Categories
ಸಿನಿ ಸುದ್ದಿ

ಐದು ರೂಪಾಯಿಯ ಸಿಟಿ ಸ್ಕ್ಯಾನ್ ಸೃಷ್ಟಿಸಿದ ಅವಾಂತರ! ಆ ಆಸ್ಪತ್ರೆಯಲ್ಲಿ ಕಣ್ಣಾರೆ ಕಂಡ ನಟ ಸಂಚಾರಿ ವಿಜಯ್ ಬಿಚ್ಚಿಟ್ಟ ಅನುಭವ!!

ನಟ‌ ಸಂಚಾರಿ ವಿಜಯ್, ತಮಗನ್ನಿಸಿದನ್ನು ನೇರವಾಗಿ ಹೇಳುವ ವ್ಯಕ್ತಿ. ಅದರಲ್ಲೂ ಸದಾ ಬೇರೆ ಜೀವಗಳ ಹಿತ ಬಯಸುವ ನಟ. ತಾವು‌ ಕಂಡ ಅನುಭವಗಳನ್ನು ಹಾಗೆಯೇ ಬಿಚ್ಚಿಡುವ ಮೂಲಕ ಒಂದಷ್ಟು ಸಂದೇಶ ಕೊಡುವ ಪ್ರಯತ್ನ ಮಾಡುತ್ತಾರೆ. ಸದ್ಯ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿರುವ ಜನರ ಬಗ್ಗೆ, ವ್ಯವಸ್ಥೆ ಕುರಿತು ಮಾತಾಡಿದ್ದಾರೆ. ಅಂತೆಯೇ 5ರುಪಾಯಿಯ ಸಿಟಿ ಸ್ಕ್ಯಾನ್ ವಿಷಯ ತಂದ ಅವಾಂತರದ ಬಗ್ಗೆ ಇಡೀ ಆಸ್ಪತ್ರೆಯ ವ್ಯವಸ್ಥೆ ಮತ್ತು ಅಲ್ಲಾದ ಲೈವ್ ಅನುಭವ ಬಿಚ್ಚಿಟ್ಟಿದ್ದಾರೆ. ಅದು ಅವರದೇ ಮಾತಲ್ಲಿ ಕೇಳಿ.

ಓವರ್ ಟು ಸಂಚಾರಿ ವಿಜಯ್

” ಬೆಳಗ್ಗೆ ಒಂಬತ್ತು ಗಂಟೆಗೆ ನನ್ನ ಕುಟುಂಬದ ಹಿರಿಯರೊಬ್ಬರನ್ನು ಎರೆಡನೇ ಲಸಿಕೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದೆ. ‘ನೀವು ಕಾರಲ್ಲೇ ಕುಳಿತಿರಿ ನಾನು ಆಸ್ಪತ್ರೆಯೊಳಗಿನ ವ್ಯವಸ್ಥೆ ನೋಡಿಕೊಂಡು ಬರುತ್ತೇನೆ ಆಮೇಲೆ ನೀವು ಬನ್ನಿ’ ಎಂದು ಹೇಳಿ ಆಸ್ಪತ್ರೆಯ ಅಂಗಳಕ್ಕೆ ಕಾಲಿಟ್ಟರೆ, ದಂಗು ಬಡಿಸುವಷ್ಟು ಜನ. ಎರೆಡು ಕ್ಷಣ ಗಾಬರಿಯಾಗಿ ಹೊರಗೇ ನಿಂತುಬಿಟ್ಟೆ. ಒಂದು ಹೆಜ್ಜೆ ಒಳಗಿಟ್ಟರೂ ಒಬ್ಬರಲ್ಲಾ ಒಬ್ಬರನ್ನು ಸೋಕುವ ಸಾಧ್ಯತೆಯಿತ್ತು. ಯಾರಾದರೂ ನನ್ನನ್ನು ಮುಟ್ಟಿ ಸೋಂಕು ತಗುಲಿ ಅದರಿಂದ ಮತ್ತೆಲ್ಲಿ ನಾಲ್ಕು ಜನಕ್ಕೆ ಹರಡುವುದೋ ಎಂದು ಭಯಪಟ್ಟು ಒಳ ಹೊಗಲೋ ಅಥವಾ ಇಲ್ಲೇ ನಿಲ್ಲಲೋ ಎಂಬ ದ್ವಂದ್ವ ಶುರುವಾಗಿ ಅಲ್ಲೇ ನಿಂತುಬಿಟ್ಟೆ.

ನಾನು ನಿಂತ ಜಾಗದಿಂದಲೇ ಅಲ್ಲಿ ನಡೆಯುತ್ತಿರುವುದನ್ನು ಗಮನಿಸಿದೆ ನೆರೆದಿದ್ದ ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮಧ್ಯೆ ಸಣ್ಣ ಜಗಳ ನಡೆಯುತ್ತಿತ್ತು. ಆದರೆ, ಯಾಕೆಂದು ತಿಳಿಯಲಿಲ್ಲ. ಅಲ್ಲಿನ ಸೆಕ್ಯುರಿಟಿಯೊಬ್ಬ ಬಿಟ್ಟೂ ಬಿಡದೆ ಅಲ್ಲಿದ್ದವರನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದ ಕೆಲವೊಮ್ಮೆ ಗದರುತ್ತಿದ್ದ, ಆದರೆ ಯಾರೊಬ್ಬರೂ ಅವನ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ.

ಕೊನೆಗೊಂದಷ್ಟು ಜನ ಅರ್ಥ ಮಾಡಿಕೊಂಡು ಅಂತರ ಕಾಪಾಡಿಕೊಂಡ ನಂತರ ಕೊನೆಗೂ ಒಳ ಹೋಗಲು ಸ್ವಲ್ಪ ದಾರಿಯಾಯ್ತು. ಧೈರ್ಯ ಮಾಡಿ ಒಳಗೆ ಹೋಗಿ ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆ ‘ ನೆನ್ನೆಯೂ ಆಸ್ಪತ್ರೆಗೆ ಬಂದಿದ್ವಿ. ಆದರೆ, ತಡವಾಗಿ ಬಂದಿದ್ದರಿಂದ ಲಸಿಕೆ ಸಿಗಲಿಲ್ಲ ಹಾಗಾಗಿ ಇವತ್ತು ಬೇಗ ಬಂದಿದ್ದೇವೆ ಎಷ್ಟು ಗಂಟೆಗೆ ಲಸಿಕೆ ಕೊಡಬಹುದು?’ ತಕ್ಷಣಕ್ಕೆ ಸ್ಪಂದಿಸಿದ ಸಿಬ್ಬಂದಿಯೊಬ್ಬರು ಒಳ ಹೋಗಿ ಟೋಕನ್ ತಂದು ಕೊಟ್ಟವರೇ ‘ಐದು ನಿಮಿಷ ಇಲ್ಲೇ ಕುಳಿತುಕೊಳ್ಳಿ ಕಂಪ್ಯೂಟರ್ ಆನ್ ಆದ ಕೂಡಲೇ ಕರೆಯುತ್ತೇವೆ’ ಎಂದು ಹೇಳಿ ಒಳ ನಡೆದರು.

ನಿಧಾನವಾಗಿ ಒಬ್ಬೊಬ್ಬರೇ ಎರೆಡನೆ ಲಸಿಕೆ ಪಡೆಯಲು ಬಂದು ಸೇರಿಕೊಳ್ಳತೊಡಗಿದರು ಮತ್ತೆ ಅದೇ ಧಾವಂತ ಶುರುವಾಯ್ತು ಎಲ್ಲಿ ಯಾರು ಮುಟ್ಟಿಬಿಡುತ್ತಾರೋ ಎಂದು. ಅವರ ನಡುವೆಯೇ ದಾರಿ ಮಾಡಿಕೊಂಡು ಯಾರನ್ನೂ ಸೋಕದಂತೆ ಜಾಗರೂಕತೆಯಿಂದ ಹೊರನಡೆದವನೇ ಜೊತೆಗೆ ಬಂದಿದ್ದವರನ್ನು ಕರೆದುಕೊಂಡು ಒಳಗೆ ಬಂದವನೇ ‘ಯಾರನ್ನೂ ಸಂಪರ್ಕಿಸಬೇಡಿ’ ಎಂದು ಜಾಗ್ರತೆ ವಹಿಸಿ ಅಲ್ಲಿದ್ದ ಕಲ್ಲಿನ ಬೆಂಚಿನ ಮೇಲೆ ಕೂರಿಸಿ ನಾನೂ ಅವರ ಪಕ್ಕದಲ್ಲಿ ಕುಳಿತೆ. ಹಿಂದೆ ಏನೋ ಗಿಜಿ ಗಿಜಿ ಶಬ್ದ ಕೇಳಿಸಿದಂತಾಯ್ತು ಹಾಗೆ ಕತ್ತು ಹೊರಳಿಸಿ ಹಿಂದೆ ನೋಡಿದರೆ ಹೃದಯ ಸ್ತಬ್ಧವಾಗುವಂತಹ ದೃಶ್ಯಗಳು ಕಿಟಕಿಯಿಂದಲೇ ಕಾಣುತ್ತಿದ್ದವು. ಮೊದಲನೇ ಬಾರಿಗೆ ನನ್ನ ಕಣ್ಣಾರೆ ಆಸ್ಪತ್ರೆಯೊಂದರಲ್ಲಿ ಕೊರೊನಕ್ಕೆ ತುತ್ತಾಗಿದ್ದವರ ಪರಿಸ್ಥಿತಿಯನ್ನು ನೋಡಿದ್ದು.

ಮುಖಕ್ಕೆ ವೆಂಟಿಲೇಟರ್ ಹಾಕಿಸಿಕೊಂಡ ಮಹಿಳೆಯೋರ್ವರು ದೀರ್ಘವಾಗಿ ಏದುಸಿರು ಬಿಡುತ್ತಾ ಕುಳಿತಿದ್ದರೆ, ಮತ್ತೊಬ್ಬರು ಬೆಡ್ ಮೇಲೆ ಅಂಗಾತ ಮಲಗಿ ಡಾಕ್ಟರ್ ಹೇಳುವ ಮಾತುಗಳನ್ನು ಮುಂದೇನಾಗುವುದೋ ಎಂಬ ಆತಂಕದಲ್ಲಿ ಕೇಳಿಸಿಕೊಳ್ಳುತ್ತಿದ್ದರು, ಮಗದೊಬ್ಬರು ಮಕಾಡೆ ಮಲಗಿ ಜೋರಾಗಿ ಉಸಿರಾಡುತ್ತಿದ್ದರೆ ಅವರ ಮನೆಯವರು ಬೆನ್ನು ಸವರುತ್ತಾ ಅವರಿಗೆ ಧೈರ್ಯದ ಮಾತುಗಳನ್ನಾಡುತ್ತಿರುವ ದೃಶ್ಯಗಳು ನನ್ನ ಮನಸ್ಸನ್ನು ಕಲಕಿಬಿಟ್ಟವು. ಅಲ್ಲಿಯ ಪರಿಸ್ಥಿತಿ ನೋಡಲಾಗದೆ ಒಮ್ಮೆಲೇ ಉಸಿರುಗಟ್ಟಿದಂತಾಗಿ ಎದ್ದುಬಿಟ್ಟೆ. ಯಾವ್ಯಾವ ಕುಟುಂಬ ಏನೇನು ಸಂಕಟದಲ್ಲಿದೆಯೋ ಇಲ್ಲಿ ಉಳಿಯುವವರಾರು ಅಳಿಯುವವರಾರು ಎಂದು ಚಿಂತಿಸಿ ಮನಸ್ಸೇ ಅಸ್ಥವ್ಯಸ್ಥವಾಗಿಬಿಟ್ಟಿತು. ಹೀಗೆ ಯೋಚಿಸುತ್ತಾ ನಿಂತಿರುವಾಗಲೇ ನನ್ನ ಮುಂದೆ ಅಂಗಾತ ಮಲಗಿದ್ದ ದೇಹವೊಂದು ನಾಲ್ಕು ಚಕ್ತ್ರದ ಸ್ಟ್ರೆಚ್ಚರ್ ಮೇಲೆ ಸಾಗಿತು. ದಿನನಿತ್ಯ ಸಾವಿನ ಸುದ್ದಿಗಳನ್ನು ಕೇಳಿ ಬೆದರಿದ್ದ ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ಆ ವ್ಯಕ್ತಿಯ ಹೊಟ್ಟೆಯನ್ನೇ ನೋಡುತ್ತಿದ್ದೆ ಉಸಿರಾಟ ನಿಂತಿದೆಯೋ ಅಥವಾ ಇನ್ನೂ ಬದುಕಿರುವರೋ ಎಂದು. ಸ್ಟ್ರೆಚ್ಚರ್ ಅಷ್ಟು ದೂರ ಸಾಗಿದರು ನನ್ನ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ.

ಒಂದು ಕಡೆ ಈಗಲೋ ಆಗಲೋ ಎಂದು ಉಸಿರಾಡುತ್ತಿರುವ ದೇಹಗಳು, ಅವರನ್ನು ಉಳಿಸಿಕೊಡುವಂತೆ ಅಂಗಲಾಚುತ್ತಿರುವ ಅವರ ಕುಟುಂಬದವರು, ಮತ್ತೊಂದು ಕಡೆ ಲಸಿಕೆಗಾಗಿ ಗಂಟೆಗಟ್ಟಲೆ ಕಾಯ್ದು ಕೂತ ಹಿರಿಯ ಜೀವಗಳು, ಇನ್ನೊಂದು ಕಡೆ ಸಾವಿರಾರು ರೂಪಾಯಿ ಹೊಂದಿಸುವ ಶಕ್ತಿಯಿಲ್ಲದೆ 5 ರುಪಾಯಿಗೆ ಸಿಟಿ ಸ್ಕ್ಯಾನ್ ಮಾಡಿಸಲು ಸಾಲುಗಟ್ಟಿ ನಿಂತ ಬಡ ಜೀವಗಳು. ಹೀಗೆ ಜೀವಕ್ಕಾಗಿ ಬಡಿದಾಡುತ್ತಿದ್ದವರ ಮಧ್ಯೆ ನಿಂತ ನನಗೆ ಅನ್ನಿಸಿದ್ದು ಈ ಜೀವ ನೀರಿನ ಮೇಲಿನ ಗುಳ್ಳೆ ಯಾವಾಗ ಬೇಕಾದರೂ ಒಡೆದು ಹೋಗಬಹುದೆಂದು.

ಹೀಗೆ ಯೋಚಿಸುತ್ತಾ ಅರೆ ಕ್ಷಣ ಕಣ್ಮುಚ್ಚಿ ಬಿಡುವಷ್ಟರಲ್ಲೇ ಎರೆಡನೇ ಲಸಿಕೆ ಪಡೆಯಲು ವಯಸ್ಸಾದವರ ದಂಡೇ ಅಲ್ಲಿ ಸೇರಿತ್ತು. ಅವರೆಲ್ಲರ ಮುಖದಲ್ಲಿ ತಾನು ಬದುಕಬೇಕು ಬದುಕಿ ಇನ್ನೂ ಹತ್ತಾರು ವರ್ಷ ತನ್ನ ಕುಟುಂಬದವರ ಜೊತೆ ಕಾಲ ಕಳೆಯಬೇಕು ಎನ್ನುವ ಆಸೆಯಾಶಾಭಾವನೆ ಕಾಣಿಸುತ್ತಿತ್ತು. ಆ ಇಳಿ ವಯಸ್ಸಿನಲ್ಲೂ ಮಕ್ಕಳಂತೆ ಕ್ಯೂನಲ್ಲಿ ನಿಲ್ಲಲು ಪರದಾಡುತ್ತಿದ್ದದ್ದು ನೋಡಿ ಮಮ್ಮಲ ಮರುಗಿದೆ.

ಖಂಡಿತ ವೈದ್ಯರು, ನರ್ಸ್ ಗಳು ಬದುಕುಳಿಯಲ್ಲ!

ಒಬ್ಬೊಬ್ಬರದ್ದು ಒಂದೊಂದು ರೀತಿಯ ದುಗುಡ, ಆತಂಕ, ನೂರಾರು ಪ್ರಶ್ನೆಗಳು. ಲಸಿಕೆ ಖಂಡಿತ ನಮಗೆ ಸಿಗುತ್ತೆ ಅಲ್ಲವಾ? ನಾನು ಇದು ಮೊದಲನೇ ಬಾರಿ ತೆಗೆದುಕೊಳ್ಳುತ್ತಿದ್ದೇನೆ ಇದಕ್ಕೆ ಪ್ರೊಸೀಜರ್ ಏನು? ನಾವು ಬೆಳಗ್ಗೆ 8 ಗಂಟೆಯಿಂದಲೇ ಕಾಯುತ್ತಿದ್ದೇವೆ ಎಷ್ಟು ಗಂಟೆಗೆ ಟೋಕನ್ ಕೊಡುತ್ತಾರೆ? ನಮ್ಮ ಯಜಮಾನರಿಗೆ ಜಾಸ್ತಿ ಹೊತ್ತು ನಿಲ್ಲಲು ಆಗಲ್ಲ ನಮಗೆ ಲಸಿಕೆ ಬೇಗ ಕೊಡಬಹುದೇ? ಎಂದು ದೈನ್ಯತೆಯಿಂದ ಕೇಳಿಕೊಂಡರೆ ಇನ್ನೊಬ್ಬರು ‘ಕ್ಯೂನಲ್ಲಿ ಬೆಳಗ್ಗೆಯಿಂದಲೇ ನಿಂತಿದ್ದೇವೆ ನೀವು ಹೀಗೆ ಯಾರೋ ಈಗ ಬಂದವರನ್ನು ಮುಂದೆ ಕಳಿಸಿದರೆ ಹೇಗೆ? ಎಂದು ಗಟ್ಟಿದನಿಯಲ್ಲಿ ಗದರುವ ಹೊತ್ತಿಗೆ ಗೇಟಿನ ಹೊರಗಿನಿಂದ ಓಡೋಡಿ ಬಂದ ನೋಡಲ್ ಆಫೀಸರ್ ಒಬ್ಬರು ದುಃಖದ ಕಟ್ಟೆಯೊಡೆದು ಅಲ್ಲಿದ್ದ ಹಿರಿಯ ವೈದ್ಯರೊಬ್ಬರಿಗೆ ‘ನೋಡಿ ಸರ್ ನಾವು ಮನೆ ಮಠ ಎಲ್ಲ ಬಿಟ್ಟು, ನಮ್ಮ ಸಂಸಾರವನ್ನು ದೂರಮಾಡಿಕೊಂಡು, ನೂರಾರು ಜನರ ಒಳಿತಿಗಾಗಿ ನಮ್ಮ ಜೇವವನ್ನೂ ಲೆಕ್ಕಿಸದೆ ಎಲ್ಲರ ಜೊತೆ ಬಡಿದಾಡಿ ನಿಂತು ಲಸಿಕೆ ಕೊಡಿಸುತ್ತಿದ್ದೇವೆ. ಆದರೆ ಅಲ್ಲಿ ನೋಡಿ ಜನ ಜಂಗುಳಿ ಯಾರೋ ಒಬ್ಬ ನಮ್ಮ ಆಸ್ಪತ್ರೆಯಲ್ಲಿ 5 ರುಪಾಯಿಗೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಇಂತಹ ಸರ್ಕಾರೀ ಆಸ್ಪತ್ರೆಯಲ್ಲಿ ಕೇವಲ 5 ರುಪಾಯಿಗೆ ಸಿಟಿ ಸ್ಕ್ಯಾನ್ ಮಾಡಿ ಕೊಡುತ್ತಾರೆ ಎಂದು ವಿಡಿಯೋ ಮಾಡಿ ಹಾಕಿದ್ದಾನೆ. ಅವನು ಕೊಟ್ಟಿರುವ ಸಂದೇಶವೇನೋ ಸರಿಯಾಗಿದೆ ಆದರೆ ಅದರಿಂದ ಇಲ್ಲಿ ಆಗುತ್ತಿರುವ ಅವಾಂತರ ನೋಡಿ, ಸ್ಕ್ಯಾನ್ ಗಾಗಿ ಜನ ಹೇಗೆ ದಂಡಿಯಾಗಿ ಸೇರುತ್ತಿದ್ದಾರೆ, ಹೀಗೆ ಜನ ಸೇರಿದರೆ ಖಂಡಿತ ನಾವು ವೈದ್ಯರು ನರ್ಸುಗಳು ಯಾರು ಬದುಕಿ ಉಳಿಯುವುದಿಲ್ಲ ಸರ್, ದಯವಿಟ್ಟು ಇದಕ್ಕೆ ಏನಾದರು ಪರಿಹಾರ ಹುಡುಕಿ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದರು’. ಅಸಹಯಕರಾಗಿ ನಿಂತು ಕೇಳಿಸಿಕೊಳ್ಳುತ್ತಿದ್ದ ವೈದ್ಯರು ಅವರಿಗೆ ಏನೋ ಸಮಾಧಾನ ಹೇಳಿ ಒಳಗೆ ಕರೆದುಕೊಂಡು ಹೋದರು.

ನನ್ನೆದುರು ನಡೆದ ಈ ಘಟನೆಯಿಂದ ಕೇಳಿಸಿಕೊಂಡ ಮಾತುಗಳಿಂದ ನನ್ನ ಜಂಘಾಬಲವೇ ಉದುಗಿ ಹೋಯಿತು. ನಮಗಾಗಿ ಹಗಲು ರಾತ್ರಿ ಕಷ್ಟ ಪಡುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಏನಾದರೂ ಹೆಚ್ಚುಕಡಿಮೆಯಾದರೆ ನಮ್ಮ ಗತಿಯೇನು ಒಂದು ಕ್ಷಣ ಉಸಿರೇ ನಿಂತು ಹೋದಂತಾಯ್ತು. ಆ ಕ್ಷಣಕ್ಕೆ ನನ್ನ ನೆನಪಿಗೆ ಬಂದಿದ್ದು ಮೊನ್ನೆಯಷ್ಟೇ ಮುಂದೆ ಬರಲಿರುವ ಮೂರನೆಯ ಅಲೆಯ ಎಚ್ಚರಿಕೆ ಕೊಟ್ಟ ಮತ್ತು ಅದು ಬಂದಾಗ ಆಸ್ಪತ್ರೆ ಸಿಬ್ಬಂದಿಯ ಕೊರತೆಯಿಂದ ಮುಂದೆ ಆಗಬಹುದಾದ ಅನಾಹುತದ ಕುರಿತು ಮಾತನಾಡಿದ ಡಾ. ದೇವಿ ಶೆಟ್ಟಿಯವರ ಮಾತು.

ಎಷ್ಟು ಬೇಗ ಲಸಿಕೆ ಕೊಟ್ಟಾರೋ ಎಷ್ಟು ಬೇಗ ಗೂಡು ಸೇರುವೆವೋ ಎಂದು ಹಲುಬುವಂತಾಯ್ತು. ಅಷ್ಟು ಹೊತ್ತಿಗೆ ಆ ಕಡೆಯಿಂದ ಟೋಕನ್ ನಂಬರ್ ಒನ್ ಅಂದರು ಒಳಗೆ ನಡೆದು ಲಸಿಕೆ ಪಡೆದದ್ದೇ ಓಡೋಡಿ ಬಂದು ಕಾರು ಹತ್ತಿ ಕೈಯ್ಯನ್ನು ಸ್ಯಾನಿಟೈಸರ್ನಿಂದ ತೊಳೆದು, ಮುಖಕ್ಕೆ ಮಾಸ್ಕ್ ಏರಿಸಿ ಮನೆ ಕಡೆ ಗಾಡಿ ತಿರುಗಿಸಿದವನೇ, ಏನೇನೋ ಧಾವಂತದ ಪ್ರಶ್ನೆಗಳು ಮನಸ್ಸಲ್ಲಿ ಬುಗ್ಗೆಗಳಂತೆ ಏಳತೊಡಗಿದವು. ಪಕ್ಕ ಕುಳಿತವರಿಗೆ ಕೇಳಿದರೆ ಎಲ್ಲಿ ಧೈರ್ಯ ಕಳೆದುಕೊಂಡು ಬಿಡುತ್ತಾರೋ ಎಂದು ತುಟಿಕ್ ಪಿಟಿಕ್ ಅನ್ನದೆ ವಿಗ್ರಹದಂತೆ ಕುಳಿತು ಮನೆ ಸೇರುವ ತನಕ ದಾರಿಯನ್ನು ಬಿಟ್ಟರೆ ಆಚೀಚೆ ತಿರುಗದೆ ಗಾಡಿ ಓಡಿಸಿದೆ.

ಇದು ವ್ಯವಸ್ಥೆಯನ್ನೂ ಮತ್ತೊಬರನ್ನೂ ದೂರುತ್ತಾ ಕೂರುವ ಸಮಯವಲ್ಲ . ಎಲ್ಲರೂ ಜಾಗೃತರಾಗೋಣ.
ನಿಜಕ್ಕೂ ಆಸ್ಪತ್ರೆಯ ಸಿಬ್ಬಂದಿಗೊಂದು ನನ್ನ ಸಲಾಂ” ಎಂದು ಹೇಳಿಕೊಂಡಿದ್ದಾರೆ ಸಂಚಾರಿ ವಿಜಯ್.

Categories
ಸಿನಿ ಸುದ್ದಿ

ಸಿನಿಮಾ ಕಾರ್ಮಿಕರ ಮೊಗದಲ್ಲಿ ಆತಂಕದ ಛಾಯೆ ; ಕಾರ್ಮಿಕರ ದಿನದಲ್ಲೂ ಮೂಡದ ಮಂದಹಾಸ !!

ಅದೊಂದು ಕಾಲವಿತ್ತು. ಮೇ 1 ಬಂತೆಂದರೆ, ಚಿತ್ರರಂಗದ ಕಾರ್ಮಿಕ ವಲಯದಲ್ಲಿ ಹರ್ಷವೋ ಹರ್ಷ. ಅಲ್ಲೊಂದು ಸಂಪೂರ್ಣ ಹಬ್ಬದ ವಾತಾವರಣವೇ ತುಂಬಿರುತ್ತಿತ್ತು. ಆದರೆ, ಕೊರೊನಾ ತಂದಿಟ್ಟ ಆಘಾತದಿಂದಾಗಿ ಸಿನಿಮಾ ಕಾರ್ಮಿಕರ ಮೊಗದಲ್ಲಿರಬೇಕಾದ ಹರ್ಷ ಈಗಿಲ್ಲ. ಬದಲಾಗಿ ಅವರಲ್ಲಿ ಆತಂಕದ ಛಾಯೆ ಮೂಡಿದೆ. ಬದುಕು ಮುಗಿದೇ ಹೋಯ್ತಾ ಎಂಬ ಭಯ ಕ್ಷಣ ಕ್ಷಣಕ್ಕೂ ಕಾಡುತ್ತಲೇ ಇದೆ. ಅದಕ್ಕೆ ಕಾರಣ, ಮಹಾಮಾರಿ ಕೊರೊನಾ… ಪ್ರತಿ ಕಾರ್ಮಿಕರ ದಿನದಂದು ನಿಜಕ್ಕೂ ಸಿನಿಮಾ ಕಾರ್ಮಿಕರ ಮೊಗದಲ್ಲಿ ಹರ್ಷವೇ ತುಂಬಿರುತ್ತಿತ್ತು. ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಒಕ್ಕೂಟದಲ್ಲಿರುವ ಬಹುತೇಕರು ದಿನಗೂಲಿಗರೇ. ಅವರ ಮೊಗದಲ್ಲೀಗ ಸಂಭ್ರಮವಿಲ್ಲ, ಬರೀ ಆತಂಕದ ಕರಿನೆರಳು ಅಂದರೆ ನಂಬಲೇಬೇಕು!

ಕಪ್ಪು-ಬಿಳುಪು ಕಾಲದಿಂದಲೂ ಈ ಚಿತ್ರರಂಗದ ಕಾರ್ಮಿಕ ವಲಯವೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಆ ಶ್ರಮಿಕ ವರ್ಗ ಇರದಿದ್ದರೆ, ಯಾವ ಸಿನಿಮಾನೂ ಅಂದುಕೊಂಡಂತೆ ತೆರೆಮೇಲೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಅಂದಿನಿಂದ ಇಂದಿನವರೆಗೂ ಸಿನಿಮಾ ಕಾರ್ಮಿಕರು ಈ ಬಣ್ಣದ ಲೋಕದಲ್ಲಿ ಬದುಕು ಸವೆಸುತ್ತಲೇ ಇದ್ದಾರೆ. ದಿನಗೂಲಿಗಳಾಗಿ, ಅದೆಷ್ಟೋ ಸ್ಟಾರ್‌ ನಟ,ನಟಿಯರ ಬದುಕಿನ ಯಶಸ್ಸಿಗೆ ಕಾರಣರಾಗಿದ್ದಾರೆ. ಬಣ್ಣದ ಜಗತ್ತಿನಲ್ಲಿದ್ದರೂ, ತೆರೆ ಹಿಂದೆ ಹಗಲಿರುಳು ಶ್ರಮಿಸುತ್ತಿದ್ದ ಸಿನಿಮಾ ಕಾರ್ಮಿಕರ ಬದುಕಲ್ಲಿ ಮಾತ್ರ ಬಣ್ಣ ಮಾಸಿ ಹೋಗಿದೆ. ಇದು ಹಿಂದಿನ ಪರಿಸ್ಥಿತಿ ಮಾತ್ರವಲ್ಲ, ಇಂದಿನ ಸ್ಥಿತಿಯೂ ಕೂಡ. ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ಸಿನಿಮಾಗಳೂ ಬದಲಾಗುತ್ತಿವೆ. ಆದರೆ, ಕಾರ್ಮಿಕರ ಬದುಕು ಮಾತ್ರ ಇಂದಿಗೂ ಬದಲಾಗಿಲ್ಲ. ಅದೇ ಕಷ್ಟ, ಮತ್ತದೇ ಸಂಕಷ್ಟ!

ಬೆಳಗ್ಗೆ 6 ಗಂಟೆಗೆ ಚಿತ್ರೀಕರಣದ ಸ್ಪಾಟ್‌ಗೆ ಹಾಜರಾಗುವ ಕಾರ್ಮಿಕರು, ಮಳೆ-ಬಿಸಿಲು-ಛಳಿ ಏನೇ ಇರಲಿ, ಶೂಟಿಂಗ್‌ ಪ್ಯಾಕಪ್‌ ಆಗುವವರೆಗೂ ಶ್ರಮಿಸಲೇಬೇಕು. ಅಲ್ಲಿ, ತಿಂಡಿ-ಊಟೋಪಚಾರ ವಿಷಯದಲ್ಲಿ ರಗಳೆ ಇಲ್ಲ ಎನ್ನುವುದು ಬಿಟ್ಟರೆ, ಸಿನಿಮಾದವರು ಕೊಡುವ ಕಾಸು, ಈಗಿನ ದುಬಾರಿ ಕಾಲದಲ್ಲಿ ಬದುಕು ನಿರ್ವಹಣೆಗೂ ಸಾಲದು. ಒಂದು ಸಿನಿಮಾದಲ್ಲಿ ಮೈ ಮುರಿಯುವಂತೆ ದುಡಿದರೂ, ರಾತ್ರಿ-ಹಗಲೆನ್ನದೆ, ಭಾರವಾದ ಪರಿಕರಗಳನ್ನು ಎತ್ತಿಕೊಂಡು ಶೂಟಿಂಗ್‌ ಸ್ಪಾಟ್‌ಗೆ ಬಂದರೂ, ಜೇಬು ತುಂಬುವಷ್ಟು ಕೂಲಿ ಸಿಗಲ್ಲ. ಸಿಕ್ಕ ಹಣದಲ್ಲೇ ನಿಟ್ಟುಸಿರು ಬಿಟ್ಟು, ತಮ್ಮ ಬದುಕಿನ ಬಂಡಿ ಎಳೆಯಬೇಕಾದ ಅನಿವಾರ್ಯತೆ ಇಂದಿಗೂ ಇದೆ. ಅದೇ ಅನಿವಾರ್ಯತೆಯಲ್ಲಿ ಸಿನಿ ಕಾರ್ಮಿಕರು ಕೆಲಸ ಮಾಡಲೇಬೇಕಿದೆ.

ಸಾಕಷ್ಟು ಕಾರ್ಮಿಕರಿಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಎಷ್ಟೋ ಜನರಿಗೆ ಕಲರ್‌ಫುಲ್‌ ದುನಿಯಾ ಅಂದಾಕ್ಷಣ, ಎಲ್ಲವೂ ಇಲ್ಲಿ ರಂಗಾಗಿಯೇ ಕಾಣುತ್ತೆ. ಆದರೆ, ಒಂದು ಸಿನಿಮಾ ತಯಾರಿಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ಕಾರ್ಮಿಕರ ಬದುಕು ಮಾತ್ರ ನಿಜಕ್ಕೂ ಮೂರಾಬಟ್ಟೆ. ಅದೆಷ್ಟೋ ಹಾಸ್ಯ ದೃಶ್ಯಗಳಿಗೆ ಹೆಗಲು ಕೊಟ್ಟು ನಿಲ್ಲುವ ಕಾರ್ಮಿಕರ ಬದುಕಲ್ಲಿ ಊಹಿಸಲಾರದಷ್ಟು ನೋವಿದೆ. ಆದರೆ, ಸಿನಿಮಾದಲ್ಲಿ ಹೇಳಿಕೊಂಡು ಸಂಭ್ರಮಿಸುವಂತಹ ವೇತನವಿಲ್ಲ. ಕೆಲವು ಚಿತ್ರಗಳಲ್ಲಿ ಅಂದಿನಂದಿನ ದಿನಗೂಲಿ ಸಿಕ್ಕರೆ ಅದೇ ದೊಡ್ಡ ವಿಷಯ. ಇನ್ನು ಕೆಲವು ಸಿನಿಮಾಗಳಿಂದ ಬರುವ ಬಿಡಿಗಾಸೂ ಕೂಡ ಸಿಗದೇ ಕಾರ್ಮಿಕರು ದಿನ‌ನಿತ್ಯ ಅಲೆದಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಲ್ಲೇನಿದ್ದರೂ, ತೆರೆ ಮೇಲೆ ಕಾಣುವ ಸ್ಟಾರ್‌ಗಳಿಗೆ ಮಾತ್ರ ಕೋಟಿ ಕೋಟಿ ಹಣ. ಮಿಕ್ಕವರು ಪಾಲಿಗೆ ಬಂದದ್ದು ಅಮೃತ ಅಂದುಕೊಂಡು ದಿನ ದೂಡಲೇಬೇಕು. ಯಾಕೆಂದರೆ, ಸಿನಿಮಾ ಕಾರ್ಮಿಕರಿಗೆ ಈ ಬಣ್ಣದ ಲೋಕ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇಲ್ಲೇ ಇದ್ದು, ಇಲ್ಲೇ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಕಾರ್ಮಿಕ ಕುಟುಂಬಗಳು ಇಂದಿಗೂ, ಒದ್ದಾಟದಲ್ಲೇ ಜೀವನ ಸಾಗಿಸುತ್ತಿವೆ. ಇಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕನಿಗೂ ತನ್ನದೇ ಆದ ನೋವಿದೆ. ನೋಡುವ ಪ್ರೇಕ್ಷಕರಿಗೆ ಸಿನಿಮಾ ಮನರಂಜನೆಯೇನೋ ಕೊಡುತ್ತೆ. ಆದರೆ, ಸಿನಿಮಾ ಹಿಂದೆ ಕೆಲಸ ಮಾಡುವ ಕಾರ್ಮಿಕರ ಬದುಕಲ್ಲಿ ಮಾತ್ರ ಆ ರಂಜನೆಯೇ ಇಲ್ಲ!

ಆರಂಭದ ದಿನಗಳಲ್ಲಿ ಕಾರ್ಮಿಕರ ದಿನ ಅಂದಾಕ್ಷಣ, ಸಿನಿಮಾ ಕಾರ್ಮಿಕರ ಒಕ್ಕೂಟ ಅದ್ಧೂರಿಯಾಗಿಯೇ ಸಂಭ್ರಮ ಆಚರಿಸುತ್ತಿತ್ತು. ಎಲ್ಲಾ ಕಾರ್ಮಿಕರು ಒಟ್ಟಾಗಿ, ಸಿಹಿ ತಿನಿಸು ತಿಂದು ಕುಣಿದು ಕುಪ್ಫಳಿಸುತ್ತಿದ್ದರು. ಎಲ್ಲರೂ ಒಂದೇ ಎಂಬ ಭಾವನೆಯಿಂದ, ಒಕ್ಕೂಟ ಮೂಲಕ ಸ್ಟಾರ್‌ಗಳನ್ನು ಕರೆದು ಸನ್ಮಾನಿಸಿ, ಗೌರವಿಸುತ್ತಿತ್ತು. ತನ್ನೊಳಗೆ ನೂರೆಂಟು ನೋವಿದ್ದರು, ಹೇಳಲಾಗದಷ್ಟು ಕಷ್ಟವಿದ್ದರೂ, ಮೊಗದಲ್ಲಿ ಒಂದಷ್ಟು ಮಂದಹಾಸ ಬೀರುತ್ತಲೇ ಕಾರ್ಮಿಕರ ದಿನವನ್ನು ಸಂತಸದಿಂದಲೇ ಆಚರಿಸುತ್ತಿತ್ತು. ಆದರೆ, ಕಳೆದ ವರ್ಷದಿಂದ ಅದಕ್ಕೂ ಕಲ್ಲು ಬಿದ್ದಿದೆ. ಕೊರೊನಾ ಅಂಥದ್ದೊಂದು ಕರಾಳತೆಗೆ ಸಾಕ್ಷಿಯಾಗಿದೆ. ಅದು ಈ ವರ್ಷವೂ ಮುಂದುವರೆದಿದೆ.

ಕೊರೊನಾ ಆವರಿಸಿ, ಅದೆಷ್ಟೋ ಸಿನಿಮಾ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿದ್ದು ಸುಳ್ಳಲ್ಲ. ಚಿತ್ರರಂಗದಲ್ಲಿ ದಿನಗೂಲಿಗರಾಗಿ ದುಡಿಯುವ ವರ್ಗದ ಗೋಳು ತಲತಲಾಂತರದಿಂದಲೂ ಇದೆ. ಅಲ್ಲಿ ಬರೀ ಆಶ್ವಾಸನೆಗಳು ಸಿಗುತ್ತಿವೆ ಹೊರತು, ಬದುಕು ಹಸನಾಗುವಂತಹ ಕೆಲಸವಾಗುತ್ತಿಲ್ಲ ಎಂಬುದೇ ಸಿನಿಮಾ ಕಾರ್ಮಿಗರ ನೋವಿನ ಮಾತು. ಮುಂದಿನ ದಿನಗಳಲ್ಲಾದರೂ, ಹಿಂದಿನ ವೈಭವ ಮರುಕಳಿಸಲಿ ಕಾರ್ಮಿಕರ ಬದುಕು ಹಸನಲಾಗಲಿ ಅನ್ನೋದೇ ಸಿನಿಲಹರಿ ಆಶಯ.

Categories
ಸಿನಿ ಸುದ್ದಿ

ಸೂಪರ್‌ ಕಪಲ್‌… ! ಇಲ್ಲಿದೆ ರೋಚಕತೆಯ ಫ್ಯಾಮಿಲಿ ಮ್ಯಾಟರ್!! ಇದು ಕನ್ನಡದ ಹೊಸ ವೆಬ್ ಸರಣಿ…

ಸದ್ಯ ಈಗ ಡಿಜಿಟಲ್ ಮಾಧ್ಯಮದ್ದೇ ಹವಾ! ಹೌದು, ಅದರಲ್ಲೂ ಮನರಂಜನೆ ವಿಷಯದಲ್ಲಂತೂ ಒಂದು ಹೆಜ್ಜೆ ಮುಂದೆ. ಸಾಕಷ್ಟು ಡಿಜಿಟಲ್ ಮಾಧ್ಯಮಗಳಲ್ಲಿ ಮನರಂಜನೆ ಅಂಶಗಳದ್ದೇ ಕಾರುಬಾರು. ಅಂತಹ ಮನರಂಜನೆಗೆ ಮತ್ತೊಂದು ವೇದಿಕೆಯ ಹೆಸರು “ಮಾಧ್ಯಮ ಅನೇಕ”. ಇಲ್ಲೀಗ ವೆಬ್ ಸರಣಿಯೊಂದು ಶುರುವಾಗುತ್ತಿದೆ. ಅದರ ಹೆಸರು ” ಸೂಪರ್ ಕಪಲ್” ಈಗಾಗಲೇ ಅದರ ಸ್ಯಾಂಪಲ್ ಎಂಬಂತೆ ಆ ವೆಬ್ ಸರಣಿಯ ಟೀಸರ್ ಕೂಡ ರಿಲೀಸ್ ಆಗಿದೆ. ಟೀಸರ್ ನೋಡಿದವರಿಗೆ ಸಖತ್ ಮಜವಂತೂ ಕಾಣಿಸುತ್ತೆ. ಇನ್ನು ಸರಣಿಯಲ್ಲಿ ಏನೆಲ್ಲಾ ಇರಬಹುದು ಅನ್ನೋ ಕುತೂಹಲ ಸಹಜವೇ.


ಈ ಸೂಪರ್ ಕಪಲ್ ಬಗ್ಗೆ ಹೇಳೋದಾದರೆ,
“ಬೆಂಗಳೂರಿನಂಥ ಮಹಾನಗರದಲ್ಲಿ ವಾಸ ಮಾಡುತ್ತಾ ಆಧುನಿಕ ಜೀವನ ಶೈಲಿ ಅನುಸರಿಸುತ್ತಿರುವ ಯುವ ದಂಪತಿ ಈಶ್ವರ್ ಮತ್ತು ಶಾರ್ವರಿ. ಇಬ್ಬರ ಸ್ವಭಾವ ತದ್ವಿರುದ್ಧ. ಆದರೆ, ಪರಸ್ಪರರಲ್ಲಿ ಪ್ರೀತಿ, ಗೌರವವಿದೆ. ಇಬ್ಬರದ್ದೂ ಒಂದೇ ಗುರಿ, ಆದರೆ ದಾರಿ ಮಾತ್ರ ಭಿನ್ನ. ಈ ಜೋಡಿಯ ಬದುಕಿನ ನೈಜ ಹಾಸ್ಯ ಘಟನಾವಳಿಗಳನ್ನು ಕಚ್ಚಾಟ, ಕಿರುಚಾಟಗಳಿಲ್ಲದೆ ಕಟ್ಟಿಕೊಡುವ ಈ ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೊದಲ ಸೀಸನ್‌ ನೋಡುಗರನ್ನು ತಲುಪಿ ಈಗಾಗಲೇ ಮೆಚ್ಚುಗೆ ಪಡೆದಿತ್ತು. ಆ ಜನಪ್ರಿಯತೆಯ ಹಿನ್ನೆಲೆಯಲ್ಲಿ ಇದೀಗ ‘ಸೂಪರ್‌ ಕಪಲ್‌’ ಎರಡನೆಯ ಕಂತು ರೂಪುಗೊಂಡು ಪ್ರಸಾರಕ್ಕೆ ಸಿದ್ಧವಾಗಿದೆ.


ರಘು ಅವರು ಇಲ್ಲಿ ‘ಈಶ್ವರ್’ ಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ತೇಜಸ್ವಿನಿ ಅವರು ‘ಶಾರ್ವರಿ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸರಣಿಯ ಮತ್ತಿಬ್ಬರು ಯುವ ಪ್ರತಿಭೆಗಳು ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ಪ್ರೇರಣಾ ಕಂಬಂ ಮತ್ತು ಉದಯ ಮ್ಯೂಸಿಕ್‌ನ ವಿಜೆ ಇಮ್ರಾನ್ ಪಾಷಾ. ‘ಸೂಪರ್ ಕಪಲ್‌’ನ ದಿನ ನಿತ್ಯದ ಬದುಕಿನಲ್ಲಿ ಇನ್ನಷ್ಟು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಹುಟ್ಟು ಹಾಕುವ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ದಂಪತಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಉದ್ಭವ ಆಗುವ ಹಲವಾರು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಬಿಂಬಿಸುವ, ಯುವ ಜನರ ಜೊತೆಗೆ, ಕುಟುಂಬದ ಎಲ್ಲರೂ ನೋಡಿ ಖುಷಿ ಪಡಬಹುದಾದ ವೆಬ್‌ ಸರಣಿ ಇದಾಗಿದೆ. ರಘುನಂದನ್ ಖಾನಡ್ಕ ಮತ್ತು ಪುನೀತ್ ಕಬ್ಬೂರು ಸರಣಿಯ ನಿರ್ದೇಶಕರು. ಏಪ್ರಿಲ್‌ 30ರಂದು ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಮೇ 3 ರಂದು ಸರಣಿಯ ಸಂಚಿಕೆ ‘ಮಾಧ್ಯಮ ಅನೇಕ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಸ್ಟ್ರೀಮ್‌ ಆಗಲಿದೆ.
ಅಂದಹಾಗೆ,
2018ರಲ್ಲಿ ಆರಂಭಗೊಂಡ ‘ಮಾಧ್ಯಮ ಅನೇಕ’ ಮೌಲ್ಯಯುತವಾದ, ಹೊಸತನ ಹಾಗೂ ಉತ್ತಮ ಗುಣಮಟ್ಟದ ಮಾಹಿತಿ ಮತ್ತು ಮನರಂಜನಾ ಕಾರ್ಯಕ್ರಮ, ಸಾಕ್ಷ್ಯಚಿತ್ರಗಳು, ಸಂದರ್ಶನಗಳು, ವೆಬ್ ಆಧಾರಿತ ಮನರಂಜನೆ‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

Categories
ಸಿನಿ ಸುದ್ದಿ

ಕೊರೊನೊ ಸಂಕಷ್ಟಕ್ಕೆ ಮಿಡಿಯುತ್ತಿರೋ ಮನಸುಗಳು! ಕನ್ನಡ ನಟನೊಬ್ಬ ಆಂಬುಲೆನ್ಸ್ ಚಾಲಕನಾಗಿ ಸೇವೆ

ಕೊರೊನಾ ಸಾಕಷ್ಟು ಸಮಸ್ಯೆ ಹುಟ್ಟು ಹಾಕಿದೆ. ಅದಷ್ಟೇ ಅಲ್ಲ, ಅದೆಷ್ಟೊ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ, ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸಿಗದ ಬೆಡ್ ಮತ್ತು ಆಕ್ಸಿಜನ್. ಇದರಿಂದ ಜನ ಪರದಾಡುತ್ತಿದ್ದಾರೆ. ಸಾವಿನ ದವಡೆಯಲ್ಲಿದ್ದಾರೆ. ಇದನ್ನರಿತ ಸಾಕಷ್ಟು ಮಂದಿ ಹಲವು ಸೇವೆಗೆ ಮುಂದಾಗಿದ್ದಾರೆ. ಇದಕ್ಕೆ ಸಿನಿಮಾ ರಂಗದ ಮಂದಿಯೂ ಹೊರತಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಹಲವು ಸಿನಿಮಾ ನಟ, ನಟಿಯರು ತಮ್ಮದೇ ರೂಟಿನಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಮಂದಿ ಕೂಡ ಕೊರೊನಾ ವಿರುದ್ಧ ನಿಂತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಟನೊಬ್ಬ ಕೂಡ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಆಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಅದು ಬೇರಾರೂ ಅಲ್ಲ, ನಟ ಅರ್ಜುನ್ ಗೌಡ. ಅವರು ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದೇ ವಿಶೇಷ. ತೀವ್ರ ಸಮಸ್ಯೆಯಲ್ಲಿರುವ ಜನರಿಗೆ ಅರ್ಜುನ್ ಗೌಡ ಸಹಾಯಕ್ಕೆ ನಿಂತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವುದರ ಜೊತೆ ಮೃತಪಟ್ಟವರ ಅಂತಿಮ ವಿಧಿವಿಧಾನ ನೆರವೇರಿಸಲು ಆಂಬುಲೆನ್ಸ್ ಸೇವೆಯನ್ನು ಮಾಡುತ್ತಿದ್ದಾರೆ.

ಈಗಾಗಲೇ ಸಾಕಷ್ಟು ಮಂದಿಗೆ ಅರ್ಜುನ್ ಸಹಾಯ ಮಾಡಿರುವ ಅವರು, ಮುಂದಿನ ಎರಡು ತಿಂಗಳು ಈ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಕೇವಲ ರೋಗಿಗಳನ್ನು ಕರೆದೊಯ್ಯುವುದು ಮತ್ತು ಮೃತದೇಹಗಳನ್ನು ಸಾಗಿಸುವುದು ಮಾತ್ರವಲ್ಲದೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Categories
ಸಿನಿ ಸುದ್ದಿ

ಖ್ಯಾತ ತಮಿಳು ಛಾಯಾಗ್ರಾಹಕ , ನಿರ್ದೇಶಕ ಕೆ. ವಿ. ಆನಂದ್ ನಿಧನ

ಇತ್ತೀಚೆಗೆ ಚಿತ್ರರಂಗದಲ್ಲಿ ಆಘಾತಕಾರಿ ವಿಷಯಗಳು ಹೆಚ್ಚಾಗಿವೆ‌.‌ ಒಂದೆಡೆ ಕೊರೊನಾ ಹಾವಳಿಯಾದರೆ ಇನ್ನೊಂದೆಡೆ ಚಿತ್ರೋದ್ಯಮದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ‌.

ಹೌದು, ಕರ್ನಾಟಕದ ಜನರು ಸಾವು ನೋವುಗಳ ಜೊತೆ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ನಾನಾ ರಂಗದಲ್ಲಿನ ದಿಗ್ಗಜರು ಕೊರೋನಾದಿಂದ ಮೃತಪಟ್ಟಿದ್ದಾರೆ.

54 ವರ್ಷ ವಯಸ್ಸಿನ ಖ್ಯಾತ ತಮಿಳು ಸಿನಿಮಾ ನಿರ್ದೇಶಕ ಕೆ ವಿ ಆನಂದ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಪತ್ರಕರ್ತರಾಗಿ ಸಿನಿಮಾ ರಂಗ ಪ್ರವೇಶಿಸಿದ ಇವರು ಛಾಯಾಗ್ರಹಣ ಅಂದರೆ ಇಷ್ಟ ಪಡುತ್ತಿದ್ದರು‌.

ಇವರು ಮೋಹನ್ ಲಾಲ್ ಅಭಿನಯಿಸಿದ ತೇನ್ ಮಾವಿನ್ ಕೊಂಬತ್ತ್ ಸಿನಿಮಾಗೆ ಕೊಡುಗೆನೀಡಿದ್ದರು‌‌. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ‌.

ಇತ್ತೀಚೆಗೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದೆಂಥಹ ಸೆಲೆಬ್ರಿಟಿಯನ್ನೂ ಬಿಡುತ್ತಿಲ್ಲ. ಇತ್ತೀಚೆಗೆ ಸಿನಿಮಾ ರಂಗದ ಹಲವರನ್ನು ಕೊರೊನಾ ಬಲಿತೆಗೆದುಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.

Categories
ಸಿನಿ ಸುದ್ದಿ

ಮೊಗ್ಗಿನ ಮನಸ್ಸು ನಿರ್ದೇಶಕ ಶಶಾಂಕ್ ಮತ್ತೆ ಹೊಸ ಪ್ರತಿಭೆ ಜೊತೆ ಸಿನಿಮಾ ; ಹೆಸರಿಡದ ಚಿತ್ರಕ್ಕೆ ನೆರವೇರಿತು ಮುಹೂರ್ತ

ಕನ್ನಡದಲ್ಲಿ ಹೊಸಬರ ಹಿಂದೆ ನಿಂತು ಸಾಬೀತುಪಡಿಸಿದ ನಿರ್ದೇಶಕ ಶಶಾಂಕ್, ಈಗ ಮತ್ತೆ ಹೊಸಬರ ಹಿಂದೆ ಹೊರಟಿದ್ದಾರೆ. ಹೌದು, ಶಶಾಂಕ್ ಈಗ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ.
“ಶಶಾಂಕ್ ಸಿನೆಮಾಸ್” ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಸದ ಮೂಲಕ‌ ಅವರು “ಪ್ರವೀಣ್” ಎಂಬ ಹೊಸ ನಾಯಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ವೈದ್ಯಕೀಯ ಪದವೀಧರರಾದ ಪ್ರವೀಣ್ ಅವರು ಹೊಸಪೇಟೆ ಮೂಲದವರಾಗಿದ್ದು, ಹೀರೋ ಆಗಬೇಕೆಂದು ಬಂದಿದ್ದಾರೆ. ಅಷ್ಟೇ ಅಲ್ಲ, ಅವರು ನಟನಾಗುವ ಆಸಕ್ತಿಯಿಂದ ಅದಕ್ಕೆ ಬೇಕಾಗುವ ಎಲ್ಲಾ ತರಬೇತಿ ಪಡೆದು ಬೆಳ್ಳಿತೆರೆಗೆ ಎಂಟ್ರಿಯಾಗಲು ರೆಡಿಯಾಗಿದ್ದಾರೆ.

ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಭಾವುಕ ಪ್ರೇಮಕಥೆಯ ಈ ಚಿತ್ರಕ್ಕೆ ಶಶಾಂಕ್ ಹೊಸ ನಾಯಕಿಯ ಹುಡುಕಾಟ ನಡೆಸುತ್ತಿದ್ದಾರೆ ಲಾಕ್ಡೌನ್ ಗೂ ಮುನ್ನ ಸರಳವಾಗಿ ಮುಹೂರ್ತ ನೆರವೇರಿದ್ದು, ಲಾಕ್ಡೌನ್ ಮುಗಿದ ನಂತರ ಫೋಟೋ ಶೂಟ್ ಮಾಡಿ, ಶೀರ್ಷಿಕೆಯ ಜೊತೆ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

Categories
ಸಿನಿ ಸುದ್ದಿ

ಕನ್ನಡದ ನಟರನ್ನು ಎಚ್ಚರಿಸಲು ಕೊನೆಗೂ ಸೋನು ಸೂದ್ ಅವರೇ ಬರಬೇಕಾಯಿತಾ..?


ನಟ ಸೋನು ಸೂದ್ ಅಂದ್ರೆ ಎಲ್ಲರಿಗೂ ಗೊತ್ತಿದದ್ದು ಬೆಳ್ಳಿತೆರೆ ಮೇಲಿನ ಒಬ್ಬ ವಿಲನ್ ಆಗಿ. ಅದರಾಚೆ ಅವರು ರಿಯಲ್ ಲೈಫ್ ನಲ್ಲೂ‌ ಹೀರೋ ಅಂತ ಗೊತ್ತಾಗಿದ್ದು ಕಳೆದ ವರ್ಷ ಕೊರೋನಾ ತಂದಿಟ್ಟಿದ್ದ ಸಂಕಷ್ಟದ ಕಾಲದಲ್ಲಿ. ಆ ಸಂದರ್ಭದಲ್ಲಿ ಅವರು ಅದೆಷ್ಟು ಜನರಿಗೆ ಸಹಾಯಕ್ಕೆ ನಿಂತರು ಅನ್ನೋದು ಇಡೀ ಭಾರತಕ್ಕೆ ಗೊತ್ತಾಯಿತು. ಅಷ್ಟು ಮಾತ್ರವಲ್ಲ ಇಡೀ ಇಂಡಿಯಾವೇ ಅವರನ್ನು‌ ಕೊಂಡಾಡಿ ಬಿಟ್ಟಿತು‌. ಇಂತಿಪ್ಪ ವಿಲನ್ ಸೋನು ಸೂದ್ ಈಗ ಕರ್ನಾಟಕಕ್ಕೂ ನೆರವಿನ ಹಸ್ತ ನೀಡುವ ಮೂಲಕ ಸ್ಯಾಂಡಲ್ ವುಡ್ ಶಾಕ್ ಕೊಟ್ಟಿದ್ದಾರೆ. ವಿಶೇಷವಾಗಿ ಕೊರೋನ‌ ಎರಡನೇ ಅಲೆಯಲ್ಲಿ ತತ್ತರಿಸಿರುವ ರಾಜ್ಯದ ಜನತೆಯ ಪರವಾಗಿ ಬೆಂಗಳೂರು ಪೊಲೀಸರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ನೂರು ಆಕ್ಸಿಜನ್ ಕಿಟ್ ನೀಡುವುದಾಗಿ ಹೇಳಿದ್ದಾರೆ.

ಇದು ಅವರ ಸ್ವ ಇಚ್ಚೆಯ ಕೆಲಸ. ಕರ್ನಾಟಕದ ಪೊಲೀಸರು ಕೇಳುವ ಮೊದಲೇ, ಹೃದಯವಂತ ಸೋನು‌ ಸೂದ್ ಈ ಕೆಲಸ‌ ಮಾಡಿದ್ದಾರೆ. ಅದು ಆಗಿದ್ದು‌ ಕೂಡ ಒಂದು ಅಚ್ಚರಿಯೇ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರಿಗೆ ಮುಂಬೈನಿಂದ ಒಂದು‌ ಪೋನ್ ಕಾಲ್ ಬರುತ್ತೆ. ಸಹಜವಾಗಿಯೇ ಅವರು ಯಾರೋ ಇರಬಹುದು ಅಂತ ಹಲೋ‌ ಅಂತಾರೆ. ಆ‌ ಕಡೆಯಿಂದ ಸೋನು‌ ಸೂದ್ ಸಹಾಯಕ ,ಮಾತನಾಡುತ್ತಿರುತ್ತಾನೆ. ಸರ್, ಏಕ್ ಮಿನಿಟ್ ಸಾಬ್ ಬಾತ್ ಕರೋ‌ ಅಂತಾನೆ. ಕಮೀಷನರ್‌ ಕಮಲ್‌ಪಂಥ್ ಆಯ್ತು ಅಂತಾರೆ‌ .ಹಲೋ‌ ಸರ್, ಐ ಅ್ಯಮ್ ಸೋನು‌ಸೂದ್ ಅಂತ ಆ‌ ಕಡೆಯಿಂದ ಧ್ವನಿ‌ ಕೇಳಿಸುತ್ತೆ. ಕಮೀಷನರ್ ಕಮಲ್ ಪಂಥ್ ಅಚ್ಚರಿಗೊಳುತ್ತಾರೆ. ತಕ್ಷಣವೇ ಸೋನು‌ಸೂದ್ ತಾವೇನು ಅಂದುಕೊಂಡಿದ್ದರೋ ಅದನ್ನು‌ ಹೇಳಿ ಪೋನ್ ಕಾಲ್ ಕಟ್ ಮಾಡುತ್ತಾರೆ‌. ಆ ಸಂಭಾಷಣೆ ಪ್ರಕಾರ, ಕರ್ನಾಟಕ ಪೊಲೀಸರಿಗೆ ನೂರು ಆಕ್ಸಿಜನ್ ಕಿಟ್ ನೀಡುವುದಾಗಿ ಸೋನು ಸೂದ್ ಭರವಸೆ ನೀಡಿದ್ದಾರೆ‌.

ಇದು ಸೋನು ಸೂದ್ ಕೆಲಸ. ಬಾಲಿವುಡ್ ನಟ ಸೋನು ಸೂದ್ ಕನ್ನಡಕ್ಕೂ ಪರಿಚಿತರೆ. ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಕನ್ನಡದಂತೆಯೇ ತೆಲುಗು, ತಮಿಳು ಹಾಗೂ‌ ಮಲಯಾಳಂ‌ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಅದರೂ ಅವರಿಗೆ ಕನ್ನಡದ ಮೇಲೆ ವಿಶೇಷ ಅಭಿಮಾನ‌ ಅನ್ನೋ‌ ಮಾತನ್ನು ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು. ಈಗ ಆ ಅಭಿಮಾನವನ್ನು ಇನ್ಮೊಂದು‌ ರೀತಿಯಲ್ಲಿ ತೋರಿಸಿದ್ದಾರೆ. ಕನ್ನಡದ ನಟರಿಗೆ ಇದು ನಿಜಕ್ಕೂ‌ ಮಾದರಿ.‌ ಹಾಗೆಯೇ ಒಂದು ಸಂದೇಶ. ಹಾಗೆ‌ ನೋಡಿದರೆ ಈ ಕೆಲಸ ಇಲ್ಲಿನ ನಟರಿಂದಲೇ‌ ಮೊದಲು ಶುರುವಾಗಬೇಕಿತ್ತು.‌ ಆದರೆ ಅವರೆಲ್ಲ ಈಗ ತಮ್ಮ ತಮ್ಮ‌ ಫಾರ್ಮ್ ಹೌಸ್ ಗಳಲ್ಲಿ ಸುರಕ್ಷಿತ ವಾಗಿದ್ದಾರೆ. ಕೆಲವರು ತಾವೇ ನಿಜವಾದ ರೈತರು ಎನ್ನುವಂತೆ ಫೋಸು ನೀಡುತ್ತಿದ್ದಾರೆ. ತಮ್ಮನ್ನು ಹೊತ್ತು ಮೆರೆದ ಅಭಿಮಾನಿಗಳು‌ ಶವವಾಗಿ ಹೋಗುತ್ತಿದ್ದರೂ ತಾವು‌ ಮಾತ್ರ ಹೀಗೆಯೇ ಅಂತ ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಹಾಯಾಗಿ ಕಾಲ‌ ಕಳೆಯುತ್ತಿದ್ದಾರೆ‌ . ಹಾಗಂತ ಅವರಿಗೇನು ಆಸ್ತಿ- ಅಂತಸ್ತು ಕಮ್ಮಿ ಇಲ್ಲ. ಒಂದೊಂದು ಸಿನಿಮಾಕ್ಕೆ ಇವರೆಲ್ಲ ಏಳೆಂಟು‌ ಕೋಟಿ‌ ಸಂಭಾವನೆ ಎಣಿಸುವವರೆ. ಅವರ ಕಾರು ಬಾರು ನೋಡಿದರೆಯೇ ಜನ ಸಾಮನ್ಯರ ಹೊಟ್ಟೆ ಉರಿಯುತ್ತೆ. ಆದರೆ ಅವರಿಗೆ ಇಂತಹದೊಂದು ಘನ ಕಾರ್ಯ ಮಾಡಬಹುದು ಅಂತ ಇವರಿಗೂ ಎನಿಸಿಲ್ಲ. ಅವರಿಗೆಲ್ಲ ಸೋನು ಸೂದ್ ಕೆಲಸ ಒಂದು‌ ಎಚ್ಚರಿಕೆಯೇ ಆಗಿದೆ. ಇನ್ನಾದರೂ ಕನ್ನಡದ ನಟರು‌ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುತ್ತಾರೆಯೇ ಕಾದು‌ ನೋಡಬೇಕಿದೆ.

Categories
ಸಿನಿ ಸುದ್ದಿ

ಮತ್ತೊಬ್ಬ ನಿರ್ಮಾಪಕ ನಿಧನ; ಅಣ್ಣಯ್ಯ,ರನ್ನ ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ

ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ಚಂದ್ರಶೇಖರ್ ನಿಧನರಾಗಿದ್ದಾರೆ. ಕಳೆದ 23 ದಿನಗಳ ಹಿಂದೆಯೇ ಅವರಿಗೆ ಕೋವಿಡ್ ಪಾಸಿಟಿವ್ ಇತ್ತು. ಮಣಿಪಾಲ್ ಗೆ ದಾಖಲಿಸಲಾಗಿತ್ತು. ಕೊರೊನಾದಿಂದ ಹೊರ ಬಂದಿದ್ದರೂ, ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡು ಗುರುವಾರ ಮುಂಜಾನೆ ನಿಧನರಾಗಿದ್ದಾರೆ.

ನಿಮಿಶಾಂಬ ಪ್ರೊಡಕ್ಷನ್ಸ್ ಮೂಲಕ “ಅಣ್ಣಯ್ಯ”, “ಬಿಂದಾಸ್”, “ಏನೋ ಒಂಥರಾ”, “ರನ್ನ‌” ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು.

ಚಂದ್ರಶೇಖರ್ ಅವರು ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರಿಗಾಗಿ ಸಿನಿಮಾವೊಂದನ್ನು ಮಾಡುವುದಾಗಿ ಅನೌನ್ಸ್ ಮಾಡಿದ್ದರು.

ಕೋಟಿ‌ ನಿರ್ಮಾಪಕ ರಾಮು ಅವರ ಜೊತೆಗೆ ಉದ್ಯಮ ಮತ್ತೊಂದು ಅನ್ನದಾತನ್ನ ಕಳೆದುಕೊಂಡಂತಾಗಿದೆ.

Categories
ಸಿನಿ ಸುದ್ದಿ

ಬರಲಿದೆ ಬರ್ಕ್ಲಿ ಟೀಸರ್: ಇದು ವಿಭಿನ್ನ ಕಥಾಹಂದರದ ಚಿತ್ರ -ಬಾಲರಾಜ್ ಪುತ್ರನ ಸಿಗರೇಟ್ ಕಹಾನಿ ಅಲ್ಲವೇ ಅಲ್ಲ!

ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಈಗ ಬರ್ಕ್ಲಿ ಸಿಗರೇಟ್ ಬೇಕು ಅಂತಿದ್ದಾರೆ. ಅರೇ, ಸಿಗರೇಟ್ ವಿಷಯ ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಇದು ಸಿನಿಮಾ ಸುದ್ದಿ. ಹೌದು “ಬರ್ಕ್ಲಿ” ಚಿತ್ರ ಈಗ ಸದ್ದು ಮಾಡಲು ಸಜ್ಜಾಗಿದೆ.. ಏಪ್ರಿಲ್ 30 ರ ಸಂಜೆ 5 ಗಂಟೆಗೆ ಝೇಂಕಾರ್ ಮ್ಯೂಸಿಕ್ ಮೂಲಕ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ “ಬರ್ಕ್ಲಿ” ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ಸದ್ಯದಲ್ಲೇ ಫಸದಟ್ ಕಾಪಿ ಸಿದ್ದವಾಗಲಿದೆ. ಈಗಾಗಲೇ “ಕರಿಯ”, “ಗಣಪ”, “ಕರಿಯ ೨” ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ದೂರಿ ಚಿತ್ರವಿದು.
“ಬರ್ಕ್ಲಿ‌” ಒಂದು ಉತ್ತಮ‌ ಮನೋರಂಜನೆ ಸಿನಿಮಾ. ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ನಿರ್ದೇಶಕರು. ಚಿತ್ರಕ್ಕೆ ಸಂಗೀತ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರದೇ.


” ಬರ್ಕ್ಲಿ” ಎಂದ ಕೂಡಲೇ ಎಲ್ಲರೂ ಸಿಗರೇಟ್ ಒಂದರ ಹೆಸರು ಅಂದುಕೊಳ್ಳುತ್ತಾರೆ. ಆದರೆ ನಮ್ಮ “ಬರ್ಕ್ಲಿ” ಚಿತ್ರಕ್ಕೂ ಸಿಗರೇಟ್ ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದ ಶೀರ್ಷಿಕೆಯ ಅರ್ಥವೇ ಬೇರೆ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.
“ಗಣಪ”, “ಕರಿಯ ೨” ಚಿತ್ರಗಳಲ್ಲಿ ನಟಿಸಿ
ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ.


ಬಹುಭಾಷಾ ನಟ ಚರಣರಾಜ್, ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ.
“ಬಹದ್ದೂರ್” ಚೇತನ್ ಕುಮಾರ್, ಅಭಿ ಕನಸಿನ ಕವನ‌ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್, ಎನ್.ಎಂ.ಸೂರಿ ಛಾಯಾಗ್ರಹಣವಿದೆ. ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕೊರೋನಾದಿಂದ ಸೇಫ್ ಆಗಿ ಹೊರ ಬಂದ ನಟ ಕೋಮಲ್! ಭಾವುಕತೆಯ ಬರಹದ ಜೊತೆ ರಾಯರಿಗೆ ನಮಿಸಿದ ಜಗ್ಗೇಶ್

ದೇಶಾದ್ಯಂತ ಕೊರೊನಾ ಸೋಂಕು ವಿಪರೀತವಾಗಿ ಹಬ್ಬುತ್ತಿದ್ದು, ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಮಾರಣಾಂತಿಕ ಕಾಯಿಲೆ ದಿನದಿಂದ ದಿನಕ್ಕೆ ಸಾವಿರಾರು ಜನರನ್ನು ಬಲಿ ಪಡೆದುಕೊಳ್ಳುತ್ತಿದೆ. ಈ ಬಿಸಿ ಚಿತ್ರರಂಗಕ್ಕೂ ಬರ ಸಿಡಿಲು ಬಡಿದಂತಾಗಿದೆ. ಇನ್ನೇನು ಚಿತ್ರಗಳು ಬಿಡುಗಡೆಗೆ ಸಿದ್ಧ ಎನ್ನುವ ಹೊತ್ತಿಗೆ, ಚಿತ್ರಮಂದಿರಗಳು ಬಾಗಿಲು ಹಾಕಿದವು. ಇದು ಕೊರೊನಾ ತಂದ ಆಘಾತ. ಇಷ್ಟೇ ಅಲ್ಲ, ಸಿನಿಮಾ ಮಂದಿಯ ಬದುಕನ್ನೇ ಬೀದಿಗೆ ತಳ್ಳಿದೆ. ಅತ್ತ ಸ್ಟಾರ್ ನಟರು ಕೂಡ ಸೂಕ್ತ ಸ್ಥಳ ಅರಸಿ ರೆಸಾರ್ಟ್, ಫಾರ್ಮ್ ಹೌಸ್ ಇತರೆಡೆ ಹೋಗಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನ ಕಳೆದಂತೆ ಸಿನಿಮಾ ರಂಗದ ಒಬ್ಬೊಬ್ಭರೇ ಕೊರೊನಾ ಹೊಡೆತಕ್ಕೆ ಜೀವ ಬಿಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಿರ್ಮಾಪಕ ಕೋಟಿ ರಾಮು ಅವರಿಗೆ ಕೊರೋನಾ ತಗುಲಿ‌ ಮೃತಪಟ್ಟಿರುವುದು ಅಕ್ಷರಶಃ ಸ್ಯಾಂಡಲ್ ವುಡ್ ಅನ್ನು ಬೆಚ್ಚಿ ಬೀಳಿಸಿದೆ. ಇದರ ಬೆನ್ನಲ್ಲೇ ಇದೀಗ ನಟ ಕೋಮಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಕೋಮಲ್ ಅವರು ಕೊರೊನಾ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು‌‌. ವೈದ್ಯರ ಸತತ ಪರಿಶ್ರಮದಿಂದ ಕೋಮಲ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ‌. ಈ ಕುರಿತು ಕೋಮಲ್ ಸಹೋದರ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

“ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ
ಮಾತ್ರ ಗೊತ್ತು!ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ! ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡು ಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗು ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ ತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ,
ಅನ್ನಕೊಟ್ಟ ಶಾರದೆ ಸೇವೆ ನಿಷ್ಟೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾಕ್ಷೇತ್ರದಲ್ಲು ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ ಸಾವಿನಮನೆ ಕದ ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು! ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು! komal is safe.


ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು
ಸ್ವಂತ ವ್ಯವಹಾರವನ್ನು ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ! ಆದರೆ, ಇತ್ತೀಚೆಗೆ ತನಗೆ ಬರಬೇಕಾದ ಬ bill ಗೆ ಅಲ್ಲಿನ ಕೆಲ ಲಂಚ ಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿ ಬಿಟ್ಟರು! ಅದ ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬ serious ಆಗಿಬಿಟ್ಟ!ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ!ಅವನಿಗೆ ಸಹಾಯ ಮಾಡಿದ ಡಾ: ಮಧುಮತಿ,ನಾದನಿ ಡಾ ಲಲಿತ ನರ್ಸ್ ಗಳ ಪಾದಕ್ಕೆ ನನ್ನ ನಮನ, ರಾಯರೆ ಎಂದು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

error: Content is protected !!