ಅದೊಂದು ಕಾಲವಿತ್ತು. ಮೇ 1 ಬಂತೆಂದರೆ, ಚಿತ್ರರಂಗದ ಕಾರ್ಮಿಕ ವಲಯದಲ್ಲಿ ಹರ್ಷವೋ ಹರ್ಷ. ಅಲ್ಲೊಂದು ಸಂಪೂರ್ಣ ಹಬ್ಬದ ವಾತಾವರಣವೇ ತುಂಬಿರುತ್ತಿತ್ತು. ಆದರೆ, ಕೊರೊನಾ ತಂದಿಟ್ಟ ಆಘಾತದಿಂದಾಗಿ ಸಿನಿಮಾ ಕಾರ್ಮಿಕರ ಮೊಗದಲ್ಲಿರಬೇಕಾದ ಹರ್ಷ ಈಗಿಲ್ಲ. ಬದಲಾಗಿ ಅವರಲ್ಲಿ ಆತಂಕದ ಛಾಯೆ ಮೂಡಿದೆ. ಬದುಕು ಮುಗಿದೇ ಹೋಯ್ತಾ ಎಂಬ ಭಯ ಕ್ಷಣ ಕ್ಷಣಕ್ಕೂ ಕಾಡುತ್ತಲೇ ಇದೆ. ಅದಕ್ಕೆ ಕಾರಣ, ಮಹಾಮಾರಿ ಕೊರೊನಾ… ಪ್ರತಿ ಕಾರ್ಮಿಕರ ದಿನದಂದು ನಿಜಕ್ಕೂ ಸಿನಿಮಾ ಕಾರ್ಮಿಕರ ಮೊಗದಲ್ಲಿ ಹರ್ಷವೇ ತುಂಬಿರುತ್ತಿತ್ತು. ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಒಕ್ಕೂಟದಲ್ಲಿರುವ ಬಹುತೇಕರು ದಿನಗೂಲಿಗರೇ. ಅವರ ಮೊಗದಲ್ಲೀಗ ಸಂಭ್ರಮವಿಲ್ಲ, ಬರೀ ಆತಂಕದ ಕರಿನೆರಳು ಅಂದರೆ ನಂಬಲೇಬೇಕು!
ಕಪ್ಪು-ಬಿಳುಪು ಕಾಲದಿಂದಲೂ ಈ ಚಿತ್ರರಂಗದ ಕಾರ್ಮಿಕ ವಲಯವೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಆ ಶ್ರಮಿಕ ವರ್ಗ ಇರದಿದ್ದರೆ, ಯಾವ ಸಿನಿಮಾನೂ ಅಂದುಕೊಂಡಂತೆ ತೆರೆಮೇಲೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಅಂದಿನಿಂದ ಇಂದಿನವರೆಗೂ ಸಿನಿಮಾ ಕಾರ್ಮಿಕರು ಈ ಬಣ್ಣದ ಲೋಕದಲ್ಲಿ ಬದುಕು ಸವೆಸುತ್ತಲೇ ಇದ್ದಾರೆ. ದಿನಗೂಲಿಗಳಾಗಿ, ಅದೆಷ್ಟೋ ಸ್ಟಾರ್ ನಟ,ನಟಿಯರ ಬದುಕಿನ ಯಶಸ್ಸಿಗೆ ಕಾರಣರಾಗಿದ್ದಾರೆ. ಬಣ್ಣದ ಜಗತ್ತಿನಲ್ಲಿದ್ದರೂ, ತೆರೆ ಹಿಂದೆ ಹಗಲಿರುಳು ಶ್ರಮಿಸುತ್ತಿದ್ದ ಸಿನಿಮಾ ಕಾರ್ಮಿಕರ ಬದುಕಲ್ಲಿ ಮಾತ್ರ ಬಣ್ಣ ಮಾಸಿ ಹೋಗಿದೆ. ಇದು ಹಿಂದಿನ ಪರಿಸ್ಥಿತಿ ಮಾತ್ರವಲ್ಲ, ಇಂದಿನ ಸ್ಥಿತಿಯೂ ಕೂಡ. ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ಸಿನಿಮಾಗಳೂ ಬದಲಾಗುತ್ತಿವೆ. ಆದರೆ, ಕಾರ್ಮಿಕರ ಬದುಕು ಮಾತ್ರ ಇಂದಿಗೂ ಬದಲಾಗಿಲ್ಲ. ಅದೇ ಕಷ್ಟ, ಮತ್ತದೇ ಸಂಕಷ್ಟ!
ಬೆಳಗ್ಗೆ 6 ಗಂಟೆಗೆ ಚಿತ್ರೀಕರಣದ ಸ್ಪಾಟ್‌ಗೆ ಹಾಜರಾಗುವ ಕಾರ್ಮಿಕರು, ಮಳೆ-ಬಿಸಿಲು-ಛಳಿ ಏನೇ ಇರಲಿ, ಶೂಟಿಂಗ್ ಪ್ಯಾಕಪ್ ಆಗುವವರೆಗೂ ಶ್ರಮಿಸಲೇಬೇಕು. ಅಲ್ಲಿ, ತಿಂಡಿ-ಊಟೋಪಚಾರ ವಿಷಯದಲ್ಲಿ ರಗಳೆ ಇಲ್ಲ ಎನ್ನುವುದು ಬಿಟ್ಟರೆ, ಸಿನಿಮಾದವರು ಕೊಡುವ ಕಾಸು, ಈಗಿನ ದುಬಾರಿ ಕಾಲದಲ್ಲಿ ಬದುಕು ನಿರ್ವಹಣೆಗೂ ಸಾಲದು. ಒಂದು ಸಿನಿಮಾದಲ್ಲಿ ಮೈ ಮುರಿಯುವಂತೆ ದುಡಿದರೂ, ರಾತ್ರಿ-ಹಗಲೆನ್ನದೆ, ಭಾರವಾದ ಪರಿಕರಗಳನ್ನು ಎತ್ತಿಕೊಂಡು ಶೂಟಿಂಗ್ ಸ್ಪಾಟ್‌ಗೆ ಬಂದರೂ, ಜೇಬು ತುಂಬುವಷ್ಟು ಕೂಲಿ ಸಿಗಲ್ಲ. ಸಿಕ್ಕ ಹಣದಲ್ಲೇ ನಿಟ್ಟುಸಿರು ಬಿಟ್ಟು, ತಮ್ಮ ಬದುಕಿನ ಬಂಡಿ ಎಳೆಯಬೇಕಾದ ಅನಿವಾರ್ಯತೆ ಇಂದಿಗೂ ಇದೆ. ಅದೇ ಅನಿವಾರ್ಯತೆಯಲ್ಲಿ ಸಿನಿ ಕಾರ್ಮಿಕರು ಕೆಲಸ ಮಾಡಲೇಬೇಕಿದೆ.
ಸಾಕಷ್ಟು ಕಾರ್ಮಿಕರಿಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಎಷ್ಟೋ ಜನರಿಗೆ ಕಲರ್‌ಫುಲ್ ದುನಿಯಾ ಅಂದಾಕ್ಷಣ, ಎಲ್ಲವೂ ಇಲ್ಲಿ ರಂಗಾಗಿಯೇ ಕಾಣುತ್ತೆ. ಆದರೆ, ಒಂದು ಸಿನಿಮಾ ತಯಾರಿಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ಕಾರ್ಮಿಕರ ಬದುಕು ಮಾತ್ರ ನಿಜಕ್ಕೂ ಮೂರಾಬಟ್ಟೆ. ಅದೆಷ್ಟೋ ಹಾಸ್ಯ ದೃಶ್ಯಗಳಿಗೆ ಹೆಗಲು ಕೊಟ್ಟು ನಿಲ್ಲುವ ಕಾರ್ಮಿಕರ ಬದುಕಲ್ಲಿ ಊಹಿಸಲಾರದಷ್ಟು ನೋವಿದೆ. ಆದರೆ, ಸಿನಿಮಾದಲ್ಲಿ ಹೇಳಿಕೊಂಡು ಸಂಭ್ರಮಿಸುವಂತಹ ವೇತನವಿಲ್ಲ. ಕೆಲವು ಚಿತ್ರಗಳಲ್ಲಿ ಅಂದಿನಂದಿನ ದಿನಗೂಲಿ ಸಿಕ್ಕರೆ ಅದೇ ದೊಡ್ಡ ವಿಷಯ. ಇನ್ನು ಕೆಲವು ಸಿನಿಮಾಗಳಿಂದ ಬರುವ ಬಿಡಿಗಾಸೂ ಕೂಡ ಸಿಗದೇ ಕಾರ್ಮಿಕರು ದಿನನಿತ್ಯ ಅಲೆದಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಲ್ಲೇನಿದ್ದರೂ, ತೆರೆ ಮೇಲೆ ಕಾಣುವ ಸ್ಟಾರ್‌ಗಳಿಗೆ ಮಾತ್ರ ಕೋಟಿ ಕೋಟಿ ಹಣ. ಮಿಕ್ಕವರು ಪಾಲಿಗೆ ಬಂದದ್ದು ಅಮೃತ ಅಂದುಕೊಂಡು ದಿನ ದೂಡಲೇಬೇಕು. ಯಾಕೆಂದರೆ, ಸಿನಿಮಾ ಕಾರ್ಮಿಕರಿಗೆ ಈ ಬಣ್ಣದ ಲೋಕ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇಲ್ಲೇ ಇದ್ದು, ಇಲ್ಲೇ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಕಾರ್ಮಿಕ ಕುಟುಂಬಗಳು ಇಂದಿಗೂ, ಒದ್ದಾಟದಲ್ಲೇ ಜೀವನ ಸಾಗಿಸುತ್ತಿವೆ. ಇಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕನಿಗೂ ತನ್ನದೇ ಆದ ನೋವಿದೆ. ನೋಡುವ ಪ್ರೇಕ್ಷಕರಿಗೆ ಸಿನಿಮಾ ಮನರಂಜನೆಯೇನೋ ಕೊಡುತ್ತೆ. ಆದರೆ, ಸಿನಿಮಾ ಹಿಂದೆ ಕೆಲಸ ಮಾಡುವ ಕಾರ್ಮಿಕರ ಬದುಕಲ್ಲಿ ಮಾತ್ರ ಆ ರಂಜನೆಯೇ ಇಲ್ಲ!
ಆರಂಭದ ದಿನಗಳಲ್ಲಿ ಕಾರ್ಮಿಕರ ದಿನ ಅಂದಾಕ್ಷಣ, ಸಿನಿಮಾ ಕಾರ್ಮಿಕರ ಒಕ್ಕೂಟ ಅದ್ಧೂರಿಯಾಗಿಯೇ ಸಂಭ್ರಮ ಆಚರಿಸುತ್ತಿತ್ತು. ಎಲ್ಲಾ ಕಾರ್ಮಿಕರು ಒಟ್ಟಾಗಿ, ಸಿಹಿ ತಿನಿಸು ತಿಂದು ಕುಣಿದು ಕುಪ್ಫಳಿಸುತ್ತಿದ್ದರು. ಎಲ್ಲರೂ ಒಂದೇ ಎಂಬ ಭಾವನೆಯಿಂದ, ಒಕ್ಕೂಟ ಮೂಲಕ ಸ್ಟಾರ್‌ಗಳನ್ನು ಕರೆದು ಸನ್ಮಾನಿಸಿ, ಗೌರವಿಸುತ್ತಿತ್ತು. ತನ್ನೊಳಗೆ ನೂರೆಂಟು ನೋವಿದ್ದರು, ಹೇಳಲಾಗದಷ್ಟು ಕಷ್ಟವಿದ್ದರೂ, ಮೊಗದಲ್ಲಿ ಒಂದಷ್ಟು ಮಂದಹಾಸ ಬೀರುತ್ತಲೇ ಕಾರ್ಮಿಕರ ದಿನವನ್ನು ಸಂತಸದಿಂದಲೇ ಆಚರಿಸುತ್ತಿತ್ತು. ಆದರೆ, ಕಳೆದ ವರ್ಷದಿಂದ ಅದಕ್ಕೂ ಕಲ್ಲು ಬಿದ್ದಿದೆ. ಕೊರೊನಾ ಅಂಥದ್ದೊಂದು ಕರಾಳತೆಗೆ ಸಾಕ್ಷಿಯಾಗಿದೆ. ಅದು ಈ ವರ್ಷವೂ ಮುಂದುವರೆದಿದೆ.
ಕೊರೊನಾ ಆವರಿಸಿ, ಅದೆಷ್ಟೋ ಸಿನಿಮಾ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿದ್ದು ಸುಳ್ಳಲ್ಲ. ಚಿತ್ರರಂಗದಲ್ಲಿ ದಿನಗೂಲಿಗರಾಗಿ ದುಡಿಯುವ ವರ್ಗದ ಗೋಳು ತಲತಲಾಂತರದಿಂದಲೂ ಇದೆ. ಅಲ್ಲಿ ಬರೀ ಆಶ್ವಾಸನೆಗಳು ಸಿಗುತ್ತಿವೆ ಹೊರತು, ಬದುಕು ಹಸನಾಗುವಂತಹ ಕೆಲಸವಾಗುತ್ತಿಲ್ಲ ಎಂಬುದೇ ಸಿನಿಮಾ ಕಾರ್ಮಿಗರ ನೋವಿನ ಮಾತು. ಮುಂದಿನ ದಿನಗಳಲ್ಲಾದರೂ, ಹಿಂದಿನ ವೈಭವ ಮರುಕಳಿಸಲಿ ಕಾರ್ಮಿಕರ ಬದುಕು ಹಸನಲಾಗಲಿ ಅನ್ನೋದೇ ಸಿನಿಲಹರಿ ಆಶಯ.