ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ “ಆರ್ಕೇಸ್ಟ್ರಾ” ಕಾರುಬಾರು. ಇಂತಹ “ಆರ್ಕೇಸ್ಟ್ರಾ” ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುತ್ತಾರೆ. “ಆರ್ಕೇಸ್ಟ್ರಾ” ಕಥೆ ಆಧರಿಸಿರುವ “ಆರ್ಕೇಸ್ಟ್ರಾ ಮೈಸೂರು” ಎಂಬ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾವಿದು. ಅದರಲ್ಲೂ ಡಾಲಿ ಅವರೆ ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿರುವುದು ವಿಶೇಷ.
ಟ್ರೇಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್ ಈ ಚಿತ್ರದ ಕುರಿತು ಭಾವನಾತ್ಮಕವಾಗಿ ಮಾತನಾಡಿದರು. ನಮ್ಮ ಮೈಸೂರಿನ ಅನೇಕ ಸ್ನೇಹಿತರು ಸೇರಿ ಮಾಡಿರುವ ಚಿತ್ರವಿದು. ಸುನೀಲ್ ಮೈಸೂರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದಾರೆ. ನಾನು ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದೇನೆ. ನಾನು ಡಾಲಿ ಆಗುವುದಕ್ಕೆ ಮುಂಚಿತವಾಗಿ ಈ ಚಿತ್ರದ ಹಾಡುಗಳನ್ನು ಬರೆದಿದ್ದೇನೆ.
ಈ ಚಿತ್ರದಲ್ಲಿ ನಾಯಕ ಗೆಲುವನ್ನು ಸಂಭ್ರಮಿಸುವ ಹಾಡೊಂದನ್ನು ಬರೆಯಬೇಕಿತ್ತು. ನನಗೆ ಆಗ ಆ ಗೆಲುವನ್ನು ಸಂಭ್ರಮಿಸಿ ಗೊತ್ತಿರಲಿಲ್ಲ. ಆನಂತರ “ಟಗರು” ಚಿತ್ರದ ಯಶಸ್ಸಿನ ನಂತರ ಈ ಹಾಡನ್ನು ಪೂರ್ಣ ಮಾಡಿದ್ದೆ.
ಸಂಕ್ರಾಂತಿ ಸಮಯದಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಆದರೆ ನಮ್ಮ ಚಿತ್ರ ಇದೇ ಸಂದರ್ಭದಲ್ಲಿ (ಜನವರಿ 12) ಬಿಡುಗಡೆಯಾಗುತ್ತಿದೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಕಲಾರಸಿಕರು ನೋಡಿ ಹಾರೈಸಿ ಎಂದರು ಡಾಲಿ ಧನಂಜಯ.
2015 ರಲ್ಲಿ “ಬಾರಿಸು ಕನ್ನಡ ಡಿಂಡಿಮವ” ಎಂಬ ಹಾಡನ್ನು ನಾವೆಲ್ಲಾ ಗೆಳೆಯರು ಸೇರಿ ಮಾಡಿದ್ದೆವು. ಮೈಸೂರಿನಲ್ಲೇ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಈ ಹಾಡಿಗೆ ಸಿಕ್ಕ ಜನ ಬೆಂಬಲ ನಾವು ಚಿತ್ರ ನಿರ್ಮಾಣ ಮಾಡಲು ಸ್ಪೂರ್ತಿಯಾಯಿತು. ಆನಂತರ ನಮ್ಮ “ಆರ್ಕೇಸ್ಟ್ರಾ ಮೈಸೂರು” ಚಿತ್ರ ಆರಂಭವಾಯಿತು. “ಆರ್ಕೇಸ್ಟ್ರಾ”ದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುವುದಾ? ಎಂಬುದೆ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೇಸ್ಟ್ರಾ ಕಂಪನಿಗಳೂ ಇದೆ. ಈ ರೀತಿ “ಆರ್ಕೇಸ್ಟ್ರಾ” ದೊಂದಿಗೆ ನಮ್ಮ ಚಿತ್ರದ ಕಥೆ ಸಾಗುತ್ತದೆ.
ರಘುದೀಕ್ಷಿತ್ ಸಂಗೀತ ನೀಡಿರುವ ಎಂಟು ಹಾಡುಗಳು ನಮ್ಮ ಚಿತ್ರದಲ್ಲಿದೆ. ಅಷ್ಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಒಂದು ಹಾಡಿನಲ್ಲಿ ಇಡೀ ಮೈಸೂರೇ ಭಾಗಿಯಾಗಿದೆ ಎನ್ನಬಹುದು.
ಏಕೆಂದರೆ ಹದಿನೈದು ಸಾವಿರಕ್ಕೂ ಹೆಚ್ಚಿನ ಜನರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮಹದೇವ್ ನನ್ನ ಜೊತೆ ಸಹ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ನನ್ನ ತಂಡದ ಸಹಕಾರದಿಂದ ಉತ್ತಮ ಚಿತ್ರವೊಂದು ಇದೇ ಜನವರಿ 12 ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದರು ನಿರ್ದೇಶಕ ಸುನೀಲ್ ಮೈಸೂರು.
ನಮ್ಮ ಸಿನಿಮಾ ಕನಸಿನ ಜರ್ನಿ ಶುರುವಾಗಿದ್ದು ಹದಿನೈದು ವರ್ಷದ ಹಿಂದೆ. ನಾಟಕ ಮಾಡಬೇಕಾದರೆ, ನಾವೆಲ್ಲಾ ಬೆಂಗಳೂರಿಗೆ ಹೋಗಿ ಸಿನಿಮಾ ಮಾಡಲು ಆಗುವುದಾ? ಎಂದು ಯೋಚಿಸುತ್ತಿದ್ದೆವು. ಆ ಪೈಕಿ ನಮ್ಮ ಚಿತ್ರದಲ್ಲಿ ನಟಿಸಲು ಮೊದಲು ಬೆಂಗಳೂರಿಗೆ ಬಂದಿದ್ದು ಸ್ನೇಹಿತ ಧನಂಜಯ್ . ಆನಂತರ “ಆರ್ಕೇಸ್ಟ್ರಾ ಮೈಸೂರು” ಚಿತ್ರ ಆರಂಭವಾಯಿತು. ಇಡೀ ಮೈಸೂರಿನಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಕಥೆ ಕೇಳಿದ ರಘು ದೀಕ್ಷಿತ್ ನಮ್ಮ ಬೆಂಬಲಕ್ಕೆ ನಿಂತರು. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎಂದರು ನಾಯಕ ಪೂರ್ಣಚಂದ್ರ ಮೈಸೂರು.
ಚಿತ್ರದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮತ್ತೊಬ್ಬ ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ನಾಯಕಿ ರಾಜಲಕ್ಷ್ಮೀ, ಸಹ ನಿರ್ದೇಶಕ ಮಹದೇವ್, ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೋಸೆಫ್ ಕೆ ರಾಜ, ನಟ ನಾಗಭೂಷಣ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಚಿತ್ರದ ಕುರಿತು ಮಾತನಾಡಿದರು.