‘ಕಡೆಮನೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ವಿನಯ್ ಹೊಸದೊಂದು ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಚಿತ್ರಕ್ಕೆ ‘ದಿ’ ಎಂದು ಟೈಟಲ್ ಇಡಲಾಗಿದೆ. ನಿರ್ದೇಶಕ ಸಿಂಪಲ್ ಸುನಿ ‘ದಿ’ ಟೈಟಲ್ ರಿವೀಲ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ದಿ’ ವಿನಯ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಎರಡನೇ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ದಿಲದೇ ಸೆಟ್ಟೇರಿ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಅದರ ಮೊದಲ ಭಾಗವಾಗಿ ಚಿತ್ರದ ವಿಭಿನ್ನ ಟೈಟಲ್ ನ್ನು ನಿರ್ದೇಶಕ ಸಿಂಪಲ್ ಸುನಿ ಮೂಲಕ ರಿವೀಲ್ ಮಾಡಿಸಿದೆ. ಟೈಟಲ್ ರಿವೀಲ್ ಮಾಡಿ ನಿರ್ದೇಶಕ ವಿನಯ್ ಹಾಗೂ ಇಡೀ ಚಿತ್ರತಂಡಕ್ಕೆ ಸಿಂಪಲ್ ಸುನಿ ಶುಭ ಕೋರಿದ್ದಾರೆ. ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರದ ನಾಯಕ ನಾಯಕಿ ಯಾರೆಂಬುದನ್ನು ಚಿತ್ರತಂಡ ರಿವೀಲ್ ಮಾಡಲಿದೆ.
ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ಚಿತ್ರತಂಡ ಫೆಬ್ರವರಿ ಕೊನೆಯ ವಾರ ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದೆ.
‘ವಿಡಿಕೆ’ ಸಿನಿಮಾಸ್ ಬ್ಯಾನರ್ ನಡಿ ‘ವಿಡಿಕೆ’ ಗ್ರೂಪ್ ‘ದಿ’ ಚಿತ್ರವನ್ನು ನಿರ್ಮಾಣ ಮಾಡಿದೆ. ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ‘ದಿ’ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್, ಯುಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ, ಕವಿರಾಜ್ ಹಾಗೂ ವಿನಯ್ ಸಾಹಿತ್ಯ, ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ನಮ್ಮ ಸುತ್ತಮುತ್ತಲಿನಲಿನ ಪರಿಸರವನ್ನು ನಾವು ಯಾವರೀತಿ ಇಟ್ಟುಕೊಳ್ಳಬೇಕು, ಅದನ್ನು ಹೇಗೆ ಶುದ್ದವಾಗಿರುವಂತೆ ನೋಡಿಕೊಳ್ಳಬೇಕು ಎನ್ನುವ ಸಾಮಾಜಿಕ ಸಂದೇಶ ಒಳಗೊಂಡಿರುವ, ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂಥ ಕಥಾಹಂದರ ಹೊಂದಿರುವ ವಿಶೇಷ ಚಿತ್ರ ‘ನಿಸರ್ಗ’ ಇನ್ನೇನು ಬಿಡುಗಡೆಗೆ ಸಿದ್ದವಾಗಿದೆ.
ಈಗಾಗಲೇ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ.
ಭೂಮಿಕಾ ಸಿನಿ ಕ್ರೀಯೇಷನ್ಸ್ ಬ್ಯಾನರ್ ನಲ್ಲಿ ಶಿವಕುಮಾರ್.ಬಿ.ಕೆ, ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಚಿತ್ರಕ್ಕೆ ನಿರ್ದೇಶನ ಸಹ ಮಾಡಿದ್ದಾರೆ. ಎಸ್,ಬಾಲು ಅವರ ಛಾಯಾಗ್ರಹಣ, ವಿಜಯ್ ರೈ ಅವರ ಸಂಗೀತ ನಿರ್ದೇಶನ, ರಮೇಶ್ ಜಂಗಮರಹಟ್ಟಿ ಅವರ ಸಂಕಲನ ಈ ಚಿತ್ರಕ್ಕಿದ್ದು, ಕಥೆ-ಸಂಭಾಷಣೆಯನ್ನು ಮೈಸೂರು ರಮಾನಂದ್ ರಚಿಸಿದ್ದಾರೆ. ಹಿನ್ನೆಲೆ ದ್ವನಿಯನ್ನು ಪ್ರಶು ನೀಡಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
ಇನ್ನು ಚಿತ್ರದ ಪ್ರಮುಖ ತಾರಾಗಣದಲ್ಲಿ ಮೈಸೂರು ರಮಾನಂದ್, ಸ್ಮೈಲ್ ಶಿವು, ಶಶಿಧರ್ ಕೋಟೆ, ರೇಖಾದಾಸ್, ಶಂಕರ್ ಭಟ್, ಮೀಸೆ ಆಂಜನಪ್ಪ, ಕವಿತ, ಶಿಲ್ಪ ನಿತ್ಯ ದೀಕ್ಷಿತ್, ಮೀನಾ ಪೋರ್ಚುಗಲ್, ಮಂಜು, ಪರಿಸರ ಮಂಜು, ನಾರಾಯಣ ಗೌಡ, ಗೋವರ್ದನ್ ದೇವಿಲಾಲ್ ಮುಂತಾದವರು ಅಭಿನಯಿಸಿದ್ದಾರೆ.
ಇದೇ ಸಂಸ್ಥೆಯ ವತಿಯಿಂದ ‘ಮಹಾಗುರು’ ಎಂಬ ಮಾತಿಲ್ಲದ ಮತೊಂದು ಪ್ರಾಯೋಗಾತ್ಮಕ ಚಿತ್ರವನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದೆ. ಈ ಚಿತ್ರದಲ್ಲಿ ಸ್ಮೈಲ್ ಶಿವು, ಜನಾರ್ಧನ್, ಮೈಸೂರು ರಮಾನಂದ್, ಕವಿತಾ, ಅನು, ಶಶಿಧರ್ ಕೋಟೆ, ಸಂದೀಪ್, ವಿಲ್ಸನ್ ಜೋಸೆಪ್, ಆಪೆನ್.ಜೆ, ಇನ್ನೂ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.
ಈ ಚಿತ್ರವನ್ನು ಕಸ್ತೂರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಬೆಂಗಳೂರು, ಮಲೇಶಿಯಾ, ಬ್ಯಾಂಕಾಕ್ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ.
ಈ ಚಿತ್ರದ ಸಹಾಯಕ ನಿದೇಶಕರಾಗಿ ಪೀಟರ್ ಜಾನ್, ಕಾರ್ಯಕಾರಿ ನಿರ್ಮಾಪಕರಾಗಿ ಟಿ.ಸಿ.ಶಾಜೀ ಕೆಲಸ ಮಾಡುತ್ತಿದ್ದು, ಆನಂದ್ ಅವರ ಛಾಯಾಗ್ರಹಣವಿದೆ.
ಕಲಾನಿರ್ದೇಶಕ-ಎಸ್. ಸಿಲ್ವಸ್ಟಾರ್, ಸಂಕಲನ-ರಮೇಶ್ ಜಂಗಮರಹಟ್ಟಿ, ಲೆಜನಿಂಗ್ ಆಪೀಸರ್-ಪ್ಲೇಮಿಂಗ್.ಜೆ, ಪ್ರೋಡಕ್ಷನ್ ಕನ್ಟ್ರೋಲರ್ ಆಗಿ ಜೆಸ್ಟೀನ್ಜೊಸೆಪ್ ಕೆಲಸ ಮಾಡುತ್ತಿದ್ದಾರೆ.
ನಟ ಹಾಗೂ ಶಾಸಕ ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರಾಮುಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ಗರಡಿಮನೆ ಸೆಟ್ ಹಾಕಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಇಂದು “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ “ಗರಡಿ” ಮನೆ ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಹಂತದ ವಿಶೇಷವೆಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರಿಗೆ ವಿಶೇಷ ಧನ್ಯವಾದ. “ಗರಡಿ” ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಯೋಗರಾಜ್ ಭಟ್.
ಇಂದು “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ ಸಂಸ್ಥೆಗೆ ಒಂದು ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್ ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣದ ಹದಿನಾರನೇ ಚಿತ್ರ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದ ಬಿ.ಸಿ.ಪಾಟೀಲ್ ಅವರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.
ನಾನು ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅನುಭವಿ ಕಲಾವಿದರೊಂದಿಗೆ ನಟಿಸಿರುವ ಖುಷಿಯಿದೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕ ಯಶಸ್ ಸೂರ್ಯ.
ನಾಯಕಿ ಸೋನಾಲ್ ಮೊಂತೆರೊ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ನಟ “ಆರ್ಮುಗಂ” ರವಿಶಂಕರ್ ಮಾತನಾಡಿ, ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಯೋಗರಾಜ್ ಭಟ್ ಹಾಗೂ ಬಿ.ಸಿ.ಪಾಟೀಲ್ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು.
ನಟ ಸುಜಯ್ ಬೇಲೂರ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಕಲಾವಿದರಾದ ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಹಾಗೂ ಕಥೆ ಬರೆದಿರುವ ವಿಕಾಸ್ “ಗರಡಿ” ಚಿತ್ರದ ಕುರಿತು ಮಾತನಾಡಿದರು.
ನಿರ್ಮಪಕಿ ಸೃಷ್ಟಿ ಪಾಟೀಲ್ ಚಿತ್ರೀಕರಣ ಸರಾಗವಾಗಿ ಮುಗಿಯಲು ಸಹಕಾರ ನೀಡಿದ ಸಮಸ್ತ ತಂಡಕ್ಕೂ ಧನ್ಯವಾದ ತಿಳಿಸಿದರು.
ಚಿತ್ರದ ವಿಶೇಷಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿದ್ದಾರೆ. ನಿರ್ಮಾಪಕ ಬಿ.ಸಿ.ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಾಯಕ ಯಶಸ್ ಸೂರ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ದರ್ಶನ್ ಅವರಿಗೆ ಧನ್ಯವಾದ ತಿಳಿಸಿದರು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ “ವೇದ” ಚಿತ್ರ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ಹೊಸ ಚಿತ್ರದ ಬಗ್ಗೆ ಮಾಹಿತಿ ಬಂದಿದೆ.
ನಿಶ್ಚಿತ ಕಂಬೈನ್ಸ್ ಬ್ಯಾನರ್ ನಲ್ಲಿ ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡುತ್ತಿರುವ ಈ ನೂತನ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು. ಈ ಸಂಸ್ಥೆಯಿಂದ ಹಿಂದೆ “ಶಿವಾರ್ಜುನ” ಚಿತ್ರ ನಿರ್ಮಾಣವಾಗಿತ್ತು.
ಕನ್ನಡದ ರಿಯಾಲಿಟಿ ಶೋ “ಮಜಾ ಟಾಕೀಸ್” ಹಾಗೂ ಸೃಜನ್ ಲೋಕೇಶ್ ಅಭಿನಯದ “ಎಲ್ಲಿದೆ ಇಲ್ಲಿತನಕ” ಚಿತ್ರದ ನಿರ್ದೇಶಕ ತೇಜಸ್ವಿ ಕೆ ನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಶಿವಣ್ಣ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜಕುಮಾರ್ ಅವರು ಈ ತನಕ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ನಿರ್ದೇಶಕ ತೇಜಸ್ವಿ ಕೆ ನಾಗ್ ತಿಳಿಸಿದ್ದಾರೆ.
ಚಿತ್ರ : ಮಿಸ್ಟರ್ ಬ್ಯಾಚ್ಯುಲರ್ ನಿರ್ದೇಶನ : ನಾಯ್ಡು ನಿರ್ಮಾಣ : ಶ್ರೀನಿವಾಸ್, ಹನುಮಂತ ರಾವ್, ಸ್ವರ್ಣಲತ ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ನಿಮಿಕಾ ರತ್ನಾಕರ್, ಚಿಕ್ಕಣ್ಣ, ಗಿರಿ, ಅಯ್ಯಪ್ಪ, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಇತರರು.
ಇದೊಂದು ಮದುವೆ ಆಗಬೇಕು ಅಂತ ಚಿಕ್ಕಂದಿನಿಂದಲೂ ಮೂರು ಹೊತ್ತು ಹಪಹಪಿಸುವ ಹುಡುಗನ ಕಥೆ ಮತ್ತು ವ್ಯಥೆ. ಮದುವೆ ಅಂದರೆ ಬದುಕಿನ ದೊಡ್ಡ ಹಬ್ಬ ಅಂದುಕೊಂಡ ಅವನು ವಯಸ್ಸಿಗೆ ಬಂದಮೇಲೆ, ಹುಡುಗಿ ನೋಡಿ ಮದ್ವೆ ಆಗೋ ಕನಸು ಕಾಣ್ತಾನೆ , ಒಂದಲ್ಲ, ಎರಡಲ್ಲ, ಬರೋಬ್ಬರಿ ಮುವತ್ತು ಹುಡುಗಿಯರೂ ಅವನನ್ನು ರಿಜೆಕ್ಟ್ ಮಾಡ್ತಾರೆ! ಮುವತ್ತೊಂದನೇ ಹುಡುಗಿ ಕೈ ಹಿಡಿಯದೇ ಹೋದರೆ, ಲೈಫಲ್ಲಿ ‘ಮದುವೆ ಭಾಗ್ಯ’ವೇ ಇಲ್ಲ. ಅಂಥಾ ಹೊತ್ತಲ್ಲಿ ಏನೆಲ್ಲಾ ಪ್ರಯಾಸ ಪಡುತ್ತಾನೆ ಅನ್ನೋದು ಕಥೆ ಮತ್ತು ವ್ಯಥೆ.
ಒಂದೇ ಮಾತಲ್ಲಿ ಹೇಳೋದಾದರೆ, ಮೊದಲರ್ಧ ಜಾಲಿ ಜಾಲಿ. ದ್ವಿತಿಯಾರ್ಧ ಖಾಲಿ ಖಾಲಿ! ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಯೋಚನಾಲಹರಿಯೂ ಸಖತ್. ಜಾಲಿಯಾಗಿಯೇ ಸಾಗುವ ಬ್ಯಾಚ್ಯುಲರ್ ಸ್ಟೋರಿ ದ್ವಿತಿಯಾರ್ಧ ಬಳಿಕ ಕೊಂಚ ವೇಗ ಕಳೆದುಕೊಳ್ಳುತ್ತದೆ. ಆರಂಭದಿಂದ ಮಧ್ಯಂತರವರೆಗೆ ಬ್ಯಾಚ್ಯುಲರ್ ಪಡುವ ಪರಿಪಾಟಿಲು ನೋಡುಗನಿಗೆ ನಗು ಎಬ್ಬಿಸುತ್ತಾದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಸೀಟಿಗೆ ಒರಗುವಂತೆ ಮಾಡುತ್ತೆ. ಮೊದಲರ್ಧದ ಬಿಗಿ ಹಿಡಿತ ಕೊನೆಯವರೆಗೂ ಇದ್ದಿದ್ದರೆ, ಬ್ಯಾಚ್ಯುಲರ್ ಗೆ ಜೈ ಎನ್ನಬಹುದಿತ್ತು. ಜಾಲಿಯಾಗಿ ಸಾಗುವ ಮಿಸ್ಟರ್ ಬ್ಯಾಚ್ಯುಲರ್ ಗೆ ನಿರ್ದೇಶಕರು ‘ರಾ’ ಫೀಲ್ ಕೊಡುವ ನೆಪದಲ್ಲಿ ಸ್ವಾದ ಹದಗೆಡಿಸಿದ್ದಾರೆ. ಕಥೆ ತೀರಾ ಹೊಸದೇನಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಈ ಬಗೆಯ ಸಿನಿಮಾಗಳು ಬಂದಿವೆ. ಆದರೂ ಕನ್ನಡಕ್ಕೆ ಫ್ರೆಶ್ ಥಾಟ್ ಎನಿಸುವಂತೆ ನಿರ್ದೇಶಕರ ಪ್ರಯತ್ನ ಅಷ್ಟಾಗಿ ರುಚಿಸಿಲ್ಲ.
ಮೊದಲರ್ಧದ ಸಿನಿಮಾದಲ್ಲಿ ಯಾವುದೇ ತಪ್ಪು ಕಾಣಸಿಗಲ್ಲ. ಕಥೆ ಸಾಗುವ ಪರಿ, ಘಟಿಸುವ ಹಾಸ್ಯ ಸನ್ನಿವೇಶ, ಮಾತು, ಹಾಡು, ಕುಣಿತ ಬರುವ ಪಾತ್ರಗಳ ತೊಳಲಾಟ, ಪೀಕಲಾಟವನ್ನು ತುಂಬಾ ಚೆನ್ನಾಗಿಯೇ ಕಟ್ಟಿಕೊಡಲಾಗಿದೆ. ಅದರೆ, ಅದೇ ವೇಗ ಕೊನೆಯವರೆಗೂ ಇದ್ದಿದ್ದರೆ ಬ್ಯಾಚ್ಯುಲರ್ ಕಷ್ಟವಾಗುವ ಬದಲು ಇಷ್ಟವಾಗುತ್ತಿದ್ದ. ಸರಾಗವಾಗಿ ಸಾಗುವ ಕಥೆ, ದ್ವಿತಿಯಾರ್ಧ ಟ್ರ್ಯಾಕ್ ಚೇಂಜ್ ಆಗಿ ಎಲ್ಲೆಲ್ಲೋ ಹೋಗಿರುವುದರಿಂದ ನಗಾಡಿಕೊಂಡಿದ್ದ ನೋಡುಗ ಆ ನಗುವ ಗುಂಗಿಂದ ಹೊರಬಂದು ಕೊಂಚ ಗೊಂದಲಕ್ಕೀಡಾಗುತ್ತಾನೆ. ಯಾಕೆ, ಏನು ಅಂತ ಸಿನಿಮಾದಲ್ಲೇ ನೋಡಬೇಕು.
ಕಥೆ ಇಷ್ಟು…
ಆ ಹುಡುಗ ಚಿಕ್ಕ ವಯಸ್ಸಲ್ಲಿ ಮದುವೆ ಅಂದ್ರೆ ಏನು ಅಂತ ತನ್ನ ತಾಯಿ ಬಳಿ ಕೇಳ್ತಾನೆ. ಅದೊಂದು ಹಬ್ಬ ಅಂತಾಳೆ ಅಮ್ಮ. ಯುಗಾದಿ, ದೀಪಾವಳಿ ರೀತಿಯ ಹಬ್ಬವೇ ಅಂತಾನೆ ಮಗ. ಅವು ವರ್ಷಕ್ಕೊಮ್ಮೆ ಬರುವ ಹಬ್ಬ.ಮದ್ವೆ ಬದುಕಿನದ್ದಕ್ಕೂ ಇರುವ ಹಬ್ಬ ಅಂತಾಳೆ ಅಮ್ಮ. ಇಷ್ಟು ಹೇಳಿದ್ದೇ ತಡ, ಅವನು ಮನೆಯಲ್ಲಿ ಮದ್ವೆ ಮಾಡಿಸಿ ಅಂತ ಸದಾ ಗಂಟು ಬೀಳ್ತಾನೆ. ಮದ್ವೆ ಅಗಬೇಕು ಅನ್ನೋದೇ ಅವನ ಕನಸು. ದೊಡ್ಡವನಾದ ಮೇಲೂ ಮದ್ವೆ ಕನಸು ಹೆಚ್ಚಾಗುತ್ತೆ. ಮನೇಲೂ ಹುಡುಗಿ ನೋಡಲು ಶುರು ಮಾಡ್ತಾರೆ. ಅವನನ್ನು ನೋಡಿದವರೆಲ್ಲ ರಿಜೆಕ್ಟ್ ಮಾಡ್ತಾರೆ. ಈ ನಡುವೆ ಒಬ್ಬ ಹುಡುಗಿ ಮದ್ವೆಗೂ ಮುನ್ನ ‘ಅನುಭವ’ ಪಡೆದು ಬಂದರೆ ಮದ್ವೆ ಆಗ್ತೀನಿ. ನಿನ್ನ ವರ್ಜಿನಿಟಿ ಕಳ್ಕೊಂಡ್ ಬಾ ಅಂತ ಸವಾಲು ಹಾಕ್ತಾಳೆ. ಅವಳು ಹಾಗೆ ಹೇಳೋದೇಕೆ, ಮುಂದೆ ಅವನು ವರ್ಜಿನಿಟಿ ಕಳ್ಕೋತ್ತಾನಾ, ಮದ್ವೆ ಆಗುತ್ತೋ ಇಲ್ವೋ ಅನ್ನೋದೇ ಸಸ್ಪೆನ್ಸ್.
ಯಾರು ಹೇಗೆ?
ಡಾರ್ಲಿಂಗ್ ಕೃಷ್ಣ, ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮದ್ವೆ ಗೂ ಮುನ್ನ ತಾನು ವರ್ಜಿನಿಟಿ ಕಳ್ಕೊಳ್ಳಲು ಪರದಾಡುವ ಹುಡುಗನಾಗಿ ಗಮನಸೆಳೆಯುತ್ತಾರೆ. ನಗಿಸುವಲ್ಲಿ ಸಫಲ. ಡ್ಯಾನ್ಸ್, ಫೈಟ್ ನಲ್ಲೂ ಓಕೆ. ಮಿಲನ ನಾಗರಾಜ್ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ನಿಮಿಕಾ ರತ್ನಾಕರ್ ಅವರ ಅಂದವಷ್ಟೇ ಇಲ್ಲಿ ಹೈಲೆಟ್. ಚಿಕ್ಕಣ್ಣ, ಗಿರಿ ಇರುವ ಸಮಯದಲ್ಲಿ ಒಳ್ಳೇ ಸ್ಕೋರ್ ಮಾಡಿದ್ದಾರೆ. ಅಯ್ಯಪ್ಪ ರಗಡ್ ಲುಕ್ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಅಲ್ಪ ಸಮಯದಲ್ಲೂ ಅಬ್ಬರಿಸಿದ್ದಾರೆ. ಪವಿತ್ರಾ ಲೋಕೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿವೆ.
ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಒಂದು ಹಾಡು ಗಮನ ಸೆಳೆಯುತ್ತೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ರೇಜಿಮೈಂಡ್ಸ್ ಕತ್ತರಿ ಕೆಲಸ ಚಿತ್ರದ ವೇಗ ಹೆಚ್ಚಿಸಿದೆ. ಅವರ ಕ್ಯಾಮೆರಾ ಕೈಚಳಕ ಬ್ಯಾಚ್ಯಲರ್ ಲೈಫ್ ಗೆ ಸಾಥ್ ಕೊಟ್ಟಿದೆ.
ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರುವ, ಕ್ರಿಯೇಟಿವ್ ಕಂಟೆಂಟ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧನಂಜಯ, ಧ್ರುವ ಸರ್ಜಾ ಚಿತ್ರದ ಮೊದಲ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಹಾಸ್ಟೆಲ್ ಹುಡುಗರು ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ಹೊರಟಿದೆ. ಇಂದು ಚಿತ್ರದ ‘ಪ್ರೊಟೆಸ್ಟ್ ಸಾಂಗ್’ ಚಿತ್ರತಂಡ ಬಿಡುಗಡೆ ಮಾಡಿದೆ. ಹಾಸ್ಟೆಲ್ ನಲ್ಲಿರುವ ಹುಡುಗರ ಕಥೆ, ವ್ಯಥೆ ಇರುವ ಈ ಹಾಡನ್ನು ಸಖತ್ ಮಜವಾಗಿ ಕಟ್ಟಿಕೊಡಲಾಗಿದ್ದು, ಅದಕ್ಕೆ ತಕ್ಕಂತೆ ಯೋಗರಾಜ್ ಭಟ್ ಸಾಹಿತ್ಯ, ಅಜನೀಶ್ ಲೋಕನಾಥ್ ಮ್ಯೂಸಿಕ್ ಹಾಗೂ ಹಾಡು ಕಿಕ್ ನೀಡುತ್ತಿದೆ.
ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.
ಪ್ರತಿ ಬಾರಿ ಯೂನೀಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೆಚ್ಚಿಕೊಂಡು ಪರಂವಃ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ “ಬಾನದಾರಿಯಲ್ಲಿ” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ “ನಿನ್ನನ್ನು ನೋಡಿದ ನಂತರ” ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪ್ರೀತಂ ಗುಬ್ಬಿ.
ನಾನು ಮೊದಲು ಆನಂದ್ ಆಡಿಯೋ ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ಸಿನಿಜರ್ನಿಯಲ್ಲೇ ಅತೀ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ. ಇನ್ನು ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. “ಹುಡುಗಾಟ” ಚಿತ್ರದ “ಮಂದಾಕಿನಿ ಯೇ” ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ . ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ.
ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ – ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಕೀನ್ಯಾ ಭಾಗದ ಚಿತ್ರೀಕರಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿ ನಮ್ಮ ಚಿತ್ರ ತಂಡ ಹಾಗೂ ಸ್ಟಾರ್ ರಿಪೋರ್ಟರ್ಸ್ ತಂಡದ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಆನಂತರ ಹಾಡು ಬಿಡುಗಡೆ ಮಾಡಿದ್ದೇವೆ ಎಂದು ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಹಾಡು ಹಾಗೂ ಚಿತ್ರದ ಕುರಿತು ಮಾತನಾಡಿದರು.
ಚಿತ್ರ ತುಂಬಾ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಅಷ್ಟೇ ಇಂಪಾಗಿದೆ. ನಾನು ಈ ಹಾಡಿಗಾಗಿ ಸರ್ಫಿಂಗ್ ಅಭ್ಯಾಸ ಮಾಡಿದ್ದೇನೆ ಎಂದರು ನಾಯಕಿ ರುಕ್ಮಿಣಿ ವಸಂತ್.
ಹಾಡು ಅದ್ಭುತವಾಗಿದೆ. ಗಣೇಶ್ ಹಾಗೂ ರಂಗಾಯಣ ರಘು ಅವರು ನನಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ. ಕಳೆದವರ್ಷ ಅನೇಕ ಕನ್ನಡ ಚಿತ್ರಗಳು ಗೆದ್ದು ದಾಖಲೆ ನಿರ್ಮಿಸಿದೆ. ಈ ವರ್ಷವೂ ಎಲ್ಲಾ ಕನ್ನಡ ಚಿತ್ರಗಳು ದೊಡ್ಡಮಟ್ಟದ ಯಶಸ್ಸು ಕಾಣಲಿ. ಅದರಲ್ಲಿ “ಬಾನದಾರಿಯಲ್ಲಿ” ಚಿತ್ರವೂ ಇರಲಿ ಎನ್ನುತ್ತಾರೆ ಚಿತ್ರದ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ.
“ಬಾನದಾರಿಯಲ್ಲಿ” ಹಾಡು ಹುಟ್ಟಿದ ಸಮಯವನ್ನು ವರ್ಣಿಸಿದ ಗೀತರಚನೆಕಾರ ಕವಿರಾಜ್, ಮುಂಬೈನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಖ್ಯಾತ ಗಾಯಕ ಸೋನು ನಿಗಮ್ ಸುಮಧುರವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎಂದು ತಿಳಿಸಿದರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹಾಕಿದ್ದಾರೆ.
ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ “ಆರ್ಕೇಸ್ಟ್ರಾ” ಕಾರುಬಾರು. ಇಂತಹ “ಆರ್ಕೇಸ್ಟ್ರಾ” ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುತ್ತಾರೆ. “ಆರ್ಕೇಸ್ಟ್ರಾ” ಕಥೆ ಆಧರಿಸಿರುವ “ಆರ್ಕೇಸ್ಟ್ರಾ ಮೈಸೂರು” ಎಂಬ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾವಿದು. ಅದರಲ್ಲೂ ಡಾಲಿ ಅವರೆ ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿರುವುದು ವಿಶೇಷ.
ಟ್ರೇಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್ ಈ ಚಿತ್ರದ ಕುರಿತು ಭಾವನಾತ್ಮಕವಾಗಿ ಮಾತನಾಡಿದರು. ನಮ್ಮ ಮೈಸೂರಿನ ಅನೇಕ ಸ್ನೇಹಿತರು ಸೇರಿ ಮಾಡಿರುವ ಚಿತ್ರವಿದು. ಸುನೀಲ್ ಮೈಸೂರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದಾರೆ. ನಾನು ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದೇನೆ. ನಾನು ಡಾಲಿ ಆಗುವುದಕ್ಕೆ ಮುಂಚಿತವಾಗಿ ಈ ಚಿತ್ರದ ಹಾಡುಗಳನ್ನು ಬರೆದಿದ್ದೇನೆ. ಈ ಚಿತ್ರದಲ್ಲಿ ನಾಯಕ ಗೆಲುವನ್ನು ಸಂಭ್ರಮಿಸುವ ಹಾಡೊಂದನ್ನು ಬರೆಯಬೇಕಿತ್ತು. ನನಗೆ ಆಗ ಆ ಗೆಲುವನ್ನು ಸಂಭ್ರಮಿಸಿ ಗೊತ್ತಿರಲಿಲ್ಲ. ಆನಂತರ “ಟಗರು” ಚಿತ್ರದ ಯಶಸ್ಸಿನ ನಂತರ ಈ ಹಾಡನ್ನು ಪೂರ್ಣ ಮಾಡಿದ್ದೆ.
ಸಂಕ್ರಾಂತಿ ಸಮಯದಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಆದರೆ ನಮ್ಮ ಚಿತ್ರ ಇದೇ ಸಂದರ್ಭದಲ್ಲಿ (ಜನವರಿ 12) ಬಿಡುಗಡೆಯಾಗುತ್ತಿದೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಕಲಾರಸಿಕರು ನೋಡಿ ಹಾರೈಸಿ ಎಂದರು ಡಾಲಿ ಧನಂಜಯ.
2015 ರಲ್ಲಿ “ಬಾರಿಸು ಕನ್ನಡ ಡಿಂಡಿಮವ” ಎಂಬ ಹಾಡನ್ನು ನಾವೆಲ್ಲಾ ಗೆಳೆಯರು ಸೇರಿ ಮಾಡಿದ್ದೆವು. ಮೈಸೂರಿನಲ್ಲೇ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಈ ಹಾಡಿಗೆ ಸಿಕ್ಕ ಜನ ಬೆಂಬಲ ನಾವು ಚಿತ್ರ ನಿರ್ಮಾಣ ಮಾಡಲು ಸ್ಪೂರ್ತಿಯಾಯಿತು. ಆನಂತರ ನಮ್ಮ “ಆರ್ಕೇಸ್ಟ್ರಾ ಮೈಸೂರು” ಚಿತ್ರ ಆರಂಭವಾಯಿತು. “ಆರ್ಕೇಸ್ಟ್ರಾ”ದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುವುದಾ? ಎಂಬುದೆ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೇಸ್ಟ್ರಾ ಕಂಪನಿಗಳೂ ಇದೆ. ಈ ರೀತಿ “ಆರ್ಕೇಸ್ಟ್ರಾ” ದೊಂದಿಗೆ ನಮ್ಮ ಚಿತ್ರದ ಕಥೆ ಸಾಗುತ್ತದೆ.
ರಘುದೀಕ್ಷಿತ್ ಸಂಗೀತ ನೀಡಿರುವ ಎಂಟು ಹಾಡುಗಳು ನಮ್ಮ ಚಿತ್ರದಲ್ಲಿದೆ. ಅಷ್ಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಒಂದು ಹಾಡಿನಲ್ಲಿ ಇಡೀ ಮೈಸೂರೇ ಭಾಗಿಯಾಗಿದೆ ಎನ್ನಬಹುದು. ಏಕೆಂದರೆ ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮಹದೇವ್ ನನ್ನ ಜೊತೆ ಸಹ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ನನ್ನ ತಂಡದ ಸಹಕಾರದಿಂದ ಉತ್ತಮ ಚಿತ್ರವೊಂದು ಇದೇ ಜನವರಿ 12 ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದರು ನಿರ್ದೇಶಕ ಸುನೀಲ್ ಮೈಸೂರು.
ನಮ್ಮ ಸಿನಿಮಾ ಕನಸಿನ ಜರ್ನಿ ಶುರುವಾಗಿದ್ದು ಹದಿನೈದು ವರ್ಷದ ಹಿಂದೆ. ನಾಟಕ ಮಾಡಬೇಕಾದರೆ, ನಾವೆಲ್ಲಾ ಬೆಂಗಳೂರಿಗೆ ಹೋಗಿ ಸಿನಿಮಾ ಮಾಡಲು ಆಗುವುದಾ? ಎಂದು ಯೋಚಿಸುತ್ತಿದ್ದೆವು. ಆ ಪೈಕಿ ನಮ್ಮ ಚಿತ್ರದಲ್ಲಿ ನಟಿಸಲು ಮೊದಲು ಬೆಂಗಳೂರಿಗೆ ಬಂದಿದ್ದು ಸ್ನೇಹಿತ ಧನಂಜಯ್ . ಆನಂತರ “ಆರ್ಕೇಸ್ಟ್ರಾ ಮೈಸೂರು” ಚಿತ್ರ ಆರಂಭವಾಯಿತು. ಇಡೀ ಮೈಸೂರಿನಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಕಥೆ ಕೇಳಿದ ರಘು ದೀಕ್ಷಿತ್ ನಮ್ಮ ಬೆಂಬಲಕ್ಕೆ ನಿಂತರು. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎಂದರು ನಾಯಕ ಪೂರ್ಣಚಂದ್ರ ಮೈಸೂರು.
ಚಿತ್ರದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮತ್ತೊಬ್ಬ ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ನಾಯಕಿ ರಾಜಲಕ್ಷ್ಮೀ, ಸಹ ನಿರ್ದೇಶಕ ಮಹದೇವ್, ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೋಸೆಫ್ ಕೆ ರಾಜ, ನಟ ನಾಗಭೂಷಣ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಚಿತ್ರದ ಕುರಿತು ಮಾತನಾಡಿದರು.
ನಿರ್ದೇಶಕ ಸುನಿ ಸಿನಿಮಾ ಮಾಡ್ತಾರೆ ಅಂದರೆ, ಅಲ್ಲೊಂದು ವಿಶೇಷತೆ ಇರುತ್ತೆ. ಸದಾ ಹೊಸ ವಿಷಯವನ್ನೇ ಆಯ್ಕೆ ಮಾಡಿಕೊಂಡು ತಮ್ಮದೇ ಶೈಲಿಯ ಸಿನಿಮಾ ಮಾಡುತ್ತ ಬಂದಿರುವ ಸುನಿ, ಈಗಾಗಲೇ ಸಕ್ಸಸ್ ಫುಲ್ ನಿರ್ದೇಶಕ. ಸ್ಟಾರ್ ನಟರಿಗೂ ಸೈ ಹೊಸಬರಿಗೂ ಸೈ ಸಿನಿಮಾ ಮೂಲಕ ಹೊಸತನ ಕಟ್ಟಿಕೊಡಲು ಸದಾ ಹಪಹಪಿಸುವ ನಿರ್ದೇಶಕ. ಈ ಬಾರಿಯೂ ಅವರು ಮತ್ತೊಂದು ಸರಳ ಪ್ರೇಮಕಥೆ ಜೊತೆ ಬರುತ್ತಿದ್ದಾರೆ. ಅವರ ಸಿನಿಮಾ ನಾಯಕರಾಗಿ ವಿನಯ್ ರಾಜಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕುರಿತು ಒಂದು ವರದಿ
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಿರ್ದೇಶಕ ಸಿಂಪಲ್ ಸುನಿ ಹೊಸದೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ತಯಾರಿ ನಡೆಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸಿಂಪಲ್ ಸುನಿ ಮುಂದಿನ ಚಿತ್ರ ರೋಮ್ಯಾಂಟಿಕ್ ಸಬ್ಜೆಕ್ಟ್ ಒಳಗೊಂಡಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ವಿನಯ್ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಇಬ್ಬರ ಕಾಂಬಿನೇಶನ್ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಬರೆದು ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿಂಪಲ್ ಸುನಿ ಸದ್ಯದಲ್ಲೇ ಚಿತ್ರದ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳೋದಾಗಿ ತಿಳಿಸಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ ‘ಪೆಪೆ’, ‘ಗ್ರಾಮಾಯಣ’, ‘ಅದೊಂದಿತ್ತು ಕಾಲ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಬಾರಿ ದೊಡ್ಮನೆ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಉಡುಗೊರೆ ನೀಡೋಕೆ ವಿನಯ್ ರಾಜ್ ಕುಮಾರ್ ಕೂಡ ರೆಡಿಯಾಗಿದ್ದಾರೆ.
ಅಂದ್ಹಾಗೆ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ಮೊದಲ ಚಿತ್ರಕ್ಕೆ ಮೈಸೂರು ರಮೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಎಂದಿನಂತೆ ಸುನಿ ಈ ಸಿನಿಮಾದಲ್ಲೂ ನುರಿತ ತಂತ್ರಜ್ಞರ ಜೊತೆ ಕೆಲಸ ಮಾಡುತ್ತಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನವಿದೆ. ಇಲ್ಲಿ ವಿಶೇಷ ಹಾಡುಗಳು ಸಿನಿಮಾದ ಭಾಗ. ಇನ್ನು ಸಭಾ ಛಾಯಾಗ್ರಾಹಣವಿರಲಿದೆ.
ಅವರೆಲ್ಲಾ ಸುಮಾರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಸ್ನೇಹಿತರು. ಅಂತಹ ಸ್ನೇಹವೃಂದದಿಂದ “ಮಧುಪಾನದ ಹೊಸಪಾಠ” ಎಂಬ ಪಾರ್ಟಿ ಸಾಂಗ್ ಹೊಸವರ್ಷದ ಹೊಸ್ತಿಲಿನಲ್ಲಿ ಬಿಡುಗಡೆಯಾಗಿದೆ.
ನನಗೆ ಕೆಲವು ವರ್ಷಗಳಿಂದ rap singer ಆಗಬೇಕೆಂದು ಕನಸು. ಎಷ್ಟೋ ಜನ ಖ್ಯಾತ rap singers ನನಗೆ ಸ್ಪೂರ್ತಿ. ಇಪ್ಪತ್ತು ವರ್ಷಗಳಾದರೂ ನಾನು ಒಂದು ಆಲ್ಬಂ ಸಾಂಗ್ ಬಿಡುಗಡೆ ಮಾಡಲು ಆಗಿರಲಿಲ್ಲ. ಆನಂತರ ನನ್ನ ಗೆಳೆಯ ದಕ್ಷಿಣಮೂರ್ತಿ ಸಿಗುತ್ತಾರೆ. ಈ ಆಲ್ಬಂ ಸಾಂಗ್ ಮಾಡುವ ವಿಚಾರ ತಿಳಿಸುತ್ತಾರೆ. ಆಗ ” ಮಧುಪಾನದ ಹೊಸಪಾಠ” ಆಲ್ಬಂ ಸಾಂಗ್ ನಿರ್ಮಾಣವಾಗುತ್ತದೆ ಎಂದರು ಹಾಡನ್ನು ಬರೆದು ಹಾಡಿರುವ, ಜೊತೆಗೆ ಅಭಿನಯವನ್ನೂ ಮಾಡಿರುವ ಕಂಗ್ಲೀಷ್ ಡ್ಯಾಡಿ ಚಿಕ್ಕು.(ಚಿಕ್ಕ ವೆಂಕಟ ರಾಮು).
ನನಗೆ ಮೊದಲಿನಿಂದಲೂ ಕಲಾವಿದನಾಗಬೇಕೆಂಬ ಕನಸು. ಅದು ಆಗಿರಲಿಲ್ಲ. ಚಿಕ್ಕು ಅವರು ಈ ಹಾಡಿನ ಬಗ್ಗೆ ಹೇಳಿದಾಗ, ಹಾಡು ಇಷ್ಟವಾಯಿತು ನಿರ್ಮಾಣ ಮಾಡಿದ್ದೆ. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಆರವ್ ರಿಶಿಕ್ ಸಂಗೀತ ನೀಡಿದ್ದಾರೆ.
ಈ ಆಲ್ಬಂ ಹಾಡಿಗೆ ಆರ್ಟಿಸ್ಟಿಕ್ ಡೈರೆಕ್ಟರ್ ಆಗಿ ಶಕ್ತಿ ಆರ್, ನೃತ್ಯ ನಿರ್ದೇಶಕ ಹಾಗೂ ಸಂಕಲನಕಾರರಾಗಿ ಶಿವಾಸ್ ಕೆ ಫಣಿ ಹಾಗೂ ಛಾಯಾಗ್ರಾಹಕರಾಗಿ ನಿರಂಜನ್ ಬೋಪ್ಪಣ್ಣ ಕಾರ್ಯ ನಿರ್ವಹಿಸಿದ್ದಾರೆ. ಸ್ನೇಹಿತರೆ ಸೇರಿ ಮಾಡಿರುವ ಈ ಹಾಡಿಗೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಹಾಗೂ ನಟ ದಕ್ಷಿಣಮೂರ್ತಿ.
ಖ್ಯಾತ ಗಾಯಕ ಅವಿನಾಶ್ ಚೆಬ್ಬಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು.
ಸಂಗೀತ ನಿರ್ದೇಶಕ ಆರವ್ ರಿಶಿಕ್, ಆರ್ಟಿಸ್ಟಿಕ್ ಡೈರೆಕ್ಟರ್ ಶಕ್ತಿ ಹಾಗೂ ಸಂಕಲನಕಾರ – ನೃತ್ಯ ನಿರ್ದೇಶಕ ಶಿವಾಸ್ ಕೆ ಫಣಿ “ಮಧುಪಾನದ ಹೊಸಪಾಠ” ಬಗ್ಗೆ ಮಾತನಾಡಿದರು.