ಕನ್ನಡದ ನಟರನ್ನು ಎಚ್ಚರಿಸಲು ಕೊನೆಗೂ ಸೋನು ಸೂದ್ ಅವರೇ ಬರಬೇಕಾಯಿತಾ..?


ನಟ ಸೋನು ಸೂದ್ ಅಂದ್ರೆ ಎಲ್ಲರಿಗೂ ಗೊತ್ತಿದದ್ದು ಬೆಳ್ಳಿತೆರೆ ಮೇಲಿನ ಒಬ್ಬ ವಿಲನ್ ಆಗಿ. ಅದರಾಚೆ ಅವರು ರಿಯಲ್ ಲೈಫ್ ನಲ್ಲೂ‌ ಹೀರೋ ಅಂತ ಗೊತ್ತಾಗಿದ್ದು ಕಳೆದ ವರ್ಷ ಕೊರೋನಾ ತಂದಿಟ್ಟಿದ್ದ ಸಂಕಷ್ಟದ ಕಾಲದಲ್ಲಿ. ಆ ಸಂದರ್ಭದಲ್ಲಿ ಅವರು ಅದೆಷ್ಟು ಜನರಿಗೆ ಸಹಾಯಕ್ಕೆ ನಿಂತರು ಅನ್ನೋದು ಇಡೀ ಭಾರತಕ್ಕೆ ಗೊತ್ತಾಯಿತು. ಅಷ್ಟು ಮಾತ್ರವಲ್ಲ ಇಡೀ ಇಂಡಿಯಾವೇ ಅವರನ್ನು‌ ಕೊಂಡಾಡಿ ಬಿಟ್ಟಿತು‌. ಇಂತಿಪ್ಪ ವಿಲನ್ ಸೋನು ಸೂದ್ ಈಗ ಕರ್ನಾಟಕಕ್ಕೂ ನೆರವಿನ ಹಸ್ತ ನೀಡುವ ಮೂಲಕ ಸ್ಯಾಂಡಲ್ ವುಡ್ ಶಾಕ್ ಕೊಟ್ಟಿದ್ದಾರೆ. ವಿಶೇಷವಾಗಿ ಕೊರೋನ‌ ಎರಡನೇ ಅಲೆಯಲ್ಲಿ ತತ್ತರಿಸಿರುವ ರಾಜ್ಯದ ಜನತೆಯ ಪರವಾಗಿ ಬೆಂಗಳೂರು ಪೊಲೀಸರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ನೂರು ಆಕ್ಸಿಜನ್ ಕಿಟ್ ನೀಡುವುದಾಗಿ ಹೇಳಿದ್ದಾರೆ.

ಇದು ಅವರ ಸ್ವ ಇಚ್ಚೆಯ ಕೆಲಸ. ಕರ್ನಾಟಕದ ಪೊಲೀಸರು ಕೇಳುವ ಮೊದಲೇ, ಹೃದಯವಂತ ಸೋನು‌ ಸೂದ್ ಈ ಕೆಲಸ‌ ಮಾಡಿದ್ದಾರೆ. ಅದು ಆಗಿದ್ದು‌ ಕೂಡ ಒಂದು ಅಚ್ಚರಿಯೇ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರಿಗೆ ಮುಂಬೈನಿಂದ ಒಂದು‌ ಪೋನ್ ಕಾಲ್ ಬರುತ್ತೆ. ಸಹಜವಾಗಿಯೇ ಅವರು ಯಾರೋ ಇರಬಹುದು ಅಂತ ಹಲೋ‌ ಅಂತಾರೆ. ಆ‌ ಕಡೆಯಿಂದ ಸೋನು‌ ಸೂದ್ ಸಹಾಯಕ ,ಮಾತನಾಡುತ್ತಿರುತ್ತಾನೆ. ಸರ್, ಏಕ್ ಮಿನಿಟ್ ಸಾಬ್ ಬಾತ್ ಕರೋ‌ ಅಂತಾನೆ. ಕಮೀಷನರ್‌ ಕಮಲ್‌ಪಂಥ್ ಆಯ್ತು ಅಂತಾರೆ‌ .ಹಲೋ‌ ಸರ್, ಐ ಅ್ಯಮ್ ಸೋನು‌ಸೂದ್ ಅಂತ ಆ‌ ಕಡೆಯಿಂದ ಧ್ವನಿ‌ ಕೇಳಿಸುತ್ತೆ. ಕಮೀಷನರ್ ಕಮಲ್ ಪಂಥ್ ಅಚ್ಚರಿಗೊಳುತ್ತಾರೆ. ತಕ್ಷಣವೇ ಸೋನು‌ಸೂದ್ ತಾವೇನು ಅಂದುಕೊಂಡಿದ್ದರೋ ಅದನ್ನು‌ ಹೇಳಿ ಪೋನ್ ಕಾಲ್ ಕಟ್ ಮಾಡುತ್ತಾರೆ‌. ಆ ಸಂಭಾಷಣೆ ಪ್ರಕಾರ, ಕರ್ನಾಟಕ ಪೊಲೀಸರಿಗೆ ನೂರು ಆಕ್ಸಿಜನ್ ಕಿಟ್ ನೀಡುವುದಾಗಿ ಸೋನು ಸೂದ್ ಭರವಸೆ ನೀಡಿದ್ದಾರೆ‌.

ಇದು ಸೋನು ಸೂದ್ ಕೆಲಸ. ಬಾಲಿವುಡ್ ನಟ ಸೋನು ಸೂದ್ ಕನ್ನಡಕ್ಕೂ ಪರಿಚಿತರೆ. ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಕನ್ನಡದಂತೆಯೇ ತೆಲುಗು, ತಮಿಳು ಹಾಗೂ‌ ಮಲಯಾಳಂ‌ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಅದರೂ ಅವರಿಗೆ ಕನ್ನಡದ ಮೇಲೆ ವಿಶೇಷ ಅಭಿಮಾನ‌ ಅನ್ನೋ‌ ಮಾತನ್ನು ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು. ಈಗ ಆ ಅಭಿಮಾನವನ್ನು ಇನ್ಮೊಂದು‌ ರೀತಿಯಲ್ಲಿ ತೋರಿಸಿದ್ದಾರೆ. ಕನ್ನಡದ ನಟರಿಗೆ ಇದು ನಿಜಕ್ಕೂ‌ ಮಾದರಿ.‌ ಹಾಗೆಯೇ ಒಂದು ಸಂದೇಶ. ಹಾಗೆ‌ ನೋಡಿದರೆ ಈ ಕೆಲಸ ಇಲ್ಲಿನ ನಟರಿಂದಲೇ‌ ಮೊದಲು ಶುರುವಾಗಬೇಕಿತ್ತು.‌ ಆದರೆ ಅವರೆಲ್ಲ ಈಗ ತಮ್ಮ ತಮ್ಮ‌ ಫಾರ್ಮ್ ಹೌಸ್ ಗಳಲ್ಲಿ ಸುರಕ್ಷಿತ ವಾಗಿದ್ದಾರೆ. ಕೆಲವರು ತಾವೇ ನಿಜವಾದ ರೈತರು ಎನ್ನುವಂತೆ ಫೋಸು ನೀಡುತ್ತಿದ್ದಾರೆ. ತಮ್ಮನ್ನು ಹೊತ್ತು ಮೆರೆದ ಅಭಿಮಾನಿಗಳು‌ ಶವವಾಗಿ ಹೋಗುತ್ತಿದ್ದರೂ ತಾವು‌ ಮಾತ್ರ ಹೀಗೆಯೇ ಅಂತ ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಹಾಯಾಗಿ ಕಾಲ‌ ಕಳೆಯುತ್ತಿದ್ದಾರೆ‌ . ಹಾಗಂತ ಅವರಿಗೇನು ಆಸ್ತಿ- ಅಂತಸ್ತು ಕಮ್ಮಿ ಇಲ್ಲ. ಒಂದೊಂದು ಸಿನಿಮಾಕ್ಕೆ ಇವರೆಲ್ಲ ಏಳೆಂಟು‌ ಕೋಟಿ‌ ಸಂಭಾವನೆ ಎಣಿಸುವವರೆ. ಅವರ ಕಾರು ಬಾರು ನೋಡಿದರೆಯೇ ಜನ ಸಾಮನ್ಯರ ಹೊಟ್ಟೆ ಉರಿಯುತ್ತೆ. ಆದರೆ ಅವರಿಗೆ ಇಂತಹದೊಂದು ಘನ ಕಾರ್ಯ ಮಾಡಬಹುದು ಅಂತ ಇವರಿಗೂ ಎನಿಸಿಲ್ಲ. ಅವರಿಗೆಲ್ಲ ಸೋನು ಸೂದ್ ಕೆಲಸ ಒಂದು‌ ಎಚ್ಚರಿಕೆಯೇ ಆಗಿದೆ. ಇನ್ನಾದರೂ ಕನ್ನಡದ ನಟರು‌ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುತ್ತಾರೆಯೇ ಕಾದು‌ ನೋಡಬೇಕಿದೆ.

Related Posts

error: Content is protected !!