ಲುಕ್ಕಲ್ಲೇ ಲಾಕ್ ಮಾಡಿದರು ಪ್ರಸನ್ನ ; ಭಜರಂಗಿ ಸಾರಥಿಗೆ ಉಘೇ ಉಘೇ ಎನ್ನಿರಣ್ಣ !

ಎದೆಮಟ್ಟಕ್ಕಿರುವ ಬಿಳಿ-ಕಪ್ಪು ಗಡ್ಡ, ದಪ್ಪನೆಯ ಮೀಸೆ, ಬೆಕ್ಕಿನ ಕಣ್ಣುಗುಡ್ಡೆ, ತಲೆಮೇಲೆ ಕಂಚುಮಿಶ್ರಿತ ಎರಡು ಕೋಡು, ತೋಳಿಗೆ ಕಪ್ಪು ಪಟ್ಟಿ, ಕಟ್ಟುಮಸ್ತಾದ ದೇಹಕ್ಕೆ ಕಂಬಳಿಯಂತಹ ಉಡುಪು, ಗುರಾಯಿಸಿದ್ರೆ ಗುಮ್ಮೆಬಿಡ್ತೀನಿ ಎನ್ನುವಂತಹ ನೋಟ ನೋಡುಗರ ಬೆವರಿಳಿಸುತ್ತಿದೆ. ಯಾರೀ ಈ ಪಾತ್ರ ಕೆತ್ತಿದ್ದು ಅಂತ, ಯಾವಾಗ ಹುಟ್ಟಿದ್ದು ಅಂತ ನಿಮ್ಗೂ ಅನ್ನಿಸಿದ್ರೆ, ಈ ಸ್ಟೋರಿ ನೋಡಿ…

ಅಶ್ವಮೇಧ ಕುದುರೆಯನ್ನ ಬೇಕಾದರೆ ಒಂದೇ ಏಟಿಗೆ ಕಟ್ಟಿಹಾಕ್ಬೋದು, ಆದರೆ ಸಿನಿಮಾಪ್ರೇಮಿಗಳನ್ನ ಒಂದೇ ಏಟಿಗೆ ಕಟ್ಟಿಹಾಕೋದಕ್ಕೆ ತೋಳಲ್ಲಿ ತಾಕತ್ತಿದ್ದರೆ ಸಾಲದು ಕಣ್ಣಲ್ಲಿ ಕಿಚ್ಚು ಇರಬೇಕು. ಆ ಕಿಚ್ಚಿಗೆ ಕಿಕ್‌ಸ್ಟಾರ್ಟ್ ಕೊಡುವುದಕ್ಕೆ ಒಬ್ಬ ಸಾರಥಿ ಬೇಕು. ಒಮ್ಮೆ ಸ್ಪಾರ್ಕ್ ಹೊತ್ತಿಸಿದ್ರೆ ಫಿನೀಶ್ ಅಂತ ಹೇಳೋದಕ್ಕೆ ಆಗಲ್ಲ. ಆದರೆ, ಬ್ರಹ್ಮನಿಗೆ ಸೆಡ್ಡುಹೊಡೆಯುವಷ್ಟು ಕ್ಯಾಪಾಸಿಟಿ ಇರುವ ಚಿತ್ರಬ್ರಹ್ಮ, ಮನಸ್ಸು ಮಾಡಿದರೆ ಕಲಾವಿದನ ಹಣೆಬರಹವೇ ಬದಲಾಗುತ್ತೆ. ಕಲ್ಲು ಶಿಲೆಯಾಗಿ ನಿಲ್ಲುತ್ತೆ. ಆ ಶಿಲೆಗೆ ಪೂಜೆ-ಪುನಸ್ಕಾರ ನಡೆಯುತ್ತೆ. ಅಷ್ಟೇ ಯಾಕೇ, ಬ್ರಹ್ಮ ಸೃಷ್ಟಿಮಾಡಲಿಕ್ಕೆ ಆಗದ ಮಾಸ್ಟರ್‌ಪೀಸ್‌ಗಳು, ಚಿತ್ರಬ್ರಹ್ಮನ ಕಲ್ಪನೆಯಲ್ಲಿ ಸೃಷ್ಟಿಯಾಗಿ ಇತಿಹಾಸ ಪುಟಗಳಲ್ಲಿ ಸೇರಿಸಿಬಿಡುತ್ತವೆ. ಇಷ್ಟೆಲಾ, ಮಾಡುವ ತಾಕತ್ತಿರೋ ಸಿನಿಮಾಲೋಕದ ಕ್ಯಾಪ್ಟನ್ ಆಫ್ ದಿ ಶಿಪ್ ಉರುಫ್ ಡೈರೆಕ್ಟರ್‌ ಗಳಿಗೆ ಸಲಾಂ ಹೇಳುತ್ತಾ… `ಭಜರಂಗಿ’ ಚಿತ್ರಸಾರಥಿಯ ಕಲ್ಪನೆಯಲ್ಲಿ ಅರಳಿ ಮೊದಲ ನೋಟದಲ್ಲೇ ಪ್ರೇಕ್ಷಕ ಮಹಾಶಯರನ್ನ ತಿರುತಿರುಗಿ ನೋಡುವಂತೆ ಮಾಡಿರುವ ಕಲಾವಿದನ ಕಿರುಪರಿಚಯ.

ಲುಕ್ಕಲ್ಲೇ ಲಾಕ್ ಮಾಡೋದು ಸುಲಭದ ಮಾತಲ್ಲ ಎಂಬುದು ನಿಮ್ಮೆಲ್ಲರಿಗೂ ಗೊತ್ತಾಗಿದೆ. ಹೀಗಿರುವಾಗ, ಭಜರಂಗಿ-2' ಚಿತ್ರದ ಕಲಾವಿದ ಪ್ರಸನ್ನ ಸಿಂಗಲ್ ಲುಕ್‌ನಿಂದ ಪ್ರೇಕ್ಷಕ ಮಹಾಶಯರ ಗಮನ ಸೆಳೆಯುವುದಲ್ಲದೇ, ಸಿನಿರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರಸನ್ನ ಹೆಸರು ಕೇಳಿದಾಕ್ಷಣ ಅವರು ಏಕ್ದಮ್ ಕಣ್ಮುಂದೆ ಬಂದು ನಿಲ್ಲಲ್ಲ. ಅದಕ್ಕೆ ಮೊದಲ ಕಾರಣಭಜರಂಗಿ-2′ ಚಿತ್ರ ಬಿಡುಗಡೆಯಾಗದಿರುವುದು ಭಜರಂಗಿಗೂ ಮೊದಲು ಖಡಕ್ ಪಾತ್ರಕ್ಕೆ ಪ್ರಸನ್ನ ಬಣ್ಣ ಹಚ್ಚದೇ ಇರುವುದು ಮಗದೊಂದು ಕಾರಣ ಇರಬಹುದು. ಆದೇನೆ ಇರಲಿ, ಟ್ರೇಲರ್‌ನಿಂದಲೇ ನೋಡುಗರ ಎದೆಯಲ್ಲಿ ಸಣ್ಣಗೆ ನಡುಕ ಹುಟ್ಟಿಸಿರುವ ಪ್ರಸನ್ನ, `ಭಜರಂಗಿ-2′ ಚಿತ್ರದ ಮೂಲಕ ಬೆಳ್ಳಿತೆರೆಮೇಲೆ ಧಗಧಗಿಸಿದ ಮೇಲೆ ಭಜರಂಗಿ ಪ್ರಸನ್ನ ಎಂದೇ ಖ್ಯಾತಿ ಪಡೆಯುತ್ತಾರೆನ್ನುವ ನಿರೀಕ್ಷೆ ಪ್ರಸನ್ನರ ಲುಕ್-ಗೆಟ್ಟಪ್ಪು ನೋಡಿದ್ರೇನೇ ಗೊತ್ತಾಗುತ್ತೆ. ಆದರೆ, ನಟ ಸೌರವ್ ಲೋಕಿ ಭಜರಂಗಿ ಲೋಕಿಯೆಂದು ಪ್ರಖ್ಯಾತಿಹೊಂದಿದಂತೆ, ಪ್ರಸನ್ನ ಹೆಸರು ಮಾಡ್ತಾರಾ? ಜನ ಒಪ್ಪಿಕೊಳ್ತಾರಾ ಕಾದುನೋಡಬೇಕು.

ಎದೆಮಟ್ಟಕ್ಕಿರುವ ಬಿಳಿ-ಕಪ್ಪು ಗಡ್ಡ, ದಪ್ಪನೆಯ ಮೀಸೆ, ಬೆಕ್ಕಿನ ಕಣ್ಣುಗುಡ್ಡೆ, ತಲೆಮೇಲೆ ಕಂಚುಮಿಶ್ರಿತ ಎರಡು ಕೋಡು, ತೋಳಿಗೆ ಕಪ್ಪು ಪಟ್ಟಿ, ಕಟ್ಟುಮಸ್ತಾದ ದೇಹಕ್ಕೆ ಕಂಬಳಿಯಂತಹ ಉಡುಪು, ಗುರಾಯಿಸಿದ್ರೆ ಗುಮ್ಮೆಬಿಡ್ತೀನಿ ಎನ್ನುವಂತಹ ನೋಟ ನೋಡುಗರ ಬೆವರಿಳಿಸುತ್ತಿದೆ. ಅಟ್ ದಿ ಸೇಮ್ ಟೈಮ್, ಆನೆಯಂತಹ ಕಿವಿ, ಕಿವಿಗೆ ಓಲೆ, ಹೊಟ್ಟೆ ಹಾಗೂ ಹಣೆ ಮೇಲೆ ಕೆತ್ತಿರುವ ಟ್ಯಾಟೂ, ಸೊಂಟಕ್ಕೆ ಸಿಗಿಸಿಕೊಂಡಿರುವ ಕತ್ತಿ, ಡಿಫರೆಂಟ್ ಹೇರ್ ಸ್ಟೈಲ್ ಜೊತೆಗೆ ಕೈಯಲ್ಲಿ ಬಾರಿಕೋಲು ಹಿಡಿದು ಜೀಪ್ ಮೇಲೆ ಹತ್ತಿ ಎದುರಾಳಿ ಮೇಲೆ ಎಗರುತ್ತಿರುವ ಮತ್ತೊಂದು ಲುಕ್ ಪ್ರೇಕ್ಷಕರ ಗುಂಡಿಯನ್ನ ಶೇಕ್ ಮಾಡಿಬಿಟ್ಟಿದೆ. ಪಾತ್ರದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ. ಯಾರು ಈ ಪಾತ್ರಧಾರಿ ಎನ್ನುವ ಹುಡುಕಾಟ ಶುರುವಾಗಿದೆ. ನಿರ್ದೇಶಕ ಎ. ಹರ್ಷ ಈ ಪಾತ್ರಧಾರಿ ಅದೆಲ್ಲಿಂದ ಹೆಕ್ಕಿ ತಂದರು ಎನ್ನುವ ಪ್ರಶ್ನೆಯ ಜೊತೆಜೊತೆಗೆ ಪಾತ್ರದ ಸೃಷ್ಟಿ, ಪಾತ್ರಕ್ಕಾಗಿ ನಡೆದ ತಯ್ಯಾರಿ, ಮೇಕಪ್ಪು, ಕಾಸ್ಟ್ಯೂಮ್, ಆರ್ಟ್ ಡೈರೆಕ್ಷನ್ ಹೀಗೆ ಎಲ್ಲದರ ಕುರಿತಾಗಿ ಚರ್ಚೆ ನಡೆಯುತ್ತಿದೆ.

ಭಜರಂಗಿ-2' ಟ್ರೇಲರ್‌ನಲ್ಲಿರುವುದು ಹೊರತುಪಡಿಸಿ ಪ್ರಸನ್ನ ಪಾತ್ರದ ಬಗ್ಗೆ ಹೆಚ್ಚಿನ ಡೀಟೈಲ್ಸ್ ಲಭ್ಯವಾಗಿಲ್ಲ. ಪ್ರಸನ್ನ ಪಾತ್ರದ ಹೆಸರೇನು? ಪಾತ್ರಕ್ಕೋಸ್ಕರ ಮಾಡಿಕೊಂಡ ತಯ್ಯಾರಿ ಹೇಗಿತ್ತು? ಪ್ರಸನ್ನ ಹಿನ್ನಲೆಯೇನು? ಇದೆಲ್ಲದರ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ. ಈ ಮಧ್ಯೆ ನಿರ್ದೇಶಕರ ಕಲ್ಪನೆಯಲ್ಲಿಭಜರಂಗಿ-2′ ಪಾತ್ರವರ್ಗದ ಸೃಷ್ಟಿಯ ಬಗ್ಗೆ ಕೇಳಿದಾಗ ಅವರು ಹೇಳಿದಿಷ್ಟು. ಭಜರಂಗಿಯಲ್ಲಿ ಪ್ರತಿಪಾತ್ರಕ್ಕೂ ಅದರದ್ದೇ ಆದ ತೂಕಯಿದೆ. ಕಥೆ ಬರೆಯೋಕೆ ಕುಳಿತಾಗಲೇ ಪ್ರತಿ ಕ್ಯಾರೆಕ್ಟರ್ ಡಿಸೈನ್ ಮಾಡಿದ್ದೆ. ಈ ಪಾತ್ರ ಹೀಗೆ ಇರಬೇಕು, ಈ ಪಾತ್ರ ಹೀಗೆಯೇ ತೆರೆಮೇಲೆ ಕಾಣಬೇಕು ಅಂತ ಡಿಸೈಡ್ ಮಾಡಿದ್ದೆ. ಅದರಂತೇ ಮೂಡಿಬಂದಿದೆ ತನ್ನ ಕಲ್ಪನೆಯ ಶಿಲೆಗೆ ಜೀವಬಂದಿದೆ. ಅದಕ್ಕಾಗಿ, ಪಾತ್ರಧಾರಿಗಳು ಬೆವರು ಸುರಿಸಿ ರಕ್ತಬಸಿದರೆ, ಆರ್ಟ್ ಡೈರೆಕ್ಟರ್ ರವಿಯವರ ತಂಡ, ಮೇಕಪ್ ಮ್ಯಾನ್ ಪ್ರಕಾಶ್, ಯೋಗಿ ಅಂಡ್ ಗಣೇಶ್ ಅವರ ಕಾಸ್ಟ್ಯೂಮ್ ತಂಡ ಕೈಚಳಕ ತೋರಿದೆ. ಒಬ್ಬೊಬ್ಬ ಕಲಾವಿದರಿಗೆ ಮೇಕಪ್ ಹಚ್ಚಲಿಕ್ಕೆ ಮೂರು ಮೂರು ಗಂಟೆ ಹಿಡಿದರೂ ಕೂಡ ನೀರಾಯಾಸವಾಗಿ ಕೆಲಸ ಮಾಡಿದೆ. ಇವತ್ತು ಭಜರಂಗಿಗೋಸ್ಕರ ಇಡೀ ಕರುನಾಡು ಕಾಯ್ತಿದೆ ಅಂದರೆ ಅದಕ್ಕೆ ಇಡೀ ಭಜರಂಗಿ ಬಳಗದ ಬೆವರು ಸಾಕ್ಷಿ.

ಲೋಡೆಡ್ ಗನ್ನಿನಂತಿರುವ ಶಿವಣ್ಣ ಕಣ್ಣಲ್ಲೇ ಎನ್‌ಕೌಂಟರ್ ಮಾಡಿ `ಭಜರಂಗಿ’ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. ಇವರೊಟ್ಟಿಗೆ ಕೈಲಿ ಸಿಗಾರ್ ಹಿಡಿದು ಕಿಕ್ಕೇರಿಸಿರುವ ಶ್ರುತಿ ಕೂಡ ಪ್ರೇಕ್ಷಕರಿಂದ ಧಮ್ ಅಂದ್ರೆ ಇದು ಕಣ್ರೋ ಎನಿಸಿಕೊಂಡಿದ್ದಾರೆ. ಕಾಟನ್ ಸೀರೆಯುಟ್ಟುಕೊಂಡು, ಕೂದಲು ಬಿಟ್ಟುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್ ಪೇಟೆ ಜೊತೆ ಎಂಟ್ರಿಕೊಡ್ತಿರುವ ಭಾವನಾ ಕೂಡ ಬೆರಗುಗೊಳಿಸಿದ್ದಾರೆ. ವೈಟ್ ಅಂಡ್ ವೈಟ್ ಕಚ್ಚೆ ಪಂಜೆ ತೊಟ್ಟು, ಕೊರಳಿಗೆ ಕಪ್ಪು ಕವಚ ಧರಿಸಿ, ಬೋಳುತಲೆ ಹಿಂದಗಡೆ ಚೂರೇ ಚೂರು ಕೂದಲು ಬಿಟ್ಟು ಭಜರಂಗಿ ಲೋಕಿ ಕೂತೂಹಲ ಕೆರಳಿಸಿದ್ದಾರೆ. ಹೀಗೆ, ಪ್ರತಿಯೊಂದು ಪಾತ್ರವೂ ನಿರೀಕ್ಷೆ ಎನ್ನುವ ಬೆಟ್ಟವನ್ನ ಏರುವಂತೆ ಮಾಡಿದೆ. ಆದರೆ, ಕೊರೊನಾದಿಂದ ಭಜರಂಗಿಯ ದರ್ಶನಕ್ಕೆ ಮತ್ತೆ ಅಡ್ಡಿಯಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸೆಪ್ಟೆಂಬರ್ 10 ರಂದು ಭಜರಂಗಿ-2 ಚಿತ್ರದ ಭರಾಟೆ ಶುರುವಾಗ್ಬೇಕಿತ್ತು. ಗೌರಿ-ಗಣೇಶ ಹಬ್ಬಕ್ಕೆ ಸ್ಪೆಷಲ್ಲಾಗಿ ಭಜರಂಗಿ ದರ್ಶನ ಕೊಡಬೇಕಿತ್ತು, ಬಿಗ್‌ಸ್ಕ್ರೀನ್‌ನಲ್ಲಿ ಹ್ಯಾಟ್ರಿಕ್ ಹೀರೋ ಧಗಧಗಿಸಬೇಕಿತ್ತು. ಆದರೆ ಕೊರೊನಾ ಮೂರನೇ ಅಲೆಯಿಂದ ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್‌ಕರ್ಫ್ಯೂ ಜಾರಿಗೊಳಿಸೋದಕ್ಕೆ ಸರ್ಕಾರ ಮುಂದಾಗಿರೋದ್ರಿಂದ ಭಜರಂಗಿ-2 ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಟ್ರೈಲರ್ ಬಿಡುಗಡೆ ಕೂಡ ಪೋಸ್ಟ್‌ ಪೋನ್ಡ್‌ ಆಗಿದೆ. ಇದ್ರಿಂದ ಚಿತ್ರಪ್ರೇಮಿಗಳಿಗೆ ಕೊಂಚ ನಿರಾಸೆಯಾಗರ‍್ಬೋದು ಆದರೆ ಅನ್ನದಾತ ಉಳಿಬೇಕು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋಟಿ ಸುರಿಬೇಕು ಅಂದ್ರೆ ಚಿತ್ರಮಂದಿರ ಹೌಸ್‌ಫುಲ್ ಆಗ್ಬೇಕು. ಥಿಯೇಟರ್ ತುಂಬಬೇಕು ಅಂದರೆ ಸರ್ಕಾರ 100 ಪರ್ಸೆಂಟ್ ಅನುಮತಿ ಕೊಡ್ಬೇಕು. ಸದ್ಯಕ್ಕೆ ಇದನ್ನೆಲ್ಲಾ ನಿರೀಕ್ಷೆ ಮಾಡುವಂಗಿಲ್ಲ ಹೀಗಾಗಿ, ಜಯ್ಯಣ್ಣ-ಕಂಬೈನ್ಸ್ ನಿರ್ಮಾಣದ ಭಜರಂಗಿ-2 ಚಿತ್ರ ಯಾವಾಗ ಬರುತ್ತೋ ಬರಲಿ ಅಲ್ಲಿವರೆಗೂ ಒಂಟಿಕಾಲಿನಲ್ಲಿ ನಿಂತು ಕಾಯೋಣ ಅಲ್ಲವೇ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!