Categories
ಸಿನಿ ಸುದ್ದಿ

ಕಿಚ್ಚನ ಬರ್ತ್ಡೇಗೆ ನೀರಜ್ ಚೋಪ್ರಾ ಸಪ್ರೈಸ್; ಚಿನ್ನದ ಸಹೋದರನ ಬಗ್ಗೆ ಸುದೀಪ್ ಹೀಗಂದ್ರು!

ಸ್ಯಾಂಡಲ್‌ವುಡ್ ಬಾದ್‌ಷಾ, ಅಭಿಮಾನಿಗಳ ಪಾಲಿನ ಮಾಣಿಕ್ಯ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಅದ್ಧೂರಿ ಹುಟ್ಟು ಹಬ್ಬಕ್ಕೆ ಬ್ರೇಕ್ ಬಿದ್ದಿರುವುದರಿಂದ ಅಭಿಮಾನಿ ದೇವರುಗಳು ತಾವಿದ್ದಲ್ಲಿಂದಲೇ ಶುಭಾಷಯ ಕೋರುವುದಕ್ಕೆ ಕಾತುರರಾಗಿದ್ದಾರೆ. ಕೋಟಿಗೊಬ್ಬನ ಗೋಲ್ಡನ್ ಜ್ಯೂಬಿಲಿಯನ್ನ ಗ್ರ್ಯಾಂಡ್ ಆಗಿಯೇ ಆಚರಣೆ ಮಾಡೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಹಾಕಿಕೊಂಡು ಭರ್ಜರಿಯಾಗಿ ಸೆಲಬ್ರೇಟ್ ಮಾಡುತ್ತಿರುವ ಫ್ಯಾನ್ಸ್, ಕಿಚ್ಚನಿಗೆ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ ತಿಳಿಸುತ್ತಿದ್ದಾರೆ.

ಇಂಟ್ರೆಸ್ಟಿಂಗ್ ಅಂದರೆ ಚಿನ್ನದ ಹುಡುಗ ನೀರಜ್ ಚೋಪ್ರಾ ಅಭಿನಯ ಚಕ್ರವರ್ತಿಗೆ ಶುಭಾಷಯ ಕೋರಿರುವುದು. ಹೌದು, ತವರು ನಾಡು ಹರಿಯಾಣದಲ್ಲಿರುವ ನೀರಜ್, `ವಿಶ್ ಯೂ ಹ್ಯಾಪಿ ಬರ್ತ್ ಡೇ ಸುದೀಪ್‌ ಜೀ’. ಆಲ್‌ಓವರ್ ಇಂಡ್ಯಾ ಸೆನ್ಸೇಷನ್ ಸೃಷ್ಟಿಸಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಆಲ್ ದಿ ಬೆಸ್ಟ್. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ. ಚಿನ್ನದ ಹುಡುಗನ ಶುಭ ಹಾರೈಕೆಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಧನ್ಯವಾದಗಳು ಸಹೋದರ… ಗುರಿಯ ಬೆನ್ನತ್ತಿರುವ ನಿಮಗೆ ನನ್ನ ಶುಭಾಷಯಗಳು ಎಂದಿದ್ದಾರೆ. ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡವರು. ಭಾರತದ ಕೀರ್ತಿ ಪತಾಕೆಯನ್ನ ಎತ್ತಿ ಹಿಡಿಯೋದಲ್ಲದೇ ಹಿಂದ್ಯಾರು ಕೆತ್ತದ ಇತಿಹಾಸ ಕೆತ್ತಿ ಮುನ್ನುಗುತ್ತಿದ್ದಾರೆ. ಇಡೀ ದೇಶಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ಯಶೋಗಾಥೆ ಹೀಗೆಯೇ ಮುಂದುವರೆಯಲಿ. ಆಲ್‌ ಇಂಡಿಯಾ ಕಟೌಟ್ ಕಿಚ್ಚನ ಕೀರ್ತಿ ಪತಾಕೆ ದೇಶದ ತುಂಬೆಲ್ಲಾ ಹಬ್ಬಲಿ.

Categories
ಸಿನಿ ಸುದ್ದಿ

ಯೋಗಿ, ಡಾಲಿ ಡೆಡ್ಲಿ ಕಾಂಬೋ-ವಿಜಯ್‌ ಪ್ರಸಾದ್‌ ಸಿಡಿಸ್ತಾರಾ ಹೊಸ ಬಾಂಬ್‌ !

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಚಾತಿ ನಿರ್ದೇಶಕ ವಿಜಯ್‌ ಪ್ರಸಾದ್‌ ಅವರದ್ದು. ಅದರರ್ಥ, ಒಂದೇ ಶೆಡ್ಯೂಲ್‌ ನಲ್ಲಿಯೇ ಎರಡು ಸಿನಿಮಾ ಚಿತ್ರೀಕರಿಸಿಕೊಂಡು ಬರೋದು ಅಂತ. ಸದ್ಯಕ್ಕೀಗ ರಿಲೀಸ್‌ ಗೆ ರೆಡಿಯಾಗಿರುವ ʼತೋತಾಪುರಿʼ ಹಾಗೆ ಅಲ್ವಾ ಆಗಿದ್ದು? ಈಗದು ಎರಡು ಕಂತಗಳಲ್ಲಿ ತೆರೆಗೆ ಬರುತ್ತಿದೆ. ಮೊದಲ ಭಾಗದ ಚಿತ್ರೀಕರಣದ ಜತೆಗೆಯೇ ಸಿಕ್ವೇಲ್‌ ಕೂಡ ಶೂಟಿಂಗ್‌ ಮುಗಿಸಿದೆ. ಚಿತ್ರೀಕರಣದ ಒಂದೇ ಶೆಡ್ಯೂಲ್‌ ನಲ್ಲಿ ಎರಡು ಚಾಪ್ಟರ್‌ ಗಳ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದಾರೆ. ಈಗ ಎರಡು ಚಾಪ್ಟರ್‌ ಕೂಡ ರಿಲೀಸ್‌ ಗೆ ರೆಡಿ ಇವೆ. ಸದ್ಯಕ್ಕೆ ಅದರ ಪ್ರಚಾರದ ಹಂತದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ವಿಜಯ್‌ ಪ್ರಸಾದ್‌ ಈಗ ಒಂದೇ ದಿನ ಇಬ್ಬರು ಸ್ಟಾರ್‌ ಗಳನ್ನು ಪ್ರತ್ಯೇಕ ಜಾಗಗಳಲ್ಲಿ ಒಂದೇ ಉದ್ದೇಶಕ್ಕೆ ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇಬ್ಬರು ಸ್ಟಾರ್‌ ಭೇಟಿ ಮಾಡಿದ ಖುಷಿಯನ್ನು ಅವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಪಿಯನ್ನು ಸೋಷಲ್‌ ಮೀಡಿಯಾದಲ್ಲಿ ಹಾಕ್ಕೊಂಡು, ಅದಕ್ಕೆ ಕ್ಯಾಪ್ಸನ್‌ ಕೊಟ್ಟ ರೀತಿಯೇ ಮಜವಾಗಿದೆ.

ʼವಾಯು ವಿಹಾರದಲ್ಲಿ ಸಿದ್ಲಿಂಗು, ವಿಹಾರದಲ್ಲಿ ನಾರಾಯಣ್‌ ಪಿಳ್ಳೆ , ಒಂದೇ ದಿನ ಎರಡು ಭೇಟಿʼ ಅಂತ ಕಾಮೆಂಟ್‌ ಹಾಕಿದ್ದು ಮಾತ್ರವಲ್ಲ, ಅದರ ಜತೆಗೆ ಇದೊಂದು ʼಹೊಸ ಪ್ರಯಾಣʼ ಅಂತಲೂ ಹೇಳಿದ್ದಾರೆ. ಸಿನಿಮಾ ಮಂದಿ ಒಟ್ಟಿಗೆ ಸೇರ್ಕೊಂಡ್‌ ಹೊಸ ಪ್ರಯಾಣ ಅಂತ ಹಾಕಿದರೆ, ಇನ್ನೆಲ್ಲಿಗೋ ಪ್ರವಾಸ ಹೊರಟರು ಅಂತಲ್ಲ, ಇನ್ನಾವುದೋ ಹೊಸ ಪ್ರಾಜೆಕ್ಟ್‌ ಶುರು ಮಾಡ್ತಿದ್ದಾರೆ ಅಂತ ಅದೆಷ್ಟು ಮಂದಿ ತೋರಿಸಿಕೊಟ್ಟಿಲ್ಲಾ? ಬಹುಶಃ ಈ ಭೇಟಿಯ ಉದ್ದೇಶ ಕೂಡ ಹಾಗೆಯೇ ಇರಬೇಕು? ಸದ್ದಿಲ್ಲದೆ ಸುದ್ದಿ ಮಾಡದೆ ನಿರ್ದೇಶಕ ವಿಜಯ್‌ ಪ್ರಸಾದ್‌ ಇವರಿಬ್ಬರು ಸ್ಟಾರ್‌ ಇಟ್ಕೊಂಡೇ ಒಂದು ಹ್ಯೂಮಸರ್‌ ಕಥೆ ಮಾಡ್ಕೊಂಡು ಇಂದು ಅವರಿಬ್ಬರನ್ನು ವಾಯು ವಿಹಾರ ಮತ್ತು ವಿಹಾರದಲ್ಲಿ ಭೇಟಿ ಮಾಡಿದ ಹಾಗಿದೆ.
ಅಂದ ಹಾಗೆ ನಿರ್ದೇಶಕ ವಿಜಯ್‌ ಪ್ರಸಾದ್‌, ಇವತ್ತು ಅಂದ್ರೆ ಬುಧವಾರ ಭೇಟಿ ಮಾಡಿದ ಸ್ಟಾರ್‌ ಗಳಂದ್ರೆ ಲೂಸ್‌ ಮಾದ ಖ್ಯಾತಿಯ ಯೋಗೇಶ್‌ , ಹಾಗೂ ಡಾಲಿ ಖ್ಯಾತಿಯ ಧನಂಜಯ್.‌ ನಿರ್ದೇಶಕ ವಿಜಯ್‌ ಪ್ರಸಾದ್‌ ಈಗ ಇಬ್ಬರಿಗೂ ಆಕ್ಷನ್‌ ಕಟ್‌ ಹೇಳಿದ್ದಾರೆ. ಸಿದ್ಲಿಂಗು ಚಿತ್ರದಲ್ಲಿ ಲೂಸ್‌ ಮಾದ ಯೋಗಿ ಜತೆಗೆ ಕೆಲಸ ಮಾಡಿರುವ ವಿಜಯ್‌ ಪ್ರಸಾದ್‌, ತೋತಾಪುರಿ ಚಿತ್ರದಲ್ಲಿನ ಸ್ಪೆಷಲ್‌ ಕ್ಯಾರೆಕ್ಟರ್ ವೊಂದಕ್ಕೆ ಡಾಲಿ ಧನಂಜಯ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಡಾಲಿ ಮೂರು ಶೇಡ್ಸ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಅವರ ಕ್ಯಾರೆಕ್ಟರ್‌ ಹೆಸರು ನಾರಾಯಣ್‌ ಪಿಳ್ಳೆ.

Categories
ಸಿನಿ ಸುದ್ದಿ

ಲುಕ್ಕಲ್ಲೇ ಲಾಕ್ ಮಾಡಿದರು ಪ್ರಸನ್ನ ; ಭಜರಂಗಿ ಸಾರಥಿಗೆ ಉಘೇ ಉಘೇ ಎನ್ನಿರಣ್ಣ !

ಎದೆಮಟ್ಟಕ್ಕಿರುವ ಬಿಳಿ-ಕಪ್ಪು ಗಡ್ಡ, ದಪ್ಪನೆಯ ಮೀಸೆ, ಬೆಕ್ಕಿನ ಕಣ್ಣುಗುಡ್ಡೆ, ತಲೆಮೇಲೆ ಕಂಚುಮಿಶ್ರಿತ ಎರಡು ಕೋಡು, ತೋಳಿಗೆ ಕಪ್ಪು ಪಟ್ಟಿ, ಕಟ್ಟುಮಸ್ತಾದ ದೇಹಕ್ಕೆ ಕಂಬಳಿಯಂತಹ ಉಡುಪು, ಗುರಾಯಿಸಿದ್ರೆ ಗುಮ್ಮೆಬಿಡ್ತೀನಿ ಎನ್ನುವಂತಹ ನೋಟ ನೋಡುಗರ ಬೆವರಿಳಿಸುತ್ತಿದೆ. ಯಾರೀ ಈ ಪಾತ್ರ ಕೆತ್ತಿದ್ದು ಅಂತ, ಯಾವಾಗ ಹುಟ್ಟಿದ್ದು ಅಂತ ನಿಮ್ಗೂ ಅನ್ನಿಸಿದ್ರೆ, ಈ ಸ್ಟೋರಿ ನೋಡಿ…

ಅಶ್ವಮೇಧ ಕುದುರೆಯನ್ನ ಬೇಕಾದರೆ ಒಂದೇ ಏಟಿಗೆ ಕಟ್ಟಿಹಾಕ್ಬೋದು, ಆದರೆ ಸಿನಿಮಾಪ್ರೇಮಿಗಳನ್ನ ಒಂದೇ ಏಟಿಗೆ ಕಟ್ಟಿಹಾಕೋದಕ್ಕೆ ತೋಳಲ್ಲಿ ತಾಕತ್ತಿದ್ದರೆ ಸಾಲದು ಕಣ್ಣಲ್ಲಿ ಕಿಚ್ಚು ಇರಬೇಕು. ಆ ಕಿಚ್ಚಿಗೆ ಕಿಕ್‌ಸ್ಟಾರ್ಟ್ ಕೊಡುವುದಕ್ಕೆ ಒಬ್ಬ ಸಾರಥಿ ಬೇಕು. ಒಮ್ಮೆ ಸ್ಪಾರ್ಕ್ ಹೊತ್ತಿಸಿದ್ರೆ ಫಿನೀಶ್ ಅಂತ ಹೇಳೋದಕ್ಕೆ ಆಗಲ್ಲ. ಆದರೆ, ಬ್ರಹ್ಮನಿಗೆ ಸೆಡ್ಡುಹೊಡೆಯುವಷ್ಟು ಕ್ಯಾಪಾಸಿಟಿ ಇರುವ ಚಿತ್ರಬ್ರಹ್ಮ, ಮನಸ್ಸು ಮಾಡಿದರೆ ಕಲಾವಿದನ ಹಣೆಬರಹವೇ ಬದಲಾಗುತ್ತೆ. ಕಲ್ಲು ಶಿಲೆಯಾಗಿ ನಿಲ್ಲುತ್ತೆ. ಆ ಶಿಲೆಗೆ ಪೂಜೆ-ಪುನಸ್ಕಾರ ನಡೆಯುತ್ತೆ. ಅಷ್ಟೇ ಯಾಕೇ, ಬ್ರಹ್ಮ ಸೃಷ್ಟಿಮಾಡಲಿಕ್ಕೆ ಆಗದ ಮಾಸ್ಟರ್‌ಪೀಸ್‌ಗಳು, ಚಿತ್ರಬ್ರಹ್ಮನ ಕಲ್ಪನೆಯಲ್ಲಿ ಸೃಷ್ಟಿಯಾಗಿ ಇತಿಹಾಸ ಪುಟಗಳಲ್ಲಿ ಸೇರಿಸಿಬಿಡುತ್ತವೆ. ಇಷ್ಟೆಲಾ, ಮಾಡುವ ತಾಕತ್ತಿರೋ ಸಿನಿಮಾಲೋಕದ ಕ್ಯಾಪ್ಟನ್ ಆಫ್ ದಿ ಶಿಪ್ ಉರುಫ್ ಡೈರೆಕ್ಟರ್‌ ಗಳಿಗೆ ಸಲಾಂ ಹೇಳುತ್ತಾ… `ಭಜರಂಗಿ’ ಚಿತ್ರಸಾರಥಿಯ ಕಲ್ಪನೆಯಲ್ಲಿ ಅರಳಿ ಮೊದಲ ನೋಟದಲ್ಲೇ ಪ್ರೇಕ್ಷಕ ಮಹಾಶಯರನ್ನ ತಿರುತಿರುಗಿ ನೋಡುವಂತೆ ಮಾಡಿರುವ ಕಲಾವಿದನ ಕಿರುಪರಿಚಯ.

ಲುಕ್ಕಲ್ಲೇ ಲಾಕ್ ಮಾಡೋದು ಸುಲಭದ ಮಾತಲ್ಲ ಎಂಬುದು ನಿಮ್ಮೆಲ್ಲರಿಗೂ ಗೊತ್ತಾಗಿದೆ. ಹೀಗಿರುವಾಗ, ಭಜರಂಗಿ-2' ಚಿತ್ರದ ಕಲಾವಿದ ಪ್ರಸನ್ನ ಸಿಂಗಲ್ ಲುಕ್‌ನಿಂದ ಪ್ರೇಕ್ಷಕ ಮಹಾಶಯರ ಗಮನ ಸೆಳೆಯುವುದಲ್ಲದೇ, ಸಿನಿರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರಸನ್ನ ಹೆಸರು ಕೇಳಿದಾಕ್ಷಣ ಅವರು ಏಕ್ದಮ್ ಕಣ್ಮುಂದೆ ಬಂದು ನಿಲ್ಲಲ್ಲ. ಅದಕ್ಕೆ ಮೊದಲ ಕಾರಣಭಜರಂಗಿ-2′ ಚಿತ್ರ ಬಿಡುಗಡೆಯಾಗದಿರುವುದು ಭಜರಂಗಿಗೂ ಮೊದಲು ಖಡಕ್ ಪಾತ್ರಕ್ಕೆ ಪ್ರಸನ್ನ ಬಣ್ಣ ಹಚ್ಚದೇ ಇರುವುದು ಮಗದೊಂದು ಕಾರಣ ಇರಬಹುದು. ಆದೇನೆ ಇರಲಿ, ಟ್ರೇಲರ್‌ನಿಂದಲೇ ನೋಡುಗರ ಎದೆಯಲ್ಲಿ ಸಣ್ಣಗೆ ನಡುಕ ಹುಟ್ಟಿಸಿರುವ ಪ್ರಸನ್ನ, `ಭಜರಂಗಿ-2′ ಚಿತ್ರದ ಮೂಲಕ ಬೆಳ್ಳಿತೆರೆಮೇಲೆ ಧಗಧಗಿಸಿದ ಮೇಲೆ ಭಜರಂಗಿ ಪ್ರಸನ್ನ ಎಂದೇ ಖ್ಯಾತಿ ಪಡೆಯುತ್ತಾರೆನ್ನುವ ನಿರೀಕ್ಷೆ ಪ್ರಸನ್ನರ ಲುಕ್-ಗೆಟ್ಟಪ್ಪು ನೋಡಿದ್ರೇನೇ ಗೊತ್ತಾಗುತ್ತೆ. ಆದರೆ, ನಟ ಸೌರವ್ ಲೋಕಿ ಭಜರಂಗಿ ಲೋಕಿಯೆಂದು ಪ್ರಖ್ಯಾತಿಹೊಂದಿದಂತೆ, ಪ್ರಸನ್ನ ಹೆಸರು ಮಾಡ್ತಾರಾ? ಜನ ಒಪ್ಪಿಕೊಳ್ತಾರಾ ಕಾದುನೋಡಬೇಕು.

ಎದೆಮಟ್ಟಕ್ಕಿರುವ ಬಿಳಿ-ಕಪ್ಪು ಗಡ್ಡ, ದಪ್ಪನೆಯ ಮೀಸೆ, ಬೆಕ್ಕಿನ ಕಣ್ಣುಗುಡ್ಡೆ, ತಲೆಮೇಲೆ ಕಂಚುಮಿಶ್ರಿತ ಎರಡು ಕೋಡು, ತೋಳಿಗೆ ಕಪ್ಪು ಪಟ್ಟಿ, ಕಟ್ಟುಮಸ್ತಾದ ದೇಹಕ್ಕೆ ಕಂಬಳಿಯಂತಹ ಉಡುಪು, ಗುರಾಯಿಸಿದ್ರೆ ಗುಮ್ಮೆಬಿಡ್ತೀನಿ ಎನ್ನುವಂತಹ ನೋಟ ನೋಡುಗರ ಬೆವರಿಳಿಸುತ್ತಿದೆ. ಅಟ್ ದಿ ಸೇಮ್ ಟೈಮ್, ಆನೆಯಂತಹ ಕಿವಿ, ಕಿವಿಗೆ ಓಲೆ, ಹೊಟ್ಟೆ ಹಾಗೂ ಹಣೆ ಮೇಲೆ ಕೆತ್ತಿರುವ ಟ್ಯಾಟೂ, ಸೊಂಟಕ್ಕೆ ಸಿಗಿಸಿಕೊಂಡಿರುವ ಕತ್ತಿ, ಡಿಫರೆಂಟ್ ಹೇರ್ ಸ್ಟೈಲ್ ಜೊತೆಗೆ ಕೈಯಲ್ಲಿ ಬಾರಿಕೋಲು ಹಿಡಿದು ಜೀಪ್ ಮೇಲೆ ಹತ್ತಿ ಎದುರಾಳಿ ಮೇಲೆ ಎಗರುತ್ತಿರುವ ಮತ್ತೊಂದು ಲುಕ್ ಪ್ರೇಕ್ಷಕರ ಗುಂಡಿಯನ್ನ ಶೇಕ್ ಮಾಡಿಬಿಟ್ಟಿದೆ. ಪಾತ್ರದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಯಾರು ಈ ಪಾತ್ರಧಾರಿ ಎನ್ನುವ ಹುಡುಕಾಟ ಶುರುವಾಗಿದೆ. ನಿರ್ದೇಶಕ ಎ. ಹರ್ಷ ಈ ಪಾತ್ರಧಾರಿ ಅದೆಲ್ಲಿಂದ ಹೆಕ್ಕಿ ತಂದರು ಎನ್ನುವ ಪ್ರಶ್ನೆಯ ಜೊತೆಜೊತೆಗೆ ಪಾತ್ರದ ಸೃಷ್ಟಿ, ಪಾತ್ರಕ್ಕಾಗಿ ನಡೆದ ತಯ್ಯಾರಿ, ಮೇಕಪ್ಪು, ಕಾಸ್ಟ್ಯೂಮ್, ಆರ್ಟ್ ಡೈರೆಕ್ಷನ್ ಹೀಗೆ ಎಲ್ಲದರ ಕುರಿತಾಗಿ ಚರ್ಚೆ ನಡೆಯುತ್ತಿದೆ.

ಭಜರಂಗಿ-2' ಟ್ರೇಲರ್‌ನಲ್ಲಿರುವುದು ಹೊರತುಪಡಿಸಿ ಪ್ರಸನ್ನ ಪಾತ್ರದ ಬಗ್ಗೆ ಹೆಚ್ಚಿನ ಡೀಟೈಲ್ಸ್ ಲಭ್ಯವಾಗಿಲ್ಲ. ಪ್ರಸನ್ನ ಪಾತ್ರದ ಹೆಸರೇನು? ಪಾತ್ರಕ್ಕೋಸ್ಕರ ಮಾಡಿಕೊಂಡ ತಯ್ಯಾರಿ ಹೇಗಿತ್ತು? ಪ್ರಸನ್ನ ಹಿನ್ನಲೆಯೇನು? ಇದೆಲ್ಲದರ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ. ಈ ಮಧ್ಯೆ ನಿರ್ದೇಶಕರ ಕಲ್ಪನೆಯಲ್ಲಿಭಜರಂಗಿ-2′ ಪಾತ್ರವರ್ಗದ ಸೃಷ್ಟಿಯ ಬಗ್ಗೆ ಕೇಳಿದಾಗ ಅವರು ಹೇಳಿದಿಷ್ಟು. ಭಜರಂಗಿಯಲ್ಲಿ ಪ್ರತಿಪಾತ್ರಕ್ಕೂ ಅದರದ್ದೇ ಆದ ತೂಕಯಿದೆ. ಕಥೆ ಬರೆಯೋಕೆ ಕುಳಿತಾಗಲೇ ಪ್ರತಿ ಕ್ಯಾರೆಕ್ಟರ್ ಡಿಸೈನ್ ಮಾಡಿದ್ದೆ. ಈ ಪಾತ್ರ ಹೀಗೆ ಇರಬೇಕು, ಈ ಪಾತ್ರ ಹೀಗೆಯೇ ತೆರೆಮೇಲೆ ಕಾಣಬೇಕು ಅಂತ ಡಿಸೈಡ್ ಮಾಡಿದ್ದೆ. ಅದರಂತೇ ಮೂಡಿಬಂದಿದೆ ತನ್ನ ಕಲ್ಪನೆಯ ಶಿಲೆಗೆ ಜೀವಬಂದಿದೆ. ಅದಕ್ಕಾಗಿ, ಪಾತ್ರಧಾರಿಗಳು ಬೆವರು ಸುರಿಸಿ ರಕ್ತಬಸಿದರೆ, ಆರ್ಟ್ ಡೈರೆಕ್ಟರ್ ರವಿಯವರ ತಂಡ, ಮೇಕಪ್ ಮ್ಯಾನ್ ಪ್ರಕಾಶ್, ಯೋಗಿ ಅಂಡ್ ಗಣೇಶ್ ಅವರ ಕಾಸ್ಟ್ಯೂಮ್ ತಂಡ ಕೈಚಳಕ ತೋರಿದೆ. ಒಬ್ಬೊಬ್ಬ ಕಲಾವಿದರಿಗೆ ಮೇಕಪ್ ಹಚ್ಚಲಿಕ್ಕೆ ಮೂರು ಮೂರು ಗಂಟೆ ಹಿಡಿದರೂ ಕೂಡ ನೀರಾಯಾಸವಾಗಿ ಕೆಲಸ ಮಾಡಿದೆ. ಇವತ್ತು ಭಜರಂಗಿಗೋಸ್ಕರ ಇಡೀ ಕರುನಾಡು ಕಾಯ್ತಿದೆ ಅಂದರೆ ಅದಕ್ಕೆ ಇಡೀ ಭಜರಂಗಿ ಬಳಗದ ಬೆವರು ಸಾಕ್ಷಿ.

ಲೋಡೆಡ್ ಗನ್ನಿನಂತಿರುವ ಶಿವಣ್ಣ ಕಣ್ಣಲ್ಲೇ ಎನ್‌ಕೌಂಟರ್ ಮಾಡಿ `ಭಜರಂಗಿ’ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. ಇವರೊಟ್ಟಿಗೆ ಕೈಲಿ ಸಿಗಾರ್ ಹಿಡಿದು ಕಿಕ್ಕೇರಿಸಿರುವ ಶ್ರುತಿ ಕೂಡ ಪ್ರೇಕ್ಷಕರಿಂದ ಧಮ್ ಅಂದ್ರೆ ಇದು ಕಣ್ರೋ ಎನಿಸಿಕೊಂಡಿದ್ದಾರೆ. ಕಾಟನ್ ಸೀರೆಯುಟ್ಟುಕೊಂಡು, ಕೂದಲು ಬಿಟ್ಟುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್ ಪೇಟೆ ಜೊತೆ ಎಂಟ್ರಿಕೊಡ್ತಿರುವ ಭಾವನಾ ಕೂಡ ಬೆರಗುಗೊಳಿಸಿದ್ದಾರೆ. ವೈಟ್ ಅಂಡ್ ವೈಟ್ ಕಚ್ಚೆ ಪಂಜೆ ತೊಟ್ಟು, ಕೊರಳಿಗೆ ಕಪ್ಪು ಕವಚ ಧರಿಸಿ, ಬೋಳುತಲೆ ಹಿಂದಗಡೆ ಚೂರೇ ಚೂರು ಕೂದಲು ಬಿಟ್ಟು ಭಜರಂಗಿ ಲೋಕಿ ಕೂತೂಹಲ ಕೆರಳಿಸಿದ್ದಾರೆ. ಹೀಗೆ, ಪ್ರತಿಯೊಂದು ಪಾತ್ರವೂ ನಿರೀಕ್ಷೆ ಎನ್ನುವ ಬೆಟ್ಟವನ್ನ ಏರುವಂತೆ ಮಾಡಿದೆ. ಆದರೆ, ಕೊರೊನಾದಿಂದ ಭಜರಂಗಿಯ ದರ್ಶನಕ್ಕೆ ಮತ್ತೆ ಅಡ್ಡಿಯಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸೆಪ್ಟೆಂಬರ್ 10 ರಂದು ಭಜರಂಗಿ-2 ಚಿತ್ರದ ಭರಾಟೆ ಶುರುವಾಗ್ಬೇಕಿತ್ತು. ಗೌರಿ-ಗಣೇಶ ಹಬ್ಬಕ್ಕೆ ಸ್ಪೆಷಲ್ಲಾಗಿ ಭಜರಂಗಿ ದರ್ಶನ ಕೊಡಬೇಕಿತ್ತು, ಬಿಗ್‌ಸ್ಕ್ರೀನ್‌ನಲ್ಲಿ ಹ್ಯಾಟ್ರಿಕ್ ಹೀರೋ ಧಗಧಗಿಸಬೇಕಿತ್ತು. ಆದರೆ ಕೊರೊನಾ ಮೂರನೇ ಅಲೆಯಿಂದ ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್‌ಕರ್ಫ್ಯೂ ಜಾರಿಗೊಳಿಸೋದಕ್ಕೆ ಸರ್ಕಾರ ಮುಂದಾಗಿರೋದ್ರಿಂದ ಭಜರಂಗಿ-2 ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಟ್ರೈಲರ್ ಬಿಡುಗಡೆ ಕೂಡ ಪೋಸ್ಟ್‌ ಪೋನ್ಡ್‌ ಆಗಿದೆ. ಇದ್ರಿಂದ ಚಿತ್ರಪ್ರೇಮಿಗಳಿಗೆ ಕೊಂಚ ನಿರಾಸೆಯಾಗರ‍್ಬೋದು ಆದರೆ ಅನ್ನದಾತ ಉಳಿಬೇಕು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋಟಿ ಸುರಿಬೇಕು ಅಂದ್ರೆ ಚಿತ್ರಮಂದಿರ ಹೌಸ್‌ಫುಲ್ ಆಗ್ಬೇಕು. ಥಿಯೇಟರ್ ತುಂಬಬೇಕು ಅಂದರೆ ಸರ್ಕಾರ 100 ಪರ್ಸೆಂಟ್ ಅನುಮತಿ ಕೊಡ್ಬೇಕು. ಸದ್ಯಕ್ಕೆ ಇದನ್ನೆಲ್ಲಾ ನಿರೀಕ್ಷೆ ಮಾಡುವಂಗಿಲ್ಲ ಹೀಗಾಗಿ, ಜಯ್ಯಣ್ಣ-ಕಂಬೈನ್ಸ್ ನಿರ್ಮಾಣದ ಭಜರಂಗಿ-2 ಚಿತ್ರ ಯಾವಾಗ ಬರುತ್ತೋ ಬರಲಿ ಅಲ್ಲಿವರೆಗೂ ಒಂಟಿಕಾಲಿನಲ್ಲಿ ನಿಂತು ಕಾಯೋಣ ಅಲ್ಲವೇ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿಯಲ್ಲಿ ಬಾಬಾ ಸೆಹಗಲ್ ಹ್ಯಾಂಗೋವರ್ !

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ , ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ.

ಸೆಪ್ಟೆಂಬರ್ 10 ಗಣೇಶ ಚತುರ್ಥಿಯ ಸಂಭ್ರಮ. ಆ ಶುಭದಿನದಂದು “ಶುಗರ್ ಫ್ಯಾಕ್ಟರಿ” ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್ ಟೀಸರ್‌ ಬರಲಿದೆ.

ಬಹದ್ದೂರ್ ಚೇತನ್ ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಕಫಿರ್ ರಫಿ ಸಂಗೀತ ನೀಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರೊಡನೆ ಈ‌ ಹಾಡಿಗೆ ಸೋನಾಲ್ ಮಾಂಟೆರೊ ಹೆಜ್ಜೆ ಹಾಕಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಗೋವಾದಲ್ಲಿ ಈ ಹಾಡನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಸೆರೆ ಹಿಡಿದಿದ್ದಾರೆ.

ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಅಂತೂ ಫಸ್ಟ್ ಶೆಡ್ಯೂಲ್ ಮುಗಿಸಿದ ಭಗವಾನ್ ಶ್ರೀ ಕೃಷ್ಣ ಪರಮಾತ್ಮ!

ಇತ್ತೀಚೆಗೆ ಶ್ರೀ ಕೃಷ್ಣ ಜೋರು ಸದ್ದು ಮಾಡಿದ್ದು ಗೊತ್ತೇ ಇದೆ. ಈಗ ಆ ಕೃಷ್ಣ ಪರಮಾತ್ಮಮತ್ತೆ ಸುದ್ದಿಯಲ್ಲಿದ್ದಾನೆ.
ಹೌದು, ಕೃಷ್ಣ ಜನ್ಮಾಷ್ಟಮಿ ಬೆನ್ನಲ್ಲೇ “ಭಗವಾನ್ ಶ್ರೀ ಕೃಷ್ಣ ಪರಮಾತ್ಮ” ಕೂಡ ಸದ್ದು ಮಾಡುತ್ತಿದ್ದಾನೆ. ಈ ಸಿನಿಮಾ ಈಗ ಮೊದಲ ಹಂತದ
ಚಿತ್ರೀಕರಣ ಸದ್ದಿಲ್ಲದೆ ಮುಗಿಸಿದೆ ಅನ್ನೋದೇ ಈ ಹೊತ್ತಿನ ಸುದ್ದಿ.

ಬಹುತೇಕ ಈ ಚಿತ್ರ ಬೆಂಗಳೂರಿನಲ್ಲೇ ಚಿತ್ರೀಕರಣವಾಗಿದೆ.
ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಅಂದುಕೊಳ್ಳುವುದು‌ ಸಹಜ. ಆದರೆ, ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನುತ್ತಾರೆ ನಿರ್ದೇಶಕ ಅನೂಪ್ ಆಂಟೋನಿ.

ಈ ಶೀರ್ಷಿಕೆ ಯಾಕೆ ಇಡಲಾಗಿದೆ ಎಂಬುದಕ್ಕೆ ಸಿನಿಮಾ ನೋಡಿದ ಬಳಿಕ ಉತ್ತರ ಸಿಗಲಿದೆ ಎಂಬುದು ನಿರ್ದೇಶಕರ ಮಾತು.
ಭರತ್ ಸಿನಿ ಕ್ರಿಯೇಷನ್ಸ್ ಬ್ತಾನರ್ ನಲ್ಲಿ ಭರತ್ ವಿಷ್ಣುಕಾಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ನಿರ್ಸೆಡಶಕ ಅನೂಪ್ ಆಂಟೋನಿ ಈ ಹಿಂದೆ ‘ಕಥಾ ವಿಚಿತ್ರ’ ಹಾಗೂ ‘ಮೆಹಬೂಬ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ ಇದು ಮೂರನೇ ಚಿತ್ರ. ಕಥೆ, ಚಿತ್ರಕಥೆ ಕೂಡ ನಿರ್ದೇಶಕರದೆ.
ಬಹದ್ದೂರ್ ಚೇತನ್ ಮಾತುಗಳನ್ನು ಪೋಣಿಸಿದ್ದಾರೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಮನುಗೌಡ ಅವರ ಸಂಕಲನ ಚಿತ್ರಕ್ಕಿದೆ.

ಧ್ರುವನ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ಯಶ್ ಶೆಟ್ಟಿ, ಯಶಸ್ ಸೂರ್ಯ, ಕಾಮಿಡಿ ಕಿಲಾಡಿಗಳು ಸೂರಜ್, ಶೋಭ್ ರಾಜ್, ಬಲರಾಜವಾಡಿ, ಸ್ವಾತಿ ಇತರರು ಇದ್ದಾರೆ.

Categories
ಸಿನಿ ಸುದ್ದಿ

ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್!!

ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಯೋಗ್ರಫಿ ಆಡಿಯೋ ಮತ್ತು ಇ ಬುಕ್ ಆಗಿ ಅವರ ಹುಟ್ಟು ಹಬ್ಬದಂದು ಬಿಡುಗಡೆ ಆಗುತ್ತಿದೆ.
ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ “ಕನ್ನಡ ಮಾಣಿಕ್ಯ ಕಿಚ್ಚ” ಹೆಸರಿನ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟ ಆಗಿತ್ತು. ಈ ಪುಸ್ತಕವೇ ಇಂದು ಮೈ ಲ್ಯಾಂಗ್ ಆಪ್ ಮೂಲಕ ಆಡಿಯೋ ಬಯೋಗ್ರಫಿ ಮತ್ತು ಇ ಬುಕ್ ರೂಪದಲ್ಲಿ ಹೊರ ಬರುತ್ತಿದೆ.


ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ. ಈ ಬಾರಿಯ ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಈ ಎರಡು ಉಡುಗೊರೆಯನ್ನು ನೀಡುತ್ತಿದೆ ಮೈ ಲ್ಯಾಂಗ್ ಆಪ್.


ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರು ಮುದ್ರಣಗೊಂಡಿತ್ತು.


ಆಡಿಯೋ ಮತ್ತು ಇ ಪುಸ್ತಕಕ್ಕಾಗಿ www.mylang.in ಇಲ್ಲಿಗೆ ಭೇಟಿ ಕೊಡಿ.

Categories
ಸಿನಿ ಸುದ್ದಿ

ಕುತೂಹಲ ಕೆರಳಿಸಿತು ಸುದೀಪ್- ಸಿಎಂ ಭೇಟಿ ; 100 % ಅನುಮತಿ ಕೇಳಿದ್ರಾ ಕಿಚ್ಚ ?

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ವ ಸುದೀಪ್,ಮಂಗಳವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಭೇಟಿ ಮಾಡಿದ್ದಾರೆ. ವಿಧಾನ ಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಗಳನ್ನು ಸದ್ದಿಲ್ಲದೆ ಭೇಟಿ ಮಾಡಿರುವ ಸುದೀಪ್ ಕುತೂಹಲ ಕೆರಳಿಸಿದ್ದಾರೆ. ಅಷ್ಟಕ್ಕೂ, ಕಿಚ್ಚಸುದೀಪ್, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ವೈಯಕ್ತಿಕ ಕಾರಣಕ್ಕೋ ಅಥವಾ ಚಿತ್ರರಂಗದ ಪರವಾಗಿಯೋ ಗೊತ್ತಿಲ್ಲ. ಆದರೆ, ಸಿನಿಮಾ ಲೋಕದ ಏಳು- ಬೀಳಿನ ಕುರಿತಾಗಿಯೇ ಸಿಎಂ ಜತೆಗೆ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಸಿಎಂ ಭೇಟಿಯ ಕುರಿತು ನಟ ಸುದೀಪ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿಎಂ ಭೇಟಿ ಮಾಡಿದ್ದನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್‌, ಭೇಟಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ. ಬೆಸ್ಟ್‌ ವಿಷಸ್‌ ಆಲ್ವೇಸ್‌ ಎಂದು ಕಮೆಂಟ್‌ ಮಾಡಿದ್ದಾರೆ. ಈ ಮಧ್ಯೆ ನಟ ಸುದೀಪ್‌ ತಮ್ಮನ್ನು ಭೇಟಿ ಮಾಡಿದ್ದನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಕೂಡ ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಭೇಟಿಯ ವೇಳೆ ಚಿತ್ರ ರಂಗದ ಅನೇಕ ಸಂಗತಿಗಳ ಕುರಿತು ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಲಾಯಿತು ಎಂದಿದ್ದಾರೆ.

ನಿರ್ದಿಷ್ಟವಾಗಿ ಯಾವವಿಚಾರ ಕುರಿತು ಚರ್ಚೆ ನಡೆಯಿತು ಎನ್ನುವುದನ್ನು ಅವರು ಕೂಡ ಹೇಳಿಕೊಂಡಿಲ್ಲ, ಆದರೆ ಕೊರೊನಾ ಮೂರನೇ ಅಲೆಯ ಅವತಾರ ನೋಡಿಕೊಂಡು ಆದಷ್ಟು ಬೇಗ ಚಿತ್ರಮಂದಿರಕ್ಕೆ‌ 100 ಅನುಮತಿ ಕೊಡುವಂತೆ ಕೇಳಿಕೊಂಡಿರ್ತಾರೆ ಅದಂತೂ ಗ್ಯಾರಂಟಿ. ಕಿಚ್ಚನ ಕೋಟಿಗೊಬ್ಬ 2ಹಾಗೂ ವಿಕ್ರಾಂತ್ ರೋಣ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ಸಜ್ಜಾಗುತ್ತಿವೆ. ತಮ್ಮ ಹುಟ್ಟುಹಬ್ಬಕ್ಕೂ ಎರಡು ದಿನ ಮುಂಚಿತವಾಗಿ ಸಿಎಂ ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Categories
ಸಿನಿ ಸುದ್ದಿ

ಭಜರಂಗಿಗೆ ಬೆದರಿಕೆ ಹಾಕುವಷ್ಟು ಸೊಕ್ಕು ಇವರಿಗೆ ಬಿಟ್ರೆ ಬೇರಾರಿಗೂ ಇಲ್ಲ ; ಸಿನಿಲಹರಿಗೆ ಹರ್ಷ ಹೇಳಿದ್ದಿಷ್ಟು !

ಬಹು ನಿರೀಕ್ಷಿತ ಸಿನಿಮಾ ‘ಭಜರಂಗಿ 2 ‘ ರಿಲೀಸ್‌ ಕ್ಯಾನ್ಸಲ್‌ ಆಗಿದ್ದೇಕ್ಕೆ ? ಹ್ಯಾಟ್ರಿಕ್‌ ಹೀರೋ ಶಿವಣ್ಣ ಫ್ಯಾನ್ಸ್‌ ಮಾತ್ರವಲ್ಲ ಇಡೀ ಕರುನಾಡಿನ ಸಿನಿ ಪ್ರೇಕ್ಷಕರೇ ಬೇಸರ ಮಾಡಿಕೊಂಡು ಕುಳಿತಿದ್ದಾರೆ. ಅನೌನ್ಸ್‌ ಆಗಿದ್ದ ಸಿನಿಮಾದ ರಿಲೀಸ್‌ ಡೇಟ್‌ ಯಾಕೆ ಮುಂದಕ್ಕೆ ಹೋಯ್ತು ? ಭಜರಂಗಿ ಅರ್ಭಟಕ್ಕೆ ಯಾರು ತಡೆ ಹಾಕಿದ್ದು? ಅಭಿಮಾನಿಗಳಲ್ಲಿರುವ ಪ್ರಶ್ನೆ ಇದು. ಸೆಪ್ಟೆಂಬರ್ 10ಕ್ಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್‌ ಮಾಡಿದ್ದ ಚಿತ್ರ ತಂಡ ಈಗ ಉಲ್ಟಾ ಹೊಡೆದಿದ್ದು ಯಾಕೆ ? ಈ ಪ್ರಶ್ನೆಗಳಿಗೆಲ್ಲ ಇಲ್ಲಿ ಉತ್ತರವಾಗಿದ್ದಾರೆ ನಿರ್ದೇಶಕ ಎ. ಹರ್ಷ.

Exclusive …..

1 ನೀವೇ ಅನೌನ್ಸ್‌ ಮಾಡಿದ್ದ ರಿಲೀಸ್‌ ಡೇಟ್‌ ಯಾಕೆ ಈಗ ಕ್ಯಾನ್ಸಲ್‌ ಆಯ್ತು?
ಕಾರಣ ಏನು ಅಂತ ಹೇಳಿದ್ದು ಈಗಾಗ್ಲೇ ನಿಮ್ಗೂ ಗೊತ್ತಿರಬಹುದು, ಕೊರೋನಾ ಪರಿಸ್ಥಿತಿ ಮುಂದೆ ಕೂಡ ಯಾಕೋ ತಿಳಿಯಾಗೋ ಹಾಗೆ ಕಾಣುತ್ತಿಲ್ಲ. ಜತೆಗೆ ಸರ್ಕಾರ ಈಗಾಗ್ಲೇ ಗಡಿ ಜಿಲ್ಲೆಗಳಲ್ಲಿ ವಿಧಿಸಿರುವ ವೀಕೆಂಡ್‌ ಕರ್ಪ್ಯೂ ಮುಗಿಯೋ ಹಾಗೆಯೂ ಇಲ್ಲ. ನೈಟ್‌ ಕರ್ಪ್ಯೂ ಕೂಡ ಜಾರಿಯಲ್ಲಿದೆ. ಹಂಡ್ರೆಡ್ ಪರ್ಸೆಂಟ್‌ ಆಕ್ಯೂಪೆನ್ಸಿ ಸಿಗೋದು ಕೂಡ ಡೌಟು. ಅದೇ ಕಾರಣಕ್ಕೆ ಸದ್ಯಕ್ಕೆ ಈಗ ಬೇಡ ಅನ್ಕೊಂಡಿದ್ದೇವೆ.


2 ಇದೊಂದು ರೀತಿ ಫ್ಯಾನ್ಸ್‌ ಗೆ ಆಸೆ ಹುಟ್ಟಿಸಿ, ಓಡಿ ಹೋದಂತೆ ಅಲ್ವಾ?


ಹೌದು, ಬರ್ತೀವಿ ಅಂತ ಹೇಳಿದ್ದು ನಿಜವೇ, ಆದ್ರೆ ಪರಿಸ್ಥಿತಿ ಈಗ ಸರಿಯಿಲ್ಲ ಅಲ್ವಾ? ಅದಕ್ಕೆ ಟೀಮ್‌ ಕಡೆಯಿಂದ ಆದ ಡಿಸೈಡ್‌ ಇದು. ಅಂದುಕೊಡಂತೆ ಸಿನಿಮಾ ರಿಲೀಸ್‌ ಆಗ್ಲಿಲ್ಲ ಅಂತ ನಂಗೂ ಬೇಜಾರಿದೆ. ಯಾಕಂದ್ರೆ ರಿಲೀಸ್‌ ಆಗ್ತಿದೆ ಅಂತ ನಂಗೂ ಸಾಕಷ್ಟು ಖುಷಿ ಇತ್ತು. ಏನ್ಮಾಡ್ಲಿಕ್ಕೆ ಆಗುತ್ತೆ ಹೇಳಿ, ಸಿನಿಮಾಕ್ಕೆ ದುಡ್ಡು ಹಾಕಿದವರು ನಿರ್ಮಾಪಕರು. ಅವ್ರ ತೀರ್ಮಾನವೂ ಇಲ್ಲಿ ಮುಖ್ಯವಾಗುತ್ತೆ. ಯಾಕಂದ್ರೆ ಅವರು ಕಷ್ಟ ಪಟ್ಟು ದುಡ್ಡು ಹಾಕಿ ಸಿನಿಮಾ ಮಾಡಿದಾಗ, ಅವ್ರೀಗೂ ವಾಪಾಸ್‌ ಹಣ ಬರ್ಬೇಕು ಅಲ್ವಾ?


3 ಅದು ಸರಿ, ಮುಂದೆ ರಿಲೀಸ್‌ ಯಾವಾಗ?

ಸದ್ಯಕ್ಕೆ ಪ್ಲಾನ್‌ ಆಗಿಲ್ಲ. ಬಹುಶ: ಗಣೇಶ್‌ ಹಬ್ಬ ಮುಗಿದ್ಮೇಲೆ ಒಂದು ತೀರ್ಮಾನಕ್ಕೆ ಬರ್ತೀವಿ. ಆದ್ರೂ ಮೂರನೇ ಅಲೆ ಅಂತಾರೆ, ಲಾಕ್‌ ಡೌನ್‌ ಆಗುತ್ತೆ ಅಂತಾರೆ, ಕೊರೋನಾ ಹೆಚ್ಚಾಗುತ್ತಲೇ ಇದೆ ಅಂತಲೂ ಹೇಳ್ತಿದ್ದಾರೆ. ಪರಿಸ್ಥಿತಿ ಹಿಂಗೆಲ್ಲ ಇದ್ರೆ ಚಿತ್ರಮಂದಿರಕ್ಕೆ ಯಾರ್‌ ಸಿನ್ಮಾ ನೋಡ್ಲಿಕ್ಕೆ ಬರ್ತಾರೆ ಸರ್?‌ ನಮ್‌ ಸಿನ್ಮಾಕ್ಕೆ ಚಿತ್ರಮಂದಿರಗಳಿಗೆ ಜನ ಬರ್ಬೇಕು, ಅವ್ರು ಸಿನ್ಮಾ ನೋಡಿ ಮೆಚ್ಚಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಶಿವಣ್ಣ ಫ್ಯಾನ್ಸಿಗೆ ಸಿನ್ಮಾ ಮಜಾ ಕೊಡ್ಬೇಕು. ಆಮೂಲಕವೇ ನಿರ್ಮಾಪಕರಿಗೆ ಹಾಕಿದ ಹಣ ವಾಪಾಸ್‌ ಬರ್ಬೇಕು ಅನ್ನೋದು ನಮ್‌ ಲೆಕ್ಕಚಾರ.


4 ‘ಭಜರಂಗಿ 2 ʼ ಈಗ ದೊಡ್ಡ ಕ್ಯಾನ್ವಾಸ್‌ ಮೇಲೆ ಬರ್ತಿದೆ, ವಿಶೇಷ ಅಂತ ಏನ್‌ ಹೇಳ್ಬಹುದು ?

ನಮ್ಗೆ ಎಲ್ಲವೂ ಇಲ್ಲಿ ಸ್ಪೆಷಲ್.‌ ಯಾಕಂದ್ರೆ , ಪ್ರತಿ ಸಿನ್ಮಾ ಕೂಡ ಹಾಗೆ ಅಲ್ವಾ? ನನ್ನ ದೃಷ್ಟಿಯಲ್ಲಿ ಅದು ಸೀಕ್ವೆಲ್‌ ಆದ್ರೂ ಕೂಡ ಕಥೆ, ಚಿತ್ರಕಥೆ, ಸಂಭಾಷಣೆ, ಮೇಕಿಂಗ್‌ ಜತೆಗೆ ಪಾತ್ರವರ್ಗದ ವಿಚಾರದಲ್ಲೂ ಎಲ್ಲವೂ ಇಲ್ಲಿ ತಾಜಾ. ನನ್ನದೇ ಕಲ್ಪನೆಯಲ್ಲಿ ಒಂದೊಳ್ಳೆಯ ಕಥೆ ಹೆಣೆದು. ಅದಕ್ಕೆ ತಕ್ಕಂತೆ ಕ್ಯಾರೆಕ್ಟರ್‌ ಗಳನ್ನು ಸೃಷ್ಟಿಸಿ, ಅದಕ್ಕೆ ತಕ್ಕಂತೆ ಕಲಾವಿದರನ್ನು ಹಾಕ್ಕೊಂಡು, ಸಿನ್ಮಾ ಮಾಡಿದ್ದು ಪ್ರೇಕ್ಷಕರಿಗೆ ಹೊಸದೊಂದು ಸಿನ್ಮಾ ತೋರಿಸಬೇಕು ಅಂತಲೇ. ಅಂತಹದೊಂದು ಹೊಸ ಭಜರಂಗಿ ಇಲ್ಲಿದ್ದಾನೆ. ಕಥೆಯ ಜತೆಗೆ ಮೇಕಿಂಗ್‌ ನಲ್ಲೂ ಎಲ್ಲವೂ ಇಲ್ಲಿ ಅದ್ದೂರಿಯೇ.

Categories
ಸಿನಿ ಸುದ್ದಿ

ಕಿಚ್ಚ ಕಾಲಿಡಲಿರುವ ಕಬ್ಜ ಕೋಟೆ ಹಿಂಗೈತೆ ; ಭಾರ್ಗವ್ ಭಕ್ಷಿ ಅಬ್ಬರಕ್ಕೆ ಅಖಾಡ ಸಜ್ಜು !

ರ್‌. ಚಂದ್ರು ಅವರ ಅದ್ದೂರಿ ಕನಸಿನ ʼಕಬ್ಜʼ ಕೋಟೆಗೆ ನಾವು ಲಗ್ಗೆ ಹಾಕಿದ್ದೇ ಬೇರೆ. ಎಲ್ಲರೂ ಅದರ ದ್ವಾರ ಭಾಗಿಲಿನಲ್ಲಿ ನುಸುಳಿ ಬಂದರು. ಆದರೆ ನಾವಿಲ್ಲಿ ಅದರ ಇನ್ನೊಂದು ದಾರೀಲಿ ನುಸುಳಿ ಬಂದೆವು. ಅಲ್ಲಿ ಹೆಕ್ಕಿ ತಂದ ಫುಲ್‌ ಡಿಟೈಲ್ಸ್‌ ಇಲ್ಲಿದೆ, ಅದೇನು ಅಂತ ನೀವೇ ನೋಡಿ….

`ಕಬ್ಜ’ ಆಲ್‌ಒವರ್ ಇಂಡಿಯಾ ಎದುರು ನೋಡ್ತಿರುವ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನ್ಮಾ. ಕೆಜಿಎಫ್ ನಂತರ ಕಬ್ಜ ಚಿತ್ರಕ್ಕಾಗಿ ಪ್ರೇಕ್ಷಕ ಕುಲ ಕಣ್ಣರಳಿಸಿ ಕಾಯ್ತಿದೆ. ಕಣ್ಣು ಕುಕ್ಕೋ ಮೇಕಿಂಗ್ ಜೊತೆಗೆ ಉಪ್ಪಿ ಹಾಗೂ ಕಿಚ್ಚ ಕಾಂಬೋ ಕಬ್ಜ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ. ಇಬ್ಬರು ಖಡಕ್ ಲುಕ್ ಕೊಟ್ಟಿರೋ ಪೋಸ್ಟರ್ ಅಖಾಡದಲ್ಲಿ ಈಗಾಗಲೇ ಹವಾ ಎಬ್ಬಿಸಿದೆ. ಜಬರ್ದಸ್ತ್ ಪೋಸ್ಟರ್‌ನಿಂದ ಹಂಗಾಮ ಸೃಷ್ಟಿಸಿಕೊಂಡಿರುವ ಮುಕುಂದ ಮುರಾರಿ ಜೋಡಿ, ಥ್ರೋ ಔಟ್ ದಿ ಸಿನಿಮಾ ಮೂಲಕ ಇನ್ಯಾವ ರೀತಿ ಅಖಾಡವನ್ನ ಕಬ್ಜ ಮಾಡ್ಬೋದು ಎನ್ನುವ ಕೂತೂಹಲ ಸಿನಿರಸಿಕರಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಮಂದಿಯ ಮನಸ್ಸಲ್ಲೂ ರುದ್ರತಾಂಡವವಾಡ್ತಿದೆ.

ರಿಯಲ್‌ಸ್ಟಾರ್ ಉಪೇಂದ್ರರ ಕಬ್ಜ' ಚಿತ್ರದಲ್ಲಿ ಕಿಚ್ಚ ಹೆಂಗೆ ಕಾಣಿಸ್ತಾರೆ ಎನ್ನುವ ಕೌತುಕಕ್ಕೆ ಈಗಾಗಲೇ ಸ್ಕೆಚಸ್ ಪೋಸ್ಟರ್ ಬ್ರೇಕ್ ಹಾಕಿದೆ. ಆದರೆ, ಹಾಲಿವುಡ್‌ಗೆ ಸೆಡ್ಡು ಹೊಡೆಯುವ ರೇಂಜ್ ಗೆ ನಿರ್ಮಾಣಗೊಳ್ತಿರುವಕಬ್ಜ’ ಅಂಗಳಕ್ಕೆ ಕಿಚ್ಚ ಯಾವಾಗ ಧುಮ್ಕುತ್ತಾರೆ? ಕಬ್ಜ ಕೋಟೆಯಲ್ಲಿ ಕೋಟಿಗೊಬ್ಬ ಯಾವ್ ರೀತಿ ಧಗಧಗಿಸ್ತಾರೆ ಎನ್ನುವ ನಿರೀಕ್ಷೆ ಮಾತ್ರ ಸುದೀಪಿಯನ್ಸ್ ಕಣ್ಣಲ್ಲಿ ನರ್ತನ ಶುರುವಿಟ್ಟುಕೊಂಡಿದೆ. ಅಟ್ ದಿ ಸೇಮ್ ಟೈಮ್ ಸೂಪರ್‌ರಂಗ ಫ್ಯಾನ್ಸ್ ಕೂಡ ಎಕ್ಸೈಟೆಡ್ ಆಗಿದ್ದಾರೆ. ಮಲ್ಟಿಸ್ಟಾರರ್ ಮಹಾಕಾಂಬೋ ನೋಡೋದಿಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹೀಗಾಗಿಯೇ, ಕಬ್ಜ' ಫಿಲ್ಮ್ ಕ್ಯಾಪ್ಟನ್ ಕೋಟಿ ಕೋಟಿ ಸುರಿದು ಅಖಾಡ ರೆಡಿಮಾಡಿಸುತ್ತಿದ್ದಾರೆ. ನೀಲ್ ಕಲ್ಪನೆಯಂತೆ ʼಕೆಜಿಎಫ್ʼ ಕೆತ್ತಿಕೊಟ್ಟ ಕಲಾನಿರ್ದೇಶಕ ಶಿವಕುಮಾರ್, ಇದೀಗ ಚಂದ್ರು ಕನಸಿನಂತೆಕಬ್ಜ’ ಕೋಟೆಯನ್ನ ನಿರ್ಮಾಣ ಮಾಡಿಕೊಡ್ತಿದ್ದಾರೆ.

ಕೊರೊನಾಗೂ ಮೊದಲು ʼಕಬ್ಜʼ ಕೋಟೆ ತಲೆ ಎತ್ತಿತ್ತು. ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಕೋಟಿ ಕೋಟಿ ಬೆಲೆಬಾಳುವ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ನರಾಚಿ ಲೋಕವನ್ನು ಸೃಷ್ಟಿಮಾಡಿಕೊಟ್ಟ ಶಿವುಕುಮಾರ್ ಅಂಡ್ ಟೀಮ್ `ಕಬ್ಜ’ ಚಿತ್ರಕ್ಕಾಗಿ ಹೆಚ್ಚುಕಮ್ಮಿ ೪೦ ಸೆಟ್‌ಗಳನ್ನ ನಿರ್ಮಿಸಿಕೊಟ್ಟಿದ್ದರು. ಕೋಟಿ ಬೆಲೆಬಾಳುವ ಕಾಸ್ಟ್ಲಿ ಸೆಟ್ಟುಗಳಲ್ಲಿ ʼಕಬ್ಜʼ ಟೀಮ್ ಚಿತ್ರೀಕರಣ ಮಾಡಿಕೊಳ್ಳುತ್ತಿತ್ತು, ಶೇಕಡ ೬೦ರಷ್ಟು ಚಿತ್ರೀಕರಣವು ಮುಗಿದಿತ್ತು. ಈ ಮಧ್ಯೆ ಕೊರೊನಾ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಅಟ್ಟಹಾಸದಿಂದ ಶೂಟಿಂಗ್‌ಗೆ ಬ್ರೇಕ್ ಬಿತ್ತು. ಮಿನರ್ವ ಮಿಲ್ ಅಂಗಳದಲ್ಲಿ ತಲೆಎತ್ತಿದ್ದ ಕೋಟಿ ಸೆಟ್ಟುಗಳು ಬಿಸಿಲು-ಮಳೆ-ಗಾಳಿಗೆ ಮುರಿದುಬಿದ್ದವು. ಇದ್ರಿಂದ ಕೋಟಿ ಕೋಟಿ ನಷ್ಟಾನೂ ಆಯ್ತು . ಆದರೆ ಇದಕ್ಕೆಲ್ಲ ಲೆಕ್ಕಿಸದ ನಿರ್ಮಾಪಕರು ಹಾಳಾದ ಸೆಟ್ಟುಗಳನ್ನ ರೀ ಕನ್‌ಸ್ಟ್ರಕ್ಷನ್‌ ಮಾಡಿಸಿದ್ದಾರೆ. ಜೊತೆಗೆ ಹೊಸದಾಗಿ ೨೦ ಸೆಟ್ಟುಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಕೋಟಿಸೆಟ್‌ನಲ್ಲಿ ಪೂಜೆ ನೆರವೇರಿಸಿ ಸೆಟ್‌ವರ್ಕ್‌ ಗೆ ಚಾಲನೆ ಕೊಟ್ಟಿದ್ದಾರೆ. ಅದರ ಎಕ್ಸ್ಲೂಸಿವ್ ಫೋಟೋಗಳು ಸಿನಿಲಹರಿಗೆ ಲಭ್ಯವಾಗಿವೆ.

ಮಿನರ್ವ ಮಿಲ್‌ನಲ್ಲಿ ʼಕಬ್ಜʼ ಚಿತ್ರದ ಸೆಟ್‌ವರ್ಕ್ ಕೆಲಸ ಭರದಿಂದ ಸಾಗ್ತಿದೆ. ಇಂಟರ್‌ನ್ಯಾಷನಲ್ ಲೆವಲ್ ಆಫ್ ಕಂಟೆಂಟ್ ಪ್ಲಸ್ ಮೇಕಿಂಗ್‌ವುಳ್ಳ ಚಿತ್ರ ಆಗಿರೋದ್ರಿಂದ ಕಲಾನಿರ್ದೇಶಕ ಶಿವು ಅಂಡ್ ಟೀಮ್ ಕಣ್ಣಲ್ಲಿ ಕಣ್ಣಿಟ್ಟು ಕೆಲಸ ಮಾಡ್ತಿದ್ದಾರೆ. ಸೆಟ್-ಪ್ರಾಪರ್ಟಿ, ಕಾಸ್ಟ್ಯೂಮ್ಸ್‌, ವೆಹಿಕಲ್ಸ್ ಹೀಗೆ ಪಿನ್ ಟು ಪಿನ್ ಹೀಗೆ ಬರಬೇಕು ಅಂತ ನಿರ್ದೇಶಕ ಚಂದ್ರು ಅವರು ಪ್ಲ್ಯಾನ್ ರೂಪಿಸಿದ್ದು, ಕೆಜಿಎಫ್ ಚಿತ್ರದ ತಂತ್ರಜ್ಞರ ಬಳಗ ಪ್ಲ್ಯಾನ್‌ ಎಕ್ಸಿಕ್ಯೂಟ್ ಮಾಡುವಲ್ಲಿ ನಿರತವಾಗಿದೆ. ೧೦ ದಿನದಲ್ಲಿ ಸೆಟ್ ವರ್ಕ್ ಕಂಪ್ಲೀಟ್ ಆಗಲಿದ್ದು, ರಿಯಲ್‌ಸ್ಟಾರ್ ಉಪೇಂದ್ರ ಜೊತೆಗೆ ಕೋಟಿಗೊಬ್ಬ ಕಿಚ್ಚ ಧುಮುಕಲಿದ್ದಾರೆ. ಭಾರ್ಗವ್ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿರುವ ಕಿಚ್ಚ ಸುದೀಪ್, ರಿಯಲ್‌ಸ್ಟಾರ್ ಜೊತೆಗೆ ಗ್ಯಾಂಗ್‌ಸ್ಟರ್ ಆಗ್ತಾರಾ ಅಥವಾ ಗ್ಯಾಂಗ್‌ಸ್ಟರ್ ಉಪ್ಪಿಯೊಟ್ಟಿಗೆ ಕಾದಾಡ್ತಾರಾ ? ಈ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಇವರಿಬ್ಬರು ಒಂದಾಗಿ ಇತಿಹಾಸ ಸೃಷ್ಟಿಸೋದು ಮಾತ್ರ ಪಕ್ಕಾ.

ʼಕಬ್ಜʼ ಔಟ್ ಅಂಟ್ ಔಟ್ ಗ್ಯಾಂಗ್‌ಸ್ಟರ್ ಚಿತ್ರ. ಭೂಗತ ಲೋಕವನ್ನ ರೆಟ್ರೋ ಸ್ಟೈಲ್‌ ನಲ್ಲಿ ಎಕ್ಸ್ಟ್ರಾಡಿನರಿಯಾಗಿ ತೋರಿಸಬೇಕು ಎನ್ನುವುದು ತಾಜ್‌ಮಹಲ್ ಸಾರಥಿ ಚಂದ್ರು ಕನಸು. ಆ ಮಹಾಕನಸಿನ ಸಾಕಾರಕ್ಕೆ ಭೂಗತ ಲೋಕದಲ್ಲಿ ಓಂ' ಕಾರ ಬರೆದ ಉಪೇಂದ್ರ ಹಾಗೂ ಪೈಲ್ವಾನ್ ಕಿಚ್ಚ ಸಾಥ್ ಕೊಟ್ಟಿದ್ದಾರೆ. ೧೯೪೭ರ ಘಟನೆಯನ್ನ ಪ್ರೇರಣೆಯಾಗಿಟ್ಟುಕೊಂಡು ಕಬ್ಜ ಮಾಡಲು ಹೊರಟಿರುವ ನಿರ್ದೇಶಕ ಆರ್ ಚಂದ್ರು, ಇತಿಹಾಸಕ್ಕೆ ಸಾವಿಲ್ಲ ಎಂದು ಮುನ್ನುಗಿದ್ದಾರೆ. ರಿಯಲ್ ಪ್ಯಾನ್ ಇಂಡಿಯಾ ಸ್ಟಾರ್‌ಗಳನ್ನ ಹಾಕಿಕೊಂಡು, ಮೇಕಿಂಗ್ ಹಂತದಲ್ಲೇ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಜಗಪತಿ ಬಾಬು-ಕಬೀರ್ ದುಹಾನ್ ಸಿಂಗ್- ಪ್ರಮೋದ್ ಶೆಟ್ಟಿ-ಅನುಪ್ ರೇವಣ್ಣ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ಕಬ್ಜ’ ಚಿತ್ರದಲ್ಲಿದೆ. ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಹೈದ್ರಬಾದ್ ಅಖಾಡದಲ್ಲಿ ಕ್ಲೈಮ್ಯಾಕ್ಸ್‌ಗೆ ಕುಂಬಳಕಾಯಿ ಒಡೆಯಲಿದ್ದಾರೆ. ಎಂಟಿಬಿ ನಾಗರಾಜ್ ಸಾರಥ್ಯದಲ್ಲಿ ಒಟ್ಟು ಏಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ʼಕಬ್ಜʼ ಸಿನಿಮಾ ಎರಡು ಭಾಗದಲ್ಲಿ ಅದ್ದೂರಿಯಾಗಿ ಮೂಡಿಬರಲಿದೆ. ಅಸಿಸ್ಟೆಂಟ್ ಡೈರೆಕ್ಟೆರ್ ಆಗಿ, ರೈಟರ್ ಆಗಿ ಕೊನೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಆರ್ ಚಂದ್ರು ಈಗ ಪ್ಯಾನ್ ಇಂಡಿಯಾ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಆಗಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ ಅಲ್ಲವೇ.?

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಗಾಂಧಿನಗರದಲ್ಲಿ ಟೈಟಲ್‌ ಮರುಬಳಕೆಗೆ ಬೀಳುತ್ತಾ ಬ್ರೇಕ್?‌ ಅಣ್ಣಾವ್ರ ಹಳೇ ಸಿನಿಮಾ ಟೈಟಲ್‌ ಬಳಸದಂತೆ ರಾಜ್‌ ಅಭಿಮಾನಿಗಳ ಆಗ್ರಹ

ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಗಳಲ್ಲೂ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿವೆ. ಈಗಾಗಲೇ ಕನ್ನಡದಲ್ಲಿ ಅದೆಷ್ಟೋ ಹಳೆಯ ಸಿನಿಮಾಗಳ ಶೀರ್ಷಿಕೆಗಳು ಮರುಬಳಕೆಯಾಗಿರುವುದುಂಟು. ಈಗ ಹಳೆಯ ಸಿನಿಮಾಗಳ ಮರುಬಳಕೆಗೆ ಬ್ರೇಕ್‌ ಹಾಕಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೌದು, ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಹಳೇ ಸಿನಿಮಾಗಳ ಟೈಟಲ್‌ಗಳನ್ನು ಮರುಬಳಕೆ ಮಾಡಬಾರದು ಅನ್ನೋ ಹೋರಾಟ ಶುರುವಾಗಿದೆ. ಈ ಹೋರಾಟಕ್ಕೆ ಮುನ್ನುಡಿ ಬರೆದಿರೋದು ಡಾ.ರಾಜ್‌ಕುಮಾರ್‌ ಅಭಿಮಾನಿಗಳು. ವಿಶ್ವ ಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ, ಡಾ.ರಾಜ್‌ಕುಮಾರ್‌ ಅವರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಬಾರದು. ಅಂತಹ ಶೀರ್ಷಿಕೆಗಳಿಗೆ ಅನುಮತಿ ಕೊಡಬಾರದು ಮತ್ತು ಅಂತಹ ಶೀರ್ಷಿಕೆ ಇರುವ ಚಿತ್ರಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಡಾ.ರಾಜ್‌ಕುಮಾರ್‌ ಅವರ ಹಳೆಯ ಸಿನಿಮಾಗಳ ಟೈಟಲ್‌ಗಳ ಮರುಬಳಕೆಗೆ ಅವಕಾಶ ಕೊಡಲೇಬಾರದು ಅಂತ ಪಟ್ಟು ಹಿಡಿದು ಹೋರಾಟಕ್ಕಿಳಿದಿರುವ ರಾಜ್ ಕುಮಾರ್ ಅಭಿಮಾನಿ ಸಂಘಗಳು ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಜೋರಾದ ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಹಾಗೊಂದು ವೇಳೆ ಸದ್ದಿಲ್ಲದೆಯೇ, ಡಾ.ರಾಜಕುಮಾರ್‌ ಅವರ ಕೆಲವು ಹಳೆಯ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಂಡು ಕೆಲಸ ಮಾಡುವ ಚಿತ್ರತಂಡಗಳು ಎಚ್ಚೆತ್ತುಕೊಂಡು, ಕೂಡಲೇ ಆ ಶೀರ್ಷಿಕೆ ತೆಗೆದು ಹಾಕಿ ಬೇರೊಂದು ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಿಸಬೇಕು. ಒಂದು ವೇಳೆ ಡಾ.ರಾಜಕುಮಾರ್‌ ಅವರ ಹೇಳೇ ಸಿನಿಮಾಗಳ ಶೀರ್ಷಿಕೆ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಇಷ್ಟಕ್ಕೂ ಈ ಹೋರಾಟ ಯಾಕಪ್ಪ ಅಂದರೆ, ಈಗಾಗಲೇ ಡಾ.ರಾಜಕುಮಾರ್‌ ಅವರ ನಟಿಸಿರುವ ಬಹುತೇಕ ಸಿನಿಮಾಗಳು ದಾಖಲೆ ಬರೆದಿವೆ. ಅದರಲ್ಲೂ ಒಳ್ಳೆಯ ಸಂದೇಶ ಹೊತ್ತು ಬಂದ ಸಿನಿಮಾಗಳು. ಅಂಥದ್ದೇ ಶೀರ್ಷಿಕೆಯಡಿ ಸಿನಿಮಾ ಮಾಡ್ತೀನಿ ಅಂದರೆ, ಅಭಿಮಾನಿಗಳು ಒಪ್ಪುವುದಿಲ್ಲ. ಈಗೀಗ ಬರುವ ಕಥೆಗಳಲ್ಲಿ ಮೌಲ್ಯವೇ ಇರುವುದಿಲ್ಲ. ಅಂತಹ ಸಿನಿಮಾಗಳಿಗೆ ಅಣ್ಣಾವ್ರ ಹಳೆಯ ಶೀರ್ಷಿಕೆ ಇಟ್ಟರೆ ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಹೊಸ ಸಿನಿಮಾಗಳ ಶೀರ್ಷಿಕೆ ಇರುವ ಪೋಸ್ಟರ್‌ಗಳು ಕಾಣಸಿಗುತ್ತಿವೆ. ಇಂತಹ ಸಿನಿಮಾಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.

ರಾಜ್‌ಕುಮಾರ್‌ ಅಭಿಮಾನಿಗಳ ಮನವಿಯನ್ನು ಸ್ವೀಕರಿಸಿರುವ ವಾಣಿಜ್ಯ ಮಂಡಳಿ, ಅಂತಹ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನೇನೋ ಕೊಟ್ಟಿದೆ. ಆದರೆ, ಕೆಲವರು ಶೀರ್ಷಿಕೆ ಮೂಲಕವೇ ಸಿನಿಮಾ ಮಾಡ್ತೀವಿ ಅಂತ ಹೊರಟರೆ? ಅದಕ್ಕೀಗ ಉತ್ತರವಿಲ್ಲ. ಮುಂದೆ ಸಿನಿಮಾಗಳಿಗೆ ತೊಂದರೆ ಆದರೂ ಆಗಬಹುದೇನೋ?

ರಾಜ್‌ ಅಭಿಮಾನಿಗಳಂತೂ ಮುನ್ನೆಚ್ಚರಿಕೆಯ ಕ್ರಮವಾಗಿಯೇ ಶೀರ್ಷಿಕೆ ಮರುಬಳಕೆ ಮಾಡಬೇಡಿ ಎಂಬ ಮನವಿ ಮಾಡಿದೆ. ಅದರಲ್ಲೂ ರಾಜ್‌ ಫ್ಯಾಮಿಲಿ ಕೂಡ ಒಳ್ಳೆಯ ಸಿನಿಮಾಗಳ ಶೀರ್ಷಿಕೆ ಬಳಸದಂತೆ ಈ ಹಿಂದೆಯೇ ಮನವಿ ಮಾಡಿತ್ತು. ಅದರಲ್ಲೂ “ಆಕಸ್ಮಿಕ” “ದಾರಿ ತಪ್ಪಿದ ಮಗ” ಸಿನಿಮಾ ಶೀರ್ಷಿಕೆ ಮರು ಬಳಕೆ ಬೇಡ ಎಂದಿತ್ತು. ಅಷ್ಟೇ ಯಾಕೆ ಈ ಹಿಂದೆ ಸಾನ್ವಿ ಶ್ರೀವಾತ್ಸವ್‌ ಅಭಿನಯದ “ಕಸ್ತೂರಿ ಮಹಲ್”‌ ಸಿನಿಮಾಗೆ “ಕಸ್ತೂರಿ ನಿವಾಸ” ಎಂಬ ಶೀರ್ಷಿಕೆ ಇಡಲಾಗಿತ್ತು.

ಕೊನೆ ಕ್ಷಣದಲ್ಲಿ ನಿರ್ದೇಶಕ ದಿನೇಶ್‌ ಬಾಬು ಅವರು, “ಕಸ್ತೂರಿ ನಿವಾಸ” ಶೀರ್ಷಿಕೆಯನ್ನು “ಕಸ್ತೂರಿ ಮಹಲ್‌” ಎಂದು ಬದಲಿಸಿದ್ದರು. ಅದೇನೆ ಇರಲಿ, ಈಗ ರಾಜ್‌ ಫ್ಯಾನ್ಸ್‌ ಒಕ್ಕೊರಲ ಮನವಿ ಮಾಡಿದ್ದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಹಳೆಯ ಸಿನಿಮಾಗಳ ಟೈಟಲ್ ಮರುಬಳಕೆಗೆ ಬ್ರೇಕ್ ಬೀಳುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಉಪಾದ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾರಾ ಗೋವಿಂದ್ , ಕಾರ್ಯದರ್ಶಿ ಎನ್ ಎಮ್ ಸುರೇಶ್ ಹಾಜರಿದ್ದರು.

ವಿಶ್ವಮಾನವ ಡಾ.ರಾಜ್‌ಕುಮಾರ್‌ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಬ.ನಾ.ಮು.ರಾಜು, ವೆಂಕಟೇಶ್‌ರೆಡ್ಡಿ, ಟಿ.ಎಚ್ಮ್.ಎಂ.ಗೌಡ, ಕೃಷ್ಣಮೂರ್ತಿ, ಕೆಂಪಣ್ಣ, ಗುರುರಾಜ್‌, ದೇವರಾಜ್‌ ಹಾಗು ಪತ್ರಕರ್ತ ಪರಮ್‌ ಗುಬ್ಬಿ ಸೇರಿದಂತೆ ಇತರೆ ರಾಜ್‌ ಅಭಿಮಾನಿಗಳ ಸಂಘಟನೆಯ ಪದಾಧಿಕಾರಿಗಳು ಈ ವೇಳೆ ಇದ್ದರು.

error: Content is protected !!