ದರ್ಶನ್ ಮಾತಿಗೆ ಸಾಥ್ ಕೊಡ್ತಾರಾ ಸ್ಯಾಂಡಲ್ ವುಡ್ ಸ್ಟಾರ್ಸ್?

ಚಿತ್ರಮಂದಿರಗಳು ಉಳಿಯಬೇಕಾದ್ರೆ, ಸ್ಟಾರ್‌ಗಳು ಸೇರಿ ಚಿತ್ರೋದ್ಯಮ ಬೀದಿಗಿಳಿಯಲೇಬೇಕಿದೆ…

ಕೊನೆಗೂ ಒಟಿಟಿ (ಒವರ್‌ ದಿ ಟಾಪ್) ಲಾಭಿಯ ವಿರುದ್ಧ ಚಿತ್ರರಂಗದ ಆಕ್ರೋಶ ಸ್ಪೋಟಗೊಂಡಿದೆ. ಅದರ ವಿರುದ್ಧದ ಮೊದಲ ಧ್ವನಿಯಾಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗುಡುಗಿದ್ದಾರೆ. ಕೆಲವರಿಗೆ ಇದು ಹೇಗೆ ಅಂತ ಅಚ್ಚರಿ. ಮತ್ತೆ ಕೆಲವರಿಗೆ ಇದೆಲ್ಲ ಇರುತ್ತಾ ಅನ್ನೋದೇ ಅನುಮಾನ.‌ ಆದರೂ ಇದು ವಾಸ್ತವ. ಹಾಗೆ ನೋಡಿದರೆ, ಇದರ ವಿರುದ್ಧ ಈ ಹೊತ್ತಿಗೆ ಭಾರತೀಯ ಚಿತ್ರರಂಗವೇ ಗಟ್ಟಿಯಾದ ಧ್ವನಿ ಎತ್ತಬೇಕಿತ್ತು. ದಾಖಲೆ ಬ್ರೇಕ್‌ ಮಾಡಿದವರು ಕೂಡ, ಅಂಬಾನಿ ಕ್ಯಾರೇ ಅಂತ ಕೇಳಬೇಕಿತ್ತು. ಅದು ಅವರಿಗೆ ಬೇಕಿಲ್ಲ. ಆದರೆ ದರ್ಶನ್‌ ಮಾತ್ರ ಗುಡುಗಿದ್ದಾರೆ. ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ ಇದೆ. ಅದೇ ದೃಷ್ಟಿಯಿಂದ ನಾನು ಮಾತನಾಡಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಂತಲೂ ಅವರು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಲಾಭ ಎನ್ನುವುದಕ್ಕಿಂತ ಚಿತ್ರೋದ್ಯಮದ ಹಿತಕ್ಕಾಗಿ ಅವರು ಅಬ್ಬರಿಸಿದ್ದಾರೆ. ಇದೇ ಎದೆಗಾರಿಕೆಯನ್ನು ಕನ್ನಡದ ಅಷ್ಟೂ ಸ್ಟಾರ್ಸ್‌ ಮಾತನಾಡ್ತಾರಾ ? ಇದು ಕನ್ನಡದ ಸಿನಿಮಾ ಪ್ರೇಮಿಗಳಿಗಿರುವ ಕುತೂಹಲದ ಪ್ರಶ್ನೆ.

ನಾಡು, ನುಡಿ ವಿಚಾರ ಬಂದಾಗ, ಚಿತ್ರೋದ್ಯಮಕ್ಕೆ ಸಂಕಷ್ಟ ಎದುರಾದಾಗ, ಕನ್ನಡ ಭಾಷೆ ಮತ್ತು ಕನ್ನಡದ ಸ್ಟಾರ್‌ಗಳಿಗೆ ಅವಮಾನ ಆದಾಗ ಇಡೀ ಚಿತ್ರರಂಗ ಬೀದಿಗಿಳಿದು ಹೋರಾಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಹೆಚ್ಚು ಕಡಿಮೆ ಒಂದು-ಒಂದೂವರೆ ವರ್ಷಗಳ ಹಿಂದೆ ಮಹಾದಾಯಿ ನೀರಿಗಾಗಿಯೂ ಚಿತ್ರರಂಗ ಬೀದಿಗಿಳಿದು ಹೋರಾಟ ನಡೆಸಿದ್ದನ್ನು ಉತ್ತರ ಕರ್ನಾಟಕದ ಜನ ಮರೆತಿಲ್ಲ. ಅಂತಹದರಲ್ಲಿ ಚಿತ್ರರಂಗದ ಜೀವಾಳವೇ ಆದ ಚಿತ್ರ ಮಂದಿರಗಳನ್ನೇ ನುಂಗುತ್ತಿರುವ “ಒಟಿಟಿʼ ಎನ್ನುವ ಹಣ ದೋಚುವ ಮಾಫಿಯಾದ ವಿರುದ್ಧ ಕನ್ನಡದ ಚಿತ್ರರಂಗ ಬೀದಿಗಿಳಿಯದೆ ಇರುತ್ತಾ ? ಸ್ಟಾರ್‌ ಗಳು ಮಾತನಾಡದೆ ಇರುತ್ತಾರಾ? ಜನಕ್ಕೆ ಇಂತಹದೊಂದು ಕುತೂಹಲವೂ ಶುರುವಾಗಿದೆ. ಅದಕ್ಕೆ ಕಾರಣ ದರ್ಶನ್‌ ಮಾತು. ಯಾಕಂದ್ರೆ, ನಟ ದರ್ಶನ್‌ ಸುಮ್ಮನೆ ಮಾತನಾಡಲಾರರು. ಅದರಲ್ಲೂ, ದೇಶದ ಅತೀ ದೊಡ್ಡ ಶ್ರೀಮಂತ ಉದ್ಯಮಿ ಅಂಬಾನಿ ಅವರ ʼ೫ಜಿʼ ಲಾಭಿ ವಿರುದ್ಧ ಮಾತನಾಡುತ್ತಾರೆಂದರೆ,ಅದು ತಮಾಷೆಯೂ ಅಲ್ಲ.

ಅಂಬಾನಿ ಕೈ ಯಿಟ್ಟರೆ, ಕಟೌಟ್‌ ಕಟ್ಟುವರು ಇರೋದಿಲ್ಲ !

ಯಾರದೋ ವೈಯಕ್ತಿಕ ಅಭಿಪ್ರಾಯಕ್ಕೆ ನಾವೆಲ್ಲ ಧ್ವನಿ ಗೂಡಿಸಬೇಕಾ? ದರ್ಶನ್‌ ಮಾತಿಗೆ ಬೆಂಬಲಿಸುತ್ತೀರಾ ಅಂತ ಕೇಳಿದ್ರೆ ಉಳಿದವರು ಹೀಗೆಲ್ಲ ಹೇಳಿಬಿಡಬಹುದು. ಅಥವಾ ಪ್ರತಿಕ್ರಿಯಿಸದೆಯೂ ನಾಜೂಕಾಗಿ ನುಣುಚಿಕೊಳ್ಳಬಹುದು. ಆದರೆ ಅವರೆಲ್ಲ ಸ್ಟಾರ್‌ ಆಗಿದ್ದು, ಐಷಾರಾಮಿ ಬದುಕು ಕಟ್ಟಿಕೊಂಡಿದ್ದೂ ಎಲ್ಲವೂ ಚಿತ್ರ ಮಂದಿರಗಳು ಇದ್ದ ಕಾರಣಕ್ಕಾಗಿಯೇ ಎನ್ನುವುದನ್ನು ಮರೆಯಬಾರದು. ಹಾಗೊಂದು ವೇಳೆ ನಮ್ಮಗ್ಯಾಕೆ ಈ ಉಸಾಬರಿ ಅಂತಲೂ ಸುಮ್ಮನಿರಬಹುದು. ಮುಂದಿನ ಪರಿಣಾಮ ಘೋರವಾಗಿರಲಿದೆ ಎನ್ನುವುದು ಮಾತ್ರ ಸತ್ಯ. ಯಾಕಂದ್ರೆ, ಜಾಗತೀಕರಣ ಎಲ್ಲವನ್ನು ನುಂಗುತ್ತಿದೆ. ಸರ್ಕಾರಗಳು ಕೂಡ ಉದ್ಯಮಿಪತಿಗಳ ಕೈ ಕೆಳಗಿವೆ. ಮುಂದೆ ಅಂಬಾನಿಯೇ ಚಿತ್ರೋದ್ಯಮದ ನಿಯಂತ್ರಣಕ್ಕೆ ಕೈ ಹಾಕಿದರೆ, ಆಗೆಲ್ಲ ಸ್ಟಾರ್‌ ಗಳಿಗೆ ಕಟೌಟ್‌ ಕಟ್ಟುವವರು ಇರೋದಿಲ್ಲ. ಮನೆ ಬಾಗಿಲಿಗೆ ಬಂದು ಹುಟ್ಟು ಹಬ್ಬ ಆಚರಿಸವವರು ಇರೋದಿಲ್ಲ.
…………………

ಈಗ ಅಂಬಾನಿ ಅಂದ್ರೆ ಯಾರು ಅಂತಲೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸರ್ಕಾರಗಳಿಗೇ ಅಂಬಾನಿ ಪರಮಾಪ್ತರು. ಅಂತಹದರಲ್ಲಿ ಅಂಬಾನಿ ಅವರ ʼ5ಜಿʼ ಲಾಭಿ ವಿರುದ್ಧ ಮಾತನಾಡುವುದೆಂದರೆ ಅದಕ್ಕೂ ಗುಂಡಿಗೆ ಬೇಕು. ಆದರೂ ದರ್ಶನ್‌ ಮಾತನಾಡಿದ್ದಾರೆಂದರೆ, ಚಿತ್ರರಂಗಕ್ಕೆ 5ಜಿ ಮಾರಕ ಎನ್ನುವುದನ್ನು ಇಡೀ ಚಿತ್ರೋದ್ಯಮ ಕೂಡ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನಷ್ಟು ದಿನ ಚಿತ್ರಮಂದಿರಗಳು ಹೀಗೆಯೇ ಬಾಗಿಲು ಮುಚ್ಚಿಕೊಂಡರೆ ಮುಂದೆ ಶಾಶ್ವತವಾಗಿಯೇ ಡೋರ್‌ ಕ್ಲೋಸ್‌ ಮಾಡಬೇಕಾಗುತ್ತದೆ. ಆಗೆಲ್ಲ ಸ್ಟಾರ್‌ ಸಿನಿಮಾಗಳು ಕೂಡ ಒಟಿಟಿ ಲಾಭಿಗೆ ಸಿಲುಕಬೇಕಾಗುತ್ತದೆ. ಈಗ ಕಂಟೆಂಟ್‌ ಇದ್ದರೆ, ಕೋಟಿ ಎನ್ನುವ ʼಒಟಿಟಿʼ ಲಾಭಿಗೆ ಮುಂದೆ , ಕೇಳಿದಷ್ಟು ಹಣಕ್ಕೆ ಸಿನಿಮಾ ಕೊಟ್ಟು, ನಿರ್ಮಾಪಕರು ಮನೆ ಕಡೆ ಮುಖ ಮಾಡಬೇಕಾಗುತ್ತದೆ. ಅಲ್ಲಿಂದ ಮುಂದಿನದು, ವಿವರಿಸಲು ಅಸಾಧ್ಯವಾದ ಪರಿಸ್ಥಿತಿ ! ದರ್ಶನ್‌ ಈಗ ಇದರ ವಿರುದ್ಧವೇ ಧ್ವನಿ ಎತ್ತಿದ್ದಾರೆ. ಮುಂದೆ ಆಗುವ ಆನಾಹುತಕ್ಕೆ ಚಿತ್ರರಂಗ ಸಿಲುಕಿಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕಾದರೆ, ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಗಳೆಲ್ಲ ಮೊದಲ ಸಾಲಿನಲ್ಲಿ ನಿಂತು ಮಾತನಾಡಬೇಕಿದೆ. ಆನಂತರ ಇಡೀ ಉದ್ಯಮ ಧ್ವನಿ ಎತ್ತಿದರೆ, ಚಿತ್ರ ಮಂದಿರಗಳು ಉಳಿದುಕೊಳ್ಳಲಿವೆ.

Related Posts

error: Content is protected !!