ಕೊರೊನೊ ಸಂಕಷ್ಟಕ್ಕೆ ಮಿಡಿಯುತ್ತಿರೋ ಮನಸುಗಳು! ಕನ್ನಡ ನಟನೊಬ್ಬ ಆಂಬುಲೆನ್ಸ್ ಚಾಲಕನಾಗಿ ಸೇವೆ

ಕೊರೊನಾ ಸಾಕಷ್ಟು ಸಮಸ್ಯೆ ಹುಟ್ಟು ಹಾಕಿದೆ. ಅದಷ್ಟೇ ಅಲ್ಲ, ಅದೆಷ್ಟೊ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ, ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸಿಗದ ಬೆಡ್ ಮತ್ತು ಆಕ್ಸಿಜನ್. ಇದರಿಂದ ಜನ ಪರದಾಡುತ್ತಿದ್ದಾರೆ. ಸಾವಿನ ದವಡೆಯಲ್ಲಿದ್ದಾರೆ. ಇದನ್ನರಿತ ಸಾಕಷ್ಟು ಮಂದಿ ಹಲವು ಸೇವೆಗೆ ಮುಂದಾಗಿದ್ದಾರೆ. ಇದಕ್ಕೆ ಸಿನಿಮಾ ರಂಗದ ಮಂದಿಯೂ ಹೊರತಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಹಲವು ಸಿನಿಮಾ ನಟ, ನಟಿಯರು ತಮ್ಮದೇ ರೂಟಿನಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಮಂದಿ ಕೂಡ ಕೊರೊನಾ ವಿರುದ್ಧ ನಿಂತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಟನೊಬ್ಬ ಕೂಡ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಆಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಅದು ಬೇರಾರೂ ಅಲ್ಲ, ನಟ ಅರ್ಜುನ್ ಗೌಡ. ಅವರು ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದೇ ವಿಶೇಷ. ತೀವ್ರ ಸಮಸ್ಯೆಯಲ್ಲಿರುವ ಜನರಿಗೆ ಅರ್ಜುನ್ ಗೌಡ ಸಹಾಯಕ್ಕೆ ನಿಂತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವುದರ ಜೊತೆ ಮೃತಪಟ್ಟವರ ಅಂತಿಮ ವಿಧಿವಿಧಾನ ನೆರವೇರಿಸಲು ಆಂಬುಲೆನ್ಸ್ ಸೇವೆಯನ್ನು ಮಾಡುತ್ತಿದ್ದಾರೆ.

ಈಗಾಗಲೇ ಸಾಕಷ್ಟು ಮಂದಿಗೆ ಅರ್ಜುನ್ ಸಹಾಯ ಮಾಡಿರುವ ಅವರು, ಮುಂದಿನ ಎರಡು ತಿಂಗಳು ಈ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಕೇವಲ ರೋಗಿಗಳನ್ನು ಕರೆದೊಯ್ಯುವುದು ಮತ್ತು ಮೃತದೇಹಗಳನ್ನು ಸಾಗಿಸುವುದು ಮಾತ್ರವಲ್ಲದೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related Posts

error: Content is protected !!