Categories
ಸಿನಿ ಸುದ್ದಿ

ಹೀರೋ ಆಗಿ ಜಿಮ್ ರವಿ – ಅವರೀಗ ಪುರುಷೋತ್ತಮ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎ.ವಿ.ರವಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ‌ ಗುರುತಿಸಿಕೊಂಡಿದ್ದ ರವಿ ಅವರನ್ನು ಅಭಿಮಾನದಿಂದ ಜಿಮ್‌ರವಿ ಎಂದೇ ಕರೆಯುವುದುಂಟು. ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ‌ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಈವರೆಗೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ಅವರು, ’ರವಿ ಜಿಮ್’ ತರಬೇತಿ ಶಾಲೆ ಶುರು ಮಾಡಿ ಕಳೆದ ಮೂರು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

ಈವರೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ರವಿ ಈಗ ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ಹೌದು ರವಿ ಈಗ, ’ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಚಿತ್ರದ ಮಹೂರ್ತ ನಡೆಯಿತು. ಕಲಾಸಾಮ್ರಾಟ್ ಎಸ್.ನಾರಾಯಣ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಜೈಜಗದೀಶ್, ವಿಜಯಲಕ್ಷೀಸಿಂಗ್, ತುರುವೆಕೆರೆ ಶಾಸಕ ಮಸಾಲೆಜಯರಾಂ ಮುಂತಾದವರು ಶುಭ ಹಾರೈಸಿದ್ದಾರೆ.
ಚಿತ್ರಕ್ಕೆ ಎಸ್.ವಿ.ಅಮರನಾಥ್ ನಿರ್ದೇಶಕರು. ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಜವಬ್ದಾರಿ ಕೂಡ ಅವರದೇ.

ತಮ್ಮ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶ ಎಸ್.ವಿ.ಅಮರನಾಥ್‌, ರವಿ ಅವರನ್ನು ಈವರೆಗೆ ಕ್ರೀಡಾಪಟು, ಕಲಾವಿದರನ್ನಾಗಿ ನೋಡಿದ್ದೀರಾ. ಈಗ ಅವರಲ್ಲಿರುವ ಹೊಸ ಪ್ರತಿಭೆಯನ್ನು ಬೇರೆ ರೀತಿ ಪರದೆ ಮೇಲೆ ತೋರಿಸವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ. ಹಾಗಂತ ಇಲ್ಲಿ ಕ್ರೀಡೆ, ಆಕ್ಷನ್ ದೃಶ್ಯಗಳು ಇರುವುದಿಲ್ಲ. ಪೂರ್ಣ ಪ್ರಮಾಣದ ಹಾಸ್ಯದ ಎಳೆಯಲ್ಲೇ ಕಥೆ ಸಾಗುತ್ತದೆ. ಮಧ್ಯಮ ವರ್ಗದ ಕುಟುಂಬದವರು ಪ್ರತಿ ನಿತ್ಯ ಏನಾದರೂ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಆ ರೀತಿಯ ದೊಡ್ಡ ಚಾಲೆಂಜ್ ಇವರ ಬದುಕಲ್ಲಿ ಬಂದಾಗ, ಅದನ್ನು ಹೇಗೆ ನಿಭಾಯಿಸುತ್ತಾರೆ. ಇಲ್ಲಿ ನಾಯಕ ದೇಹ ಶಕ್ತಿಯನ್ನು ಪ್ರದರ್ಶಿಸದೆ, ಕೇವಲ ಬುದ್ದಿ ಶಕ್ತಿಯಿಂದ ಹೇಗೆಲ್ಲಾ ಅವಘಡಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಸಾರಾಂಶ.

ಬೆಂಗಳೂರು, ಮೈಸೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕರು ಕಥೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಇಲ್ಲಿ ವ್ಯವಸ್ಥೆಗೊಳಿಸಿದ್ದಾರೆ. ನಾಯಕಿ ಸೇರಿದಂತೆ ಇತರೆ ಆಯ್ಕೆ ಪ್ರಕ್ರಿಯೆ ಇಷ್ಟರಲ್ಲೇ ಆಗಬೇಕಿದೆ ಎನ್ನುತ್ತಾರೆ ಅವರು.
ಮೊದಲ ಸಲ ತೆರೆ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ರವಿ, ಡಾ.ರಾಜ್‌ಕುಮಾರ್ ಅಭಿಮಾನಿಯಾಗಿ, ಅಣ್ಣಾವ್ರು ಹೇಳಿದ ಒಂದು ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನಾಯಕನಿಂದ ಒದೆ ತಿನ್ನಿಸಿಕೊಳ್ಳುತ್ತಿರುವ ದೃಶ್ಯಗಳನ್ನು ನೋಡಿತ್ತಿದ್ದ ಹಿತೈಷಿಗಳು, ನೀವು ಯಾವಾಗ ಹೀರೋ ಆಗೋದು ಅಂತ ಕೇಳುತ್ತಲೇ ಇದ್ದರು.

ಅದಕ್ಕೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕರು ಯಾವುದೇ ಪಾತ್ರ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತಿದ್ದೆ. ನಾನು ಹಣದ ಹಿಂದೆ ಯಾವತ್ತು ಹೋಗಿರಲಿಲ್ಲ. ಈ ಚಿತ್ರದ ಪಾತ್ರಕ್ಕಾಗಿ ಹದಿನೆಂಟು ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ” ಎಂದು ಮನವಿ ಮಾಡಿಕೊಂಡರು. ಆನಂದ್‌ ಪ್ರಿಯಾ, ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತವಿದೆ. ಅರ್ಜುನ್ ಕಿಟ್ಟು ಸಂಕಲನವಿದೆ. ಬೇಬಿ ಅಂಕಿತಮೂರ್ತಿ ಇತರರು ಇದ್ದರು.

Categories
ಸಿನಿ ಸುದ್ದಿ

ಸಖತ್‌ ಸೌಂಡ್‌ ಮಾಡಿದ ಶುಗರ್ ಫ್ಯಾಕ್ಟರಿ ಫಸ್ಟ್‌ ಲುಕ್‌ ಪೋಸ್ಟರ್‌ !

ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಸೊನಾಲ್‌ ಮಾಂಟೆರೊ ಅಭಿನಯದ ʼಶುಗರಿ ಫ್ಯಾಕ್ಟರಿʼ ಸೌಂಡ್‌ ಮಾಡುತ್ತಿದೆ. ಚಿತ್ರಕ್ಕೆ ಈಗ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಸುತ್ತ ಮುತ್ತ  12 ದಿನಗಳ ಕಾಲ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ನಡೆಸಿದೆ ಚಿತ್ರ ತಂಡ. ಡಾರ್ಲಿಂಗ್‌ ಕೃಷ್ಣ, ಸೊನಾಲ್‌ ಮಾಂಟೆರೊ ಜತೆಗೆ ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಸೂರಜ್ ಮತ್ತಿತರರು ಚಿತ್ರದಲ್ಲಿದ್ದು, ಪಕ್ಕ ಲವ್‌ ಸ್ಟೋರಿಯ ಮೂಲಕ ಈ ಚಿತ್ರ ಕುತೂಹಲ ಮೂಡಿಸಿದೆ.


ಈ ಮಧ್ಯೆ ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಫೆ. 14 ರಂದು  ಚಿತ್ರ ತಂಡ ಲಾಂಚ್‌ ಮಾಡಿದ್ದ ಚಿತ್ರದ ಫಸ್ಟ್‌ ಲುಕ್‌ ಭರ್ಜರಿ ಸದ್ದು ಮಾಡಿದೆ. ಸಿನಿಮಾ ಅಭಿಮಾನಿಗಳಿಂದ ಈ ಪೋಸ್ಟರ್‌ ಗೆ ಸಖತ್‌ ಮೆಚ್ಚುಗೆ ಸಿಕ್ಕಿದ್ದು ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ. ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿರ್ದೇಶನ ಈ ಚಿತ್ರಕ್ಕೆ ಮಾರ್ಚ್‌ ಎರಡನೇ ವಾರ ಗೋವಾದಲ್ಲಿ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯಕ್ಕೆ ಚಿತ್ರ ತಂಡ ಅದರ ಸಿದ್ಧತೆಯಲ್ಲಿ ಬ್ಯುಸಿ ಆಗಿದೆ. ಬಾಲ ಮಣಿ ಪ್ರೊಡಕ್ಷನ್‌ ಲಾಂಛನದಲ್ಲಿ ಆರ್.‌ ಗಿರೀಶ್‌ ಈ ಚಿತ್ರ ನಿರ್ಮಿಸುತ್ತಿದ್ದು, ಸಂತೋಷ್‌ ರೆ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ರಿತೇಷ್‌-ಜೆನಿಲಿಯಾ ದಂಪತಿಗೆ ಸುದೀಪ್‌ ಪಾರ್ಟಿ! ಮುಂಬೈಯಲ್ಲಿ ಕಿಚ್ಚ!

ಸಿನಿಮಾ ಬದುಕಿನ ಇಪ್ಪತ್ತೈದು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್ ಇದೀಗ ಮುಂಬಯಿಯಲ್ಲಿದ್ದಾರೆ. ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಅವರಿಗೆ ಬಾಲಿವುಡ್‌ನಲ್ಲಿ ಹಲವು ಆಪ್ತ ಗೆಳೆಯರಿದ್ದಾರೆ. ಆಗಿಂದಾಗ್ಗೆ ಕಾಣಿಸುವ ಬಾಲಿವುಡ್ ನಟ-ನಟಿಯರೊಂದಿಗಿನ ಸುದೀಪ್ ಫೋಟೋಗಳು ಇದನ್ನು ಸಾರಿ ಹೇಳುತ್ತವೆ. ರಿತೇಷ್ ದೇಶ್‌ಮುಖ್ ಮತ್ತು ಜೆನಿಲಿಯಾ ತಾರಾದಂಪತಿಗೆ ನಿನ್ನೆ ಸುದೀಪ್‌ ಔತಣಕೂಟ ಏರ್ಪಡಿಸಿದ್ದಾರೆ. ನಟಿ ಜೆನಿಲಿಯಾ ಟ್ವಿಟರ್‌ನಲ್ಲಿ ಪಾರ್ಟಿ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

“ನಾವು ಕಂಡ ಅಪರೂಪದ ವ್ಯಕ್ತಿತ್ವದ ಸುದೀಪ್‌ ಜೊತೆಗಿನ ಔತಣಕೂಟ ಸೂಪರ್ ಆಗಿತ್ತು. ನಾವು ಸಾಕಷ್ಟು ನೆನಪುಗಳನ್ನು ಮೆಲುಕು ಹಾಕಿದೆವು. ನಿಜಕ್ಕೂ ಸುದೀಪ್ ಪತ್ನಿ ಪ್ರಿಯಾ ಮತ್ತು ಪುತ್ರಿ ಸಾನ್ವಿಯನ್ನು ಮಿಸ್ ಮಾಡಿಕೊಂಡೆವು” ಎಂದು ಜೆನಿಲಿಯಾ ಫೊಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುದೀಪ್‌, “ನೀವಿಬ್ಬರೂ ಇದ್ದೆಡೆ ಸಾಕಷ್ಟು ಎನರ್ಜಿ ಇರುತ್ತದೆ. ಲವ್ ಯೂ!” ಎಂದು ಟ್ವೀಟಿಸಿದ್ದಾರೆ. ಸದ್ಯ ಸುದೀಪ್ ತಮ್ಮ ಮಹತ್ವಾಕಾಂಕ್ಷೆಯ ‘ವಿಕ್ರಾಂತ್ ರೋಣಾ’ ಚಿತ್ರದ ಪ್ರೊಮೋಷನ್ ಮೂಡ್‌ನಲ್ಲಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ನಟಿಸಿದ್ದಾರೆ.

Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ರಾಧೆ ಶ್ಯಾಮ್ ಟೀಸರ್ ಔಟ್ – ಅಭಿಮಾನಿಗಳಿಗೆ ಇದು ವ್ಯಾಲೆಂಟೇನ್ ಗಿಫ್ಟ್


ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಟೀಸರ್ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ರೊಮ್ಯಾಂಟಿಕ್ ಸಿನಿಮಾ ತೆಲುಗು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಕನ್ನಡ, ತಮಿಳು ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳು ತೆರೆಕಾಣಲಿವೆ. ಸದ್ಯ ಈಗ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ‘ಬಾಹುಬಲಿ’ಯ ಆಕ್ಷನ್ ಹೀರೋ ಪ್ರಭಾಸ್ ಇಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಅನುಭೂತಿ ನೀಡುವ ಹಿನ್ನೆಲೆ, ವಿದೇಶದ ಆಕರ್ಷಕ ರೈಲ್ವೆ ನಿಲ್ದಾಣವೊಂದರ ಸನ್ನಿವೇಶ ಟೀಸರ್ ನಲ್ಲಿದೆ. ನಾಯಕ ತುಂಟುತನದಿಂದ ಕೂಗುತ್ತಾ ನಾಯಕಿಯನ್ನು ಒಲೈಸುವ ಈ ಪುಟ್ಟ ಸೀನ್ ಇದೊಂದು ರೊಮ್ಯಾಂಟಿಕ್ ಸಿನಿಮಾ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತದೆ. “ನೀನು ರೋಮಿಯೋ ಎಂದುಕೊಂಡಿದ್ದೀಯಾ?” ಎನ್ನುವ ನಾಯಕಿಯ ಪ್ರಶ್ನೆಗೆ ನಾಯಕ,

“ನಾನು ಅವನಂತೆ ಅಲ್ಲ. ಅವನು ಪ್ರೀತಿಗಾಗಿ ಸಾಯುತ್ತಾನೆ. ಆದರೆ ನಾನು ಹಾಗಲ್ಲ!” ಎನ್ನುತ್ತಾನೆ.
‘ರಾಧೆ ಶ್ಯಾಮ್’ ಚಿತ್ರದ ಶೂಟಿಂಗ್ ಕೋವಿಡ್‌ನಿಂದಾಗಿ ಕಳೆದ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು. ಡಿಸೆಂಬರ್‌ನಲ್ಲಿ ಮತ್ತೆ ಚಿತ್ರೀಕರಣ ಆರಂಭವಾಗಿ ಇನ್ನೇನು ಮುಗಿಯುವ ಹಂತದಲ್ಲಿದೆ.

ಚಿತ್ರದ ಇತರೆ ತಾರಾಬಳಗದಲ್ಲಿ ಸತ್ಯರಾಜ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಜಗಪತಿ ಬಾಬು, ಜಯರಾಂ ನಟಿಸುತ್ತಿದ್ದಾರೆ. ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ತೆಲುಗು ಅವತರಣಿಕೆಗೆ ಜಸ್ಟಿನ್ ಪ್ರಭಾಕರ್ ಸಂಗೀತ ಸಂಯೋಜಿಸಿದ್ದರೆ ಹಿಂದಿಗೆ ಮಿಥುನ್ ಮತ್ತು ಮನನ್ ಭಾರದ್ವಾಜ್ ಸಂಗೀತ ನೀಡಿದ್ದಾರೆ.

Categories
ಟಾಲಿವುಡ್ ಸಿನಿ ಸುದ್ದಿ

ಎರಡನೇ ಮದ್ವೆಗೆ ಸಜ್ಜಾದ ದಿಯಾ!

ಬಾಲಿವುಡ್‌ ನಟಿ ದಿಯಾ ಮಿರ್ಝಾ ಎರಡು ವರ್ಷದ ಹಿಂದೆ ಸಾಹಿಲ್‌ ಸಾಂಘ ಅವರಿಂದ ವಿಚ್ಛೇದನ ಪಡೆದಿದ್ದರು. ಐದು ವರ್ಷಗಳ ಅವರ ದಾಂಪತ್ಯ ಬದುಕು ಕೊನೆಗೊಂಡಿತ್ತು. ಆನಂತರ ಅವರು ಉದ್ಯಮಿ ವೈಭವ್ ರೇಖಿ ಅವರೊಡನೆ ಕಾಣಿಸಿಕೊಂಡಿದ್ದರು. ಸುಮಾರು ಎರಡು ವರ್ಷಗಳ ಡೇಟಿಂಗ್‌ ನಂತರ ಇದೀಗ ಇಬ್ಬರೂ ವಿವಾಹವಾಗುತ್ತಿದ್ದಾರೆ. ದಿಯಾ ಮದುವೆ ವಿಷಯವನ್ನು ಬಹಿರಂಗಪಡಿಸಿಲ್ಲ.

ಫೆಬ್ರವರಿ 15ರಂದು ಅವರ ವಿವಾಹ ಎಂದು ನಿಗಧಿಯಾಗಿದ್ದು, ಕುಟುಂಬದವರು ಹಾಗೂ ಸ್ನೇಹಿತರಷ್ಟೇ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. “ಸಮಾರಂಭ ತೀರಾ ಸರಳವಾಗಿ ನಡೆಯಲಿದ್ದು, ಕುಟುಂಬದ ಆಪ್ತರಷ್ಟೇ ಇರುತ್ತಾರೆ” ಎಂದು ದಿಯಾ ಆಪ್ತರು ಹೇಳುತ್ತಿದ್ದಾರೆ.

ಕಳೆದ ವರ್ಷ ‘ಥಪ್ಪಡ್‌’ ಹಿಂದಿ ಚಿತ್ರದಲ್ಲಿ ನಟಿಸಿದ್ದ ದಿಯಾ ಸದ್ಯ ‘ವೈಲ್ಡ್ ಡಾಗ್‌’ ತೆಲುಗು ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗಾರ್ಜುನ, ಸಯ್ಯಾಮಿ ಖೇರ್ ಮತ್ತು ಅತುಲ್ ಕುಲಕರ್ಣಿ ಚಿತ್ರದ ಇತರೆ ಪ್ರಮುಖ ತಾರೆಯರು.

Categories
ಸಿನಿ ಸುದ್ದಿ

ಮಮತಾ ರಾವ್‌, ಗೌರಿಶಂಕರ್ ಲವ್‌ಸ್ಟೋರಿ! ಇದು ಪ್ರೇಮಿಗಳ ದಿನದ ವಿಶೇಷ

ಡಾ.ರಾಜ್ ಕುಮಾರ್‌, ಮಮತಾರಾವ್‌
  • ಭಗವಾನ್‌ (ದೊರೈ-ಭಗವಾನ್‌), ಹಿರಿಯ ಚಿತ್ರನಿರ್ದೇಶಕ

ಡಾ.ರಾಜಕುಮಾರ್‌, ಸರಿತಾ, ಮಮತಾ ರಾವ್ ಅಭಿನಯದ `ಹೊಸಬೆಳಕು’ (1982) ಶೂಟಿಂಗ್ ಸಂದರ್ಭ. ಈ ಚಿತ್ರಕ್ಕೆ ಬಿ.ಸಿ.ಗೌರಿಶಂಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ದಿಲ್ಲಿಯ ಇಂಡಿಯಾ ಗೇಟ್ ಹಾಗೂ ಇತರೆಡೆ ಚಿತ್ರಿಸಬೇಕೆನ್ನುವುದು ನನ್ನ ಹಾಗೂ ದೊರೈ ಆಸೆಯಾಗಿತ್ತು. ಅದರಂತೆ ಕೆಲವು ದಿನ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದೆವು. ಕರೋಲ್‍ಭಾಗ್‍ನ ಕೈಲಾಶ್ ಹೋಟೆಲ್‍ನ ಲಾಡ್ಜ್‌ ನಲ್ಲಿ ನಮ್ಮೆಲ್ಲರ ವಾಸ.

ಮಮತಾರಾವ್‌, ಗೌರಿಶಂಕರ್‌, ರಕ್ಷಿತಾ

ಅದೊಂದು ದಿನ ಚಿತ್ರೀಕರಣ ಮುಗಿದ ನಂತರ ನಾವೆಲ್ಲರೂ ಲಾಡ್ಜ್‌ನಲ್ಲಿವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಮರುದಿನದ ಚಿತ್ರೀಕರಣಕ್ಕಾಗಿ ಕಾಸ್ಟ್ಯೂಮ್ ಬಗ್ಗೆ ನಟಿ ಮಮತಾ ರಾವ್‍ಗೆ ಮಾಹಿತಿ ನೀಡಬೇಕಿತ್ತು. ಆಕೆಗೆ ತಿಳಿಸುವಂತೆ ಪ್ರೊಡಕ್ಷನ್ ಮ್ಯಾನೇಜರ್‍ಗೆ ಹೇಳಿ ಕಳುಹಿಸಿದೆ. ಆತ ಹೋಗಿ ನೋಡಿದರೆ ಮಮತಾ ರಾವ್ ರೂಂಗೆ ಬೀಗ ಹಾಕಿತ್ತು. ಚಿತ್ರದ ಬಗ್ಗೆ ಚರ್ಚಿಸಲು ನಾನು ಛಾಯಾಗ್ರಾಹಕ ಗೌರಿಶಂಕರ್‍ರನ್ನು ಹುಡುಕಿಕೊಂಡು ಹೋಗಿದ್ದೆ. ಅವರ ರೂಂಗೂ ಬೀಗ ಹಾಕಿತ್ತು. ರಾತ್ರಿಯಾದರೂ ಇಬ್ಬರೂ ಪತ್ತೆಯಿಲ್ಲ! ನಮಗೆ ಅನುಮಾನದ ಜತೆ ಆತಂಕವೂ ಆಗಿತ್ತು. ಕೊನೆಗೂ ಪ್ರತ್ಯಕ್ಷವಾದ ಇಬ್ಬರೂ ಅದೇನೋ ಸಬೂಬು ಹೇಳಿದರು.

ಭಗವಾನ್‌, ನಿರ್ದೇಶಕ

ಮರುದಿನವೂ ಇದು ಪುನರಾವರ್ತನೆಯಾಯ್ತು. ಅಂದು ರಾತ್ರಿ ಅವರು ಲಾ ಡ್ಜ್ ಗೆ ಬಂದಾಗ ತಡರಾತ್ರಿ. “ಕನ್ನಾಟ್ ಪ್ಲೇಸ್‍ನ ಪ್ರವಾಸಿ ತಾಣದ ವೀಕ್ಷಣೆಗೆಂದು ಹೋಗಿದ್ದೆವು. ಕರೋಲ್‍ಭಾಗ್‍ಗೆ ಬರಲು ಯಾವುದೇ ಗಾಡಿ ಸಿಗಲಿಲ್ಲ. ಇಬ್ಬರೂ ನಡೆದುಕೊಂಡೇ ಬರಬೇಕಾಯ್ತು. ಅದಕ್ಕೇ ಇಷ್ಟು ತಡವಾಗಿದೆ!” ಎನ್ನುವ ಕಾರಣ ಕೊಟ್ಟಿದ್ದರು ಗೌರಿಶಂಕರ್. ಕನ್ನಾಟ್ ಪ್ಲೇಸ್‍ನಿಂದ ಕರೋಲ್‍ಭಾಗ್‍ಗೆ ನಡೆದು ಬರುವುದೆಂದರೆ ತಮಾಷೆಯೇ? ಅಲ್ಲಿಗೆ ನಮಗೆಲ್ಲವೂ ಅರ್ಥವಾಗಿತ್ತು! ಮುಂದೆ ದಿಲ್ಲಿ ಶೂಟಿಂಗ್ ಮುಗಿಯುವವರೆಗೂ ಇವರಿಬ್ಬರ ಲವ್‍ಸ್ಟೋರಿ, ಓಪನ್ ಸೀಕ್ರೇಟ್ ಆಗೋಯ್ತು. “ಎಕ್ಸ್‍ಟ್ರಾ ಲೈಟ್‍ನಲ್ಲಿ ಮಮತಾ ರಾವ್ ಕ್ಲೋಸ್‍ಅಪ್ ಚೆನ್ನಾಗಿ ತೆಗಿಯಯ್ಯಾ” ಎಂದು ಗೌರಿಶಂಕರ್‌ ಅವರನ್ನು ಚುಡಾಯಿಸುತ್ತಿದ್ದೆವು.

ರಕ್ಷಿತಾ, ಪ್ರೇಮ್

ಬೆಂಗಳೂರಿಗೆ ಮರಳಿದ ನಂತರ ಗೌರಿಶಂಕರ್ – ಮಮತಾರಾವ್ ಮದುವೆಯಾದರು. ಇವರ ದಾಂಪತ್ಯಕ್ಕೆ ಜನಿಸಿದ ರಕ್ಷಿತಾ, ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿ ಮಿಂಚಿದ್ದು ಎಲ್ಲರಿಗೂ ಗೊತ್ತಿದೆ. ಅಮ್ಮ ಮಮತಾ ರಾವ್ ಛಾಯಾಗ್ರಾಹಕರನ್ನು ವರಿಸಿದರೆ, ರಕ್ಷಿತಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕನನ್ನೇ (ಪ್ರೇಮ್) ಪ್ರೀತಿಸಿ ಮದುವೆಯಾದರು!

(ನಿರೂಪಣೆ: ಶಚಿ)
ಫೋಟೋ ಕೃಪೆ: ಡಿ.ಸಿ.ನಾಗೇಶ್‌

Categories
ಸಿನಿ ಸುದ್ದಿ

ಚಿರು ಪಾತ್ರಕ್ಕೆ ಧ್ವನಿ ಕೊಟ್ಟ ಧ್ರುವ – ರಾಜಮಾರ್ತಾಂಡ ಚಿತ್ರಕ್ಕೆ ಡಬ್‌ ಮಾಡಿದ ಬಹದ್ದೂರ್‌

ಚಿರಂಜೀವಿ ಸರ್ಜಾ ಅಭಿನಯದ “ರಾಜ ಮಾರ್ತಾಂಡ” ಚಿತ್ರದ ಚಿತ್ರೀಕರಣ ಮುಗಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನೇನು ಆ ಚಿತ್ರಕ್ಕೆ ಡಬ್ಬಿಂಗ್‌ ಮಾತ್ರ ಬಾಕಿ ಉಳಿದಿತ್ತು. ಅಷ್ಟರೊಳಗಾಗಿ ಚಿರು ಇಲ್ಲವಾದರು. ಒಂದಷ್ಟು ಕೆಲಸ ಉಳಿದಿದ್ದ “ರಾಜಮಾರ್ತಾಂಡ ” ಚಿತ್ರತಂಡಕ್ಕೆ ಆಗಲೇ ಧ್ರುವ ಸರ್ಜಾ ಅವರು, ನಾನು ಅಣ್ಣನ ಪಾತ್ರಕ್ಕೆ ಡಬ್ಬಿಂಗ್‌ ಮಾಡುವುದಾಗಿ ಹೇಳಿದ್ದರು.

ಅದರಂತೆ, ಧ್ರುವ ಸರ್ಜಾ ಅವರೀಗ “ರಾಜಮಾರ್ತಾಂಡ” ಚಿತ್ರದ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಫೆ.13ರಂದು ಚಿತ್ರದ ಟ್ರೇಲರ್‌ಗೆ ವಾಯ್ಸ್‌ ನೀಡಿದ್ದಾರೆ. ಟ್ರೇಲರ್‌ಗೆ ಮಾತು ಕೊಡುವಾಗಲೇ ಅವರು, ಎಮೋಷನಲ್‌ ಆಗಿ, ಒಂದು ಗಂಟೆ ಕಾಲ ಸಣ್ಣ ಟ್ರೇಲರ್‌ ಆಗಿದ್ದರೂ ಅವರು ಮಾತುಗಳನ್ನು ಹೊರಹಾಕದೆ, ಭಾವುಕರಾಗಿದ್ದರು. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಈ ವೇಳೆ “ನಮ್ಮಣ್ಣ ನಮ್‌ ಜೊತೆ ಇರಬೇಕು. ಹಾಗಾಗಿ, ನನ್‌  ಸಿನಿಮಾ ಜೊತೆ ಟ್ರೇಲರ್‌ ಬರಬೇಕು ಎಂಬ ಆಸೆ ನನ್ನದು” ಎಂದಿದ್ದಾರೆ ಧ್ರುವ ಸರ್ಜಾ.  ಇನ್ನು, “ರಾಜ ಮಾರ್ತಾಂಡ” ಚಿತ್ರದ ಟ್ರೇಲರ್‌ ಕೂಡ ರೆಡಿಯಾಗುತ್ತಿದ್ದು,  ಅದು “ಪೊಗರು” ಚಿತ್ರದ ಜೊತೆಯಲ್ಲೇ ಬಿಡುಗಡೆಯಾಗುತ್ತಿದೆ ಎಂಬುದ ವಿಶೇಷ. ಸದ್ಯಕ್ಕೆ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳು ಫುಲ್‌ ಖುಷಿಯಲ್ಲಿದ್ದು, “ರಾಜ ಮಾರ್ತಾಂಡ” ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರವನ್ನು ಕೆ.ರಾಮ್‌ನಾರಾಯಣ್‌ ನಿರ್ದೇಶನ ಮಾಡಿದ್ದಾರೆ.

Categories
ಸಿನಿ ಸುದ್ದಿ

ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ, ಮಿಲನಾ, ಯಜ್ಞಾ ಶೆಟ್ಟಿ ಹೆಸರು !

ಸಿನಿಮಾ ಪತ್ರಕರ್ತರೇ ನೀಡುವ ಸ್ಯಾಂಡಲ್‌ವುಡ್‌ನ ಪ್ರತಿಷ್ಟಿತ ʼ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಆಕಾಡೆಮಿʼಯ ವಾರ್ಷಿಕ ಪ್ರಶಸ್ತಿಗೆ ಚಿತ್ರರಂಗ ಸಜ್ಜಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭ ವರ್ಣರಂಜಿತವಾಗಿಯೇ ಆಯೋಜನೆ ಗೊಂಡಿದೆ. ಫೆ. 21 ಕ್ಕೆ ಅವಾರ್ಡ್‌ ಪ್ರೋಗ್ರಾಮ್‌ ಫಿಕ್ಸ್‌ ಆಗಿದೆ. ಸದ್ಯಕ್ಕೆ ಜಾಗ ನಿಗದಿ ಆಗಿಲ್ಲ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶನಿವಾರದಿಂದಲೇ ಚಾಲನೆ ಸಿಕ್ಕಿದೆ. ಬೆಂಗಳೂರಿನ ಎಸ್‌ ಆರ್‌ ವಿ ಮಿನಿ ಚಿತ್ರಮಂದಿರದಲ್ಲಿ ಶನಿವಾರ ಬೆಳಗ್ಗೆ ಟ್ರೋಪಿ ಅನಾವರಣ ಕಾರ್ಯಕ್ರಮ ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹಾಗೂ ‘ಟಗರುಪುಟ್ಟಿ ‘ ಅಂತಲೇ ಜನಪ್ರತಿಯತೆ ಪಡೆದ ನಟಿ ಮಾನ್ವಿತಾ ಕಾಮತ್‌ ಟ್ರೋಪಿ ಅನಾವರಣಗೊಳಿಸುವ ಮೂಲಕ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಈ ಪ್ರಸಕ್ತ ಸಾಲಿನ ಕ್ರಿಟಿಕ್ಸ್‌ ಅವಾರ್ಡ್‌ ಗೆ ವಿವಿಧ ೨೦ವಿಭಾಗಗಳಲ್ಲಿ ನಾಮಿನೇಟೆಡ್‌ ಆದ ಸಿನಿಮಾ, ನಟ-ನಟಿಯರು, ಪೋಷಕ ಕಲಾವಿದರು. ನೃತ್ಯ ನಿರ್ದೇಶಕರು, ಸ್ಟಂಟ್‌ ಮಾಸ್ಟರ್‌, ಗಾಯಕರು ಸೇರಿದಂತೆ ಎಲ್ಲಾ ವಿಭಾಗಗಳ ವಿವರ ಪ್ರಕಟಿಸಲಾಯಿತು.


ವಿಶೇಷವಾಗಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿಗೆ ಪೈಪೋಟಿಯಲ್ಲಿರುವವರ ವಿವರ ಕೂಡ ರೀವಿಲ್‌ ಆಯಿತು. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಕ್ಟ್‌ 1978 , ದಿಯಾ, ಜಂಟಲ್‌ ಮನ್‌, ಲವ್‌ ಮಾಕ್ಟೆಲ್‌ ಹಾಗೂ ನಾನು ಮತ್ತು ಗುಂಡ ಚಿತ್ರಗಳಿವೆ. ಹಾಗೆಯೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಹರಿಪ್ರಿಯಾ, ಖುಷಿ ರವಿ, ಮಿಲನಾ ನಾಗರಾಜ್‌ ಹಾಗೂ ಯಜ್ಫಾ ಶೆಟ್ಟಿ ಇದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ಡಾಲಿ ಧನಂಜಯ್‌, ಕೃಷ್ಣ, ಪ್ರಜ್ವಲ್‌ ದೇವರಾಜ್‌, ಪೃಥ್ವಿ ಅಂಬರ್‌ ಮತ್ತು ರಮೇಶ್‌ ಅರವಿಂದ್‌ ನಾಮಿನೇಟೆಡ್‌ ಆಗಿದ್ದಾರೆ. ಕಳೆದ ಭಾರಿಗಿಂತ ಈ ಬಾರಿ ಅಂದರೆ 2020 ರಲ್ಲಿ ರಿಲೀಸ್‌ ಆದ ಸಿನಿಮಾಗಳ ಸಂಖ್ಯೆ ಕಮ್ಮಿ. ಅಷ್ಟಾಗಿಯೂ ಒಳ್ಳೆಯ ಚಿತ್ರಗಳೇ ಇದ್ದು, ಪ್ರಶಸ್ತಿ ಆಯ್ಕೆ ಎಲ್ಲಾ ವಿಭಾಗಗಳಲ್ಲು ಕುತೂಹಲಕಾರಿ ಆಗಿದೆ.


ಟ್ರೋಪಿ ಅನಾವರಣ ಗೊಳಿಸಿದ ನಂತರ ನಟಿ ಮಾನ್ವಿತಾ ಕಾಮತ್, ಕ್ರಿಟಿಕ್‌ ಅವಾರ್ಡ್‌ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತರು ಒಂದು ಅವಾರ್ಡ್ ಕೊಡ್ತಾರೆ ಅಂದ್ರೆ ಅಲ್ಲಿ ಪ್ರಾಮಾಣಿಕ ಪ್ರಯತ್ನ ಇರುತ್ತೆ, ಅದ್ಯಾವ ಸಿನಿಮಾವನ್ನು ಆದ್ರೂ , ಪ್ರಾಮಾಣಿಕ ಪ್ರಯತ್ನದಿಂದ ವಿವರ್ಶಿಸುತ್ತಾರೆ ಎಂದರು. ಹಾಗೆಯೇ ನಟ ಸಂಚಾರಿ ವಿಜಯ್‌ ಮಾತನಾಡಿ, ಪ್ರಶಸ್ತಿಗಳು, ಹಣ, ಜನಮನ್ನಣೆ ತಂದುಕೊಡಲ್ಲ. ನಿಜವಾದ ಪ್ರತಿಭೆಗಳನ್ನು ಗುರುತಿಸುವುದರಿಂದ ನಮ್ಮಲ್ಲೂ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ʼಸಿನಿಲಹರಿʼ ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಸಿಇಓ ಕೃಷ್ಣ ಪಿ ಮತ್ತು ಮೂವೀ ಬಜಾರ್‌ ಮುಖ್ಯಸ್ಥ ನವರಸನ್‌ ಹಾಜರಿದ್ದರು. ” ಚಂದನವನ ಫಿಲ್ನ್‌ ಕ್ರಿಟಿಕ್ಸ್‌ ಎಲ್ಲಾ ಪ್ರಯತ್ನಕ್ಕೂ ಸಿನಿಲಹರಿ ಬೆಂಬಲ ಇರಲಿದ್ದು, ಇದು ಇನ್ನು ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು’ ಸಿನಿ ಲಹರಿ ‘ಸಿಇಓ ಕೃಷ್ಣ ಹೇಳಿದರು. ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪರವಾಗಿ ನಿರ್ದೇಶಕರಾದ ಶರಣು ಹುಲ್ಲೂರು ಕಾರ್ಯಕ್ರಮದ ರೂಪುರೇಷೆಗಳ ಜತೆಗೆ ಪ್ರಶಸ್ತಿಗೆ ನಾಮಿನೇಟೆಡ್‌ ಆದವರ ವಿವರ ನೀಡಿದರು.

Categories
ಸಿನಿ ಸುದ್ದಿ

ಮೀರಾ ನಾಯರ್‌ ಮಿಸಿಸಿಪ್ಪಿ ಮಸಾಲಾ ರೀರಿಲೀಸ್‌


ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮೀರಾ ನಾಯರ್ ಅವರ ‘ ಮಿಸಿಸಿಪ್ಪಿ ಮಸಾಲಾ’ ಇಂಗ್ಲಿಷ್ ಸಿನಿಮಾ 1991ರ ಸೆಪ್ಟೆಂಬರ್‌ನಲ್ಲಿ ತೆರೆಕಂಡಿತ್ತು. ಚಿತ್ರ ತೆರೆಕಂಡು 2021ಕ್ಕೆ ಮೂವತ್ತು ವರ್ಷ. ಈ ರೊಮ್ಯಾಂಟಿಕ್ – ಡ್ರಾಮಾ ಚಿತ್ರದೊಂದಿಗೆ ಹಾಲಿವುಡ್‌ನಲ್ಲೂ ಮೀರಾ ಸದ್ದು ಮಾಡಿದ್ದರು. ಇದರ ಸವಿನೆನಪಿಗಾಗಿ ಚಿತ್ರದ ರೀಮಾಸ್ಟರ್ಡ್‌ ಅವತರಣಿಕೆ ಬಿಡುಗಡೆ ಮಾಡುವ ಯೋಜನೆ ಮೀರಾ ನಾಯರ್ ಅವರದು.

ಅಮೆರಿಕದ ಮಿಸಿಸಿಪ್ಪಿಯ ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದ್ದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಡೆನ್ಝಲ್ ವಾಷಿಂಗ್ಟನ್‌ ಮತ್ತು ಸರಿತಾ ಚೌಧರಿ ನಟಿಸಿದ್ದರು. ಆಫ್ರಿಕ-ಅಮೆರಿಕದ ಯುವಕ ಮತ್ತು ಭಾರತ-ಅಮೆರಿಕದ ಯುವತಿಯ ನಡುವಿನ ರೊಮ್ಯಾಂಟಿಕ್ ಪ್ರೇಮ ಕಥಾನಕವಿದು. ಶರ್ಮಿಳಾ ಟ್ಯಾಗೂರ್, ರೋಷನ್ ಸೇಠ್‌ ಮತ್ತು ಮೋಹನ್ ಅಗಾಸ್ಸೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ವಿಶ್ಲೇಷಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿನಿಮಾ ವೆನಿಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತ್ತು. ಸನ್‌ಡ್ಯಾನ್ಸ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರು ಚಿತ್ರವೀಕ್ಷಣೆಯ ನಂತರ ಸ್ಟ್ಯಾಂಡಿಂಗ್ ಓವಿಯೇಷನ್‌ ಕೊಟ್ಟಿದ್ದರು. ಈ ಚಿತ್ರದೊಂದಿಗೆ ಮೀರಾ ನಾಯರ್‌ ಅವರು ತಮ್ಮ ನಿರ್ದೇಶನದ ‘ಸಲಾಂ ಬಾಂಬೆ’, ‘ದಿ ನೇಮ್‌ಸೇಕ್‌’, ‘ಕ್ವೀನ್ ಆಫ್ ಕಾಟ್ವೆ’ ಚಿತ್ರಗಳೊಂದಿಗೂ ಪ್ರೇಕ್ಷಕರಿಗೆ ನೆನಪಾಗುತ್ತಾರೆ. ಇತ್ತೀಚೆಗೆ ಮೀರಾ ಅವರು ವಿಕ್ರಂ ಸೇಠ್‌ ಕೃತಿ ‘ಎ ಸೂಟಬಲ್ ಬಾಯ್‌’ ಆಧರಸಿ ಸರಣಿ ರೂಪಿಸಿದ್ದರು.

Categories
ಸಿನಿ ಸುದ್ದಿ

ಸಾಹಿರ್‌ ಬಯೋಪಿಕ್‌ನಲ್ಲಿ ಶಾರುಖ್‌?


ಎಂಟು ವರ್ಷದ ಹಿಂದಿನ ಮಾತು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಖ್ಯಾತ ಕವಿ, ಚಿತ್ರಸಾಹಿತಿ ಸಾಹಿರ್ ಲುಧಿಯಾನ್ವಿ ಬಯೋಪಿಕ್ ಮಾಡುವುದಾಗಿ ಹೇಳಿದ್ದರು. ಸಾಹಿರ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಇಲ್ಲವೇ ಇರ್ಫಾನ್ ಖಾನ್‌ ನಟಿಸಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಯೋಜನೆ ಕೈಗೂಡಲಿಲ್ಲ. ಇದೀಗ ಮತ್ತೆ ಸಾಹಿರ್ ಬಯೋಪಿಕ್‌ ಕುರಿತಂತೆ ಸುದ್ದಿ ಬಂದಿದೆ. ಬಾಲಿವುಡ್‌ ಚಿತ್ರಕಥೆಗಾರ್ತಿ ಜಸ್ಮೀತ್ ರೀನ್‌ ಈ ಪ್ರಾಜೆಕ್ಟ್ ಬಗ್ಗೆ ಅತೀವ ಆಸಕ್ತಿಯಿಂದ ಓಡಾಡುತ್ತಿದ್ದಾರೆ. ನಟ ಶಾರುಖ್ ಖಾನ್‌ ಚಿತ್ರ ನಿರ್ಮಿಸಿ, ಶೀರ್ಷಿಕೆ ಪಾತ್ರದಲ್ಲಿ ನಟಿಸುವ ದಟ್ಟ ವದಂತಿಯಿದೆ.


ಬನ್ಸಾಲಿ ನಂತರ ಬಾಲಿವುಡ್ ನಿರ್ಮಾಪಕಿ ಆಶಿ ದುವಾ ಅವರು ಸಾಹಿರ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆಗ ಸಾಹಿರ್ ಪಾತ್ರಕ್ಕೆ ನಟರಾದ ಪರ್ಹನ್ ಅಖ್ತರ್‌, ಇರ್ಫಾನ್ ಖಾನ್ ಹೆಸರುಗಳು ಪ್ರಸ್ತಾಪವಾಗಿದ್ದವು. ಅಷ್ಟೇ ಅಲ್ಲ ಸಾಹಿರ್‌ ಅವರ ಆತ್ಮೀಯ ಸಂಗಾತಿ ಎಂದು ಕರೆಸಿಕೊಂಡಿದ್ದ ಕವಯಿತ್ರಿ ಅಮೃತಾ ಪ್ರೀತಂ ಪಾತ್ರದ ಬಗ್ಗೆಯೂ ಚರ್ಚೆ ನಡೆದಿತ್ತು.

ಈ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾ, ತಾಪ್ಸಿ, ಕರೀನಾ ಕಪೂರ್ ಹೆಸರುಗಳು ಕೇಳಿಬಂದಿದ್ದವು. ಆಗಲೂ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ಶಾರುಖ್ ನಿರ್ಮಾಣದಲ್ಲಿ ಸಿನಿಮಾ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇಂಥದ್ದೊಂದು ಪಾತ್ರ ನಿರ್ವಹಿಸಲು ಶಾರುಖ್ ಉತ್ಸುಕರಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

error: Content is protected !!