಾಯ್ತು.

ಹಲವಾರು ಸಿನಿಮಾಗಳಿಗೆ ಆಡಿಷನ್ ಕೊಡ್ತಾ ಇದ್ದೆ. ಹಾಗೆ ಒಂದು ಆಡಿಷನ್ ಮೂಲಕವೇ ‘ಒಂದು ಶಿಕಾರಿಯ ಕಥೆ’ ಸಿನಿಮಾಗೆ ಆಯ್ಕೆಯಾದೆ. ಆ ಚಿತ್ರದ ನಂತರ ‘ಎಂಥಾ ಕಥೆ ಮಾರಾಯ’ ಎಂಬ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ತು. ಈ ಚಿತ್ರದಲ್ಲಿ ಲೀಡ್ ಪಾತ್ರ ನನ್ನದು. ಈಗಾಗಲೇ ಈ ಚಿತ್ರದ ಡಬ್ಬಿಂಗ್ ಮುಗಿದಿದೆ. “ಒಂದು ಶಿಕಾರಿಯ ಕಥೆ”ಯಲ್ಲಿ ಐದು ಪ್ರಮುಖ ಪಾತ್ರಗಳಲ್ಲಿ ನಾನೂ ಒಬ್ಬಳು. ಅಲ್ಲಿ ಕಥೆಯೇ ಎಲ್ಲವೂ ಆಗಿದೆ’ ಎಂದು ವಿವರ ಕೊಡುತ್ತಾರೆ ಶ್ರೀಪ್ರಿಯಾ.

ಇನ್ನು, ನಾನು ಚಿತ್ರರಂಗ ಪ್ರವೇಶಕ್ಕೂ ಮುನ್ನ “ಲಾಟರಿ” ಎಂಬ ಕಿರುಚಿತ್ರವೊಂದರಲ್ಲಿ ನಟಿಸಿದ್ದೆ. ಆ ಚಿತ್ರ ಬೆಂಗಳೂರು ಇಂಟರ್‌ನ್ಯಾಷನಲ್‌ ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿತ್ತು. ಈಗ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಕೊರೊನಾ ಹಾವಳಿಯಿಂದಾಗಿ ಒಂದಷ್ಟು ಸಿನಿಮಾಗಳ ಮಾತುಕತೆ ಕೂಡ ಹಾಗೆಯೇ ನಿಂತಿತ್ತು. ಈಗ ಒಂದಷ್ಟು ಹೊಸ ಕಥೆಗಳು ಹುಡುಕಿ ಬರುತ್ತಿವೆ ಎನ್ನುವ ಶ್ರೀಪ್ರಿಯಾ, ಒಳ್ಳೆಯ ಕಥೆ, ಪಾತ್ರಗಳತ್ತ ಗಮನಹರಿಸುತ್ತಿದ್ದೇನೆ.

ಗ್ಲಾಮರ್‌ ಪಾತ್ರವಿದ್ದರೂ ಮಾಡ್ತೀನಿ. ಹಾಗಂತ ವಿನಾಕಾರಣ, ಗ್ಲಾಮರ್‌ ಬೇಡ ಅಂತಲ್ಲ, ಅದರೊಂದಿಗೆ ನಟನೆಗೂ ಅವಕಾಶ ಇರಬೇಕು. “ಒಂದು ಶಿಕಾರಿಯ ಕಥೆ” ಸಿನಿಮಾ ನೋಡಿದವರು ಗುರುತ್ತಿಸುತ್ತಿದ್ದಾರೆ. ಹಾಗೆ ಮನಸ್ಸಲ್ಲಿ ಉಳಿಯುವ ಪಾತ್ರ ಸಿಗಬೇಕು. ಕಥೆ ಡಿಮ್ಯಾಂಡ್‌ ಮಾಡಿದರೆ, ಮಾತ್ರ ಗ್ಲಾಮರ್‌ ಪಾತ್ರಕ್ಕೆ ಒಪ್ಪುತ್ತೇನೆ ಎಂದು ಹೇಳುವ ಅವರು, ಈ ರಂಗ ಆಯ್ಕೆ ಮಾಡಿಕೊಂಡಿದ್ದು ಈಗ ಖುಷಿ ಎನಿಸಿದೆ.

ಮನೆಯಲ್ಲೂ ಸಹಕಾರವಿದೆ. ಮೊದ ಮೊದಲು ಈ ರಂಗ ಪ್ರವೇಶಿಸಿದಾಗ, ಹೇಗೋ ಏನೋ ಎಂಬ ಭಯವಿತ್ತು. ಆದರೆ, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ ಭಯ ದೂರವಾಗಿದೆ. ಇಲ್ಲಿ ಪ್ರತಿಭೆಯಷ್ಟೇ ಅಲ್ಲ, ಜೊತೆಯಲ್ಲಿ ಅದೃಷ್ಟವೂ ಇರಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲೇ ಇರಬೇಕು. ಇಲ್ಲೇ ಗಟ್ಟಿನೆಲೆ ಕಾಣುವ ಆಸೆ ಇದೆ” ಎನ್ನುತ್ತಾರೆ ಶ್ರೀಪ್ರಿಯಾ.

Categories
ಸಿನಿ ಸುದ್ದಿ

ಡಾಲಿಗೆ ಯಶಾ ಜೋಡಿ – ಶಿವಪ್ಪನಿಗೆ ಸಿಕ್ಕ ಮತ್ತೊಬ್ಬ ಬೆಡಗಿ

ಶಿವರಾಜಕುಮಾರ್‌ ಧನಂಜಯ್‌ ಕಾಂಬಿನೇಷನ್‌ ಸಿನಿಮಾ

ಕನ್ನಡದಲ್ಲಿ ಹೊಸಬರ “ಪದವಿಪೂರ್ವ” ಸಿನಿಮಾ ಸೆಟ್ಟೇರಿದ್ದ ಬಗ್ಗೆ ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಯಶಾ ಶಿವಕುಮಾರ್‌ ನಾಯಕಿ ಅನ್ನೋದ್ದನ್ನೂ ಹೇಳಲಾಗಿತ್ತು. ಯಶಾ ಶಿವಕುಮಾರ್‌ ಇದೀಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಚಿತ್ರ ಮುಗಿಯುವ ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿರುವುದು ವಿಶೇಷ.

Processed with VSCO with al3 preset

ಹೌದು, ಯಶಾ ಶಿವಕುಮಾರ್‌, ಅಭಿನಯಿಸುತ್ತಿರುವ ಚಿತ್ರ “ಶಿವಪ್ಪ”. ಈ ಸಿನಿಮಾದಲ್ಲಿ ಶಿವರಾಜಕುಮಾರ್‌ ಹೀರೋ. ಅವರೊಂದಿಗೆ “ಡಾಲಿ” ಧನಂಜಯ್‌ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್‌ ಅವರಿಗೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. “ಡಾಲಿ” ಧನಂಜಯ್‌ ಅವರಿಗೆ ನಾಯಕಿಯಾಗಿ ಈಗ ಯಶಾ ಶಿವಕುಮಾರ್‌ ನಟಿಸುತ್ತಿದ್ದಾರೆ.


ಸದ್ಯಕ್ಕೆ “ಶಿವಪ್ಪʼ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ವಿಜಯ್‌ ಮಿಲ್ಟನ್‌, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 8 ದಿನಗಳ ಶೂಟಿಂಗ್ ನಲ್ಲಿ 23 ಸೀನ್ ಗಳನ್ನು ಚಿತ್ರೀಕರಣ ಮಾಡಿದ್ದೇವೆ.

Processed with VSCO with al3 preset

ಇಡೀ ಚಿತ್ರತಂಡಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಶಿವರಾಜಕುಮಾರ್‌ ಮತ್ತು ಧನಂಜಯ್‌ ಅವರಿಬ್ಬರೂ “ಟಗರು” ಸಿನಿಮಾ ನಂತರ “ಶಿವಪ್ಪ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇನ್ನು, ಶಶಿಕುಮಾರ್, ಉಮಾಶ್ರೀ ಇತರರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ರೊಟ್ಟಿ , ಕೋಳಿ ಕರಿ ಅಂದ್ರೆ ರಶ್ಮಿಕಾ‌ಗೆ ಹಾಟ್ ಫೆವೆರಿಟ್ ಫುಡ್ ಅಂತೆ ! ..

‘ಅಕ್ಕಿ ರೊಟ್ಟಿಗೂ ಕೂರ್ಗ್ ನವರಿಗೂ  ಬಿಡಿಸಲಾಗದ ನಂಟಿದೆ. ಅದರಲ್ಲೂ ಜಿನಿ ಜನಿ ಮಳೆ‌ಗಾಲದ ನಡುವೆ ಅಕ್ಕಿರೊಟ್ಟಿ- ಕೋಳಿ ಕರಿ ತಿ‌ಂತಿದ್ರೆ, ಎಂತಹ ಆನಂದ ಗೊತ್ತಾ? ಹೀಗಂತ ಒಂದ್ಸಲ ಬಾಯಿ ಚಪ್ಪರಿಸಿದ್ದು ಬೇರಾರು ಅಲ್ಲ ಸೌತ್ ಸೆನ್ಸೆಷನಲ್ ನಟಿ , ಕೊಡಗಿನ ಬೆಡಗಿ ರಶ್ಮಿಕಾ‌ ಮಂದಣ್ಣ.

ಹಾಗಂತ ಅವರು ಹೇಳಿಕೊಂಡಿದ್ದು ಯೂವರ್ಸ್ ಲೈಫ್ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ. ಅಂದ ಹಾಗೆ ಇದು  ಮೆಗಾ ಸ್ಟಾರ್ ಚಿರಂಜೀವಿ ಅವರ ಸೊಸೆ, ರಾಮ್ ಚರಣ್ ತೇಜ್ ಪತ್ನಿ ಉಪಾಸನಾ ಅವರು ಶುರು‌ಮಾಡಿರೋ ಆನ್ ಲೈನ್ ಪ್ಲಾಟ್ ಫಾರ್ಮ್.

ಆರೋಗ್ಯ, ಲೈಫ್​ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಅವರು,   URLife.co.in ಹೆಸರಿನ ವಿನೂತನ ವೆಬ್​ಸೈಟ್​ ಮೂಲಕ ಹೇಳ ಹೊರಟಿದ್ದಾರೆ. ಈ ವೆಬ್ ಸೈಟ್ ಗೆ ಉಪಾಸನಾ ಅವರು ಮ್ಯಾನೇಜಿಂಗ್ ಡೈರೆಕ್ಟರ್ .‌

ಈ ಶೋನಲ್ಲಿ ಈಗ  ಅತಿಥಿ ಸಂಪಾದಕಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಕೊಡಗಿನವರಿಗೂ , ಅಕ್ಕಿ ರೊಟ್ಟಿಗೂ ಇರುವ  ನಂಟಿನ ಬಗ್ಗೆ ಹೇಳಿಕೊಂಡಿರುವುದು ವಿಶೇಷ. ಈ ಹಿಂದೆ ಇದಕ್ಕೆ ಅತಿಥಿಯಾಗಿ ಹೋಗಿದ್ದ ಕರ್ನಾಟಕದ ಕ್ರಷ್ ರಶ್ಮಿಕಾ‌ಮಂದಣ್ಣ , ಕೋಳಿ ಕರಿ ಶುಚಿ- ರುಚಿ ಕುರಿತು ಮಾತನಾಡಿದ್ದರು.‌ಈಗ ಮತ್ತೆ ಅಲ್ಲಿಗೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಅಕ್ಕಿ ರೊಟ್ಟಿ ನಂಟಿನ ಬಗ್ಗೆ ಹೇಳಿಕೊಂಡರು.

‘ ನಮ್ಮ ಮನೆಯಲ್ಲಿ ಬೆಳಗ್ಗೆಯೇ ಅಕ್ಕಿ ರೊಟ್ಟಿ ಉಪಾಹಾರ. ನಮ್ಮ ಅಜ್ಜಿ ಆ ರೊಟ್ಟಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಗ್ಗೆಯೂ ಅದೇ, ಮಧ್ಯಾಹ್ನ ಊಟಕ್ಕೂ ಅಕ್ಕಿರೊಟ್ಟಿ, ರಾತ್ರಿ ಊಟಕ್ಕೂ ಅಕ್ಕಿ ರೊಟ್ಟಿ. ನಾನೊಬ್ಬಳೇ ಅಲ್ಲ ಬಹುತೇಕ ಎಲ್ಲ ಕೂರ್ಗಿಗಳಿಗೆ ಅಕ್ಕಿರೊಟ್ಟಿ ಅಂದರೆ ಇಷ್ಟ’  ಎಂದರು ರಶ್ಮಿಕಾ‌ಮಂದಣ್ಣ.

Categories
ಸಿನಿ ಸುದ್ದಿ

ಜನವರಿಗೆ ಬರ್ತಾಳೆ ಪಾರು – ಟೀಸರ್ ರಿಲೀಸ್ ಮಾಡಿದ ಹಂಸಲೇಖ

ಚಿಂದಿ ಆಯುವ ಹುಡುಗಿ ಡಿಸಿ ಆದಾಗ…

ಕನ್ನಡದಲ್ಲೀಗ ಸಿನಿಮಾಗಳ ಕಲರವ. ಹೌದು, ಕೊರೊನಾ ಹಾವಳಿಯ ಬಳಿಕ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಮೆಲ್ಲನೆ, ಒಂದೊಂದೇ ಚಿತ್ರಗಳು ತೆರೆಗೆ ಬರುತ್ತಿವೆ. ಈಗ ಮಕ್ಕಳ ಚಿತ್ರವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, “ಪಾರು” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಚಿತ್ರ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

 

ಬಡತನದ ಬೇಗೆಯಲ್ಲೇ ದಿನದೂಡಿ ಬದುಕುವ ಫ್ಯಾಮಿಲಿಯಲ್ಲಿ ನಾಲ್ವರು ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ, ಜಿಲ್ಲಾಧಿಕಾರಿಯಾಗುತ್ತಾಳೆ. ಆದೇ ಚಿತ್ರದ ಕಥಾಹಂದರ. ಹನುಮಂತ್‌ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಹಾಗು ಛಾಯಾಗ್ರಹಣದ ಜವಾಬ್ದಾರಿಯೂ ಹನುಮಂತ್‌ ಪೂಜಾರ್‌ ಅವರಿಗಿದೆ. ಇನ್ನು, ನೀನಾಸಂ ನಂಟು ಇರುವ ಹನುಮಂತ್‌ ಪೂಜಾರ್‌, “ಬುದ್ದಿವಂತ”, “ಅಯೋಗ್ಯ”, “ದೋಬಿಘಾಟ್” ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ‌ ಸಿನಿ ಕ್ರಿಯೇಷನ್ಸ್ ‌ಬ್ಯಾನರ್‌ನಲ್ಲಿ ಹನುಮಂತ್‌ ಪೂಜಾರ್ ಅವರೇ ಚಿತ್ರ ನಿರ್ಮಿಸಿದ್ದಾರೆ. ಸಿ.ಎನ್.ಗೌರಮ್ಮ ಅವರ ಸಹ ನಿರ್ಮಾಣವಿದೆ.


ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತವಿದೆ. ಶಿವ‌ಕುಮಾರ್ ಸ್ವಾಮಿ‌‌ ಸಂಕಲನ‌ ಮಾಡಿದ್ದಾರೆ. “ಪಾರು” ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ‌ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಮ್‌ ಕುಮಾರ್ ಇತರರು ಇದ್ದಾರೆ. ದಾವಣಗೆರೆ, ಬೆಂಗಳೂರು, ಹಾವೇರಿ ಇನ್ನಿತರೆ ಕಡೆ ಚಿತ್ರೀಕರಣ ನಡೆದಿದೆ.

Categories
ಸಿನಿ ಸುದ್ದಿ

ಹೊಸ ಬೆಳಕಿನ ನಿರೀಕ್ಷೆಯಲ್ಲಿ ಅಕ್ಷತಾ ಪಾಂಡವಪುರ !

ಸೋಷಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡ ಕಲಾವಿದೆ

ರಂಗಭೂಮಿ‌ಕಲಾವಿದೆ ಹಾಗೂ ಬಿಗ್‍ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನ ಅವರು ಸೋಷಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ.

” ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇದಿನಗಳು ಬಾಕಿ.ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿದ್ದೇವೆ” ಅಂತ ಅಕ್ಷತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಗರ್ಭಿಣಿಯಾಗಿರುವ ಅಕ್ಷತಾ ಪಾಂಡವಪುರ, ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದಾರೆ. ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಇಳಕಲ್ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಕ್ಯಾಮೆರಾ ಕ್ಕೆ ಪೋಸು ನೀಡಿದ್ದಾರೆ.

ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ.

Categories
ಸಿನಿ ಸುದ್ದಿ

ಎಕ್ಸ್‌ಕ್ಯೂಸ್‌… ಮಿ ಬಂದು 17 ವರ್ಷ! ಸ್ಟಾರ್ ಗಿರಿ ಮೇಲೆ ನಂಬಿಕೆ ಇಲ್ಲ- ಅಜೇಯ್‌ರಾವ್

ಕಷ್ಟ ಮರೆಯಲ್ಲ, ಸಾಧನೆ ಬಿಡಲ್ಲ…

ಡಿಸೆಂಬರ್‌, 5, 2003
– ಕನ್ನಡ ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಸಿನಿಮಾವೊಂದು ಬಿಡುಗಡೆಯಾದ ದಿನ. ಹೌದು, ಪ್ರೇಮ್‌ ನಿರ್ದೇಶನದ ಅಜೇಯ್‌ ರಾವ್ , ರಮ್ಯಾ ಹಾಗೂ ಸುನೀಲ್‌ ರಾವ್‌ ಅಭಿನಯದ “ಎಕ್ಸ್‌ ಕ್ಯೂಸ್‌.. ಮಿ” ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಲ್ಲಿಗೆ ಹದಿನೇಳು ವರ್ಷಗಳು ಸಂದಿವೆ. ಎನ್‌.ಎಂ.ಸುರೇಶ್‌ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್‌ ಸಂಗೀತ ನೀಡಿದ್ದರು. ಇಂದಿಗೂ ಈ “ಎಕ್ಸ್‌ ಕ್ಯೂಸ್‌ …ಮಿ” ಎವರ್‌ಗ್ರೀನ್.‌ ಒಂದಷ್ಟು ಸಿನಿಮಾಗಳು ಪದೇ ಪದೇ ಕಾಡುವುದಕ್ಕೆ ಕಾರಣ, ಆ ಚಿತ್ರದಲ್ಲಿದ್ದ ಕಥೆ, ಚಿತ್ರಕಥೆ, ಹಾಡುಗಳು ಹಾಗೂ ಕಲಾವಿದರ ಅಭಿನಯ. ಅಷ್ಟಕ್ಕೂ ಈ ಚಿತ್ರದ ಬಗ್ಗೆ ಇಷ್ಟೊಂದು ಹೇಳುವುದಕ್ಕೆ ಕಾರಣವಿಷ್ಟೇ. ಈ ಚಿತ್ರವನ್ನು ಅಜೇಯ್‌ರಾವ್‌ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಯಶಸ್ಸು ತಂದುಕೊಟ್ಟ “ಎಕ್ಸ್‌ ಕ್ಯೂಸ್‌…ಮಿ” ಚಿತ್ರ ಅವರಿಗೊಂದು ಐಡೆಂಟಿಟಿ ತಂದುಕೊಟ್ಟಿದೆ ಅನ್ನುವುದು ಸತ್ಯ. ಹೀರೋ ಆಗಿ ಯಶಸ್ಸು ಕೊಟ್ಟ ಚಿತ್ರವಿದು. ಹಾಗಾಗಿ ಈ ಹದಿನೇಳು ವರ್ಷಗಳ ಸಿನಿಮಾ ಜರ್ನಿಯಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಆ ಕುರಿತು ಅಜೇಯ್‌ರಾವ್‌ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

ನೋವು-ಸಂಕಟ ಮರೆತಿಲ್ಲ
“ಹಲೋ ಎಕ್ಸ್‌ ಕ್ಯೂಸ್‌… ಮಿ” ಈ ಪದವನ್ನೊಮ್ಮೆ ಕೇಳೋಕೆ ಒಂದು ಖುಷಿ ಎನಿಸುತ್ತೆ. ಯಾಕೆಂದರೆ, ನಾನು “ಎಕ್ಸ್‌ ಕ್ಯೂಸ್‌… ಮಿ” ಸಿನಿಮಾ ಮೂಲಕ ಹೀರೋ ಆದವನು. ನನ್ನನ್ನು ಹೀರೋ ಅಂತ ಗುರುತಿಸಿಕೊಟ್ಟ ಸಿನಿಮಾವದು. ದೊಡ್ಡ ಯಶಸ್ಸು ಕೊಟ್ಟ ಚಿತ್ರವದು. ನನ್ನ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟ, ನನ್ನೊಳಗಿನ ಬಯಕೆಯನ್ನು ಈಡೇರಿಸಿದ ಮತ್ತು ಎಂದೆಂದಿಗೂ ಮರೆಯಲಾರದ ಚಿತ್ರವದು. ನಾನು ಯಾರು ಅಂತ ಗೊತ್ತಿಲ್ಲದ ದಿನದಲ್ಲೇ ಆ ಚಿತ್ರ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿದ ಚಿತ್ರವದು. ಹಾಗಾಗಿ, ನನಗೆ ಆ ಚಿತ್ರದ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ.


ಈ ಹದಿನೇಳು ವರ್ಷಗಳು ಸುದೀರ್ಘ ಪಯಣದಲ್ಲಿ ಸಕ್ಸಸ್‌ ನೋಡಿದ್ದೇನೆ. ಫೇಲ್ಯೂರ್‌ ಕೂಡ ಕಂಡಿದ್ದೇನೆ. ಈ ಎರಡನ್ನೂ ನಾನು ಹತ್ತಿರದಿಂದಲೇ ನೋಡಿದವನು. ಒಂದೊಂದೇ ಮೆಟ್ಟಿಲನ್ನು ತುಂಬಾ ಕಷ್ಟಪಟ್ಟು ಹತ್ತಿ ಬಂದಿದ್ದೇನೆ. ಹತ್ತುವಾಗ ಎಡವಿದ್ದೇನೆ, ನೋವು ಅನುಭವಿಸಿದ್ದೇನೆ. ಒಮ್ಮೊಮ್ಮೆ ಆ ಮೆಟ್ಟಿಲ ಮೇಲೆ ನಿಂತು ಖುಷಿಪಟ್ಟಿದ್ದೇನೆ. ಆದರೆ, ನಾನು ಯಾವುದನ್ನೂ ಮರೆತಿಲ್ಲ ಎಂಬುದೊಂದೇ ಸತ್ಯ. ಯಾಕೆಂದರೆ, ಮನುಷ್ಯ ಎಷ್ಟೇ ಮೇಲೆ ಬಂದರೂ, ಎಷ್ಟೇ ಗಳಿಸಿದರೂ, ಹಿಂದಿನ ನೆನಪು, ಆ ಕಷ್ಟ, ನೋವು, ಸಂಕಟ ಮರೆಯಬಾರದು. ನಾನು ಈ ಎಲ್ಲವನ್ನೂ ಅನುಭವಿಸಿದ್ದರಿಂದ ಪದೇ ಪದೇ ಎಲ್ಲವೂ ನೆನಪಾಗುತ್ತಲೇ ಇರುತ್ತದೆ. ಹಾಗಾಗಿಯೇ ನಾನು ಸದಾ ಕೇವಲ ಒಬ್ಬ ನಟನಾಗಿ ಇರಲು ಇಷ್ಟಪಡ್ತೀನಿ.

 

ಸ್ಟಾರ್‌ ಅನ್ನೋದು ಮಿಂಚಿ ಮರೆಯಾಗುತ್ತೆ…
ಕ್ಯಾಮೆರಾ ಮುಂದೆ ನಾನು ಒಬ್ಬ ಆರ್ಟಿಸ್ಟ್‌ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡ್ತೀನಿ. ಯಾಕೆಂದರೆ, ನಟನಾಗಿರುವುದೇ ಶಾಶ್ವತ. ನನಗೆ ಸ್ಟಾರ್‌ ಪಟ್ಟ ಬೇಡವೇ ಬೇಡ. ಅದೊಂದು ರೀತಿ ಸ್ವಿಚ್‌ ಆನ್‌ ಅಂಡ್‌ ಆಫ್‌ ಇದ್ದಂತೆ. ಆಗಾಗ ಸಕ್ಸಸ್‌, ಫೇಲ್ಯೂರ್‌ ಇದ್ದಂಗೆ. ಹಾಗಾಗಿ ನಾನು ಸ್ಟಾರ್‌ಗಿಂತ ಒಬ್ಬ ನಟನಾಗಿ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ. ಒಬ್ಬ ನಿರ್ದೇಶಕನ ಕಲ್ಪನೆ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನಾಗಬೇಕು ಎಂಬುದು ನನ್ನ ಉದ್ದೇಶ. ನಾವು ಅಣ್ಣಾವ್ರು ಅವರನ್ನು ನೆನಪಿಸಿಕೊಂಡರೆ, ಅವರು ಮಾಡಿದ ಕೆಲಸಗಳು, ಪಾತ್ರಗಳು, ಚಿತ್ರಗಳು ಕಣ್ಣೆದುರು ಬರುತ್ತವೆ. ಅದಷ್ಟೇ ಶಾಶ್ವತ. ಹಾಗಾಗಿ ನಾವು ತೆರೆಯ ಮೇಲೆ ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಬೇಕಾದರೆ, ಶ್ರದ್ಧೆ, ಭಕ್ತಿ,ಪ್ರಾಮಾಣಿಕತೆಯಿಂದ ಮಾಡಬೇಕು.

ನಟನಿಗೆ ಸ್ಟಾರ್‌ ಭ್ರಮೆ ಇರಬಾರದು
ನನಗೆ ಈ ಸ್ಟಾರ್‌ಡಮ್‌ ಮೇಲೆ ನಂಬಿಕೆ ಇಲ್ಲ. ಸ್ಟಾರ್‌ ಪಟ್ಟ ಅನ್ನೋದು ಶಾಶ್ವತವೂ ಅಲ್ಲ. ನಟನಾದವನು ಆ ಭ್ರಮೆಯಲ್ಲಿ ಇರಬಾರದು. ಕಲಾವಿದರ ಬದುಕಲ್ಲಿ ಸೋಲು-ಗೆಲುವು ಕಾಮನ್.‌ ನಿರ್ಮಾಪಕ ಇರಲಿ, ನಿರ್ದೇಶಕ ಇರಲಿ, ನಟನೇ ಇರಲಿ ತನ್ನ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮಾತ್ರ ಎಲ್ಲವೂ ಶಾಶ್ವತವಾಗಿರುತ್ತೆ. ಎಲ್ಲರ ಮನಸ್ಸಲ್ಲಿ ಕೊನೆಗೆ ಉಳಿಯೋದು ಮಾಡಿದ ಕೆಲಸವಷ್ಟೇ. ಅದೆಷ್ಟೋ ಸಿನಿಮಾಗಳು ಫ್ಲಾಪ್‌ ಆಗಿದ್ದರೂ, ಇವತ್ತಿಗೂ ಆ ಸಿನಿಮಾಗಳನ್ನು ನೋಡಿದಾಗ, ಎಂಥಾ ಕ್ಲಾಸಿಕ್‌ ಸಿನಿಮಾ ಮಾಡಿದ್ದಾರೆ ಅನ್ಸುತ್ತೆ. ಇವತ್ತು ಮಾರ್ಕೆಟ್‌ ಅನ್ನೋದು ಕೂಡ ಶಾಶ್ವತವಲ್ಲ. ನಾಳೆ ನಾವೇ ಇರ್ತೀವೋ ಇಲ್ಲವೋ ಅನ್ನೋದು ಶಾಶ್ವತವಲ್ಲ. ಆದರೆ, ನಾವು ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯೋದು ಎಂಬುದು ಅವರ ಮಾತು.

ನಿರ್ದೇಶನದ ಆಸೆಯೂ ಇದೆ
ಅಂದಹಾಗೆ, ಅಜೇಯ್‌ರಾವ್‌ ಈ ಹದಿನೇಳು ವರ್ಷಗಳಲ್ಲಿ ಗೆದ್ದಿದ್ದಾರೆ, ಬಿದ್ದಿದ್ದಾರೆ, ನಿರ್ಮಾಪಕರಾಗಿದ್ದಾರೆ, ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ನಿರ್ದೇಶನದ ಮೇಲೆ ಆಸೆ ಇಲ್ಲವೇ? ಈ ಬಗ್ಗೆ ಮಾತನಾಡುವ ಅಜೇಯ್‌ರಾವ್‌, ನನಗೂ ನಿರ್ದೇಶನದ ಮೇಲೆ ಪ್ರೀತಿ ಇದೆ. ಆದರೆ, ಮೊದಲ ಆದ್ಯತೆ ನಟನೆಗೆ ಕೊಡ್ತೀನಿ. ಅದು ನನ್ನ ಪ್ಯಾಷನ್‌ ಕೂಡ. ಮೊದಲು ನನ್ನೊಂದಿಗೆ ಸಿನಿಮಾ ಮಾಡೋಕೆ ಬರೋರನ್ನು ಗೌರವಿಸುತ್ತೇನೆ. ಅಂಥವರಿಗೆ ಸಿನಿಮಾ ಮೇಲೆ ಪ್ರೀತಿ ಇರಬೇಕು. ಗೆಲ್ಲುವ ಛಲ ಇರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ತಾಳ್ಮೆ ಇರಬೇಕು. ಇಂದು ನನಗೆ ಆ ತಾಳ್ಮೆ ಇದ್ದುದರಿಂದಲೇ ಎಲ್ಲವನ್ನೂ ಕಂಡುಕೊಳ್ಳಲು ಸಾಧ್ಯವಾಗಿದೆ ಎಂಬುದು ಅವರ ಮಾತು.

ಸಾಧಿಸುವುದಿನ್ನೂ ಇದೆ…
ಸದ್ಯ ಅಜೇಯ್‌ ರಾವ್‌ ಅವರ “ಕೃಷ್ಣ ಟಾಕೀಸ್‌” ಸೆನ್ಸಾರ್‌ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಉಳಿದಂತೆ “ಶೋಕಿವಾಲ” ಕೂಡ ರೆಡಿ. ಇವುಗಳ ಜೊತೆಗೆ ನಿರ್ದೇಶಕರಾದ ಮಂಜು ಸ್ವರಾಜ್‌ ಮತ್ತು ಗುರುದೇಶಪಾಂಡೆ ಜೊತೆ ಸಿನಿಮಾ ಮಾಡಬೇಕಿದೆ. ಇದರ ನಡುವೆಯೇ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆಯಂತೆ. ಅದೇನೆ ಇರಲಿ, ಅಜೇಯ್‌ ರಾವ್‌ “ಎಕ್ಸ್‌ ಕ್ಯೂಸ್‌… ಮಿ”ಗೆ ಹದಿನೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಅಜೇಯ್‌ರಾವ್‌ ಎಲ್ಲಾ ಪಾಠ ಕಲಿತಿದ್ದಾರೆ. ಒಮ್ಮೆ ತಿರುಗಿ ನೋಡಿದಾಗ ಸಾಧನೆ ಮಾಡುವುದು ಇನ್ನೂ ಇದೆ ಎಂದೆನಿಸದಿರದು.

Categories
ಸಿನಿ ಸುದ್ದಿ

ಸ್ಟಾರ್ ಸುವರ್ಣದಲ್ಲಿ  ‘ಮನಸೆಲ್ಲಾ ನೀನೇ’, ಡಿ.7ರಿಂದ ಪ್ರತಿ  ರಾತ್ರಿ 9.30ಕ್ಕೆ ಪ್ರಸಾರ

ಶನಿವಾರ ( ಡಿ.5) ಹುಟ್ಟು ಹಬ್ಬ ಆಚರಿಸಿಕೊಂಡ ಕನ್ನಡದ ಏಕ್ತಾ‌ಕಪೂರ್ ಶ್ರುತಿ ನಾಯ್ಡು

ಸ್ಟಾರ್ ಸುವರ್ಣ ಬದಲಾವಣೆಯ ಬೆಳಕಿನೊಂದಿಗೆ ಹೊಸ ಕಿರುತೆರೆ ವೀಕ್ಷಕರನ್ನು ಹೊಸ ರೂಪದಲ್ಲಿ ರಂಜಿಸುತ್ತಿದೆ. ಹೊಸ ಆಲೋಚನೆಯ ‘ಸರಸು’ ಧಾರಾವಾಹಿ, ಹೊಸ ಪರಿಕಲ್ಪನೆಯ ‘ಸುವರ್ಣ ಸೂಪರ್ ಸ್ಟಾರ್’ ಕಾರ್ಯಕ್ರಮಗಳು ಈಗಾಗಲೇ  ಕಿರುತೆರೆ ವೀಕ್ಷಕರ ಮನಸಿಗೆ ಹತ್ತಿರವಾಗಿವೆ. ಆ ಸಾಲಿಗೆ ಈಗ ‘ಮನಸೆಲ್ಲಾ ನೀನೇ’ ಹೊಚ್ಚ ಹೊಸ ಧಾರಾವಾಹಿ.

ಇದು ಶ್ರುತಿ ನಾಯ್ಡು ನಿರ್ಮಾಣದ ಹೊಸ ಧಾರಾವಾಹಿ‌. ಶ್ರುತಿ ನಾಯ್ಡು  ಅವರು ತಮ್ಮದೇ ‘ಶ್ರುತಿ ನಾಯ್ಡ ಚಿತ್ರ’ ಸಂಸ್ಥೆಯ ಮೂಲಕ ಈಗಾಗಲೇ ಅವರು ಕಿರುತೆಯಲ್ಲಿ ಹಲವು ಜನಪ್ರಿಯ ಧಾರಾವಾಹಿ ಕೊಟ್ಟವರು. ಅದೇ ಅನುಭವದ ಪಯಣದಲ್ಲೀಗ ಹೊಸತನ್ನು ಬಯಸುವ  ಕಿರುತೆರೆ ವೀಕ್ಷಕರಿಗೆ ಹೊಸ ಹೊಸತೆನಿಸುವ ಕತೆಯೊಂದನ್ನು ‘  ಮನಸೆಲ್ಲಾ‌ನೀನೇ’ ಮೂಲಕ ನೀಡಲು ಬರುತ್ತಿದ್ದಾರೆ. ವಿಶೇಷವಾಗಿ ಸಂಘರ್ಷ ಧಾರಾವಾಹಿ ಯ ನಂತರ ಸ್ಟಾರ್ ಸುವರ್ಣದಲ್ಲಿ ಅವರು ನೀಡುತ್ತಿರುವ ಎರಡನೇ ಧಾರಾವಾಹಿ ಇದು. ಇದುವರೆಗೂ ಬಂದು ಹೋದ ಧಾರಾವಾಹಿಗಳ ಕಥಾ ಹಂದರಕ್ಕಿಂತ ಇದು ಭಿನ್ನವಾದ ಕತೆಯಂತೆ.

ರಶ್ಮಿ ಪ್ರಭಾಕರ್

ಕಥಾ ನಾಯಕಿ ರಾಗ. ಅಪ್ಪ ಅಮ್ಮನ ಪ್ರೀತಿಯ ಮಗಳು.
ವೃತ್ತಿಯಲ್ಲಿ ಡಯಟಿಷಿಯನ್ .  ಪುಟಾಣಿ ಪ್ರೀತೂ ಅಂದ್ರೆ ಇವಳಿಗೆ ಪ್ರಾಣ. ಅವನಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಇನ್ನು ಕಥಾ ನಾಯಕ ಅರುಣ್  ಯಶಸ್ಸಿನ ಅಮಲಿನಲ್ಲಿ ತೇಲುವ ರಾಕ್ ಸ್ಟಾರ್ . ಅವನಂದ್ರೆ  ಸೆನ್ಸೇಷನ್ .ಒಂಥರ ಯೂತ್ ಐಕನ್. ಅವರ ಮಧ್ಯೆ ಬರುವವನು ಪ್ರೀತಮ್.ಆತ ರಾಕ್ ಸ್ಟಾರ್ ಅರುಣ್ ದೊಡ್ಡ ಫ್ಯಾನ್. ಈತ ರಾಗಾಳ ಮುದ್ದಿನ‌ಮಗ. ಅವರ ಸುತ್ತಲ ಕತೆಯೇ ‘  ಮನಸೆಲ್ಲಾ ನೀನೇ’ . ಕತೆ ಸಿಂಪಲ್ ಎನಿಸಿದರೂ ಇಲ್ಲಿ ಅನೇಕ ಟ್ವಿಸ್ಟ್ ಆ್ಯಂಡ್ ಟರ್ನ್ ಗಳಿವೆ. ಅವೆಲ್ಲ ಏನು, ಹೇಗೆ ಎನ್ನುವುದು ಧಾರಾವಾಹಿಯ ಕುತೂಹಲದ ಅಂಶ.

ಶ್ರುತಿ ನಾಯ್ಡು

ಧಾರಾವಾಹಿಯ ಕತೆ ಇದಾದರೆ ಇನ್ನು ಉಳಿದಿದ್ದು ಪಾತ್ರವರ್ಗ ಯಾರು ಅನ್ನೋದು. ಕಥಾ ನಾಯಕಿ ರಾಗ ಪಾತ್ರಕ್ಕೆ ಬಣ್ಣ ಹಚ್ಚಿದವರು ರಶ್ಮಿ ಪ್ರಭಾಕರ್.  ಲಕ್ಷ್ಮಿ‌ ಬಾರಮ್ಮ ಧಾರಾವಾಹಿಯ ಚಿನ್ನು ಖ್ಯಾತಿಯ ನಟಿ.‌ಹಾಗೆಯೇ ಕಲಾವಿದ ಸುಜಿತ್, ರಾಕ್ ಸ್ಟಾರ್ ಅರುಣ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪುಟಾಣಿ ಅಲಾಪ್ ಪ್ರೀತಮ್ ಆಗಿ ಬರುತ್ತಿದ್ದಾರೆ.ಈ ಮೂವರ ಅನುಬಂಧದ ಕತೆ  ಇಲ್ಲಿ ಹೊಸತಾಗಿರುವುದು ಮಾತ್ರವಲ್ಲ, ರೋಚಕ , ರಂಜನೆಯ ರಸದೌತಣ ನೀಡಲಿದೆಯಂತೆ. ಹಾಗೆಯೇ  ಅನುಭವಿ ಕಲಾವಿದರಾದ ವಿಜಯ್ ಕಾಶಿ, ಅರುಣಾ ಬಾಲರಾಜ್ , ಬಾಬು ಹಿರಣಯ್ಯ , ಪ್ರಕಾಶ್ ಶೆಟ್ಟಿ, ರೇಖಾ ಸಾಗರ್ ಧಾರಾವಾಹಿಯ ತಾರಾಗಣದಲ್ಲಿದ್ದಾರೆ.

ರಶ್ಮಿ ಪ್ರಭಾಕರ್

ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದು, ಈ ಹಾಡು ಈಗಾಗಲೇ ಜನಪ್ರಿಯವಾಗಿದೆ. ಅದ್ಧೂರಿ ನಿರ್ಮಾಣ, ಸುಂದರ ಕತೆ, ಮುದ್ದಾದ ಪಾತ್ರವರ್ಗವು  ‘ಮನಸೆಲ್ಲಾ ನೀನೇ’ ಧಾರಾವಾಹಿಯ  ಹೈಲೈಟ್ಸ್. ಅಂದ ಹಾಗೆ, ಶನಿವಾರ( ಡಿಸೆಂಬರ್ 5) ದಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು, ತಮ್ಮ ಬರ್ತಡೇ ವಿಶೇಷ ಎಂಬಂತೆ  ಈ ಧಾರಾವಾಹಿಯ ಸುದ್ದಿ ರಿವೀಲ್ ಮಾಡಿದ್ದಾರೆ. ಡಿ.7ರಿಂದ ಪ್ರತಿ  ರಾತ್ರಿ 9.30ಕ್ಕೆ ಇದು ಸ್ಟಾರ್ ಸುವರ್ಣ ದಲ್ಲಿ ಮೂಡಿ ಬರಲಿದೆ.

Categories
ಸಿನಿ ಸುದ್ದಿ

ಅಭಿಮನ್‌ರಾಯ್‌ ಬಿಚ್ಚಿಡದ ಆರರ ಗುಟ್ಟು! ಸಿಕ್ಸ್‌‌ ಎಂಬ ಸ್ಪೆಷಲಿಸ್ಟ್…‌‌

ಫಸ್ಟ್‌ ಟೀಸರ್‌ ಹುಟ್ಟಿಸಿದ ಹೊಸ ನಿರೀಕ್ಷೆ…

 

“ಆಕೆ ಟೀ ಟೇಸ್ಟರ್. ಅದಕ್ಕೆ ಅವಳು ಟೀ ಮಾತ್ರ ಕುಡಿತಾಳೆ. ಆಕೆಯ ಪ್ರಕಾರ, ಅವಳ ಬಾಯ್‌ಫ್ರೆಂಡ್‌ ಆಗೋನು ಕೂಡ ಟೀ ಕುಡಿಬಾರ್ದು…!
– ಅರೇ ಇದೇನಪ್ಪಾ, ಯಾರವಳು ಟೀ ಟೇಸ್ಟರ್‌, ಏನದು ಎಂಬ ಪ್ರಶ್ನೆ ಎದುರಾದರೆ, ಇದೇ ಮೊದಲ ಸಲ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವ ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರ “ಸಿಕ್ಸ್‌”‌ ಚಿತ್ರದ ಟೀಸರ್ ನೋಡಬೇಕು. ಹಲವು ಚಿತ್ರಗಳ ಟೀಸರ್‌, ಟ್ರೇಲರ್‌ ಬಿಡುಗಡೆಯಾಗುತ್ತವೆ. ಕೆಲ ಚಿತ್ರಗಳ ಟೀಸರ್‌, ಟ್ರೇಲರ್‌ಗಳು ಮೊದಲ ಸಲವೇ ನಿರೀಕ್ಷೆ ಹುಟ್ಟಿಸಿಬಿಡುತ್ತವೆ. ಆ ಸಾಲಿಗೆ “ಸಿಕ್ಸ್‌” ಚಿತ್ರದ ಟೀಸರ್‌ ಕೂಡ ಸೇರಿದೆ ಅನ್ನೋದು ವಿಶೇಷ. ಹೌದು, “ಸಿಕ್ಸ್‌” ಟೀಸರ್‌ ಈಗ ಜೋರು ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ, ಒಳ್ಳೆಯ ಮೆಚ್ಚುಗೆಗೂ ಕಾರಣವಾಗುತ್ತಿದೆ.

ಪಾಯಲ್‌ ಚೆಂಗಪ್ಪ

ಟೀಸರ್‌ ನೋಡಿದವರಿಗೆ ಹೊಸ ಭರವಸೆ ಮೂಡಿಸುವುದಷ್ಟೇ ಅಲ್ಲ, ಅಲ್ಲಲ್ಲಿ ಥ್ರಿಲ್‌ ಎನಿಸುವ ಅಂಶಗಳೂ ಇವೆ. ಲವ್‌ ಇದೆ, ಹಾಸ್ಯವೂ ಇದೆ, ರಗಡ್‌ ಲುಕ್ಕೂ ಇದೆ, ಭಯ ಹುಟ್ಟಿಸುವ ಫೀಲೂ ಇದೆ. ಟೀಸರ್‌ನಲ್ಲಿ “ಏ.. ಏನ್‌ ಮುಖ ನೋಡ್ತಾ ಇದೀಯಾ ಹಿಂದೆನಾ, ಮುಂದೆನಾ…? ಹೀಗೆ ಆ ಹುಡುಗಿ ಕೇಳಿದಾಕ್ಷಣ, ಆ ಹುಡುಗ, “ಯೆಸ್,‌ ಫಸ್ಟ್‌ ಟೈಮ್‌ ಅಲ್ವಾ, ಅದಕ್ಕೆ ಸ್ವಲ್ಪ ನಾಚಿಕೆ ಆಗ್ತಾ ಇದೆ” ಅಂತಾನೆ, ಆ ಮಾತಿಗೆ ಆಕೆ, “ಏನ್‌ ಫಸ್ಟ್‌ ಟೈಮ್‌, ಬದನೆಕಾಯಿ… ಮೂರು ವರ್ಷದಿಂದಲೂ ಓಡಿಸ್ತಾನೆ ಇದೀಯಾʼ ಅನ್ನೋ ಡೈಲಾಗ್‌ ಹರಿಬಿಡುತ್ತಾಳೆ. ಅವನು ತನ್ನ ಮನಸ್ಸಲ್ಲಿ, “ತಾಜ್‌ ಮಹಲ್‌ ತೋರಿಸ್ತಾಳೆ, ಅಂದರೆ, ತಾರ್‌ ರೋಡ್‌ ತೋರಿಸ್ತಾಳೆ..ʼ ಅಂತಾನೆ. ಹಾಗಾದರೆ, ಆ ಹುಡುಗ, ಹುಡುಗಿ ನಡುವೆ ನಡೆಯೋ ಸಂಭಾಷಣೆ ಎಂಥದ್ದು? ಈ ಮಾತುಗಳನ್ನು ಕೇಳಿದರೆ, ಡಬಲ್‌ ಮೀನಿಂಗ್‌ ಎನಿಸುತ್ತೆ, ಆದರೆ, ಆ ದೃಶ್ಯ ನೋಡಿದವರಿಗಷ್ಟೇ, ಅಲ್ಲಿ ಇರೋದ್‌ ಏನು, ನಡೆಯೋದ್‌ ಏನು ಅಂತ. ಸಿಕ್ಸ್‌ ಟೀಸರ್‌ ಕುರಿತು ಅದೇನೆ ಹೇಳಿದರೂ, ಹೆಚ್ಚು ಅರ್ಥ ಆಗಲ್ಲ. ಹಾಗಾಗಿ ಒಮ್ಮೆ “ಸಿಕ್ಸ್‌” ಟೀಸರ್‌ ನೋಡಿದರಷ್ಟೇ, ಎಲ್ಲವೂ ಸ್ಪಷ್ಟವಾಗುತ್ತೆ.

ಆದರೂ, ಟೀಸರ್‌ ಒಂದಷ್ಟ ಕುತೂಹಲದೊಂದಿಗೆ ಸಾಗುತ್ತೆ. ಒಂದು ಬೆಟ್ಟ, ಅಲ್ಲಿರುವ ಕಡಿದಾದ ದಾರಿ, ಕತ್ತಲಲ್ಲಿ ನಡೆದು ಹೋಗುವ ಅಪರಿಚಿತ. ಅವನ ಕೈಲ್ಲೊಂದು ಕಬ್ಬಿಣದ ರಾಡು, ಮುಖವಾಡ ಧರಿಸಿದ ಅಪರಿಚಿತನ ರಗಡ್‌ ಲುಕ್ಕು… ಆಗಾಗ ಬಂಡೆ ಹೊಡೆಯುವ ರಾಡಿನಲ್ಲಿ, ವ್ಯಕ್ತಿಯೊಬ್ಬನ ಹೃದಯಕ್ಕೆ ಚುಚ್ಚುತ್ತಾನೆ….” ಆ ಅಪರಿಚಿತ ಯಾರು, ಯಾರನ್ನು ಕೊಲೆಗೈದ, ಬಂಡೆ ಹೊಡೆಯೋ ಕಾಯಕ ಮಾಡುವ ಆ ವ್ಯಕ್ತಿಗೂ, ಕೊಲೆಯಾದ ವ್ಯಕ್ತಿಗೂ ಇರುವ ಸಂಬಂಧವೇನು ಇತ್ಯಾದಿ ವಿಷಯಗಳು ಇಲ್ಲಿ ಒಂದಷ್ಟು ಸಸ್ಪೆನ್ಸ್‌ ಎನಿಸುತ್ತದೆ. ತುಂಬಾನೇ ಕ್ರಿಯೇಟಿವ್‌ ಎನಿಸುವ ಈ ಟೀಸರ್‌ಗೆ ಅಷ್ಟೇ ಎಫೆಕ್ಟ್‌ ಎನಿಸುವ ಹಿನ್ನೆಲೆ ಸಂಗೀತ ಕೂಡ ಪೂರಕವೆನಿಸಿದೆ. ಒಟ್ಟಾರೆ, ಟೀಸರ್‌ ಹೊಸದೊಂದು ನಿರೀಕ್ಷೆ ಮೂಡಿಸಿರುವುದಂತೂ ಸುಳ್ಳಲ್ಲ. ಅಂಥದ್ದೊಂದು ನಿರೀಕ್ಷೆಗೆ ಝೇಂಕಾರ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ “ಸಿಕ್ಸ್‌” ಟ್ರೇಲರ್‌ ನೋಡಬೇಕು.

ಅಭಿಮನ್‌ ರಾಯ್‌, ನಿರ್ದೇಶಕ

ಕನ್ನಡದಲ್ಲಿ ಹಲವು ಹಿಟ್‌ ಸಾಂಗ್‌ ಕೊಟ್ಟಿರುವ ಅಭಿಮನ್‌ರಾಯ್‌ ಅವರ ಮೊದಲ ನಿರ್ದೇಶನದ ಚಿತ್ರವಿದು. ಈಗಾಗಲೇ ಫಸ್ಟ್‌ ಲುಕ್‌ನಲ್ಲೇ “ಸಿಕ್ಸ್‌” ಗಮನಸೆಳೆದಿತ್ತು. ಈ ಟೀಸರ್‌ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ, ಇದು ಶ್ರೇಯ ಸಿಲ್ವರ್‌ ಸ್ಕ್ರೀನ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ನಳಿನಿ ಗೌಡ ಹಾಗೂ ರವಿಕುಮಾರ್‌, ಸೋಮಶೇಖರ್‌ ರಾಜವಂಶಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮನ್‌ ರಾಯ್‌ ಅವರ ಈ “ಸಿಕ್ಸ್”‌ ಚಿತ್ರದಲ್ಲಿ ಸಂದೇಶವಿದೆ. ಲವ್‌ಸ್ಟೋರಿ, ಕಾಮಿಡಿಯ ಜೊತೆಗೆ ಥ್ರಿಲ್ಲರ್‌ ಅಂಶಗಳೂ ಇಲ್ಲಿ ಹೈಲೈಟ್.‌ ಅಭಿಮನ್‌ ಬರೀ ಕೀ ಬೋರ್ಡ್‌ ಮೇಲೆ ಕೈಯಾಡಿಸುವುದಷ್ಟೇ ಅಲ್ಲ, ಒಳ್ಳೆಯ ಗೀತರಚನೆಕಾರರೂ ಹೌದು. ಅವರೇ ತಮ್ಮ ಚೊಚ್ಚಲ ಚಿತ್ರ “ಸಿಕ್ಸ್‌”ಗೆ ಕಥೆ ಹೆಣೆದು, ಚಿತ್ರಕಥೆ ಬರೆದು, ಮಾತುಗಳನ್ನೂ ಪೋಣಿಸಿ ನಿರ್ದೇಶಿಸಿದ್ದಾರೆ.

ಒಂದು ಸಣ್ಣ ತಪ್ಪಿನಿಂದ ದೊಡ್ಡ ತಪ್ಪುಗಳು ಹೇಗಾಗುತ್ತವೆ. ದೊಡ್ಡ ಸಮಸ್ಯೆಯನ್ನೂ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಷಯ ಇಟ್ಟುಕೊಂಡು ಮಾಡಿರುವ ಚಿತ್ರವಿದು. ನೈಜತೆಗೆ ಹತ್ತಿರವಾಗಿರುವ ಚಿತ್ರವಿದು ಎನ್ನುವ ಚಿತ್ರತಂಡ, ಇಲ್ಲಿ ಯಾವ ಕಲಾವಿದರಿಗೂ ಮೇಕಪ್‌ ಮಾಡಿಸಿಲ್ಲ ಎಂಬುದು ವಿಶೇಷ. ಬಹುತೇಕ ಬೆಂಗಳೂರು, ಕೋಲಾರ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿರಲಿವೆ. ಸದ್ಯಕ್ಕೆ ಈಗ ಝೇಂಕಾರ್‌ ಮ್ಯೂಸಿಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ “ಸಿಕ್ಸ್‌ʼ ಟೀಸರ್‌ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ “ಅಮೃತಾಂಜನ್‌” ಕಿರುಚಿತ್ರದ ನಾಯಕಿ ಪಾಯಲ್‌ ಚೆಂಗಪ್ಪ ಈ ಚಿತ್ರದ ನಾಯಕಿ. ಅವರೊಂದಿಗೆ ರವಿಚಂದ್ರ, ಪ್ರಣವ್‌ರಾಯ್‌, ಪೂರ್ವ ಯೋಗಾನಂದ್‌ ಸೇರಿದಂತೆ ಹಲವು ಕಲಾವಿದರು ಇರಲಿದ್ದಾರೆ. ಈ ಸಿದ್ಧಾರ್ಥ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ.

ನಳಿನಿಗೌಡ, ನಿರ್ಮಾಪಕರು

ಒಳ್ಳೇ ಸಿನ್ಮಾ ಕೊಡುವ ಉದ್ದೇಶ
ಇನ್ನು, ಈ ಚಿತ್ರದ ಬಗ್ಗೆ ನಿರ್ಮಾಪಕಿ ನಳಿನಿ ಗೌಡ ಹೇಳುವುದಿಷ್ಟು, “ಇದು ನನ್ನ ಮೊದಲ ನಿರ್ಮಾಣದ ಸಿನಿಮಾ. ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಇತ್ತು. ಅದಕ್ಕಾಗಿ ಹೊಸತನ ಇರುವಂತಹ ಕಥೆ ಹುಡುಕಾಟ ನಡೆಸುತ್ತಿದ್ದೆ. ಅಭಿಮನ್‌ ರಾಯ್‌ ಅವರ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಿದ್ದೆ. ಹಾಗೆ, ಒಮ್ಮೆ ಭೇಟಿಯಾಗಿ, ನಿರ್ಮಾಣ ಮಾಡುವ ಕುರಿತು ಹೇಳಿಕೊಂಡಿದ್ದೆ. ಆಗ ಅವರು “ಸಿಕ್ಸ್‌” ಚಿತ್ರದ ಒನ್‌ಲೈನ್‌ ಸ್ಟೋರಿ ಹೇಳಿದರು. ನನಗೂ ಅದು ಇಷ್ಟವಾಯ್ತು. ಸಿನಿಮಾ ಶುರುವಾಯ್ತು. ನಾನು ಮೂಲತಃ ಬೆಂಗಳೂರಿನವಳು. ರೈತ ಮತ್ತು ಕಾರ್ಮಿಕರ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯಕ್ಕೆ ಚಿತ್ರದ ಟೀಸರ್‌ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದೇವೆ. ಕನ್ನಡಕ್ಕೊಂದು ಹೊಸತನದ ಸಿನಿಮಾ ಕೊಡುವ ಉದ್ದೇಶ ನನ್ನದುʼ ಎಂಬುದು ನಳಿನಿ ಗೌಡ ಅವರ ಮಾತು.

ಚಾಲೆಂಜಿಂಗ್‌ ಪಾತ್ರ
ಈ ಚಿತ್ರಕ್ಕೆ ಪಾಯಲ್‌ ಚೆಂಗಪ್ಪ ನಾಯಕಿ. “ಅಮೃತಾಂಜನ್‌” ಎಂಬ ಕಿರುಚಿತ್ರದ ಮೂಲಕ ಸುದ್ದಿಯಾದವರು. ಇವರಿಗೆ ಯಾವ ನಟನೆಯ ಅನುಭವ ಇಲ್ಲ. “ಅಮೃತಾಂಜನ್‌” ಮೂಲಕ ತಾನೊಬ್ಬ ನಟಿ ಅನ್ನುವುದನ್ನು ಜನರು ಗುರುತಿಸುತ್ತಿದ್ದಾರೆ. ನನಗೂ ಧೈರ್ಯ ಬಂದಿದೆ. “ಅಮೃತಾಂಜನ್‌” ನಂತರ ಸಿಕ್ಕ ಮೊದಲ ಚಿತ್ರವೇ “ಸಿಕ್ಸ್‌” ಅಭಿಮನ್‌ ರಾಯ್‌ ಸರ್‌ ಸ್ಟೇಟ್‌ ಅವಾರ್ಡ್‌ ವಿನ್ನರ್‌ ಆಗಿದ್ದರೂ, ಅವರು ತುಂಬಾನೇ ಸಿಂಪಲ್.‌ ಅವರನ್ನು ಭೇಟಿ ಮಾಡಿದಾಗ ಅವರು ಕಥೆ ಹೇಳಿದ ರೀತಿ, ನನ್ನ ಪಾತ್ರ ಕಟ್ಟಿಕೊಟ್ಟಿರುವ ರೀತಿ ತುಂಬಾ ಚೆನ್ನಾಗಿತ್ತು. ಅದೊಂದು ಹೊಸ ರೀತಿಯ ಪಾತ್ರ. ಚಾಲೆಂಜಿಂಗ್‌ ಎನಿಸಿದೆ. ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನ್ನದು ಒಬ್ಬ ಟೀ ಟೇಸ್ಟರ್‌ ಪಾತ್ರ. ಹಾಗಂತ ಕಡಿಮೆ ಜನರಿಗೆ ಗೊತ್ತಿರುತ್ತೆ. ಅಂಥದ್ದೊಂದು ಹೊಸಬಗೆಯ ಪಾತ್ರ ಹೆಣೆದು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಹಾಗೆ ನೋಡಿದರೆ, ಈ ಪಾತ್ರಕ್ಕೆ ಸಾಕಷ್ಟು ನಾಯಕಿಯರ ಹುಡುಕಾಟ ನಡೆಸಿದ್ದಾರೆ ಎಂಬುದು ಗೊತ್ತಾಯ್ತು. ನನಗೆ ಆ ಅವಕಾಶ ಸಿಕ್ಕಿದೆ. ಸಾಧ್ಯವಾದಷ್ಟು ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂಬ ವಿಶ್ವಾಸವಿದೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಹೆಮ್ಮೆ ನನಗಿದೆ” ಎಂಬುದು ಪಾಯಲ್‌ ಚೆಂಗಪ್ಪ ಅವರ ಮಾತು.

ರವಿಚಂದ್ರ, ನಟ

ವಿಲನ್‌ ಅಂದರೆ ಸ್ಪೆಷಲ್!
ಈ “ಸಿಕ್ಸ್‌”ನ ಮತ್ತೊಂದು ಕೇಂದ್ರ ಬಿಂದು ಅಂದರೆ, ಅದು ರವಿಚಂದ್ರ. ಯಾರು ಈ ರವಿಚಂದ್ರ ಅಂದರೆ, ಇಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲ. ಆದರೆ, “ಸಿಕ್ಸ್‌” ಸಿನಿಮಾ ರಿಲೀಸ್‌ ನಂತರ ಖಂಡಿತವಾಗಿಯೂ ಈ ರವಿಚಂದ್ರ ಒಂದಷ್ಟು ಮಂದಿಗೆ ಗೊತ್ತಾಗುತ್ತಾರೆ. ಅದಕ್ಕೆ ಕಾರಣ, “ಸಿಕ್ಸ್‌” ಚಿತ್ರದಲ್ಲಿರುವ ಇವರ ಪಾತ್ರ. ಹೌದು, ತಮ್ಮ “ಸಿಕ್ಸ್‌” ಸಿನಿಮಾ ಕುರಿತು ಹೇಳುವ ರವಿಚಂದ್ರ, “ಇದು ನನ್ನ ಮೂರನೇ ಹೆಜ್ಜೆ. ಇದಕ್ಕೂ ಮೊದಲು ನಾನು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆ. ಕಿರುತೆರೆ ಬಳಿಕ ಒಂದು ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿತು. ಅದಾದ ಬಳಿಕ ನಾನೀಗ “ಸಿಕ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ವಿಲನ್‌ ಪಾತ್ರ ಏನೆಲ್ಲಾ ಮಾಡುತ್ತೆ ಅನ್ನೋದೇ ಸಸ್ಪೆನ್ಸ್.‌ ನನಗೂ ಈ ಚಿತ್ರದ ಪಾತ್ರ ಚಾಲೆಂಜಿಂಗ್‌ ಎನಿಸಿದೆ. ಸದಾ ಕ್ಲೀನ್‌ ಶೇವ್‌ ಮಾಡ್ಕೊಂಡ್‌ ಇರುತ್ತಿದ್ದೆ. ನಿರ್ದೇಶಕರು ನೋಡಿ, ದಾಡಿ, ಕೂದಲು ಬಿಡಿ ಅಂತ ಹೇಳಿ ನಂತರ, ಫೋಟೋ ಶೂಟ್‌ ಮಾಡಿಸಿ, ಒಂದು ಲುಕ್‌ ಬಂದ ನಂತರ, ಸಿನಿಮಾದಲ್ಲಿ ಮಾಡಿಸಿದ್ದಾರೆ. ಪಾತ್ರಕ್ಕಾಗಿಯೇ ನನಗೆ ಮಾಡಿಸಿದ್ದಾರೆ.ʼ ಎನ್ನುತ್ತಾರೆ ರವಿಚಂದ್ರ.

Categories
ಸಿನಿ ಸುದ್ದಿ

ದುಬಾರಿಯಾದ ಶ್ರೀಲೀಲ! ಧ್ರುವ ಸರ್ಜಾ ಜೊತೆ ಫಸ್ಟ್‌ ಮೀಟ್‌

ಜನವರಿಯಲಿ ದುಬಾರಿ ಶುರು

ಸಿನಿಮಾ ಅಂದರೆ, ಅಲ್ಲೊಂದಷ್ಟು ಗಾಸಿಪ್‌ಗಳು ಸಹಜ. ಅಂತೆ ಕಂತೆ ವಿಷಯಗಳೂ ಸಾಮಾನ್ಯ. ಸ್ಟಾರ್‌ ನಟರ ಒಂದು ಹೊಸ ಚಿತ್ರ ಅನೌನ್ಸ್‌ ಆಗಿಬಿಟ್ಟರೆ ಮುಗೀತು, ಆ ಚಿತ್ರದ ಬಗ್ಗೆ ಒಂದಷ್ಟು ಹೊಸ ಬಗೆಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಅಸಲಿಗೆ ಅಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನೋ ವಿಷಯ ಆ ಕಥೆಗಾರನಿಗೆ ಗೊತ್ತಿರಲ್ಲ. ಆದರೂ, ಹೊರಗಡೆಯಿಂದ ಹಾಗಂತೆ, ಹೀಗಂತೆ ಎಂಬ ಸುದ್ದಿಗಳು ಹರಿದಾಡುತ್ತವೆ.

ಶ್ರೀಲೀಲ

ಹಾಗಂತ, ಈ ವಿಷಯ ಕನ್ನಡದ ಸ್ಟಾರ್ ಸಿನಿಮಾಗಳಿಗೆ ಹೊಸದಲ್ಲ ಬಿಡಿ.‌ ಇಲ್ಲೀಗ ಹೇಳಹೊರಟಿರುವ ವಿಷಯವಿಷ್ಟೇ, ಇತ್ತೀಚೆಗೆ ಧ್ರುವಸರ್ಜಾ ಅಭಿನಯದ “ದುಬಾರಿ” ಸಿನಿಮಾ ಪೂಜೆ ಕಂಡಿದ್ದು ಎಲ್ಲರಿಗೂ ಗೊತ್ತಿದೆ. “ಪೊಗರು” ಸಿನಿಮಾ ಬಳಿಕ ನಂದಕಿಶೋರ್‌ ಅವರು ಪುನಃ ಧ್ರುವ ಸರ್ಜಾ ಅವರ ಜೊತೆಗೂಡಿ ಈ ಚಿತ್ರ ಶುರುಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಉದಯ್‌ ಮೆಹ್ತಾ ನಿರ್ಮಾಪಕರು. ಈ ಚಿತ್ರವನ್ನು ಅನೌನ್ಸ್‌ ಮಾಡಿದಾಗ ಯಾರು ನಾಯಕಿ ಅನ್ನೋದು ಗೊತ್ತಿರಲಿಲ್ಲ. ಈಗ ನಿರ್ದೇಶಕ ನಂದಕಿಶೋರ್‌ ಶ್ರೀಲೀಲ ಚಿತ್ರದ ನಾಯಕಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಂದಕಿಶೋರ್‌, ನಿರ್ದೇಶಕರು

ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಶ್ರೀಲೀಲಾ ಹೈಲೈಟ್.‌ ಅವರೊಂದಿಗೆ ಇನ್ನೂ ನಾಲ್ವರು ಜೊತೆಗೂಡುತ್ತಿದ್ದಾರೆ. “ರನ್ನ” ಸಿನಿಮಾದಲ್ಲೂ ರಚಿತಾರಾಮ್‌ ಲೀಡ್‌ ಪಾತ್ರ ಮಾಡಿದ್ದರೂ, ಜೊತೆಯಲ್ಲಿ ಹರಿಪ್ರಿಯಾ ಇದ್ದಂತೆ, ಇಲ್ಲೂ ಹಾಗೆಯೇ ಒಂದಷ್ಟು ನಾಯಕಿಯರು ಇರಲಿದ್ದಾರೆ. ಇದೊಂದು ಪಕ್ಕಾ “ಫ್ಯಾಮಿಲಿ” ಸಬ್ಜೆಕ್ಟ್‌ ಎಂಬುದು ನಂದಕಿಶೋರ್‌ ಅವರ ಮಾತು.

ಉದಯ್‌ ಮೆಹ್ತಾ, ನಿರ್ಮಾಪಕರು

ಇನ್ನು, ಅವರ “ಪೊಗರು” ಸಿನಿಮಾ ಜನವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದ್ದು, ಈಗಾಗಲೇ ಎಲ್ಲೆಡೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. “ಪೊಗರು” ಜನವರಿಯಲ್ಲಿ ಹೊರಬಂದರೆ, ಜನವರಿಯಲ್ಲೇ “ದುಬಾರಿ” ಚಿತ್ರಕ್ಕೂ ಚಾಲನೆ ಸಿಗಲಿದೆ. ಶ್ರೀಲೀಲಾ “ಕಿಸ್‌” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ ಶ್ರೀಮುರಳಿ ಜೊತೆ “ಭರಾಟೆ”ಯಲ್ಲೂ ಕಾಣಿಸಿಕೊಂಡರು. ಈಗ “ದುಬಾರಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅದೇನೆ ಇರಲಿ, ಕನ್ನಡದ ಹುಡುಗಿಯನ್ನೇ ನಿರ್ದೇಶಕರು ತಮ್ಮ “ದುಬಾರಿ” ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಪರಭಾಷೆ ನಾಯಕಿ ನಟಿಯಂತೆ ಎಂಬ ಸುದ್ದಿ ಹರಿದಾಡಿತ್ತು. ಅದು ಹಲವು ಪ್ರಶ್ನೆಗಳಿಗೂ ಕಾರಣವಾಗಿತ್ತು. ಈಗ ನಂದಕಿಶೋರ್‌, ಅದಕ್ಕೆಲ್ಲಾ ತೆರೆ ಎಳೆದಿದ್ದಾರೆ. ಇನ್ನು, ಈ ಚಿತ್ರದಲ್ಲಿ ಶ್ರೀಲೀಲ ಅವರೊಂದಿಗೆ ಇನ್ನೂ ಬೆರಳೆಣಿಕೆಯಷ್ಟು ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿಯನ್ನೂ ಹೊರಹಾಕಿರುವ ನಂದಕಿಶೋರ್‌, ಯಾರೆಲ್ಲಾ ಇರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ. ಇನ್ನು, ಈ ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತವಿದೆ.

error: Content is protected !!